|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೪೩. ಮಂತ್ರಸಿದ್ದರು

ಸರಸ್ವತಿಯೊಡನೆ ಹೊರಟ ವೇಂಕಟನಾಥರು ಸೂರ್ಯೋದಯವಾಗಿ ಒಂದೆರಡು ಘಳಿಗೆ ಹೊತ್ತಿಗೆ ಒಂದು ಗ್ರಾಮಕ್ಕೆ ಬಂದರು. ಅದೊಂದು ಅಗ್ರಹಾರ, ರಸ್ತೆಯ ಎರಡು ಪಾರ್ಶ್ವದಲ್ಲೂ ಮನೆಗಳು, ಎದುರು ಭಾಗದಲ್ಲೊಂದು ಸರೋವರ, ದೇವರ ಗುಡಿ ಶೋಭಿಸುತ್ತಿತ್ತು. ಆಚಾರ್ಯರು ಪತ್ನಿಯೊಡನೆ ಗಾಡಿಯಿಂದಿಳಿದು ಸರೋವರದಲ್ಲಿ ಕೈಕಾಲು ತೊಳೆದು ಅಲ್ಲೇ ಇದ್ದ ಶಿಲಾಮಂಟಪದಲ್ಲಿ ವಿಶ್ರಾಂತಿಗಾಗಿ ಕುಳಿತರು. ಆ ಸಮಯಕ್ಕೆ ಶ್ರೀಮಂತನಂತಿದ್ದ ವ್ಯಕ್ತಿಯೊಬ್ಬ ಬಂದು “ಸ್ವಾಮಿ, ನೀವು ಹೊಸಬರೆಂದು ತೋರುವುದು” ಎನಲು ಆಚಾರ್ಯರು, “ಅಹುದು ಕಾವೇರಿಪಟ್ಟಣಕ್ಕೆ ಹೊರಟಿದ್ದೇವೆ. ಇಲ್ಲಿ ಮಾಧರ ಮನೆಯಿದೆಯೇ ?” ಎಂದು ಕೇಳಲು ಆ ವ್ಯಕ್ತಿ ಆಚಾರ್ಯರ ತೇಜಸ್ಸಿನಿಂದ ಪ್ರಭಾವಿತನಾಗಿ “ಸ್ವಾಮಿ, ನಾನೂ ಮಾಧ್ವನೇ. ನನ್ನ ಹೆಸರು ಭೀಮರಾಯ, ನಾನೀಗ್ರಾಮದ ಜಮೀನುದಾರ. ಇಂದು ನಮ್ಮ ಮನೆಯಲ್ಲಿ ಸೇತೂ ಸಮಾರಾಧನೆಯಿದೆ. ತಾವು ದಯಮಾಡಿ ನನ್ನ ಸತ್ಕಾರ ಸ್ವೀಕರಿಸಿ ಭೋಜನ ಮಾಡಿ ಮುಂದೆ ಪ್ರಯಾಣಮಾಡಬಹುದು” ಎಂದು ಕೋರಲು, ಆತನ ಸೌಜನ್ಯಾದಿಗಳಿಂದ ಪ್ರೀತರಾದ ಆಚಾರ್ಯರು ಸಮ್ಮತಿಸಿದರು. ಭೀಮರಾಯರು ಅದೇ ರಸ್ತೆಯಲ್ಲಿದ್ದ ದೊಡ್ಡಮನೆಗೆ ಅವರನ್ನು ಕರೆದೊಯ್ದು ಮನೆಯವರಿಗೆ ಹೇಳಿ ಅವರಿಗೆ ಒಂದು ಕೊಠಡಿ ಕೊಡಿಸಿದರು. ಹೆಂಗಸರು ಸರಸ್ವತಿಯನ್ನು ಒಳಗೆ ಕರೆದೊಯ್ದರು. 

ಆಚಾರ್ಯರು ಸ್ವಲ್ಪ ವಿಶ್ರಾಂತಿ ಪಡೆದು ಸರೋವರದಲ್ಲಿ ಸ್ನಾನಮಾಡಿ ಮನೆಗೆ ಬಂದು, ಪಡಸಾಲೆಯಲ್ಲಿ ಸಂಧ್ಯಾ-ದೇವಪೂಜಾದಿಗಳನ್ನು ಮುಗಿಸಿ, ಪಾರಾಯಣಮಾಡುತ್ತಾ ಕುಳಿತರು. ಒಂದು ಕ್ಷಣವಾಗಿರಬಹುದು. ದಷ್ಟಪುಷ್ಟ ಯುವಕನೊಬ್ಬನು ಬಂದು ಅಲ್ಲಿ ನಾಲ್ಕಾರು ಬಾರಿ ಸುತ್ತಾಡಿ ಆಚಾರ್ಯರನ್ನು ಕಂಡು ಹತ್ತಿರ ಬಂದು “ತಾವು ಭೋಜನಕ್ಕೆ ಬಂದವರೋ ?” ಎಂದನು. ಇದ್ದಕ್ಕಿದ್ದಂತೆ ಹಾಗೆ ಪ್ರಶ್ನಿಸಿದ್ದರಿಂದ ಅಪ್ರತಿಭರಾದ ಆಚಾರ್ಯರು “ತಾವಾರೋ ತಿಳಿಯಲಿಲ್ಲ ! ತಮ್ಮ ಪರಿಚಯ ?” ಎಂದರು. ಆ ಯುವಕ ಎದೆಯುಬ್ಬಿಸಿ ಆಧ್ಯತೆಯಿಂದ “ನನ್ನ ಹೆಸರು ಮುಕುಂದ, ಈ ಮನೆಯಲ್ಲಿ ನಾನು ಹೇಳಿದಂತೆಯೇ ಜರುಗುತ್ತದೆ. ಈಗ ತಿಳಿಯಿತೇ ನಾನಾರೆಂದು !” ಹುಸಿನಗೆ ಬೀರಿ, ಮತ್ತೆ “ಏನು ಸ್ವಾಮಿ, ಎಲ್ಲರೂ ಊಟಕ್ಕೆ ಬರುತ್ತೀರೇ ವಿನಃ ಸ್ವಲ್ಪ ಸಹಾಯವಾದರೂ ಮಾಡಬಾರದೆ ?” ಎಂದನು. ತಮ್ಮನ್ನು ಊಟಕ್ಕೆ ಬಂದ ದೇಶಾವರ ಬ್ರಾಹ್ಮಣನಂತೆ ಕಂಡು ಮಾತನಾಡಿದ್ದರಿಂದ ವ್ಯಥೆಯಾದರೂ ಅದನ್ನು ತೋರಗೊಡದೆ ವೇಂಕಟನಾಥರು “ನನ್ನಿಂದ ತಮಗೇನು ಸಹಾಯವಾಗಬೇಕು?” ಎಂದರು. “ನೋಡಲು ದಷ್ಟಪುಷ್ಪರಾಗಿದ್ದೀರಿ ! ಇಂದು ಈ ಮನೆಯಲ್ಲಿ ನೂರಾರು ಜನರಿಗೆ ಗಂಧಾಕ್ಷತೆ ಕೊಡಬೇಕಾಗಿದೆ. ಐವತ್ತರವತ್ತು ಜನರಿಗಾಗುವಷ್ಟು ಗಂಧಾಕ್ಷತೆ ಬೇಕು. ನೀವು ಅದನ್ನು ಸಿದ್ಧಮಾಡಿಕೊಡಬೇಕು ತಿಳಿಯಿತೇ? ಎಂದು ಹೇಳಿ ದೇವರ ಮನೆಯಿಂದ ದೊಡ್ಡ ಸಾಣೇಕಲ್ಲು, ಗಂಧದ ಕೊರಡು, ಒಂದು ತಂಬಿಗೆ ನೀರು, ತಂದು ಆಚಾರರ ಮುಂದಿಟ್ಟು “ಹೂಂ, ಪ್ರಾರಂಭಿಸಿ” ಎಂದು ಹೇಳಿ ಹೊರಟುಹೋದನು. 

ಆಚಾರ್ಯರಿಗೆ ಮನಸ್ಸಿಗೆ ನೋವಾದರೂ ಬ್ರಾಹ್ಮಣರ ಸೇವೆ, ಭಗವಂತ ಪ್ರೀತನಾಗುವನು ಎಂದು ಭಾವಿಸಿದರು. ಮನೆಯ ಯಜಮಾನ ಎಂಥಾ ಸದೃಹಸ್ಥ, ವಿನಯಶೀಲ ! ಅವರ ಮನೆ ಪುರೋಹಿತರ ಮಗನಾದ ಈ ಮುಕುಂದ ಎಂಥಾ ಗಡಸು ಮನುಷ್ಯ, ಎಂಥ ಅಸಭ್ಯ ವರ್ತನೆ ! ಜಗತ್ತಿನಲ್ಲಿ ಇಂಥವರೂ ಇರುವರಲ್ಲ ಎಂದು ವಿಸ್ಮಿತರಾಗಿ ಆಚಾರ್ಯರು ಗಂಧವನ್ನು ತೇಯಲು ಪ್ರಾರಂಭಿಸಿದರು. ಅವರ ಮುಖದಿಂದ ತಾನಾಗಿಯೇ ಅಗ್ನಿಸೂಕ್ತ ಹೊರಹೊಮ್ಮಿತು ! 

