|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೪೬. ಒಂದು ವಿವೇಚನೆ

ವೇಂಕಟನಾಥರು ಕಡುದಾರಿದ್ರವನ್ನು ಅನುಭವಿಸಿದ್ದನ್ನು ಕಂಡಾಗ ಓದುಗರ ಹೃದಯ ಮಿಡಿದು ದುಃಖಾತಿಶಯದಿಂದ ಕಣ್ಣೀರು ಹರಿಯದಿರದು. ಇಲ್ಲಿ ಸ್ವಲ್ಪ ವಿಚಾರಮಾಡಬೇಕಾಗಿದೆ. ಶ್ರೀರಾಘವೇಂದ್ರಸ್ವಾಮಿಗಳು ಪೂರ್ವಾಶ್ರಮದಲ್ಲಿ ಬಡತನವನ್ನೇಕೆ ಅನುಭವಿಸಿದರು ? ಮಹಾತ್ಮರಾದ ಅವರನ್ನು ದರಿದ್ರದೇವತೆ ಏಕೆ ಪೀಡಿಸಿದಳು ? ಇದರ ರಹಸ್ಯವೇನು ? 

ಇಂದು ಯಾರ ನಾಮಸ್ಮರಣಮಾತ್ರದಿಂದ ದಾರಿದ್ರಾದಿದುಃಖಗಳು ನಮ್ಮತ್ತಲೂ ಸುಳಿಯುವುದಿಲ್ಲವೋ, ಯಾರ ಕೃಪಾಕಟಾಕ್ಷ ವೀಕ್ಷಣ ಮಾತ್ರದಿಂದ ಮೂಕನು ಆದಿಶೇಷನಂತೆ ವಾಚಾಳಿಯಾಗುವನೋ, ಕಡುಬಡವನು ಸಂಪತ್ತಿಗೊಡೆಯನಾದ ಕುಬೇರನಂತಾಗುವನೋ, ಇಂಥ ಗುರುರಾಜರು ಬಡತನವನ್ನು ಅನುಭವಿಸಬೇಕಾಯಿತೇ ? ಶ್ರೀಹರಿಚರಣಕಮಲಾರಾಧನೆಯಿಂದ ಐಹಿಕ ಸಂಪತ್ತು ಮಾತ್ರವಲ್ಲದೆ, ಧರ್ಮಾರ್ಥಕಾಮಮೋಕ್ಷರೂಪ ಚತುರ್ವಿಧ ಪುರುಷಾರ್ಥಸಂಪತ್ತನ್ನು ಪಡೆದುದಲ್ಲದೆ ಆ ಚತುರ್ವಿಧ ಸಂಪತ್ತನ್ನು ಬೇಡಿದವರಿಗೆ ನೀಡುವ ಕೊಡುಗೈ ದೊರೆಗಳೆಂದು ಸ್ತುತ್ಯರಾಗಿ, ಕೇಳಿಕೇಳಿದ ಇಷ್ಟಾರ್ಥಪ್ರದರೆನಿಸಿದವರಲ್ಲಿ ಇವರಿಗೆ ಸಮರೊಬ್ಬರಿಲ್ಲವೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಗುರುರಾಜರು ಇಂದು ಕೋಟ್ಯಂತರ ದೀನದಲಿತ ದರಿದ್ರ ಜನರ, ಆಪಂಡಿತ-ಪಾಮರರ ಆರಾಧ್ಯ ಗುರುಗಳೆನಿಸಿ “ಕಲಿಯುಗ ಕಲ್ಪತರು, ಕಾಮಧೇನು, ಚಿಂತಾಮಣಿ” ಗಳೆನಿಸಿ, ಎಲ್ಲಬಗೆಯ ಕಾಮಿತಗಳನ್ನು ಭೂವಿಭ್ರಮಣಮಾತ್ರದಿಂದ ಅನಿಷ್ಟಗಳನ್ನು ಕಳೆದು ಸಿರಿ-ಸಂಪತ್ತು-ವೈಭವಗಳನ್ನು ಕರುಣಿಸುತ್ತಿದ್ದಾರೆ. ಇಂಥವರು ಕಡುದಾರಿದ್ರವನ್ನು ಅನುಭವಿಸಿದರೆಂದು ಹೇಳಿದರೆ, ಬಹುಶಃ ಇಂದಿನ ಭಕ್ತ ಜನರು ನಂಬಲಾರರು ! ಆದರೂ ಇದು ಸತ್ಯ ! ಇದೇ ಪರಮಾತ್ಮನ ಸಂಕಲ್ಪ, ಲೀಲೆ ! 

