ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೫೦. ಶ್ರೀಯಾದವೇಂದ್ರರು
ಶ್ರೀಸುಧೀಂದ್ರರ ಸನ್ನಿಧಿಯಲ್ಲಿ ಅಧ್ಯಯನ ಮಾಡಿದವರಲ್ಲಿ ಅವರ ಪೂರ್ವಾಶ್ರಮ ಬಂಧುಗಳಲ್ಲಿ ಪಾಷಿಕ ಕುಲಸಂಜಾತರಾದ ಶ್ರೀಗಳವರ ಸೋದರಳಿಯಂದಿರೂ ಒಬ್ಬರು. ನಲವತ್ತೈದು ವರ್ಷದ ಅವರು ಶ್ರೀಯವರಲ್ಲಿ ನ್ಯಾಯ-ವೇದಾಂತಾದಿಶಾಸ್ತ್ರಗಳನ್ನು ವ್ಯಾಸಂಗಮಾಡಿ, ಶೇಷ್ಠಪಂಡಿತರೆಂದು ಖ್ಯಾತರಾಗಿದ್ದರು. ಅವರು ಬಾಲ್ಯದಿಂದಲೂ ಪಾರಮಾರ್ಥಿಕ ಸಾಧನೆಯಲ್ಲೇ ಆಸಕ್ತರಾಗಿದ್ದು ಜ್ಞಾನ-ಭಕ್ತಿ-ವೈರಾಗ್ಯಪಾರ್ಣರಾಗಿ ವ್ರತನಿಯಮ, ಉಪವಾಸಾದಿಗಳಿಂದ ಪವಿತ್ರ ಜೀವನ ಸಾಗಿಸಿದ್ದರು. ಅವರಿಗೆ ಸನ್ಯಾಸಿಯಾಗುವ ಹಂಬಲವಿತ್ತು. ಅನೇಕ ವೇಳೆ ಸುಧೀಂದ್ರರಲ್ಲಿ ಸನ್ಯಾಸಕ್ಕಾಗಿ ಪ್ರಾರ್ಥಿಸಿದ್ದರು. ಇಂದಲ್ಲ, ಮುಂದಾದರೂ ಸೋದರಳಿಯ ಸಂಸಾರಿಯಾಗಬೇಕೆಂದು ಬಯಸುತ್ತಿದ್ದ ಶ್ರೀಗಳವರು ಅವರ ಪ್ರಾರ್ಥನೆಗೆ ಅಷ್ಟಾಗಿ ಗಮನ ನೀಡಿರಲಿಲ್ಲ. ಒಂದು ದಿನ ಅವರು ಏಕಾಂತದಲ್ಲಿ ಗುರುಗಳಿಗೆ ನಮಸ್ಕರಿಸಿ ಸನ್ಯಾಸಾಶ್ರಮ ಪ್ರದಾನಮಾಡಬೇಕೆಂದು ಪ್ರಾರ್ಥಿಸಿದರು. ಅವರನ್ನು ಪರೀಕ್ಷಿಸಲು ಶ್ರೀಸುಧೀಂದ್ರತೀರ್ಥರು ನಗುತ್ತಾ “ನಿನಗೆ ಈ ಮಹಾಸಂಸ್ಥಾನಾಧಿಪತ್ಯ ಬೇಕೇ ? ಅಥವಾ ವಿರಕ್ತಿಯಿಂದ ಬರೀ ಸನ್ಯಾಸವನ್ನು ಬಯಸುವೆಯೋ ?” ಎಂದಾಗ ಅವರು ಕರಮುಗಿದು “ಸ್ವಾಮಿ, ನಾನು ವೈರಾಗ್ಯದಿಂದ ಸನ್ಯಾಸಿಯಾಗಬಯಸುವೆನೇ ಹೊರತು ಮಹಾಸಂಸ್ಥಾನಾಧಿಪತ್ಯವನ್ನಲ್ಲ ! ನಾನು ಸನ್ಯಾಸಿಯಾಗಿ ಭಗವತ್ತತ್ವಗಳ ಪಾಠ-ಪ್ರವಚನ, ದೈತಸಿದ್ಧಾಂತ, ಹರಿಮಹಿಮಾಪ್ರಸಾರ, ತಪಸ್ಸು, ತೀರ್ಥಕ್ಷೇತ್ರಯಾತ್ರಾದಿಗಳಿಂದ ಶ್ರೀಹರಿಯು ಅನುಗ್ರಹವನ್ನು ಗಳಿಸಿ ಶಾಶ್ವತ ಸುಖಭಾಗಿಯಾಗಲು ಆಶಿಸುತ್ತಿದ್ದೇನೆ. ಮಹಾಸ್ವಾಮಿ, ತಾವು ಪರಮಾನುಗ್ರಹಮಾಡಿ ನನಗೆ ಪರಮಹಂಸಾಶ್ರಮವನ್ನು ಕರುಣಿಸಿ ಗುರೂಪದೇಶಮಾಡಿ ಉದ್ಧರಿಸಬೇಕು” ಎಂದು ವಿಜ್ಞಾಪಿಸಿದರು.
