ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೪೨. ಸಂಸಾರದ ರಸನಿಮಿಷಗಳು
ವೆಂಕಟಾಂಬಾ, ಕಮಲಾದೇವಿ-ಹುಡುಗರು ಊರಿಗೆ ಹೋದ್ದರಿಂದ ಸರಸ್ವತಿಗೆ ಬಹು ಬೇಸರವಾಯಿತು. ಸದಾ ನಗುನಗುತ್ತಾ ಅತ್ತಿಗೆ, ಓರಗಿತ್ತಿಯರ ಜೊತೆಗೆ ಸರಸಸಲ್ಲಾಪದಿಂದ ಕಾಲಕಳೆಯುತ್ತಿದ್ದ ಸರಸ್ವತಿಗೆ ಕಾಲಕಳೆದುದೇ ಅರಿವಾಗುತ್ತಿರಲಿಲ್ಲ. ಈಗ ಅವರಿಲ್ಲದ್ದರಿಂದ ಏನೋ ಒಂದು ಬಗೆಯ ಏಕಾಂಗಿತನ ಬಂದಂತಾಗಿತ್ತು. ಅವಳ ಮನಸ್ಸು ಸದಾ ಪ್ರೇಮ-ವಿಶ್ವಾಸಗಳನ್ನು ಬಯಸುತ್ತಿತ್ತು. ಅವಳ ಹೃದಯವೀಗ ಹೆಚ್ಚು ಹೆಚ್ಚಾಗಿ ಪತಿಯ ಸಾನ್ನಿಧ್ಯಕ್ಕಾಗಿ ಕಾತರಿಸುತ್ತಿತ್ತು. ಸ್ವಾಭಾವಿಕ ಲಜ್ಜೆ ಅದಕ್ಕೆ ಅಡ್ಡವಾಗಿತ್ತು. ಸೊಸೆಯು ಪತಿಯ ಸಾನ್ನಿಧ್ಯ-ಪ್ರೇಮಾಲಾಪಗಳಿಗಾಗಿ ಹಾತೊರೆಯುವುದನ್ನು ಸೂಕ್ಷ್ಮಮತಿಗಳಾದ ಗೋಪಮ್ಮ ಕಂಡುಹಿಡಿದು ಏನಾದರೊಂದು ನೆಪದಿಂದ ಸೊಸೆ-ಮಗ ಸಂತೋಷವಾಗಿರುವಂತೆ ಅವಕಾಶ ಕಲ್ಪಿಸುತ್ತಿದ್ದರು.
ಒಂದು ಮಧ್ಯಾಹ್ನ ಸೊಸೆ ಹಜಾರದಲ್ಲಿ ಕುಳಿತಿದ್ದಳು. ಅದನ್ನು ಕಂಡ ಗೋಪಮ್ಮ “ಸರಸ್ವತಿ, ದೇವಸ್ಥಾನದಲ್ಲಿ ಯಾರೋ ಪುರಾಣ ಹೇಳುತ್ತಿದ್ದಾರಂತೆ. ಸಾವಿತ್ರಮ್ಮ, ರಮಾಬಾಯಿ, ಮೂರು ದಿನದಿಂದ ನೀವೂ ಬನ್ನಿ ಎಂದೂ ಬಲಾತ್ಕರಿಸುತ್ತಿದ್ದಾರೆ. ನಾನು ಪುರಾಣಶ್ರವಣಕ್ಕೆ ಹೋಗುತ್ತೇನೆ. ಹಾಲು-ಹಣ್ಣು ಸಿದ್ಧಪಡಿಸಿದ್ದೇನೆ. ವೇಂಕಟನಾಥನಿಗೆ ಕೊಟ್ಟು ಮನೆ ಕಡೆ ಎಚ್ಚರದಿಂದ ನೋಡಿಕೊಳ್ಳಮ್ಮ” ಎಂದು ಹೇಳಿ ಉತ್ತರಕ್ಕಾಗಿ ಕಾಯದೆ, ಸೊಸೆಯತ್ತ ನಗೆಬೀರಿ ಹೊರಟುಬಿಟ್ಟರು. ಸರಸ್ವತಿಗೆ ಅತ್ತೆಯ ಈ ಪುರಾಣಶ್ರವಣ ನೆಪದ ಹಿನ್ನೆಲೆ. ಅವರ ಉದಾರ ಅಂತಃಕರಣ, ಪ್ರೀತಿ ಕಂಡು ಕಣ್ಣಿನಲ್ಲಿ ನೀರೂರಿತು. “ನಾನೆಂಥ ಪುಣ್ಯವಂತಳು ! ನನ್ನ ಸುಖದಲ್ಲಿ ಅತ್ತೆಗೆಷ್ಟು ಚಿಂತೆ, ನನ್ನ ಹಡದಮ್ಮನೂ ನನ್ನನ್ನು ಇಷ್ಟು ಪ್ರೀತಿಸುತ್ತಿರಲಿಲ್ಲ” ಎಂದುಕೊಂಡು ಸಂಭ್ರಮಾನಂದದಿಂದ ಹಾಲು-ಹಣ್ಣು, ತಾಂಬೂಲಗಳೊಡನೆ ಪತಿಯ ಕೊಠಡಿಯನ್ನು ಪ್ರವೇಶಿಸಿದಳು. ಆಗವಳ ಮನವು ಗರಿಗೆದರಿ ನರ್ತಿಸುವ ನವಿಲಿನಂತೆ ಉಲ್ಲಾಸಭರಿತವಾಗಿತ್ತು.
ವೇಂಕಟನಾಥರು ಸುಪ್ಪತ್ತಿಗೆಯಲ್ಲಿ ಮಲಗಿ ನಿದ್ರಿಸುತ್ತಿದ್ದರು. ಮುಖದಲ್ಲಿದರಹಾಸ ಮಿನುಗುತ್ತಿತ್ತು. ಮಂಚದ ಸಮೀಪದ ಪೀಠದ ಮೇಲೆ ಹಾಲು-ಹಣ್ಣುಗಳನ್ನಿಟ್ಟು, ಪತಿಯ ಮುಖವನ್ನು ನೋಡಿದಳು. ಚೈತ್ರ-ವೈಶಾಖಮಾಸದ ಬಿಸಿಲಿನ ಬೇಗೆಯಿಂದ ವೇಂಕಟನಾಥರ ಮುಖದಲ್ಲಿ ಬೆವರಿನ ಹನಿಗಳು ಶೋಭಿಸುತ್ತಿತ್ತು. ಹಾಸಿಗೆಯ ಮೇಲೆ ಕುಳಿತು ಸರಸ್ವತಿಯು ಬಗ್ಗಿ ಕರವಸ್ತ್ರದಿಂದ ಬೆವರೊರೆಸಹತ್ತಿದಳು, ಕಪಟ ನಿದ್ರೆಯಲ್ಲಿದ್ದ ವೇಂಕಟನಾಥರ ಭುಜಗಳು ಸರಸ್ವತಿಯ ಬೆನ್ನನ್ನು ಬಳಸಿದವು. ಅವಳ ಶರೀರ ರೋಮಾಂಚನಗೊಂಡಿತು. ನಾಚಿಕೆಯಿಂದ ಮುಖ ಆರಕ್ತವಾಯಿತು. ಮೆಲ್ಲನೆ ಕಣ್ಣುತೆರೆದು ವೇಂಕಟನಾಥರು “ಸರಸ” ಎಂದರು. ಆವೊಂದು ಕರೆಯೇ ಅವರ ಪ್ರೇಮದ ಪರಾಕಾಷ್ಠತೆಯನ್ನು ಸೂಚಿಸುತ್ತಾ ಸರಸ್ವತಿಯ ಹೃದಯದಲ್ಲಿ ಆನಂದದ ಬುಗ್ಗೆಗಳನ್ನೆಬ್ಬಿಸಿದವು ! “ಓಹೋ, ಹಾಗಾದರೀವರೆಗೆ ಹೃದಯೇಶರು ನಿದ್ರೆಯ ಸೋಗಿನಲ್ಲಿದ್ದರೇನು ?” ಎಂದು ಸರಸ್ವತಿಯು ನಸುಗೋಪದಿಂದ ಪತಿಯತ್ತ ಓರೆನೋಟ ಬೀರಿ, “ಅತ್ತೆ ಹಾಲು-ಹಣ್ಣು ಕಳಿಸಿರುವರು ಸ್ವೀಕರಿಸಿ” ಎಂದು ಮೆಲ್ಲನೆ ಮೇಲೆದ್ದು ಹಣ್ಣು-ಹಾಲುಗಳನ್ನು ನೀಡಿದಳು. ನಗುತ್ತಾ ವೇಂಕಟನಾಥರು “ಸರಸ, ನೀನೇ ಹಣ್ಣು ತಿನ್ನಿಸಿ ಹಾಲು ಕುಡಿಸು” ಎಂದರು.
ಸರಸ್ವತಿ : ಸ್ವಾಮಿ, ಇದೇನು ಹುಡುಗರಂತೆ ಹಟಮಾಡುವಿರಿ ?
ವೆಂಕಟ : ಹಾಗಾದರೆ ನಾವು ಹುಡುಗರಲ್ಲದೆ ಮುದುಕರೇನು ?
ಸರಸ್ವತಿ : (ಲಜ್ಜೆಯಿಂದ) ಹುಡುಗರೂ ಅಲ್ಲ, ಮುದುಕರೂ ಅಲ್ಲ !
ವೇಂ : ಅಂದರೆ ನಾವು ತರುಣರೆಂದಲ್ಲವೇ ನಿನ್ನ ಅಭಿಪ್ರಾಯ ?
ಸರ : (ನಸುಗೋಪಬೀರಿ) ನನ್ನ ಕೀಟಲೆ ಮಾಡಲು ನಿಮಗೇಕೆ ಇಷ್ಟು ಆಸಕ್ತಿ ?
ವೇಂ : (ನಕ್ಕು) ಕೀಟಲೆಮಾಡುವ ವಯಸಲ್ಲವೇ ? ಯಾವ ವಯಸ್ಸಿನಲ್ಲಿ ಹೇಗೆ ವರ್ತಿಸಿದರೆ ಚೆನ್ನವೋ, ಹಾಗೆ ತಾನೆ
ನಡೆಯಬೇಕು ?
ಸರ : (ನಾಚಿ) ನಿಮ್ಮ ಮಾತೇ ನನಗರ್ಥವಾಗುತ್ತಿಲ್ಲ ಸ್ವಾಮಿ, ಇಂತಿಂತಹ ವಯಸ್ಸಿನಲ್ಲಿ ಹೀಗೆ ಮಾಡಬೇಕೆಂದು ಎಲ್ಲಿ
ಹೇಳಿದೆ ?
ವೇಂ : ಸರಸ ! ನೀನು ರಘುವಂಶ ಓದಿರುವಿಯಲ್ಲವೇ ?
ಸರ : ಅಹುದು, ಓದಿದ್ದೇನೆ.
ವೇಂ : (ಮಂದಹಾಸದಿಂದ) ಕಾಳಿದಾಸನು ನಾಲ್ಕು ಆಶ್ರಮಗಳ ಕರ್ತವ್ಯವನ್ನು ಬೋಧಿಸಿರುವ ಆ ಪದ್ಯವನ್ನು ಹೇಳು
ನೋಡೋಣ.
ಸರಸ್ವತಿಯು “ಶೈಶವೇಭ್ಯಸ್ತ ವಿದ್ಯಾನಾಂ” ಎಂದು ಹೇಳಿ ತುಟಿಕಚ್ಚಿ ಸುಮ್ಮನಾಗಲು ವೇಂಕಟನಾಥರು “ಹಾಂ, ಸ್ವಲ್ಪ ತಡೆ. ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಬೇಕು. ಅದನ್ನು ನಾವು ಮಾಡಿ ಆಗಿದೆ. ಹೂಂ, ಮುಂದೆ ?” ಎಂದರು.
ಸರಸ್ವತಿಯು ನಾಚಿ ಓರೆನೋಟ ಬೀರಿ “ಯೌವನೇ ವಿಷತೈಷಣಾಂ” ಎಂದು ತಲೆತಗ್ಗಿಸಿದಳು.
ವೇಂ : ಇದೀಗ ಸರಿ ! ಕಾಳಿದಾಸನ ಉಪದೇಶದಂತೆ ನಡೆಯುವುದು ನಮ್ಮ ಕರ್ತವ್ಯವಲ್ಲವೇ ? ಅದಕ್ಕೆ ನಾನು ಕೀಟಲೆ ಮಾಡಿದ್ದು ಈಗ ಅರ್ಥವಾಯಿತೇ ?
