ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೫೫. ಅಣ್ಣನ ಮನೆಯಲ್ಲಿ
ಮಹಾಸಂಸ್ಥಾನದೊಡನೆ ಆಗಮಿಸಿದ ಶ್ರೀಗಳವರನ್ನು ಗುರಾಜಾಚಾರರು ಪುರಜನರೊಡನೆ ಸ್ವಾಗತಿಸಿ ಶ್ರೀಪ್ರಾಣದೇವರ ಅಲಯದಲ್ಲಿ ಬಿಡಾರಮಾಡಿಸಿದರು. ಮರುದಿನ ಗುರುಗಳಿಗೆ ತಮ್ಮ ಮನೆಯಲ್ಲಿ ಪಾದಪೂಜೆಮಾಡಿ, ಭಿಕ್ಷವನ್ನೇರ್ಪಡಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ವೆಂಕಟನಾಥಾಚಾರ ದಂಪತಿಗಳು, ಪುತ್ರನೊಡನೆ ಅಣ್ಣನ ಮನೆಯಲ್ಲಿ ಬಿಡಾರಹೂಡಿದರು. ಬಹುವರ್ಷಗಳ ಮೇಲೆ ಮತ್ತೆ ಅಣ್ಣತಮ್ಮಂದಿರ ಮಿಲನವಾದ್ದರಿಂದ ಉಭಯರಿಗೂ ಪರಮಾನಂದವಾಯಿತು.
ವೇಂಕಟನಾಥಾಚಾರ ದಂಪತಿಗಳು ಲಕ್ಷ್ಮೀನಾರಾಯಣನೊಡನೆ ಮನೆಗೆ ಬಂದಿದ್ದರಿಂದ ಕಮಲಾದೇವಿ, ವೆಂಕಟನಾರಾಯಣರಿಗೆ ಅಪಾರ ಸಂತೋಷವಾಯಿತು. ಕಮಲಾದೇವಿ ಎವೆಯಿಕ್ಕದೆ ಸರಸ್ವತಿಯನ್ನು ನೋಡುತ್ತಾ ಮಂದಹಾಸದಿಂದ “ಸರಸ್ವತಿ, ನೀನೆಷ್ಟು ಚೆಲುವೆಯೇ ! ಲಕ್ಷ್ಮೀನಾರಾಯಣನು ಜನಿಸಿದ ಮೇಲೆ ನೀನು ಹೆಚ್ಚು ಸುಂದರಿಯಾಗಿ ಕಾಣುತ್ತಿದ್ದೀಯೆ ! ಮೈದುನರ ಅನುರಾಗ ಅಧಿಕವಾಗಿದೆಯೆಂದು ತೋರುವುದು. ಸಂತೋಷ, ನಿನ್ನ ಪ್ರೇಮದಿಂದ ನನ್ನ ಮೈದುನನನ್ನು ಸ್ವಾಧೀನಪಡಿಸಿಕೊಂಡು ಅವರನ್ನು ಜಯಿಸಿಬಿಟ್ಟಿರುವಂತಿದೆ ! ಅಲ್ಲವೇ ?” ಎಂದು ಹಾಸ್ಯ ಮಾಡಿದಳು. ಸರಸ್ವತಮ್ಮ ನಾಚಿ “ಅಕ್ಕ, ನೀವೂ ಸಹ ಸ್ವಲ್ಪವೂ ಬದಲಾಗಿಲ್ಲ ! ನಿಮ್ಮಿ ಸೌಂದರ್ಯಕ್ಕೂ ಅದೇ ಕಾರಣವಿರಬಹುದಲ್ಲವೇ ?” ಎಂದು ಮುಸಿಮುಸಿ ನಕ್ಕರು.
