|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೪೪. ಅಲಕ್ಷ್ಮಿಗೆ ಆಚಾರ್ಯರ ಆಶ್ರಯ

ಒಂದು ದಿನ ಆಚಾರರು ಸಂಜೆ ತಾಂಬೂಲಚರ್ವಣ ಮಾಡುತ್ತಿರುವಾಗ ಸರಸ್ವತಮ್ಮ ಕುಮಾರ ಲಕ್ಷ್ಮೀನಾರಾಯಣನನ್ನು ಎತ್ತಿಕೊಂಡು ಬಂದಳು. ಆಚಾರರು ಮಗನನ್ನು ತೊಡೆಯ ಮೇಲೆ ಕೂಡಿಸಿಕೊಂಡರು. ಲಕ್ಷ್ಮೀನಾರಾಯಣ ಅಪ್ಪ, ನನಗೆ ಮಂತ್ರಹೇಳಿಕೊಡಪ್ಪಾ” ಎಂದ, ಆಚಾರರು ನಗುತ್ತಾ, “ಮಗು, ಈಗ ನೀನೇನು ಕಲಿತಿರುವೆ ?” ಅಂದರು. ಕುಮಾರ ಹೇಳಿದ - “ಅಮರ, ಶಬ್ದರೂಪಾವಳಿ, ಸಮಾಸಚಕ್ರ, ದೇವರು, ಲಕ್ಷ್ಮಿ, ಹನುಮಂತ, ಈಶ್ವರ, ಪಾರ್ವತಿ, ಗಣಪತಿ, ನವಗ್ರಹಗಳ ಮೇಲಿನ ಸ್ತೋತ್ರಗಳು. ಮಧ್ವಾಚಾರರು ಮತ್ತೆ, ಎಲ್ಲಾ ಗುರುಗಳ ಮೇಲಿನ ಸ್ತೋತ್ರಗಳನ್ನು ಕಲಿತಿದ್ದೇನೆ. ಈ ದಿನ ಹೊಸ ಮಂತ್ರ ಕಲಿತೆ, ಹೇಳುತ್ತೇನೆ ಕೇಳು. 

“ಭಕ್ತಾನಾಂ ಮಾನಸಾಂಭೋಜ ಭಾನವೇ ಕಾಮಧೇನವೇ | 

ನಮತಾಂ ಕಲ್ಪತರವೇ ಜಯೀಂದ್ರ ಗುರವೇ ನಮಃ ||” 

ಮಗನು ಹೇಳಿದ ಗುರುಪಾದ ಶ್ರೀವಿಜಯೀಂದ್ರರ ಚರಮಶ್ಲೋಕ ಕೇಳಿ ಆಚಾರರ ಕಣ್ಣಾಲಿಗಳು ತೇವಗೊಂಡವು. ಆನಂದದಿಂದ ಈ ಪದ್ಯದ ಅರ್ಥ ನಿನಗೆ ಗೊತ್ತೆ ನಾರಾಯಣ?” ಎಂದು ಕೇಳಿದರು. ಲಕ್ಷ್ಮೀನಾರಾಯಣನು “ಓಹೋ ಗೊತ್ತಪ್ಪಾ ಹೇಳೇನೆ ಕೇಳು-ಭಕ್ತರ ಮನಸ್ಸೆಂಬ ಕಮಲಗಳಿಗೆ ಸೂರರಾದ, ನಮಸ್ಕರಿಸುವವರಿಗೆ ಕಾಮಧೇನು, ಕಲ್ಪವೃಕ್ಷರಾದ ಶ್ರೀವಿಜಯೀಂದ್ರಗುರುಗಳಿಗೆ ನಮಸ್ಕಾರ ಸರಿಯೇನಪ್ಪ ?” ಎಂದ. ಆಚಾರರು “ಮಗು, ಇದೆಲ್ಲ ನಿನಗೆ ಯಾರು ಹೇಳಿಕೊಟ್ಟರು?” ಎನಲು ಸರಸ್ವತಮ್ಮನತ್ತ ಕೈತೋರಿ “ಅಮ್ಮ ಹೇಳಿಕೊಟ್ಟಳಪ್ಪಾ. ನಮ್ಮ ಗೋಪಾಲ ಇದ್ದಾನಲ್ಲ, ಅವನು ನನಗೆ ತುಂಬಾ ಪಾಠ ಹೇಳಿಕೊಡುತ್ತೇನೆ ಎಂದ. ನಾನು ಅವನ ಹತ್ತಿರ ಓದಲೇನಪ್ಪಾ ?” ಎಂದು ಮುದ್ದುಮುದ್ದಾಗಿ ಅನ್ನಲು ಆಚಾರರು “ಆಗಲಿ ಗೋಪಾಲನ ಹತ್ತಿರ ಓದು ಆಮೇಲೆ ನಾನೇ ಪಾಠ ಹೇಳುತ್ತೇನೆ” ಎಂದು ಮಗನನ್ನು ತಮ್ಮ ಶಿಷ್ಯ ಗೋಪಾಲನ ಹತ್ತಿರಕ್ಕೆ ಕಳಿಸಿದರು. 