ಸರಸ್ವತಿಯು ಲಜ್ಜೆ, ಪ್ರೀತಿಯಿಂದ ಪುಳಕಿತಳಾಗಿ ಪತಿಗೆ ಹಣ್ಣು ತಿನ್ನಿಸಿ, ಹಾಲು ಕುಡಿಸಿ, ತಾಂಬೂಲ ನೀಡಿದಳು. ವೇಂಕಟನಾಥರೂ ಪತ್ನಿಗೆ ಹಣ್ಣು, ಹಾಲು, ತಾಂಬೂಲವರ್ಪಿಸಿ ಮುದಬಡಿಸಿದರು. ಸರಸ್ವತಿಯು ನಸುನಕ್ಕು “ಈಗ ಸಂತೋಷವಾಯಿತೇ” ಎನಲು ಆಚಾರರು “ಓಹೋ, ಪರಮಾನಂದವಾಯಿತು” ಎಂದರು.
ಸರ : ಸ್ವಾಮಿ, “ಸಂತೋಷಕಾಲೀನಾ ಪ್ರಾರ್ಥನಾ ಝಡಿತಿ ಸ್ವಾಭೀಷ್ಟ ಘಟನಾಪಟೀಯಸೀ” ಅಂದರೆ ಸಂತಸದಿಂದಿರುವಾಗ ಮಾಡುವ ಬೇಡಿಕೆಯು ಕೂಡಲೇ ಅಭೀಷ್ಟ ಸಿದ್ಧಿಮಾಡಿಸುವುದೆಂದು ದೊಡ್ಡವರು ಹೇಳುವುದು ಸತ್ಯವೇ ?
ವೇಂ : ಅಹುದು, ನಿಜ.
ಸರ : ಹಾಗಾದರೆ ಸಂತೋಷದಿಂದ ನನ್ನ ಹೃದಯವಲ್ಲಭರು ದಾಸಿಯ ಬೇಡಿಕೆಯನ್ನು ಪೂರ್ಣಮಾಡುವರೇ ?
ವೇಂ : (ಮೋದದಿಂದ) ನಿನ್ನಾಸೆಯನ್ನು ನೆರವೇರಿಸಲಲ್ಲವೇ ನಾನಿರುವುದು ? ನೀನೇನು ಕೋರುವೆ ಹೇಳು.
ಸರ : ಹಾಗಾದರೆ ನಡೆಸುವುದಾಗಿ ವಚನಕೊಡಿ.
ವೇಂ : (ನಕ್ಕು, ಪತ್ನಿಯ ಕರದಮೇಲೆ ಕರವಿಟ್ಟು) ಖಂಡಿತವಾಗಿ ನಿನ್ನ ಕೋರಿಕೆ ನೆರವೇರಿಸುತ್ತೇನೆ. ಅದೇನು ಹೇಳು.
ಸರ : ಅಲ್ಲ ಸ್ವಾಮಿ ! ಜಗತ್ತಿನ ಜನರೆಲ್ಲರೂ ನನ್ನ ದೇವರು ಸಕಲಕಲಾವಲ್ಲಭರು, ವೈಣಿಕ ಚಕ್ರವರ್ತಿಗಳು. ವೀಣಾವಾದನ ಚತುರರೆಂದು ಹೊಗಳುವರು. ನಿಮ್ಮ ಪ್ರೇಮದ ಮಡದಿಯಾಗಿದ್ದೂ ನನಗೆ ನಿಮ್ಮ ವೀಣಾವಾದನವನ್ನು ಕೇಳುವ ಭಾಗ್ಯವಿಲ್ಲವಲ್ಲ ! ಇದು ನ್ಯಾಯವೇ ?
ವೇಂ : ಹಾಗಾದರೆ ನೀನೀವರೆಗೂ ನನ್ನ ವೀಣಾವಾದನವನ್ನು ಕೇಳಿಲ್ಲವೇ ?
ಸರ : ಈವರೆಗೆ ಆ ಭಾಗ್ಯ ನನಗೆ ಲಭಿಸಿಲ್ಲ ಸ್ವಾಮಿ.
ವೇಂ : (ರೇಗಿಸುವ ಧ್ವನಿಯಲ್ಲಿ) ಸುಳ್ಳೇಕೆ ಹೇಳುವೇ ಸರಸ !
ಸರ : (ನಸುಗೋಪದಿಂದ) ಸ್ವಾಮಿ, ನಿಮಗೆ ಸುಳ್ಳಾಡುವಷ್ಟು ಕೆಟ್ಟವಳೇ ನಾನು ?
ವೇಂ : (ನಸುನಕ್ಕು) ಆಹಾ, ಸಿಟ್ಟಾದರೂ ನೀನೆಷ್ಟು ಸುಂದರಿಯಾಗಿ ಕಾಣುವಿಯೇ ಸರಸ ! ಒಮ್ಮೆ ನನ್ನ ವೀಣಾವಾದನ ಕೇಳಿದ್ದೀಯೇ ! ಜ್ಞಾಪಿಸಿಕೋ,
ಸರ : (ನೆನೆದು, ನಗುತ್ತಾ) ನಿಜ, ಸ್ವಾಮಿ ಒಮ್ಮೆ ಒಂದು ಕ್ಷಣ ಮಾತ್ರ ಕೇಳಿದ್ದೇನೆ.
ವೇಂ : ಹಾಂ, ಹಾಗೆ ಬಾ ದಾರಿಗೆ ! ಯಾವಾಗ ಕೇಳಿದೆ, ಹೇಳು ನೋಡೋಣ.
ಸರ : (ನಾಚಿ) ಹೋಗಿ ಸ್ವಾಮಿ, ನಿಮಗೆ ಯಾವಾಗಲೂ ವಿನೋದವೇ.
ವೇಂ : (ಹಟ ಹಿಡಿದ ಹುಡುಗರಂತೆ), ಹೂಂ, ಹೇಳು ಸರಸ ಹೇಳು,
ಸರ : (ಅಪಾಂಗ ವೀಕ್ಷಣಬೀರಿ) ನನಗೆ ನಾಚಿಕೆ. ಹೇಗೆ ಹೇಳಲಿ ?
ವೇಂ : ಯಾವಾಗ ಕೇಳಿದೆಯೆಂದು ತಿಳಿಸಲು ಲಜ್ಜೆಯೇಕೆ ?
ಸರ : (ತಲೆತಗ್ಗಿಸಿ) ಸಂದರ್ಭ ಅಂತಹುದು..... ಆದ್ದರಿಂದ ನನಗೆ ನಾಚಿಕೆಯಾಗುತ್ತಿದೆ. ವೇಂ : ಇಲ್ಲಿ ಬೇರಾರಿದ್ದಾರೆ ? ನಾನು ನೀನು ಇಬ್ಬರೇ ! ನಾಚಬೇಡ ಹೇಳು.
ಆಗ ಸರಸ್ವತಿಯು ನಾಚಿಕೆಯಿಂದ ತಲೆತಗ್ಗಿಸಿ “ಹೇಳಲೇಬೇಕೆ ? ಹೂಂ, ಕೇಳಿ, ಹಿರಿಯರು ಹೊರಗೆ ಹೋಗಿದ್ದರು. ಮನೆಯಲ್ಲಿ ಅಂಬಾ, ಅಕ್ಕ, ನಾನು ಮೂವರೇ ಇದ್ದೆವು. ಆಗ ನೀವು ಹೊರಗಿನಿಂದ ಬಂದು ನಿಮ್ಮ ಕೊಠಡಿಗೆ ಹೋದಿರಿ. ಆಗ ಅಂಬಾ ಅಂದರು “ಸರಸ್ವತಿ, ನಿನ್ನ ಗಂಡ ಬಂದನೋಡು. ಅವನಿಗೆ ಹಾಲುಹಣ್ಣು ತಾಂಬೂಲ ಕೊಟ್ಟು ಬಾ”, ನಾನು ನಾಚಿ ಸುಮ್ಮನೆ ನಿಂತೆ. ಆಗ ಅಕ್ಕ “ಹೀಗೇಕೆ ನಾಚುವೆಯೇ ಹುಚ್ಚಿ !” ಎನಲು ನಾನು “ಏನು ಮಾಡಲಿ ಅಕ್ಕಾ, ಅವರಲ್ಲಿಗೆ ಹೋಗಲು ನನಗೆ ನಾಚಿಕೆ, ಭಯ !” ಎಂದೆ. ಆಗ ಅಂಬಾ “ಅಯ್ಯೋ ಪೆದ್ದಿ, ಹೀಗೆ ನಾಚುತ್ತಿದ್ದರೆ ಮುಂದೆ ಹೇಗೆ ಸಂಸಾರ ಸಂಬಾಳಿಸುವೆಯೆ ? ಕಮಲ ! ಹಾಲುಹಣ್ಣು ತಾಂಬೂಲ ತಂದುಕೊಡು, ನಾನೇ ಕೊಟ್ಟು ಬರುತ್ತೇನೆ” ಎಂದು ನನ್ನ ನೋಡಿ ನಕ್ಕರು. ಆಗ ನಾನು ಧೈರ್ಯಮಾಡಿ “ನಿಮಗೇಕೆ ತೊಂದರೆ ಅಂಬಾ, ನಾನೇ ತೆಗೆದುಕೊಂಡು ಹೋಗುವೆನು” ಎಂದು ಹೇಳಿ ಅಕ್ಕ ಬೆಳ್ಳಿ ತಂಬಿಗೆ-ತಟ್ಟೆಗಳಲ್ಲಿತಂದ ಹಾಲುಹಣ್ಣುಗಳನ್ನು ತೆಗೆದುಕೊಂಡೆ. ಸುಮ್ಮನೆ ನಿಂತ ನನ್ನನ್ನು ಕೈಹಿಡಿದು ನಿಮ್ಮ ಕೊಠಡಿಯವರೆಗೆ ಕರೆತಂದು ಬಿಟ್ಟು, ಸನ್ನೆಯಿಂದ ಒಳಗೆಹೋಗೆಂದು ಸೂಚಿಸಿ ಹಿಂದಿರುಗಿದರು.
ಆಗ ನಾನು ಲಜ್ಜೆ, ಆಶೆ, ಸಂಭ್ರಮ, ಹೆದರಿಕೆಗಳಿಂದ ಏನುಮಾಡಲೂ ತೋರದೆ ನಿಂತಾಗ ನಿಮ್ಮ ಕೊಠಡಿಯಿಂದ ವೀಣೆಯ ಝೇಂಕಾರ ಕೇಳಿಸಿತು. ಆ ಮಂಜುಳರವ ನನ್ನ ಹೃದಯವನ್ನು ರೋಮಾಂಚನಗೊಳಿಸಿತು. ಎಲ್ಲರ ಬಾಯಿಂದ ನಿಮ್ಮ ವೀಣಾ ಪ್ರಾವೀಣ್ಯವಿಚಾರ ಕೇಳಿದ್ದ ನನಗೆ ಅದನ್ನಾಲಿಸುವ ಮನಸ್ಸಾಯಿತು ! ಒಳಗೆ ಬರಲು ಕಾಲಿಟ್ಟವಳು ಹಾಗೆಯೇ ಬಾಗಿಲ ಮರೆಯಲ್ಲಿ ನಿಂತೆ. ನೀವಾಗ ಜಯದೇವನ ಒಂದು ಅಷ್ಟಪದಿಯನ್ನು ನುಡಿಸಲಾರಂಭಿಸಿದಿರಿ. ಅದನ್ನು ಕೇಳುತ್ತಿದ್ದಂತೆ ನನ್ನ ಮನಸ್ಸು ಹರ್ಷದಿಂದ ಉಲ್ಲಸಿತವಾಯಿತು. ಆಗ ಅಕ್ಕ ನನ್ನತ್ತಲೇ ಬರುತ್ತಿರುವುದನ್ನು ಗಮನಿಸಿ ಮೆಲ್ಲನೆ ಕೊಠಡಿಯನ್ನು ಪ್ರವೇಶಿಸಿದೆ. ಆಗ ನೀವು ವೀಣಾವಾದನವನ್ನು ನಿಲ್ಲಿಸಿ ಮಂಚದ ಮೇಲೆ ಮಲಗಿ ನಿದ್ರಿಸುವವರಂತೆ ನಟಿಸಿದಿರಿ ! ನಿಮ್ಮ ನಟನೆಯನ್ನು ಕಂಡು ಒಂದು ಕಡೆ ನಗು. ಮತ್ತೊಂದು ಕಡೆ ನಾಚಿಕೆ, ಆದರೂ ಮಂಚದ ಬಳಿ ಬಂದು ನಿಂತೆ. ನೀವು ತಟ್ಟನೆ ಎಚ್ಚತ್ತವರಂತೆ “ಪ್ಲಾ ಸರಸ್ವತಿ ! ಯಾವಾಗ ಬಂದೆ ?” ಎಂದಿರಿ. ನಾನು ನಸುನಕ್ಕು ತಲೆತಗ್ಗಿಸಿನಿಂತೆ. ಆಗ ನೀವು..... ಎಂದು ಅರ್ಧಕ್ತಿಯಲ್ಲಿ ಸುಮ್ಮನಾದಳು.