ಕಮಲಾದೇವಿಯು “ಕೇಳಿದೆಯಾ ವೇಂಕಟನಾಥ, ನಿನ್ನ ಪ್ರೇಯಸಿಯ ಮಾತನ್ನು ? ಪರವಾಗಿಲ್ಲ, ಆ ಹಿಂದಿನ ನಾಚಿಕೆ-ಭಯಗಳೆಲ್ಲವೂ ಮಾಯವಾದಂತಿದೆ ! ಇದು ನಿನ್ನ ಪ್ರಭಾವವೆಂದು ತೋರುತ್ತದೆ” ಎನಲು ಆಚಾರರೂ ನಗುತ್ತಾ “ಅತ್ತಿಗೆ ! ಇದೆಲ್ಲವೂ ನಿನ್ನ ಉಪದೇಶದ ಪ್ರಭಾವವೆಂದು ನನಗನಿಸುತ್ತದೆ” ಎಂದರು. ಅವರ ಮಾತು ಕೇಳಿ ಎಲ್ಲರೂ ನಕ್ಕರು. ಆನಂತರ ಎಲ್ಲರೂ ಭೋಜನಮಾಡಿ ಬಂದು ಪಡಸಾಲೆಯಲ್ಲಿ ಕುಳಿತರು. ಕಮಲಾದೇವಿ ಮೈದುನ-ಸರಸ್ವತಿಯರು ವಿಶ್ರಾಂತಿ ಪಡೆಯಲು ಕೊಠಡಿಯನ್ನು ಸಿದ್ಧಪಡಿಸಿ ಬಂದು “ಬಹಳ ಹೊತ್ತಾಯಿತು. ವಿಶ್ರಾಂತಿ ತೆಗೆದುಕೋ ವೇಂಕಟನಾಥ” ಎಂದು ಹೇಳಿ ಮೈದುನರನ್ನು ಕೊಠಡಿಗೆ ಕಳುಹಿಸಿದರು. ಸರಸ್ವತಮ್ಮ ನಾಚಿ ನಿಂತಾಗ “ಸರಸ್ವತಿ, ನೀನೀಗ ಪತಿಯ ಮನೆಗೆ ಹೊಸದಾಗಿ ಬಂದ ವಧುವಲ್ಲ ! ಒಬ್ಬ ಮಗನ ತಾಯಿ ! ಇನ್ನೂ ನಿನಗೆ ಲಜ್ಜೆ ಹೋಗಲಿಲ್ಲವೇ ? ಹುಚ್ಚಿ, ಹೂ, ಹೋಗು” ಎಂದು ಕಳಿಸಿ ಲಕ್ಷ್ಮೀನಾರಾಯಣ, ವೆಂಕಟನಾರಾಯಣರಿಗೆ ಹಾಸಿಗೆ ಹಾಸಿಕೊಟ್ಟು ತಮ್ಮ ಶಯನಗೃಹಕ್ಕೆ ತೆರಳಿದರು.
ನಗುನಗುತ್ತಾ ಬಂದ ಪತ್ನಿಯನ್ನು ಕಂಡು ವೇಂಕಟನಾಥರು “ಸರಸ ! ಈಗ ನಿನ್ನನ್ನು ಆಹ್ವಾನಿಸಲು ವೀಣೆಯಿಲ್ಲವಲ್ಲ !” ಎಂದು ನಗಹತ್ತಿದರು. ಸರಸ್ವತಮ್ಮನಿಗೆ ಹಿಂದಿನ ಮಧುರಸ್ಕೃತಿ ಮರುಕಳಿಸಿ ಮೈರೋಮಾಂಚನವಾಯಿತು. ಮುಖ ಲಜ್ಜೆಯಿಂದ ಕೆಂಪಾಯಿತು. ಕಪಟಕೋಪವನ್ನು ಪ್ರದರ್ಶಿಸುತ್ತಾ ಅತ್ತಿಗೆಯ ಮಾತು ಕೇಳಿ ನನ್ನನ್ನು ಛೇಡಿಸುತ್ತಿದ್ದೀರಾ ?” ಎಂದು ಪತಿಯ ಪಕ್ಕದಲ್ಲಿ ಕುಳಿತು ಹಣ್ಣು-ಹಾಲು, ತಾಂಬೂಲಗಳನ್ನು ನೀಡಿದರು. ವೇಂಕಟನಾಥರು ಪತ್ನಿಯ ಮುಖವನ್ನು ಎರಡು ಕರಗಳಿಂದಲೂ ಹಿಡಿದು “ಅತ್ತಿಗೆ ಹೇಳಿದ್ದು ಸತ್ಯ ! ಸರಸ್ವತಿ, ನೀನು ದಿನೇ ದಿನೇ ಸುಂದರಿಯಾಗುತ್ತಿರುವೆ” ಎಂದರು. ಸರಸ್ವತಮ್ಮ ಪತಿಯತ್ತ ಕಟಾಕ್ಷಬೀರಿ “ಅಕ್ಕ ಹೇಳಿದ್ದು ಕೇಳಿದಿರಲ್ಲವೇ ? ನಾನು ನಿಮ್ಮನ್ನು ಸ್ವಾಧೀನಪಡಿಸಿಕೊಂಡಿರುವೆನಂತೆ ! ಅವರ ಮಾತು ಕೇಳಿ ನನಗೆ ಎಷ್ಟು ನಾಚಿಕೆಯಾಯಿತು ಗೊತ್ತೆ ?” ಎಂದರು.