ಶ್ರೀಸುಧೀಂದ್ರರು ಸೋದರಳಿಯನ ಸ್ಪಷ್ಟಾಭಿಪ್ರಾಯ, ವೈರಾಗ್ಯಗಳನ್ನು ಕಂಡಾನಂದಿಸಿ "ನಾಳೆ ನಿನಗೆ ಯತ್ಯಾಶ್ರಮ ನೀಡುತ್ತೇವೆ” ಎಂದು ಹೇಳಿ ಕಳುಹಿಸಿದರು. ಮರುದಿನ ಶ್ರೀಮಠದ ಸಮಸ್ತ ಜನರ ಸಮಕ್ಷ ಶ್ರೀಸುಧೀಂದ್ರರು ಸೋದರಳಿಯನಿಗೆ ಸನ್ಯಾಸ ಸ್ವೀಕಾರಕ್ಕೆ ಫಲಮಂತ್ರಾಕ್ಷತೆ ಕರುಣಿಸಿದರು. ಮರುದಿನ ವಿಧ್ಯುಕ್ತಪ್ರಕಾರ ಸನ್ಯಾಸ ಸ್ವೀಕರಿಸಿ ಬಂದ ಅವರಿಗೆ ಮಂತ್ರಮುದ್ರಾಧಾರಣ, ಗುರೂಪದೇಶಾದಿಗಳನ್ನು ಮಾಡಿ “ಶ್ರೀಯಾದವೇಂದ್ರತೀರ್ಥ'ರೆಂದು ನಾಮಕರಣ ಮಾಡಿ ಆಶೀರ್ವದಿಸಿದರು ಮತ್ತು ತಾವು ಉಪಾಸನಾ ಮಾಡುತ್ತಿದ್ದ ಶ್ರೀಗರುಡವಾಹನ ಲಕ್ಷ್ಮೀನಾರಾಯಣದೇವರು, ಶ್ರೀಕೃಷ್ಣ, ಶಾಲಿಗ್ರಾಮಗಳು, ಶ್ರೀಪ್ರಾಣದೇವರ ಪ್ರತಿಮೆಗಳನ್ನೂ ಪೂಜೆಗೆ ಬೇಕಾದ ಎಲ್ಲ ಪಾತ್ರೆ ಪದಾರ್ಥಗಳನ್ನೂ ಅನುಗ್ರಹಿಸಿದರು. ಶ್ರೀಯಾದವೇಂದ್ರತೀರ್ಥರು ನಾಲ್ಕಾರು ದಿನ ಗುರುಸೇವೆ ಮಾಡಿಕೊಂಡಿದ್ದು ಆನಂತರ ಗುರುಗಳ ಅಪ್ಪಣೆ ಪಡೆದು ತೀರ್ಥಕ್ಷೇತ್ರ ಯಾತ್ರೆಗೆ ತೆರಳಿದರು.