ವೇಂ : (ನಗುತ್ತಾ) ಸರಿ, ಆಮೇಲೆ ?
ಸರ : (ನಾಚಿಕೆಯಿಂದ ನೀರಾಗಿ ಎಲ್ಲವನ್ನೂ ನನ್ನ ಬಾಯಲ್ಲಿಯೇ ಹೇಳಿಸಬೇಕೆ ?
ವೇಂ : (ಸರಸ್ವತಿಯ ಕರಪಿಡಿದು) ಆಹಾ, ಸರಸ, ಎಷ್ಟು ಚೆನ್ನಾಗಿ ವರ್ಣಿಸುವೆಯಲ್ಲೇ. ಮುಂದೇನಾಯಿತು ಹೇಳು. ಸರಸ್ವತಿ ನೀವು ನನ್ನ ಕರಪಿಡಿದು ಪಕ್ಕದಲ್ಲಿ ಕೂಡಿಸಿಕೊಂಡು “ಓಹೋ ಹಣ್ಣು ಹಾಲು ತಂದಿರುವೆಯಾ” ಎಂದು ಪ್ರಶ್ನಿಸಿ ನಾನಿತ್ತ ಹಣ್ಣು ತಿಂದು ಹಾಲು ಕುಡಿದು ತಾಂಬೂಲವನ್ನು ಹಾಕಿಕೊಂಡು ನನ್ನ ಮುಖವನ್ನು ಪ್ರೀತಿಯಿಂದ ನೋಡುತ್ತಾ ನನ್ನ ತಲೆಯನ್ನು ನೇವರಿಸುತ್ತಿದ್ದಿರಿ. ಆಗ ಸರಸ್ವತಿ, ಹಣ್ಣು ಹಾಲು ಕೊಟ್ಟೆಯಾ” ಎನ್ನುತ್ತ ಅಕ್ಕ ಒಳಗೆ ಬಂದು ನಮ್ಮನ್ನು ಕಂಡು ನಾಚಿನಗುತ್ತಾ ಅಲ್ಲಿಂದ ಕಾಲೆಗೆದರು. ನಾನೂ ನಾಚಿಕೆಯಿಂದ ನಿಮ್ಮ ಕೈಬಿಡಿಸಿಕೊಂಡು ಓಡಿಹೋದೆ ! ಅಂದೆಲ್ಲಾ ಅಂಬಾ, ಅಕ್ಕ ಅವರಿಗೆ ಮುಖತೋರಿಸಲೂ ನನಗೆಷ್ಟು ಲಜ್ಜೆಯಾಯಿತೋ ನಿಮಗೆ ಗೊತ್ತೆ ?” ಎಂದು ಸರಸ್ವತಿ ಓರೆಗಣ್ಣಿನಿಂದ ಪತಿಯನ್ನು ನೋಡಿ ಕೈಗಳಿಂದ ಮುಖಮುಚ್ಚಿಕೊಂಡಳು !
ವೇಂ : ಎಂದೋ ನಡೆದುದನ್ನು ನೆನೆದು ಈಗೇಕೆ ನಾಚುವೆ ?
ಸರ : ಇಂದಿಗೂ ಆ ರಸನಿಮಿಷದ ನೆನಪಾದರೆ ನನ್ನ ಮೈನವಿರೇಳುವುದು ಸ್ವಾಮಿ !
ವೇಂ : ಪ್ಲಾ, ಅದು ಸರಿ, ನಾನಾವಾಗ ವೀಣೆಯಲ್ಲಿ ಏನು ನುಡಿಸುತ್ತಿದ್ದೆ ?
ಸರ : (ನಗೆಬೀರಿ) ಜಯದೇವನ ಅಷ್ಟಪದಿಯಲ್ಲವೇ ಸ್ವಾಮಿ.
ವೇಂ : (ತಿಳಿಯದವರಂತೆ) ಯಾವ ಅಷ್ಟಪದಿ ?
ಸರ : ನಿಮಗೆ ಹಾಸ್ಯ, ನನಗೆ ಪ್ರಾಣಸಂಕಟ ! ಎಲ್ಲಾ ನಾನೇ ಹೇಳಬೇಕೆಂಬ ಈ ಹಟವೇಕೆ ? ಆಗ ನೀವು “ಪ್ರವಿಶ ರಾಧೆ ! ಮಾಧವಸಮೀಪಂ || ಮಂಜುತರ ಕುಂಜತಲ ಕೇಲಿಸದನೇ ! ಇಹ ವಿಲಸ ರತಿರಭಸಹಸಿತವದನೇ !” ಎಂಬ ಅಷ್ಟಪದಿಯನ್ನು ವೀಣೆಯಲ್ಲಿ ನುಡಿಸುತ್ತಿದ್ದಿರಿ !
ವೇಂ : ಪರವಾಗಿಲ್ಲ, ಎಲ್ಲವೂ ಚೆನ್ನಾಗಿ ನೆನಪಿದೆ !
ಸರ : ಅದು ಸರಿ, ಸ್ವಾಮಿ, ಈ ಅಷ್ಟಪದಿಯನ್ನೇ ಏಕೆ ನುಡಿಸಿದಿರಿ, ಮತ್ತೆ ಇದ್ದಕ್ಕಿದ್ದಂತೆ ಏಕೆ ನಿಲ್ಲಿಸಿದಿರಿ ?
ವೇಂ : ಏಕೆಂದರೆ....... ಆಗಿನ ಪರಿಸ್ಥಿತಿ ಹಾಗಿತ್ತು !
ಸರ : (ಮುಗುಳುನಕ್ಕು) ಅದೇನಂತಹ ಪರಿಸ್ಥಿತಿ ಸ್ವಾಮಿ ?
ವೇಂ : ಅಬ್ಬಾ, ಆ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಒಂದು ಕರದಲ್ಲಿ ಹಾಲಿನ ತಂಬಿಗೆ, ಮತ್ತೊಂದು ಕರದಲ್ಲಿ ಹಣ್ಣು ತಾಂಬೂಲಗಳ ತಟ್ಟೆಯನ್ನು ಹಿಡಿದು ಒಯ್ಯಾರದಿಂದ ಬಳುಕುತ್ತಾ ನೀನು ಬರುತ್ತಿದ್ದೆ ! ಅದನ್ನು ಕಂಡು ರೋಮಹರ್ಷಣವಾಯಿತು. ರಾಧೆಯು ಮಾಧವನ ಸಮೀಪಕ್ಕೆ ಬರುತ್ತಿರುವಂತೆ ಭಾಸವಾಗುತ್ತಿತ್ತು ಆ ನಿನ್ನ ನಡೆ ! ಆದರೆ ನೀನು ಬಾಗಿಲಮರೆಯಲ್ಲೇ ನಿಂತುಬಿಟ್ಟೆ. ಜಯದೇವನ ಅಷ್ಟಪದಿ ನೆನಪಿಗೆ ಬಂದಿತು. ನಾನು ಆಹ್ವಾನಿಸಿದ ಹೊರತು ನೀನು ಬರುವುದಿಲ್ಲವೆಂದರಿತು “ಪ್ರವಿಶ ರಾಧೆ ! ಮಾಧವ ಸಮೀಪಮ್ !” ಎಂದು ವೀಣೆಯಲ್ಲಿ ನುಡಿಸಿ ಆಹ್ವಾನಿಸಿದೆ. ನೀನು ನಲಿಯುತ್ತಾ ಒಳಬಂದೆ. ಉದ್ದೇಶ ಸಫಲವಾಯಿತು. ಆದ್ದರಿಂದ ವೀಣಾವಾದನ ನಿಲ್ಲಿಸಿಬಿಟ್ಟೆ !
ಪತಿಯು ತನ್ನನ್ನು ವರ್ಣಿಸಿದ ರೀತಿಯನ್ನಾಲಿಸಿ ಸರಸ್ವತಿಯ ಹೃದಯವರಳಿತು. ಸಂತಸದಿಂದ ಹಿಗ್ಗಿದಳು. ನಸುಗೋಪವನ್ನು ನಟಿಸುತ್ತಾ “ಗಂಡಸರನ್ನು ನಂಬಬಾರದು. ನಿಮಗೆಲ್ಲವೂ ಗೊತ್ತಿದ್ದರು. ನಾನೆಂಥ ಪೆದ್ದಿ ! ಹಾಗಾದರೆ ಅಂದಿನ ನಿಮ್ಮ ವರ್ತನೆಯೆಲ್ಲಾ ಬರಿ ನಟನೆಯೇ ? ಒಮ್ಮೆಯಾದರೂ ಈ ವಿಚಾರವಾಗಿ ಈವರೆಗೆ ನನ್ನಲ್ಲಿ ಬಾಯಿ ಬಿಟ್ಟಿರುವಿರಾ ?” ಎಂದಳು. ವೇಂಕಟನಾಥರೂ ಪತ್ನಿಯ ಕರಪಿಡಿದು “ಸಿಟ್ಟಾಗದಿರು ನನ್ನ ಮನದನ್ನೆ ! ಕೆಲವಿಚಾರಗಳು ಮನಸ್ಸಿನಲ್ಲಿದ್ದರೇ ಚೆನ್ನ, ಅಂದರೆ ಆ ಮಧುರಸ್ಕೃತಿ, ರಸನಿಮಿಷಗಳಿಗೆ ಬೆಲೆ !” ಎಂದರು.
ಸರ : ನಾನು ಬರುವುದು ನಿಮಗೆ ಹೇಗೆ ತಿಳಿಯಿತು ಸ್ವಾಮಿ ?
ವೇಂ : ಹೇಗೆಂದರೆ......ಅಕ್ಕ, ಅಂಬಾ ನಿನ್ನನ್ನು ಕೀಟಲೆ ಮಾಡಿ ಹಣ್ಣುಹಾಲುಕೊಟ್ಟು ಕಳಿಸಿದ್ದನ್ನು ನೋಡಿ, ನಿಮ್ಮ ಸಂಭಾಷಣೆ ಕೇಳಿಯೂ ನೀನು ಬರುವಿಯೆಂದು ಅರಿಯದಿರುವಷ್ಟು ಮಡನೇ ನಾನು !
ಸರ : ನೀವೇಕೆ ಮಡ್ಡರಾಗುತ್ತೀರಿ ! ನನ್ನ ಪೆದ್ದುತನ ಈಗ ತೋರಿಸಿಕೊಟ್ಟಿರಿ, ಅಷ್ಟೇ ! ಹೋಗಲಿಬಿಡಿ. ಆ ಒಂದುಕ್ಷಣ ನಿಮ್ಮ ವೀಣಾವಾದನ ಕೇಳಿದ್ದು ಕೇಳಿದಂತಾಗುವುದೇ ? ಮಾತು ಮರೆಸಬೇಡಿ, ಮಾತುಕೊಟ್ಟಂತೆ ವೀಣೆ ನುಡಿಸುವಿರೋ ಇಲ್ಲವೋ ಹೇಳಿಬಿಡಿ.
ವೇಂ : ಕೋಪಗೊಳ್ಳದಿರು ಕೋಮಲಾಂಗಿ ! ನಿನಗೆ ತೃಪ್ತಿಯಾಗುವಷ್ಟು ಕಾಲ ವೀಣೆ ನುಡಿಸುತ್ತೇನೆ. ಆದರೆ ಒಂದು ನಿಬಂಧನೆ.
ಸರ : (ಸಂತಸದಿಂದ) ಅದೇನು ನಿಬಂಧನೆ ಸ್ವಾಮಿ ? ಅದನ್ನು ಹೇಳಿ.
ವೇಂ : ನಾನು ವೀಣೆನುಡಿಸುತ್ತೇನೆ. ನೀನು ಹಾಡಬೇಕು !
ಸರ : ಪಾವಮಾನಿಃ ಅಲ್ಲಿಂ ತರತೀತಿ ಪಾರಾವತೋಪಿ ಪ್ರಭವತಿ ಕಿಂ ತರ್ತುಮಂ ಸಮರ್ಥಃ ?”
ವೇಂ : “ಪ್ರದ್ಯೋತನೋ ದ್ಯೋತಯತೀತಿ ಖದ್ಯೋತಪೋತಾತ್ ಕಿಮು ನ ಪ್ರಕಾಶಃ ?”
ಸರ : (ನಗುತ್ತಾ) ನಿಮ್ಮನ್ನು ಮಾತಿನಲ್ಲಿ ಸೋಲಿಸಬಲ್ಲೆನೆ ಸ್ವಾಮಿ ?
ವೇಂ : ಹಾಗಾದರೆ ಯಾತರಲ್ಲಿ ಸೋಲಿಸುವೆ ?
ಸರ : (ಲಜ್ಜೆಯಿಂದ) ಹೋಗಿ, ಸ್ವಾಮಿ ನಿಮಗೆ ಯಾವಾಗಲೂ ಹುಡುಗಾಟವೇ !