ವೇಂ : ಅತ್ತಿಗೆಯ ಮಾತಿನಲ್ಲಿ ತಪ್ಪೇನಿದೆ ? ಪ್ರೀತಿಯಿಂದ ನೀನು ನನ್ನನ್ನು ಜಯಿಸಿಲ್ಲವೇ ? ಅತ್ತಿಗೆಯ ಮಾತುಕೇಳಿ
ನನಗಂತೂ ಆನಂದವಾಯಿತು.
ಸರಸ್ವತಮ್ಮ “ಹಾಗಾದರೆ ನನಗೇನು ಕೊಡುವಿರಿ ?” ಎಂದು ಕೊರಳುಕೊಂಕಿಸಿದರು. ಆಚಾರರು ನಸುನಕ್ಕು “ಅತ್ತಿಗೆ ಹೇಳಿದ್ದನ್ನೇ ಒಂದು ಸಮಸ್ಯೆಯಾಗಿ ಕೊಡುತ್ತೇನೆ. ನೀನು ಸಮಸ್ಯಾಪೂರಣಮಾಡಬೇಕು” ಎನಲು “ಸ್ವಾಮಿ, ನನ್ನನ್ನು ಪರೀಕ್ಷಿಸುವಿರಾ ? ಹಾಗಾದರೆ ನಾನೂ ನಿಮಗೊಂದು ಸಮಸ್ಯೆ ನೀಡುತ್ತೇನೆ. ನೀವೂ ಅದನ್ನು ಪೂರಣಮಾಡಿರಿ ನೋಡೋಣ” ಎಂದು ನಕ್ಕರು. ಆಚಾರರು ಆಗಬಹುದು ಸಮಸ್ಯೆಯನ್ನು ಹೇಳು” ಎಂದಾಗ, ಸರಸ್ವತಿಯು “ಮೊದಲು ನೀವು ಹೇಳಿ” ಎಂದಳು.
ಆಚಾರ : ಸರಿ, ಕೇಳು “ದ್ವಿತೀಯಾನಿರ್ಜಿತೋ ಯಥಾ!!”
ಸರಸ್ವತಮ್ಮ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಯೋಚಿಸಿದರು, ಆನಂತರ ಅಲ್ಲಿಯೇ ಇದ್ದ ಗುರುರಾಜಾಚಾರರ ವೀಣೆಯನ್ನು ತೆಗೆದು ತೊಡೆಯ ಮೇಲಿಟ್ಟುಕೊಂಡು ತಂತಿಗಳ ಮೇಲೆ ಬೆರಳಾಡಿಸುತ್ತಾ ಮನಸ್ಸಿನಲ್ಲೇ ಸಮಸ್ಯೆಯನ್ನು ಪೂರಣಮಾಡುತ್ತಾ ತರುವಾಯ ಕಣ್ಣು ತೆರೆದು ನಕ್ಕು “ಸಮಸ್ಯೆ ಪೂರಣವಾಯಿತು ! ಈಗ ನಾನು ಕೊಡುವ ಸಮಸ್ಯೆಯನ್ನು “ಉಪೇಂದ್ರವಜ್ರಾವೃತ್ತ'ದಲ್ಲಿ ಪೂರೈಸಿ ಹೇಳಿರಿ, ನಂತರ ನಾನು ಹೇಳುತ್ತೇನೆ” ಎಂದು ಸಮಸ್ಯಾ ಹೇಳಿದರು- “....ಭಾತಿ ಸರಸ್ವತೀವ !”