ಇಲ್ಲಿ ಸ್ವಲ್ಪ ವಿವೇಚಿಸಿ ನೋಡೋಣ. ಶ್ರೀಗುರುರಾಜರು ಯಾರು ! ದೊರೆಯುವ ಪ್ರಮಾಣಗಳು, ಅಪರೋಕ್ಷಜ್ಞಾನಿಗಳ ವಚನಗಳು, ಅವರನ್ನು ದೇವತೆಗಳೆಂದು ಹೊಗಳುವುವು. ನರಸಿಂಹಪುರಾಣದಂತೆ ಅವರು ಶಂಕುಕರ್ಣನೆಂಬ ಕರ್ಮಜದೇವತೆ. 

ಶಂಕುಕರ್ಣ ಬ್ರಹ್ಮ-ಗೀರ್ವಾಣಿಯರ ಪ್ರೀತಿಪಾತ್ರನಾಗಿದ್ದ ದೇವತೆ ! ಅವನು ಚತುರಾನನರ ಅನುಗ್ರಹಪಾತ್ರನಾಗಿ ಸತ್ಯಲೋಕದಲ್ಲಿ ಸಿರಿ-ಸಂಪತ್ತುಗಳಿಂದ ಮೆರೆಯುತ್ತಿದ್ದುದರಿಂದ ಆಗವನು ದಾರಿದ್ರವನ್ನು ಅನುಭವಿಸುವ ಪ್ರಸಕ್ತಿಯೇ ಇಲ್ಲ ! ಮುಂದವನು ಶ್ರೀಹರಿಸಂಕಲ್ಪದಂತೆ ಲೋಕಕಲ್ಯಾಣಕ್ಕಾಗಿ ಪ್ರಹ್ಲಾದರಾಜನಾಗಿ ಅವತರಿಸಿದ. ಆಗ ದೈತಸಾಮ್ರಾಜ್ಯದ ಯುವರಾಜನಾಗಿದ್ದ ಪ್ರಹ್ಲಾದನತ್ತ ದಾರಿದ್ರವು ಸುಳಿಯಲೂ ಆಗಲಿಲ್ಲ. 