ವೇಂ : ಹೇಳು, ಸರಸ ! ಹಾಡಲು ಒಪ್ಪುವೆಯೋ ಇಲ್ಲವೋ, ನನ್ನ ವೀಣಾವಾದನ ಕೇಳಬೇಕಾದರೆ-ನೀನು ಹಾಡಲೇಬೇಕು! ಸರ : ಎಷ್ಟಾದರೂ ನೀವು ನನ್ನ ಪ್ರಭುಗಳು. ನಿಮ್ಮಪ್ರಣೆಯಂತೆ ಹಾಡುವೆನು. ಆದರೆ ನೀವು ನನ್ನ ಗಾಯನ ಕೇಳಿ
ನಗಬಾರದು.
ವೇಂ : ಸರಿ, ಪತ್ನಿಯವರ ಇಷ್ಟದಂತಾಗಲಿ, ವೀಣೆಯನ್ನು ತೆಗೆದುಕೊಂಡುಬಾ,
ಸರಸ್ವತಿಗೆ ಪರಮಾನಂದವಾಯಿತು. ಸಂಭ್ರಮದಿಂದ ವೀಣೆಯನ್ನು ತಂದು ಪತಿಯಮುಂದಿಟ್ಟಳು. ವೆಂಕಟನಾಥರು “ಸರಸ್ವತಿ, ಕೆಳಗಡೆಯೇ ಕುಳಿತುಕೊಳ್ಳೋಣ, ರತ್ನಗಂಬಳಿಯನ್ನು ಹಾಸಿ ಅದರಮೇಲೆ ವೀಣೆಯನ್ನಿಟ್ಟು ಪತಿಗೆ ಎದುರಾಗಿ ಕುಳಿತಳು. ವೇಂಕಟನಾಥರು “ಸರಸ್ವತಿ ! ಪ್ರಾರಂಭಿಸೋಣವೇ ?” ಎಂದು ಒಮ್ಮೆ ವೀಣೆಯತಂತಿಗಳ ಮೇಲೆ ಬೆರಳಾಡಿಸಿದರು. ಆ ಮಂಜುಳ ನಾದತರಂಗ ಸರಸ್ವತಿಯ ಮೈ ಪುಳಕಗೊಳಿಸಿತು. ವೆಂಕಟನಾಥರು ಜಯದೇವನ ಒಂದು ಅಷ್ಟಪದಿಯನ್ನು ನುಡಿಸಲಾರಂಭಿಸಿದರು. ಅಷ್ಟಪದಿಯನ್ನಾಲಿಸಿ ಅವಳಮುಖ ಆರಕ್ತವಾಯಿತು. ವೆಂಕಟನಾಥರು ಮತ್ತೊಂದಾವರ್ತಬಾರಿಸಿ “ಹೂಂ ಹಾಡು ಸರಸ” ಎಂದರು. ಸರಸ್ವತಿಯು ಪತಿಯತ್ತ ಪ್ರೇಮಕಟಾಕ್ಷಬೀರಿ ಹಾಡಲಾರಂಭಿಸಿದಳು.
“ಧೀರಸಮೀರೇ ಯಮುನಾತೀರೇ ವಸತಿ ವನೇ ವನಮಾಲೀ
ಗೋಪೀ ಪೀನಪಯೋಧರ ಪರಿಸರ ಚಂಚಲಕರಯುಗಶಾಲೀ”
|| ಅ.ಪ. ||
ಸರಸ್ವತಿಯ ಮಧುರಕಂಠದಿಂದ ಮಂಜುಳನಾದವಾಹಿನಿ ಹೊರಹೊಮ್ಮಿತು ! ಅವಳು ಸಂಗೀತವಿದ್ಯಾಪ್ರವೀಣೆಯೆಂದು ವೆಂಕಟನಾಥರಿಗೆ ಮನದಟ್ಟಾಯಿತು. ಸಂತೋಷ - ಸಂಭ್ರಮಗಳಿಂದ ಅವರು ವಿದ್ವತ್ತೂರ್ಣವಾಗಿ ವೀಣಾವಾದನ ಮಾಡಲಾರಂಭಿಸಿದರು. ಮೊದಲು ಭಯವಾದರೂ, ಪತಿಯಪ್ರೋತ್ಸಾಹದಿಂದ ಧೈರ್ಯತಾಳಿ ಪತಿಯ ವಾದನವನ್ನನುಸರಿಸಿ ಹಾಡಹತ್ತಿದಳು. ಒಮ್ಮೆ ವೇಂಕಟನಾಥರು ವೀಣೆ ನುಡಿಸುವರು, ಸರಸ್ವತಿ ಹಾಡುವಳು. ಈ ಕ್ರಮದಲ್ಲಿ ವೀಣಾವಾದನ ಹಾಡುಗಾರಿಕೆ ಮುಂದುವರೆಯಿತು, ಇಬ್ಬರೂ ತಲ್ಲೀನರಾಗಿದ್ದಾರೆ. ವೀಣೆಯ ಸುರಚಿರನಾದತರಂಗಗಳಲ್ಲಿ ಸರಸ್ವತಿ ಹಾಡುವಳು. ಈ ಕ್ರಮದಲ್ಲಿ ವೀಣಾವಾದನ ಹಾಡುಗಾರಿಕೆ ಮುಂದುವರೆಯಿತು. ಇಬ್ಬರೂ ತಲ್ಲೀನರಾಗಿದ್ದಾರೆ. ವೀಣೆಯ ಸುರಚಿರನಾದತರಂಗಗಳಲ್ಲಿ ಸರಸ್ವತಿಯ ಮಂಜುಳ-ಮನಮೋಹಕಗಾನವು ಮಿಳಿತವಾಗಿ ಅಲ್ಲೊಂದು ಗಂಧರ್ವಲೋಕವೇ ಧರೆಗಿಳಿದುಬಂದಾಯಿತು. ಪ್ರೇಮಮಯಿಗಳಾದ ಆ ಪತಿಪತ್ನಿಯರು ಸುಮಧುರ ಸಂಗೀತ ಸಾಮ್ರಾಜ್ಯದಲ್ಲಿ ಬಾಹ್ಯಪ್ರಜ್ಞೆಯೇ ಇಲ್ಲದೆ ನಾದೋಪಾಸನೆಯಲ್ಲಿ ತಲ್ಲೀನರಾದರು. ಹೊತ್ತು ಕಳೆದುದೇ ಗೊತ್ತಾಗಲಿಲ್ಲ. ವೆಂಕಟನಾಥರು ವೀಣಾವಾದನವನ್ನು ನಿಲ್ಲಿಸಿ, ಸರಸ್ವತಿ ! ಇಂದಿಗೆ ಇಷ್ಟೇ ಸಾಕು, ಇನ್ನೊಂದುದಿನ ಸಾವಕಾಶವಾಗಿ ನಿನಗೆ ತೃಪ್ತಿಯಾಗುವಷ್ಟು ಕಾಲ ಬಾರಿಸುತ್ತೇನೆ” ಎಂದರು.
ಸರಸ್ವತಿಯು ವೀಣೆಯನ್ನು ಬದಿಗಿರಿಸಿ ಪತಿಯ ಪಾದಗಳ ಮೇಲೆ ಶಿರವಿರಿಸಿ “ಪ್ರಾಣನಾಥ ! ನೀವು ನಿಜವಾಗಿ ವೈಣಿಕಚಕ್ರವರ್ತಿಗಳೇ ಅಹುದು ! ನನ್ನ ಜೀವನದಲ್ಲಿ ಇಂಥ ವೀಣಾವಾದನ ಕೇಳಿರಲಿಲ್ಲ. ನನ್ನ ಜನ್ಮ ಇಂದು ಸಾರ್ಥಕವಾಯಿತು” ಎಂದು ಆನಂದಬಾಷ್ಪಸುರಿಸಿದಳು. ವೇಂಕಟನಾಥರು ಪ್ರೇಮದಿಂದವಳ ಭುಜವನ್ನು ಹಿಡಿದು ಮೇಲೆತ್ತಿ ಮುಂಗುರುಳು ಸವರುತ್ತಾ “ಸರಸ ! ನಿನ್ನ ಗಾಯನ ಕೇಳಿ ನನಗೂ ಪರಮಹರ್ಷವಾಗಿದೆ. ನೀನು ಉತ್ತಮ ಗಾಯಕಳು, ಕಲಾವಿದೆ. ನಿನ್ನಲ್ಲಿರುವ ಗಾಂಧರ್ವಕಲೆಯನ್ನು ಕಂಡು ನಾನು ಮುಗ್ಧನಾಗಿದ್ದೇನೆ ! ನೀನು ಮನಸಿಟ್ಟು ಸಾಧನಮಾಡಿದರೆ ನಿನ್ನನ್ನು ಯಾರೂ ಸರಿಗಟ್ಟಲಾರರು !” ಎಂದು ನುಡಿದರು.
ಪತಿಯ ಹೊಗಳಿಕೆಯಿಂದ ಸರಸ್ವತಿಯು ಹಿಗ್ಗಿದಳು. ನಂತರ “ಸ್ವಾಮಿ, ಅತ್ತೆಯವರು ಮನೆಗೆ ಬರುವ ಹೊತ್ತಾಯಿತು. ನಾಳೆ ಸಾವಕಾಶವಾಗಿ ತಮ್ಮ ವೀಣಾವಾದನದಿಂದ ನನ್ನನ್ನು ಹರುಷಗೊಳಿಸಬೇಕು” ಎನಲು ವೇಂಕಟನಾಥರು “ನೀನೂ ಗಾನಾಮೃತದಿಂದ ನನ್ನ ತಣಿಸಬೇಕು” ಎಂದು ನಸುನಕ್ಕರು. ಸರಸ್ವತಿಯು ಆನಂದದಿಂದ ಪತಿಯನ್ನು ನೋಡಿ ನಸುವಕ್ಕು “ಅಪ್ಪಣೆ” ಎಂದು ಪತಿಯ ಕೊಠಡಿಯಿಂದ ಹೊರಗೋಡಿದಳು.
ಗೋಪಿಕಾಂಬಾದೇವಿಯರು ಪುರಾಣಕ್ಕೆ ಹೊರಟ ಮೇಲೆ ಸರಸ್ವತಿಯು ಪತಿಯ ಮುಂದೆ ಹಾಲುಹಣ್ಣಿನೊಡನೆ ಪ್ರತ್ಯಕ್ಷವಾದಳು. ಯಾವುದೋ ಗ್ರಂಥವನ್ನು ನೋಡುತ್ತಿದ್ದ ವೇಂಕಟನಾಥರು 'ಬಾ ಸರಸ್ವತಿ' ಎಂಬ ಗ್ರಂಥವನ್ನು ಕೆಳಗಿಟ್ಟರು. ಸರಸ್ವತಿ ಕೊರಳುಕೊಂಕಿಸಿ “ವೀಣೆ ತರಲೇ” ಎನಲು ಆಚಾರರು “ಸ್ವಲ್ಪಕಾಲ ಮಾತನಾಡೋಣ, ತರುವಾಯ ವೀಣೆ” ಎಂದರು.
ಸರ : ಏನು ಮಾತನಾಡುವುದು ?
ವೇಂ : ಮಾತನಾಡಲು ವಿಷಯಕ್ಕೇನು ಕೊರತೆ ?
ಸರ : ನೀವು ಇಡೀ ದಿನ ವಾಕ್ಯಾರ್ಥ ಮಾಡುವಿರಿ, ನಾನು ಅಬಲೆ ! ಅದು ನನ್ನಿಂದಾದೀತೇ ?
ವೇಂ : ವಾಕ್ಯಾರ್ಥ ಮಾಡೆಂದು ನಾನೆಲ್ಲಿ ಹೇಳಿದೆ ? ನೀನು ಸಂಗೀತ-ಸಾಹಿತ್ಯಕಲಾಪ್ರವೀಣೆಯೆಂದು ನಮ್ಮ ರಾಮಚಂದ್ರಾಚಾರರು ಹೊಗಳಿದ್ದರು. ಸಂಗೀತದಲ್ಲಿ ಚತುರತೆಯೆಂದೆನೋ ಗೊತ್ತಾಯಿತು. ಈಗ ನಿನ್ನ ಸಾಹಿತ್ಯಜ್ಞಾನದ ಪರಿಚಯ ಮಾಡಿಕೊಡು ! ಸಾಹಿತ್ಯದಲ್ಲಿ ಏನೇನು ಅಧ್ಯಯನಮಾಡಿರುವೆ ?
ಸರ : ಬಾಲ್ಯಪಾಠಗಳನ್ನೆಲ್ಲ ತಂದೆಯವರೇ ಹೇಳಿಕೊಟ್ಟರು. ಆನಂತರ ಕಾವ್ಯ-ನಾಟಕ-ಅಲಂಕಾರಾದಿಗಳಲ್ಲಿ ನನಗೆ
ತಾಯಿಯೇ ಗುರು !