ವೇಂಕಟನಾಥರು ನಕ್ಕು ಸ್ವಲ್ಪ ಹೊತ್ತಿನಲ್ಲೇ ಸಮಸ್ಯಾಪೂರಣಮಾಡಿ ಹೇಳಿದರು -
ಸಂಗೀತ ಸಾಹಿತ್ಯಕಲಾಪ್ರಪೂರ್ಣಾ | ವಿದ್ಯಾಧರೀ ರೂಪಗುಣೋಜ್ವಲೇಯಮ್ | ಸದ್ವಲ್ಲಕೀಶೋಭಿತ ಪದ್ಮಹಸ್ತಾ | ಸರಸ್ವತೀ ಭಾತಿ ಸರಸ್ವತೀವ ||
ಸಂಗೀತ-ಕಾವ್ಯ-ನಾಟಕ-ಅಲಂಕಾರಾದಿ ಸಾಹಿತ್ಯಕಲೆಗಳಲ್ಲಿ ಪಾಂಡಿತ್ಯಪೂರ್ಣಳೂ, ಸಕಲವಿದ್ಯೆಗಳನ್ನು ಧರಿಸಿರುವವಳೂ, ರೂಪ-ಲಾವಣ್ಯ ಸದಭಿರುಚಿ-ಸದ್ಗುಣಗಳಿಂದ ಉಜ್ವಲವಾಗಿ ಕಂಗೊಳಿಸುವವಳೂ, ಕಮಲದಂತಿರುವ ಕರಗಳಲ್ಲಿ ವೀಣೆಯನ್ನು ಹಿಡಿದಿರುವವಳೂ ಆದ ಈ ಸರಸ್ವತಿಯು ವೀಣಾಪಾಣಿಯಾದ ಸರಸ್ವತಿಯಂತೆ ಪ್ರಕಾಶಿಸುತ್ತಿದ್ದಾಳೆ ! ಸರಸ ! ಹೇಗಿದೆ ನನ್ನ ಕವಿತೆ ?” ಎಂದು ಮಂದಹಾಸಬೀರಿದರು.
ತಾನೊಂದು ಅಭಿಪ್ರಾಯದಿಂದ ಸಮಸ್ಯೆ ನೀಡಿದರೆ ಪತಿಗಳು ತನ್ನನ್ನು ವಾಗ್ಗೇವತೆಗೆ ಹೋಲಿಸಿ ವರ್ಣಿಸಿರುವುದನ್ನಾಲಿಸಿ ಸರಸ್ವತಮ್ಮನವರ ಹೃದಯವರಳಿತು, ನಸು ನಕ್ಕು “ಸ್ವಾಮಿ, ವಾಗ್ಲೆವಿಗೆ ನನ್ನನ್ನು ಹೋಲಿಸಬಹುದೇ ?” ಎಂದಳು, ಆಚಾರರು “ಸರಸ ! ಭಗವಂತನಿಗೂ ಜೀವರಿಗೂ ಕಿಂಚಿತ್ ಸಾದೃಶ್ಯವಿರುವುದನ್ನು ಶಾಸ್ತ್ರಗಳು ಹೇಳುವವು. ಅದು ತಪ್ಪಲ್ಲ, ಅಂತೆಯೇ ಸರಸ್ವತಿದೇವಿಯ ವಿದ್ಯೆ, ಕಲೆ, ಸೌಂದಯ್ಯ, ಸದ್ಗುಣಗಳು, ವಿಧ್ಯಾಧರತ್ವ, ವೀಣೆ ಹಿಡಿದಿರುವಿಕೆ - ಇವುಗಳ ಸಾದೃಶ್ಯ ಕೆಲವಂಶ ನಿನ್ನಲ್ಲಿರುವುದಿರಂದ ಅದನ್ನೇ ವರ್ಣಿಸಿದ್ದೇನೆ ! ಅದುಸರಿ, ನಾನು ಕೊಟ್ಟ ಸಮಸ್ಯಾ ಪೂರಣಮಾಡಿದ್ದರೆ ಹೇಳು ಕೇಳೋಣ” ಎಂದರು.
ಸರಸ್ವತಮ್ಮ ನಗುತ್ತಾ ಹೇಳಿದರು-
“ಅಜಯೋಪಿ ಜಯೀಂದ್ರಾರ್ಯಃ | ಶಿಷ್ಯಭಕ್ಕಾ ವಿನಿರ್ಜಿತಃ || ಅದ್ವಿತೀಯೋ ಪತಿಃ ಪ್ರೇಮಾ | ದ್ವಿತೀಯಾನಿರ್ಜಿತೋ ಯಥಾ ||”
ವೇಂ : ಭಲೇ ಸರಸ್ವತಿ ! ನನ್ನ ಸಮಸ್ಯೆಯನ್ನು ಉಭಯವಿಧದಿಂದ ಸ್ವಾರಸ್ಯಕರವಾಗಿ ಬಳಸಿಕೊಂಡು ಪೂರೈಸಿದ್ದೀಯೆ ! ಶ್ರೀವಿಜಯೀಂದ್ರತೀರ್ಥರು ಜಗತ್ತಿನಲ್ಲಿ ಮತ್ತಾರಿಂದಲೂ ಜಯಿಸಲಾಗದ ಮಹಾಮಹಿಮರು. ಹೀಗಿದ್ದರೂ ಅವರು ಜಿತರಾದರು !