“ಅಗ್ನಿಃ ಸಪ್ತಿಂ ವಾಜಂಭರಂ ದದಾತ್ಯಗ್ನಿರ್ವೀರಂ ಶ್ರುತ್ಯಂ ಕರ್ಮನಿಷ್ಕಾಮ್ | ಅಗ್ನಿರೋದಸಿ ವಿಚರತ್ನ ಮಂಜನ್ನಗಿರ್ನಾರೀಂ ವೀರಕುಕ್ಷಿಂ ಪುರಂಧೀಮ್ ಅನ್ನೇರಪ್ಪಸಃ ಸಮಿದು ಭದ್ರಾಗ್ನಿರ್ಮಹೀರೋದಸೀ ಅವಿವೇಶ | ಅ[ರೇಕಂ ಚೋದಯತ್ನಮರ್ವ ತ್ರಾಣಿ ದಯತೇ ಪುರಣಿ ಅಗ್ನಿರ್ಹತ್ಯಂ ಜರತಃ ಕಣಿರಮಾವಾಗಿರದ್ರೂ ನಿರದಹಜ್ಜರೂಥಮ್ | ಅಗ್ನಿರಿತ್ರಿಂ ಘರ್ಮ ಉರುಷ್ಯದಂತರಗ್ನಿರ್ನೈಮೇಧಂ ಪ್ರಜಯಾಸ್ಕ ಜಸಮ್

ಹೀಗೆ ವೇಂಕಟನಾಥರು ವೇದಪಾರಾಯಣಮಾಡುತ್ತಾ ಗಂಧ ತೇಯುತ್ತಿರುವಾಗ ಮುಕುಂದನು ಮತ್ತೆ ದಡದಡನೆ ಬಂದು “ಓಹೋ, ವೇದ ಬೇರೆ ಬರುತ್ತೋ ? ಸಾಕು ನಿಮ್ಮ ಪಾರಾಯಣ ! ಹೂಂ, ಬೇಗ ಮುಗಿಸಿ, ಹೊತ್ತಾಯಿತು” ಎಂದು ಗದರಿಸಿದಂತೆ ಹೇಳಿ ಗಡಬಡಿಸಿ ಮತ್ತೆ ಹೊರಟ. ಅದೇ ವೇಳೆಗೆ ಆಕಸ್ಮಾತ್ ಪಡಸಾಲೆಗೆ ಬಂದ ಸರಸ್ವತಿಗೆ ಮುಕುಂದನ ಗದರಿಕೆ, ಪತಿಯು ಗಂಧ ತೇಯುತ್ತಿರುವ ದೃಶ್ಯ ಕಣ್ಣಿಗೆ ಬಿತ್ತು ! ಅದನ್ನು ಕಂಡು ಸರಸ್ವತಿಯ ಹೊಟ್ಟೆಯಲ್ಲಿ ತಳಮಳವಾಯಿತು. “ಎಂಥ ಅನ್ಯಾಯ, ರಾಜರಿಂದ, ಪೀಠಾಧೀಶರಿಂದ ಗೌರವಿಸಲ್ಪಟ್ಟ ತನ್ನ ಪತಿ, ಸಾಮಾನ್ಯನಂತೆ ಗಂಧ ತೇಯುವುದೇ ? ವೇದವಿದ್ಯಾಪಾರಂಗತ, ಸಕಲಶಾಸ್ತ್ರಪಾರೀಣ ಪಾಷಿಕುಲಭೂಷಣ - ಇಂಥ ಮಹಾನುಭಾವನಿಂದ ಒಬ್ಬ ಸಾಮಾನ್ಯ ಗದರಿಸಿ ಗಂಧ ತೇಯಿಸುವುದೇ ?” ಎಂಬ ದುಃಖ-ಉದ್ವೇಗಗಳಿಂದ ಆ ಸಾಧಿಯ ಕಣ್ಣಿನಿಂದ ಧಾರಾಕಾರವಾಗಿ ನೀರು ಹರಿಯಿತು ! ಪತಿಗಾದ ಈ ಅಗೌರವವನ್ನು ಕಂಡು ಕೋಮಲ ಹೃದಯದ ಸರಸ್ವತಿ ಬಿಕ್ಕಿ ಬಿಕ್ಕಿ ಅಳಹತ್ತಿದಳು, ಅಳುವಿನ ಧ್ವನಿ ಕೇಳಿ ತಲೆಯೆತ್ತಿದರು ವೇಕಂಟನಾಥರು. ಪ್ರಿಯಸತಿಯ ಕಣ್ಣುಗಳಿಂದ ನೀರುಹರಿಯುತ್ತಿದೆ ! ಪತಿ-ಪತ್ನಿಯರ ದೃಷ್ಟಿ ಒಂದಾದಾಗ ಆಚಾರ್ಯರು ಮೂಗಿನ ಮೇಲೆ ಬೆರಳಿಟ್ಟು ಸುಮ್ಮನಿರುವಂತೆ ಸಂಜ್ಞೆಮಾಡಿದರು. ಸರಸ್ವತಿ ಅಸಹಾಯಕಳಾಗಿ ಸೆರಗಿನಿಂದ ಕಣ್ಣೀರೊರೆಸಿಕೊಳ್ಳುತ್ತಾ ಕೊಠಡಿಗೆ ಹೋಗಿ ಕುಳಿತುಬಿಟ್ಟಳು.

ಪತ್ನಿಯ ದುಃಖವನ್ನು ನೋಡಿ ಮರುಗಿ ಆಚಾರ್ಯರು ಬೇಗ ಗಂಧಾಕ್ಷತೆ ಸಿದ್ಧಪಡಿಸಿ ಪಾರಾಯಣಾಸಕ್ತರಾಗಿ ಕುಳಿತರು. ಮುಕುಂದ ಬಂದು ಗಂಧಾಕ್ಷತೆ ತೆಗೆದುಕೊಂಡು ಹೋದ. ದೇವರ ನೇವೇದ್ಯಾದಿಗಳು ಮುಗಿದು ಬ್ರಾಹ್ಮಣ-ಸುವಾಸಿನಿಯರು ಮಗ್ಗುಲಲ್ಲಿದ್ದ ವಿಸ್ತಾರವಾದ ಪಡಸಾಲೆಗೆ ಹೋಗಿ ಕುಳಿತುಕೊಳ್ಳಲಾರಂಭಿಸಿದರು. ತೀರ್ಥ-ಪ್ರಸಾದ-ಗಂಧಾಕ್ಷತೆಗಳನ್ನು ಕೊಟ್ಟು, ಪುರೋಹಿತರು ಎಲೆ ಹಾಕಿಸಿದರು. ಭೀಮರಾಯರು ಬ್ರಾಹ್ಮಣರ ಗುಂಪಿನಲ್ಲಿ ಆಚಾರ್ಯರನ್ನು ಕಾಣದೆ ಹುಡುಕುತ್ತಾ ಅವರಿದ್ದೆಡೆಗೆ ಬಂದು “ಮಹಾಸ್ವಾಮಿ, ತೀರ್ಥ ವಿನಿಯೋಗವಾಗುತ್ತಿದೆ. ತಾವೇಕೆ ಬರಲಿಲ್ಲ, ದಯಮಾಡಿಸಿ ಸ್ವಾಮಿ” ಎಂದು ಪ್ರಾರ್ಥಿಸಿದರು. ವೇಂಕಟನಾಥರು ಅವರೊಡನೆ ಹೊರಡಲು ಸಿದ್ಧರಾದರು. 

ಆ ಹೊತ್ತಿಗೆ ಮಗ್ಗಲು ಪಡಸಾಲೆಯಿಂದ “ಅಯ್ಯೋ, ಉರಿ, ಉರಿ, ಬೆಂಕಿ, ಪ್ರಾಣಹೋಗುತ್ತಿದೆ. ಅಪ್ಪಾ, ಅಮ್ಮಾ, ಉರಿ, ಬೆಂಕಿ' ಎಂಬ ಚೀತ್ಕಾರ, ಬೊಬ್ಬಾಟ ಕೇಳಿಸಿತು. ಭೀಮರಾಯರು ಗಾಬರಿಯಿಂದ ಅತ್ತ ಧಾವಿಸಿದರು. ಆಚಾರ್ಯರೂ ಹಿಂದೆ ಹೋದರು. ಅಲ್ಲಿ ಕಂಡ ದೃಶ್ಯ ಅವರಿಗೆ ಅಪಾರ ನೋವನ್ನುಂಟುಮಾಡಿತು. ೩೦-೪೦ ಜನ ಬ್ರಾಹ್ಮಣರು ಹೊಟ್ಟೆ, ಹಣೆ, ಭುಜಗಳನ್ನು ಹಿಡಿದುಕೊಂಡು “ಉರಿ ಬೆಂಕಿ, ಪ್ರಾಣ ಹೋಗುತ್ತಿದೆ ಎಂದುಕೊಳ್ಳುತ್ತಿದ್ದಾರೆ ! ಏಕೆ, ಏನು ಎಂದಾರಿಗೂ ತಿಳಿಯುತ್ತಿಲ್ಲ. ಭೀಮರಾಯರು “ಏನಾಯಿತು” ಎಂದು ಪುರೋಹಿತರನ್ನು ಪ್ರಶ್ನಿಸಿದರು. ಅವರೂ ಗೊತ್ತಿಲ್ಲ ಸ್ವಾಮಿ, ಗಂಧ ಹಚ್ಚಿಕೊಂಡ ಕೂಡಲೇ ಹೀಗೆ ಕಿರುಚುತ್ತಿದ್ದಾರೆ. ಗಂಧದಲ್ಲಿ ಬಹುಶಃ ಖಾರ ಮಿಶ್ರವಾಗಿದೆಯೋ ಏನೋ” ಎಂದರು. ರಾಯರು “ಗಂಧ ತೇದವರಾರು ?” ಎನಲು, ಪುರೋಹಿತರು “ನನ್ನ ಮಗ ಮುಕುಂದ” ಅಂದಾಗ ಆತ "ನಾನಲ್ಲಪ್ಪ, ಈ ಬ್ರಾಹ್ಮಣ ತೇದಿದ್ದು, ನನಗೊಂದೂ ತಿಳಿಯದು” ಎಂದ. ಪುರೋಹಿತ ರಾಮಾಚಾರ್ಯರು “ಮುತ್ನಾಳ, ಗಂಧ ಸಿದ್ಧಪಡಿಸಲು ನಿನಗೆ ಹೇಳಿದರೆ ಈ ಬ್ರಾಹ್ಮಣರಿಂದ ತೇಯಿಸಿದೆಯಾ ? ಇನ್ನೂ ನಿನ್ನ ದುಷ್ಟಬುದ್ಧಿ ಹೋಗಿಲ್ಲವೇ” ಎಂದು ಸಿಟ್ಟಾದರು. 

ಮನೆಯ ಯಜಮಾನರು “ಏನು ಈ ಸಾಹ್ಮಣರಿಂದ ಗಂಧ ತೇಯಿಸಿದೆಯಾ ?” ಎಂದು ಕುಪಿತರಾಗಿ, ವೇಂಕಟನಾಥರತ್ತ ತಿರುಗಿ “ಇದೇನು ಸ್ವಾಮಿ, ಹೀಗೇಕಾಯಿತು ?” ಎಂದು ಪ್ರಶ್ನಿಸಿದರು. ಆಗ ರಾಮಾಚಾರ್ಯರು “ಸ್ವಾಮಿ, ತಾವಾರೋ ಮಹನೀಯರಂತಿರುವಿರಿ. ಬ್ರಾಹ್ಮಣಾಪಮಾನ ಶಾಪದಂತಾಗಿ ಪೀಡಿಸುವೆಂದು ಕೇಳಿರುವೆನು. ತಮ್ಮ ತೇಜಸೇ ನೀವು ಮಂತ್ರಸಿದ್ದರೆಂದು ಸಾರುವುದು ! ನನ್ನ ಮಗನ ಅವಿವೇಕದಿಂದ ಈ ಬ್ರಾಹ್ಮಣರು ಕಷ್ಟಪಡುವಂತಾಯಿತು ! ಇವರನ್ನು ಕಾಪಾಡಿ” ಎಂದು ಪ್ರಾರ್ಥಿಸಿದರು. 