ವೇಂ : (ಅಚ್ಚರಿಯಿಂದ) ಏನು ! ನಿಮ್ಮ ತಾಯಿಯೇ ? ಅತ್ತೆಯವರು ಸಾಹಿತ್ಯದಲ್ಲಿ ಕುಶಲರೆಂದು ನನಗೆ ಗೊತ್ತೇ ಇರಲಿಲ್ಲವಲ್ಲ !
ಸರ : (ನಕ್ಕು) ಅಮ್ಮನ ಸಾಹಿತ್ಯ ಮತ್ತು ಸಂಗೀತದ ಪ್ರೌಢಿಮೆಯನ್ನು ಕಂಡೇ ಅಪ್ಪ ಅವಳನ್ನು ಲಗ್ನವಾದದ್ದು ! ವೇಂ : ಬಾಲ್ಯಪಾಠಗಳಾದ ಮೇಲೆ ಏನು ವ್ಯಾಸಂಗ ಮಾಡಿದೆ ?
ಸರ : ಕೌಮುದಿ, ವೃತ್ತರತ್ನಾಕರ, ರಘುವಂಶ, ಕುಮಾರಸಂಭವ, ಕಿರಾತಾರ್ಜುನೀಯ, ಚುಪರಾಮಾಯಣ-ಭಾರತಗಳು ಸ್ವಲ್ಪಭಾಗ, ನೈಷಧ, ಗೀತಗೋವಿಂದ ಕೆಲಭಾಗ, ದಶಕುಮಾರಚರಿತ, ಕಾದಂಬರಿ ಮಹಾಶ್ವೇತೆಯ ವೃತ್ತಾಂತದವರೆಗೆ. ಪ್ರತಾಪರುದ್ರೀಯ ನಾಟಕ ಪ್ರಕರಣ, ಚಂದ್ರಾಲೋಕ, ನಾಟಕಗಳಲ್ಲಿ ರತ್ನಾವಳಿ, ಮಾಲವಿಕಾಗ್ನಿಮಿತ್ರ, ಶಾಕುಂತಳಾ ಇಷ್ಟು ಆಗುವ ವೇಳೆಗೆ ಲಗ್ನ ನಿಶ್ಚಯವಾಯಿತು ಓದಿಗೆ ಪೂರ್ಣವಿರಾಮವಾಯಿತು !
ವೇಂ : ಹೂಂ, ಪರವಾಗಿಲ್ಲ, ಸಾಹಿತ್ಯದಲ್ಲಿ ಸಾಕಷ್ಟು ಗ್ರಂಥಗಳಾಗಿವೆ.
ಸರ : (ನಗುತ್ತಾ) ಸ್ವಾಮಿ, ನಿಮ್ಮನ್ನು ಸ್ವಲ್ಪ ಪರೀಕ್ಷಿಸಲು ಆಶೆಯಾಗಿದೆ !
ವೇಂ : ಓಹೋ, ಸರಸ್ವತಿಯೇ ಪರಿಕ್ಷಿಸಹತ್ತಿದರೆ ನನ್ನ ಗತಿಯೇನು ?
ಸರ : ಛೇ, ನಿಮ್ಮನ್ನು ಪರೀಕ್ಷಿಸುವ ಯೋಗ್ಯತೆ ನನಗೆಲ್ಲಿ ? ನಿಮ್ಮ ಪ್ರತಿಭೆಯನ್ನು ಕಂಡಾನಂದಿಸಲು ಬಯಕೆ, ಅಷ್ಟೇ.
ವೇಂ : (ಮಂದಹಾಸಬೀರಿ) ಸಂತೋಷ, ಪ್ರಾರಂಭವಾಗಲಿ, ಪರೀಕ್ಷೆ !
ಸರ : “ಸುಧಾಧಾರಾ ಅತಿಮಧುರಾ ಶ್ರೀಸುಧೀಂದ್ರ ಸರಸ್ವತೀ |
ಅತ್ರ ಕ್ರಿಯಾಪದಂ ವಕ್ಕುಂ ಅವಧಿಬ್ರ್ರಹ್ಮಣೋವಯಃ ||”
ಇಲ್ಲಿ ಕ್ರಿಯಾಪದ ಯಾವುದು ಹೇಳಿ ನೋಡೋಣ !
ವೇಂ : (ನಗುತ್ತಾ) ಸರಸ, ನೀನು ಬಲು ಚತುರೆ ! ಎಲ್ಲಿ ಶ್ಲೋಕದ ಪೂರ್ವಾರ್ಧ ಮತ್ತೊಮ್ಮೆ ಹೇಳು.
ಸರ : ಸುಧಾಧಾರಾತಿ ಮಧುರಾ ಶ್ರೀಸುಧೀಂದ್ರ ಸರಸ್ವತೀ !
ವೇಂ : ಹ್ಯಾ ನೀನೇ ಹೇಳಿಬಿಟ್ಟಿಯಲ್ಲ, ಕ್ರಿಯಾಪದವನ್ನು !
ಸರ : (ವಿಸ್ಮಿತಳಾಗಿ) ನಾನೆಲ್ಲಿ ಹೇಳಿದೆ ಸ್ವಾಮಿ ?
ವೇಂ : 'ಸುಧಾಧಾರಾತಿ' ಎಂದು ಹೇಳಿದೆಯಲ್ಲ !
ಸರ : ನಾನೇ ಬುದ್ಧಿವಂತಳೆಂದು ತಿಳಿದು ಶ್ಲೋಕವನ್ನು ವ್ಯಸ್ತಪದಮಾಡಿ ವಾಕ್ಯರೂಪವಾಗಿ ಹೇಳಿದೆ, ನೀವು ಪ್ರಚಂಡರು ! ಶ್ಲೋಕರೂಪವಾಗಿ ಹೇಳಿಸಿ ಕ್ರಿಯಾಪದ ಕಂಡುಹಿಡಿದುಬಿಟ್ಟಿರಿ ! ಹಾಂ, ನಾನೆಂಥ ಹುಚ್ಚಿ, ನೀವು ವ್ಯಾಕರಣಶಾಸ್ತ್ರಕೋವಿದರೆಂದು ಮರೆತೇಹೋಗಿತ್ತು !
ವೇಂ : ಸರಸ್ವತಿ ! ಈಗ ನನ್ನ ಸರದಿ. ನಾನು ಹೇಳುವುದು ಪ್ರಶ್ನೆರೂಪವಾಗಿದೆ. ಉತ್ತರವೂ ಅಲ್ಲಿಯೇ ಇದೆ. ನೀನು ಉತ್ತರ ಹೇಳಬೇಕು.
ತಿಳಿದಿದೆ.
ಸರ : ಆಗಲಿ, ಪ್ರಯತ್ನಿಸುತ್ತೇನೆ.
ವೇಂ : “ಕಂ ಬಲವಂತಂ ನ ಬಾಧತೇ ಶೀತಮ್ ||”
ಸರ : (ನಕ್ಕು) ಕಂಬಲವಂತಂ ನ ಬಾಧತೆ ಶೀತಮ್ ।।”
ವೇಂ : ಭಲೇ ಸರಸ ! ನೀನು ಬುದಿವಂತಳು,
ಸರ : (ಹೊಗಳಿಕೆಯಿಂದ ಉತ್ತೇಜಿತಳಾಗಿ) ಇನ್ನೊಂದು ಪ್ರಶ್ನೆ, ಉತ್ತರಿಸಿ, “ಕೇ ದಾರಪೋಷಣರತಾಃ ?” 335 ವೇಂ : “ಕೇದಾರಪೋಷಣರತಾಃ ||” 336
ಸರ : (ಅಚ್ಚರಿಯಿಂದ) ಇದೆಲ್ಲ ನಿಮಗೆ ನೀರು ಕುಡಿದಂತೆ ಅಲ್ಲವೇ ಸ್ವಾಮಿ ?
ವೇಂ : ಸರಸ್ವತಿ, ನಾನು ಐದಾರು ವರ್ಷದವನಾಗಿದ್ದಾಗಲೇ ಇಂತಹ ನೂರಾರು ಪದ್ಯ, ಸ್ವಾರಸ್ಯಕರ ಪ್ರಶೋತ್ತರಗಳನ್ನು
ಸರ : ಈಗ ಮತ್ತೊಂದು ಪದ್ಯ ಹೇಳುತ್ತೇನೆ. ಅದಕ್ಕೆ ಸರಿಯಾದ ಉತ್ತರ ಕೊಡಿ.
“ತಮಾಖುಪತ್ರಂ ರಾಜೇಂದ್ರ ಭಜಮಾಜ್ಞಾನದಾಯಕಮ್ | ತಮಾಖುಪತ್ರಂ ರಾಜೇಂದ್ರ ಭಜಮಾಜ್ಞಾನದಾಯಕಮ್ ||”
ಇಲ್ಲಿ ವಿಧಿ-ನಿಷೇಧಗಳನ್ನು ನಿರೂಪಿಸಿ ಅರ್ಥಹೇಳಿ, ನೋಡೋಣ.
ಈ ಪದ್ಯದ ಪೂರ್ವಾರ್ಧ-ಉತ್ತರಾರ್ಧಗಳು ಒಂದೇರೀತಿಯಾಗಿವೆ. ಆದರೆ ಪೂರ್ವಾರ್ಧವು ಸಂಭಂಗಶ್ಲೇಷ ಮರಾದೆಯಿಂದ ವಿಧಿಪರವಾಗಿದೆ. ಉತ್ತರಾರ್ಧವು ಅಭಂಗಶ್ಲೇಷ ಮಯ್ಯಾದೆಯಿಂದ ನಿಷೇಧ ಪರವಾಗಿದೆ. (ವಿಧಿ ಎಂದರೆ ಮಾಡು ನಿಷೇಧ ಅಂದರೆ ಬೇಡ ಎಂದಾಗುತ್ತೆ) ಅದನ್ನರಿತು ಅರ್ಥಹೇಳುವುದು ಇದರ ಸ್ವಾರಸ್ಯ. ವೇಂಕಟನಾಥರು ಪೂರ್ವಾರ್ಧ ಉತ್ತರಾರ್ಧಗಳ ವಿಧಿ ನಿಷೇಧಪರ ಅರ್ಥವನ್ನು ಹೀಗೆ ವಿವರಿಸಹತ್ತಿದರು -
ವೇಂ : ವಿಧಿಪರ ಆರ್ಥ : “ತಮಾಖುಪತ್ರಂ ರಾಜೇಂದ್ರ ಭಜಮಾಜ್ಞಾನಕಾರಕಮ್ |” ರಾಜೇಂದ್ರ-ರಾಜಶ್ರೇಷ್ಠನೇ ಸಂಪತ್ತನ್ನೂ, ಜ್ಞಾನ! = ಜ್ಞಾನವನ್ನೂ, ದಾಯಕಂ = ಕೊಡುವಂತಹ, ತಂ-ಆ, ಆಖಪತ್ರಂ = ಗಣಪತಿಯನ್ನು ಭಜ = ಸೇವಿಸು. ಇದು ಸಭಂಗಶ್ಲೇಷಮರಾದೆಯ ವಿಧಿಪರವಾದ ಅರ್ಥ, “ತಮಾಖುಪತ್ರ ರಾಜೇಂದ್ರ ಭಜವಾಜ್ಞಾನದಾಯಕು ನಿಷೇಧಪರವಾದ ಅರ್ಥ ರಾಜೇಂದ್ರ = ಎಲೈರಾಜವರ ! ಅಜ್ಞಾನದಾಯಕು=ಅಜ್ಞಾನವನ್ನುಂಟುಮಾಡುವ, ತಮಾಖಪತ್ರಂ = ಹೊಗೆಸೊಪ್ಪನ್ನು, ಮಾಭಜ = ಸೇವಿಸಬೇಡ ! ಇದು ಅಭಂಗ ಶೇಷ ಮಯ್ಯಾದೆಯ ನಿಷೇಧಪರವಾದ ಅರ್ಥ. ಸರಿಯೇ ರಾಣಿಯವರೆ ?
ಪ್ರಶ್ನೆ : “ಕಂ ಬಲವಂತಂ ನ ಬಾಧತೇ ಶೀತಂ?' - ಅರ್ಥ : ಬಲಿಷ್ಠರಾದ ಯಾರನ್ನು ಶೀತವು ಬಾಧಿಸುವುದಿಲ್ಲ?
ಉತ್ತರ : “ಕಂಬಲವಂತಂ ಸಬಾಧತೇ ಶೀತಂ ” ಅರ್ಥ : ಕಂಬಳಿಯುಳ್ಳವರನ್ನು ಚಳಿಬಾಧಿಸುವುದಿಲ್ಲ.