ಪ್ರಿಯಶಿಷ್ಯರಾದ ಶ್ರೀಸುಧೀಂದ್ರರ ಭಕ್ತಿ, ಶ್ರದ್ಧೆ, ಸೇವಾದಿಗಳಿಂದ ಸೋತುಹೋದರು ! ಇದಕ್ಕೆ ದೃಷ್ಟಾಂತ : ಪತ್ನಿಗೆ ದ್ವಿತೀಯಾ ಎಂಬ ಹೆಸರಿದೆ. ಪತಿಯು ಅದ್ವಿತೀಯ(ಅಂದರೆ ಅವನಿಗೆ ಸಮರು ಬೇರೊಬ್ಬರಿಲ್ಲದಿದ್ದರೂ)ನಾಗಿದ್ದರೂ (ದ್ವಿತೀಯಾ-ಪತ್ನಿಯಿಂದ) ಪೇಮವಿಷಯದಲ್ಲಿ ಪತ್ನಿಯಿಂದ ಸೋತಂತೆ ! ಆಹಾ ಸರಸ್ವತಿ ಬಲುಸೊಗಸಾಗಿದೆ. ನಾನು ಅದ್ವಿತೀಯನೆಂದೂ, ದ್ವಿತೀಯಾ ಆದ ನಿನ್ನ ಪ್ರೇಮದಿಂದ ಜಿತನಾದನೆಂದೂ ವರ್ಣಿಸಿ ಅತ್ತಿಗೆಯ ಕೊಂಕುನುಡಿಗೆ ಉತ್ತರ ನೀಡಿರುವೆ” ಎಂದು ಪತ್ನಿಯನ್ನು ಪ್ರೀತಿಯಿಂದ ಹೊಗಳಿದರು. ಆನಂತರ ವಿಶ್ರಾಂತಿ ಪಡೆದರು.
ಶ್ರೀಸುಧೀಂದ್ರತೀರ್ಥರು ರಾಮಚಂದ್ರಪುರದಿಂದ ಹೊರಟು ಅಚ್ಯುತಪ್ಪ ಸಮುದ್ರಕ್ಕೆ ಬಂದು ಅಲ್ಲಿ ಎರಡು ದಿನಗಳಿದ್ದು ಅಲ್ಲಿಂದ ಪೂರ್ವಾಶ್ರಮ ಬಂಧುಗಳೂ, ವೆಂಕಟನಾಥರ ಮಾವಂದಿರೂ ಆದ ವಾಸುದೇವಾಚಾರರ ಪ್ರಾರ್ಥನೆಯಂತೆ ಅವರ ಅಗ್ರಹಾರಕ್ಕೆ ದಯಮಾಡಿಸಿ ಅವರ ಸೇವೆ ಸ್ವೀಕರಿಸಿದರು. ಅದೇಕಾಲದಲ್ಲಿ ತಂಜಾವೂರಿನ ದರ್ಬಾರಿನ ಮುಖ್ಯಸ್ಥರು ಪುರೋಹಿತರು, ಬಂದು ರಘುನಾಥಭೂಪಾಲ ಕೊಟ್ಟಿದ್ದ ವಿಜ್ಞಾಪನಾಪತ್ರವನ್ನಿತ್ತು, ರಾಜಧಾನಿಗೆ ದಿಗ್ವಿಜಯಮಾಡಬೇಕೆಂದು ಪ್ರಾರ್ಥಿಸಿದರು. ಶ್ರೀಗಳವರು ಸಂತಸದಿಂದ ಬರುವ ಭರವಸೆ ನೀಡಿ, ಮಹಾಸಂಸ್ಥಾನದೊಡನೆ ತಂಜಾವೂರಿಗೆ ಬಿಜಯಂಗೈದರು.