ವೇಂಕಟನಾಥರು “ಇದೇಕೆ ಹೀಗಾಯಿತೆಂದು ನಾನರಿಯೆ, ಗಂಧ ತೇಯಲು ಈತ ಹೇಳಿದಾಗ ನಾನು ಅಗ್ನಿಸೂಕ್ತ ಪಠಿಸುತ್ತಿದ್ದೆ. ಬಹುಶಃ ಅದರ ಪ್ರಭಾವದಿಂದ ಹೀಗಾಗಿರಬಹುದು. ಚಿಂತಿಸಬೇಡಿ. ಶ್ರೀಹರಿವಾಯುಗಳು ಕಾಪಾಡುತ್ತಾರೆ. ಸ್ವಾಮಿ ರಾಮಾಚಾರ್ಯರೇ, ಬ್ರಾಹ್ಮಣರಿಗೆ ಕೊಟ್ಟ ಗಂಧ. ಒಂದು ಅರ್ಘಪಾಲಾ ಶ್ರೀದೇವರತೀರ್ಥಗಳನ್ನು ತೆಗೆದುಕೊಂಡು ಬನ್ನಿ” ಎಂದರು. ರಾಮಾಚಾರ್ಯರು ಅವೆಲ್ಲವನ್ನೂ ತಂದರು. 

ವೇಂಕಟನಾಥರು ಪೂರ್ವಾಭಿಮುಖವಾಗಿ ಪದ್ಮಾಸನದಲ್ಲಿ ಕುಳಿತು ಆಚಮನ, ಆಸನಶುದ್ಧಿ, ಸಂಕಲ್ಪಪೂರ್ವಕವಾಗಿ ಅರ್ಘಪಾಲಾದಲ್ಲಿ ಗಂಧವನ್ನೂ ದೇವರತೀರ್ಥವನ್ನೂ ಹಾಕಿ ಕಲಕಿ, ಅದನ್ನು ಬಲತೊಡೆಯ ಮೇಲಿಟ್ಟುಕೊಂಡು ಗಂಧವನ್ನು ಕಾಂಗುಲಿಗಳಿಂದ ಸ್ಪರ್ಶಿಸುತ್ತಾ ನಿಮೀಲಿತಾರ್ಧನಯನರಾಗಿ ವರುಣದೇವತಾಪರವಾದ ವೇದಮಂತ್ರಗಳನ್ನು ಪಠಿಸಲಾರಂಭಿಸಿದರು. ಬ್ರಾಹ್ಮಣರು ಹಾಹಾಕಾರ ಮಾಡುತ್ತಿದ್ದಾರೆ. ಆ ಗದ್ದಲವನ್ನು ಕೇಳಿ ಮನೆಯ ಹೆಣ್ಣುಮಕ್ಕಳು, ಸುವಾಸಿನಿಯರೆಲ್ಲರೂ ಬಂದು ನೋಡುತ್ತಿದ್ದಾರೆ. ಭೀಮರಾಯ-ರಾಮಾಚಾರ್ಯರು ವಿಸ್ಮಿತರಾಗಿ ಆಚಾರರನ್ನೇ ದಿಟ್ಟಿಸಿನೋಡುತ್ತಿದ್ದಾರೆ. ವೇಂಕಟನಾಥರ ಮುಖದಿಂದ ಸುಸ್ವರವಾಗಿ ವೇದಮಂತ್ರ ಹೊರಹೊಮ್ಮಿತು !

“ಇಮಂ ಮೇ ವರುಣ ಶ್ರುಧೀಹವ ಮದ್ಯಾ ಚ ಮೃಡಯ | ತಾಮಪಸ್ಸು ರಾಚಕೇ | ತತ್ವಾಯಾಮಿ ಬ್ರಹ್ಮಣಾ ವಂದಮಾನಸದಾಶಾಸ್ತೇ ಯಜಮಾನೋ ಹವಿರ್ಭಿಃ | ಅಹೇಡಮಾನೋ ವರುಣೇಹ ಭೋದ್ಯುರುಶಗ್೦ ಸಮಾನ ಆಯುಃ ಪ್ರಮೋಷಿಃ | ಯಚ್ಛದಿತೇ ವಿಶೋಯಥಾ ಪ್ರದೇವ ವರುಣ ವ್ರತಂ | ಮಿನೀಮಸಿ ದೈವಿದ್ಯವಿ ಯಂಚೇದಂ ವರುಣದೈವೇ ಜನೇಭಿದ್ರೋಹಂ ಮನುಪ್ಯಾಶ್ಚರಾಮಸಿ | ಅಚೀತೀ ಯತ್ತವ ಧರ್ಮಾಯು ಯೋಽಪಿಮಾ | ಮಾನಸ್ತಸ್ಮಾದೇನಸೋ ದೇವರೀರಿಷಃ | ಕಿತವಾಸೋ ಯದ್ರಿರಿಪುರ್ನದೀವಿ | ಯದ್ಧಾ ಗಾಸತ್ಯ ಮತಯನ್ನ ವಿದ್ಯ | ಸರ್ವಾಥಾವಿಷ್ಯ ನಿಧಿರೇವ ದೇವಾಥಾತೇ ಸ್ಯಾಮ್ ವರುಣ ಪ್ರಿಯಾಸಃ ||......” 

“ಓಂ ಭದ್ರಂ ಕರ್ಣೇಭಿಶ್ರುಣುಯಾಮ ದೇವಾಃ | ಭದ್ರಂ ಪಶ್ಯಮಾಕ್ಷ ಭಿರ್ಯಜತ್ರಾಃ | ಸ್ಥಿರೈರಂಗೈಸ್ತುಷ್ಟುವಾಗ್ ಸಸ್ತನೂಭಿಃ | ವಶೇಮ ದೇವಹಿತಂ ಯದಾಯುಃ || ಸ್ವಸ್ತಿನ ಇಂದ್ರೋ ವೃದ್ಧಶ್ರವಾಃ | ಸ್ವಸ್ತಿಃ ಪೂಷಾ ವಿಶ್ವದೇವಾಃ | ಸ್ವಸ್ತಿನಸ್ತಾಕೊ ೯ ಅರಿಷ್ಟನೇಮಿಃ | ಸ್ವಸ್ತಿನೋ ಬೃಹಸ್ಪತಿರ್ದದಾತು || ಓಂ ಶಾಂತಿ ಶಾಂತಿ ಶಾಂತಿಃ || ಸಹನಾವವತು | ಸಹ ನೌ ಭುನಕ್ಕು ಸಹವೀರ್ಯಂ ಕರವಾವಹೈ | ತೇಜಸ್ವಿನಾನವಧಿತಮಸ್ತು ಮಾವಿದ್ದಿಷಾವಹೈ | ಓಂ ಶಾಂತಿಶ್ಯಾಂತಿ ಶಾಂತಿಃ ||” 

ವೇಂಕಟನಾಥರು ವೇದಪಾರಾಯಣ ಮಾಡುತ್ತಿರುವಂತೆಯೇ ಬ್ರಾಹ್ಮಣರ ಶರೀರದಲ್ಲುಂಟಾಗಿದ್ದ ಉರಿ, ತಾಪ ಸ್ವಲ್ಪ ಸಹಿಸುವಂತಾಯಿತು. ಆಗ ವೇಂಕಟನಾಥರ ದೃಷ್ಟಿ ಸುಮಂಗಲೆಯರತ್ತ ಹರಿಯಿತು. ಸರಸ್ವತಿಯ ಮುಖ ವಿಕಸಿತವಾಗಿ ಆನಂದಬಾಷ್ಪ ಹರಿಯುತ್ತಿರುವದನ್ನು ಕಂಡು ಆಚಾರ್ಯರು ಮಂದಹಾಸಬೀರಿ ಮೇಲೆದ್ದು ಎಲ್ಲ ಬ್ರಾಹ್ಮಣರಿಗೆ ಗಂಧವನ್ನು ಕೊಡುವಂತೆ ಹೇಳಿ ಗಂಧದ ಬಟ್ಟಲನ್ನು ಪುರೋಹಿತರ ಕೈಗಿತ್ತರು. ಪುರೋಹಿತರು ಅಗ್ನಿತಾಪದಿಂದ ಬಳಲುತ್ತಿದ್ದ ಬ್ರಾಹ್ಮಣರಿಗೆಲ್ಲಾ ಗಂಧ ನೀಡಿದರು. ಬ್ರಾಹ್ಮಣರು ಗಂಧವನ್ನು ಎದೆ, ಭುಜ, ಉದರ, ಹಣೆಗಳಿಗೆ ಹಚ್ಚಿಕೊಂಡರು. 

ಆಗೊಂದು ಪವಾಡವೇ ಜರುಗಿಹೋಯಿತು ! ಬ್ರಾಹ್ಮಣರು ಗಂಧಸ್ಪರ್ಶವಾದ ಕೂಡಲೇ ಆಹಾ, ಆನಂದ, ಪರಮಾನಂದ, ಉರಿಯೆಲ್ಲಾ ಮಾಯವಾಯಿತು ! ಅಬ್ಬಾ ಎಷ್ಟು ತಂಪಾಗಿದೆ. ಹಿತಕರವಾಗಿದೆ - ಬದುಕಿದೆವು, ಆನಂದ” ಎನ್ನುತ್ತಾ ಸಂತೋಷದಿಂದ ಕುಣಿದಾಡಹತ್ತಿದರು ! ಆಶ್ಚರ್ಯಾನಂದಗಳಿಂದ ಭೀಮರಾಯರು ವೇಂಕಟನಾಥರಿಗೆ ಸಾಷ್ಟಾಂಗವೆರಗಿ “ಮಹಾನುಭಾವ ! ನನ್ನನ್ನು ಪಾಪದಿಂದ ಮುಕ್ತಗೊಳಿಸಿದಿರಿ. ನೀವು ಮಹಾತ್ಮರು, ಮಂತ್ರಸಿದ್ದರು ! “ಎಂದು ಸ್ತುತಿಸಿದರು. 

