ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೪೫. ದಾರಿದ್ರಾನುಭವ
ಅಲಕ್ಷ್ಮಿಗೆ ಆಶ್ರಯವಿತ್ತು ದಾರಿದ್ರವನ್ನು ಸ್ವಾಗತಿಸಿದ ಆಚಾರರು ಬಡತನದ ಬೇಗೆಯ ಅನುಭವ, ಅಲಕ್ಷ್ಮಿಯ ಪ್ರಭಾವಗಳನ್ನು ಮನಗಾಣುವ ಕಾಲ ಸನ್ನಿಹಿತವಾಯಿತು. ಒಂದು ಸಂಜೆ ವಿದ್ಯಾಪೀಠದಿಂದ ಮನೆಗೆ ಬರುವಾಗ ಶ್ರೀನಿವಾಸಾಚಾರ್ಯರು 'ಸ್ವಾಮಿ' ಎಂದರು. ಆಚಾರರು “ಏನು ಸಮಾಚಾರ?” ಎನಲು “ಹೊಲ-ಗದ್ದೆಗಳಿಂದ ದವಸ-ಧಾನ್ಯಗಳು ಬರಲಿಲ್ಲವೆಂದು ನಾನೇ ಗದ್ದೆಗೆ ಹೋದೆ. ರೈತರು 'ಫಸಲಿಗೆ ಹುಳಬಿದ್ದು ಎಲ್ಲವೂ ನಾಶವಾಗಿದೆ. ನೀವೇ ನೋಡಿರಿ' ಎಂದರು. ನಿಜವಾಗಿ ಫಸಲು ಎಲ್ಲಾ ಹಾಳಾಗಿತ್ತು. ಅವರು ಕಣ್ಣೀರು ಹಾಕುತ್ತಾ ಒಂದು ವರ್ಷದ ದುಡಿಮೆ ಹಾಳಾಯಿತು. ದಣಿಯರಿಗೇನು ಹೇಳುವುದೆಂದು ತಿಳಿಯದಾಗಿದೆ' ಎಂದು ಮಿಡುಕಿದರು. ಒಂದಾಶ್ಚರ್ಯವೆಂದರೆ ಅಕ್ಕ-ಪಕ್ಕದ ಗದ್ದೆಗಳ ಫಸಲು ಚೆನ್ನಾಗಿಯೇ ಇವೆ. ನಮ್ಮ ಗದ್ದೆ ಫಸಲು ಮಾತ್ರ ಹಾಳಾಗಿದೆ ! ಮನೆಯಲ್ಲಿ ಹತ್ತು-ಹದಿನೈದು ದಿನಗಳಾಗುವಷ್ಟು ಮಾತ್ರ ಆಹಾರ ಪದಾರ್ಥಗಳಿವೆ. ಮುಂದೇನು ಮಾಡುವುದು ಸ್ವಾಮಿ” ಎಂದು ಖಿನ್ನರಾಗಿ ತಿಳಿಸಿದರು.
ವೇಂಕಟನಾಥರು ಹುಸಿನಗೆ ನಕ್ಕು “ಹೂಂ, ಪ್ರಾರಂಭವಾಯಿತೇ ನಿನ್ನ ಪ್ರಭಾವ ?” ಎಂದು ಮನದಲ್ಲೇ ಚಿಂತಿಸಿ “ನಮ್ಮ ವಿಚಾರವಿರಲಿ, ಪಾಪ, ಬಡರೈತರ ಶ್ರಮವೆಲ್ಲಾ ವ್ಯರ್ಥವಾಯಿತಲ್ಲ !” ಎಂದರು.
“ಸ್ವಾಮಿ, ಗುರುಪೀಠದಿಂದ ಕಳಿಸುತ್ತಿದ್ದ ವಾರ್ಷಿಕ ಸಂಭಾವನೆ ಇದುವರೆವಿಗೂ ಬಂದಿಲ್ಲ, ಜ್ಞಾಪಿಸಿ ಮಠಕ್ಕೆ ಪತ್ರ ಬರೆಯಬಹುದೇ ?” ಎಂದಾಗ ಆಚಾರರು “ಹಣಕ್ಕಾಗಿ ಗುರುಗಳಿಗೆ ಬರೆಯುವುದು ನನಗಿಷ್ಟವಿಲ್ಲ. ನಿಧಾನವಾಗಿ ಬರಲಿಬಿಡಿ” ಎಂದರು.
ಶ್ರೀನಿ : ಸ್ವಾಮಿ, ದವಸಧಾನ್ಯಗಳೂ ಇಲ್ಲದಂತಾಯಿತು. ಕೈಯಲ್ಲಿ ಹಣವೂ ಇಲ್ಲ. ಮುಂದೇನು ಮಾಡುವುದೆಂದು ಚಿಂತೆಯಾಗಿದೆ”. ಅಚಾರ್ಯರು ಚಿಂತಿಸಿ ಫಲವೇನು ? ದೇವರು ಹೇಗೋ ಕಾಪಾಡುತ್ತಾನೆ” ಎನಲು ಶ್ರೀನಿವಾಸಾಚಾರರು “ಸರಿ ಬರುತ್ತೇನೆ” ಎಂದು ಹೊರಟುಹೋದರು, ಆಚಾರರು “ಇದೇನಚ್ಚರಿ ? ಅಲಕ್ಷ್ಮಿಗೆ ಆಶ್ರಯವಿತ್ತು ನಾಲ್ಕು ದಿನಗಳೂ ಆಗಿಲ್ಲ ! ದವಸ-ಧಾನ್ಯಗಳಿಗೆ ಹುಳು ಬಿದ್ದು ನಷ್ಟವಾದವು ! ಮಠದ ವಾರ್ಷಿಕ ಸಂಭಾವನೆಯೂ ಬರಲಿಲ್ಲ. ಇದು ಬರಲಿರುವ ಕಷ್ಟಗಳ ಮುನ್ಸೂಚನೆಯಾಗಿರಬಹುದೇ ? ಭಗವಂತನ ಚಿತ್ರದಲ್ಲಿ ಇದ್ದಂತಾಗಲಿ” ಎಂದು ಯೋಚಿಸುತ್ತಾ ಸಾಯಂಸಂಧೆಗೆ ತೆರಳಿದರು.
ಮತ್ತೊಂದು ಸಂಜೆ ಶ್ರೀನಿವಾಸಾಚಾರರು ಬಂದು “ಸ್ವಾಮಿ, ನಮ್ಮ ಮನೆಯ ನಾಲ್ಕು ಗೋವುಗಳಲ್ಲಿ ಮೂರು ಆಕಳುಗಳು ಕಣ್ಮರೆಯಾಗಿವೆ. ದನಕಾಯುವ ಹುಡುಗನು ಹುಡುಕಿದರೂ ಸಿಗಲಿಲ್ಲವಂತೆ, ಲಕ್ಷ್ಮಿಯನ್ನು ಹೊಡೆದುಕೊಂಡು ಬಂದು ವಿಚಾರ ತಿಳಿಸಿದನು. ಚೆನ್ನಾಗಿ ಹಾಲುಕೊಡುತ್ತಿದ್ದ ಗೋವುಗಳಿದ್ದುದರಿಂದ ಮನೆಗೆ ಹಾಲು, ಮೊಸರು, ಬೆಣ್ಣೆಗಳಾಗುತ್ತಿತ್ತು. ಈಗ ಅದೂ ಇಲ್ಲದಂತಾಯಿತು' ಎಂದು ಪೇಚಾಡಿದರು. ಆಚಾರ್ಯರು ಅಚ್ಚರಿಯಿಂದ “ಹಿಂದೆಂದೂ ಗೋವುಗಳು ಹೀಗೆ ತಪ್ಪಿಸಿಕೊಂಡಿರಲಿಲ್ಲ ! ಹುಡುಕಿಸಿ ನೋಡಿ, ಇದರ ಮೇಲೆ ದೈವೇಚ್ಛೆ !” ಎಂದಿಷ್ಟೇ ಹೇಳಿ ಮೌನತಾಳಿದರು. ಅವರಿಗೀಗ ಬಡತನವೆಂದರೇನೆಂಬುದರ ಅರಿವಾಗಹತ್ತಿತು. ಆದರೂ ಆ ಬಗ್ಗೆ ಹೆಚ್ಚು ಚಿಂತಿಸದೆ ಗ್ರಂಥವಾಲೋಕನಕ್ಕಾಗಿ ಕೊಠಡಿಗೆ ನಡೆದರು.
ಜೇಷ್ಠ ಕೃಷ್ಣ ದ್ವಾದಶೀ, ವೇಂಕಟನಾಥರು ಯಾವುದೋ ಗ್ರಂಥವನ್ನು ಅವಲೋಕಿಸುತ್ತಾ ಪಡಸಾಲೆಯ ತೂಗುಯ್ಯಾಲೆಯಲ್ಲಿ ಕುಳಿತಿದ್ದಾರೆ. ಶ್ರೀನಿವಾಸಾಚಾರ್ಯರು ಬಂದರು. ಅವರನ್ನು ಕಂಡು “ಏನು ವಿಷಯ ?” ಎಂದು ಪ್ರಶ್ನಿಸಿದರು ಆಚಾರ್ಯರು.
ಶ್ರೀನಿ : ನಾಳೆ ವಿಜಯೀಂದ್ರಗುರುಗಳ ಮಹಾಸಮಾರಾಧನೆ. ವಿಶೇಷ ಭಕ್ಷ್ಯ-ಭೋಜನಗಳ ಅಡಿಗೆ ಮಾಡಬೇಕೆಂದು ಅಮ್ಮನವರು ಪದ್ಮಾವತಿಯ ಮುಂದೆ ಹೇಳಿದರಂತೆ. ನಾಳೆಗೆ ಆಗುವಷ್ಟೂ ಆಹಾರ ಪದಾರ್ಥಗಳಿಲ್ಲ. ಏನು ಮಾಡಲಿ ?
ಆಚಾರರು : (ಚಿಂತೆಯಿಂದ) "ನಿಜ. ನಾಳೆ ಗುರುಪಾದರ ಮಹಾಸಮಾರಾಧನೆ. ಪಾಪ ವಿದ್ಯಾರ್ಥಿಗಳು ಸುಗ್ರಾಸಭೋಜನಮಾಡಿ ಎಷ್ಟು ದಿನಗಳಾದವೋ ! ನಾಳೆಯಾದರೂ ಅವರು ಸಂತೋಷದಿಂದ ಭೋಜನಮಾಡುವಂತಾಗಲಿ. ಸ್ವಲ್ಪ ಇರಿ” ಹೀಗೆ ಹೇಳಿ ಕೊಠಡಿಗೆ ಹೋಗಿ ಕಬ್ಬಿಣದ ಪೆಟ್ಟಿಗೆಯ ಬಾಗಿಲು ತೆರೆದರು. ಅಲ್ಲಿ ಶ್ರೀ ಸುಧೀಂದ್ರರು, ಮಧುರಾಧೀಶರು, ಮಾವನವರು ತಮಗಿತ್ತ ಆಭರಣಗಳು, ಪತ್ನಿಯ ಆಭರಣಗಳಿದ್ದವು. ತಮ್ಮ ಆಭರಣಗಳನ್ನು ಅವರ ಕೈಗಿತ್ತು ಇದನ್ನು ಮಾರಾಟಮಾಡಿ ಅಥವಾ ಗಿರಿವಿಯಿಟ್ಟು ಹಣವನ್ನು ತೆಗೆದುಕೊಂಡು ಬನ್ನಿರಿ. ಕೆಲ ತಿಂಗಳಾದರೂ ಸಂಸಾರ ಸುಗಮವಾಗಲಿ” ಎ೦ದರು.
ಅದನ್ನು ಕಂಡು ಶ್ರೀನಿವಾಸಾಚಾರ್ಯರು ದುಃಖಿತರಾಗಿ ಇವು ತಮ್ಮ ಪಾಂಡಿತ್ಯಕ್ಕೆ ಬಂದ ಪುರಸ್ಕಾರಗಳು ! ಇದನ್ನು ಮಾರುವುದೇ ?” ಎಂದರು.
ವೇಂ : (ನಕ್ಕು) ಪುರಸ್ಕಾರ ನನಗೆ ಬಂದಾಯಿತಲ್ಲ ! ಇದನ್ನು ನಾನೇನೂ ಉಪಯೋಗಿಸುತ್ತಿಲ್ಲ. ವಿದ್ಯಾರ್ಥಿಗಳಿಗೆ ಅನ್ನದಾನ, ಸಂಸಾರ ನಿರ್ವಹಣೆಗಾದರೂ ಉಪಯೋಗವಾಗಲಿ.
ಶ್ರೀನಿ : ಕ್ಷಮಿಸಿ ಸ್ವಾಮಿ, ಆಸ್ತಿ ಮಾರಿ ಅನ್ನದಾನಮಾಡುವುದು ಉಚಿತವೇ ?
