|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೪೭. ಯೋಗಕ್ಷೇಮಂ ವಹಾಮ್ಯಹಮ್

ವೇಂಕಟನಾಥರು ಎರಡು ದಿನ ಉಪವಾಸದಿಂದಲೇ ಕಳೆದಿದ್ದರು. ಮರುದಿನ ಏಕಾದಶಿ ಉಪವಾಸ. ಅಂದು ರಾತ್ರಿ ಜಾಗರಣೆ ಮಾಡಿ ದ್ವಾದಶಿ ದಿನ ಬೆಳಗಿನ ಝಾವ ದೇವರ ಪೂಜೆ ಮಾಡುತ್ತಿದ್ದಾರೆ. ಸರಸ್ವತಮ್ಮ ಬಾಡಿದ ಮುಖದಿಂದ ನಿಂತಿದ್ದಾರೆ. ಲಕ್ಷ್ಮೀನಾರಾಯಣ ದೇವರ ಮನೆಯ ಮುಂದೆ ಕರಮುಗಿದು ಕುಳಿತು ದೇವರ ಪೂಜೆ ನೋಡುತ್ತಿದ್ದಾನೆ. ಇಂದು ದ್ವಾದಶೀ ಹರಿವಾಸರವಾದ್ದರಿಂದ ಸಾವಕಾಶವಾಗಿ ಪೂಜೆ ಮಾಡುತ್ತಿದ್ದಾರೆ ಆಚಾರ್ಯರು. ಸುಸ್ವರವಾಗಿ ಮಂದ್ರ-ಮಧ್ಯಮೋಚ್ಚ ಸ್ವರದಲ್ಲಿ ಆಚಾರರ ಮುಖದಿಂದ ಮಂತ್ರಗಳು ಹೊರಹೊಮ್ಮುತ್ತಿವೆ. ಆ ವೇದಾಧ್ಯಯನ ಕೇಳುತ್ತಿದ್ದಂತೆ ಸರಸ್ವತಮ್ಮ, ಲಕ್ಷ್ಮೀನಾರಾಯಣರ ಹೃದಯದಲ್ಲಿ ಒಂದು ಬಗೆಯ ಆನಂದ, ಶಾಂತಿ, ಸಮಾಧಾನಗಳುಂಟಾಗುತ್ತಿವೆ. ಕಳಶಪೂಜೆ ಮುಗಿದು ಅಭಿಷೇಕ ಮಾಡಿ, ದೇವರಿಗೆ ಗಂಧಾಕ್ಷತೆಗಳನ್ನರ್ಪಿಸಿ ಸಹಸ್ರನಾಮಗಳಿಂದ ತುಳಸೀ ಅರ್ಚನೆ ಪೂರೈಸಿ ಕುಳಿತರು ವೇಂಕಟನಾಥರು. ಸರಸ್ವತಮ್ಮ ತಲೆತಗ್ಗಿಸಿ “ಸ್ವಾಮಿ, ಇಂದೂ ದೇವರಿಗೆ ನೇವೇದ್ಯವಿಡಲು ಭಾಗ್ಯವಿಲ್ಲವಾಗಿದೆ” ಎಂದುಸುರಿದರು. ವೇಂಕಟನಾಥರು ನಿಟ್ಟುಸಿರು ಬಿಟ್ಟು “ಏಕಿಂತು ಚಿಂತಿಸುವೆ ? ಸರಸ್ವತಿ, ನಿನ್ನ ಸಂಕಟ ನಾನು ಬಲ್ಲೆ. ಹಿಂದೊಂದು ದಿನ “ಪತ್ರಂ ಪುಷ್ಪಂ ಫಲಂ ತೋಯಂ” ಎಂದು ಹೇಳಿದ್ದೆನಲ್ಲವೆ ? ಭಗವಂತ ಅದರಿಂದಲೇ ತೃಪ್ತನಾಗುವನು” ಎಂದರು. ಸರಸ್ವತಿ “ನಿಜ, ಆದರಂದು ಕ್ಷೀರವನ್ನಾದರೂ ಸಮರ್ಪಿಸಿದ್ದಿರಿ. ಇಂದು ಅದೂ ಇಲ್ಲವಲ್ಲ !” ಎನಲು ವೇಂಕಟನಾಥರು (ಖಿನ್ನರಾಗಿ ನಕ್ಕು “ಸರಸ ! ನೇವೇದ್ಯವೆಂದರೇನು ? ಸಮರ್ಪಣೆಯಲ್ಲವೇ ? ಶ್ರೀಕೃಷ್ಣ ಹೇಳಿದಂತೆ ಸಮರ್ಪಿಸಿದರಾಯಿತು !” ಎಂದಾಗ ಸರಸ್ವತಿಯು “ಭಗವಂತ ಏನು ಹೇಳಿದ್ದಾನೆ ಸ್ವಾಮಿ” ಎಂದು ಪ್ರಶ್ನಿಸಿದಳು. 

ವೇಂ : 

“ಯತರೋಪಿ ಯದಾಸಿ ಯಜ್ಜುಹೋಷಿ ದದಾಸಿಯತ್ | 

ಯತಪಸ್ಯಸಿ ಕೌಂತೇಯ ! ತತ್ತುರುಷ್ಟ ಮದರ್ಪಣಮ್ ||” 

“ಭಕ್ತಿಯಿಂದ ಸಮರ್ಪಿಸುವುದೇನಾಗಿದ್ದರೂ ಅದು ನನಗೆ ಪ್ರೀತಿಕರವಾದದ್ದು. ಅರ್ಜುನ ! ಹೀಗೆ ಮಾಡು-ನೀನು ಮಾಡುವ ಕರ್ಮಗಳನ್ನು, ಭುಜಿಸುವುದನ್ನು ಹೋಮಮಾಡುವುದನ್ನು, ದಾನಮಾಡುವುದನ್ನು ಮತ್ತು ನೀನೆಸಗುವ ತಪಸ್ಸನ್ನು ಹೀಗೆ ಇವೆಲ್ಲವನ್ನೂ ನನ್ನ ಪ್ರೀತ್ಯರ್ಥವಾಗಿ ಮಾಡುವುದಾಗಿ ಸಂಕಲ್ಪಿಸಿ, ನಿಷ್ಕಾಮನೆಯಿಂದ ಸಮರ್ಪಿಸಿಬಿಡು. ಅದರಿಂದ ನಾನು ತೃಪ್ತನಾಗುತ್ತೇನೆ - ಎಂದು ಹೇಳಿದ್ದಾನೆ. ಆ ದೇವನ ಉಪದೇಶದಂತೆ ಈ ಐದು ಬಗೆಯ ಕಾವ್ಯಗಳನ್ನು ನಾವು ಶ್ರೀಹರಿಯು ಪ್ರೀತನಾಗಲೆಂದು ಸಮರ್ಪಿಸಿಬಿಡೋಣ ! ಆಗ ಅದೇ ನಿವೇದನವಾಗುವುದು ! ಅದರಿಂದಲೇ ಕರುಣಾಳು ಪ್ರೀತನಾಗುವನು. ಸರಸ್ವತಿ, ಪಂಚವಿಧ ಸಮರ್ಪಣ ವಿಧಾನವು ಅರ್ಥವಾಯಿತಷ್ಟೆ ? 

ಸರ : ದಯವಿಟ್ಟು ವಿವರಿಸಿ ಹೇಳಿ, ಸ್ವಾಮಿ. 