ಸರಸ್ವತಮ್ಮ “ನಿಮ್ಮ ಶಿಷ್ಯರೆಲ್ಲಾ ಮಗುವಿನಲ್ಲಿ ತುಂಬಾ ಪ್ರೀತಿ ಮಾಡುತ್ತಾರೆ. ಗೋಪಾಲನಿಗಂತೂ ಇವನೆಂದರೆ ಪಂಚಪ್ರಾಣ. ಹುಡುಗರೆಲ್ಲಾ ನನ್ನನ್ನು ತಾಯಿಯೆಂದೇ ಭಾವಿಸಿದ್ದಾರೆ” ಎಂದು ಹೇಳಿದಳು. ಆಚಾರರು ನಗುತ್ತಾ ಸರಸ್ವತಿ ! ನೀನು ನನ್ನ ಶಿಷ್ಯರಿಗೆಲ್ಲಾ ತಾಯಿಯೇ ಆಗಿದ್ದೀಯೆ. ಅಂತೆಯೇ ಅವರಿಗೆ ನಿನ್ನಲ್ಲಿ ಅಷ್ಟು ಗೌರವ” ಎಂದರು. ಸರಸ್ವತಮ್ಮ ನಂದೇನು ಬಿಡಿ, ಪಾಪ, ವಿದ್ಯೆ ಕಲಿಯುವ ಹಂಬಲದಿಂದ ಮನೆಬಾಗಿಲು ಬಿಟ್ಟು ಬಂದ ಆ ಹುಡುಗರಿಗೆ ಅನ್ನ, ಬಟ್ಟೆ ಕೊಟ್ಟು ಸಾಕುತ್ತಾ ವಿದ್ಯಾದಾನ ಮಾಡುತ್ತಿದ್ದೀರಿ ! ನಿಮ್ಮನ್ನು ಅವರು ದೇವರಂತೆ ಭಾವಿಸಿದ್ದಾರೆ” ಎಂದರು. 

ವೇಂ : ಸರಿ, ಸರಿ, ನಿನಗೆ ನನ್ನ ಹೊಗಳುವುದು ಬಿಟ್ಟರೆ ಕೆಲಸವೇ ಇಲ್ಲ ! 

ಸರ : (ಮುಗುಳುನಗೆಯಿಂದ) ಏನೂಂದ್ರೆ ನನಗೆ ಇತ್ತೀಚಿಗೆ ತುಂಬಾ ಸಂತೋಷವಾಗುತ್ತಿದೆ. ನಿಮ್ಮಂಥ ಪತಿ, ಲಕ್ಷ್ಮೀನಾರಾಯಣನಂಥ ಪುತ್ರ, ಗೋಪಾಲಾದಿಗಳಂತಹ ನಿಮ್ಮ ಶಿಷ್ಯರು, ಶ್ರೀನಿವಾಸ-ಪದ್ಮಾವತಮ್ಮನಂಥ ಆತ್ಮೀಯ ಅಭಿಮಾನಿಗಳು ದೊರಕಿದ್ದು ನನ್ನ ಸುದೈವ. ಜಗತ್ತಿನಲ್ಲಿ ನನ್ನಂಥ ಸುಖಿ ಬೇರಾರೂ ಇಲ್ಲವೆನಿಸುತ್ತದೆ ! 