ಪ್ರಶ್ನೆ : ಕೇದಾರಪೋಷಣರತಾ?” ಅರ್ಥ: ಪತ್ನಿಯ ಪೋಷಣೆಯಲ್ಲಿ ರತರಾರು ?
ಉತ್ತರ : “ಕೇ ದಾರಪೋಷಣರತಾಃ' ಅರ್ಥ : ಗದ್ದೆಯನ್ನು ಚೆನ್ನಾಗಿ ರಕ್ಷಿಸುವವರೇ ಪತ್ನಿಯನ್ನು ಚೆನ್ನಾಗಿ ಪೋಷಿಸುವರು ಎಂದು ಉತ್ತರವಾಗುವುದು. ಇದೇ ಸಂಸ ಸಾಹಿತ್ಯದ ವೈಶಿಷ್ಟ್ಯ.
ಸರ : ಅಬ್ಬಾ, ಎಷ್ಟು ಬೇಗ ಹೇಳಿಬಿಟ್ಟಿರಿ !
ವೇಂ : ಈಗ ನನ್ನ ಸರದಿ ಸರಸ್ವತಿ, ನಾನೊಂದು ಶ್ಲೋಕವನ್ನು ಹೇಳುತ್ತೇನೆ. ಅದರಲ್ಲಿ ಏಳು ಪ್ರಶ್ನೆಗಳಿವೆ. ಮೊದಲು ಆರು ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಬೇಕು. ನಂತರ ಏಳನೇ ಪ್ರಶ್ನೆ. ಆರುಪ್ರಶ್ನೆಗಳ ಉತ್ತರದಲ್ಲಿನ ಮಧ್ಯಮಾಕ್ಷರಗಳನ್ನು ಸೇರಿಸಿದರೆ ಏಳನೆ ಪ್ರಶ್ನೆಗೆ ಉತ್ತರವಾಗುತ್ತದೆ. ಇಲ್ಲಿ ಆರುಪ್ರಶ್ನೆಗಳಿಗೆ ಸರಿಯಾದ ಉತ್ತರ ಕಂಡುಹಿಡಿಯುವುದರಲ್ಲೇ ಇರುವುದು ಬುದ್ದಿವಂತಿಕೆ ! ಹೇಳಲಾ ?
ಸರ : ನಿಮ್ಮ ವಿವರಣೆ ಕೇಳಿಯೇ ಭಯವಾಗುತ್ತಿದೆ ! ಹೂ, ಹೇಳಿ, ನನ್ನ ಯೋಗ್ಯತಾನುಸಾರ ಪ್ರಯತ್ನಿಸುತ್ತೇನೆ.
ವೇಂ : “ಕಾವಾರ್ಧಾಂಗಂ ಪುರಾರೇ ? ಕಿಟವರವಿಲಸದ್ದಂಷ್ಟ್ರಯಾಧಾರಿ ಕಾವಾ ?
ಕೋವಾ ಶೇತೇಂಬುರಾಶೆ ? ಯುಧಿ ಧರಣಿಧಃ ಪ್ರಾಪ್ಯತೇ ಕೋನು ಶೂರೈ: ? |
ಕೋವಾ ನೈವಾಸ್ತಿ ಲಕ್ಷ್ಮೀದಿತಿಜಮಥನಯೋಃ ? ಕೋ
ಗುರುರ್ನಿಝ್ರರಾಣಾಂ ?
ವಾಚ್ಯಃ ಕೋ ವಾ ವತತ್ಪತಿವಚನಗತೈಃ ಮಧ್ಯರ್ವ ರ್ಮುನೀಂದ್ರಃ ? ”
ಸರ : ಮೊದಲು ಅರ್ಥ ಹೇಳುತ್ತೇನೆ. ೧) ರುದ್ರದೇವರ ಅರ್ಧಾಂಗಿ ಯಾರು ? ೨) ವರಾಹದೇವರ ದಂಷ್ಟ್ರದಿಂದ ಯಾರು ಧರಿಸಲ್ಪಟ್ಟರು ? ೩) ಸಮುದ್ರದಲ್ಲಾರು ಮಲಗಿದ್ದಾರೆ ? ೪) ಯುದ್ಧದಲ್ಲಿ ಶೂರರಾದ ಭೂಪತಿಗಳು ಏನು ಪಡೆಯುತ್ತಾರೆ ? ೫) ಲಕ್ಷ್ಮೀದೇವಿ ಮತ್ತು ನಾರಾಯಣರಿಗೆ ಏನಿಲ್ಲ ? ೬) ದೇವತೆಗಳ ಗುರುಗಳಾರು ? ೭) ಈ ಆರು ಪ್ರಶ್ನೆಗಳ ಉತ್ತರದ ಮಧ್ಯಮಾಕ್ಷರಗಳಿಂದ ವಾಚ್ಯರಾಗಿರುವ ಮುನೀಂದ್ರರು ಯಾರು ಹೇಳು ! ಇದಲ್ಲವೇ ಸ್ವಾಮಿ ಈ ಪದ್ಯದ ಅರ್ಥ ?
ಪತ್ನಿಯ ಸಾಹಿತ್ಯಜ್ಞಾನವನ್ನು ಕಂಡಾನಂದಿಸಿ ವೇಂಕಟನಾಥರು “ಭಲೇ ಸರಸ್ವತೀ, ಈಗ ಒಂದೊಂದು ಪ್ರಶ್ನೆಗೂ ಉತ್ತರವನ್ನು ಕಂಡುಹಿಡಿ ನೋಡೋಣ” ಎನಲು ಸರಸ್ವತಿಯು “ಉತ್ತರ ಕಂಡುಹಿಡಿಯುವುದು ಅರ್ಥಹೇಳಿದಷ್ಟು ಸುಲಭವಾಗಲಾರದು ಆದರೂ ಪ್ರಯತ್ನಿಸುತ್ತೇನೆ” ಎಂದಳು.
“ಕಾವಾರ್ಧಾಂಗಂ ಪುರಾರೇಃ ? .......... ಪಾರ್ವತೀ ?”
ವೇಂ : ಉಹೂಂ, ಅಲ್ಲ,
ಸರ : ಭವಾನೀ
ವೇಂ : ಸರಿಯಾದ ಉತ್ತರ, ಕಿಟಿವರವಿಲಸದ್ದಂಷ್ಟಯಾಧಾರಿಕಾವಾ ?
ಸರ : ಧರಣೀ
ವೇರಿ : ಅಲ್ಲ.
ಸರ : ಸ್ವಲ್ಪ ಇರಿ. ಮೇದಿನೀ
ವೇಂ : ಸರಿ, ಕೋವಾಶೇತೇಂಬುರಾಶೌ ?
ಸರ : ನಾರಾಯಣಃ
ವೇಂ : ಅಲ್ಲ.
ಸರ : ವಾಸುದೇವಃ,
ವೇಂ : ಅದೂ ಅಲ್ಲ, ಮೂರಕ್ಷರವಿರಬೇಕು.
ಸರ : ಮುರಾರಿಃ ?
ವೇಂ : ಭಲೆ, ಯುಧಿ ಧರಣಿಧವೈಃ ಪ್ರಾಪತ್ಯೇ ಕೋನು ಶೂರೈ
ಸರ : ವಿಜಯಃ ಅಲ್ಲವೇ ಸ್ವಾಮಿ ?
ವೇಂ : ನಿಜ, ಈಗ ಇದಕ್ಕೆ ಉತ್ತರ ಹೇಳು “ಕೋವಾ ನೈವಾಸ್ತಿ ಲಕ್ಷ್ಮೀದಿ ಮಥನಯಯೋ” ?
ಸರ : ವಿಯೋಗಃ,
ವೇಂ : ಸರಿ. “ಕೋ ಗುರುರ್ನಿಝ್ರರಾಣಾಂ ?”
ಸರ : ಬೃಹಸ್ಪತಿಃ,
ವೇಂ : ಅಲ್ಲ. ಮೂರಕ್ಷರದ್ದಾಗಬೇಕು.
ಸರ : ಸ್ವಲ್ಪ ತಡೆಯಿರಿ (ಯೋಚಿಸಿ) ವಾಗೀಶಃ.
ವೇಂ : (ಸಂತೋಷದಿಂದ) ಪ್ಲಾ. ಇದು ಸರಿಯಾದ ಉತ್ತರ. ಆರು ಪ್ರಶ್ನೆಗಳಿಗೆ ಸರಿಯಾದ ಉತ್ತರದ ಮಧ್ಯಮಾಕ್ಷರ ಸೇರಿಸಿದರೆ ಏಳನೆಯಪ್ರಶ್ನೆಗೆ ಉತ್ತರವಾಗುವುದು. ಅದೇನು ಹೇಳು ನೋಡೋಣ.
ಸರ : ೧) ಭವಾನೀ, ೨) ಮೇದಿನೀ ೩) ಮುರಾರಿಃ ೪) ವಿಜಯ ೫) ವಿಯೋಗಃ ೬) ವಾಗೀಶಃ, ಇವೆಲ್ಲದರ ಮಧ್ಯಮಾಕ್ಷರ ಸೇರಿಸಿದರೆ ವಾದೀರಾಜಯೋಗೀ ಎಂದಾಗುವುದು. ಆರು ಉತ್ತರಗಳ ಮಧ್ಯಮಾಕ್ಷರದಿಂದ ವಾಚ್ಯರಾದವರು ಶ್ರೀವಾದಿರಾಜಯೋಗಿಗಳು. ಸರಿಯೇ ಸ್ವಾಮಿ ?
ವೇಂ : ಸರಸ್ವತಿ ! ನೀನು ಬುದ್ಧಿವಂತಳು, ಎಷ್ಟೋ ಜನ ಮೇಧಾವಿ ಗಂಡಸರೇ ವಿದ್ಯಾವಂತರೇ ಇಷ್ಟು ಬೇಗ ಇದನ್ನು ಕಂಡುಹಿಡಿಯಲಾಗುವುದಿಲ್ಲ. ನೀನು ಬೇಗ ಕಂಡುಹಿಡಿದದ್ದು ನನಗಚ್ಚರಿಯಾಗಿದೆ.
ಸರ : (ಆನಂದದಿಂದ) ನಿಮ್ಮ ಮಾರ್ಗದರ್ಶನವಿಲ್ಲದಿದ್ದರೆ ನಾನೆಲ್ಲಿ ಕಂಡು ಹಿಡಿಯುತ್ತಿದ್ದೆ. ಹಾಗಾದರೆ ನಿಮ್ಮ ಈ ಪತ್ನಿಯು ಪರೀಕ್ಷೆಯಲ್ಲಿ ಗೆದ್ದಳೋ ಸೋತಳೋ ?
ವೇಂ : (ನಕ್ಕು) ಸರಸ್ವತೀದೇವಿಗೆ ಎಂದಾದರೂ ಅಪಜಯವುಂಟೆ ? ಉತ್ತಮ ರೀತಿಯಲ್ಲಿ ಗೆದ್ದಿರುವೆ !
ಸರ : “ಹಾಗಾದರೆ ಕೊಡಿ ಬಹುಮಾನ” ಎನಲು, ವೇಂಕಟನಾಥರು ಭುಜ ಹಿಡಿದು ತಮ್ಮತ್ತ ಎಳೆಯಹೋದಾಗ ಮೆಲ್ಲನೆ ತಪ್ಪಿಸಿಕೊಂಡು “ನಿಮಗೆ ಯಾವಾಗಲೂ ಹುಡುಗಾಟವೇ” ಎಂದು ಹುಸಿಮುನಿಸು ತೋರಿದಳು.
ಸರ : ಸ್ವಾಮಿ ಈ ಪದ್ಯವೆಷ್ಟು ಸ್ವಾರಸ್ಯವಾಗಿದೆ. ಇದನ್ನು ಕೇಳಿದ ಮೇಲೆ ನನಗೆ ಒಂದಾಶೆಯಾಗುತ್ತಿದೆ.
ವೇಂ : ಅದೇನು ಸರಸ ?
ಸರ : ನಿಮ್ಮಲ್ಲಿ ಶಾಕುಂತಳಾ ನಾಟಕವನ್ನು ಓದಬೇಕೆಂದು ಆಶೆ. ಪಾಠಹೇಳುವಿರಾ ಸ್ವಾಮಿ ?
ವೇಂ : ನಿಮ್ಮ ತಾಯಿಯಲ್ಲಿ ಓದಿರುವೆನೆಂದೆಯಲ್ಲ ?
ಸರ : (ನಾಚಿ) ಅಮ್ಮನಲ್ಲಿ ಓದಿದ್ದೆ ನಿಜ ! ಆದರೆ ನೀವು ಪಾಠ ಹೇಳಿದರೆ ಅದರ ಸ್ವಾರಸ್ಯವೇ ಬೇರೆ ಅಲ್ಲವೇ ?