ವೇಂ : ಶ್ರೀನಿವಾಸಾಚಾರ ! ನಿಮ್ಮನ್ನು ಹೊರಗಿನವರೆಂದು ನಾನು ಭಾವಿಸಿಲ್ಲ. ನನ್ನ ಹಿತದೃಷ್ಟಿಯಿಂದಲೇ ನೀವು ಹೀಗೆ ಹೇಳುತ್ತಿದ್ದೀರಿ. ಕೇಳಿ, ಹಿಂದೆ ಗುರುಕುಲವೆಂದರೆ ನೂರಾರು ಜನ ಶಿಷ್ಯರಿಗೆ ಅನ್ನ-ವಸ್ತ್ರಗಳನ್ನಿತ್ತು ವಿದ್ಯಾದಾನ ಮಾಡುವ ಸಂಸ್ಥೆಗಳೆಂದು ಖ್ಯಾತವಾಗಿದ್ದವು. ಅದು ಭಾರತೀಯ ಸಂಸ ತಿಯ ಹಿರಿಮೆ. ನನ್ನಲ್ಲಿ ಕೇವಲ ಹತ್ತಾರು ಜನ ವಿದ್ಯಾರ್ಥಿಗಳು ವಿದ್ಯಾರ್ಜನೆಯ ಆಶೆಯಿಂದ ಮನೆ-ಬಾಗಿಲು ಬಿಟ್ಟು ಬಂದು ಓದುತ್ತಿದ್ದಾರೆ. ಅಭ್ಯಾಸವೂ ಚೆನ್ನಾಗಿ ನಡೆದಿದೆ. ಕೇವಲ ಈ ಹತ್ತು ಜನರಿಗೆ ಅಶನ-ವಸನಗಳಿತ್ತು ಜ್ಞಾನದಾನ ಮಾಡಲಾಗದಿದ್ದರೆ ನಾನಿದ್ದು ಪ್ರಯೋಜನವೇನು ! ವಿದ್ಯೆಯೇ ನಿಜವಾದ ಸಂಪತ್ತು ! ಅದಕ್ಕಾಗಿ ನಶ್ವರವಾದ ಈ ಸಂಪತ್ತನ್ನು ನಾನು ಸಂತೋಷದಿಂದ ತ್ಯಾಗಮಾಡುತ್ತೇನೆ. ನಾನು ಹೇಳಿದಂತೆ ಮಾಡಿರಿ. ಗುರುಗಳ ಆರಾಧನೆ ಚೆನ್ನಾಗಿ ಜರುಗಲಿ. ಅದಷ್ಟು ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಗೃಹಕೃತ್ಯ ನಿರ್ವಹಿಸಿರಿ. ಆದರೆ ಈ ವಿಚಾರ ಸರಸ್ವತಿಗಾಗಲೀ, ಮತ್ತಾರಿಗಾಗಲೀ ತಿಳಿಯುವುದು ಬೇಡ”. ಆಚಾರೈರ ಶಿಷ್ಯಪ್ರೇಮ, ಉದಾತ್ತ ಧೈಯಗಳನ್ನು ಕಂಡು ಶ್ರೀನಿವಾಸಾಚಾರರ ಕಣ್ಣಿಂದ ಆನಂದಾಶ್ರು ಹರಿಯಿತು. “ಅಪ್ಪಣೆ” ಎಂದು ಹೇಳಿ ಹೊರಟು ಆಭರಣಗಳನ್ನು ಗುರುತಿನ ಶ್ರೀಮಂತ ವ್ಯಾಪಾರಿಗಳಲ್ಲಿ ಗಿರವಿಯಿಟ್ಟು ಹಣವನ್ನು ತಂದು ಎಲ್ಲ ವ್ಯವಸ್ಥೆಗಳನ್ನೂ ಮಾಡಹತ್ತಿದರು. ಮರುದಿನ ಶ್ರೀವಿಜಯೀಂದ್ರರ ಆರಾಧನೆ ಆಚಾರರ ಮನೆಯಲ್ಲಿ ವಿಜೃಂಭಣೆಯಿಂದ ಜರುಗಿತು. ಸರಸ್ವತಮ್ಮ ಮೇಲೆ ನಿಂತು ವಿದ್ಯಾರ್ಥಿಗಳಿಗೆ ಬಲಾತ್ಕಾರದಿಂದ ಭಕ್ಷ್ಯಭೋಜ್ಯಗಳನ್ನು ಹೆಚ್ಚಾಗಿ ಹಾಕಿಸಿ ಭೋಜನಮಾಡಿಸಿ ಎಲ್ಲರನ್ನೂ ಆನಂದಗೊಳಿಸಿದರು. ವಿದ್ಯಾರ್ಥಿಗಳು ಪ್ರೀತಿಯಿಂದ ಸಲಹುತ್ತಿರುವ ಗುರುಗಳು-ಗುರುಪತ್ನಿಯರನ್ನು ಕೊಂಡಾಡಿದರು.
ಹೀಗೆ ಆಚಾರರು ಸಂಸಾರ ಸಾಗಹತ್ತಿತು. ಹಣವಿಲ್ಲದಾಗಲೆಲ್ಲಾ ಆಚಾರರು ತಮ್ಮ, ಪತ್ನಿಯ ಆಭರಣಗಳನ್ನು ಮಾರಿಸಿ, ಇಲ್ಲವೇ ಗಿರಿವಿಯಿರಿಸಿ ಹಣ ತರಿಸಿ, ಕುಟುಂಬಭರಣವು ಸುಗಮವಾಗುವಂತೆ ಮಾಡಲಾರಂಭಿಸಿದರು. ಎಂಟು-ಹತ್ತು ತಿಂಗಳಲ್ಲಿ ಮನೆಯ ಬೆಳ್ಳಿ-ಬಂಗಾರದ ಆಭರಣ, ಪದಾರ್ಥಗಳೆಲ್ಲವೂ ಕಣ್ಮರೆಯಾದವು. ಇಷ್ಟಾದರೂ ಆಚಾರರು ಚಿಂತಿಸದೆ ಸಂತೋಷದಿಂದಲೇ ಪಾಠಪ್ರವಚನಾಸಕ್ತರಾಗಿ ಕಾಲಕಳೆಯುತ್ತಿದ್ದರು. ಇಂತು ಒಂದು ವರ್ಷ ಹೇಗೋ ಕಳೆಯಿತು.
ಸಿದ್ಧಾರ್ಥಿ ಸಂವತ್ಸರ ಹತ್ತಿರವಾಯಿತು. ವೇಂಕಟನಾಥರು ರಾತ್ರಿ ವಿದ್ಯಾರ್ಥಿಗಳೊಡನೆ ಭೋಜನಮುಗಿಸಿ ತಮ್ಮ ವಿಶ್ರಾಂತಿ ಕೊಠಡಿಯಲ್ಲಿ ಕುಳಿತಿರುವಾಗ ಸರಸ್ವತಮ್ಮ ಮಗನನ್ನು ಮಲಗಿಸಿ ಬಂದು “ಕಬ್ಬಿಣದ ಪೆಟ್ಟಿಗೆ ಬೀಗದ ಕೈ ಎಲ್ಲಿದೆ ?” ಎಂದು ಪ್ರಶ್ನಿಸಿದರು. ಆಚಾರರು 'ಬೀರುವಿನಲ್ಲಿರಬೇಕೆಂದು ಹೇಳಿದರು. ಸರಸ್ವತಮ್ಮ ಬೀಗದ ಕೈ ಹುಡುಕಿ ಕಬ್ಬಿಣದ ಪೆಟ್ಟಿಗೆ ತೆರೆದರು. ಆಭರಣಗಳಿಟ್ಟಿದ್ದ ಪೆಟ್ಟಿಗೆ ಖಾಲಿಯಾಗಿದೆ. ಭಯ-ಆಶ್ಚರ್ಯ ಉದ್ವೇಗಗಳಿಂದ ಸರಸ್ವತಮ್ಮ ಓಡಿ ಬಂದು “ಸ್ವಾಮಿ ಪೆಟ್ಟಿಗೆಯಲ್ಲಿದ್ದ ಒಡವೆಗಳಲ್ಲಾ ಕಾಣೆಯಾಗಿವೆ” ಎಂದರು. ಆಚಾರರು ಮಾತನಾಡಲಿಲ್ಲ. ಸರಸ್ವತಮ್ಮ ಪತಿ ಭುಜ ಹಿಡಿದು ಅಲುಗಾಡಿಸಿ “ಏನೂಂದ್ರೆ, ಆಭರಣಗಳು ಪೆಟ್ಟಿಗೆಯಲ್ಲಿಲ್ಲ, ನಿಮಗೆ ಗೊತ್ತೆ?” ಎಂದಾಗ ಆಚಾರರು “ಹಾಂ, ಏನೆಂದೆ ?” ಎಂದರು.
ಸರ : ಸ್ವಾಮಿ, ಪೆಟ್ಟಿಗೆಯಲ್ಲಿದ್ದ ನಿಮ್ಮ ನನ್ನ ಆಭರಣಗಳು ಮಾಯವಾಗಿವೆ !
ವೇಂ : (ಶುಷ್ಕನಗೆಬೀರಿ) ಸರಸ್ವತಿ ಅವೆಲ್ಲ ಭದ್ರವಾಗಿದೆ.
ಸರ : ಎಲ್ಲಿದೆ ಸ್ವಾಮಿ ?
ವೇಂ : ಇರುವ ಕಡೆ ಇದೆ. ಸರಸ.
ಸರ : ನಿಮ್ಮ ಮಾತು ನನಗರ್ಥವಾಗಲಿಲ್ಲ ಸ್ವಾಮಿ.
ಆಗ ಆಚಾರ್ಯರು ಸರಸ್ವತಿಯನ್ನು ಹತ್ತಿರಕೂಡಿಸಿಕೊಂಡು ಜರುಗಿದ ಸಮಸ್ತ ವಿಚಾರಗಳನ್ನೂ ವಿವರಿಸಿ “ಸರಸ್ವತಿ, ಒಂದು ಕಡೆ ಆಲಕ್ಷ್ಮಿಗೆ ಆಶ್ರಯವಿತ್ತು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಚಿಂತೆ, ಮತ್ತೊಂದು ಕಡೆ ವಿದ್ಯಾರ್ಥಿಗಳ ರಕ್ಷಣೆಯ ಯೋಚನೆ. ಇನ್ನೊಂದು ಕಡೆ ನೀನು - ಕುಮಾರ ಮತ್ತು ನನ್ನ ಜೀವನದ ಪ್ರಶ್ನೆ, ಇಂತು ಚಿಂತಾಸಮುದ್ರದಲ್ಲಿ ಮುಳುಗೇಳುತ್ತಿದ್ದೇನೆ ಸರಸ ! ನಿನಗೆ ಮೊದಲೇ ತಿಳಿಸಲಿಲ್ಲವೆಂದು ಕೋಪವೇ” ಎಂದರು. ಸರಸ್ವತಿಯು “ನೀವು ನನ್ನ ದೇವರು. ನಿಮ್ಮಲ್ಲಿ ಕೋಪವೆಂದರೇನು ಸ್ವಾಮಿ ? ಹಿಂದೆ ನಮ್ಮತ್ತೆಯವರು ನನಗೆ 'ಸಂಸಾರವೆಂಬುದು ಒಂದು ಧರ್ಮರಥವೆಂದು, ಪತಿಪತ್ನಿಯರು ಅದರ ಎರಡು ಚಕ್ರಗಳು, ಅದು ಸಮಸಮವಾಗಿ ಉರುಳಿದಾಗ ಧರ್ಮರಥ ಗುರಿಮುಟ್ಟುವುದು' ಎಂದು ಉಪದೇಶಿಸಿದ್ದರು. ನಿಮ್ಮ ಸುಖದಲ್ಲಿ ಭಾಗಿನಿಯಾದಂತೆ, ದುಃಖದಲ್ಲಿ ಸಮಭಾಗಿನಿಯಾಗಲು ನೀವು ಅವಕಾಶಕೊಡಲಿಲ್ಲವಲ್ಲಾ ಎಂದು ಮಾತ್ರ ನನಗೆ ದುಃಖ. ಹೀಗೇಕೆ ಮಾಡಿದಿರಿ ?” ಎಂದು ಕಣ್ಣೀರಿಟ್ಟಳು.
ವೇಂಂಕಟನಾಥರು “ಸರಸ್ವತಿ, ಆರ್ಯಲಲನೆಯರಿಗೆ ಭೂಷಣವಾದುದನ್ನೇ ನುಡಿದಿರುವೆ. ಪ್ರೇಮಪಾತ್ರ ವಸ್ತುವಿಗೆ ಮನಸ್ಸಿಗೆ ನೋವಾಗುವುದನ್ನು ಯಾವ ಪ್ರಿಯಕರನೂ ಬಯಸುವುದಿಲ್ಲ. ನೀನು ಸಿರಿತನದಲ್ಲೇ ಬೆಳೆದ ಸುಮಕೋಮಲೆ. ನಮಗೆ ಬಂದಿರುವ ದಾರಿದ್ರದುಃಖವನ್ನು ನೀನು ಸಹಿಸಲಾರೆ ಎಂದು ಭಾವಿಸಿ ಈವರೆಗೆ ನಿನಗೆ ತಿಳಿಸಿರಲಿಲ್ಲ ಅಷ್ಟೇ” ಎಂದರು. ಪತಿಗೆ ತನ್ನಲ್ಲಿರುವ ಅಗಾಧ ಪ್ರೇಮವಿಚಾರವನ್ನು ಅವರ ಬಾಯಿಂದಲೇ ಕೇಳಿ ಸರಸ್ವತಮ್ಮನ ದೇಹ ರೋಮಾಂಚಿತವಾಯಿತು. ಹೃದಯಪರವಶವಾಯ್ತು. “ಓ ನನ್ನ ದೇವರೇ, ನಿಮ್ಮ ಪ್ರೇಮಕ್ಕೆ ಪಾತ್ರಳಾದ ನಾನೇ ಧನ್ಯಳು” ಎಂದುದ್ದರಿಸಿದಳು.
ಆಚಾರ್ಯ : ಸರಸ ! ನಿನ್ನ ವಡವೆಗಳನ್ನು ಕಳೆದೆನೆಂದು ಬೇಸರವೇ ?
ಸರ : ಎಂಥ ಮಾತು ಸ್ವಾಮಿ ! ಸತಿಗೆ ಪತಿಯೇ ಆಭರಣ ! ಆ ಅಮೂಲ್ಯ ಆಭರಣದ ಮುಂದೆ ನಶ್ವರವಾದ ಈ ಸುವರ್ಣ ಒಡವೆಗಳಿಗೆ ಬೆಲೆಯುಂಟೆ ? ನಿಮಗೆ ಬೇಡವಾದುದು ನನಗೂ ಬೇಡ, ನಿಮ್ಮ ಪ್ರೇಮವೊಂದು ಸ್ಥಿರವಾಗಿರಲಿ, ನಾನು ಹೆಚ್ಚೇನೂ ಬೇಡುವುದಿಲ್ಲ !
ಆಚಾರರು “ಧನ್ಯ, ಸರಸ, ನಿನ್ನ ಕರಪಿಡಿದ ನಾನು ಪುಣ್ಯಶಾಲಿ” ಎಂದರು. ಸರಸ್ವತಿ ಇದುವರೆಗೇನೋ ನಡೆಯಿತು. ಇನ್ನು ಮುಂದೆ ಹೇಗೆ ?” ಎಂದಾಗ, ಆಚಾರರು “ನಾನೂ ಅದನ್ನೇ ಚಿಂತಿಸುತ್ತಿರುವೆ” ಎಂದುತ್ತರಿಸಿದರು. ಆಗ ಸರಸ್ವತಿಯು “ಸ್ವಾಮಿ, ನಾನೊಂದು ಮಾತು ಹೇಳಲೇ” ಎಂದು ಕೇಳಿದಾಗ ಆಚಾರರು “ಹೂಂ, ಅದೇನು ಹೇಳು” ಎಂದರು.
