ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೪೯. ಅಧ್ಯಯನ-ಅಧ್ಯಾಪನ
ಶ್ರೀಸುಧೀಂದ್ರತೀರ್ಥರು ಒಂದು ಶುಭಮುಹೂರ್ತದಲ್ಲಿ ಶ್ರೀಮದಾಚಾರ್ಯರಿಂದಾರಂಭಿಸಿ ಅವಿಚ್ಛಿನ್ನವಾಗಿ ಹರಿದುಬಂದಿದ್ದ ಸಂಪ್ರದಾಯ ಪಾಠಪ್ರವಚನ ರಹಸ್ಯವನ್ನು ವೆಂಕಟನಾಥರಿಗೆ ಉಪದೇಶಿಸುತ್ತಾ ಶ್ರೀಮದಾಚಾರ್ಯರ ಸಿದ್ಧಾಂತದ ಉದ್ಧಂಥಗಳು ಹಾಗು ಇತರ ಶಾಸ್ತ್ರಗಳ ಪ್ರೌಢಗ್ರಂಥಗಳನ್ನು ಟೀಕಾ ಟಿಪ್ಪಣಿಗಳೊಡನೆ ಪಾಠಹೇಳಲು ಪ್ರಾರಂಭಿಸಿದರು.
ಶ್ರೀಸುಧೀಂದ್ರಗುರುಗಳು ಹೇಳುತ್ತಿದ್ದ ಪಾಠ ವೈಶಿಷ್ಟ್ಯಪೂರ್ಣವಾಗಿತ್ತು. ಪಾಠ ಹೇಳುವವರಲ್ಲಿ ಭಾರತದಲ್ಲೇ, ಪಂಡಿತಮಂಡಲಿಯಲ್ಲಿ ಅಗ್ರಮಾನ್ಯರಾದ ಶ್ರೀಸುಧೀಂದ್ರತೀರ್ಥಗುರುಸಾರ್ವಭೌಮರು ! ಅವರಲ್ಲಿ ವ್ಯಾಸಂಗಮಾಡುವವರು ಸಕಲಶಾಸ್ತ್ರಪಾರಾವಾರಪಾರಂಗತರಾದ ವೇಂಕಟನಾಥಚಾರ್ಯರು ! ಅಂದಮೇಲೆ ಆ ಪಾಠಪ್ರವಚನ ವೈಭವ ಹೇಗಿರಬೇಕು ? ಅಪೂರ್ವವಾದ ಆ ಪ್ರವಚನವನ್ನು ಕೇಳಿ ಆನಂದಿಸಿದವರೇ ಧನ್ಯರು ! ಶ್ರೀಸುಧೀಂದ್ರರು ಎಲ್ಲ ಶಾಸ್ತ್ರಗಳ ಉದ್ಘಂಥಗಳನ್ನು ಪಾಠ ಹೇಳುವಾಗ ಅದಕ್ಕೆ ಸಹಾಯಕವಾದ ಇತರ ಶಾಸ್ತ್ರಪ್ರಮಾಣಗಳನ್ನು ಉದಾಹರಿಸುತ್ತಾ, ಬಹುವಿಧವಾಗಿ ಆಶಂಕೆಗಳನ್ನು ಮಾಡಿ, ಅದಕ್ಕೆ ಪ್ರಮಾಣೋದಾಹರಣಪೂರ್ವಕವಾಗಿ ಸಮಾಧಾನ ಹೇಳಿ, ವಿದ್ವತ್ತೂರ್ಣವಾಗಿ ಪಾಠ ಹೇಳುತ್ತಿದ್ದರು. ವೇಂಕಟನಾಥರು ಗುರುಗಳು ಹೇಳಿದ್ದನ್ನು ಕೂಡಲೇ ತಾವೂ ಅನುವಾದಮಾಡಿ. ಅದರಲ್ಲಿ ತಮಗೆ ಕಂಡುಬಂದ ಸಂದೇಹಗಳನ್ನು ಮಂಡಿಸುತ್ತಿದ್ದರು !ಶ್ರೀಯವರು ಶಿಷ್ಯರ ಈ ಪ್ರತಿಭಾ-ಕಲ್ಪನಾತಿಶಯ ಚಾತುರ್ಯದಿಂದ ಹರ್ಷಿತರಾಗಿ, ಶಿಷ್ಯರ ಅನುಮಾನಗಳನ್ನು ಪರಿಹರಿಸಿ, ಮುಂದುವರಿಯುವರು. ಅಂತೆಯೇ ಆ ಪಾಠಪ್ರವಚನವು ಅನನ್ಯ ಸಾಧಾರಣವಾಗಿದ್ದು ಸಮಸ್ತ ಪಂಡಿತಮಂಡಲಿಯನ್ನೂ ನಿಬ್ಬೆರಗುಗೊಳಿಸಿ ಅಮಿತಾನಂದವನ್ನೀಯುತ್ತಿದ್ದಿತು.