ವೇಂ : (ನಕ್ಕು) ಹೆಚ್ಚು ಸಂತೋಷಪಡಬೇಡ ಸರಸ, “ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಂ”. ಈಗಿನ ನಿನ್ನ ಸಂತೋಷಾಧಿಕ್ಯ ಮುಂದಿನ ದುಃಖಕ್ಕೆ ನಾಂದಿಯಾದೀತು ! 

ಸರ : ದುಃಖವೆಂಬುದು, ನಮ್ಮ ಮನೆಯತ್ತಲೂ ಸುಳಿಯದು ! ಮಹಾತ್ಮರಾದ ನಿಮ್ಮ ಕರಪಿಡಿದ ನನಗೆ ದುಃಖವೆಂದರೇನು ?

ವೇಂ : ಸರಸ್ವತಿ, ನಿನ್ನ ಮಾತು ಸಾಧುಸಮ್ಮತವಲ್ಲ. ಮಾನವನಿಗೆ ಸುಖ-ದುಃಖಗಳು ಅನಿವಾರ್ಯ. ಜೀವನವೇ ಸಿಹಿ-ಕಹಿಗಳಿಂದ ಪೂರ್ಣವಾದುದು. ಅದು ಭಗವತ್ಸಂಕಲ್ಪ ! ಅಂತೆಯೇ 'ಸುಖದುಃಖೇ ಸಮೆ ಕೃತ್ವಾ' ಎಂದು ಗೀತಾಚಾರನು ಉಪದೇಶಿಸಿದ್ದಾನೆ. ಸುಖ-ದುಃಖಗಳು ಪ್ರತಿಜೀವಿಗೂ ತಪ್ಪಿದ್ದಲ್ಲ ಅದಕ್ಕೆ ವಿರುದ್ಧವಾಗಿ ಆಶಿಸಬಾರದು. ಈಗ ಎಲ್ಲವೂ ಹರ್ಷದಾಯಕವಾಗಿರುವುದರಿಂದ ನಾನೇ ಸುಖ' ಎಂದು ತಿಳಿದ್ದೀಯೇ, ಒಂದು ವೇಳೆ ನಮ್ಮ ಸಿರಿ-ಸಂಪತ್ತುಗಳೆಲ್ಲ ನಷ್ಟವಾಗಿ ದಾರಿದ್ರವನ್ನು ಅನುಭವಿಸಬೇಕಾಗಿ ಬಂದರೆ, ಆಗಲೂ 'ನಾನೇ ಸುಖಿ' ಎಂದು ಭಾವಿಸುವೆಯಾ ? 

ಸರ : (ಕಂಪಿಸಿ) ನಾಶೀಲಂ ಕೀರ್ತಯೇತ್” ಕೆಟ್ಟನುಡಿಗಳನ್ನಾಡಬಾರದು. ನಮಗೊಂದು ವೇಳೆ ಕಷ್ಟ ಬಂದರೂ ಅದನ್ನು ನಾನು ಸಂತೋಷದಿಂದ ಅನುಭವಿಸಲು ಸಿದ್ಧ 

ವೇಂ : (ನಸುನಕ್ಕು) ಹೇಳುವುದು ಸುಲಭ, ಸರಸ್ವತಿ ! ಕಾರರೂಪಕ್ಕೆ ತರುವುದು ಮಾತ್ರ ಕಷ್ಟ. 

ಸರ : ಸ್ವಾಮಿ, ಬೇಕಾದರೆ ಪರೀಕ್ಷಿಸಿರಿ. ನಿಮ್ಮ ದರ್ಶನ-ಪ್ರೇಮಾಲಾಪಗಳೊಂದು ನನಗೆ ದೊರಕುತ್ತಿದ್ದರೆ, ಎಂಥ ಕಷ್ಟವನ್ನೂ ಎದುರಿಸಲು ಅಂಜಲಾರೆ. 

