|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೫೩. ತಂಜಾಪುರದಲ್ಲಿ ದಿಗ್ವಿಜಯ

ಶ್ರೀಯಜ್ಞನಾರಾಯಣ ದೀಕ್ಷಿತರ ನಾಯಕತ್ವದಲ್ಲಿ ಅರಮನೆಯ ಅಧಿಕಾರಿಗಳು ದರ್ಬಾರಿನ ಸಮಸ್ತ ಪಂಡಿತರು ಶ್ರೀಸುಧೀಂದ್ರರನ್ನು ಗೌರವದಿಂದ ಕರೆತಂದು ಉಚ್ಚಾಸನದಲ್ಲಿ ಕೂಡಿಸಿದರು. ರಾಜಪ್ರತಿನಿಧಿಗಳು ಗುರುಗಳಿಗೆ ಪಾದಪೂಜೆಮಾಡಿ ಕಾಣಿಕೆ ಸಮರ್ಪಿಸಿದ ಮೇಲೆ ಶ್ರೀಸುಧೀಂದ್ರತೀರ್ಥರ ಅಧ್ಯಕ್ಷತೆಯಲ್ಲಿ ವಿದ್ದತ್ತಭೆ ಪ್ರಾರಂಭವಾಯಿತು. ರಾಜಾಸ್ಥಾನದಲ್ಲಿ ನೂರಾರುಜನ ಪಂಡಿತರು, ಕವಿಗಳು, ವೇದವಿದ್ಯಾವಿಶಾರದರು, ಕಲೆಗಾರರಿದ್ದರು. ಅವರೆಲ್ಲರೂ ಶ್ರೀಸುಧೀಂದ್ರರಲ್ಲಿ ಬಹುಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಎಲ್ಲ ಕಡೆ ಇರುವಂತೆ ಆ ದರ್ಬಾರಿನಲ್ಲೂ ಕೆಲ ಅಸೂಯಾಪರರಾದ ಪಂಡಿತರಿದ್ದರು. ಶ್ರೀಸುಧೀಂದ್ರತೀರ್ಥರಿಗೆ ಸಲ್ಲುತ್ತಿದ್ದ ಅಸಾಧಾರಣ ಮಯ್ಯಾದೆಯನ್ನು ಕಂಡು ಅಸೂಯಾಪರರಾದ ಪಂಡಿತರು ಕುದಿಯುತ್ತಿದ್ದರು. ಶ್ರೀಸುಧೀಂದ್ರರಿಗೆ ಅಗೌರವವಾಗುವಂತೆ ಮಾಡಲು ಅವರು ಸಮಯ ನಿರೀಕ್ಷಣೆಯಲ್ಲಿದ್ದರು. ಆ ಕುಹಕಿಗಳ ಗುಂಪಿಗೆ ಶುಲ್ಕಸೂತ್ರಕ್ಕೆ ವ್ಯಾಖ್ಯಾಕಾರರೂ, ಯಜ್ಞಯಾಗಾದಿಗಳಲ್ಲಿ ಪರಿಣಿತರೂ ಆದ ಶ್ಯಾಮದೀಕ್ಷಿತರೆಂಬುವರು ನಾಯಕರಾಗಿದ್ದರು. 