ವೇಂ : (ಮಂದಹಾಸಬೀರಿ) ಶೃಂಗಾರನಾಟಕವನ್ನು ರಸಿಕನಾದ ಪತಿಯಲ್ಲಿ ಓದಬೇಕೆಂದು ಹಂಬಲವೋ ? ಸರ : ಅದು ತಪ್ಪೇ ಸ್ವಾಮಿ ?
ವೇಂ : ತಪ್ಪಲ್ಲ, ಶಾಕುಂತಳವೇ ಏಕೆ ? ಬೇರೆ ನಾಟಕವಾಗಬಹುದಲ್ಲ.
ಸರ : ಕಾವೇಷು ನಾಟಕಂ ರಮ್ಯಂ ತತ್ರ ರಮ್ಯಾ ಶಕುಂತಳಾ” ಎಂದು ಎಲ್ಲರೂ ಹೊಗಳುವರಲ್ಲ!
ವೇಂ : ಶಾಕುಂತಳದಂತೆಯೇ ನವರಸಭರಿತವಾದ ಬೇರೊಂದು ಶ್ರೇಷ್ಠ ನಾಟಕ ಓದಬಹುದಲ್ಲ.
ಸರ : ಅಂಥ ನಾಟಕವಾವುದಿದೆ ?
ವೇಂ : ಏಕೆ, ಸುಭದ್ರಾಪರಿಣಯವಿಲ್ಲವೆ ?
ಸರ : ಅದರ ಕವಿಗಳಾರು ?
ವೇಂ : ಇದೇನು ಹೀಗೆ ಕೇಳುವೆ ಸರಸ್ವತಿ. ನಿಮ್ಮ ಬಂಧುಗಳೂ ಕುಲಗುರುಗಳೂ ಆದ ಶ್ರೀಸುಧೀಂದ್ರತೀರ್ಥರೇ ಇದರ ಕರ್ತೃಗಳೆಂದು ನಿನಗೆ ತಿಳಿಯದೆ ?
ಸರ : (ಅಚ್ಚರಿಯಿಂದ) ಹೌದೇ ? ನನಗೆ ಗೊತ್ತೇ ಇರಲಿಲ್ಲ. ಅವರು ರಚಿಸಿದ್ದು ಎನ್ನುವಿರಿ ಸನ್ಯಾಸಿಗಳು ರಚಿಸಿದ ನಾಟಕದಲ್ಲಿ ಶೃಂಗಾರರಸ ಓತಪ್ರೋತವಾಗಿ ಹರಿಯಲು ಸಾಧ್ಯವೇ ?
ವೇಳೆ : ಅದನ್ನು ಓದು. ಆಗ ಗೊತ್ತಾಗುವುದು. ಅದೆಂತಹ ನವರಸಭೂಯಿಷ್ಠವಾದ ಶ್ರೇಷ್ಠನಾಟಕವೆಂದು ! ಅದನ್ನು ಸ್ವಲ್ಪವಿಮರ್ಶಿಸಿದಾಗ ತಿಳಿಯುವುದು ಅದರ ಸ್ವಾರಸ್ಯ,
ಸರ : ಹಾಗಾದರೆ ಅದನ್ನು ಯಾವಾಗ ವಿಮರ್ಶಿಸಿ ತಿಳಿಸುವಿರಿ ?
ವೇಂ : ಅಮ್ಮ ಬರುವ ಹೊತ್ತಾಯಿತು. ಇಂದು ಬೇಡ, ನಾಳೆ ವಿಮರ್ಶಿಸೋಣ.
ಸರ : ಕಾಲಕಳೆದುದೇ ಗೊತ್ತಾಗಲಿಲ್ಲ. ನನಗೇನೋ ಸದಾ ನಿಮ್ಮ ಹತ್ತಿರವೇ ಇರಬೇಕೆನಿಸುತ್ತದೆ.
ವೇಂ : ನಾನೆಲ್ಲಿ ಬೇಡವೆಂದೆ ? 'ಸಿದ್ದು ನಸ್ಸಮೀಹಿತಂ' ಅಲ್ಲವೇ ?
ಸರಸ್ವತಿಯು ನಾಚಿ - ಅತ್ತೆ ಬರುವ ಹೊತ್ತಾಯಿತು. ನಾನಿನ್ನು ಬರುತ್ತೇನೆ' ಎಂದು ನಗುತ್ತಾ ಹೊರನಡೆದಳು.
ಗೋಪಮ್ಮನವರು ದೇವರ ಮನೆಯಲ್ಲಿ ಜಪಮಾಡುತ್ತಿದ್ದಾರೆ. ಸಂಧ್ಯಾ ಸಮಯ. ಸರಸ್ವತಿ ಏನೋ ಮಧುರಸ್ಥರದಲ್ಲಿ ಗುಣಗುಟುತ್ತಾ ದೇವರ ಮನೆಯತ್ತ ನಾಲ್ಕಾರು ಬಾರಿ ಬಂದುಹೋದಳು. ಅದನ್ನು ಗಮನಿಸಿದ ಗೋಪಮ್ಮನ ಮುಖದಲ್ಲಿ ದರಹಾಸ ಮಿನುಗಿತು. ಸೊಸೆಯ ಕಾತುರ, ಈ ಶತಪಥಗಳು ಅವರಿಗರ್ಥವಾಯಿತು. ಸೊಸೆಯನ್ನು ಕರೆದರು. ಅವರ ಕರೆಯನ್ನಾಲಿಸಿ ಜಿಂಕೆಯಂತೆ ಓಡಿಬಂದು “ಕರೆದಿರಾ ಅಮ್ಮಾ?” ಎಂದಳು.
ಗೋಪಮ್ಮ : ಇಲ್ಲೇಕೆ ಓಡಾಡುತ್ತಿರುವೆ. ವೇಂಕಟನಾಥನಿಗೆ ಹಾಲು-ಹಣ್ಣು ಕೊಡುವುದಿಲ್ಲವೇ ?” ಎನಲು “ನೀವು ಪುರಾಣಕ್ಕೆ ಹೋದ ಮೇಲೆ ಕೊಡೋಣವೆಂದಿದೆ” ಎಂದಳು. ಗೋಪಮ್ಮ ನಕ್ಕು ಇಂದು ಪುರಾಣವಿಲ್ಲಮ್ಮ” ಎನಲು ಸರಸ್ವತಿಯು ಮುಖ ಬಾಡಿಸಿಕೊಂಡು “ಓಹ್, ನನಗೆ ಗೊತ್ತಿರಲಿಲ್ಲ ಅಮ್ಮಾ” ಎಂದಳು. ಗೋಪಮ್ಮ“ಮಗು, ಇಲ್ಲಿ ಬಾರಮ್ಮ' ಎಂದು ಕರೆದರು. ವಿಧೇಯಳಾಗಿ ಬಂದು ನಿಂತ ಸರಸ್ವತಿಯ ಕರಪಿಡಿದು ಹತ್ತಿರ ಕೂಡಿಸಿಕೊಂಡು ಬೆನ್ನ ಮೇಲೆ ಕೈಯಾಡಿಸುತ್ತಾ ನಸುನಗುತ್ತಾ “ಸರಸ್ವತಿ ! ಗಂಡನನ್ನು ತುಂಬಾ ಪ್ರೀತಿಸುವೆಯಲ್ಲವೇ ?” ಎಂದಾಗ ಸರಸ್ವತಿಯ ಗಲ್ಲಗಳು ಕೆಂಪಾದವು. ತಲೆತಗ್ಗಿಸಿ ಮೌನವಹಿಸಿದಳು. ಗೋಪಮ್ಮ ಅವಳ ಗಲ್ಲ ಹಿಡಿದೆತ್ತಿ ಹೇಳು, ಮಗಳೇ, ಪತಿಯಲ್ಲಿ ಪಂಚಪ್ರಾಣವಿಟ್ಟಿದ್ದೀಯೆ ! ಅಹುದಲ್ಲವೇ ?” ಎಂದರು.
ಸರ : (ಲಜ್ಜೆಯಿಂದ) ಅಮ್ಮಾ, ನನಗರಿವಾಗದಂತೆಯೇ ನನ್ನ ಮನಸ್ಸು ಸದಾ ಅವರಲ್ಲಿ ಸಲ್ಲಗ್ನವಾಗಿರುತ್ತದೆ. ಹೆಚ್ಚು ಪ್ರೀತಿಸುವುದು ತಪ್ಪೇನಮ್ಮ ?
ಗೋಪಮ್ಮ : (ಸಂತಸದಿಂದ ಸೊಸೆಯನ್ನು ಬಾಚಿತಬ್ಬಿ) ಅಯ್ಯೋ, ನನ್ನಮ್ಮ, ಅದು ಪತಿ-ಪತ್ನಿಯರಲ್ಲಿರಬೇಕಾದ ಸಹಜಗುಣ, ಪತಿಯೇ ಸತಿಗೆ ಪರದೈವ, ಸತಿಯ ಸರ್ವಸ್ವವೂ ಪತಿಯ ಚರಣಗಳಿಗೆ ಮೀಸಲು ! ಪತ್ನಿಯ ಮನಸ್ಸು ಸರ್ವದಾ ಪತಿಯಲ್ಲಿ ಮಗ್ನವಾಗಿರಬೇಕು. ಇದೇ ನಮ್ಮ ಭಾರತದ ಸಂಸ ತಿಯ ಉಪದೇಶ ! ಮಗು, ಪತಿಯ ಸಕಲಕರ್ಮಗಳಲ್ಲೂ ಸತಿಯು ಸಮಭಾಗಿನಿ “ಧರ್ಮ ಚ ಅರ್ಥ ಚ ಕಾಮೇ ಚ ನಾತಿಚರಿತಾತಯೇಯಂ” ಎಂದು. ಅದಕ್ಕೇ ಲಗ್ನಕಾಲದಲ್ಲಿ ವೇದಪುರುಷ, ಹಿರಿಯರು ಪತಿಗೆ ಆದೇಶನೀಡುವ ಕ್ರಮವನ್ನು ಉಪದೇಶಿಸಿದ್ದಾರೆ ! ಪತಿ-ಸತಿಯರಿಬ್ಬರೂ ಪಾರತ್ರಿಕ ಸಾಧನೆಯ ಮಾರ್ಗದಲ್ಲಿ ಮುನ್ನಡೆಯುವ ಧರ್ಮರಥ'ದ ಎರಡು ಗಾಲಿಗಳಿದ್ದಂತೆ ! ಅವು ಸಮವಾಗಿ ಕ್ರಮಿಸಿದಾಗ “ಧರ್ಮರಥ'ವು ಸುಗಮವಾಗಿ ಗುರಿಮುಟ್ಟುವುದು. ಪತ್ನಿಯು ಕೇವಲ ಭೋಗದ ವಸ್ತು ಮಾತ್ರವಲ್ಲ, ಪತಿಯ ಎಲ್ಲ ಕಾರ್ಯ, ಹಂತಗಳಲ್ಲೂ ಸಮಭಾಗಿನಿ ! ಅಧ್ಯಾತ್ಮಸಾಧನೆಯಲ್ಲಿ ಸಂಗಾತಿ ! ಅಂತೆಯೇ ನಮ್ಮಲ್ಲಿ "ಗೃಹಣೀ ಗೃಹಮುಚ್ಯತೆ” ಎಂದು ಸಾರಿ, ಪತ್ನಿಗೆ ಇನ್ನೆಲ್ಲೂ ಇಲ್ಲದ ಮಹತ್ವಸ್ಥಾನ ನೀಡಿದ್ದಾರೆ. ಪತಿ-ಪತ್ನಿಯರ ಪ್ರೇಮಜೀವನ ಈ ಒಂದು ಆದರ್ಶದಲ್ಲಿ ಸಾಗಬೇಕು. ಆಗಲೇ ಅದು ಸಾರ್ಥಕ. ನಿನ್ನ ಪತಿಪ್ರೇಮವನ್ನು ಕಂಡು ನನಗೆ ಅತೀವ ಹರ್ಷವಾಗಿದೆ. ಸುಖ-ದುಃಖ, ಸಿರಿತನ, ಬಡತನ, ಮತ್ತಿನ್ನಾವುದೇ ಸಂದರ್ಭದಲ್ಲೂ ಪತಿಯ ಸಮಭಾಗಿನಿಯಾಗಿ ಅವನಲ್ಲಿ ನಿರತಿಶಯ ಪ್ರೀತಿಗೌರವದಿಂದ ಸೇವಿಸು ! ಇದೇ ನಾನು ನಿನಗೆ ಹೇಳುವ ಹಿತವಚನ !