ಸರ : ನನ್ನ ತಂದೆಗೆ ಬರೆದು ಹಣತರಿಸಲೇ ?
ವೇಂ : ಸರಸ್ವತಿ, ಅದು ಮಾತ್ರ ಬೇಡ.
ಸರ : ಅದರಲ್ಲಿ ತಪ್ಪೇನಿದೆ ಸ್ವಾಮಿ ?
ವೇಂ : ಸರಸ್ವತಿ, ನಾನು ಇದುವರೆಗೆ ಯಾರನ್ನೂ ಯಾಚಿಸಿದವನಲ್ಲ ! ನನ್ನದೊಂದು ವ್ರತವಿದೆ. ಅದೇ ಅಯಾಚಿತವೃತ್ತಿ ಎಂಬ ವ್ರತ. ಅದು ಭಗವದ್ಭಕ್ತರಲ್ಲಿರಬೇಕಾದ ಗುಣ, ಭಾಗವತಧರ್ಮಗಳಲ್ಲಿ ಅದು ಮುಖ್ಯವಾದುದು.
ಸರ : (ಕುತೂಹಲದಿಂದ) ಭಾಗವತಧರ್ಮವೆಂದರೇನು ? ವಿವರಿಸಿ ಹೇಳಿ.
ವೇಂ : ಪ್ರತಿಯೊಬ್ಬ ಜೀವಿಗೂ ಮೋಕ್ಷವೇ ಪರಮಗುರಿ. ಅದಕ್ಕೆ ಭಾಗವತ ಧರ್ಮಾಚರಣಗಳಿಂದ ಭಗವತ್ನಸಾದವನ್ನು ಪಡೆಯುವುದು ಮುಖ್ಯಸಾಧನ. ಭಾಗವತಧರ್ಮಗಳನ್ನು ದೇವತೆಗಳಿಗೂ ಸಂಪೂರ್ಣವಾಗಿ ತಿಳಿಯಸದಳ, ಮೂವತ್ತು ವಿಧವಾದ ಭಾಗವತಧರ್ಮಗಳನ್ನು ಭಾಗವತದಲ್ಲಿ ಹೃದಯಂಗಮವಾಗಿ ಬಣ್ಣಿಸಿದ್ದಾರೆ. ಅದರವಿವರಗಳನ್ನು ಇನ್ನೊಮ್ಮೆ ತಿಳಿಸುವೆನು. ಈ ಭಾಗವತಧರ್ಮಗಳು ಪರಮಾತ್ಮನಿಗೆ ಪ್ರಿಯವಾದ ಧರ್ಮಗಳು. ಇವನ್ನು ಆಚರಿಸುವವರನ್ನು ಭಾಗವತಾಗ್ರೇಸರೆನ್ನುವರು. ಶ್ರೀನಾರದರು, ಪ್ರಹ್ಲಾದ, ಅಂಬರೀಷಾದಿಗಳು ಇಂಥ ಮಹಾಭಾಗವತೋತ್ತಮರು.
ಭಗವಂತನನ್ನು ಬಿಟ್ಟು ಅನ್ಯತ್ರ ಮನಸ್ಸು ಪ್ರವರ್ತಿಸಬಾರದು. ಇಂಥ ಭಕ್ತರಿಗೆ ದೇಹಧಾರಣೆ-ಪೋಷಣಗಳವಶ್ಯವಾದ್ದರಿಂದ ಅಂಥವರಿಗೆ ಜೀವಿಕಾವೃತ್ತಿಯನ್ನು ಅಯಾಚನಾ, ಸಯಾಚನಾ ಎಂದೆರಡು ಬಗೆಯಾಗಿ ಹೇಳಿದ್ದಾರೆ. ಸಾಮಾನ್ಯವಾಗಿ ಭಗವದ್ಭಕ್ತರನ್ನು ಪಕ್ವಕಲ್ಪರೂ, ಪಕ್ಷಪ್ರತಿನಿಧಿಗಳೆಂದೂ ಮೂರು ವಿಧಗಳಾಗಿ ವಿಂಗಡಿಸಬಹುದು. ಪಕ್ವಭಕ್ತರು, ಶ್ರೇಷ್ಠರು, ಅವರು ಅಯಾಚನಾವೃತ್ತಿಯಿಂದ ಜೀವನ ಸಾಗಿಸುವರು. ಇಲ್ಲಿ ಅಯಾಚನಾವೃತ್ತಿ ವಿಚಾರವನ್ನು ಮಾತ್ರ ತಿಳಿಸುತ್ತೇನೆ. ಅದೂ ಎರಡು ವಿಧವಾಗಿದೆ. ೧) ಯದೃಚ್ಛಾಲಾಭ ಸಂತೃಪ್ತಿ-ಅಂದರೆ ಭಗವತ್ಸಂಕಲ್ಪದಿಂದ ದೊರೆತುದರಿಂದಲೇ ದೇಹಧಾರಣಮಾಡುವರು ಪಕ್ಷಭಕ್ತರು. ೨) ಸಿಲೋಂಛನ ವೃತ್ತಿಯಿಂದ, ಅಂದರೆ ಹೊಲಗದ್ದೆಗಳಲ್ಲಿ ಧಾನ್ಯಸಾಗಿಸಿದ ಮೇಲೆ ಅಲ್ಲಿ ಕೆಳಗೆ ಬಿದ್ದಿರುವ ಕಾಳುಗಳನ್ನು ಸಂಗ್ರಹಿಸಿಟ್ಟುಕೊಂಡು ಜೀವಿಸುವರು. ಇವರು ಪಕ್ವಕಲ್ಪರು. ಈ ಎರಡು ಬಗೆಯಲ್ಲಿಯದೃಚ್ಛಾಲಾಭಸಂತೃಪ್ತರೇ ಪರಮಾತ್ಮನಿಗೆ ಅತಿ ಪ್ರಿಯರಾದ ಶ್ರೇಷ್ಠ ಭಕ್ತರು ! ಅವರ ನೀತಿ-ನಡತೆ ಸರ್ವರಿಗೂ ಆದರ್ಶವಾಗಿರಬೇಕು. ಸರಸ್ವತಿ ! ನಾನು ಈ ಅಯಾಚನಾ (ಯದೃಚ್ಛಾಲಾಭ ಸಂತೃಪ್ತಿ) ಎಂಬ ವ್ರತವನ್ನು ಸ್ವೀಕರಿಸಿದ್ದೇನೆ. ನಾನು ಅಪೇಕ್ಷಿಸಿದರೆ ನಿಮ್ಮ ತಂದೆ, ನನ್ನ ಭಾವ, ಅಣ್ಣ, ಅಷ್ಟೇ ಏಕೆ ಶ್ರೀಗುರುಪಾದರೂ ಹೇರಳವಾಗಿ ಧನ ನೀಡುವರು. ನಿಜ, ಆದರೆ ಅದು ಸಯಾಚನಾ ವೃತ್ತಿಯೆನಿಸಿ, ನನ್ನ ವ್ರತಕ್ಕೆ ವಿರುದ್ಧವಾದ್ದರಿಂದ ಅದನ್ನು ನಾನು ಅಪೇಕ್ಷಿಸುವುದಿಲ್ಲ. ಆದ್ದರಿಂದಲೇ ನಿನ್ನ ತಂದೆಗೆ ತಿಳಿಸಿ ಹಣ ತರಿಸುವುದು ಬೇಡ ಎಂದು ಹೇಳಿದ್ದು !
ಸರಸ್ವತಿ ! ಈಶಾವಾಸ್ಕೋಪನಿಷತ್ತು ನಮಗೇನು ಉಪದೇಶಿಸಿದೆ ಗೊತ್ತೆ ?
“ಈಶಾವಾಸ್ಯಮಿದಂ ಸರ್ವಂ ಯಂಚಿಜ್ಜಗತ್ಯಾಂ ಜಗತ್ |
ತೇನ ತ್ಯಕ್ಕೇನ ಭುಂಜೀಥಾಃ ಮಾಗೃಧಃ ಕಸದನಮ್ ||”
ಅಂದರೆ - ಈ ಚರಾಚರಾತ್ಮಕವಾದ ಪ್ರಪಂಚವೆಲ್ಲವೂ ಪರಮಾತ್ಮಮಯವಾಗಿದೆ. ಅದಕ್ಕೆಲ್ಲ ಶ್ರೀಹರಿಯೇ ಪ್ರಭುವು. ಅವನು ಸ್ವತಂತ್ರ. ಉಳಿದುದೆಲ್ಲವೂ ಅಸ್ವತಂತ್ರ, ಸ್ವತಂತ್ರನಾದ ಆ ದಯಾಘನ ಏನು ಅನುಗ್ರಹಿಸುವನೋ ಅದರಿಂದಲೇ ಜೀವಿಸಬೇಕೇ ವಿನಃ ಅಸ್ವತಂತ್ರರೂ, ಅಲ್ಪರೂ ಆದ ರಾಜರು - ಶ್ರೀಮಂತರುಗಳನ್ನು ಜೀವನಕ್ಕಾಗಿ ಬೇಡಿ ಹಣಪಡೆಯಬಾರದು. ಇದು ವೇದಪುರುಷನ ಅಪ್ಪಣೆ ! ಹಾಗಾದರೆ ರಾಜರು, ಅಷ್ಟೇ ಏಕೆ, ನಮ್ಮ ಗುರುಪಾದರು ಕೊಟ್ಟಿದ್ದನ್ನು ಸ್ವೀಕರಿಸಬಹುದೇ ಎಂದು ನೀನು ಕೇಳಬಹುದು. ಅವರು ತಾವಾಗಿ ಸಂತೋಷದಿಂದ ಕೊಟ್ಟರೆ, ಅದನ್ನು ಅವರಲ್ಲಿ ಅಂತರ್ಗತನಾದ ಪರಮಾತ್ಮನು ಅವರ ದ್ವಾರಾ ಕೊಡಿಸುತ್ತಿದ್ದಾನೆಂದು ತಿಳಿದು ಸ್ವೀಕರಿಸಬಹುದು. ಅದೂ ಅಯಾಚಾನಾ (ಯದೃಚ್ಛಾಲಾಭಸಂತುಷ್ಟಿ) ವೃತ್ತಿ ಎಂಬ ಧರ್ಮವೇ ಆಗುತ್ತದೆ. ಆದರೆ ನಾವಾಗಿ ಯಾಚಿಸಬಾರದು. ಸರಸ್ವತಿ, ಸಂಸಾರ ನಿರ್ವಹಣೆಗೆ ಬೇರೊಬ್ಬರಿಂದ ಧನವನ್ನು ಪಡೆಯಲು ಮಾತ್ರ ನನಗೆ ಹೇಳಬೇಡ.
ಮೂಕವಿಸ್ಮಿತಳಾಗಿ ಪತಿಯ ವಿವರಣೆಯನ್ನಾಲಿಸುತ್ತಾ ಕುಳಿತಿದ್ದ ಸರಸ್ವತಮ್ಮ ಪತಿಗೆ ನಮಿಸಿ “ಸ್ವಾಮಿ, ನೀವು ಶಾಸ್ತ್ರವೇತ್ತರು, ವ್ರತನಿಯಮನಿಷ್ಠರು. ನಾನು ಅಜ್ಞಾನಿ, ತಿಳಿಯದೇ ಹೇಳಿದೆ, ಕ್ಷಮಿಸಿ. ಇನ್ನು ಮುಂದೆ ನಿಮ್ಮ ಧರ್ಮವೇ ನನ್ನ ಧರ್ಮ. ತಮ್ಮ ಉಪದೇಶದಂತೆಯೇ ನಡೆಯುತ್ತೇನೆ” ಎಂದು ವಿಜ್ಞಾಪಿಸಿ, ನಂತರ “ಯುಗಾದಿ ಹಬ್ಬ ಬಂತು. ಖರ್ಚು-ವೆಚ್ಚಗಳೇನು ಮಾಡುವುದು ?” ಎಂದು ಪ್ರಶ್ನಿಸಲು, ಆಚಾರ್ಯರು “ಅದನ್ನೇ ಯೋಚಿಸುತ್ತಿದ್ದೇನೆ. ಈವರೆಗೇನೋ ನಮ್ಮ ಬಡತನ ಗೊತ್ತಾಗದಂತೆ ಸಂಸಾರ ಸಾಗಿತು. ಹಬ್ಬವನ್ನು ಸರಿಯಾಗಿ ಆಚರಿಸದಿದ್ದರೆ ನಮ್ಮ ಪರಿಸ್ಥಿತಿ ಬಯಲಾಗಬಹುದು, ಶ್ರೀಹರಿ ಏನಾದರೂ ದಾರಿ ತೋರುವನೆಂದೇ ನಂಬಿದ್ದೇನೆ” ಎಂದರು. ಸರಸ್ವತಮ್ಮ ತಮ್ಮಕರಗಳಲ್ಲಿದ್ದ ಬಂಗಾರದ ಬಳೆಗಳನ್ನು ಕಳಚಿ ಪತಿಗಿತ್ತು "ಸ್ವಾಮಿ, ಇದರಿಂದ ಹಬ್ಬ ಸಾಂಗವಾಗಬಹುದು ಸ್ವೀಕರಿಸಿ” ಎಂದಳು.