ವೇಂ : ನೋಡು, ಸರಸ ! ಇಂದು ನಾನೇನು ಮಾಡಿದ್ದೇನೆ ? ಸ್ನಾನ-ಸಂಧ್ಯಾಜಪ ಪಾರಾಯಣ-ದೇವಪೂಜಾದಿಗಳನ್ನು ಅಲ್ಲವೇ ? ಈ ಸತ್ಕರ್ಮಗಳೆಲ್ಲವನ್ನೂ ಶ್ರೀಹರಿಗೆ ಸಮರ್ಪಿಸಿಬಿಡುತ್ತೇನೆ. ಇನ್ನು ಎರಡನೆಯದು ಭೋಜನ. ಮೂರುದಿನದಿಂದ ಉಪವಾಸವಿದ್ದೇವಲ್ಲ, ಏನು ಭುಜಿಸಿಲ್ಲವೆಂದು ಯೋಚಿಸಬೇಡ. ಉಪವಾಸವಿದ್ದರೂ ವಾಯುಭಕ್ಷಣಮಾಡಿದ್ದೇವೆ ! ಸಂಧ್ಯಾದಿಕಾಲದಲ್ಲಿ ಆಚಮನಮಾಡಿದ್ದೇವೆ. ವಾಯುಸೇವನೆಯೇ ಆಹಾರ, ಆಚಮನವೇ ಜಲ. ಅದನ್ನೇ ಶ್ರೀಹರಿಗರ್ಪಿಸೋಣ ! ಮೂರನೆಯದು ಹೋಮಮಾಡುವುದು, ಪ್ರತಿದಿನವೂ ಔಪಾಸನವನ್ನಾಚರಿಸುತ್ತಿರುವದೇ ಹೋಮ ಅಥವಾ ಪಾಠಪ್ರವಚನರೂಪಕಾರವೂ ಒಂದು ಜ್ಞಾನಯಜ್ಞ, ಅದನ್ನೇ ಶ್ರೀಶ ! ನಿನಗರ್ಪಿತವಾಗಲಿ ಎಂದು ಹೇಳಿಬಿಟ್ಟರಾಯಿತು ! ಇನ್ನು ಉಳಿದುದು ದಾನ, ನಮ್ಮ ಮನೆಯಲ್ಲಿದ್ದುದನ್ನು ಕಳ್ಳರು ಕೊಂಡೊಯ್ದರಲ್ಲವೇ ? ನಾವಾಗಿ ಕೊಡದಿದ್ದರೂ, ಅವರು ತೆಗೆದುಕೊಂಡು ಹೋದ ಪದಾರ್ಥಗಳು ನಮ್ಮ ಸ್ವತ್ತಾದುದರಿಂದ ದಾನಮಾಡಿದಂತೆಯೇ ಆಯಿತೆಂದು ಭಾವಿಸಿ, ಅದೂ ಶ್ರೀಹರಿ ನಿನಗರ್ಪಿತವಾಗಲಿ ಎಂದುಬಿಡೋಣ. ಇನ್ನು ಐದನೆಯದು ತಪಸ್ಸು, ತಪಸ್ಸೆಂದರೇನು ? ಭಗವಂತನ ಸ್ತೋತ್ರ, ಭಜನ, ಧ್ಯಾನಾದಿಗಳೇ ಅಲ್ಲವೇ ? ನಾವು ಆಚರಿಸಿದ ಆ ತಪಸ್ಸನ್ನೂ ಪರಮಾತ್ಮನಿಗೆ ಅರ್ಪಿಸೋಣ. ಅದರಿಂದ ಭಗವಂತನು ಆಜ್ಞಾಪಿಸಿದ ಐದು ಬಗೆಯ ಕರ್ಮಗಳನ್ನೂ ಭಕ್ತಿಪೂರ್ವಕವಾಗಿ 'ಪ್ರಭು ಸ್ವೀಕರಿಸು' ಎಂದು ನಿವೇದಿಸಿಬಿಟ್ಟರೆ, ನೇವೇದ್ಯ ಮಾಡಿದಂತಾಯಿತು. ಅದಕ್ಕಾಗಿ ಏಕೆ ದುಃಖಿಸುವೆ ? “ನಾನು ಅಜ್ಞಾನಿ, ಪತಿಯ ಜ್ಞಾನ-ಭಕ್ತಿ-ಅನುಸಂಧಾನಗಳನ್ನು ಕಂಡು ಸರಸ್ವತಿ ಮೂಕವಿಸ್ಮಿತಳಾದಳು. ಪತಿಗೆ ನಮಸ್ಕರಿಸಿ ಅಲ್ಪಳು. ಮಹಾತತ್ವರಹಸ್ಯವನ್ನರಿಯಲಾರದೆ ಸಾಮಾನ್ಯ ಸ್ತ್ರೀಯಂತೆ ಬಡಬಡಿಸಿದೆ. ಈ ದಾಸಿಯ ಅಪರಾಧವನ್ನು ಕ್ಷಮಿಸಿ” ಎಂದು ವಿಜ್ಞಾಪಿಸಿದಳು. ಪತ್ನಿಯ ನಿರ್ಮಲ ಮನಸ್ಸು, ಸಾತ್ವಿಕ ಭಾವನೆ, ಧರ್ಮಪ್ರಜ್ಞೆಗಳಿಂದ ಸುಪ್ರೀತರಾದ ಆಚಾರರು ಮಂದಹಾಸಬೀರಿವರು. ಅದರಿಂದ ಅವರ ದುಗುಡ-ದುಮ್ಮಾನಗಳೆಲ್ಲವೂ ಮಾಯವಾಗಿ ಮುಖ ಪ್ರಫುಲ್ಲಿಸಿತು. ಸಂತಸದಿಂದ “ಸ್ವಾಮಿ” ಎಂದರು. 

ವೇಂ : ಸರಸ್ವತಿ, ನಿನ್ನ ಹೃದಯಭಾವ ಅರ್ಥವಾಯಿತು. ನಾವು ದೊಡ್ಡವರು ಉಪವಾಸ-ಕಷ್ಟಗಳನ್ನು ಸಹಿಸಬಲ್ಲೆವು. ಮಗು ಲಕ್ಷ್ಮೀನಾರಾಯಣ ಕೇವಲ ಬಾಲಕ, ಅವನೆಂತು ಹಸಿವು - ನೀರಡಿಕೆಯನ್ನು ಸಹಿಸಬಲ್ಲವನೆಂದಲ್ಲವೇ ನಿನ್ನ ಚಿಂತೆ ! ಎಲ್ಲರನ್ನೂ ಸಲಹುವ ಸ್ವಾಮಿ ನಿನ್ನ ಮಗನನ್ನೂ ಕಾಪಾಡುವನು. ಸರಸ್ವತಿ, ನಾನು, ನೀನು, ದಂಪತಿಗಳು. ನಮಗೆ ಒಬ್ಬನೇ ಮಗ, ನಾವೇ ಇಷ್ಟು ಕಷ್ಟಪಡುತ್ತಿರುವಾಗ ಇನ್ನು ಪಾಪ, ಮಹಾನುಭಾವರಾದ ಕುಚೇಲರು ಮತ್ತು ದೇವಶರ್ಮರ ಕಷ್ಟ ಹೇಗಿದ್ದಿರಬಹುದು ? ಅವರು ಶ್ರೀಹರಿಚಿತ್ತವೆಂದು ದಾರಿದ್ರವನ್ನು ಸಂತೋಷದಿಂದ ಅನುಭವಿಸಲಿಲ್ಲವೇ ? ಜ್ಞಾನಿಗಳಾದ ಸುಧಾಮರು, ದೇವಶರ್ಮರುಗಳ ದೃಷ್ಟಾಂತ ಕಣ್ಣೆದುರಿಗಿರಲು ಚಿಂತೆಯೇಕೆ ? ಶ್ರೀಹರಿಯು “ನಮೇ ಭಕ್ತಃ ಪ್ರಣಶ್ಯತಿ' ನನ್ನ ಭಕ್ತರಿಗೆ ನಾಶವಿಲ್ಲವೆಂದು ಹೇಳಿದ್ದಾನೆ. ನಾವು ತ್ರಿಕರಣಗಳಿಂದ ಅವನ ದಾಸರಾಗಬೇಕಷ್ಟೆ. ನಮ್ಮ ಸಕಲೇಂದ್ರಿಯಗಳು ಅವನನ್ನು ಆರಾಧಿಸಬೇಕು. ನಮ್ಮ ಉಸಿರು ಪರಮಾತ್ಮಮಯವಾಗಿರಬೇಕು. ಆಗ ಶ್ರೀಹರಿಯು ನಮ್ಮಲ್ಲಿದಯೆ ಬೀರುತ್ತಾನೆ, ಉದ್ಧರಿಸುತ್ತಾನೆ. ಅವನೇ ಹೇಳಿರುವನಲ್ಲವೇ ? 

“ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ | 

ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||” 

ಎಂದು. ನಶ್ವರ ಫಲಗಳನ್ನೀಯುವ ಇತರ ದೇವತೆಗಳನ್ನು ಬಿಟ್ಟು, ನನ್ನನ್ನೇ ಧ್ಯಾನಿಸುತ್ತಾ, ಪರಿಪಕ್ವಭಕ್ತಿಯಿಂದಾರು ನನ್ನನ್ನು ಸೇವಿಸುವರೋ, ಸಕಲ ದೇಶಕಾಲಗಳಲ್ಲಿಯೂ ಭಗವಂತನಾದ ನನ್ನಲ್ಲಿಯೇ ಮನಸ್ಸಿಟ್ಟು, ನನ್ನ ಸೇವೆಯಲ್ಲುದ್ಯುಕ್ತರಾದ ಅಂಥ ನನ್ನ ಭಕ್ತರಿಗೆ ನಾನು ಅಪ್ರಾಪ್ತವಾಗಿದ್ದ ಮೋಕ್ಷವನ್ನಿತ್ತು ಅದನ್ನು ಸ್ಥಿರಪಡಿಸುತ್ತೇನೆ. ಅವರ ಯೋಗಕ್ಷೇಮವನ್ನು ವಹಿಸುತ್ತೇನೆ - ಎಂದು ಶ್ರೀಕೃಷ್ಣನು ಕುಠರವೇಣ ಹೇಳಿದ್ದಾನೆ. ಹದಿನಾಲ್ಕು ಲೋಕಗಳನ್ನೇ ರಕ್ಷಿಸುವ ಶ್ರೀಹರಿಗೆ ನಾನು, ನೀನು, ಲಕ್ಷ್ಮೀನಾರಾಯಣರ ಸಂರಕ್ಷಣೆ ಭಾರವಾದೀತೇ ? ನಮ್ಮೆಲ್ಲರ ಸಂರಕ್ಷಣೆಯ ಹೊಣೆ ಪ್ರಭುವಿಗೆ ಸೇರಿದ್ದು, ಚಿಂತಿಸಬೇಡ. 

ಪತಿಯ ಉಪದೇಶಾಮೃತದಿಂದ ಸಂತುಷ್ಟರಾದ ಸರಸ್ವತಮ್ಮ “ಸ್ವಾಮಿ, ನಾನು ಲಕ್ಷ್ಮೀನಾರಾಯಣನ ವಿಷಯವಾಗಿ ಚಿಂತಿಸುತ್ತಿಲ್ಲ. ಇಂದು ನನಗೆ ಬಿದ್ದ ಕನಸನ್ನು ಅರುಹಲಿಚ್ಚಿಸಿದ್ದೆ, ಅಷ್ಟೆ !” ಎನಲು ವೇಂಕಟನಾಥರು “ಕನಸಾಯಿತೇ ? ಅದೇನು ಹೇಳು” ಎಂದರು. 

ಸರ : ನನ್ನೆ ಜಾಗರಣೆಮಾಡುತ್ತಿರುವಾಗ ನೀವು ಪಾರಾಯಣಮಾಡಿ ವೀಣಾವಾದನಮಾಡುತ್ತಿದ್ದಿರಿ, ನನಗೆ ನಿದ್ರೆ ಬಂದಂತಾಯಿತು. ಆಗ ಕನಸೊಂದನ್ನು ಕಂಡೆ. ಕನಸಿನಲ್ಲಿ ನಮ್ಮ ಕಷ್ಟಗಳನ್ನು ನೆನೆದು ಚಿಂತಾಕ್ರಾಂತಳಾಗಿರುವಾಗ ಅನೇಕ ಮಿಂಚುಗಳು ಏಕಕಾಲದಲ್ಲಿ ಮಿನುಗಿದಂತಾಯಿತು. ನಾನು ತಲೆಯೆತ್ತಿದೆ. ಆಗ ಇದ್ದಕ್ಕಿದ್ದಂತೆ ಆಕಾಶದಿಂದ ಪ್ರಖರ ಕಾಂತಿಪುಂಜವೊಂದು ಧರೆಗಿಳಿದು ಬಂದು ನಿಂತಂತಾಯಿತು ! ಆ ಪ್ರಕಾಶವನ್ನು ನೋಡಲಾರದೆ ಕಣ್ಣುಮುಚ್ಚಿದೆ. “ಮಗಳೇ, ಸರಸ್ವತಿ” ಎಂಬ ಮೃದುಧ್ವನಿ ಕೇಳಿ ಅಚ್ಚರಿಯಿಂದ ಕಣ್ಣೆರೆದು ನೋಡಿದೆ ! ಅಹಹ ! ಸ್ವಾಮಿ, ಏನು ಹೇಳಲಿ ? ಕಾಷಾಯಾಂಬರ-ದಂಡ ಕಮಂಡಲುಧಾರಿಗಳಾಗಿ ದಿವ್ಯಕಾಂತಿಯಿಂದೆಸೆಯುತ್ತಾ, ಮಂದಹಾಸಮುಖದಿಂದ ಅಭಯಪ್ರದಾನ ಮಾಡುತ್ತಾ ಪೂಜ್ಯ ಶ್ರೀವಿಜಯೀಂದ್ರಗುರುಗಳು ನಿಂತಿದ್ದಾರೆ ! ನಾನು ಆನಂದದಿಂದ ದಿಗ್ಗನೆ ಮೇಲೆದ್ದು “ಗುರುದೇವ ! ಈ ಬಡಶಿಷ್ಯರ ಮೇಲೇಕಿಷ್ಟು ಉದಾಸೀನರಾದಿರಿ ? ನಿಮ್ಮ ದರ್ಶನವಾಗಿ ಅದೆಷ್ಟು ವರ್ಷಗಳಾದವು” ಎಂದು ನಮಸ್ಕರಿಸಿದೆನು. ಆಗ ಪೂಜ್ಯ ಗುರುಗಳು ನಸುನಗುತ್ತಾ 'ಮಗಳೇ ನಾನಿಲ್ಲೇ ಇರುವೆನಲ್ಲ ! ನನ್ನ ದರ್ಶನಮಾಡುತ್ತಲೇ ಇದ್ದೀರಲ್ಲ ! ನನ್ನ ಪ್ರಿಯ ವೇಂಕಟನಾಥನು ನಮ್ಮ ಗ್ರಂಥಗಳನ್ನು ಪ್ರವಚನಮಾಡುತ್ತಿಲ್ಲವೇ ? ನಮ್ಮ ಗ್ರಂಥಗಳ ಪಾಠ-ಪ್ರವಚನವಾಗುವಲ್ಲಿ ನಾವಿರದಿರಲು ಸಾಧ್ಯವೇ ?” ಎಂದರು. 