ಬ್ರಾಹ್ಮಣರೆಲ್ಲ ನಿಜ, ಇವರು ಮಹಾತ್ಮರು” ಎಂದುದ್ದರಿಸಿದರು. ಆಗ ಅರವತೈದು ವರ್ಷದ ವೃದ್ಧರೊಬ್ಬರು ಹತ್ತಿರ ಬಂದು “ನಮ್ಮ ಪ್ರಾಣಉಳಿಸಿದ ಮಹನೀಯರಾರು ? “ಎಂದು ಪ್ರಶ್ನಿಸಿದಾಗ ಪುರೋಹಿತರು ಆಚಾರ್ಯರನ್ನು ತೋರಿಸಿದರು. ಆ ವೃದ್ಧರು ವೆಂಕಟನಾಥರ ಸನಿಹಕ್ಕೆ ಬಂದು ಅವರನ್ನು ದೃಷ್ಟಿಸಿನೋಡಿ “ಹಾ! ವೇಂಕಟನಾಥಾಚಾರ್ಯರು !” ಎಂದಾಗ ಭೀಮರಾಯರು 'ಇವರು ನಿಮಗೆ ಪರಿಚಿತರೇ' ಎಂದು ಪ್ರಶ್ನಿಸಿದರು. ಆಗ ವೃದ್ಧರು “ಈ ಮಹಾನುಭಾವರಿಂದ ಗಂಧ ತೇಯಿಸಿದಿರಾ ? ನೀವೆಂಥ ಪಾಪಿಗಳು !” ಎಂದು ಹೇಳಲು ಪುರೋಹಿತರು “ಹಯಗ್ರೀವಾಚಾರ್ಯರೇ, ಆ ಪಾಪವೆಸಗಿದವನು ನನ್ನ ಮಗ ಸ್ವಾಮಿ !” ಎಂದು ದುಃಖಿಸಿದರು. ಭೀಮರಾಯರು ಮತ್ತೆ “ಸ್ವಾಮಿ. ಇವರು ನಿಮಗೆ ಪರಿಚಿತರೇ ?” ಎಂದು ಕೇಳಿದರು. 

ಆಗ ಹಯಗ್ರೀವಾಚಾರ್ಯರು ವೇಂಕಟನಾಥರಿಗೆ ನಮಸ್ಕರಿಸಿ “ರಾಯರೇ, ಇವರ ಹೆಸರು ವೇಂಕಟನಾಥಚಾರ್ಯರೆಂದು. ಷಾತ್ವಿಕಕುಲತಿಲಕರಾದ ಇವರು ಸಕಲ ಶಾಸ್ತ್ರಪಾರಂಗರು. ಶ್ರೀವಿಜಯೀಂದ್ರ-ಸುಧೀಂದ್ರ ಗುರುಗಳ ಪ್ರಿಯಶಿಷ್ಯರು. ಇವರ ಪರಿಚಯಮಾಡಿಕೊಡುವಷ್ಟು ದೊಡ್ಡವನು ನಾನಲ್ಲ ! ಈಗೆರಡು ವರ್ಷಗಳ ಹಿಂದೆ ಶ್ರೀವಿಜಯೀಂದ್ರರ ಅಧ್ಯಕ್ಷತೆಯಲ್ಲಿ ಮಧುರೆಯಲ್ಲಿ ಜರುಗಿದ ಮಹಾವಿದ್ವತ್ಸಭೆಯಲ್ಲಿ ಎಲ್ಲಾ ಶಾಸ್ತ್ರಗಳಲ್ಲಿ ವಾಕ್ಯಾರ್ಥ ಮಾಡಿ, ಪರವಾದಿಗಳನ್ನು ಇವರು ಜಯಿಸಿದ ಬಗೆಯನ್ನು ಸಾವಿರಾರು ಜನರಂತೆ ನಾನೂ ಕಂಡಾನಂದಿಸಿದ್ದೇನೆ ! ಆದರೆ ನನ್ನ ಪರಿಚಯ ಆಚಾರರಿಗಿಲ್ಲ. ಅಂದು ಕೀರ್ತಿಶೇಷ ಶ್ರೀವಿಜಯೀಂದ್ರಗುರುಗಳು ಹರ್ಷನಿರ್ಭರರಾಗಿ ತಾವು ಹೊದ್ದ ಶಾಲನ್ನೇ ಇವರಿಗೆ ಹೊದಿಸಿ ಆಶೀರ್ವದಿಸಿದರು !

ಶ್ರೀಸುಧೀಂದ್ರರಂತೂ ತಾವು ಹಾಕಿಕೊಂಡಿದ್ದ ಸುವರ್ಣಮಣಿಮಯ ತುಳಸೀಮಾಲೆಯನ್ನೇ ಇವರ ಕೊರಳಿಗೆ ಹಾಕಿ “ಸಕಲ ಕಲಾವಲ್ಲಭ” ಎಂಬ ಅಪೂರ್ವ ವಿದ್ವತ್ಪಶಸ್ತಿಯನ್ನಿತ್ತು ಸನ್ಮಾನಿಸಿದರು. ಮರುದಿನ ಗುರುಗಳ ಆಜ್ಞೆಯಂತೆ ಇವರು ವೀಣಾವಾದನ ಮಾಡಿದರು. ಆ ವೀಣಾವಾದನವನ್ನು ವರ್ಣಿಸಲು ನಾನು ಶಕ್ತನಲ್ಲ ! ದಕ್ಷಿಣಭಾರತದಲ್ಲೇ ಇವರಂಥ ವೀಣಾವಾದನ ಪಟುಗಳು ಬೇರೊಬ್ಬರಿಲ್ಲವೆಂದು ಅಖಂಡವಿದ್ವನ್ಮಂಡಲಿಯೇ ಇವರನ್ನು ಕೊಂಡಾಡಿತು. ಮಧುರಾಧೀಶ ಇವರನ್ನು ಸನ್ಮಾನಿಸಿ “ವೈಣಿಕಚಕ್ರವರ್ತಿ” ಎಂಬ ಪ್ರಶಸ್ತಿಯನ್ನಿತ್ತು ಕೃತಾರ್ಥನಾದನು. ಇಂದಿಗೂ ಆ ದೃಶ್ಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಸಕಲಶಾಸ್ತ್ರ ಸಂಗೀತ ಪಾರಂಗತರೆಂದು ಆನಂದಿಸಿದ್ದನಾನು ಇಂದು ಇವರ ಮಹಿಮೆಯನ್ನು ಕಂಡು ಧನ್ಯನಾದೆ. ಮಂತ್ರಸಿದ್ಧರಾದ ಆಚಾರ್ಯರೇ, ನಮ್ಮೆಲ್ಲರ ಪ್ರಾಣವುಳಿಸಿದ ನಿಮಗೆ ನಮೋ ನಮೋ” ಎಂದು ನಮಸ್ಕರಿಸಿದರು. 

ಆಗ ಸರ್ವರೂ, ಆನಂದ-ಆಶ್ಚರ್ಯಗಳಿಂದ ನಿಬ್ಬೆರಗಾಗಿ ಸ್ತುತಿಸಹತ್ತಿದರು. ಇಂಥ ಪುಣ್ಯಪುರುಷರ ಪತ್ನಿಯೆಂದು ಸುಮಂಗಲಿಯರೆಲ್ಲಾ ಸರಸ್ವತಿಯನ್ನು ಪ್ರಶಂಸಿಸಿ ನಮಸ್ಕರಿಸಿದರು. ಸರಸ್ವತಿಯ ಮುಖದಲ್ಲಿ ಗೆಲುವಿನ ಕಿರುನಗೆಯೊಂದು ಮಿಂಚಿತು ! 

ಪುರೋಹಿತರು ಕರಮುಗಿದು “ಸ್ವಾಮಿ, ನನ್ನ ಮಗನ ಅಪರಾಧ ಕ್ಷಮಿಸಿರಿ. ಬ್ರಾಹ್ಮಣಾಪಮಾನ ನಮ್ಮ ವಂಶಕ್ಕೆ ಉಂಟಾಗದಂತೆ ಅನುಗ್ರಹಿಸಿರಿ” ಎಂದಾಗ ಆಚಾರ್ಯರು “ಗತಂ ನ ಶೋಚಯೇತ್ಪಾಜ್ಯ”, ಅದೊಂದು ದುರ್ನಿಮಿಷ. ನಿಮ್ಮ ಪುತ್ರನಲ್ಲಿ ನನಗಾವ ಅಸಮಾಧಾನವೂ ಇಲ್ಲ, ಗಂಧ ತೇಯಲು ಹೇಳಿದಾಗ 'ಭೂಸುರ ಸೇವೆಯೇ ! ಭುಜಂಗಶಯನನ ಸೇವೆ ಯೆಂದು ಭಾವಿಸಿ ನಾನು ಗಂಧ ಸಿದ್ಧಪಡಿಸಿದೆ. ಆದರದು ಹೀಗಾಗುವುದೆಂದು ಭಾವಿಸಿರಲಿಲ್ಲ” ಎಂದರು. ಆಗ ಬ್ರಾಹ್ಮಣರೆಲ್ಲ “ಆಹಾ, ಎಂಥಾ ತಾತ್ವಿಕ ಪ್ರಜ್ಞೆ! ಹೃದಯವೆಷ್ಟು ಉದಾರ ! ಮಹಾನುಭಾವರು” ಎಂದು ಉದ್ಗರಿಸಿದರು. ಆಗ ಹಯಗ್ರೀವಾಚಾರ್ಯರು “ರಾಮಾಚಾರ್ಯರೇ, ಇವರು ನಿಮಗೆ ಹೊರಗಿನವರಲ್ಲ, ನಿಮ್ಮ ಗುರುಪುತ್ರರೇ !” ಎಂದರು. ರಾಮಾಚಾರ್ಯರು ಅಚ್ಚರಿಯಿಂದ “ಏನು ! ನಮ್ಮ ಪೂಜ್ಯ ತಿಮ್ಮಣ್ಣಾಚಾರ್ಯರ ಮಕ್ಕಳೇ !” ಎಂದು ಆಚಾರರತ್ತ ತಿರುಗಿ “ಸ್ವಾಮಿ, ನಾನು ತಮ್ಮ ತಂದೆಗಳ ಶಿಷ್ಯ. ಕುಂಭಕೋಣದ ವಿದ್ಯಾಪೀಠದಲ್ಲಿ ಮೂರು ವರ್ಷ ಅವರಲ್ಲಿ ನ್ಯಾಯ- ವೇದಾಂತಶಾಸ್ತ್ರಗಳನ್ನೋದಿದ್ದೇನೆ. ನಾನು ಗುರುದಕ್ಷಿಣೆ ಕೊಡಲಾಗಲಿಲ್ಲ. ಆದರೆ ಈಗ ನನ್ನ ಮಗ ಗುರುಪುತ್ರರಿಗೆ ಒಳ್ಳೇ ಗುರುದಕ್ಷಿಣೆ ನೀಡಿದನಲ್ಲ !” ಎಂದಾಗ ಅವರ ಮಗ ಮುಕುಂದ ಆಚಾರ್ಯರ ಪಾದಹಿಡಿದು “ಸ್ವಾಮಿ, ನನ್ನ ಅಪರಾಧ ಕ್ಷಮಿಸಿ, ಕೆಟ್ಟಹುಡುಗರ ಜೊತೆ ಸೇರಿ ಉಡಾಳನಾಗಿದ್ದೆ. ನೀವು ನನ್ನ ಕಣ್ಣು ತೆರಿಸಿದಿರಿ. ಮುಂದೆ ತಂದೆಗೆ ತಕ್ಕ ಮಗನಾಗಿ ಬಾಳುತ್ತೇನೆ” ಎಂದನು. ವೇಂಕಟನಾಥರು ಅವನ ಬೆನ್ನುಸವರಿ “ನಿನ್ನಲ್ಲಿ ನನಗಾವ ಕೋಪವೂ ಇಲ್ಲಪ್ಪ. ನಿಮ್ಮ ತಂದೆಗೆ ಸಂತೋಷವಾಗುವಂತೆ ವರ್ತಿಸು” ಎಂದರು. 