ವೇಂಕಟನಾಥರು, “ಹೂಂ, ಸ್ಪಷ್ಟಮಗೇ ಭವಿಷ್ಯತಿ !” ಎಂದು ನಗಹತ್ತಿದರು. ಸರಸ್ವತಮ್ಮನೂ ಪತಿಯ ನಗೆಯೊಡನೆ ತನ್ನ ನಗೆಯನ್ನೂ ಬೆರಿಸಿದಳು. 

ಅಂದುರಾತ್ರಿ ನಿದ್ರಿಸಿದ ವೆಂಕಟನಾಥರಿಗೆ ಬೆಳಗಿನಝಾವ ಕನಸಾಯಿತು. ಓರ್ವ ವೃದ್ಧ ಮುತ್ತೈದೆಯು ದರ್ಶನವಿತ್ತು “ಆಚಾರ, ನಿನ್ನನ್ನು ಅರಸಿ ಬಂದಿರುವೆ. ಆಶ್ರಯ ನೀಡುವೆಯಾ ? “ಎನಲು ವೇಂಕಟನಾಥರು “ನೀನಾರು ತಾಯಿ ? ನನ್ನ ಆಶ್ರಯವೇಕೆ ಅಪೇಕ್ಷಿಸುವೆ ?” ಎಂದರು. 

ವೃದ್ದೆ : ನಾನು ಅಲಕ್ಷ್ಮಿ ! ದಾರಿದ್ರದೇವತೆ ! ನಿನ್ನ ಬಳಿ ಕೆಲಕಾಲವಿರುವ ಸಮಯ ಪ್ರಾಪ್ತವಾಗಿದೆ. ಅದಕ್ಕಾಗಿ ಆಶ್ರಯ ಬೇಡುತ್ತಿದ್ದೇನಪ್ಪಾ. 

ವೇಂ : (ಅಚ್ಚರಿಯಿಂದ) ಅಂತಹ ಸಂದರ್ಭವೇನಮ್ಮಾ ? 

ವೃದ್ಧ : ಆಚಾರ, ನಿನ್ನ ಹಿಂದಿನ ಜನ್ಮಗಳಲ್ಲಿ ಪರಮಾತ್ಮನ ಕೃಪೆಯಿಂದ ರಾಜವೈಭವದಿಂದ ಮೆರೆದೆ. ಆಗ ನಿನ್ನತ್ತ ಸುಳಿಯಲೂ ನಾನು ಸಮರ್ಥಳಾಗಲಿಲ್ಲ ! 

ವೇಂ : ಹಾಗಾದರೆ ಈಗ ಹೇಗೆ ಬಂದೆಯಮ್ಮಾ ? 

ವೃದ್ದೆ : ಇನ್ನು ಕೆಲಕಾಲವಾದರೆ, ಮತ್ತೆ ನೀನು ವೈಭವದಿಂದ ಜೀವಿಸುವೆ. ಆಗಲೂ ನಿನ್ನ ಬಳಿ ಬರಲು ಅಶಕ್ತಳಾಗುವೆನು. ಸೃಷ್ಟಿಗೆ ಬಂದ ಪ್ರತಿಜೀವಿಯೂ, ದೇವತೆಯಾಗಲಿ, ಮಾನವನಾಗಲಿ ಪ್ರಾರಬಕರ್ಮಫಲವನ್ನು ಅನುಭವಿಸಲೇಬೇಕು ! ಆಗ ನನ್ನ ಚಂಚುಪ್ರವೇಶ ಅನಿವಾರ. 

ವೇಂ : ಆಗಲಿ, ಹರಿಸಂಕಲ್ಪವನ್ನು ಮೀರಲಾರಿಂದ ಸಾಧ್ಯ ? “ಅವಶ್ಯಮನು ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ” ನಿನ್ನಿಚ್ಛೆಯಂತೆ ಆಶ್ರಯನೀಡುತ್ತೇನೆ. 

ವೃದ್ಧ : ನೀನು ಉದಾರಿಯಪ್ಪ ! ನನಗೆ ಆಶ್ರಯಕೊಡುವುದೆಂದರೆ ಭೀಕರ ದಾರಿದ್ರವನ್ನು ಆಹ್ವಾನಿಸಿದಂತೆಯೇ ! ನೀನು ಬಹುಬಡತನ-ದುಃಖಗಳಿಗೆ ಭಾಗಿಯಾಗಬೇಕಾಗುತ್ತದೆ. 