ಶ್ರೀಸುಧೀಂದ್ರರು ತಂಜಾವೂರಿಗೆ ಬಂದಿದ್ದರಿಂದ ಅಸೂಯಪರರಿಗೆ ತಮ್ಮ ಆಸೆಯನ್ನು ಪೂರ್ಣಗೊಳಿಸಲು ಅವಕಾಶ ದೊರೆತಂತಾಯಿತು. ವೆಂಕಟನಾಥರನ್ನು ವಾದಕ್ಕೆಳೆದು ಸೋಲಿಸಿಬಿಟ್ಟರೆ ಸುಧೀಂದ್ರರ ಮುಖಭಂಗಮಾಡಿದಂತಾಗುವುದೆಂದು ಯೋಚಿಸಿ ಕುಹಕಿಗಳು ಶ್ಯಾಮದೀಕ್ಷಿತರನ್ನು ಸ್ತುತಿಸಿ ಪ್ರಚೋದಿಸಿ ವೇಂಕಟನಾಥರನ್ನು ಪರಾಭವಗೊಳಿಸಬೇಕೆಂದು ದುಂಬಾಲು ಬಿದ್ದರು. ಪಾಂಡಿತ್ಯಗರ್ವದಿಂದ ಬೀಗುತ್ತಿದ್ದ ಶ್ಯಾಮದೀಕ್ಷಿತರು ವೇಂಕಟನಾಥರನ್ನು ಸೋಲಿಸುವುದಾಗಿ ಭರವಸೆ ನೀಡಿದರು. ಈ ವಿದ್ವೇಷದ ಹಿನ್ನೆಲೆಯನ್ನರಿದ ಯಜ್ಞನಾರಾಯಣ ದೀಕ್ಷಿತರು ಶ್ರೀಸುಧೀಂದ್ರಗುರುಗಳಲ್ಲಿ, ಮೀಮಾಂಸಾ ಶಾಸ್ತ್ರದಲ್ಲಿಯೇ ಮೊದಲು ವ್ಯಾಕ್ಯಾರ್ಥವಾಗಬೇಕೆಂದು ವಿಜ್ಞಾಪಿಸಿ, ಅದರಂತೆ ಸಭೆಯಲ್ಲಿ ಘೋಷಿಸಿದರು. ಆಗ ಶ್ಯಾಮದೀಕ್ಷಿತರು ಮತ್ತು ಅವರು ಹಿಂಬಾಲಕರು ವೇದಿಕೆಯನ್ನೇರಿ ಕುಳಿತರು. ಶ್ರೀಯವರ ಇಂಗಿತವನ್ನರಿತ ವೇಂಕಟನಾಥಾಚಾರರು ತಾವೂ ವೇದಿಕೆ ಹತ್ತಿ ಕುಳಿತರು. ವಾದನಿಯಮ, ಮಧ್ಯಸ್ಥರನ್ನು ಏರ್ಪಡಿಸಿದ ಮೇಲೆ ವಾಕ್ಯಾರ್ಥ ಪ್ರಾರಂಭವಾಯಿತು. 

ವೇಂಕಟನಾಥರ ಭವ್ಯವಕ್ತಿತ್ವ, ತೇಜಸ್ಸುಗಳಿಂದ ವಿಚಲಿತರಾದರೂ, ಮೊದಲು ಶ್ಯಾಮದೀಕ್ಷಿತರೇ ಪೂರ್ವಪಕ್ಷಮಾಡಿದರು. ಪೂರ್ವಪಕ್ಷವನ್ನಾಲಿಸಿ ಅವರ ಅನುಯಾಯಿಗಳು ಉಬ್ಬಿದರು. ಪಂಡಿತರು ತಲೆದೂಗಿದರು. ಸುಧೀಂದ್ರರು ನಸುನಕ್ಕರು. ವೆಂಕಟನಾಥರು ದೀಕ್ಷಿತರ ಪೂರ್ವಪಕ್ಷವನ್ನು ಖಂಡಿಸಿ ಅದರಮೇಲೆ ದೋಷಹೇಳಿದರು. ಆಚಾರರ ನಿರರ್ಗಲ ವಾಗೈಖರಿಯನ್ನು ಕಂಡು ಯಜ್ಞನಾರಾಯಣ ದೀಕ್ಷಿತರು “ಸಾಧು, ಸಾಧು” ಎಂದು ತಲೆದೂಗಿದರು. ಇದರಿಂದ ಶ್ಯಾಮದೀಕ್ಷಿತರಿಗೆ ಅವಮಾನವಾದಂತಾಯಿತು, ಮುಖ ಬೆವರಿತು, ಅವರು ಯಜ್ಞಪ್ರಕರಣಕ್ಕೆ ಸಂಬಂಧಿಸಿದ ಶುಲಸೂತ್ರದ ಒಂದು ಕ್ಲಿಷ್ಟವಾದ ಘಟ್ಟವನ್ನಾರಿಸಿಕೊಂಡು ಪ್ರಬಲರೀತಿಯಲ್ಲೇ ಪೂರ್ವಪಕ್ಷಮಾಡಿದ್ದರು. ತಮ್ಮ ಪೂರ್ವಪಕ್ಷವನ್ನು ಅರ್ಥಮಾಡಿಕೊಳ್ಳುವುದೇ ಕಷ್ಟವಾಗಿರುವಾಗ ಈ ತರುಣ ವಿದ್ವಾಂಸ ಅದನ್ನು ಸುಲಭವಾಗಿ ಖಂಡಿಸಿ ದೋಷ ಹೇಳಿದನಲ್ಲಾ ಎಂದು ಬೆರಗಾದರು. ಮತ್ತೆ ಅದನ್ನೇ ಬಲಪಡಿಸಿ ಅನೇಕ ಪ್ರಮಾಣಗಳನ್ನು ಉದಾಹರಿಸಿ “ಆಚಾರ್ಯರೇ, ಇದಕ್ಕೆ ಏನು ಹೇಳುವಿರಿ ?” ಎಂದು ಸವಾಲೆಸೆದರು. 