ವೇಂಕಟನಾಥರು ಸುಧೀಂದ್ರಗುರುಗಳಲ್ಲಿ ವ್ಯಾಕರಣಮಹಾಭಾಷ್ಯ, ಜಯದೇವನ ಟೀಕೆ, ಮೀಮಾಂಸಾಗ್ರಂಥಗಳು, ವಿಖ್ಯಾತವಾದ ಭಾಮತೀಗ್ರಂಥ, ಗೌರವಮೀಮಾಂಸಾಗ್ರಂಥ, ಅಂದರೆ ಪ್ರಭಾಕರನ ಗ್ರಂಥ ಮತ್ತು ಶ್ರೀವ್ಯಾಸರಾಜರ ತಾತ್ಪರ್ಯ ಚಂದ್ರಿಕಾ, ಮತ್ತಿತರ ಉದ್ಘಂಥಗಳನ್ನು ಅಧ್ಯಯನಮಾಡುತ್ತಿದ್ದರು. ಇದರಂತೆ ತಾವು ಅಧ್ಯಯನಮಾಡುವುದರ ಜತೆಗೆ ಶ್ರೀಸುಧೀಂದ್ರರ ಅಣತಿಯಂತೆ ವಿದ್ಯಾಪೀಠದಲ್ಲಿ ನೂರಾರು ಜನ ವಿದ್ಯಾರ್ಥಿಗಳಿಗೆ ವಿವಿಧಶಾಸ್ತ್ರಗ್ರಂಥಗಳ ಪಾಠ ಹೇಳುತ್ತಿದ್ದರು ಪ್ರತಿದಿನ ಆಚಾರ್ಯರು ಬ್ರಾಹ್ಮಮುಹೂರ್ತದಲ್ಲಿ ಎಚ್ಚೆತ್ತು ಸ್ನಾನ, ಸಂಧ್ಯಾ, ಜಪ-ಪಾರಾಯಣ-ದೇವಪೂಜಾದಿಗಳನ್ನು ನೆರವೇರಿಸಿ, ಶ್ರೀಪಾದಂಗಳವರಲ್ಲಿ ಸರ್ವಜ್ಞಶಾಸ್ತ್ರವನ್ನು ಅಧ್ಯಯನಮಾಡಿ, ಅನಂತರ ವಿದ್ಯಾಪೀಠದಲ್ಲಿ ಮೊದಲು ಶ್ರೀಮದಾಚಾರ್ಯರ ಬ್ರಹ್ಮ ಸೂತ್ರಭಾಷ್ಯವನ್ನೂ ಉಪದನಿಷದ್ಭಾಷ್ಯಗಳನ್ನೂ ಎರಡನೆಯ ಯಾಮದಲ್ಲಿ ವ್ಯಾಕರಣ ಮಹಾಭಾಷ್ಯವನ್ನೂ, ಮಧ್ಯಾಹ್ನ ತರ್ಕಶಾಸ್ತ್ರವನ್ನೂ, ಸಂಜೆ ಮೀಮಾಂಸಾ ಶಾಸ್ತ್ರವನ್ನೂ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಾ ಕೆಲವರ್ಷ ಸಂತೋಷದಿಂದ ಕಾಲಕಳೆದರು.
ಶ್ರೀಸುಧೀಂದ್ರತೀರ್ಥರು ಸುಮಾರು ಮೂರು ವರ್ಷಗಳ ಕಾಲ ಎಡಬಿಡದೆ ಆಚಾರರಿಗೆ ಪಾಠ ಹೇಳಿ ಕೃತಾರ್ಥರಾದರು. ಶ್ರೀಮದಾಚಾರಪರಂಪರಾ ಅವಿಚ್ಛಿನ್ನವಾಗಿ ನಡೆದುಬಂದ ಸಂಪ್ರದಾಯ ಕ್ರಮದಲ್ಲಿ ವೇಂಕಟನಾಥರಿಗೆ ಸಮಗ್ರ ದೈತಶಾಸ್ತ್ರವನ್ನೂ ನ್ಯಾಯ-ಮೀಮಾಂಸಾ-ವ್ಯಾಕರಣ ಶಾಸ್ತ್ರಗಳನ್ನೂ ಪಾಠ ಹೇಳಿ ಮುಗಿಸಿದರು, ಶ್ರೀಸುಧೀಂದ್ರರ ಸಮಸ್ತ ವಿದ್ಯೆಗಳೂ ವೇಂಕಟನಾಥರಲ್ಲಿ ನೆಲೆಸಿ ಶೋಭಿಸಿತು !