ವೇಂಕಟನಾಥರು : (ಖೇದದಿಂದ ಛೇ, ಇದೇನು ಮಾಡುತ್ತಿರುವೆ ಸರಸ ! ಸೌಮಂಗಲ್ಯ ಚಿಹ್ನೆಯಾಗಿ ಕರದಲ್ಲಿರುವುದನ್ನು ಕೊಡುತ್ತಿರುವೆಯಲ್ಲ ! ಹಾಯ್, ಶ್ರೀಹರಿ, ನಾನೆಂಥ ನಿರ್ಭಾಗ್ಯ ! ಪತ್ನಿಯ ಕರದಲ್ಲಿದ್ದುದನ್ನು ಮಾರಿ ಜೀವಿಸುವಂತಾಯಿತೇ, ನನ್ನ ಬಾಳು ! (ಕಣ್ಣೀರು ಸುರಿಸುತ್ತಾ) ಬೇಡ, ಸರಸ ! ಅದನ್ನು ತೆಗೆಯಬೇಡ,
ಸರಸ್ವತಿ : “ನನ್ನ ಸೌಮಂಗಲ್ಯ ಚಿಹ್ನೆ, ಸೌಭಾಗ್ಯ ಎಲ್ಲವೂ ನೀವೇ ಸ್ವಾಮಿ ! ನೋಡಿ, ನನ್ನ ಕೊರಳಲ್ಲಿ ರಾಜಿಸುವ ಈ ಪವಿತ್ರ ಮಾಂಗಲ್ಯವೊಂದು ನನಗೆ ಶಾಶ್ವತವಾಗಿರಲಿ ಸಾಕು ! ಸ್ವೀಕರಿಸಿ” ಎಂದು ಬಲವಂತದಿಂದ ಪತಿಗೆ ನೀಡಿದಳು.
ಆಚಾರರು * `ಗೃಹಣಿ ಗೃಹಮುಚ್ಯತೇ' ಎಂಬ ಆರ್ಯೋಕ್ತಿ ನನಗೀಗ ನಿದರ್ಶನಕ್ಕೆ ಬಂತು. ಸಂತೋಷ” ಎಂದು ಹೇಳಿ. ಶ್ರೀನಿವಾಸಾಚಾರರನ್ನು ಕರೆದು ಬಳೆಗಳನ್ನು ಕೊಟ್ಟು ಹಬ್ಬಕ್ಕೆ ಬೇಕಾದ ಪದಾರ್ಥಗಳನ್ನು ಸಂಗ್ರಹಿಸಿರಿ” ಎಂದು ಹೇಳಿದರು. ಶ್ರೀನಿವಾಸಾಚಾರರು ಆಚಾರ ದಂಪತಿಗಳ ತ್ಯಾಗಮನೋಭಾವವನ್ನು ಕಂಡು ವಿಸ್ಮಿತರಾಗಿ “ಇಂತಹ ಮಹನೀಯರಿಗೆ ಇಂಥ ಪರಿಸ್ಥಿತಿಯೊದಗಿತಲ್ಲಾ” ಎಂದು ಮರುಗುತ್ತಾ ಹೊರನಡೆದರು.
ಯುಗಾದಿಹಬ್ಬ ಆಚಾರರ ಗೃಹದಲ್ಲಿ ವಿಜೃಂಭಣೆಯಿಂದ ಜರಗಿತು. ಆಚಾರರು ತಾವು ಉಪಯೋಗಿಸದೇ ಇಟ್ಟಿದ್ದ ಘಳಗೆ ಮುರಿಯದ ಹತ್ತು-ಹನ್ನೆರಡು ಜತೆ ಪಂಚೆಗಳು, ಸೀರೆ ಖಣಗಳನ್ನು ಪೆಟ್ಟಿಗೆಯಿಂದ ಹೊರತೆಗೆದು ಶ್ರೀನಿವಾಸಾಚಾರ, ಪದ್ಮಾವತಮ್ಮ, ವಿದ್ಯಾರ್ಥಿಗಳಿಗೆ ಉಡುಗೊರೆಯಾಗಿ ನೀಡಿದರು. ಸಂತೋಷದಿಂದ ನೂತನವಸ್ತ್ರಧಾರಣಮಾಡಿ ಎಲ್ಲರೂ ಆಚಾರ ದಂಪತಿಗಳಿಗೆ ನಮಸ್ಕರಿಸಿದರು, ಹಬ್ಬ ಸಾಂಗವಾಯಿತು.
ಹಬ್ಬ ಮುಗಿದು ಒಂದು ವಾರ ಕಳೆದಿದೆ. ವಿದ್ಯಾಪೀಠದಲ್ಲಿ ಒಂದು ರಾತ್ರಿ ಗೋಪಾಲ ಎಂಬ ವಿದ್ಯಾರ್ಥಿಯು ಹಿತ್ತಲ ಕಡೆ ಹೋಗಿ ಕಾಲು ತೊಳೆದು ಬರುವಾಗ ಶ್ರೀನಿವಾಸಾಚಾರರ ಕೊಠಡಿಯಿಂದ “ಪಾಪ, ಆಚಾರರಿಗೆ ಇಂತಹ ಕಷ್ಟ ಬರಬಾರದಾಗಿತ್ತು” ಎಂಬ ಮಾತು ಕೇಳಿ ಗೋಪಾಲ ಸ್ತಂಭಿತನಾದ ! ನಮ್ಮ ಗುರುಗಳಿಗೇನು ಕಷ್ಟ ಬಂತೋ ಎಂದು ಚಿಂತಿಸಿ ಅದನ್ನರಿಯಲು ಅಲ್ಲಿಯೇ ನಿಂತು ಆಲಿಸಹತ್ತಿದನು. ಶ್ರೀನಿವಾಸಾಚಾರರು ಪತ್ನಿಗೆ ಆಚಾರರ ಗೃಹಕೃತ್ಯ ವಿಚಾರವನ್ನು ತಿಳಿಸಿ “ಪದ್ಮ. ಇಷ್ಟಾದರೂ ಅವರಿಗೆ ತಮ್ಮ ಅಥವಾ ಮಗನ ಚಿಂತೆಯಿಲ್ಲ. ವಿದ್ಯಾರ್ಥಿಗಳು ಮತ್ತು ನಮ್ಮ ಪೋಷಣೆಯ ಚಿಂತೆಯೇ ಅಧಿಕವಾಗಿದೆ” ಎಂದು ಹೇಳಿ ಪರಿತಪಿಸಿ ಮತ್ತೆ ದಯಾಳುಗಳಾದ ಆ ಮಹನೀಯರಿಗೆ ನಾವೇನು ಪ್ರತ್ಯುಪಕಾರ ಮಾಡಬಲ್ಲೆವು ? ಪದ್ಮಾವತಿ, ನಾವು ಏನಾದರೂ ವ್ಯಾಜ್ಯದಿಂದ ಇಲ್ಲಿಂದ ಹೊರಟುಬಿಡಬೇಕು. ಅದರಿಂದ ನಮ್ಮಿಬ್ಬರ ಭಾರವಾದರೂ ಕಡಿಮೆಯಾಗುವುದು” ಎಂದರು. ಇವೆಲ್ಲವನ್ನೂ ಕೇಳಿದ ಗೋಪಾಲ ವಿಸ್ಮಯ-ದುಃಖಗಳಿಂದ ತತ್ತರಿಸಿದ. ಮೆಲ್ಲನೆ ಅಲ್ಲಿಂದ ಹೊರಟು ತನ್ನ ಕೊಠಡಿಗೆ ಬಂದು ಅಂದು ರಾತ್ರಿಯೆಲ್ಲಾ ನಿದ್ರೆಯಿಲ್ಲದೆ ಚಿಂತೆಯಲ್ಲೇ ಕಳೆದನು.
ಮರುದಿನ ಶ್ರೀನಿವಾಸಾಚಾರ ದಂಪತಿಗಳು ತಮ್ಮ ಸಂಬಂಧಿಗಳ ಮನೆಯಲ್ಲಿ ಜರುಗಿದ ಉಪನಯನದ ನೆಪಹೂಡಿ ಆಚಾರರು-ಸರಸ್ವತಮ್ಮನವರಿಗೆ ಬೇಗ ಬರುವ ಆಶ್ವಾಸನೆ ನೀಡಿ ಪ್ರಯಾಣ ಬೆಳೆಸಿದರು.
ಅಂದಿನಿಂದ ಗೋಪಾಲ ಅಚಾರರ ಮನೆಯ ಪರಿಸ್ಥಿತಿಯನ್ನು ಗಮನಿಸಲಾರಂಭಿಸಿದ. ಒಂದೆರಡು ದಿನಗಳಲ್ಲಿಯೇ ಶ್ರೀನಿವಾಸಾಚಾರರ ಮಾತು ನಿಜವೆಂದು ಮನದಟ್ಟಾಯಿತು. ಒಂದು ಮಧ್ಯಾಹ್ನ ಆಚಾರರನ್ನೂ ತಮ್ಮೊಡನೆ ಭೋಜನಮಾಡಬೇಕೆಂದು ಗೋಪಾಲ ಹೇಳಿದಾಗ ವೇಂಕಟನಾಥರು, “ಸ್ವಲ್ಪ ಪಾರಾಯಣ ಮಾಡುವುದಿದೆಯಪ್ಪಾ. ನೀವು ಭೋಜನಮಾಡಿರಿ. ಆನಂತರ ನಾವು ಮಾಡುತ್ತೇವೆ” ಎಂದು ಹೇಳಿ ದೇವರ ಮನೆಗೆ ಹೋಗಿ ಪಾರಾಯಣ ಪ್ರಾರಂಭಿಸಿದರು. ಊಟವಾದ ಮೇಲೆ ವಿದ್ಯಾರ್ಥಿಗಳು ತೆರಳಿದರು. ಸರಸ್ವತಮ್ಮ ನೀರು ತರಲು ಹಿತ್ತಲಿಗೆ ಹೋದಾಗ ಗೋಪಾಲ ಅಡಿಗೆ ಮನೆಗೆ ಹೋಗಿ ದೃಷ್ಟಿಹರಿಸಿದ. ಅಡಿಗೆಯ ಪಾತ್ರೆಗಳೆಲ್ಲಾ ಬರಿದಾಗಿವೆ ! ಉಗ್ರಾಣದಲ್ಲಿ ತಡಕಾಡಿದ. ನಾಲ್ಕಾರು ದಿನಗಳಿಗಾಗುವಷ್ಟು ಮಾತ್ರ ದಿನಸಿ ಪದಾರ್ಥ ಉಳಿದಿದೆ ! ಅವನಿಗೆ ಆಚಾರ ದಂಪತಿಗಳು ರಾತ್ರಿ ಊಟ ಬಿಟ್ಟಂತೆ ಮಧ್ಯಾಹ್ನವೂ ಉಪವಾಸವಿರುವುವರೆಂದು ವ್ಯಕ್ತವಾಗಿ ದುಖಿಃಸುತ್ತಾ ವಿದ್ಯಾಪೀಠಕ್ಕೆ ಬಂದು ವಿದ್ಯಾರ್ಥಿಗಳನ್ನು ಕರೆದು ಅವರಿಗೆ ಆಚಾರರ ಮನೆಯ ಪರಿಸ್ಥಿತಿ ವಿವರಿಸಿ “ನಮಗಾಗಿ ಈ ಕಷ್ಟಕ್ಕೆ ಗುರುಗಳು ಪಾತ್ರರಾಗಿದ್ದಾರೆ. ಅನ್ನ-ಬಟ್ಟೆಕೊಟ್ಟು ಸಾಕಿ ವಿದ್ಯಾದಾನ ಮಾಡುತ್ತಿರುವ ಅವರಿಗೆ ನಾವು ಭಾರವಾಗಿರುವುದು ಯುಕ್ತವೇ ?” ಎಂದು ಹೇಳಲು ಎಲ್ಲರೂ ಗರಬಡಿದವರಂತೆ ಕುಳಿತುಬಿಟ್ಟರು.
ಆಚಾರರ ಶಿಷ್ಯಪ್ರೇಮ, ತ್ಯಾಗಗಳ ಅರಿವಾದಾಗ ಅವರ ಹೃದಯ ತಳಮಳಗೊಂಡಿತು. ಆಗ ಕೃಷ್ಣಮೂರ್ತಿಯೆಂಬ ವಿದ್ಯಾರ್ಥಿಯು “ಗೋಪಾಲ, ಇದಕ್ಕೆ ನೀನೇ ಒಂದು ಉಪಾಯ ಹೇಳು” ಎಂದು ಹೇಳಲು ಗೋಪಾಲನು “ವಾಸು, ನಿನ್ನಣ್ಣನ ಮದುವೆ ನಿಶ್ಚಯವಾಗಿದೆಯಲ್ಲವೇ ? ಲಗ್ನ ಯಾವಾಗ ?” ಎಂದು ಕೇಳಿದನು. “ಇನ್ನು ನಾಲ್ಕಾರು ದಿನಗಳಲ್ಲಿ, ಅಂದರೆ ಚೈತ್ರಶುಕ್ಲ ತ್ರಯೋದಶೀ ದಿನವೇ ಲಗ್ನ” ಎಂದನು ವಾಸು. ಆಗ ಗೋಪಾಲನು “ಹಾಗಾದರೆ ಸರಿ. ನಾವೆಲ್ಲ ಲಗ್ನಕ್ಕೆ ಹೋಗಿಬರುವುದಾಗಿ ಹೇಳಿ ಹೊರಟುಬಿಡೋಣ. ಮುಂದೆ ಅನುಕೂಲ ಪರಿಸ್ಥಿತಿಯುಂಟಾದಾಗ ಮತ್ತೆ ಬಂದು ವಿದ್ಯಾಭ್ಯಾಸ ಮಾಡೋಣ” ಎಂದನು. ಎಲ್ಲರೂ ಗೋಪಾಲನ ಮಾತನ್ನು ಸಮರ್ಥಿಸಿದರು. ಮರುದಿನ ಎಲ್ಲ ವಿದ್ಯಾರ್ಥಿಗಳೂ ಆಚಾರರಲ್ಲಿ ವಾಸುವಿನ ಅಣ್ಣನ ವಿವಾಹ ವಿಚಾರ ಹೇಳಿ ಲಗ್ನಕ್ಕೆ ಹೋಗಿ ಐದಾರು ದಿನಗಳಲ್ಲಿ ಮರಳಿ ಬರುವುದಾಗಿ ಹೇಳಿ ಅಪ್ಪಣೆ ಬೇಡಿದರು. ಆಚಾರರು “ಗೋಪಾಲ, ವಾಸು ಲಗ್ನಕ್ಕೆ ಹೋಗಬೇಕಾದ್ದು ಯುಕ್ತ. ಆದರೆ ಅಲ್ಲಿ ಅನವಶ್ಯಕವಾಗಿ ಕುಳಿತು ಕಾಲ ಕಳೆಯಬೇಡಿ. ವಿದ್ಯಾಭ್ಯಾಸಕ್ಕೆ ತೊಂದರೆಯಾದೀತು. ಬೇಗ ಬಂದುಬಿಡಿ” ಎಂದು ಹೇಳಿದರು. ಎಲ್ಲರೂ ಗುರುಗಳಿಗೂ, ಸರಸ್ವತಮ್ಮನಿಗೂ ನಮಸ್ಕರಿಸಿ, ಲಕ್ಷ್ಮೀನಾರಾಯಣವನ್ನು ಮುದ್ದಿಸಿ ಗುರುಗಳ ಅಪ್ಪಣೆ ಪಡೆದು ಹೊರಟುಬಿಟ್ಟರು.