ರಘುನಾಥಭೂಪಾಲನು ತನ್ನ ಪ್ರಾರ್ಥನೆಯಂತೆ ಚಿತ್ತೆಸಿದ ಶ್ರೀಸುಧೀಂದ್ರ ಗುರುವರ್ಯರನ್ನು ರಾಜವೈಭವ ಬಿರುದುಬಾವಲಿ ವಾದ್ಯ-ಮೇಳ-ಪಂಡಿತಮಂಡಲಿ ಪೌರಜಾನಪದರೊಡನೆ ಸ್ವಾಗತಿಸಿ ಅಂಬಾರಿಯಲ್ಲಿ ಮಂಡಿಸಿ ಮೆರವಣಿಗೆಯಿಂದ ಕರೆತಂದು ಭವ್ಯಪ್ರಸಾದದಲ್ಲಿಳಿಸಿ ಆಶೀರ್ವಾದ ಪಡೆದು ಅರಮನೆಗೆ ಮರಳಿದನು. ಮರುದಿನ ಅರಮನೆಯಲ್ಲಿ ಪತ್ನಿಪತ್ರ-ಬಂಧು-ಬಾಂಧವ-ಸಚಿವ-ಸೇನಾನಿ, ಪಂಡಿತಮಂಡಲಿಯೊಡನೆ ರಘುನಾಥನಾಯಕನು ಶ್ರೀಗುರುಪಾದರಿಗೆ ಭಕ್ತಿಯಿಂದ ಪಾದಪೂಜೆ ನೆರವೇರಿಸಿದನು.
ಮಾರನೆಯ ದಿನ 'ಗೀತಾಜಯಂತಿ' ಪ್ರಯುಕ್ತ ಶ್ರೀಮಠದಲ್ಲಿ ವಿಶೇಷವಾಗಿ, ವಿದ್ವಾಂಸರ ಉಪನ್ಯಾಸ, ಗುರುಗಳ ಉಪದೇಶಗಳಾದವು. ಶ್ರೀಕೃಷ್ಣನ ಪ್ರೀತ್ಯರ್ಥವಾಗಿ ಶ್ರೀಸುಧೀಂದ್ರಗುರುಗಳ ಅಪ್ಪಣೆಯಂತೆ ವೆಂಕಟನಾಥಾಚಾರರು ಪುತ್ರಲಕ್ಷ್ಮೀ ನಾರಾಯಣನೊಡನೆ ವೀಣಾವಾದನಮಾಡಿದರು. ಅಂದಿನ ಆಚಾರರ ವೀಣಾವಾದನ ವೈಭವ, ಮೈಪುಳಕಿಸುವ ರಾಗವಾಹಿನಿ ಝೇಂಕಾರ-ಪಾಂಡಿತ್ಯಗಳನ್ನು ಕಂಡು ಕೇಳಿ ಜನರು ಆನಂದತುಂದಿಲರಾದರು. ರಘುನಾಥಭೂಪಾಲನ ಆನಂದಕ್ಕಂತೂ ಪಾರವೇ ಉಳಿಯಲಿಲ್ಲ. ಆಚಾರ್ಯರ ಅಪೂರ್ವ ವೀಣಾವಾದನ ಚಾತುರ್ಯವನ್ನೂ, ತೇಜಸ್ಸು ಸದ್ಗುಣಗಳನ್ನೂ ಕಂಡು ರಘುನಾಥಭೂಪಾಲ ಅವರಲ್ಲಿ ಅಪಾರಗೌರವ ತಾಳಿದನು. ಗುರುಪಾದರಲ್ಲಿ ಪ್ರಾರ್ಥಿಸಿ ಆಚಾರದಂಪತಿಗಳು, ಕುಮಾರ ಲಕ್ಷ್ಮೀನಾರಾಯಣರನ್ನು ಅರಮನೆಗೆ ಕರೆಯಿಸಿಕೊಂಡು ಪತ್ನಿಪುತ್ರರಿಂದೊಡಗೂಡಿ ಅವರನ್ನು ಆದರದಿಂದ ಸನ್ಮಾನಿಸಿ ಬೆಲೆಬಾಳುವ ಖಿಲ್ಲತ್ತು, ವೀಳ್ಯಗಳನ್ನಿತ್ತು ತನ್ನ ಸಂತೋಷವನ್ನು ವ್ಯಕ್ತಪಡಿಸಿದನು. ಆಚಾರರು ರಾಜದಂಪತಿಗಳು, ಯುವರಾಜ ವಿಜಯರಾಘವರನ್ನು ಆಶೀರ್ವದಿಸಿ ಶ್ರೀಮಠಕ್ಕೆ ಮರಳಿದರು.