ಭೀಮರಾಯರು “ಸ್ವಾಮಿ, ತಾವು ಷಾಷಿಕ ಕುಲಭೂಷಣರೆಂದು ತಿಳಿದು ಮಹದಾನಂದವಾಯಿತು. ನಾನೂ ಷಾಷಿಕನೇ ! ಕೌಶಿಕಗೋತ್ರದ 'ಅಂಕರಸ' ಮನೆತನದವರು” ಎಂದು ನಮಸ್ಕರಿಸಿದರು. ಆಚಾರ್ಯರು “ಬಹಳ ಸಂತೋಷ, ವಂಶಬಂಧುಗಳ ಆತಿಥ್ಯ ಸ್ವೀಕರಿಸಲು ತನಗೂ ಅಭಿಮಾನವೆನಿಸುವುದು” ಎಂದರು. ಪುರೋಹಿತರು ಆಚಾರ್ಯ ದಂಪತಿಗಳಿಗೆ ತೀರ್ಥ-ಪ್ರಸಾದ ನೀಡಿದ ಮೇಲೆ ಸಕಲ ಬ್ರಾಹ್ಮಣ-ಸುವಾಸಿನಿಯರ ಭೋಜನವಾಯಿತು. 

ಭೋಜನಾನಂತರ ಆಚಾರ್ಯ ದಂಪತಿಗಳನ್ನು ಭೀಮರಾಯರು ಮಣೆಯ ಮೇಲೆ ಕೂಡಿಸಿ, ಪತ್ನಿಯಿಂದ ಸರಸ್ವತಮ್ಮನಿಗೆ ಅರಶಿನ-ಕುಂಕುಮ ಸೀರೆ-ಖಣ-ಹೂಗಳನ್ನು ಕೊಡಿಸಿ, ಆಚಾರ್ಯರಿಗೆ ಶಾಲುಹೊದಿಸಿ, ಎರಡುನೂರು ವರಹಗಳನ್ನು ತಟ್ಟೆಯಲ್ಲಿಟ್ಟು ಸಮರ್ಪಿಸಿದರು. ಆಚಾರ್ಯರು ಇದೆಲ್ಲಾ ಏನು ರಾಯರೇ” ಎನಲು ರಾಯರು ಕುಲಬಂಧುಗಳಿಗೆ ಉಡುಗೊರೆ, ಇದು ಅಪರಾಧ ಕಾಣಿಕೆ” ಎಂದರು, ಬೇಡ ಬೇಡವೆಂದರೂ ರಾಯರು ಬಿಡಲಿಲ್ಲ. ಕೊನೆಗೆ ಅದನ್ನು ಸ್ವೀಕರಿಸಿ ಅಲ್ಲಿಯೇ ಇದ್ದ ಬ್ರಾಹ್ಮಣರುಗಳಿಗೆ ದ್ರವ್ಯದಾನಮಾಡಿ ಕರಮುಗಿದರು. ಆಚಾರ್ಯರ ಔದಾರ್ಯದಿಂದ ಸಕಲರೂ ಮುದಿಸಿದರು.

ಆನಂತರ ಸಕಲ ಬ್ರಾಹ್ಮಣರು ಭೀಮರಾಮರ ಮನೆಯವರೆಲ್ಲರೂ ಆಚಾರ್ಯ ದಂಪತಿಗಳನ್ನು ಗಾಡಿಗೆ ಹತ್ತಿಸಿ ಬೀಳ್ಕೊಟ್ಟರು. ಗಾಡಿ ಘಲುಘಲು ಶಬ್ದಮಾಡುತ್ತಾ ಹೊರಟಿತು. ಅದು ಊರ ಹೊರವಲಯಕ್ಕೆ ಬಂದಕೂಡಲೇ ದರಹಸಿತವದನಳಾದ ಸರಸ್ವತಮ್ಮ ಪತಿಯ ಪಾದಗಳ ಮೇಲೆ ಶಿರವಿರಿಸಿ” ಸ್ವಾಮಿ, ನೀವು ಮಹಾತ್ಮರು, ಮಂತ್ರಸಿದ್ಧರು. ನಿಮ್ಮ ಕರಪಿಡಿಯಲು ನಾನೆಷ್ಟು ಜನ್ಮ ಪುಣ್ಯಗಳಿಸಿದ್ದೆನೋ” ಎಂದು ಆನಂದಬಾಷ್ಪದಿಂದ ಪತಿಯ ಪಾದ ತೊಳೆದಳು. ಆಚಾರ್ಯರು “ನೀನೆಷ್ಟು ಭಾವುಕಳೇ ಸರಸ !” ಎಂದು ಅವಳ ಭುಜಪಿಡಿದು ಮೇಲೆತ್ತಿ ನಸುನಕ್ಕರು. ಸರಸ್ವತಿಯೂ ನಗುತ್ತಾ “ಮಾನ್ಯರಾದ ನೀವು ನನ್ನ ಹೃದಯವಲ್ಲಭರಾಗಿರುವಾಗ ಭಾವುಕತನ ಸ್ವಾಭಾವಿಕವಷ್ಟೆ !” ಎಂದಳು. 

ವೇಂ : ಸರಸ್ವತಿ, ನನ್ನಲ್ಲಿ ಅದೇನು ಮಹತ್ವ ಕಂಡು ನನ್ನನ್ನಿಷ್ಟು ಪ್ರೀತಿಸುವೆ ? 

ಸರ : ನಿಮ್ಮ ಬಾಳಗೆಳತಿಯಾಗಿ ಪ್ರತಿದಿನ, ಪ್ರತಿಕ್ಷಣ ನಿಮ್ಮ ವಿನೂತನ ಮಹಿಮಾತಿಶಯವನ್ನು ಕಾಣುತ್ತಾ ಬಂದಿದ್ದೇನೆ. ಇಂದು ಪ್ರತ್ಯಕ್ಷವಾಗಿ ನಿಮ್ಮ ಮಹತ್ವ, ಮಹಿಮೆ ಕಂಡ ಈ ನಿಮ್ಮ ಚರಣದಾಸಿ ಪ್ರೇಮೋನ್ಮಾದಿನಿಯಾಗಿದ್ದಾಳೆ. 

ವೇಂ : ಇಂದಿನ ಎಲ್ಲ ಘಟನೆಯೂ ನಿನ್ನ ಪ್ರಭಾವದಿಂದ ಘಟಿಸಿದೆ ! ಅದರಲ್ಲಿ ನನ್ನ ಮಹತ್ವವೇನಿಲ್ಲ ! 

ಸರ : (ಅಚ್ಚರಿಯಿಂದ) ಇಂದಿನ ನಿಮ್ಮ ಪವಾಡದಲ್ಲಿ ನನ್ನ ಪಾತ್ರವೇನಿಲ್ಲ. 

ವೇಂ : ಅದು ನಡೆದುದೇ ನಿನ್ನಿಂದ ! 

ಸರ : ಅದು ಹೇಗೆ ? 

ವೇಂ : ನಾನು ಗಂಧ ತೇಯುವುದನ್ನು ಕಂಡು ನೀನು ಬಲುನೊಂದೆ, ನಿನ್ನ ಕಣ್ಣಿನಲ್ಲಿ ದುಃಖಾಶ್ರು ಸುರಿಯಿತು ! ಅಲ್ಲವೇ ? 

ಸರ : ಆ ಸ್ಥಿತಿಯಲ್ಲಿ ನಿಮ್ಮನ್ನು ಕಂಡು ನನ್ನ ಕರುಳು ಕತ್ತರಿಸಿ ಬಂದಂತಾಗಿ ದುಃಖ ಉಮ್ಮಳಿಸಿ ಕಣ್ಣೀರುದರಿತು. ನಿಜ. ಅದಕ್ಕೂ ನಿಮ್ಮ ಮಾತಿಗೂ ಏನು ಸಂಬಂಧ ? 

ವೇಂ : ಸರಸ ! ಸಾಧಿಯರ ಕಣ್ಣೀರು ಜಗತ್ತನ್ನೇ ದಹಿಸಬಲ್ಲದು ! ನಿನ್ನ ಕಣ್ಣಿನಿಂದ ಹರಿದುದು ನೀರಲ್ಲ, ಬೆಂಕಿಯ ಕಣಗಳು ! ನಿನ್ನ ಕಣ್ಣಿನಿಂದ ತೊಟ್ಟಿಕ್ಕಿದ ಒಂದೊಂದು ಹನಿ ನೀರೂ ಬೆಂಕಿಯ ಕಣಗಳಾಗಿ ಗಂಧದಲ್ಲಿ ಪ್ರವಿಷ್ಟವಾಗಿ, ಪಾಪ ನಿರಪರಾಧಿಗಳಾದ ಬ್ರಾಹ್ಮಣರನ್ನು ದಹಿಸಹತ್ತಿತು ! ಅದಕ್ಕೆ ನಿನ್ನ ಕಣ್ಣೀರು ಕಾರಣವೇ ಹೊರತು ಅದರಲ್ಲಿ ನನ್ನ ಮಂತ್ರಶಕ್ತಿಯೇನಿಲ್ಲ! 

ಸರ : (ಅಪ್ರತಿಭಳಾಗಿ). ಸ್ವಾಮಿ, ನೀವು ಮಹಾಪ್ರಚಂಡರು. ನಿಮ್ಮ ವಾದಶೈಲಿಯನ್ನಾರಾದರೂ ಕೇಳಿದರೆ ನಿಜವೆಂದೇ ಭ್ರಮಿಸಿಯಾರು ! ಅಲ್ಪಳಾದ ನನಗೆಲ್ಲಿದೆ ಆ ಶಕ್ತಿ ? ಇದೆಲ್ಲಾ ನಿಮ್ಮ ಪ್ರಭಾವ. ನನ್ನನ್ನು ಉಬ್ಬಿಸಬೇಡಿ, ನಿಮ್ಮ ತೃಪ್ತಿಯಾಗಲೆಂದು ನಾನೊಪ್ಪಿದರೂ ನೀವು ಗಂಧವನ್ನು ಅಭಿಮಂತ್ರಿಸಿ ಬ್ರಾಹ್ಮಣರಿಗಿತ್ತು ಅವರ ಮೈಉರಿಯನ್ನು ಪರಿಹರಿಸಿದ್ದು ನಿಮ್ಮ ಮಂತ್ರಪ್ರಭಾವದಿಂದಲ್ಲವೇ ? 