ವೇಂಕಟನಾಥರ ಸಂಸಾರ ಬಹುಕಷ್ಟದಿಂದ ಜರುಗುತ್ತಿತ್ತು. ಒಂದುದಿನ ಊಟಕ್ಕಿದ್ದರೆ ಎರಡು ದಿನ ಉಪವಾಸ ಮಾಡಬೇಕಾಗುತ್ತಿತ್ತು. ಉಡಲು ಸರಿಯಾದ ಬಟ್ಟೆಗಳೂ ಇರಲಿಲ್ಲ. ಮಗು ಲಕ್ಷ್ಮೀನಾರಾಯಣನಿಗೆ ಹಾಲು ದೊರಕುವುದೂ ದುರ್ಲಭವಾಗಿತ್ತು. ಇಷ್ಟು ತಾಪತ್ರಯವಿದ್ದರೂ ಸಾಧಿ ಸರಸ್ವತಮ್ಮ ಒಂದು ದಿನವೂ ಪತಿಯ ಬಳಿ ಬಾಯಿಬಿಟ್ಟು ತಮ್ಮ ಕಷ್ಟವನ್ನು ಉಸುರುತ್ತಿರಲಿಲ್ಲ. ಪತಿಯು ಸಿಟ್ಟಾಗುತ್ತಿರಲಿಲ್ಲ. ಅವರ ಸಂಸಾರ ಆದರ್ಶವಾಗಿತ್ತು. ಯದೃಚ್ಛಾಲಾಭ ಸಂತುಷ್ಟರಾದ ಆ ದಂಪತಿಗಳು ಭಗವಂತನನ್ನೇ ನಂಬಿ, ಬಡತನವನ್ನು ಹರುಷದಿಂದಲೇ ಭೋಗಿಸುತ್ತಿದ್ದರು. ಅವರಿಗೆ ತಕ್ಕಮಗ ಲಕ್ಷ್ಮೀನಾರಾಯಣ. ಇತರ ಬಾಲಕರಂತೆ ಅದು ಬೇಕು, ಇದು ಬೇಕೆಂದು ಹಟಮಾಡುತ್ತಿರಲಿಲ್ಲ. ತಾಯಿ ಊಟಕ್ಕೆ ಕರೆದಾಗ ಬರುವುದು, ಇದ್ದುದನ್ನು ಉಣ್ಣುವುದು. ಅಷ್ಟರಿಂದಲೇ ಅವನಿಗೆ ತೃಪ್ತಿ. ಅದು ಅವನ ಸ್ವಭಾವವಾಗಿ ಹೋಗಿತ್ತು. ಹಸಿವೆಂದು ಸಹ ಹೇಳುತ್ತಿರಲಿಲ್ಲ, ಪಾಪ ಆ ಮಗು ! ಅದನ್ನು ಬಲ್ಲ ತಾಯಿ-ತಂದೆಯರ ಮನಮಿಡಿಯುತ್ತಿತ್ತು. ಹೀಗೆ ಸಾಗಿತ್ತು ವೇಂಕಟನಾಥರ ಸಂಸಾರ.
ಒಂದು ದಿನ ಆಚಾರರು ದೇವರ ಪೂಜೆ ಮಾಡುತ್ತಿದ್ದಾರೆ. ಸರಸ್ವತಮ್ಮ ಖಿನ್ನಮನಸ್ಕರಾಗಿ ತಲೆತಗ್ಗಿಸಿ ನಿಂತಿದ್ದಾರೆ. ಅದನ್ನು ಕಂಡು “ಸರಸ್ವತಿ, ಹೀಗೇಕೆ, ನಿಂತಿರುವೆ” ಎಂದರು ಆಚಾರರು, ಸರಸ್ವತಮ್ಮ ತಲೆಯೆತ್ತದೆಯೇ “ಸ್ವಾಮಿ, ನಾನು ಪಾಪಿ, ದೇವರಿಗೆ ಇಂದು ನೇವೇದ್ಯವನ್ನು ತಂದಿಡುವ ಭಾಗ್ಯವೂ ನನಗಿಲ್ಲ !” ಎಂದರು.
ವೇಂ : (ನಸುನಕ್ಕು) ಅದಕ್ಕಾಗಿ ಏಕೆ ಚಿಂತಿಸುವೆ ? “ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ಷ್ಯಾ ಪ್ರಯಚ್ಛತಿ | ತದಹಂ ಭುಪಹೃತಂ ಅಶ್ಚಾಮಿ ಪ್ರಿಯತಾತ್ಮನಾಮ್ ||” ಸರಸ್ವತಿ ಕೇಳು - ಶ್ರೀಕೃಷ್ಣ ಅರ್ಜುನನಿಗೆ ಉಪದೇಶಿಸುತ್ತಿರುವಾಗ “ಅರ್ಜುನಾ ! ನನ್ನನ್ನು ಆರಾಧಿಸುವುದು ಕಷ್ಟವೆಂದು ಭಾವಿಸಬೇಡ. ಒಂದು ದಳ ಶ್ರೀತುಳಸಿ, ಒಂದು ಹೂವು, ಒಂದು ಉದ್ದರಣೆ ನೀರು, ತೆಂಗಿನಕಾಯಿ ಅಥವಾ ಫಲಗಳನ್ನು ಭಕ್ತಿಯಿಂದ ಅರ್ಪಿಸಿದರೂ ಸಾಕು. ನಾನು ಭಕ್ತಿಯಿಂದ ಸಮರ್ಪಿಸಿದ ಅವನ್ನೇ ಸ್ವೀಕರಿಸಿ ಸಂತುಷ್ಟನಾಗುತ್ತೇನೆ” ಎಂದು ಅಪ್ಪಣೆ ಕೊಟ್ಟಿದ್ದಾನೆ. ಅಂದರೆ ಅನಿಷಿದ್ಧವಾದ ಪದಾರ್ಥವೇನನ್ನಿತ್ತರೂ ಭಕ್ತವತ್ಸಲನಾದ ಆ ಪ್ರಭು ಸ್ವೀಕರಿಸಿ ತುಷ್ಟನಾಗುವನು. ಅವನು ಭಕ್ಷ್ಯ-ಭೋಜ್ಯಗಳನ್ನೇನೂ ಅಪೇಕ್ಷಿಸುವುದಿಲ್ಲ. ಪೂರ್ಣಕಾಮನಾದ ಸ್ವಾಮಿಗೆ ಅದರಿಂದಾಗಬೇಕಾದುದೇನೂ ಇಲ್ಲ, ಪ್ರಭು ನಮ್ಮ ಭಕ್ತಿಯನ್ನು ನೋಡುವನೇ ಹೊರತು ಅರ್ಪಿಸಿರುವ ಪದಾರ್ಥಗಳನ್ನಲ್ಲ! ತುಳಸೀಪತ್ರ, ಶುದ್ಧೋದಕಗಳಿಂದಲೇ ಅವನು ತೃಪ್ತನಾಗುವನು. ಇನ್ನೊಂದು ವಿಚಾರ, ಸರಸ್ವತಿ, ನಮ್ಮ ಪ್ರಭುವು ಅಣುರೇಣು- ತೃಣಕಾಷ್ಟಗಳಲ್ಲಿಯೂ ವ್ಯಾಪ್ತನಾಗಿದ್ದಾನೆ. ಭಕ್ಷ್ಯ-ಭೋಜ್ಯ, ಅನ್ನ, ಸಾರು, ಪಾಯಸ, ವ್ಯಂಜನಾದಿಗಳನ್ನೆಲ್ಲಾ ತತ್ತದ್ರೂಪಗಳಿಂದ ವ್ಯಾಪ್ತನಾಗಿದ್ದಾನೆ. ನಮ್ಮ ಬಿಂಬಮೂರ್ತಿಯಾದ ಶ್ರೀಹರಿಯೂ, ಆಯಾ ಪದಾರ್ಥಗಳಲ್ಲಿ ಆಯಾರೂಪಗಳಿಂದಿರುವ ಪರಮಾತ್ಮನೂ ಒಬ್ಬನೇ ಎಂದು ಚಿಂತಿಸುವುದೇ ನೇವೇದ್ಯ ! ಅದನ್ನು ಮಾಡಿದರೂ ಅವನು ಸಂತುಷ್ಟನಾಗುತ್ತಾನೆ.
ಪತಿಯ ಮಾತುಗಳನ್ನಾಲಿಸುತ್ತಿದ್ದಂತೆ ಸರಸ್ವತಮ್ಮ ಪುಳಕಿತರಾದರು. ಆಹಾ! ನನ್ನ ಪತಿ ಎಂತಹ ತತ್ವಜ್ಞಾನಿ ಎಂದಾನಂದವಾಯಿತು. ಕಣ್ಣಾಲೆಗಳು ತೇವಗೊಂಡವು, ಏನು ಹೇಳಲೂ ತೋಚದೆ, ಸ್ತ್ರೀ ಸಹಜವಾಗಿ ಅಂಜುತ್ತಲೇ “ಸ್ವಾಮಿ, ವೈಶ್ವದೇವ, ಬಲಿಹರಣ ?” ಎಂದರು. ಆಚಾರ್ಯರು ನಕ್ಕು “ದೇವದೇವನಿಗೇ ಮಾನಸಿಕವಾಗಿ ನೇವೇದ್ಯ ಸಮರ್ಪಿಸಿದ ಮೇಲೆ ಉಳಿದ ವಿಚಾರ ಹೇಳುವುದೇನಿದೆ ? ಅದನ್ನು ಮಾನಸಿಕವಾಗಿ ಮಾಡಿದರಾಯಿತು !” ಎಂದರು. ಸರಸ್ವತಮ್ಮನಿಗೆ ತಡೆಯಲಾಗಲಿಲ್ಲ. ಬಿಕ್ಕುತ್ತಾ “ಸ್ವಾಮಿ, ಶರೀರಮಾದ್ಯಂ ಖಲು ಧರ್ಮಸಾಧನಂ”, ಧರ್ಮಸಾಧನವಾದ ಶರೀರಪೋಷಣೆಯು ಮುಖ್ಯವಲ್ಲವೆ ? ಶಾಸ್ತ್ರಾರ್ಥಚಿಂತನ-ಪಾಠಪ್ರವಚನ ಮಾಡಲು ದೇಹಕ್ಕೆ ಸ್ವಲ್ಪ ಶಕ್ತಿಯಾದರೂ ಬೇಕಲ್ಲವೇ ?” ಎಂದು ಅಳಹತ್ತಿದರು.
ವೇಂಕಟನಾಥರಿಗೆ ಪತ್ನಿಯ ದುಃಖದ ಅರಿವಾಯಿತು. ಅವರು ನಗುತ್ತಾ “ಸರಸ್ವತಿ, ಅಶಾಶ್ವತವಾದ ದೇಹಸಂರಕ್ಷಣೆಗಾಗಿ ಚಿಂತಿಸುವುದು ತರವಲ್ಲ. ನಮ್ಮ ಮನಸ್ಸು, ಗುರಿ ಶಾಶ್ವತ ಸುಖದತ್ತಲೇ ಇರಬೇಕು. 'ಸ ರಕ್ಷಿತಾ ರಕ್ಷಿತಿ ಯೋ ಹಿ ಗರ್ಭ', ತಾಯಿಯ ಗರ್ಭದಲ್ಲಿರುವಾಗ ಸಂರಕ್ಷಿಸುವ ಪ್ರಭುವು ಈಗ ಕಾಯದಿರುವನೇ ? ಸರಸ ! ನಮ್ಮ ಕನಕದಾಸರು ಈ ವಿಚಾರವಾಗಿ ಮನಸ್ಸಿಗೆ ಉಪದೇಶಿಸಿದ್ದಾರಲ್ಲ, ಅದಾವ ಪದ ಹೇಳು, ಕೇಳೋಣ' ಎಂದರು. ಸರಸ್ವತಮ್ಮ
“ತಲ್ಲಣಿಸದಿರು ಕಂಡ್ಯಾ ತಾಳುಮನವೇ ಎಲ್ಲರನು ಸಲುಹುವನು ಇದಕೆ ಸಂಶಯವಿಲ್ಲ
ಬೆಟ್ಟದ ತುದಿಯಲ್ಲಿ ಹುಟ್ಟಿದವೃಕ್ಷಕ್ಕೆ | ಕಟ್ಟೆಯನು ಕಟ್ಟಿ ನೀರೆರೆದರಾರೋ
|
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು | ಗಟ್ಟಾಗಿ ರಕ್ಷಿಪನು ಇದಕೆ ಸಂಶಯಬೇಡ ಎಂದು ಹಾಡುತ್ತಾ ಕಣ್ಣೀರು ಸುರಿಸಿದರು.