ನಾನು ನಿಜ, ಆದರೆ ನಾನು ಹೇಳಿದ್ದು ತಮ್ಮ ಮಂಗಳಸ್ವರೂಪದರ್ಶನವಾಗಿ ಬಹುವರ್ಷವಾಯಿತೆಂದು !” ಎಂದೆನು. ಆಗ ಗುರುಗಳು “ಅದಕ್ಕಾಗಿಯೇ ಈಗ ಬಂದಿರುವೆವಲ್ಲಾ! ನಿಮ್ಮ ಕಷ್ಟವೆಲ್ಲ ಪರಿಹಾರವಾಗುವ ಕಾಲ ಬಂದಿದೆ. ಯೋಚಿಸಬೇಡ. ನಿನ್ನ ಗಂಡನನ್ನು ನಮ್ಮ ಪ್ರಿಯಶಿಷ್ಯ ಶ್ರೀಸುಧೀಂದ್ರರ ಸನ್ನಿಧಿಗೆ ಸಂಪ್ರದಾಯ ಪಾಠ-ಪ್ರವಚನಕ್ಕಾಗಿ ಕರೆದುಕೊಂಡು ಹೋಗಮ್ಮ ನಿಮಗೆ ಮಂಗಳವಾಗಲಿ” ಎಂದು ಹೇಳಿ ಅದೃಶ್ಯರಾದರು. ಆನಂತರ ನನಗೆಚ್ಚರವಾಯಿತು. ಈ ವಿಚಾರವನ್ನು ತಮ್ಮಲ್ಲಿ ಅರಿಕೆಮಾಡಲು ಈಗ ಅವಕಾಶವಾಯಿತು. ಸ್ವಾಮಿ, ಗುರುಪಾದರ ಅಪ್ಪಣೆಯಂತೆ ಗುರು ಸುಧೀಂದ್ರರ ಬಳಿಗೆ ಹೋದರೆ, ಎಲ್ಲವೂ ಶುಭವಾಗುವುದೆಂದು ನನ್ನ ನಂಬಿಕೆ, ಕುಂಭಕೋಣಕ್ಕೆ ಹೋಗೋಣವೇ ? ಎಂದರು. 

ಪತ್ನಿಯ ಮಾತನ್ನಾಲಿಸಿ ವೇಂಕಟನಾಥರ ಮುಖವರಳಿತು. ಆಚಾರರು “ಶ್ರುತಂ ಪ್ರೋತವ್ಯಂ ! ಸರಸ್ವತಿ, ನಿನ್ನ ಬಾಯಿಂದ ಈ ಒಂದು ಮಾತನ್ನಾಲಿಸಲು ಎಷ್ಟು ದಿನಗಳಿಂದ ಕಾದಿದ್ದೆ ಗೊತ್ತೆ?” ಎಂದುದ್ದರಿಸಿದರು. 

ಸರ : (ಅಚ್ಚರಿಯಿಂದ) ನನ್ನ ಮಾತಿಗಾಗಿ ಕಾದಿದ್ದೀರಾ ? ಹಾಗೆಂದರೇನು ? 

ವೇಂ : ಹಿಂದೊಮ್ಮೆ ನಿನಗೆ ಅಲಕ್ಷ್ಮಿಗೆ ಆಶ್ರಯವೀಯುವುದಾಗಿ ವಚನವಿತ್ತು 'ಯಾವಾಗ ನನ್ನಾಶ್ರಯ ತ್ಯಜಿಸುತ್ತೀಯೆ?' ಎಂದು ಕೇಳಿದಾಗ “ಎಂದು ನಿನ್ನ ಪತ್ನಿ ಗುರುಸನ್ನಿಧಿಗೆ ಹೋಗಬೇಕೆಂದು ಪ್ರೇರಿಸುವ ಆ ಮರುಕ್ಷಣದಿಂದ ನಾನಿಲ್ಲಿ ಇರಲಾರೆ” ಎಂದು ಹೇಳಿದಳು ! ಈ ದಿನ ಆ ಅಮೃತಘಳಿಗೆ ಬಂದಿತು ! ಸರಸ್ವತಿ, ಸರಿಯಾದ ಸಲಹೆಯನ್ನೇ ನೀಡಿದ್ದೀಯೆ ! ಇಂದಿಗೆ ನಮ್ಮ ಕಷ್ಟ ಪರಿಹಾರವಾಯಿತೆಂದು ತಿಳಿ, ಶೀಘ್ರವಾಗಿ ಕುಂಭಕೋಣಕ್ಕೆ ಹೊರಡೋಣ. ಈಗ ನಾನು ಹೇಳಿದಂತೆ ಐದು ಬಗೆಯ ಕರ್ಮಗಳನ್ನೂ ಹರಿಗೆ ಸಮರ್ಪಿಸಿ ತೀರ್ಥಪಾರಣೆಮಾಡೋಣ” ಎಂದು ಹೇಳಿದರು. ಅದೇ ವೇಳೆಗೆ ಯಾರೋ ಬೀದಿಯ ಬಾಗಿಲು ಬಡಿಯಹತ್ತಿದರು. ಆಚಾರ್ಯರು “ಅದಾರು ಬಂದಿರುವರು ನೋಡು” ಎಂದು ಪತ್ನಿಗೆ ಹೇಳಿದರು. ಸರಸ್ವತಮ್ಮ ಹೊರಗೆ ಹೋಗಿ ಬಂದು “ಯಾರೋ ಶ್ರೀಮಂತರಂತಿದ್ದಾರೆ. ನಿಮ್ಮನ್ನು ನೋಡಲು ಬಂದಿದ್ದಾರೆ? ಎನಲು ಅಚಾರರು ಪತ್ನಿಯೊಡನೆ ಪಡಸಾಲೆಗೆ ಬಂದರು. 

ಅಲ್ಲಿ ಶ್ರೀಮಂತರಂತಿರುವ ಮಧ್ಯವಯಸ್ಕರೊಬ್ಬರು ಇಬ್ಬರು ಸೇವಕರಿಂದ ಫಲ-ಪುಷ್ಪಗಳಿಂದ ತುಂಬಿದ ಬುಟ್ಟಿಗಳನ್ನೂ ಒಂದು ಹಾಲು ತುಂಬಿದ ಹಿತ್ತಾಳಿಯ ಗುಂಡರಿಗೆಯನ್ನೂ ಹೊರಿಸಿಕೊಂಡು ಬಂದು ನಿಂತಿದ್ದರು. ಆಚಾರರನ್ನು ಕಂಡು ಅವನ್ನು ಅವರ ಮುಂದಿಟ್ಟು ನಮಸ್ಕರಿಸಿ “ನಾನೊಬ್ಬ ವರ್ತಕ, ಹೆಸರು ಶಿವಸ್ವಾಮಿ. ಈ ಕಾಣಿಕೆ ಅರ್ಪಿಸಲು ಬಂದಿದ್ದೇನೆ” ಎಂದರು. ಆಚಾರರು ಕೌತುಕದಿಂದ ನನಗೆ ಕಾಣಿಕೆಯೇ?” ಎನಲು ಶಿವಕುಮಾರಸ್ವಾಮಿಯು “ನಿಜ. ದೇವರ ಅಪ್ಪಣೆ” ಎಂದಾಗ ವೇಂಕಟನಾಥರು “ನಿಮ್ಮ ಅಭಿಪ್ರಾಯ ಅರ್ಥವಾಗಲಿಲ್ಲ” ಎಂದರು. 