ವೇಂ : (ಮಂದಹಾಸ ಬೀರಿ) ಅದು ನಡೆದುದೂ ನಿನ್ನ ಪ್ರಭಾವದಿಂದಲೇ ! 

ಸರ : (ನಸುಗೋಪದಿಂದ) ಇದೇನು. ಮಾತುಮಾತಿಗೆ ನಿನ್ನ ಪ್ರಭಾವ ಎನ್ನುವಿರಿ ? ನಿಮ್ಮ ಮಂತ್ರಶಕ್ತಿಯ ಮಹತ್ವವನ್ನು ಮರೆಮಾಚಿ ಮಡದಿಯ ಮನಮೆಚ್ಚಿಸಲೇಕೆ ಪ್ರಯತ್ನಿಸುವಿರಿ ? 

ವೇಂ : (ಪತ್ನಿಯ ಗಲ್ಲಪಿಡಿದು) ಸರಸ ! ನೀನು ಕುಪಿತಳಾದರೆ ಎಷ್ಟು ಸುಂದರಿಯಾಗಿ ಕಾಣಿಸುವೆಯೇ ! 

ಸರ : (ಲಜ್ಜೆಯಿಂದ) ನನ್ನ ಪರಿಹಾಸಮಾಡದಿದ್ದರೆ ನಿಮಗೆ ತೃಪ್ತಿಯಾಗದೆಂದು ತೋರುವುದು. ಅದಿರಲಿ, ಮಾತು ಮರೆಸಬೇಡಿ, ನನ್ನ ಪ್ರಶ್ನೆಗೆ ಉತ್ತರ ಕೊಡಿ.

ವೇಂ : (ನಕ್ಕು) ಸರಸ್ವತಿ ! ಅಗ್ನಿದಾಹಪೀಡಿತರಾದ ಬ್ರಾಹ್ಮಣರನ್ನು ಕಾಪಾಡಿ ಎಂದು ಭೀಮರಾಯರು ನಮಸ್ಕರಿಸಿದ್ದನ್ನು ಕಂಡ ನಿನ್ನ ಕಣ್ಣುಗಳಿಂದ ಆನಂದಾಶ್ರು ಹರಿಯಿತು ! ಅಲ್ಲವೇ ? ನಿನ್ನ ಕಣ್ಣಿನಿಂದ ಉದುರಿದ ಆ ಆನಂದದ ಕಣ್ಣೀರೇ ಅಮೃತಬಿಂದುಗಳಾಗಿ ಗಂಧದಲ್ಲಿ ಆವಿಷ್ಟವಾಗಿ ಬ್ರಾಹ್ಮಣರ ತಾಪಕಳೆದು ಆನಂದವನ್ನು ತಂದಿತ್ತಿತು ! ಆದ್ದರಿಂದ ಬ್ರಾಹ್ಮಣರ ತಾಪ-ಸಂತೋಷಗಳಿಗೆ ನಿನ್ನ ಕಣ್ಣೀರೇ ಕಾರಣವಾಯಿತಲ್ಲವೆ ? 

ಸರ : ಸ್ವಾಮಿ. ನಿಮ್ಮನ್ನು ವಾದದಲ್ಲಿ ಜಯಿಸಲು ನಾನು ಅಸಮರ್ಥಳು. ನಿಮ್ಮ ಮಾತಿಗೆ ನಾನು ಮರುಳಾಗಲಾರೆ ! ನಿಜವಾಗಿ ನೀವು ಮಂತ್ರಸಿದ್ದರು, ಮಹಾನುಭಾವರು. ನಿಮ್ಮ ಮಡದಿಯಾದ ನನಗಾಗಿರುವ ಆನಂದ, ಹೆಮ್ಮೆಗಳನ್ನು ಬರಡು ಮಾತುಗಳಿಂದ ವರ್ಣಿಸಲಾರೆ ! ಅದು ಸರಿ, ಭೀಮರಾಯರಿತ ಧನವನ್ನೇಕೆ ಬ್ರಾಹ್ಮಣರಿಗೆ ದಾನಮಾಡಿಬಿಟ್ಟಿರಿ? 

ವೇಂ : ಹಾಗೆ ಮಾಡಿರದಿದ್ದರೆ ನಾನು ದೈವದ್ರೋಹಿಯಾಗುತ್ತಿದ್ದೆ. 

ಸರ : ಅದು ಹೇಗೆ ? 

ವೇಂ : ಸರಸ್ವತಿ, ಇಂದೇನೋ ಒಂದು ಪವಾಡ ನಡೆದುಹೋಯಿತು. ಅದಕ್ಕೆ ನನ್ನ ಮಂತ್ರಸಿದ್ಧಿ ಕಾರಣವೆಂದು ಎಲ್ಲರೂ ಭಾವಿಸಿದ್ದಾರೆ. ಅದೊಂದು ಆಕಸ್ಮಿಕವೆಂದು ನನ್ನ ನಂಬಿಕೆ. ಒಂದು ವೇಳೆ ವೇದಾಭಿಮಾನಿದೇವತೆಗಳು ನನ್ನಲ್ಲಿ ಪ್ರಸನ್ನರಾಗಿ ಮಂತ್ರಸಿದ್ಧಿಯನ್ನು ಅನುಗ್ರಹಿಸಿದ್ದಾರೆಂದು ಇಟ್ಟುಕೊಂಡರೂ, ಅವರಿತ್ತ ಧನವನ್ನೂ ಸ್ವೀಕರಿಸಿ ನಾನೇ ಇಟ್ಟುಕೊಂಡಿದ್ದರೆ ಅದು ಅಪರಾಧವಾಗುತ್ತಿತ್ತು. ಭೀಮರಾಯರು ಉಡುಗೊರೆಯೇನೋ ವಂಶಬಂಧುವೆಂದು ನೀಡಿದರು. ಅದು ಸರಿ. ಅವರು ಧನವನ್ನು “ಅಪರಾಧ ಕಾಣಿಕೆ” ಎಂದು ಹೇಳಿಕೊಟ್ಟರು. ಅವರು ನಾನು ಮಂತ್ರಸಿದ್ಧ, ಬ್ರಾಹ್ಮಣರನ್ನು ಕಾಪಾಡಿದೆ ಎಂದು ತಾನೇ ಹಣ ಕೊಟ್ಟಿದ್ದು ? ಅದನ್ನು ಸ್ವೀಕರಿಸಿದ್ದರೆ, ಅವರ ಭಾವನೆಯನ್ನು ನಾನು ಒಪ್ಪಿದಂತಾಗುತ್ತಿತ್ತು. ದೈವಾನುಗ್ರಹದಿಂದ ಒಂದು ವೇಳೆ ಮಂತ್ರಸಿದ್ಧಿ ನನಗಾಗಿದ್ದರೆ, ಅದನ್ನು ನಾನು ವ್ಯಾಪಾರ ಮಾಡಿದಂತಾಗುತ್ತಿದ್ದಿತ್ತಲ್ಲವೇ ? ಮಂತ್ರಸಿದ್ಧಿಗೆ ಬೆಲೆ ಪಡೆದಂತಾಗುತ್ತಿರಲಿಲ್ಲವೇ ? ದೈವಿಕಶಕ್ತಿ, ಸಿದ್ಧಿಗಳನ್ನು ವಿಕ್ರಯಮಾಡಿದರೆ, ಸ್ವಾರ್ಥಕ್ಕೆ ಬಳಸಿಕೊಂಡರೆ, ಅದು ದೈವದ್ರೋಹ ಮಾತ್ರವಲ್ಲ ; ಆ ಸಿದ್ಧಿಯು ಹೊರಟುಹೋಗುವುದು ! ದೈವಾನುಗ್ರಹದಿಂದ ಆ ದೈವಿಕಸಿದ್ಧಿನನ್ನಲ್ಲಿದ್ದರೆ, ಅದನ್ನು ಲೋಕಕಲ್ಯಾಣಕ್ಕಾಗಿ ಬಳಸಬೇಕೇ ಹೊರತು ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳಬಾರದು. ಆದ್ದರಿಂದಲೇ ನಾನು ಕೂಡಲೇ ಆ ಧನವನ್ನು ಬ್ರಾಹ್ಮಣರಿಗೆ ದಾನಮಾಡಿಬಿಟ್ಟಿದ್ದು ! ಈಗ ಅರ್ಥವಾಯಿತೇ ? 

ಸರ : ನಿಜ ಸ್ವಾಮಿ, ನೀವು ಜ್ಞಾನಿಗಳು, ಶಾಸ್ತ್ರಾರ್ಥ ಬಲ್ಲವರು. ನೀವು ಮಾಡಿದ್ದು ಸರಿಯೆಂದು ನನಗೀಗ ಅರ್ಥವಾಯಿತು. 

ವೇಂ : ನೋಡು ಸರಸ್ವತಿ, ಇಂಥ ಸಂದರ್ಭಗಳು ಭಗವಂತನ ಇಚ್ಛೆ, ಸಂಕಲ್ಪಗಳಂತೆ ನಡೆಯುವುದೆಂದು ನಾವು ತಿಳಿದು ನಿರ್ಲಿಪ್ತರಾಗಿರಬೇಕು. ಅದು ಬಿಟ್ಟು ನನ್ನಲ್ಲಿ ಅಪೂರ್ವ ಸಿದ್ಧಿಯಿದೆ, ನಾನು ಹೀಗೆ ಮಾಡಿದೆ ಎಂದು ತಿಳಿದರೆ ಅಹಂಕಾರ-ಮಮಕಾರ ದ್ವೇಷಾಸೂಯೆಗಳಿಗೆ ಕಾರಣವಾಗಿ ನಮ್ಮ ಅಧಃಪತನವಾಗುವುದು. ಆದುದರಿಂದ ಇಂಥ ವಿಷಯಗಳಲ್ಲಿ ಎಚ್ಚರದಿಂದಿರಬೇಕು. 

ಹೀಗೆ ಪತಿ-ಪತ್ನಿಯರು ಸರಸ ಸಲ್ಲಾಪಮಗ್ನರಾಗಿ ದಾರಿ ಕ್ರಮಿಸಿ ಕಾವೇರೀಪಟ್ಟಣ ಅಗ್ರಹಾರಕ್ಕೆ ಬಂದು ತಲುಪಿದರು. 