ವೇಂ : ಸರಸ್ವತಿ, ಉದ್ವಿಗ್ನಳಾಗಬೇಡ, ಜಗತ್ತನ್ನೇ ರಕ್ಷಿಸುವ ಸ್ವಾಮಿಯು ನಮ್ಮ ಕೈಬಿಡುವುದಿಲ್ಲ. ಇಂತು ಅನಿಮಿತ್ತ ಬಂಧುವಾಗಿ ಕಾಯುತ್ತಿರುವ ಪ್ರಭುವಿನಲ್ಲಿ ಭಕ್ತಿಯಿಡದೆ. ನಾವು ಐಹಿಕವಸ್ತುಗಳಿಗಾಗಿ ಚಿಂತಿಸುತ್ತಾ ಬಳಲುತ್ತಿದ್ದೇವೆ. ನಾವೆಂಥ ಪಾಪಿಗಳು. ಒಂದು ದಿನವಾದರೂ ನೆಮ್ಮದಿಯಿಂದ ಭಗವಂತನನ್ನು ಆರಾಧಿಸುವುದಿಲ್ಲ. ಭಜಿಸುತ್ತಿಲ್ಲ. ನೆನೆಸುತ್ತಿಲ್ಲ ! ನಾವು ಕೃತಘ್ನರಲ್ಲವೇ ? ನಮ್ಮ ಪೂರ್ವಾರ್ಜಿತ ಪಾಪ ಮಹತ್ತಾಗಿ ಕಾಡುತ್ತಿರಲು ಅದನ್ನು ಅನುಭೋಗಿಸಬೇಕಲ್ಲದೆ338 ಅದಕ್ಕಾಗಿ ದೇವರನ್ನು ದೂರಬಾರದು. ನಮ್ಮ ಸರ್ವೆಂದ್ರಿಯಗಳೂ ಆ ಭಗವಂತನಲ್ಲಿ ಆಸಕ್ತವಾಗಬೇಕು. ಅವು ಇತರತ್ರ ಚಲಿಸಬಾರದು - ಎಂದು ಆದಿಗುರುಗಳಾದ ಶ್ರೀಮದಾಚಾರ್ಯರು 'ಎಲೈ ಮಾನವನೇ, ಶ್ರೀಹರಿಯ ಪಾದದಲ್ಲಿ ವಿನಮ್ರಮನಸಿಟ್ಟು, ಅವನು ಉಪದೇಶಿಸಿರುವ, ನಿಮಗೆ ವಿಹಿತವಾದ ಕರ್ಮಗಳನ್ನು ಮಾಡುತ್ತಾ, ನಿನ್ನ ಕರ್ಮಾನುಸಾರವಾಗಿ ಅದರ ಫಲವನ್ನು ಅನುಭವಿಸುತ್ತಾ, ಶ್ರೀಹರಿಯೇ ಸರ್ವೋತ್ತಮನು, ಅವನೇ ತಂದೆ, ತಾಯಿ ಗತಿಯಾಗಿದ್ದಾನೆ, ಪರಾತ್ಪರನೂ. ಪುರುಷೋತ್ತಮನೂ ಆದ ಅವನನ್ನು ಬಿಟ್ಟು ಪೂಜನಿಯವಸ್ತುವು ಬೇರೊಂದಿಲ್ಲ. ಆದ್ದರಿಂದ ಈ ಲೌಕಿಕವಾದ, ಶುಷ್ಕವಾದ ವಿಚಾರಮಾಡುವುದ್ದನು ಬಿಟ್ಟು ಪರಮಾತ್ಮನ ಪಾದಗಳಲ್ಲಿ ನಿನ್ನ ಮನಸ್ಸನ್ನು ನಿಲಿಸು”339 ಎಂದು ಉಪದೇಶಿಸಿದ್ದಾರೆ. ಸರಸ್ವತಿ, ಪೂಜ್ಯ ವಿಜಯೀಂದ್ರರಂಥ ಜ್ಞಾನಿಗಳು, ಅಂಥವರೂ ಶ್ರೀಹರಿಯಲ್ಲಿ ಏನು ಮೊರೆಯಿಟ್ಟಿದ್ದಾರೆ ಬಲ್ಲೆಯಾ ?
“ಸುಕೃತಂ ತಿಲಮಾತ್ರತುಲ್ಯಮೀಶ ಕ್ರಿಯತೇ ನೈವ ಮಯೇಕವತ್ಸರೇSಪಿ |
ಅಪಿತು ಕ್ರಿಯತೇ ಸದಾಘಪೂಗಃ ಪ್ರತಿಯಾಮಂ ಸಕಲೇಂದ್ರಿಯೇ ರ್ಮುಕುಂದ ||”
“ಹೇ ಮುಕುಂದ ! ಒಂದು ದಿನವೂ ನಾನು ಪುಣ್ಯಕಾರ್ಯಮಾಡಲಿಲ್ಲ. ನಿನ್ನನ್ನು ಸೇವಿಸಬೇಕಾದ ಸರ್ವೆಂದ್ರಿಯಗಳಿಂದಲೂ ಪ್ರತಿಕ್ಷಣವೂ ಪಾಪಕಾರಗಳನ್ನೇ ಮಾಡುತ್ತಿದ್ದೇನೆ !” ಹೀಗೆ ವಿವಿಧ ರೀತಿಯಿಂದ ಶ್ರೀಹರಿಯನ್ನು ಸ್ತುತಿಸಿ, “ಪ್ರಪಂಚದಲ್ಲಿ ಎಷ್ಟೋ ಜನ ಪಾಪಿಗಳಿದ್ದಾರೆ. ಆದರೆ ದೇವ. ಮೂರುಲೋಕಗಳಲ್ಲಿರುವ ಪಾಪಗಳೆಲ್ಲವೂ ನನ್ನೊಬ್ಬನಲ್ಲೇ ಮನೆಮಾಡಿವೆ ! ನನ್ನಂಥ ಪಾಪಿ ಬೇರೊಬ್ಬರಿಲ್ಲ !” ಎಂದು ತಳಮಳಿಸಿ, ಕೊನೆಗೆ -
“ಪ್ರಕೃತೈತದಘಾತ್ರಮುಕ್ತಿರ್ನಭವೇತ್ ಕೈರಸಿ ತೇ ದಯಾಂ ವಿನಾದ |
ಕರುಣಾಂ ಕುರು ಮಯ್ಯತೋ ದಯಾಲೋ ನತಯಸ್ಕ ಕಮಲೇಶದ ಸಂತ್ವನಂತಾಃ ||”
“ಪ್ರಾರಬ್ಧಕರ್ಮಣಃ ಭೋಗಾದೇವ ಪರಿಕ್ಷಯಃ |”
“ಕುರು ಭುಂಕ್ಷ್ಯಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾಸತತಂ ಹರಿರೇವವರೋ ಹರಿರೇವಗುರುಃ ಹರಿರೇವ ಜಗತ್ತಿತೃಮಾತೃಗತಿಃ || ನತತೋಗ್ಯಪರಂ ಪರಮೀಡತಮಂ ಪರಮಾತರತಃ ಪುರುಷೋತ್ತಮತಃ ತದಲಂ ಬಹುಲೋಕವಿಚಿಂತನಯಾ ಪ್ರವಣಂಕುರುಮಾನಸಮೀಸಪದೇ '
ಹೇ ದಯಾಘನ ! ಇಂತಹ ಪಾಪಪರಿಹಾರವು ನಿನ್ನ ದಯೆಯಿಲ್ಲದೆ ಮತ್ತಾರಿಂದಲೂ ಉಂಟಾಗಲಾರದು. ಆದ್ದರಿಂದ ಕಮಲೇಶ ! ನನ್ನಲ್ಲಿ ಕರುಣೆತೋರಿ ಉದ್ದರಿಸು. ಸ್ವಾಮಿ, ನಿನಗೆ ಅನಂತ ನಮಸ್ಕಾರ” ಎಂದು ನಮ್ಮಂಥ ಜನರಿಗಾಗಿ ದೇವನಲ್ಲಿ ಯಾಚಿಸಿದ್ದಾರೆ ! ಅಂದಮೇಲೆ ಜಗದೊಡೆಯನಲ್ಲಿ ನಮ್ಮ ಮನಸ್ಸು ಸದಾ ನೆಲೆಗೊಳಿಸಲು ಯತ್ನಿಸಬೇಕಲ್ಲವೆ ? ಆ ಪ್ರಭುವನ್ನು ಮರೆತು ಡಂಭಾಚಾರದಿಂದ ಮೆರೆಯುತ್ತಿದ್ದೇವೆ ! ನಮ್ಮಂತಹ ಪಾಪಿಗಳು ಮತ್ತಾರಿದ್ದಾರೆ?” ಎಂದು ಹೇಳುತ್ತಾ ವೇಂಕಟನಾಥರು ಮೈಮರೆತು ಪರಮಾತ್ಮನಲ್ಲಿ ಮೊರೆಯಿಟ್ಟರು -
“ಪತಿತರೋಳು ಎನ್ನಂಥ ಪತಿತರೊಬ್ಬರ ಕಾಣೆ | ಗತಿಯ ನೀನಲ್ಲದಲೆ ಅನ್ಯರಿಲ್ಲ ||
ಪತಿತಪಾವನನೆಂಬೊ ಬಿರುದುಂಟು ಮಾಡುವ | ಕ್ಷಿತಿಪತಿ ಶ್ರೀಕೃಷ್ಣರಾಯ ನೀನಹುದೋ |”
ಹೇ ದಯಾಘನ ! ಸ್ವಾಮಿ,
“ದಾರಿದ್ರವೆಂಬ ರಕ್ಕಸಿ ಹಿಡಿದೆನ್ನ ! ಹೀರಿ ಹಿಪ್ಪಿ ಮಾಡುತ್ತಾಳೆ ತಾಳಲಾರೆ,
ಸಂಸಾರವೆಂಬ ಮಾರಿಯಿಂದ ಬಲುನೊಂದೆನೋ | ಆರುಮಂದಿ ವೈರಿಗಳನ್ನ ಸುತ್ತಮುತ್ತ ಹೋರಿ ತಮ್ಮ ವಿಷಯಗಳಿಗೆನ್ನ ಸೆಳೆಯುತ್ತಾರೆ ! ಸಿರಿಕೃಷ್ಣ ! ಎನ್ನ ನೀ ಸಲಹಯ್ಯ ||” ಈ ಎಲ್ಲ ದುಃಖಗಳನ್ನು ಪರಿಹರಿಸಲು ಹೇ ದೇವ ನನ್ನ ಮನಮಂದಿರಕ್ಕೆ ಚಿತ್ತೈಸು ಪ್ರಭು !
“ಬಲಿಯಮನೆಗೆ ವಾಮನಬಂದಂತೆ | ಭಗೀರಥನಿಗೆ ಶ್ರೀಗಂಗೆ ಬಂದಂತೆ | ಮುಚುಕುಂದಗೆ ಶ್ರೀಮುಕುಂದಬಂದಂತೆ ! ವಿದುರನಮನೆಗೆ ಶ್ರೀಕೃಷ್ಣ ಬಂದಂತೆ || ವಿಭೀಷಣನಮನೆಗೆ ಶ್ರೀರಾಮಬಂದಂತೆ | ನಿನ್ನ ನಾಮವು ಬಂದು
ಎನ್ನ ನಾಲಿಗೆಯಲಿ | ನಿಂದು ಸಲಹಲಿ ಶ್ರೀಪುರಂದರವಿಠಲ ||”
ಆಚಾರ್ಯರು ಮೈಮರೆತು ಭಾವಸಮಾಧಿಯಲ್ಲಿ ಮಗ್ನರಾದರು. ಪತಿಯ ಪರವಶತೆಯನ್ನು ಕಂಡು ಸರಸ್ವತಮ್ಮನವರ ಮೈ ರೋಮಾಂಚನಗೊಂಡಿತು. “ಮಹಾಜ್ಞಾನಿಯೂ, ಮಹಾತ್ಮನೂ ಆದ ಪತಿಯ ಮುಂದೆ ನಾನು ಐಹಿಕ ವಿಚಾರಗಳ ಬಗ್ಗೆ ಬಡಬಡಿಸಿ, ಅವರ ಮನಸ್ಸಿಗೆ ನೋವುಂಟು ಮಾಡಿದೆನಲ್ಲಾ” ಎಂದವರು ಪರಿಪರಿಯಿಂದ ದುಃಖಿಸಿದರು.
ಮರುದಿನ ಎಂದಿನಂತೆ ಬೆಳಗಿನ ಝಾವ ಸರಸ್ವತಮ್ಮ ಎದ್ದು ಕಾಲಕೃತ್ಯ ತೀರಿಸಿ, ಬೀದಿಬಾಗಿಲು, ಅಂಗಳ, ತುಳಸೀಕಟ್ಟೆಗಳನ್ನು ಸಾರಿಸಿ, ರಂಗವಲ್ಲಿ - ಕೆಮ್ಮಣ್ಣುಗಳಿಂದ ಶೃಂಗರಿಸಿ, ಮೈತೊಳೆದು ಮಡಿಯುಟ್ಟು, ತುಳಸೀಪೂಜೆಯನ್ನು ಮಾಡಿ, ಪತಿಯು ದೇವರ ಪೂಜೆಯಲ್ಲಿ ಆಸಕ್ತರಾದ ಮೇಲೆ ಗೋಪೂಜೆಗಾಗಿ ಕೊಟಗಿಗೆ ಪೂಜಾಸಾಮಗ್ರಿಗಳೊಡನೆ ತೆರಳಿದರು.
ಗೋಪೂಜೆಯ ಪದವನ್ನು ಹಾಡುತ್ತಾ ಸರಸ್ವತಮ್ಮ ಲಕ್ಷ್ಮಿಯ (ಗೋವು) ಮುಖ ತೊಳೆದು ಮಂಗಳದ್ರವ್ಯಗಳಿಂದ ಅಲಂಕರಿಸಿ, ಹೂಗಳ ಮಾಲೆಹಾಕಿ, ಆರತಿ ಬೆಳಗಿ ಒಂದು ಮರದಲ್ಲಿ ಹಸಿಹುಲ್ಲನ್ನು ಮುಂದಿಟ್ಟು, "ತಾಯಿ, ಲಕ್ಷ್ಮೀ, ಇಂದು ನಿನಗೆ ಸಕ್ರಮವಾಗಿ ಗ್ರಾಸವನ್ನಿಡುವ ಭಾಗ್ಯ ನನಗಿಲ್ಲವಮ್ಮ ! ಈ ಹುಲ್ಲನ್ನೇ ತಿಂದು ಆಶೀರ್ವದಿಸಮ್ಮ” ಎಂದು ಪ್ರಾರ್ಥಿಸಿ ಕರುವನ್ನು ಹಾಲು ಕುಡಿಯಲು ಬಿಚ್ಚಿ ಬಿಟ್ಟು ಹಿಂದುರಿಗಿದರು. ಎರಡು ಹೆಜ್ಜೆ ಮುಂದಿಟ್ಟಾಗ ಏನೋ ಎಳೆದಂತಾಗಲು ಹಿಂದಿರುಗಿ ನೋಡಿದರು. ಏನಾಶ್ಚರ್ಯ ! ಗೋವು ಸರಸ್ವತಮ್ಮನ ಸೆರಗನ್ನು ಬಾಯಿಯಲ್ಲಿ ಕಚ್ಚಿ ಹಿಡಿದೆಳೆಯುತ್ತಿದೆ ! ಹಾಲು ಕುಡಿಯಲು ಬಿಡದೆ ಕರುವನ್ನು ಒದೆಯುತ್ತಿದೆ ! ಹತ್ತಿರ ಬರದಂತೆ ತಡೆಯುತ್ತಿದೆ.
ಸರಿಯಾದ ಆಹಾರವಿಲ್ಲದೆ, ಸೊರಗುತ್ತಿರುವ ಲಕ್ಷ್ಮೀ ಮತ್ತು ಕರುವನ್ನು ಕಂಡ ತಾವು ಲಕ್ಷ್ಮೀನಾರಾಯಣನಿಗಾಗಿ ಹಾಲು ತೆಗೆದುಕೊಳ್ಳುತ್ತಿದ್ದುದರಿಂದ ಕರುವಿಗೆ ಹಾಲಿಲ್ಲದಂತಾಗುವುದೆಂದು ಭಾವಿಸಿ, ತಮ್ಮ ಮಗನಿಗಾಗಿ ಹಾಲು ಕರೆದುಕೊಳ್ಳುತ್ತಿದ್ದುದನ್ನು ನಾಲ್ಕಾರು ದಿನದಿಂದ ನಿಲ್ಲಿಸಿದ್ದರು. ಅದೆಲ್ಲವೂ ಒಂದು ಕ್ಷಣದಲ್ಲಿ ಸರಸ್ವತಮ್ಮನವರ ಮನಸ್ಸಿನಲ್ಲಿ ಸುಳಿದಾಡಿತು ! ಇಲ್ಲಿ ನೋಡಿದರೆ ಲಕ್ಷ್ಮೀಯು ಕರುವು ಹಾಲು ಕುಡಿಯಲು ಬರದಂತೆ ಒದೆಯುತ್ತಿದ್ದಾಳೆ ! ಗೋವಿನ ಕಣ್ಣುಗಳಲ್ಲಿ ನೀರು ಸುರಿಯುತ್ತಿದೆ. ಅದನ್ನು ಕಂಡು ಸರಸ್ವತಮ್ಮನವರಿಗೆ ಮೈ ಕಂಪಿಸಿತು. ಹೃದಯಕರಗಿ ನೀರಾಯಿತು, ಆನಂದಬಾಷ್ಪ ಹರಿಯಿತು, “ಆಹಾ ತಾಯಿ, ನೀನೆಂಥ ದಯಾಮಯಿ ! ನನ್ನ ಮಗನಿಗೆ ಹಾಲಿಲ್ಲದ ಮೇಲೆ ನಿನ್ನ ಕಂದನಿಗೂ ಬೇಡವೆಂದು ಅದನ್ನು ತಡೆಯುತ್ತಿರುವೆಯಾ ? ನಮ್ಮ ಕಷ್ಟವರಿತು ಕಣ್ಣೀರಿಡುತ್ತಿರುವೆಯಾ ಲಕ್ಷ್ಮಿ ? ನನ್ನ ಮಗನಲ್ಲಿ ನಿನಗೆಷ್ಟು, ಕರುಣೆಯಮ್ಮಾ, ನನ್ನ ಸೆರಗು ಬಿಡು ತಾಯಿ ಎಂದರು. ಲಕ್ಷ್ಮಿ ಸೆರಗು ಬಿಡಲಿಲ್ಲ. ಏನೋ ಯೋಚಿಸಿ ಸರಸ್ವತಮ್ಮ “ಆಗಲಿ. ನಿನ್ನಿಚ್ಛೆಯಂತೆ ಹಾಲು ಕರೆಯುತ್ತೇನೆ” ಎಂದು ಹೇಳಿ, ಒಂದು ಕಂಚಿನ ತಂಬಿಗೆ ತಂದು ಹಾಲು ಕರೆಯಹತ್ತಿದರು. ಪ್ರತಿದಿನ ಅರ್ಧಪಾವಿನಷ್ಟು ಹಾಲುಕೊಡುತ್ತಿದ್ದ ಲಕ್ಷ್ಮೀ ಇಂದು ತಂಬಿಗೆ ಸೂಸಿ ಹರಿಯುವಂತೆ ಹಾಲನ್ನಿತ್ತುದ್ದನ್ನು ಗಮನಿಸಿ, ವಿಸ್ಮಿತರಾಗಿ, ಅರ್ಧಹಾಲನ್ನು ಕರುವಿಗೆ ತಮ್ಮ ಕೈಯಾರೆ ಕುಡಿಸಿ, ಉಳಿದ ಹಾಲನ್ನು ಸ್ವೀಕರಿಸಿ “ಈಗ ನಿನಗೆ ಸಂತೋಷವಾಯಿತೇ ಲಕ್ಷ್ಮೀ” ಎಂದು ಗೋವಿನ ಮುಖ, ಬೆನ್ನು ಸವರಿದರು. ಲಕ್ಷ್ಮಿಯು ತನ್ನ ಮುಖವನ್ನು ಸರಸ್ವತಮ್ಮನ ಮುಖದತ್ತ ತಂದು ಪ್ರೀತಿಯಿಂದ ಮೂಸಿ, ತನ್ನ ಆನಂದವನ್ನು ವ್ಯಕ್ತಪಡಿಸಿತು ! ಸರಸ್ವತಮ್ಮ ಗೋಮಾತೆಗೆ ನಮಿಸಿ, ಪತಿಯ ಬಳಿಗೈತಂದು ಸಂಭ್ರಮದಿಂದ ಕೊಟಗಿಯಲ್ಲಿ ನಡೆದ ವಿದ್ಯಾಮಾನವನ್ನರುಹಿ ಹಾಲಿನ ತಂಬಿಗೆಯನ್ನು ಪತಿಯ ಮುಂದಿಟ್ಟರು.
ಆಚಾರ್ಯರು ಅಚ್ಚರಿಯಿಂದ “ನೋಡಿದೆಯಾ ಸರಸ್ವತಿ ! ಮಾನವರಾದ ನಾವು ಮಹಾಪ್ರಾಜ್ಞರೆಂದು ಬೀಗುತ್ತೇವೆ. ಮೂಕಪ್ರಾಣಿಗಳಲ್ಲೂ ಎಂತಹ ಪ್ರೀತಿ-ಕಾರುಣ್ಯಗಳಿರುವುವೆಂಬುದನ್ನು ಮರೆತು ಅವನ್ನು ಉದಾಸೀನವಾಗಿ ಕಾಣುತ್ತೇವೆ. ಮಾತನಾಡಲು ಬಾರದಿದ್ದರೂ ಮನೆಯ ಆಗು-ಹೋಗುಗಳನ್ನು ಅವು ತಿಳಿದು, ನಮಗಾಗಿ ಪ್ರೇಮ-ತ್ಯಾಗಗಳನ್ನು, ಕಾರುಣ್ಯವನ್ನೂ ಪ್ರದರ್ಶಿಸುವುವು. ಇದಕ್ಕೆ ಇಂದಿನ ಘಟನೆಯೇ ಸಾಕ್ಷಿ ! ಲಕ್ಷ್ಮಿಯಂತಹ ಮೂಕಪ್ರಾಣಿಗಳು ತೋರುವ ಪ್ರೀತಿ, ಔದಾರ್ಯ, ತ್ಯಾಗಗಳ ಒಂದಂಶವಾದರೂ ಮಾನವರು ತೋರಿದ್ದಾದರೆ, ಜಗತ್ತಿನ ಈ ಜಂಜಾಟ, ದ್ವೇಷಾಸೂಯೆ-ಸ್ವಾರ್ಥಗಳು ಸ್ವಲ್ಪವಾದರೂ ಕಡಿಮೆಯಾಗಿ ಲೋಕಕಲ್ಯಾಣವಾಗುವುದು !” ಎಂದು ಉತ್ತೇಜಿತರಾಗಿ ನುಡಿದರು.
ಸರಸ್ವತಿಯು “ನಿಜ ಸ್ವಾಮಿ, ನಮ್ಮ ಲಕ್ಷ್ಮಿ ದಯಾಮಯಿ” ಎಂದೆನಲು ಆಚಾರ್ಯರು “ಲಕ್ಷ್ಮಿಯು ಹೇಗಿದ್ದರೂ ಹಾಲು ನೀಡಿದ್ದಾಳೆ. ನೈವೇದ್ಯಕ್ಕೆ ಏನೂ ಇಲ್ಲವೆಂಬ ನಿನ್ನ ಕಳವಳವನ್ನು ಕಳೆದಿದ್ದಾಳೆ. ಹಾಲು ಕಾಯಿಸಿ ತೆಗೆದುಕೊಂಡು ಬಾ, ಶ್ರೀಹರಿಗೆ ಸಮರ್ಪಿಸೋಣ” ಎಂದರು. ಸರಸ್ವತಮ್ಮ ಸಂತೋಷದಿಂದ ಹಾಲನ್ನು ಕಾಯಿಸಿ ತಂದರು. ಆಚಾರ್ಯರು ಅದನ್ನು ಶ್ರೀಹರಿಗೆ ನಿವೇದನಮಾಡಿ, ತಾವು ಒಂದು ಉದ್ದರಣೆ ಹಾಲು ಸ್ವೀಕರಿಸಿ, ಪತ್ನಿಗೂ ನೀಡಿ “ಇನ್ನು ನಿನ್ನ ಪುತ್ರನಿಗೆ ಈ ಹಾಲನ್ನು ಕುಡಿಸು, ಲಕ್ಷ್ಮಿಯ ದಯದಿಂದ ಇಂದು ನಮ್ಮೆಲ್ಲರ ಊಟವಾಯಿತಲ್ಲ !” ಎಂದು ನಸುನಕ್ಕರು.
ಮರುದಿನ ಏಕಾದಶೀ, ವೇಂಕಟನಾಥರು ದೇವರ ಪೂಜೆ ಮಾಡಿ, ಪ್ರದಕ್ಷಿಣೆ - ನಮಸ್ಕಾರಗಳನ್ನು ಮಾಡಿ ಕುಳಿತರು. ಖಿನ್ನಮುಖದಿಂದ ನಿಂತಿದ್ದ ಸರಸ್ವತಮ್ಮ “ಸ್ವಾಮಿ ನಿನ್ನೆ ರಾತ್ರಿ ಮನೆಯ ಹಿಂಬಾಗಿಲನ್ನು ಭದ್ರಪಡಿಸುವುದನ್ನು ಮರೆತುಬಿಟ್ಟೆ. ಇಂದು ಬೆಳಿಗ್ಗೆ ನೋಡಿದರೆ ಯಾರೋ ಕಳ್ಳರು ಮನೆ ಹೊಕ್ಕಂತೆ ತೋರುತ್ತದೆ. ಮನೆಯಲ್ಲಿ ಇದ್ದಬದ್ದ ಪಾತ್ರೆ-ಪದಾರ್ಥ, ಬಟ್ಟೆ-ಬರೆಗಳು ಕಾಣೆಯಾಗಿವೆ” ಎಂದರು.
ವೇಂಕಟನಾಥರು ಕ್ಷಣಕಾಲ ಮೌನವಹಿಸಿ ನಂತರ "ಹೂಂ, ದೇವರ ಚಿತ್ರ. ಹೋಗಲಿಬಿಡು. ಆದದ್ದೆಲ್ಲಾ ಒಳಿತೇ ಆಯಿತು” ಎಂದರು. ಆನಂತರ “ಸರಸ್ವತಿ, ಎಂತಹ ಪತಿಯನ್ನು ಆರಿಸಿಕೊಂಡೆಯೇ” ನನ್ನಿಂದ ನಿನಗೆ - ನಿನ್ನ ಮಗನಿಗೆ ಕಿಂಚಿತ್ತೂ ಸುಖವಿಲ್ಲದಂತಾಯಿತು” ಎಂದು ಖಿನ್ನರಾದರು. ಸರಸ್ವತಮ್ಮ “ಹಾಗೆನ್ನದಿರಿ, ನೀವೇ ನನ್ನ ದೇವರು. ನಿಮ್ಮಂತವರ ಕರಪಿಡಿದುದು ನನ್ನ ಸೌಭಾಗ್ಯ, ನನ್ನಂಥ ಸುಖಿ ಬೇರೊಬ್ಬರಿಲ್ಲ. ಬಡತನದ ಬೇಗೆಯಿಂದ ನಾನು ಬಳಲುತ್ತಿರುವೆನೆಂದು ಭಾವಿಸಬೇಡಿ. ಈ ಬಡತನ ನನಗೆ ವರವಾಗಿ ಪರಿಣಮಿಸಿದೆ. ನಿಮ್ಮ ಪ್ರೇಮಾನುಗ್ರಹವೆಂಬ ಆನಂದಶರಧಿಯಲ್ಲಿ ಮುಳುಗೇಳುತ್ತಿದ್ದೇನೆ ಸ್ವಾಮಿ !” ಎಂದರು. ಆಚಾರ್ಯರು ನಕ್ಕು “ಸರಿ ಸರಿ, ವೀಣೆಯನ್ನು ತೆಗೆದುಕೊಂಡು ಬಾ. ಶ್ರೀಹರಿಯನ್ನು ಸ್ತುತಿಸಿ ಕೃತಾರ್ಥರಾಗೋಣ” ಎನಲು ಸರಸ್ವತಮ್ಮ ಲಕ್ಷ್ಮೀನಾರಾಯಣನೊಡನೆ ವೀಣೆ ಹಿಡಿದು ಬಂದು ಪತಿಯ ಮುಂದಿಟ್ಟು ಕುಳಿತರು.