ವೇಂಕಟನಾಥ ನಗುತ್ತಾ “ದೀಕ್ಷಿತರೇ, ವಿದ್ದತ್ತೂರ್ಣವಾಗಿ ಅನುವಾದ ಮಾಡಿದಿರಿ ! ಪೂರ್ವಪಕ್ಷವನ್ನು ಬಲಪಡಿಸಲು ಪ್ರಮಾಣಗಳನ್ನು ಉದಾಹರಿಸಿರುವಿರಿ, ಆದರೆ ಅವು ಪೂರ್ವಪಕ್ಷ ಸಾಧಕ ಪ್ರಮಾಣಗಳಲ್ಲ !” ಎಂದರು. ಅದರಿಂದ ದೀಕ್ಷಿತರು ಸಿಡಿಮಿಡಿಗುಟ್ಟುತ್ತಾ “ವಾಗಾಡಂಬರದಿಂದ ಪ್ರಯೋಜನವಿಲ್ಲ ! ನೀವೀಗ ಆಡಿದ ಮಾತನ್ನು ಪ್ರಮಾಣಪೂರ್ವಕವಾಗಿ ಸಾಧಿಸಬಲ್ಲಿರಾ ?” ಎಂದರು. 

ವೇಂಕಟನಾಥರು “ಸ್ವಾಮಿ, ನಿಮ್ಮ ಪೂರ್ವಪಕ್ಷಕ್ಕೆ ಉದಾಹೃತಪ್ರಮಾಣಗಳು ಸಾಧಕವಲ್ಲ” ಎಂದು ಹೇಳಿ ಅದೆಂತು ಸಾಧಕವಲ್ಲವೆಂಬುದನ್ನು ತೋರಿಸಿಕೊಟ್ಟು, ದೀಕ್ಷಿತರ ವಾದವನ್ನು ಶತಶಃ ಖಂಡಿಸಿದರು. ಮೀಮಾಂಸದಲ್ಲಿ ಆಚಾರರಿಗಿರುವ ಅಗಾಧ ಪಾಂಡಿತ್ಯ, ಪ್ರತಿಭೆ, ಅನುವಾದಕ್ರಮಗಳನ್ನು ಕಂಡು ಸಮಗ್ರ ವಿದ್ವತ್ತಭೆಯು ತಲೆದೂಗಿ ಕರತಾಡನಮಾಡಿತು. ಅಸೂಯಾಪರಪಂಡಿತರ ಮುಖ ಕಳೆಗುಂದಿತು, ದೀಕ್ಷಿತರೂ ಅಪ್ರತಿಭರಾದರು. ಆದರೂ ಛಲಬಿಡದೆ ವಾದಿಸಹತ್ತಿದರು. ಅದರಿಂದ ಪೂರ್ವಗ್ರಹದೂಷಿತರಾದ ಅವರ ವಾದ ಅಸಂಬದ್ಧವಾಗಹತ್ತಿತು. ಹೇರಳವಾಗಿ ಸ್ವವ್ಯಾಹತಿಗಳಾಗಲಾರಂಭಿಸಿತು. ದೀಕ್ಷಿತರು ವಿತ್ತಂಡಾವಾದಕ್ಕಿಳಿದುದನ್ನು ಕಂಡು ವಿದ್ವನ್ಮಂಡಲಿ ವಿಷಾದಿಸಿತು. ಮಧ್ಯಸ್ಥರು ದೀಕ್ಷಿತರನ್ನು ಎಚ್ಚರಿಸಿದರು.