ಅದೇ ಪ್ರಹ್ಲಾದ ದ್ವಾಪರದಲ್ಲಿ ಪ್ರತೀಪರಾಜರಿಗೆ ದತ್ತುಹೋಗಿ ಬಾಕರಾಜನಾಗಿ ಮೆರೆದನು. ಆಗಲೂ ದಾರಿದ್ರಾನುಭವಕ್ಕೆ ಅವಕಾಶವಾಗಲಿಲ್ಲ. ಮುಂದೆ ಕಲಿಯುಗದಲ್ಲಿ ಪ್ರಹ್ಲಾದ-ಬಾಹ್ಲಿಕಾವತಾರ ತಾಳಿದ್ದ ಶಂಕುಕರ್ಣನು ಶ್ರೀವ್ಯಾಸರಾಜ ಗುರುಸಾರ್ವಭೌಮರಾಗಿ ಅವತರಿಸಿದನು. ಜನಿಸುವಾಗಲೇ ಬಂಗಾರದ ಹರಿವಾಣದಲ್ಲಿ ಜನಿಸಿದ ಈ ಭಾಗ್ಯಶಾಲಿಗಳು, ಶ್ರೀಸರ್ವಜ್ಞಸಿಂಹಾಸನಾಧೀಶರಾದರು. ಅವರು ಕನ್ನಡಸಾಮ್ರಾಜ್ಯದ ಆರು ಜನ ಚಕ್ರವರ್ತಿಗಳಿಗೆ ರಾಜಗುರುಗಳೆನಿಸಿ ಅಖಂಡ ವೈಭವದಿಂದ ಜಗನ್ಮಾನ್ಯರಾಗಿ ಮೆರೆದರು. ಆಗಲೂ ಕಡುದಾರಿದ್ರವನ್ನು ಅನುಭವಿಸುವ ಸಂದರ್ಭ ಬರಲಿಲ್ಲ ! ಶಂಕುಕರ್ಣ ಮತ್ತೆ ತನ್ನ ಕೊನೆಯ ಅವತಾರವನ್ನೆತ್ತಿ ಶ್ರೀರಾಘವೇಂದ್ರಸ್ವಾಮಿಗಳಾಗಿ ಅವತರಿಸಿದ. ಆ ರಾಘವೇಂದ್ರರೇ ಪೂರ್ವಾಶ್ರಮದ ನಮ್ಮ ವೇಂಕಟನಾಥರು ! ವೇಂಕಟನಾಥರ ತಂದೆ ತಿಮ್ಮಣ್ಣಾಚಾರರು ಶ್ರೀವಿಜಯೀಂದ್ರತೀರ್ಥರ ಪ್ರೀತಿಪಾತ್ರರಾಗಿ ಅವರ ಆಶ್ರಯದಲ್ಲಿ ಸಿರಿಸಂಪತ್ತುಗಳಿಂದಲೇ ಜೀವಿಸುತ್ತಿದ್ದುದರಿಂದ ವೇಂಕಟನಾಥರು ಬಾಲ್ಯದಲ್ಲಿ, ಆನಂತರ ಶ್ರೀಮಂತರಾದ ಭಾವ ಶ್ರೀಲಕ್ಷ್ಮೀನರಸಿಂಹಾಚಾರರಲ್ಲಿ ಗುರುಕುಲವಾಸ ಮಾಡುವಾಗಲೂ ಸುಖದಿಂದಲೇ ಜೀವಿಸಿದರು. ಮುಂದೆ ಅವರು ಶೀಘ್ರವಾಗಿ ಶ್ರೀಸರ್ವಜ್ಞರ ವಿದ್ಯಾಸಿಂಹಾಸನಾಧಿಪತಿಗಳಾಗುವುದರಿಂದ ಆಗಲೂ ಅವರಿಗೆ ದಾರಿದ್ರಾನುಭವಕ್ಕೆ ಅವಕಾಶವೇ ಇಲ್ಲ ! ಹಾಗಾದರೆ ಅವರೇಕೆ ಬಡತನವನ್ನು ಅನುಭವಿಸಿದರು ? 

ಸೃಷ್ಟಿಗೆ ಬಂದ ಪ್ರತಿಯೊಬ್ಬ ಜೀವಿಯೂ ಅವನು ದೇವತೆಯಾಗಿರಲಿ, ಮಾನವನಾಗಿರಲಿ, ಅವನವನ ಪ್ರಾರಬ್ಧಕರ್ಮಾನುಸಾರವಾಗಿ ಸುಖ-ದುಃಖಗಳನ್ನು ಅನುಭವಿಸಲೇಬೇಕು. ಶಂಕುಕರ್ಣಣನೂ ಒಬ್ಬ ಜೀವಿ. ಆ ಜೀವಿಯು ಅನುಭವಿಸಲೇಬೇಕಾಗಿದ್ದದಾರಿದ್ರ ದುಃಖಾನುಭವರೂಪ ಪ್ರಾರಬ್ಧಕರ್ಮವನ್ನು ಅನುಭವಿಸಲಿಲ್ಲ. ಶಂಕುಕರ್ಣನ ಕೊನೆಯ ಅವತಾರವೇ ಶ್ರೀರಾಘವೇಂದ್ರಸ್ವಾಮಿಗಳು. ಈಗ ಅವರು ಪ್ರಾರಬ್ಧಕರ್ಮವನ್ನು ಅನುಭವಿಸದ ವಿನಃ ಆ ಜೀವಿಗೆ ಮೋಕ್ಷವಿಲ್ಲ. ಮುಂದೆ ಪರಮಹಂಸಪದಾರೂಢರಾಗಿ ವೈಭವದಿಂದ ವಿರಾಜಿಸಬೇಕಾಗಿರುವುದರಿಂದ ಆಗ ದಾರಿದ್ರಾನುಭವಕ್ಕೆ ಅವಕಾಶವಿಲ್ಲ. ಉಳಿದಿರುವುದು ಸಂಸಾರಿಯಾಗಿರುವ ಈ ಒಂದು ಸಂದರ್ಭ ಮಾತ್ರ ! ಅವರು ತಮ್ಮ ತಪಶಕ್ತಿಯಿಂದ ಬಡತನವನ್ನು ಅನುಭವಿಸದೇ ಇರಬಹುದಾಗಿತ್ತು ! ನಿಜ, ಆದರವರು ಆದರಿಂದ ಪಾರಾಗಲು ಬಯಸಲಿಲ್ಲ. ಪರಮಾತ್ಮನ ಇಚ್ಛೆಗೆ ವಿರುದ್ಧವಾಗಿ ನಡೆಯುವವರಲ್ಲ, ಭಗವದ್ಭಕ್ತರು !