ಶಿವ : ಸ್ವಾಮಿ, ನಾನೊಬ್ಬ ಶ್ರೀನಿವಾಸದೇವರ ಭಕ್ತ. ನಾನು ವಿವಿಧ ಫಲ-ಪುಷ್ಪಗಳೀವ ತೋಟ, ಸಮೃದ್ಧಿಯಾಗಿ ಹಾಲು ಕೊಡುವ ಗೋವುಗಳು ನನ್ನದಾಗಿರಬೇಕೆಂದು ದೇವರಲ್ಲಿ ಬೇಡಿದ್ದೆ. ಶ್ರೀನಿವಾಸನ ಅನುಗ್ರಹದಿಂದ ನನ್ನ ಮನೋರಥ ಸಫಲವಾಯಿತು. ನೆನ್ನೆ ರಾತ್ರಿ ದೇವರು ಸ್ವಪ್ನದಲ್ಲಿ ದರ್ಶನವಿತ್ತು “ಶಿವಕುಮಾರ ! ನಿನ್ನಾಸೆ ಪೂರೈಸಿದ್ದೇನೆ. ನನಗೆ ಕಾಣಿಕೆ ಕೊಡುವುದಿಲ್ಲವೇ ?” ಎಂದು ಹೇಳಿದಾಗ ನಾನು “ದೇವ, ಎಲ್ಲವೂ ನಿನ್ನದೇ, ನಿನಗೇನು ಅರ್ಪಿಸಲಿ ?” ಎಂದೆ. ಆಗ ಶ್ರೀನಿವಾಸನು “ನನಗೇನೂ ಬೇಡಪ್ಪ, ನೀನು ಫಲ-ಪುಷ್ಪ, ಹಾಲುಗಳನ್ನು ನನ್ನ ಪರಮಭಕ್ತರಾದ ಪಂಡಿತ ವೇಂಕಟನಾಥಾಚಾರರಿಗೆ ಅರ್ಪಿಸಿ ಆಶೀರ್ವಾದ ಪಡೆದುಕೋ, ನಿನಗೆ ಮಂಗಳವಾಗುವುದು” ಎಂದು ಅಪ್ಪಣೆ ಮಾಡಿ ಅದೃಶ್ಯನಾದ. ನಿಮ್ಮ ವಿದ್ಯಾಪೀಠ, ಜ್ಞಾನ-ಭಕ್ತಿ, ಕೀರ್ತಿಗಳನ್ನು ನಾನು ಕೇಳಿದ್ದೆ. ಇಂದು ದೇವರ ಅಪ್ಪಣೆಯಂತೆ ಕಾಣಿಕೆ ಅರ್ಪಿಸಿ ದರ್ಶನದಿಂದ ಧನ್ಯನಾದೆ” ಎಂದು ಹೇಳಿದರು. 

ವೇಂಕಟನಾಥರ ಕಣ್ಣಿನಿಂದ ಆನಂದಾಶ್ರು ಹರಿಯಿತು. ದೇಹ ಕುಪಿಸಿತು. ಗದ್ದಗಕಂಠದಿಂದ “ಶಿವಕುಮಾರಸ್ವಾಮಿಯವರೇ, ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾದ ನೀವು ಪುಣ್ಯವಂತರು. ಶ್ರೀಹರಿಯು ನಿಮಗೂ ನಿಮ್ಮ ಕುಟುಂಬವರ್ಗಕ್ಕೂ ಮಂಗಳಗಳನ್ನು ಕರುಣಿಸಲಿ” ಎಂದಾಶೀರ್ವದಿಸಿದರು. ಶಿವಕುಮಾರಸ್ವಾಮಿ, ಆಚಾರ ದಂಪತಿಗಳಿಗೆ ನಮಸ್ಕರಿಸಿ 'ಧನ್ಯನಾದೆ' ಎಂದು ಹೇಳಿ ತೆರಳಿದರು. ಅದುವರೆಗೆ ಮೌನದಿಂದಿದ್ದ ಸರಸ್ವತಮ್ಮ “ಆಹಾ, ಸ್ವಾಮಿ, ನಿಮ್ಮ ಮಾತು ಸತ್ಯವಾಯಿತು ! ಯೋಗಕ್ಷೇಮಂ ವಹಾಮ್ಯಹಮ್ ಎಂದು ಶ್ರೀಕೃಷ್ಣ ಹೇಳಿದ್ದಾನೆ. ನಮ್ಮ ರಕ್ಷಣೆಯ ಭಾರ ಅವನಿಗೆ ಸೇರಿದ್ದು, ಚಿಂತಿಸಬೇಡ ಎಂದು ನೀವು ಹೇಳಿದಿರಿ. ಅದೀಗ ಪ್ರತ್ಯಕ್ಷ ನಿದರ್ಶನಕ್ಕೆ ಬಂದಿತು !” ಎಂದು ಉದ್ಗಾರ ತೆಗೆದರು. ವೇಂಕಟನಾಥರು “ನಿಜ, ಸರಸ್ವತಿ !

ಶ್ರೀಹರಿ ಎಂಥ ದಯಾಳು ? ಅಲ್ಪನಾದ ನನ್ನನ್ನು ಪರಮಭಕ್ತನೆಂದು ಶಿವಕುಮಾರಸ್ವಾಮಿಗೆ ಹೇಳಿದನಲ್ಲ ! ಪ್ರಭು, ನಿನ್ನ ಲೀಲಾವಿಲಾಸವನ್ನು ಅರಿತವರಾರು ?” ಎಂದು ಮೈಮರೆತು - 

“ಒಂದು ಕಾಲದಲ್ಲಿ ಆನೆಯ ಮೇಲೆ ಮೆರೆಸುವೆ | 

ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವ || 

ಒಂದು ಕಾಲದಲ್ಲಿ ಅಮೃತಾನ್ನ ಉಣಿಸುವ ಒಂದು ಕಾಲದಲ್ಲಿ ಉಪವಾಸವಿರಿಸುವ 

ನಿನ್ನ ಮಹಿಮೆಯ ನೀನೇ ಬಲ್ಲೆಯೋ ದೇವ ! | 

ಪನ್ನಗಶಯನ ಶ್ರೀಪುರಂದರವಿಠಲ !' ” 

ಎಂದು ಸ್ತುತಿಸಿದರು. ಸರಸ್ವತಮ್ಮ “ಸ್ವಾಮಿ, ಪರಮಾತ್ಮನಂಥ ಕರುಣಾಸಮುದ್ರ, ಅಲ್ಪಳಾದ ನಾನೇನು ಬಲ್ಲೆ ಅವನ ಮಹಿಮಾತಿಶಯವನ್ನು ? ನಿಮ್ಮ ದಾರ್ಡ್ಯ ನನಗೆ ಬರಲು ಸಾಧ್ಯವೇ ?” ಎಂದರು. 

ಆಗ ವೇಂಕಟನಾಥರು “ಅಘಟಿತಘಟನಾಪಟುವಾದ ಪರಮಾತ್ಮನ ಲೀಲಾವಿಲಾಸವನ್ನು ಶ್ರೀಲಕ್ಷ್ಮೀದೇವಿಯೇ ಅರಿಯಳೆಂದಮೇಲೆ ನಮ್ಮ ಪಾಡೇನು ? ಸರಸ್ವತಿ, ನೀನು ದೇವನಿಗೆ ನೈವೇದ್ಯವಿಡಲು ಏನೂ ಇಲ್ಲವೆಂದು ಹಲುಬಿದೆ. ಕರುಣಾಳುವಾದ ಶ್ರೀಹರಿ ಶಿವಕುಮಾರಸ್ವಾಮಿಗೆ ಪ್ರೇರಣೆಮಾಡಿ ತನ್ನ ನೇವೇದ್ಯಕ್ಕೆ, ನಂತರ ನಮ್ಮ ಆಹಾರಕ್ಕಾಗಿ ಏನೇನು ಕಳಿಸಿದ್ದಾನೆ ನೋಡಿದೆಯಾ ? ಅವನು ನೀಡಿರುವುದನ್ನು ಅವನಿಗೇ ಅರ್ಪಿಸಿ ಪಾರಣೆಮಾಡೋಣ ನಡೆ” ಎಂದರು. ಸರಸ್ವತಮ್ಮ “ಆಗಲಿ, ಸ್ವಾಮಿ” ಎಂದು ಸಂಭ್ರಮದಿಂದ ಫಲ-ತೆಂಗಿನಕಾಯಿ ಹಾಲು, ತಾಂಬೂಲಗಳನ್ನು ನೈವೇದ್ಯಕ್ಕೆ ಸಿದ್ಧಪಡಿಸಿ ತಂದಿಟ್ಟರು. ಆಚಾರರು ಅವನ್ನು ಶ್ರೀಹರಿಗೆ ಸಮರ್ಪಿಸಿ ಮಂಗಳಾರತಿ ಮಾಡಿ ನಮಸ್ಕರಿಸಿ, ತೀರ್ಥ ಸ್ವೀಕರಿಸಿ, ಪತ್ನಿ-ಪುತ್ರರಿಗೂ ಕೊಟ್ಟು, ಎಲ್ಲರೊಡನೆ ಹಾಲು-ಹಣ್ಣುಗಳನ್ನು ಭುಂಜಿಸಿ ತೃಪ್ತರಾದರು. 