ಆಗ ವೇಂಕಟನಾಥರು ಶ್ಯಾಮದೀಕ್ಷಿತರ ಎಲ್ಲಾ ವಾದಗಳನ್ನೂ ಖಂಡಿಸಿ ಅದರ ಮೇಲೆ ಅನೇಕ ಕೋಟಿಗಳನ್ನೇರಿಸಿ “ಇದಕ್ಕೆ ಉತ್ತರವನ್ನು ಹೇಳಿ” ಎಂದು ದೀಕ್ಷಿತರನ್ನು ಪ್ರಶ್ನಿಸಿದರು. ಪಾಪ ದೀಕ್ಷಿತರು ವಾದ ಪ್ರಾರಂಭದಿಂದಲೇ ಅಡ್ಡಮಾರ್ಗ ಹಿಡಿದಿದ್ದರಿಂದ ಅದನ್ನು ಸರಿಪಡಿಸಿಕೊಂಡು ಶಾಸ್ತ್ರೀಯ ಕ್ರಮದಲ್ಲಿ ವಾದಿಸಲು ಸಾಧ್ಯವಾಗಲಿಲ್ಲ. 

ವಾದಮಧ್ಯಸ್ಥರು ವೇಂಕಟನಾಥರು ವಿಜಯಗಳಿಸಿದರೆಂದು ಸಾರಿದರು ಸಭಾಸದರು ಜಯಕಾರಗಳಿಂದ ಆಚಾರರನ್ನು ಪ್ರಶಂಸಿದರು. ಶ್ರೀಸುಧೀಂದ್ರರಿಗಾದ ಆನಂದ ವರ್ಣನಾಶೀತ ! ಗುಣಗ್ರಾಹಿಗಳಾದ ಯಜ್ಞನಾರಾಯಣದೀಕ್ಷಿತರು ವೆಂಕಟನಾಥರ ಸರ್ವ೦ಕಷ ಪಾಂಡಿತ್ಯ, ವಾದವೈಭವ, ವಿಜಯಗಳಿಂದ ಹರ್ಷಿಸಿ ಆಚಾರ್ಯರನ್ನು ಆಲಂಗಿಸಿ, ಮುಕ್ತಕಂಠದಿಂದ ಹೊಗಳಿದರು. ಮತ್ತು ರಾಜಾಸ್ಥಾನದ ಪದ್ಧತಿಯಂತೆ ಆಚಾರ್ಯರನ್ನು ಸನ್ಮಾನಿಸಿದರು. ಈ ವಿಜಯದಿಂದ ವೇಂಕಟನಾಥಾಚಾರ್ಯರ ಕೀರ್ತಿ ಎಲ್ಲೆಡೆ ಪಸರಿಸಿತು. ಇದು ಯಜ್ಞನಾರಾಯಣದೀಕ್ಷಿತರ ನಿಷ್ಪಕ್ಷಪಾತಕ್ಕೆ ದೃಷ್ಟಾಂತವಾಗಿದೆ.