ಆಚಾರರು ಶ್ರೀಪಾದರಾಜರ “ನಾ ನಿನಗೇನೂ ಬೇಡುವುದಿಲ್ಲ | ಎನ್ನ ಹೃದಯಮಂಟಪದಲ್ಲಿ ನಿಂದಿರೋ ಕೃಷ್ಣಾ” ಎಂಬ ಕೃತಿಯನ್ನು ಹಾಡುತ್ತಾ ನುಡಿಸಲಾರಂಭಿಸಿದರು. ಪತ್ನಿಗೂ ಹಾಡುವಂತೆ ಸಂಜ್ಞೆ ಮಾಡಿದರು. ಪತಿ-ಪತ್ನಿಯರಿಬ್ಬರೂ ಗಾಯನದಲ್ಲಿ ತಲ್ಲೀನರಾದರು. ಕೀರ್ತನೆ ಮುಗಿದ ಮೇಲೆ ಲಕ್ಷ್ಮೀನಾರಾಯಣನು ತಾನೂ ಒಂದು ಪದ ಹಾಡುವುದಾಗಿ ಹೇಳಿ ಹಾಡಹತ್ತಿದ್ದನು -
“ತಾಯಿ ಎಂಬೆನೆ ನಿನ್ನ ಧ್ರುವನ್ನ ತಾಯಿ ನಿನ್ನಂತೆ ಕಾಯ್ದಳೇ | ತಂದೆ ಎಂಬೆನೆ ನಿನ್ನ ಪ್ರಹ್ಲಾದನ್ನ ತಂದೆ ನಿನ್ನಂತೆ ಕಾಯ್ದನೇ || ಅವ ಅನಿಮಿತ್ತ ಬಂಧುವೋ ನೀನಾವ ಕಾರುಣ್ಯಸಿಂಧುವೋ !
ದೇವ ಸಿರಿಕೃಷ್ಣ | ನಿನಗೆ ಬಂಟರಲ್ಲಿ ನೆಂಟತನ ಹೊಸ ಪರಿಯಯ್ಯಾ ”
ಶ್ರೀವ್ಯಾಸರಾಜರ ಆ ಕೃತಿಯನ್ನು ಮಗನ ಮುಖದಿಂದ ಕೇಳಿ ಆಚಾರರು ಮುದಿಸಿದರು. ನಂತರ ಸರಸ್ವತಮ್ಮ ಷಣ್ಮುಖಪ್ರಿಯರಾಗದ ಒಂದು ಪದವನ್ನು ಹಾಡಿದರು -
“ಏಕೆ ನಿರ್ದಯನಾದೆ ಎಲೆ ದೇವನೇ
ಶ್ರೀಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ
ಕೆಂಗೆಟ್ಟು ಕಂಬದಲ್ಲಿ ಒಡೆದು ಬಂದು | ಹಿಂಗದೆ ಪ್ರಹ್ಲಾದಗಪ್ಪಿಕೊಂಡೆ ||
ಮಂಗಳಪದವಿತ್ತು ಮನ್ನಿಸಿದೆ, ನಿನಗೆ | ಬಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ ಅಜಮಿಳನು ಅಣ್ಣನೇ ವಿಭೀಷಣನು ತಮ್ಮನೇ ||
ನಿಜದಿ ರುಕ್ಕಾಂಗದನು ನಿನ್ನ ಮೊಮ್ಮಗನೇ ಭಜನೆಗವರೇ ಹಿತರೆ ? ನಾ ನಿನಗೆ ಅನ್ಯನೇ ! ತ್ರಿಜಗಪತಿ ಸಲಹೆನ್ನ ಪುರಂದರವಿಠಲ
ಹಾಡುತ್ತಿರುವಂತೆ ಅವರ ಕಣ್ಣಿಂದ ನೀರು ಹರಿಯಹತ್ತಿತ್ತು. ಆಚಾರ್ಯರು ಮನಮರುಗಿ “ದುಃಖವನ್ನು ಹತ್ತಿಕ್ಕಿ, ಸಂತೋಷವನ್ನು ನೀನೆಷ್ಟು ಪ್ರದರ್ಶಿಸಿದರೂ ಸ್ತ್ರೀ ಸಹಜವಾದ ನಿನ್ನ ಹೃದಯದಳಲನ್ನು ದೇವನಲ್ಲಿ ತೋಡಿಕೊಂಡೆ ! ಸರಸ್ವತಿ, ಎರಡು ದಿನದಿಂದ ಉಪವಾಸ, ಮಗ ನೆನ್ನೆಯಿಂದ ಆಹಾರವಿಲ್ಲದೆ ಬಳಲಿದ್ದಾನೆ - ಈ ಎಲ್ಲ ಸಂಕಟ ನನಗೂ ಇದೆ. ಹೂಂ, ಅಳು, ಸ್ವಾಮಿಯಲ್ಲಿ ನಿನ್ನ ದುಃಖವನ್ನೆಲ್ಲಾ ತೋಡಿಕೊಂಡು ಅತ್ತುಬಿಡು. ಅದರಿಂದ ಮನಸ್ಸಿಗೆ ಸಮಾಧಾನವಾದೀತು” ಎಂದರು.
ಸರಸ್ವತಮ್ಮ ಕಣ್ಣಿರೊರೆಸಿಕೊಂಡು “ಸ್ವಾಮಿ, ದಿನೇ ದಿನೇ ಅಧಿಕವಾಗುತ್ತಿರುವ ಕಷ್ಟದಿಂದ ದುಃಖವಾಯಿತು. ಈ ಬಡತನದ ಬೇಗೆಯನ್ನು ಸಹಿಸುವ ಶಕ್ತಿಯಾದರೂ ಪರಮಾತ್ಮ ಕರುಣಿಸಲಿ ಎಂದು ಮೊರೆಹೊಕ್ಕೆ ಅಷ್ಟೇ” ಎಂದರು. ಆಚಾರ್ಯರು. “ಸರಸ್ವತಿ, ಪ್ರಭು ಕಣ್ಣೆರೆದು ನೋಡಿದರೆ ನಮ್ಮೆಲ್ಲ ಕಷ್ಟಗಳೂ ದೂರವಾಗುವುವು. ಅದಕ್ಕೆ ಅವನಿಗೆ ಮೊರೆಹೋಗೋಣ' ಎಂದರು.
ಶ್ರೀರಾಘವೇಂದ್ರವಿಜಯಕಾರರು ವೇಂಕಟನಾಥರ ದಾರಿದ್ರಾನುಭವವನ್ನು ಹೃದಯವಿದ್ರಾವಕವಾಗಿ ಹೀಗೆ ವರ್ಣಿಸಿದ್ದಾರೆ. ಅತಿಸನಿಹದಲ್ಲಿಯೇ ಲಭಿಸುವ ಸಿರಿ-ಸಂಪತ್ತು ವೈಭವಗಳಿಗೆ ಕಾರಣನಾದ ಶ್ರೀಲಕ್ಷ್ಮೀನಾರಾಯಣನ ಧ್ಯಾನಾಸಕ್ತರಾಗಿದ್ದ, ಸಕಲಶಾಸ್ತ್ರ ಪಾಂಡಿತ್ಯ-ಪಾಠ ಪ್ರವಚನ ಕೌಶಲಗಳಿಂದ ವಿದ್ಯೆಯಲ್ಲಿ ಉನ್ನತಿಯ ಮೇರುಶಿಖರವನ್ನೇರಿ ಕಾಲಕಳೆಯುತ್ತಿದ್ದ ವೇಂಕಟನಾಥರು ಪ್ರಾರಬ್ಧಕರ್ಮವಶದಿಂದ ಕಡುಬಡತನವನ್ನು ಅನುಭವಿಸಿದರು.
ಯುಗಾದಿಯಂತಹ ವರ್ಷಾವಧಿ ಹಬ್ಬದಲ್ಲಿ ಕಡಿಮೆ ಬೆಲೆಯ ದಪ್ಪನಾದ ವಸ್ತ್ರವನ್ನು ಕೊಂಡುಡಲು ಯೋಗ್ಯತೆಯಿಲ್ಲದ ವೇಂಕಟನಾಥರಿಗೆ ಬೆಲೆಬಾಳುವ ನಯವಾದ ವಸ್ತ್ರವಾಗಲೀ, ಪೀತಾಂಬರಗಳಾಗಲೀ ಎಲ್ಲಿಂದ ಬರಬೇಕು ? ವೇಂಕಟನಾಥರ ಆ ದಾರಿದ್ರ ವರ್ಣಿಸಲಸದಳವಲ್ಲ. ಅವರ ಮನೆಯಲ್ಲಿ ದೀಪಾವಳಿಯಂಥ ಹಬ್ಬದಲ್ಲಿ ವರ್ಷಕ್ಕೆ ಒಂದು ಸಲ ಅಭ್ಯಂಜನಕ್ಕೂ ಎಣ್ಣೆ ಇರದಿರುವಾಗ ಪಾಪ, ಅವರಿಗೆ ಊಟಕ್ಕೆ ಹೆಚ್ಚಾದ ತುಪ್ಪವೆಲ್ಲಿಂದ ಬಂದೀತು ? ಅಗ್ನಿಷ್ಟೋಮಾಧಿಕಾರಿಯಾಗದವರು ಜ್ಯೋತಿಷ್ಟೋಮವನ್ನಾಚರಿಸಲು ಸಾಧ್ಯವೇ ?
ವೇಂಕಟನಾಥರಿಗೆ ಕಾಲಕಾಲಕ್ಕೆ ಸರಿಯಾಗಿ ಭೋಜನ ದೊರಕುತ್ತಿರಲಿಲ್ಲ. ದೊರಕಿದರೂ ಎಲೆಯಿಲ್ಲದೆ ಭೂಮಿಯನ್ನು ಸಾರಿಸಿ ಅಲ್ಲೇ ಊಟಮಾಡುತ್ತಿದ್ದರು ! ಎಷ್ಟೋ ದಿನ ಹಸಿವೆಯನ್ನು ತಡೆಯಲಾಗದೆ ಇದ್ದರೂ ಮಾನಸಿಕ ಶಾಂತಿಯಿಂದಲೇ ಅದನ್ನು ಸಹಿಸುತ್ತಿದ್ದರು. ಅದಕ್ಕಾಗಿ ಯಾರಲ್ಲೂ ಯಾಚಿಸುತ್ತಿರಲಿಲ್ಲ. ಆಚಾರ್ ದಂಪತಿಗಳು ಉಡುವ ಬಟ್ಟೆಗಳು ಹರಿದು ಛಿದ್ರವಾಗಿರುತ್ತಿದ್ದವು. ಅದಕ್ಕೆ ಗಂಟು ಹಾಕಿ ಅಥವಾ ಹೊಲಿದು ಅದನ್ನೇ ಉಟ್ಟು ಹೇಗೋ ಕಾಲಯಾಪನೆ ಮಾಡುತ್ತಿದ್ದರು. ಇಂತು ಬಳಲುತ್ತಿದ್ದ ಅವರ ಮನೆಗೆ ಕಳ್ಳರು ಹೊಕ್ಕು ಇದ್ದ ಒಡಕಲು ಪಾತ್ರೆ, ಪದಾರ್ಥ, ಬಟ್ಟೆಗಳನ್ನೂ ಕದ್ದೊಯ್ದರು ! ಆಗ ಆಚಾರರು ಪಶುಯಾಗಕ್ಕೆ ಮೊದಲು ಪ್ರಯಾಜಯಾಗವನ್ನು ಮಾಡುವಂತೆ ಮುಂದೆ ಸನ್ಯಾಸಿಗಳಾದಾಗ ಧರಿಸಬೇಕಾದ ಕೌಪೀನವೊಂದನ್ನೇ ಧರಿಸಿದರಂತೆ. ಲೋಕದಲ್ಲಿ ಶ್ರೀಹರಿಯ ದಿನ ಶುಕ್ಲಪಕ್ಷದಲ್ಲಿ ಒಂದು, ಕೃಷ್ಣಪಕ್ಷದಲ್ಲಿ ಒಂದು, ಹೀಗೆ ತಿಂಗಳಿಗೆ ಎರಡು ಏಕಾದಶೀ ಉಪವಾಸ ಕಂಡುಬಂದಿದೆ. ನಮ್ಮ ವೇಂಕಟನಾಥರ ಮನೆಯಲ್ಲಾದರೋ ಚಾತುರ್ಮಾಸ್ಯದಲ್ಲಿ ಒಂಭತ್ತು ಪ್ರಯಾಜಯಾಗಗಳು ವರ್ಧಿಸುವಂತೆ ತಿಂಗಳಿಗೆ ಐದಾರು ಉಪವಾಸಗಳಾಗುತ್ತಿತ್ತು ! ಹಿಂದೆ ವೇಂಕಟನಾಥರ ಪೂರ್ವಜರು, ಮುಂದೆ ಆಚಾರ್ಯರು ರಾಘವೇಂದ್ರಗುರುಗಳಾದ ಮೇಲೆ, ಅವರ ಅನುಗ್ರಹಾಶೀರ್ವಾದಬಲದಿಂದ ಅವರ ಪೂರ್ವಾಶ್ರಮ ವಂಶೀಕರು ಸಿರಿಸಂಪತ್ತುಗಳಿಂದ ಮೆರೆದರು. ಅದನ್ನು ಗಮನಿಸಿದಾಗ ವೇಂಕಟನಾಥರ ದಾರಿದ್ರಕ್ಕೆ ಸರಿಯಾದ ಸಾದೃಶ್ಯವೇ ದೊರಕದು !
ಇಂತು ವೇಂಕಟನಾಥರು ಕಡುಬಡತನದಿಂದ ಕಷ್ಟಪಡುತ್ತಿದ್ದರೂ, ಅದು ಶ್ರೀಹರಿಯ ಸಂಕಲ್ಪವೆಂದರಿತು ಶ್ರೀಹರ್ಯಪಿ್ರತ ಗಂಧಾಕ್ಷತೆಗಳಿಂದಲಂಕೃತರಾಗಿ, ಭೋಜನಮಾಡಿದವರಂತೆ ಸಂತೋಷದಿಂದ ಶಾಸ್ತ್ರಾರ್ಥವಿಚಾರ, ಪಾಠಪ್ರವಚನಗಳಲ್ಲಿ ಆಸಕ್ತರಾಗಿ ಕಾಲಕಳೆಯುತ್ತಿದ್ದರು. ಆಚಾರ್ಯರ ಧರ್ಮಪತ್ನಿ ಸರಸ್ವತಮ್ಮನವರು ಪತಿಯ ದರ್ಶನ, ಪ್ರೀತಿಯ ನುಡಿ, ಸುಖಸ್ಪರ್ಶಾನಂದಾದಿ- ಗಳಿಂದಲೇ ಸಂತುಷ್ಟರಾಗಿ, ಪತಿಯ ದಾರಿದ್ರಾನುಭವದಲ್ಲಿ ಸಮಭಾಗಿನಿಯರಾಗಿ ಸುಖ-ಸಂತೋಷ-ತೃಪ್ತಿಗಳಿಂದ ಕಾಲವನ್ನು ಕಳೆಯುತ್ತಿದ್ದರು.