ಅಂದು ಮಧ್ಯಾಹ್ನ ಪಡಸಾಲೆಯಲ್ಲಿ ಕುಳಿತು ಪತಿ-ಪತ್ನಿಯರು ಮಾತನಾಡುತ್ತಿರುವಾಗ “ವೇಂಕಟನಾಥಾಚಾರರೇ ! ಕುಶಲವೇ” ಎನ್ನುತ್ತಾ ಪಂಡಿತ ರಾಮಚಂದ್ರಾಚಾರರು ಪ್ರವೇಶಿಸಿದರು. ಆಚಾರ ದಂಪತಿಗಳು ಹರ್ಷದಿಂದ ಅವರಿಗೆ ನಮಸ್ಕರಿಸಿ “ಇದೇನು ಅಪೂರ್ವ ಭೇಟಿ ? ನೀವು ಕುಶಲವೇ ?” ಎಂದರು. ರಾಮಚಂದ್ರಾಚಾರರು ನಗುತ್ತಾ ಮಧುರೆಗೆ ಹೊರಟಿದ್ದೆ. ನಿಮ್ಮನ್ನು ನೋಡಿಕೊಂಡು ಹೋಗಲು ಬಂದೆ. ಗುರುಗಳು ತಮಗೊಂದು ಸಂದೇಶ ಕಳಿಸಿದ್ದಾರೆ” ಎಂದರು. 

ವೇಂ : ಗುರುಪಾದರು ಏನಾಜ್ಞಾಪಿಸಿದ್ದಾರೆ ? 

ರಾಮ : ಕೀರ್ತಿಶೇಷ ಶ್ರೀವಿಜಯೀಂದ್ರಗುರುಗಳು ನಿಮ್ಮನ್ನು ಕುಂಭಕೋಣೆಗೆ ಕರೆಸಿಕೊಂಡು ಸಂಪ್ರದಾಯ ಪಾಠಪ್ರವಚನ ರಹಸ್ಯವನ್ನು ನಿಮಗುಪದೇಶಿಸಬೇಕೆಂದು ಸೂಚಿಸಿದ್ದರಂತೆ, ಇಲ್ಲಿಗೆ ಬೇರೊಬ್ಬ ಪಂಡಿತರನ್ನು ಕಳಿಸುವುದಾಗಿಯೂ, ನೀವು ಕೂಡಲೇ ಕುಂಭಕೋಣಕ್ಕೆ ಬರಬೇಕೆಂದು ತಿಳಿಸಿ, ನಿಮಗೆ ಉಡುಗೊರೆಗಳನ್ನೂ ಎರಡು ವರ್ಷಗಳ ವಾರ್ಷಿಕ ಸಂಭಾವನೆ ಎರಡು ಸಹಸ್ರ ವರಹಗಳನ್ನೂ ಕಳುಹಿಸಿದ್ದಾರೆ” ಎಂದು ಹೇಳಿ ಹಣ-ಉಡುಗೊರೆಗಳನ್ನು ಆಚಾರರಿಗಿತ್ತು, ಆಗಲೇ ತಾವು ಮಧುರೆಗೆ ಹೊರಡಬೇಕೆಂದು ಹೇಳಿ ಆಚಾರ ದಂಪತಿಗಳು, ಲಕ್ಷ್ಮೀನಾರಾಯಣರನ್ನು ಆಶೀರ್ವದಿಸಿ ಪ್ರಯಾಣ ಬೆಳೆಸಿದರು. 

ರಾಮಾಚಂದ್ರಾಚಾರರನ್ನು ಕಳುಹಿಸಿ ಬಂದ ಆಚಾರರು “ಸರಸ್ವತಿ, ಎರಡು ವರ್ಷಗಳಿಂದ ಬರದೇ ನಿಂತಿದ್ದ ದ್ರವ್ಯವು ನಾವು ನಿರೀಕ್ಷಿಸದಿದ್ದಾಗ ತಾನಾಗಿ ಬಂದೊದಗಿತು ನೋಡು, ಅನಂತಹಸ್ತದಿಂದ ಸ್ವಾಮಿ ಕೊಡಲಾರಂಭಿಸಿದಾಗ ಅದನ್ನು ಸ್ವೀಕರಿಸಲು ನಮ್ಮ ಎರಡು ಹಸ್ತಗಳೂ ಸಾಲದಾಗುವುದು” ಎಂದರು. ಸರಸ್ವತಮ್ಮ ನಿಜಸ್ವಾಮಿ” ಎಂದರು.

ಮರುದಿನ ವೇಂಕಟನಾಥರು ದೇವರಪೂಜೆ-ನೈವೇದ್ಯಗಳನ್ನು ನೆರವೇರಿಸಿ ಬೇಗ ಭೋಜನಮಾಡಿ ಕುಂಭಕೋಣಕ್ಕೆ ಹೊರಡಲು ಸಿದ್ದರಾಗಿ ತೂಗುಯ್ಯಾಲೆಯಲ್ಲಿ ಕುಳಿತು ತಾಂಬೂಲಚರ್ವಣ ಮಾಡುತ್ತಿದ್ದರು. ಆಗೊಬ್ಬರು ಬಂದು “ತಾವು ವೇಂಕಟನಾಥಾಚಾರರಲ್ಲವೇ ? ಎಂದರು. ಅಚಾರರು ಅಹುದು” ಎಂದರು. 

ವ್ಯಕ್ತಿ : ಸ್ವಾಮಿ, ನನ್ನ ಹೆಸರು ಗೋವಿಂದರಾಜಚೆಟ್ಟಿ, ನಾನೊಬ್ಬ ರತ್ನಪಡಿ ವ್ಯಾವಾರಿ. ನಿಮ್ಮ ಕೀರ್ತಿಯನ್ನು ಶ್ರೀನಿವಾಸಾಚಾರರಿಂದ ಕೇಳಿ ತಿಳಿದು ಆನಂದಿಸಿದ್ದೆ. ತಮ್ಮನ್ನು ಕಂಡು ಸಂತೋಷವಾಯಿತು ಎನ್ನಲು, ಆಚಾರರು “ಬಹುಶಃ ಶ್ರೀನಿವಾಸಾಚಾರರು ಇವರಲ್ಲೇ ನಮ್ಮ ಒಡವೆಗಳನ್ನು ಗಿರಿವಿಯಿಟ್ಟು ಹಣತರುತ್ತಿದ್ದರೆಂದು ತೋರುವುದು” ಎಂದು ಮನದಲ್ಲೇ ಯೋಚಿಸಿ, “ಚೆಟ್ಟಿಯವರೇ, ನಿಮ್ಮನ್ನು ಕಂಡು ಸಂತೋಷವಾಯಿತು. ಬಹುಶಃ ತಾವು ಅಸಲು, ಬಡ್ಡಿಗಳನ್ನು ಕೇಳಲು ಬಂದಿದ್ದೀರಿ ಎಂದು ತೋರುವುದು. ನನ್ನಲ್ಲೀಗ ಎರಡು ಸಾವಿರ ವರಹಗಳಿವೆ. ಸ್ವೀಕರಿಸಿ, ಇನ್ನೂ ಕೊಡಬೇಕಾಗಿದ್ದಲ್ಲಿ ಆದಷ್ಟು ಬೇಗ ತೀರಿಸುತ್ತೇನೆ” ಎಂದು, ಹಣದ ಥೈಲಿಯನ್ನು ತಂದು ಆತನಿಗಿತ್ತರು. 