ಶ್ರೀಸುಧೀಂದ್ರತೀರ್ಥರ ಅಪ್ಪಣೆಯಂತೆ ಕಾವೇರಿಪಟ್ಟಣದಲ್ಲಿ ಸಂಸ ತವಿದ್ಯಾಪೀಠವನ್ನು ಪ್ರಾರಂಭಿಸಿದರು. ಅದೇ ಕಾಲಕ್ಕೆ ಗೋಪಮ್ಮನವರೂ ಬಂದು ಸೇರಿದರು. ಊರಿನ ಅನೇಕ ಲೌಕಿಕ ವೈದಿಕರು ಎಂಟರಿಂದ ಹದಿನಾರು ವಯಸ್ಸಿನ ಮಕ್ಕಳನ್ನು ವಿದ್ಯಾಪೀಠಕ್ಕೆ ಸೇರಿಸಿದರು. ಆಚಾರ್ಯರಲ್ಲಿ ಮೂವತ್ತು, ನಲವತ್ತು ಜನ ವಿದ್ಯಾರ್ಥಿಗಳು ಋಕ್ -ಯಜುರ್ವೇದ, ಕಾವ್ಯಗಳು, ನ್ಯಾಯ-ವೇದಾಂತ-ವ್ಯಾಕರಣಶಾಸ್ತ್ರಗಳ ಪ್ರಾರಂಭಿಕ ಗ್ರಂಥಗಳನ್ನು ಅಧ್ಯಯನ ಮಾಡತೊಡಗಿದರು. ನಾಲ್ಕಾರು ತಿಂಗಳುಗಳಲ್ಲೇ ವಿದ್ಯಾರ್ಥಿಗಳು ಅಪಾರ ಪ್ರಗತಿ ಸಾಧಿಸಿ ಉತ್ಸಾಹದಿಂದ ವ್ಯಾಸಂಗಮಾಡುತ್ತಿದ್ದುದರಿಂದ ವಿದ್ಯಾಪೀಠದ ಕೀರ್ತಿ ಹರಡತೊಡಗಿತು. ವೇಂಕಟನಾಥರ ಸರ್ವಶಾಸ್ತ್ರಪಾಂಡಿತ್ಯ, ಪಾಠಪ್ರವಚನ ವೈಖರಿ, ವಿದ್ಯಾರ್ಥಿಗಳಲ್ಲಿ ಮಾಡುತ್ತಿದ್ದ ಪ್ರೇಮಾದರಗಳಿಂದ ಆಚಾರ್ಯರ ಕೀರ್ತಿ ವಿಖ್ಯಾತವಾಯಿತು. ಈ ವಿಚಾರತಿಳಿದು ಉತ್ಸಾಹಯುತರಾದ ಹತ್ತು-ಹನ್ನೆರಡು ಜನ ಸುತ್ತಮುತ್ತಲಿನ ಅಗ್ರಹಾರಗಳ ಯುವಕರು ವಿದ್ಯಾಪೀಠಕ್ಕೆ ಬಂದುಸೇರಿ ನ್ಯಾಯ-ವೇದಾಂತ-ವ್ಯಾಕರಣಾದಿಶಾಸ್ತ್ರಗಳ ಉದ್ದಂಥಗಳನ್ನು ವ್ಯಾಸಂಗ ಮಾಡಲಾರಂಭಿಸಿದರು. ಆಚಾರ್ಯರಿಗೆ ಸಂತೋಷವಾಯಿತು. ಊರಿನ ವಿದ್ಯಾರ್ಥಿಗಳ ವಸತಿ-ಊಟಗಳ ಸಮಸ್ಯೆಯುಂಟಾಯಿತು. ಆಚಾರ್ಯರು ಆ ವಿದ್ಯಾರ್ಥಿಗಳಿಗೆ ವಿದ್ಯಾಪೀಠದಲ್ಲಿಯೇ ವಸತಿಯನ್ನೇರ್ಪಡಿಸಿ, ತಮ್ಮ ಮನೆಯಲ್ಲಿಯೇ ಭೋಜನ ವ್ಯವಸ್ಥೆ ಮಾಡಿದರು. ಆಚಾರ್ಯರ ಈ ಔದಾರ್ಯದಿಂದ ವಿದ್ಯಾರ್ಥಿಗಳು ವೆಂಕಟನಾಥರಲ್ಲಿ ಬಹು ಗೌರವಾದರ ಭಕ್ತಿಗಳಿಂದ ವರ್ತಿಸುತ್ತಾ ನಿರಾತಂಕವಾಗಿ ಶಾಸ್ತ್ರಾಧ್ಯಯನ ಮಾಡತೊಡಗಿದರು. 

ಪತಿಪ್ರೇಮರತಳಾದ ಸರಸ್ವತಮ್ಮ ಭಗವದನುಗ್ರಹದಿಂದ ಗರ್ಭಧರಿಸಿದಳು. ಸೊಸೆಯು ಗರ್ಭಿಣಿಯಾದ್ದರಿಂದ ಗೋಪಮ್ಮನವರಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ಸೊಸೆಯನ್ನು ಹೂವಿನಂತೆ ನೋಡಿಕೊಳ್ಳಹತ್ತಿದರು. ತಾವು ತಂದೆಯಾಗಲಿರುವ ಸಮಾಚಾರವರಿತು ಆಚಾರ್ಯರ ಹೃದಯವರಳಿತು. ಪತ್ನಿಯನ್ನು ಹೆಚ್ಚಾಗಿ ಪ್ರೀತಿಸುತ್ತಾ ಅವಳಿಗೆ ಸದಾ ಸಂತೋಷವಾಗಿರುವಂತೆ ಯತ್ನಿಸುತ್ತಿದ್ದರು. 

ಸರಸ್ವತಮ್ಮನಿಗೆ ಐದು ತಿಂಗಳಾದಾಗ ಗೋಪಮ್ಮ ಊರಿನ ಸುಮಂಗಲೆಯರನ್ನು ಆಹ್ವಾನಿಸಿ ಸೊಸೆಗೆ ಹೂಮುಡಿಸುವ ಶಾಸ್ತ್ರವನ್ನು ವೈಭವದಿಂದ ನಡೆಸಿದರು. ಏಳನೆಯ ತಿಂಗಳಿನಲ್ಲಿ ವೇಂಕಟನಾಥರು ಪತ್ನಿಗೆ ಸೀಮಂತ-ಪುಂಸವನ ಸಂಸ್ಕಾರವನ್ನು ಅದ್ದೂರಿಯಿಂದಾಚರಿಸಿ ಅತ್ತೆ-ಮಾವಂದಿರೊಂದಿಗೆ ಪ್ರಸವಕ್ಕಾಗಿ ಸರಸ್ವತಿಯನ್ನು ತಂದೆಯ ಮನೆಗೆ ಕಳುಹಿಸಿಕೊಟ್ಟರು. 

ನಳಸಂವತ್ಸರದ ಚೈತ್ರಶುಕ್ಲ ಸಪ್ತಮೀ ದಿವಸ ಶುಭಲಗ್ನದಲ್ಲಿ ಸರಸ್ವತಮ್ಮ ಪುತ್ರರತ್ನವನ್ನು ಪ್ರಸವಿಸಿದರು. ಆ ವಿಚಾರ ತಿಳಿದು ಗೋಪಮ್ಮ-ಆಚಾರ್ಯರಿಗೆ ಪರಮಾನಂದವಾಯಿತು. ಮಾವನವರ ಆಹ್ವಾನದಂತೆ ತಾಯಿಯೊಡನೆ ಮಾವನ ಮನೆಗೆ ತೆರಳಿದ ವೇಂಕಟನಾಥರು ಸರಸ್ವತಿ-ಮಗುಗಳಿಗೆ ಮಂಗಳಸ್ನಾನವಾದ ಮೇಲೆ ಪುತ್ರನ ಜಾತಕರ್ಮ, ನಾಮಕರಣ ಸಮಾರಂಭವನ್ನು ನೆರವೇರಿಸಿ ಮಗನಿಗೆ “ಲಕ್ಷ್ಮೀನಾರಾಯಣ” ಎಂದು ಹೆಸರಿಟ್ಟರು. ಅತಿ ಸುಂದರನಾಗಿದ್ದ ಕುಮಾರನನ್ನು ಕಂಡು ಆಚಾರ್ಯರು, ಬಂಧು-ಬಾಂಧವರು ಮುದಿಸಿದರು. ಗೋಪಮ್ಮನವರ ಆನಂದಕ್ಕಂತೂ ಮೇರೆಯೇ ಉಳಿಯಲಿಲ್ಲ. ಮೊಮ್ಮಗನನ್ನು ಎತ್ತಿ ಆಡಿಸಿ, ಲಾಲನೆಗೈಯುತ್ತಾ ಹರ್ಷಿಸುತ್ತಿದ್ದರು. ನಾಲ್ಕಾರು ದಿನಗಳಾದ ಮೇಲೆ ಅಣ್ಣ, ಅತ್ತಿಗೆ, ಅಮ್ಮ, ವೆಂಕಟನಾರಾಯಣಾದಿ- ಗಳೊಡನೆ ವೇಂಕಟನಾಥರು ರಾಮಚಂದ್ರಪುರಕ್ಕೆ ಬಂದರು. 

ಪೌತ್ರನ ನಾಮಕರಣ ಮಾಡಿಕೊಂಡು ಬಂದ ಲಾಗಾಯಿತು, ಗೋಪಿಕಾಂಬಾದೇವಿಯವರು ಜ್ವರ-ಕೆಮ್ಮುಗಳಿಂದ ಬಳಲುತ್ತಿದ್ದುದರಿಂದ ವೆಂಕಟನಾರಾಯಣರು ಕಾವೇರೀಪಟ್ಟಣಕ್ಕೆ ಹೊರಡುವುದನ್ನು ನಿಲ್ಲಿಸಿ ಔಷಧೋಪಚಾರಗಳಿಂದ ತಾಯಿಯ ಸೇವಾ-ಶುಕ್ರೂಷೆಯಲ್ಲಿ ನಿರತರಾದರು. ಗೋಪಮ್ಮನವರ ಆರೋಗ್ಯ ಸುಧಾರಿಸದೇ, ದಿನೇ ದಿನೇ ಉಲ್ಬಣಿಸಿ ಒಂದು ದಿನ ತಮ್ಮ ಅರವತ್ತನೇ ವಯಸ್ಸಿನಲ್ಲಿ ಶ್ರೀಹರಿನಾಮಸ್ಮರಣಪೂರ್ವಕ ಅಸುನೀಗಿ ವೈಕುಂಠವಾಸಿಗಳಾದರು. ತಾಯಿಯ ನಿಧನದಿಂದ ಅಣ್ಣ-ತಮ್ಮಂದಿರಿಗೆ ದೊಡ್ಡ ಆಘಾತವಾದಂತಾಯಿತು. ಪ್ರೇಮಮಯಿಯಾದ ತಾಯಿಯ ನಿಧನದಿಂದ ಆ ಸಹೋದರರು, ಬಾಂಧವರು ದುಃಖತಪ್ತರಾದರು. ಹರಿಚಿತ್ತಕ್ಕೆ ಉಪಾಯವಿಲ್ಲೆಂದು ಗುರುರಾಜ-ವೇಂಕಟನಾಥರು ತಾಯಿಯ ಅಂತ್ಯಕ್ರಿಯೆಯನ್ನು ಶ್ರದ್ಧೆಯಿಂದ ವಿಧಿಪೂರ್ವಕವಾಗಿ ನೆರವೇರಿಸಿದರು. ಬಂಧು-ಬಾಂಧವರೆಲ್ಲರೂ ಬಂದು ಆ ಮಹಾತಾಯಿಗೆ ಶ್ರದ್ಧಾಂಜಲಿ- ಯನ್ನರ್ಪಿಸಿದರು.

