|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೪೮. ಶ್ರೀಸುಧೀಂದ್ರರ ಆಶ್ರಯದಲ್ಲಿ

ವಿದ್ಯಾಮಠದಲ್ಲಿ ಶ್ರೀಸುಧೀಂದ್ರತೀರ್ಥಶ್ರೀಪಾದರು ಪಾಠ ಹೇಳುತ್ತಾ ಕುಳಿತಿದ್ದರು. ಆಚಾರ್ಯದಂಪತಿಗಳು ಬಂದು ಗುರುಗಳಿಗೆ ನಮಸ್ಕರಿಸಿದರು. ಸುಧೀಂದ್ರರ ಮುಖವರಳಿತು. “ಬನ್ನಿ, ಆಚಾರ್ಯ ! ನಿಮಗೆ ಸ್ವಾಗತ” ಎಂದರು. ವೇಂಕಟನಾಥರು ರಾಮಚಂದ್ರಾಚಾರ್ಯರ ಆಜ್ಞೆಯನ್ನು ತಿಳಿಸಿದರು. “ಸಂಸಾರಸಹಿತನಾಗಿ ಶ್ರೀ ಸನ್ನಿಧಿಗೆ ಬಂದಿದ್ದೇನೆ. ಶಿಷ್ಯನಲ್ಲಿ ಕೃಪೆಮಾಡಬೇಕು” ಎಂದರು. 

ಸುಧೀಂದ್ರರು “ಈ ಮಹಾಸಂಸ್ಥಾನವೇ ನಿಮ್ಮದು ಆಚಾರ್ಯ ! ಉಳಿದ ವಿಚಾರ ಸಾವಾಕಾಶವಾಗಿ ಮಾತಾಡೋಣ” ಎಂದು ನರಸಿಂಹಾಚಾರ್ಯರನ್ನು ಕರೆದು “ನರಸಿಂಹ ! ಮಠದಿಂದ ವೇಂಕಟನಾಥರಿಗೆ ಸರಿಯಾದ ವಸತಿ ಮುಂತಾದ ಸೌಕರ್ಯ ಏರ್ಪಡುವವರೆಗೆ ಆಚಾರ್ಯರ ಕುಟುಂಬದ ಯೋಗಕ್ಷೇಮದ ಹೊಣೆ ನಿನಗೆ ಸೇರಿದೆ.” ಎಂದಾಜ್ಞಾಪಿಸಿದರು. ನರಸಿಂಹಾಚಾರ್ಯರು ಅಪ್ಪಣೆ” ಎಂದು ವಿಜ್ಞಾಪಿಸಿ ಆಚಾರ್ಯ ದಂಪತಿಗಳು, ಲಕ್ಷ್ಮೀನಾರಾಯಣರೊಡನೆ ಮನೆಗೆ ತೆರಳಿ ಎಲ್ಲ ಅನುಕೂಲಗಳನ್ನೂ ಏರ್ಪಡಿಸಿಕೊಟ್ಟರು. 

ವೇಂಕಟನಾಥರ ಆಗಮನದಿಂದ ಶ್ರೀಸುಧೀಂದ್ರತೀರ್ಥರಿಗೆ ಮಹದಾನಂದವಾಯಿತು. ಶ್ರೀವಿಜಯೀಂದ್ರಗುರುಗಳ ಆದೇಶವನ್ನು ನೆರವೇರಿಸುವ ಅವಕಾಶ ದೊರಕಿತೆಂದು ಸುಪ್ರಸನ್ನರಾದರು. ವೇಂಕಟನಾಥರಿಗೆ ಭವ್ಯಗೃಹ, ಸಂಸಾರ ನಿರ್ವಹಣೆಗೆ ಬೇಕಾದ ಸಕಲ ಸೌಲಭ್ಯಗಳನ್ನೂ ಏರ್ಪಡಿಸಿಕೊಟ್ಟರು. ಶ್ರೀಪಾದಂಗಳವರ ಅನುಗ್ರಹದಿಂದ ವಸತಿ, ಭೋಜನಾದಿಗಳಿಗೆ ವಿಶೇಷ ಅನುಕೂಲವಾದ್ದರಿಂದ ಆಚಾರ್ಯರು ನಿಶ್ಚಿಂತರಾದರು. ಸರಸ್ವತಮ್ಮನವರು ಸಂಭ್ರಮೋಲ್ಲಾಸಗಳಿಂದ ಪತಿಸೇವಾರತರಾಗಿ, ಮುದುಕುಮಾರನ ಲಾಲನೆ-ಪಾಲನೆಗಳಲ್ಲಿ ಗಮನವಿಟ್ಟು ಸಂತೋಷದಿಂದ ಸಂಸಾರವನ್ನು ನಿರ್ವಹಿಸತೊಡಗಿದರು. ವೇಂಕಟನಾಥರು ಚೋಳಮಂಡಲಕ್ಕೆ ಭೂಷಣವಾದ ಕುಂಭಕೋಣನಗರದಲ್ಲಿ ಸುಧೀಂದ್ರಗುರುಗಳ ಆಶ್ರಯದಲ್ಲಿ ವಾಸಮಾಡುತ್ತಾ ಶ್ರೀಗುರುಗಳವರಲ್ಲಿ ವಿವಿಧಶಾಸ್ತ್ರಗಳ ಉದ್ಧಂಥಗಳನ್ನು ಅಧ್ಯಯನಮಾಡುತ್ತಾ ಶ್ರೀಗಳವರಿಂದ ಮಾನಿತರಾದರು.