ಗೋವಿಂದಚೆಟ್ಟಿ “ಸ್ವಾಮಿ, ನಾನು ಹಣಕ್ಕಾಗಿ ಬರಲಿಲ್ಲ. ನನ್ನ ವ್ಯಾಪಾರವನ್ನು ಮಧುರೆಯಲ್ಲಿ ಜರುಗಿಸಲಾಶಿಸಿ ಸಂಸಾರಸಹಿತ ಹೊರಟಿದ್ದೇನೆ. ನಿಮ್ಮ ಪದಾರ್ಥಗಳನ್ನು ನಿಮಗೊಪ್ಪಿಸಿ ಹೋಗೋಣವೆಂದು ಬಂದೆ. ನಿಮ್ಮಂಥ ಮಹನೀಯರು ಕೊಡಬೇಕಾದ ಹಣ ಎಲ್ಲಿ ಹೋಗುತ್ತೆ ? ನಿಧಾನವಾಗಿ ಕೊಡಬಹುದಾಗಿತ್ತು. ತಾವು ಅಸಲು ಹಣ ಕೊಟ್ಟರೆ ಸಾಕು !” ಎಂದು ಹೇಳಿ ಕೈಚೀಲದಿಂದ ಪುಸ್ತಕವೊಂದನ್ನು ಪರಿಶೀಲಿಸಿ “ಸಾವಿರದ ಎಂಟುನೂರೈವತ್ತು ವರಹಗಳು ಮಾತ್ರ ನನಗೆ ಬರಬೇಕಾಗಿದೆ” ಎಂದು ತಿಳಿಸಿ ಹಣದ ಥೈಲಿಯಿಂದ ನೂರೈವತ್ತು ವರಹಗಳನ್ನೂ ಸುವರ್ಣ ಒಡವೆಗಳನ್ನೂ ಆಚಾರರಿಗೆ ನೀಡಿ ಅಪ್ಪಣೆ ಪಡೆದು ಹೊರಟುಹೋದರು. 

ಸರಸ್ವತಮ್ಮ “ಸ್ವಾಮಿ, ಇದು ಕನಸಲ್ಲವಷ್ಟೇ ! ಒಂದರ ಮೇಲೊಂದರಂತೆ ನಡೆಯುತ್ತಿರುವ ಘಟನೆಗಳಿಂದ ನಾನು ವಿಸ್ಮಿತಳಾಗಿದ್ದೇನೆ !” ಎಂದಳು. ಆಚಾರರೂ ನಗಮುಖದಿಂದ “ಭಗವಂತನ ಲೀಲೆ ಅಗಾಧ, ಭಕ್ತರಲ್ಲಿ ತೋರುವ ವಾತ್ಸಲ್ಯ ಅನುಪಮ. ಸರಸ್ವತಿ, ಉಡುಗೊರೆಯನ್ನು ಘಳಿಗೆ ಮುರಿದು ದೇವರಿಗೆ ಅರ್ಪಿಸಿ ತೆಗೆದುಕೊಂಡು ಬಾ” ಎಂದರು. ಸರಸ್ವತಮ್ಮ ಪತಿಯ ಅಪ್ಪಣೆಯಂತೆ ದೇವರಿಗರ್ಪಿಸಿ ತೆಗೆದುಕೊಂಡು ಬಂದರು. 

ಮೆಲ್ಲಮೆಲ್ಲನೆ ಬರುತ್ತಿರುವ ಪತ್ನಿಯನ್ನು ನೋಡಹತ್ತಿದರು ಆಚಾರ್ಯರು, ಸರಸ್ವತಮ್ಮ ದಪ್ಪನಾದ ಸೀರೆಯುಟ್ಟು ಕೈಗಳಲ್ಲಿ ಗಾಜಿನ ಬಳೆಗಳನ್ನು ತೊಟ್ಟಿದ್ದರು. ಹಣೆಯಲ್ಲಿ ದುಂಡುಕುಂಕುಮ ಶೋಭಿಸುತ್ತಿತ್ತು. ಯಾವ ಅಲಂಕಾರ, ಆಭರಣಗಳಿಲ್ಲದಿದ್ದರೂ ರೂಪಲಾವಣ್ಯಗಳಿಂದ ವಿರಾಜಿಸುತ್ತಿದ್ದಾರೆ ಸರಸ್ವತಮ್ಮ !ವೇಂಕಟನಾಥರು “ಆಹಾ, ಸರಸ ! ನಿರಾಭರಣ ಸುಂದರಿಯಾದ ನೀನೆಷ್ಟು ಮೋಹಕವಾಗಿರುವೆಯೇ ! ಕಾಳಿದಾಸನ ಶಕುಂತಳೆಯೇ ಧರೆಗಿಳಿದು ಬಂದಂತಿದೆ ! ದುಷ್ಯಂತ ಋಷ್ಯಾಶ್ರಮದಲ್ಲಿ ಶಕುಂತಲೆಯನ್ನು ಕಂಡು “ಸರರಿಜಮನುವಿದ್ದ ಶೈವಲೇನಾಪಿರಮ್ಯಂ” ಎಂದು ವರ್ಣಿಸಿದ್ದಾನಲ್ಲವೇ, ನೀನೂ ಹಾಗೇ ಇದ್ದೀಯೆ !” ಎಂದು ನಕ್ಕರು. ಪತಿಯ ಪ್ರೀತಿಯ ನುಡಿ, ವರ್ಣನೆಗಳಿಂದ ಸರಸ್ವತಮ್ಮನ ಗಲ್ಲಗಳು ಲಜ್ಜೆಯಿಂದ ಕೆಂಪಡರಿದವು ! “ನಿಮ್ಮಿ ಪ್ರೀತಿಯ ನುಡಿಯನ್ನಾಲಿಸಿ ಎಷ್ಟು ವರ್ಷಗಳಾಗಿದ್ದವೋ ! ನಿಮ್ಮಿ ಸರಸಸುಂದರ ವಚನವಿನ್ಯಾಸ, ರಸಿಕತೆಗಳು, ನಿಮ್ಮ ಮನಸ್ಸು, ಇಷ್ಟು ದಿನ ಎಲ್ಲಿ ಹೋಗಿತ್ತು ಸ್ವಾಮಿ !” ಎಂದರು. ಆಚಾರ್ಯರು ಪರಿಹಾಸದಿಂದ “ಸುಂದರೀವದನಾರವಿಂದ ಮಕರಂದಸುಧಾಸ್ವಾದನಕ್ಕಾಗಿ ಹಾತೊರೆಯುತ್ತಿದೆ” ಎಂದರು. ಸರಸ್ವತಮ್ಮ “ನಿಮಗಾವಾಗಲೂ ವಿನೋದವೇ” ಎಂದು ಲಜ್ಜೆಯಿಂದ ತಲೆತಗ್ಗಿಸಿ ನಿಂತರು. 