ಇವರಾದರೋ ಶ್ರೀಹರಿಯ ಏಕಾಂತಭಕ್ತರು, ಅಂತೆಯೇ ಅವರು ಶ್ರೀಹರಿಯ ಸಂಕಲ್ಪಕ್ಕೆ ಶಿರಬಾಗಿ ಇದು ತಮ್ಮ ಅಂತಿಮಾವತಾರವಾದ್ದರಿಂದ ಪ್ರಾರಬಕರ್ಮವನ್ನು, ಅನುಭವಿಸಿದರೆಂದು ತಿಳಿಯಬೇಕು. 

ಶ್ರೀಗುರುರಾಜರು ಪೂರ್ವಾಶ್ರಮದಲ್ಲಿ ಅನುಭವಿಸಿದ ಬಡತನವು ಅವರಿಗೆ ಒಂದು ವರರೂಪವೇ ಆಯಿತೆನ್ನಬಹುದು, ಯಾರೇ ಆಗಲಿ, ಸುಖ-ದುಃಖ-ದಾರಿದ್ರಗಳ ಪರಿಯನ್ನು ಅನುಭವದಿಂದ ಮಾತ್ರ ಅರಿಯಲು ಸಾಧ್ಯ. ಆಗ ಇದರ ವಿವಿಧ ಮುಖಗಳ ಪರಿಚಯವಾಗುವುದು. ಮುಂದೆ ಶ್ರೀಗುರುರಾಜರು ಕೋಟ್ಯಂತರ ದೀನ-ದಲಿತರನ್ನು, ದುಃಖಿಗಳನ್ನು, ಕಡುಬಡವರನ್ನು ಉದ್ಧರಿಸಬೇಕಾಗಿದೆ. ಅನುಭವವಿಲ್ಲದವರಿಗೆ ಅದು ತಿಳಿಯಲಾರದಷ್ಟೆ ! ಈಗ ಕಡುಬಡತನವನ್ನು ಸ್ವತಃ ಅನುಭವಿಸಿದ್ದರಿಂದ ಅವರಿಗೆ ಆ ದುಃಖವೇನೆಂಬುದು ಮನವರಿಕೆಯಾಯಿತು. ಆದ್ದರಿಂದಲೇ ಆ ಮಹನೀಯರಿಗೆ ದುಃಖಿಗಳಾದ ದೀನ-ದಲಿತ- ದರಿದ್ರರನ್ನು ಕಂಡು ಹೃದಯ ಕರಗಿ ನೀರಾಗಿ, ದಯಾರಸವುಕ್ಕಿ ಹರಿದು, ಅದರಿಂದ ಅವರು ದೀನ-ದರಿದ್ರರ ದುಃಖಗಳನ್ನು ಕಳೆದು ಪರಿಪರಿ ಅನುಗ್ರಹಿಸುತ್ತಿದ್ದಾರೆ ! ಇನ್ನೊಂದು ವಿಚಾರ. ಶ್ರೀಗುರುರಾಜರು ಕಲಿಯುಗದಲ್ಲಿ ಜನತೆಯ ಉದ್ಧಾರಕ ಗುರುಗಳಾಗಿ, “ದೇವರೆಂದರೆ ತಿರುಪತಿಯ ತಿಮ್ಮಪ್ಪ, ಗುರುವೆಂದರೆ ಮಂಚಾಲೆಯ ರಾಘಪ್ಪ' ಎಂಬ ಕೀರ್ತಿಗೆ ಪಾತ್ರರಾಗಿ ಲೋಕಕಲ್ಯಾಣಾಸಕ್ತರಾಗಬೇಕಾಗಿದೆ. ಅದಕ್ಕೆ ತಾವು ಅರ್ಹರೆಂಬುದನ್ನು ತೋರಿಸಿಕೊಡಬೇಕಾಗಿದೆ. ಅಂತೆಯೇ ಶ್ರೀಹರಿಯು ಅವರನ್ನು ದಾರಿದ್ರಾನುಭವವೆಂಬ ಪರೀಕ್ಷೆಗೆ ಗುರಿಪಡಿಸಿದ. ಅದೊಂದು ಅಗ್ನಿದಿವ್ಯ. ಅದರಲ್ಲಿ ಬೆಂದು ಕಾದ ಬಂಗಾರದಂತೆ ಪರಿಶುದ್ಧರಾಗಿ ನೂತನ ಕಾಂತಿಯಿಂದ ಬೆಳಗುತ್ತಾ ನಮ್ಮ ಗುರುಸಾರ್ವಭೌಮರು ಪರಮಾತ್ಮನೇರ್ಪಡಿಸಿದ್ದ ಪರೀಕ್ಷಾರೂಪ ಆಗ್ನಿದಿವ್ಯದಲ್ಲಿ ಉತ್ತೀರ್ಣರಾಗಿ, ಪರಮಾತ್ಮನ ಪರಮ ಪ್ರೀತಿಗೆ ಪಾತ್ರರಾಗಿ, ಇಂದು ಜಗತ್ತಿನ ಜನತೆಯ ಎಲ್ಲ ಬಗೆಯ ಕಷ್ಟಗಳನ್ನೂ ಪರಿಹರಿಸಿ, ಅವರವರು ಬೇಡುವ ಇಷ್ಟಾರ್ಥಗಳನ್ನು ಪಾರೈಸುತ್ತಾ “ಕಲಿಯಗ ಕಲ್ಪತರು” ಗಳೆನಿಸಿ ಲೋಕಮಾನ್ಯರಾಗಿ ರಾರಾಜಿಸುತ್ತಿದ್ದಾರೆ ! 

ಇದೇ ಶ್ರೀಗುರುರಾಜರು ಪೂರ್ವಾಶ್ರಮದಲ್ಲಿ ವೇಂಕಟನಾಥರಾಗಿದ್ದಾಗ ಅನುಭವಿಸಿದ ದಾರಿದ್ರದ ರಹಸ್ಯವೆಂದು ತಿಳಿದು ಆ ಜಗದ್ಗುರುಗಳಲ್ಲಿ ಅಪಾರ ಭಕ್ತಿಮಾಡಿ ಸರ್ವಸಜ್ಜನರೂ ಅವರ ಅನುಗ್ರಹ ಗಳಿಸಿ ಸುಖಿಗಳಾಗಿ ಬಾಳಬೇಕು. ಭಕ್ತವತ್ಸಲನಾದ ಶ್ರೀಹರಿ, ತಾನೊಡ್ಡಿದ ಪರೀಕ್ಷೆಯಲ್ಲಿ ಉತ್ತೀಣರಾದ ತನ್ನ ಪ್ರಿಯಭಕ್ತರಾದ ವೇಂಕಟನಾಥರಲ್ಲಿ ಎಂತಹ ಅನುಗ್ರಹ ಮಾಡಿದನೆಂಬುದನ್ನು ಮುಂದಿನ ಕಥಾಭಾಗದಿಂದ ತಿಳಿದು ಆನಂದಿಸೋಣ.