ವೇಂ : ಮಾತುಕೊಟ್ಟಾಯಿತು. ಬಂದದ್ದನ್ನು ಹರಿಚಿತ್ತವೆಂದು ಅನುಭವಿಸುವೆನು, ನನ್ನ ಮನೆಯಲ್ಲಿ ನೀನೆಷ್ಟು ಕಾಲ ಇರಬಯಸುತ್ತೀಯೆ ? ನನ್ನಾಶ್ರಯ ಬಿಟ್ಟು ನೀನು ಹೋಗುವುದೆಂದು ?

ವೃದ್ಧೆಯು ಎಂದು ನಿನ್ನ ಪತ್ನಿಯು ನಿನ್ನನ್ನು ಗುರುಸನ್ನಿಧಿಗೆ ಹೊರಡಲು ಪ್ರೇರಿಸುವಳೋ, ಆ ಮರುಕ್ಷಣವೇ ನಿನ್ನ ಮನೆಬಿಟ್ಟು ಹೋಗುವೆನಪ್ಪಾ” ಎಂದು ಹೇಳಿ ಅದೃಶ್ಯಳಾದಳು. 

“ನಂಬಿ ಕೆಟ್ಟವರಿಲ್ಲವೋ ರಂಗಯ್ಯನ | ನಂಬದೇ ಕೆಟ್ಟರೆ ಕೆಡಲಿ ! || ಪ ||” ಎಂದು ಸುಸ್ವರವಾಗಿ ಹಾಡುತ್ತಿರುವ ಸರಸ್ವತಿಯ ಮಂಜುಳಗಾನಲಹರಿಯು ವೇಂಕಟನಾಥರನ್ನು ಎಚ್ಚರಗೊಳಿಸಿತು ! 

ಶ್ರೀಹರಿನಾಮಸ್ಮರಣೆಪೂರ್ವಕ ಮೇಲೆದ್ದ ಆಚಾರರಿಗೆ ಕನಸಿನ ನೆನಪಾಯಿತು. ಸ್ವಪ್ಪಾರ್ಥದ ಚಿಂತನ-ಮಂಥನಮಾಡಿದ ಆಚಾರರು “ಹರಿಚಿತ್ತ, ಅನುಭವಿಸಲೇಬೇಕು. ಸಂಜೆ ಸರಸ್ವತಿಯು ತಾನು ಬಹುಸುಖಿ ಎಂದಾಗ ನಾನು 'ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂಸುಖಂ' ಎಂದೇಕೆ ಹೇಳಿದೆ ? ಅದೇ ಈಗ ಸತ್ಯವಾಗಲಿದೆಯಲ್ಲ ! ಅಥವಾ ದೇವರೇ ಹಾಗೆ ನನ್ನಿಂದ ಭವಿಷ್ಯ ನುಡಿಸಿದನೇ ? ಇದು ನನ್ನ ಪರೀಕ್ಷಾಕಾಲ. ಈ ಅಗ್ನಿದಿವ್ಯದಲ್ಲಿ ನಾನು ಉತ್ತೀರ್ಣನಾಗಲೇಬೇಕು ! ಶ್ರೀಹರೇ, ಕೃಷ್ಣ, ನಿನ್ನ ಚಿತ್ತದಲ್ಲಿದ್ದಂತಾಗಲಿ ಪ್ರಭು ! ಪಾಪ, ಸರಸ್ವತಿಗೆ ಇದು ತಿಳಿದರೆ ಮರುಗುವಳು. ನನ್ನ ಪತ್ನಿಗೆ ಇದನ್ನು ತಿಳಿಸಬಾರದು. ಮುಂದೆ ಅನುಭವಕ್ಕೆ ಬಂದಾಗ ತಿಳಿಯಲಿ” ಎಂದು ನಿಶ್ಚಯಿಸಿ ವೇಂಕಟನಾಥರು ಸ್ನಾನಮಾಡಲು ತೆರಳಿದರು.