ವೇಂಕಟನಾಥರು ಪಂಚೆಯುಟ್ಟು, ಶಾಲು ಹೊದ್ದು ದೇವರಿಗೆ ನಮಸ್ಕರಿಸಿ ಬಂದರು. ಸರಸ್ವತೀ-ಲಕ್ಷ್ಮೀನಾರಾಯಣರೂ ಅದರಂತೆ ಮಾಡಿದರು. ಆಗ ಆಚಾರ್ಯರು ತಮ್ಮ ಕೈಯಾರ ಬಂಗಾರದ ಒಡವೆಗಳನ್ನು ಪತ್ನಿಗೆ ತೊಡಿಸಿದರು. ಸರಸ್ವತಮ್ಮ ಆಚಾರ್ಯರಿಗೆ ಕಡಗ, ತುಳಸೀಮಾಲೆ, ಕುಂಡಲಗಳನ್ನು ತೊಡಿಸಿ, ಪುತ್ರನನ್ನು ಆಭರಣಗಳಿಂದ ಅಲಂಕರಿಸಿದರು. ಆಗ ವೇಂಕಟನಾಥರು ನಗುತ್ತಾ “ಸರಸ್ವತಿ, ನೀನೀಗ ಸಾಕ್ಷಾತ್ ಲಕ್ಷ್ಮೀದೇವಿಯಂತೆ ಕಾಣುತ್ತಿರುವೆ” ಎಂದರು. ಸರಸ್ವತಮ್ಮ “ನೀವು ಸಾಕ್ಷಾತ್ ಶ್ರೀನಾರಾಯಣರಂತೆ ಕಾಣುತ್ತಿರುವಿರಿ” ಎಂದು ನಕ್ಕರು. ಆಗ ಲಕ್ಷ್ಮೀನಾರಾಯಣನು “ಅಪ್ಪಾ ನಾನು ?” ಎಂದ. ಆಚಾರ್ಯರು “ನೀನೇ ? ಸಾಕ್ಷಾತ್ ಬ್ರಹ್ಮನಂತಿರುವೆ” ಎಂದರು. 

ಸರ : (ನಸುಗೋಪದಿಂದ) ಇದೇನು, ನನ್ನ ಮಗನನ್ನು ಬ್ರಹ್ಮ ಎನ್ನುವಿರಿ ಅವನಿಗೆ ನಾಲ್ಕು ಮುಖಗಳಿವೆಯೆ ? ವೇಂ : ಓಹೋ ಆಗಲೇ ಕೋಪ ಬಂದಿತೆ ? ಸರಿ, ನಿನ್ನ ಮಗ ಮನ್ಮಥ ! 

ಲಕ್ಷ್ಮೀ : ಅಪ್ಪಾ, ಅಮ್ಮಾ, ನಾನು ಎರಡೂ ಅಲ್ಲ ! 

ವೇರಿ : ಹಾಗಾದರೆ ನೀನಾರು ? 

ಲಕ್ಷ್ಮೀ : ನಾನು ! ಲಕ್ಷ್ಮೀನಾರಾಯಣ ! 

ವೇಂ : ನಿಜ, ಕುಮಾರ ! ನಾನು ನಾರಾಯಣನಂತಿದ್ದರೆ, ನಿನ್ನಮ್ಮ ಲಕ್ಷ್ಮಿಯಂತಿರುವಳು. ನಮ್ಮಿಬ್ಬರ ಪುತ್ರನಾದ ನೀನು ಲಕ್ಷ್ಮೀನಾರಾಯಣನೇ ! ಅಲ್ಲವೇ ಸರಸ ! ಎನಲು ಎಲ್ಲರೂ ನಗಹತ್ತಿದರು. ದಾರಿದ್ರದುಃಖದಿಂದ ಕಳೆಯಿಲ್ಲದಂತಾಗಿದ್ದ ಮನೆಯಲ್ಲಿ ಇಂದು ಹರುಷ ತಾಂಡವಿಸಿತು. ಮತ್ತೆ ಆ ಮನೆಯು ಸುಖ-ಸಂತೋಷದ ಬೀಡಾಗಿ ನಗೆಯ ಹೊನಲು ಹರಿಯಹತ್ತಿತು! 

ಊರಿನ ಪ್ರಮುಖರು ಒಂದು ಕುದುರೆಗಾಡಿಯನ್ನು ಆಚಾರ್ಯರ ಮನೆಯ ಮುಂದೆ ನಿಲ್ಲಿಸಿ ಆಚಾರ್ಯದಂಪತಿಗಳನ್ನು ಬೀಳ್ಕೊಡಲು ಸಿದ್ದರಾದರು. ಆಗ ಕೆಲ ರೈತರು ಬಂದು ಆಚಾರ್ಯರಿಗೆ ನಮಸ್ಕರಿಸಿದರು. ಆಚಾರ್ಯರು “ಕಾಳಿಮುತ್ತು, ವೇಲಾಯುಧಂ, ಅಣ್ಣಾಮಲೈ, ಚೆನ್ನಾಗಿದ್ದೀರಾ ?” ಎಂದು ಪ್ರಶ್ನಿಸಿದರು. ರೈತರು ಧಣಿ, ನಿಮ್ಮ ದಯದಿಂದ ಚೆನ್ನಾಗಿದ್ದೇವೆ. ಹೋದವರ್ಷ ಫಸಲು ಹಾಳಾಯಿತು. ತಮಗೆ ಗುತ್ತಿಗೆ ಧ್ಯಾನ ಕೊಡಲಾಗಲಿಲ್ಲ. ಈ ವರ್ಷ ದೇವರ ದಯದಿಂದ ಒಂದಕ್ಕೆ ನಾಲ್ಕು ಪಟ್ಟು ಚೆನ್ನಾಗಿ ಬೆಳೆದಿದೆ. ತಾವು ಕುಂಭಕೋಣಕ್ಕೆ ಹೊರಡುವ ವಿಚಾರ ತಿಳಿದು ಬಂದೆವು. ಧಾನ್ಯಗಳನ್ನು ಎಲ್ಲಿಗೆ ಕಳಿಸಬೇಕು” ಎಂದರು. ಆಚಾರ್ಯರು “ಕಾಳಿಮುತ್ತು, ನೀವು ಶ್ರಮಜೀವಿಗಳು, ಮಕ್ಕಳೊಂದಿಗರು. ನೀವು ಚೆನ್ನಾಗಿದ್ದರೆ ದೇಶಕ್ಕೆ ಕ್ಷೇಮ. ನೀವು ಈ ವರ್ಷ ನನಗೆ ಧಾನ್ಯವನ್ನೇನೂ ಕಳಿಸಬೇಡಿ, ನೀವೇ ತೆಗೆದುಕೊಂಡು ಸುಖವಾಗಿರಿ, ಮುಂದಿನ ವರ್ಷದಿಂದ ಕುಂಭಕೋಣದ ಗುರುಗಳ ಮಠಕ್ಕೆ ಕಳಿಸಿರಿ” ಎಂದರು. ರೈತರು ಅಡ್ಡಬಿದ್ದು “ಧಣಿ, ನೀವು ಮಾನವರಲ್ಲ, ನಮ್ಮ ಭಾಗದ ದೇವರು” ಎಂದು ಆನಂದಿಸಿದರು. ನೆರೆದ ಜನರು ವೇಂಕಟನಾಥರ ಮಾನವೀಯತೆ, ಔದಾರ್ಯಗಳನ್ನು ಕಂಡು ವಿಸ್ಮಿತರಾದರು. ಆಚಾರ್ಯರು ಊರಿನ ಪ್ರಮುಖ ಸದೃಹಸ್ಥರೊಬ್ಬರಿಗೆ ಮನೆಯ ರಕ್ಷಣೆಯನ್ನು ವಹಿಸಿ, ಪತ್ನಿ-ಪುತ್ರರೊಡನೆ ಬಂಡಿಯೇರಿ ಕುಳಿತರು. ಎಲ್ಲರೂ ಹಾರ್ದಿಕವಾಗಿ ಆಚಾರ್ಯರನ್ನು ಬೀಳ್ಕೊಟ್ಟರು. ಗಾಡಿ ಕುಂಭಕೋಣದತ್ತ ಭರದಿಂದ ಸಾಗಿತು.