ಶುಭಸ್ವೀಕಾರವಾದಮೇಲೆ ವೇಂಕಟನಾಥರು ಅಕ್ಕ, ಭಾವ, ಲಕ್ಷ್ಮೀನರಸಿಂಹಾಚಾರ, ಸೋದರಳಿಯ ನಾರಾಯಣನೊಡನೆ ಕಾವೇರೀಪಟ್ಟಣಕ್ಕೆ ಬಂದು ಸೇರಿದರು. ಲಕ್ಷ್ಮೀನರಸಿಂಹಾಚಾರ-ವೆಂಕಟಾಂಬಾದೇವಿಯವರು ವೇಂಕಟನಾಥರಿಗೆ ಸ್ವಲ್ಪವೂ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಹತ್ತಿದರು. ಒಂದು ದಿನ ಭಾವ ಲಕ್ಷ್ಮೀನರಸಿಂಹಾಚಾರೈರು ಮಧ್ಯವಯಸ್ಕರಾದ ದಂಪತಿಗಳನ್ನು ಕರೆತಂದು “ವೆಂಕಟನಾಥ ! ಇವರು ನನ್ನ ದೂರದ ಬಂಧುಗಳು, ಶ್ರೀನಿವಾಸ-ಪದ್ಮಾವತಿಯರೆಂದು ಇವರ ಹೆಸರು. ನಿನ್ನ ಅನುಕೂಲಕ್ಕಾಗಿ ಇವರನ್ನು ಕರೆತಂದಿದ್ದೇನೆ. ಶ್ರೀನಿವಾಸಾಚಾರರು ವಿದ್ಯಾಪೀಠದ ಮೇಲ್ವಿಚಾರಣೆ, ನಿನ್ನ ಭೂಸ್ವಾಸ್ಥ್ಯ, ಮನೆಗಳ ವ್ಯವಹಾರ ನೋಡಿಕೊಳ್ಳುವರು. ಪದ್ಮಾವತಮ್ಮ ನಿಮ್ಮ ಮನೆಯ ಅಡಿಗೆ, ಮುಂತಾದ ಕಾರ್ಯ ನಿವರ್ಹಿಸುವರು” ಎಂದು ಹೇಳಿದರು. ವೇಂಕಟನಾಥರು “ಸಂತೋಷ, ಭಾವ. ಇವರು ವಿದ್ಯಾಪೀಠದಲ್ಲೇ ವಾಸಮಾಡಲಿ. ನಮ್ಮ ಮನೆಯಲ್ಲಿಯೇ ಊಟ ಮಾಡಲಿ. ಸಧ್ಯ, ನನಗೂ ಮುಂದೆ ಸರಸ್ವತಿಗೂ ಬಹಳ ಅನುಕೂಲವಾಗುವುದು” ಎಂದರು. ಶ್ರೀನಿವಾಸಾಚಾರ್ಯರು ಆಚಾರರ ಔದಾರದಿಂದ ಸಂತುಷ್ಟರಾಗಿ “ನಿಮ್ಮ ಮನೆ, ವಿದ್ಯಾಪೀಠದ ವ್ಯವಹಾರವೆಲ್ಲ ನೋಡಿಕೊಂಡು ನಿಮಗೆ ಅನುಕೂಲರಾಗಿ ವರ್ತಿಸುತ್ತೇವೆ” ಎಂದು ಹೇಳಿದರು. ಇದಾದ ಕೆಲದಿನಗಳಾದ ಮೇಲೆ ಭಾವ-ಅಕ್ಕ-ಸೋದರಳಿಯಿಂದಿರು ಆಚಾರರಿಂದ ಬೀಳ್ಕೊಂಡು ಮಧುರೆಗೆ ಹೊರಟರು. 

ಶ್ರೀನಿವಾಸಾಚಾರ್ಯ ದಂಪತಿಗಳ ಸ್ವಭಾವ, ನಡವಳಿಕೆ, ಸದಾಚಾರ, ಕಾರನಿರ್ವಹಣೆಗಳನ್ನು ಕಂಡು ಸಂತುಷ್ಟರಾದ ವೇಂಕಟನಾಥರು ಮನೆಯ ಜವಾಬ್ದಾರಿಯನ್ನು ಅವರಿಗೊಪ್ಪಿಸಿ ನಿರಾಲೋಚನೆಯಿಂದ ವಿದ್ಯಾಪೀಠದಲ್ಲಿ ಪಾಠಪ್ರವಚನಾಸಕ್ತರಾದರು. ಐದು ತಿಂಗಳ ಬಾಣಂತಿಯಾದ ಸರಸ್ವತಿ - ಲಕ್ಷ್ಮೀನಾರಾಯಣರನ್ನು ತೊಟ್ಟಲು ಬಟ್ಟಲುಗಳೊಡನೆ ಕರತಂದು ಅತ್ತೆ-ಮಾವಂದಿರು ವೇಂಕಟನಾಥನಿಗೊಪ್ಪಿಸಿ ಒಂದೆರಡು ದಿನವಿದ್ದು ಊರಿಗೆ ತೆರಳಿದರು. 

ನವಸೌಂದರ್ಯ-ಲಾವಣ್ಯ-ಕಾಂತಿಗಳಿಂದ ಶೋಭಿಸುತ್ತಿರುವ ಪತ್ನಿ, ಅತಿಸುಂದರನಾದ ಮುದ್ದು ಮಗನನ್ನು ಕಂಡು ಆಚಾರರು ಹರ್ಷನಿರ್ಭರರಾದರು. ಮಗನ ಬಾಲಲೀಲೆಗಳನ್ನು ನೋಡುತ್ತಾಆ ಪತಿ-ಪತ್ನಿಯರು ಉಲ್ಲಸಿತರಾದರು. ಆಚಾರ್ಯರ ಮನೆ ಆನಂದದ ನೆಲೆವೀಡಾಯಿತು. 

ವಿದ್ಯಾಪೀಠದ ಪ್ರೌಢವಿದ್ಯಾರ್ಥಿಗಳಿಗೆ ಮಗು ಲಕ್ಷ್ಮೀನಾರಾಯಣನಲ್ಲಿ ಅಪಾರ ಪ್ರೀತಿ, ಮಮತೆ, ದಿನಾ ಮಗುವನ್ನು ಸ್ವಲ್ಪಹೊತ್ತಾದರೂ ಲಾಲಿಸಿ ಮುದ್ದಾಡದಿದ್ದರೆ ಅವರಿಗೆ ತೃಪ್ತಿಯೇ ಇರುತ್ತಿರಲಿಲ್ಲ. ಸರಸ್ವತಮ್ಮನ ಸತ್ತ್ವಭಾವ, ವಾತ್ಸಲ್ಯ, ಔದಾರ್ಯ, ವಿಶ್ವಾಸಗಳಿಂದ ಮಾರುಹೋದ ವಿದ್ಯಾರ್ಥಿಗಳು ಸರಸ್ವತಮ್ಮನನ್ನು ಸ್ವಂತ ತಾಯಿಯಂತೆ ಭಾವಿಸಿ ಸೇವಿಸುತ್ತಾ ಅವರಿಗೆ ಬಹುವಿಶ್ವಾಸದವರಾದರು. 

ಪದ್ಮಾವತಮ್ಮ ಮನೆಗೆಲಸಗಳೆಲ್ಲವನ್ನೂ ಕಾಲಕಾಲಕ್ಕೆ ಅಚ್ಚುಕಟ್ಟಾಗಿ ಮಾಡುತ್ತಾ ಸರಸ್ವತಮ್ಮನವರಿಗೆ ಅತಿ ಪ್ರೀತಿಪಾತ್ರರಾದರು. ಆ ದಂಪತಿಗಳ ಸಜ್ಜನಿಕೆ, ಕಾರ್ಯ ನಿರ್ವಹಣಾ ಚಾತುರ, ವಿಧೇಯತೆಗಳಿಂದ ಸುಪ್ರೀತರಾದ ವೇಂಕಟನಾಥಾಚಾರ್ಯ ದಂಪತಿಗಳು ಎಲ್ಲ ಹೊಣೆಯನ್ನೂ ಅವರಿಗೊಪ್ಪಿಸಿ ಸುಖದಿಂದ ಕಾಲಕಳೆಯಹತ್ತಿದರು. ಆಚಾರರು, ಪಾಠಪ್ರವಚನಮಗ್ನರಾಗಿ, ಮುದ್ದುಕುಮಾರನ ಬಾಲಲೀಲೆಗಳಿಂದ ಹಿಗ್ಗುತ್ತಾ ಪ್ರಿಯಪತ್ನಿಯೊಡನೆ ಕಾಲಕಳೆದರು, ದಿನಗಳುರುಳಿದವು. 

ಕಾಳಯುಕ್ತಿ ಸಂ|| ವೈಶಾಖ ಶುಕ್ಲ ನವಮೀ ದಿನ ವೇಂಕಟನಾಥರು ಅಣ್ಣ, ಅತ್ತಿಗೆ ಭಾವ, ಅಕ್ಕ, ಹುಡುಗರು, ಬಾಂಧವರುಗಳನ್ನು ಕರೆಯಿಸಿಕೊಂಡು, ಅಂದು ಮಗ ಚಿ|| ಲಕ್ಷ್ಮೀನಾರಾಯಣನಿಗೆ ಚೌಲ, ಅಕ್ಷರಾಭ್ಯಾಸ ಸಮಾರಂಭವನ್ನು ಅತಿವೈಭವದಿಂದ ನೆರವೇರಿಸಿದರು. ಪಂಡಿತ ರಾಮಾಚಂದ್ರಾಚಾರರು ಶ್ರೀಸುಧೀಂದ್ರಗುರುಗಳು ಕಳಿಸಿದ ಉಡುಗೊರೆ, ಫಲಮಂತ್ರಾಕ್ಷತೆಗಳನ್ನಿತ್ತು ಆಶೀರ್ವದಿಸಿದರು. ಎಲ್ಲವೂ ಸಂತೋಷಪ್ರದವಾಗಿ ಜರುಗಿತು. ಆನಂತರ ಬಂದಿದ್ದವರೆಲ್ಲರೂ ಆಚಾರ ದಂಪತಿಗಳ ಅನುಮತಿ ಪಡೆದು ತಮ್ಮ ತಮ್ಮ ಊರುಗಳಿಗೆ ತೆರಳಿದರು.