ಅತ್ತೆಯ ಪ್ರತಿಯೊಂದು ಮಾತೂ ಅವಳ ಹೃದಯವನ್ನರಳಿಸಿ ರೋಮಾಂಚನಗೊಳಿಸಿತು. ಅತ್ತೆಯ ಉದಾರ ಅಂತಃಕರಣ, ಪ್ರೀತಿಗಳನ್ನು ಕಂಡು ಆನಂದಬಾಷ್ಪ ಸುರಿಸುತ್ತಾ ಸರಸ್ವತಿಯು ಗೋಪಮ್ಮನನ್ನು ತಬ್ಬಿ “ಅಮ್ಮಾ, ನೀವೆಂಥ ಉದಾತ್ತ ಗುಣಶೀಲರು ! ನಿಮ್ಮಂಥ ಅತ್ತೆಯನ್ನು ಪಡೆದ ನಾನೇ ಧನ್ಯಳು” ಎಂದು ಗೋಪಮ್ಮನವರ ಕಾಲಿಗೆರಗಿದಳು.
ಗೋಪಮ್ಮನವರ ಕಣ್ಣಿನಲ್ಲಿಯೂ ಆನಂದಾಶ್ರು ಮಿಡಿಯಿತು. ಪ್ರೀತಿಯಿಂದ “ಹುಚ್ಚು ಹುಡುಗಿ, ನೀನೆಷ್ಟು ಭಾವುಕಳೇ ! ಸರಸ್ವತಿ, ವೇಂಕಟನಾಥ ನನ್ನ ಪ್ರಾಣಪದಕ, ನಾನು, ಯಜಮಾನರು, ಬಹುತಪಸ್ಸುಮಾಡಿ ಶ್ರೀನಿವಾಸನ ವರದಿಂದ ಅವನನ್ನು ಪಡೆದವು. ಅವನು ಸಾಮಾನ್ಯನಲ್ಲ. ಮಹಾಪುರುಷ ! ಅವನ ಕರಪಿಡಿದ ನೀನು ಮಹಾಪುಣ್ಯವಂತಳು. ನಾನು ಪುರಾಣಕ್ಕೆ ಹೋಗದಿದ್ದಾಗ ನಿನಗಾದ ಕಾತುರ ನಾಬಲ್ಲೆ, ಪ್ರತಿಯೊಬ್ಬ ಸಾಧಿಯ ಮನಸೂ ಪತಿಯ ಸಾನ್ನಿಧ್ಯವನ್ನು ಬಯಸುತ್ತದೆ. ಅದು ಸಹಜವಾ ಅಹುದು. ಇನ್ನು ಮೆಲೆ ಪುರಾಣಕ್ಕೆ ಹೋಗುವವರಿಗೆ ಕಾಯಬೇಕಾಗಿಲ್ಲ. ಹೋಗು ಮಗಳೇ, ನಿನ್ನ ಪತಿಗೆ ಹಾಲು-ಹಣ್ಣು ಕೊಡು” ಎಂದು ನಸುನಕ್ಕರು. ಸರಸ್ವತಿ ಗೋಪಮ್ಮನವರಿಗೆ ಮತ್ತೆ ನಮಿಸಿ “ನನ್ನ ತಾಯಿಯೂ ಇಷ್ಟು ಪ್ರೀತಿಸುತ್ತಿದ್ದಳೋ ಇಲ್ಲವೋ, ನಾನರಿಯೆ. ಅಮ್ಮಾ, ನೀವೇ ನನಗೆ ತಾಯಿ ! ನಿಮ್ಮ ಉಪದೇಶದಂತೆ ನಡೆಯುತ್ತೇನೆ. ಅಮ್ಮಾ, ಇನ್ನೊಂದು ವಿಚಾರ. ಅವರಲ್ಲಿ ಸಾಹಿತ್ಯ, ವೀಣೆ ಕಲಿಯಲು ನನಗೆ ಆಶೆಯಾಗಿದೆ. ನೀವು ಅವರಿಗೆ ಹೇಳುವಿರಾ ?” ಎನಲು ಗೋಪಮ್ಮ “ಕಲಿಯಮ್ಮಾ, ನಾನು ಕಲಿಸುವಂತೆ ಅವನಿಗೆ ಹೇಳುತ್ತೇನೆ” ಎಂದು ಹೇಳಿ ನಗುತ್ತಾ ಸರಸ್ವತಿಯನ್ನು ಪತಿಯ ಬಳಿಗೆ ಕಳಿಸಿ ಜಪಾಸಕ್ತರಾದರು.
ಸರಸ್ವತಿಯು ಪತಿಯ ಸನ್ನಿಧಿಗೆ ಬಂದಾಗ ವೇಂಕಟನಾಥರು ಕೊಠಡಿಯಲ್ಲಿ ಶತಪಥ ತಿರುಗುತ್ತಿದ್ದರು. ಪತ್ನಿಯನ್ನು ಕಂಡು “ಓಹೋ, ರಾಣಿಗೆ ಈ ಅವಕಾಶವಾಯಿತೇನೋ, ಏಕಿಷ್ಟು ತಡ ?” ಎನಲು ಸರಸ್ವತಿ ನಗೆಬೀರಿ “ಅತ್ತೆಯವರ ಅಪ್ಪಣೆ ಪಡೆದು ಬರಲು ತಡವಾಯಿತು. ಕ್ಷಮಿಸಿ” ಎಂದಳು. ಆಚಾರರು ಪ್ರಶ್ನಾರ್ಥವಾಗಿ ಹುಬ್ಬೇರಿಸಲು, ಸರಸ್ವತಿಯು “ಅತ್ತೆಗೆ ನನ್ನ ಮೇಲೆ ಬಹಳ ಪ್ರೀತಿ. ನಿಮ್ಮನ್ನು ಅವರು ಪ್ರಾಣಪದಕವಾಗಿ ತಿಳಿದಿದ್ದಾರೆ. ನಮ್ಮ ಸಂತೋಷವೇ ಅವರ ಆಶೆಯಂತೆ. ನನಗಿಂದು ಪತಿ-ಪತ್ನಿಯರು ಹೇಗಿರಬೇಕೆಂದು ಉಪದೇಶಿಸಿ, ನಾನು ಪುರಾಣಕ್ಕೆ ಹೋಗುವವರೆಗೆ ಕಾಯಬೇಡ, ನಿನಗಿಷ್ಟ ಬಂದಾಗ ಪತಿಯ ಬಳಿಗೆ ಹೋಗು ಎಂದು ಹೇಳಿಕಳಿಸಿದರು” ಎಂದಳು. ವೇಂಕಟನಾಥರು ನಸುಗೋಪದಿಂದ ಇಲ್ಲಿ ನಾವು ಮಾತಾನಾಡುವುದನ್ನೆಲ್ಲಾ ಅಮ್ಮನಿಗೆ ವರದಿ ಒಪ್ಪಿಸಿಬಿಟ್ಟೆಯಾ ?” ಎಂದರು.
ಸರ : (ನಸುನಕ್ಕು) ಸಿಟ್ಟಾಗಬೇಡಿ ನನ್ನ ಸ್ವಾಮಿ, ಅತ್ತೆ ಕುಶಾಗ್ರಮತಿ, ಎಲ್ಲವನ್ನೂ ಊಹಿಸಿ ತಿಳಿಯಬಲ್ಲರು. ನಮ್ಮ ಸರಸಸಲ್ಲಾಪ ಅವರಿಗೆ ಹಿತಕರವಾಗಿದೆ. ಇಂಥ ಅತ್ತೆ ದೊರಕಿದ್ದು ನನ್ನ ಪುಣ್ಯ.
ವೇಂ : (ದರಹಾಸಬೀರಿ) ನಮ್ಮ ತಾಯಿ ಎಂದರೆ ಏನೆಂದು ತಿಳಿದೆ ? ಅವಳು ಸಾಕ್ಷಾತ್ ದೇವತೆ. ನನ್ನ ತಾಯಿಯ ಪ್ರೀತಿಗೆ ನೀನು ಪಾತ್ರಳಾಗಿರುವುದು ನನಗೆ ತುಂಬಾ ಸಂತೋಷದಾಯಕವಾಗಿದೆ. ನೀನು ವಿನಯ-ವಿಧೇಯತೆ, ಗೌರವಗಳಿಂದ ಅವಳನ್ನು ಸೇವಿಸಬೇಕು ಕಂಡೆಯಾ ?
ಸರ : (ಕೊರಳು ಕೊಂಕಿಸಿ) ನನ್ನ ತಾಯಿಯಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ನೀವೇನೂ ಹೇಳಿಕೊಡಬೇಕಾಗಿಲ್ಲ. ಅವರು ತಾಯಿ, ನಾನು ಮಗಳು. ನಮ್ಮಿಬ್ಬರ ಮಧ್ಯೆ ನೀವು ಬರಕೂಡದು !
ವೇಂ : (ನಗುತ್ತಾ) ಓಹೋ, ಹೀಗೋ ಸಮಾಚಾರ ! ನೀವೆಂದಿನಿಂದ ತಾಯಿ ಮಕ್ಕಳಾದಿರಿ ?
ಸರ : ಅವರು ಯಾವಾಗ ನಾನು ನಿಮ್ಮೊಡನೆ ಸಂತೋಷದಿಂದ ಬಾಳಬೇಕೆಂದು ಉಪದೇಶಿಸಿದರೋ ಆ ಕ್ಷಣದಿಂದ! ವೇಂ : ಸರಿ ಸರಿ ! ಇದೆಷ್ಟು ದಿನ ನಡೆಯುವುದೋ ನೋಡೋಣ !
ಸರ : ನನ್ನ ಜೀವಿಸಿರುವವರೆಗೆ ನಮ್ಮ ಈ ಪ್ರೀತಿ-ಬಾಂಧವ್ಯವನ್ನು ಮುರಿಯಲು ನಿಮಗೂ ಸಾಧ್ಯವಿಲ್ಲ !
ವೇಂ : ಸರಸ ! ಇಂದು ನನಗೆ ತುಂಬಾ ಸಂತೋಷವಾಗಿದೆ.
ಸರ : (ನಕ್ಕು) ಅದಕ್ಕೆ ನಾನೇನು ಮಾಡಲಿ ?
ವೇಂ : ಸದ್ಯ ನೀನು ಸುಮ್ಮನಿದ್ದರೆ ಸಾಕು !
ಸರ : ಅದೇಕಷ್ಟು ಕೋಪ ? ನೀವು ಹೀಗೆ ಕೋಪಿಸಿಕೊಳ್ಳುವುದು, ಛೇಡಿಸುವುದು ಮಾಡಿದರೆ ನಾನು ಅತ್ತೆಯವರು ಕೇಳಿದ್ದನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿಬಿಡುತ್ತೇನೆ ಅಷ್ಟೇ !
ವೇಂ : (ಕುತೂಹಲದಿಂದ) ಅಮ್ಮ ಏನು ಕೇಳಿದಳು ?
ಸರ : (ಲಜ್ಜೆಯಿಂದ) ಅವರಿಗೆ ಒಬ್ಬ ಮೊಮ್ಮಗ ಬೇಕಂತೆ !” ಎಂದು ಹೇಳಿ ಕರಗಳಿಂದ ಮುಖವನ್ನು ಮುಚ್ಚಿದಳು. ವೇಂ : (ಹರ್ಷದಿಂದ) ನೋಡಿದೆಯಾ, ನಮ್ಮಮ್ಮನಿಗಿರುವ ಬುದ್ದಿಈವರೆಗೂ ನಿನಗಿರಲಿಲ್ಲವಲ್ಲ ! ಸರ : ಹೋಗಿ ಸ್ವಾಮಿ, ನಿಮಗೆ ಯಾವಾಗಲೂ ವಿನೋದವೇ ! ಅನಂತರ ವೇಂಕಟನಾಥರು, ಸರಸ್ವತಿ ಹಣ್ಣು-ಹಾಲು ಸೇವಿಸಿದರು.
ತಾಂಬೂಲಚರ್ವಣವಾದ ಮೇಲೆ ವೇಂಕಟನಾಥರು ಶ್ರೀಸುಧೀಂದ್ರರ ಸುಭದ್ರಾಪರಿಣಯ ನಾಟಕವನ್ನು ವಿದ್ವತ್ತೂರ್ಣವಾಗಿ ವಿವೇಚಿಸಿ, ರಸಗುಣಾಲಂಕಾರಝಂಕಾರಿತವಾದ ಅದರ ಸ್ವಾರಸ್ಯಗಳನ್ನು ವಿವರಿಸಿ ಹೇಳಿದರು. ಸರಸ್ವತಿ ಪರಮಾನಂದಭರಿತಳಾಗಿ ಆ ನಾಟಕವನ್ನು ಓದಲಾಶಿಸಿದಳು. ವೀಣೆ ಕಲಿಯುವ ಹಂಬಲವನ್ನು ನಿವೇದಿಸಿದಳು. ಮರುದಿನದಿಂದ ವೇಂಕಟನಾಥರು ಸಂತೋಷದಿಂದ ಅವಳಿಗೆ ಸುಭದ್ರಾಪರಿಣಯ ನಾಟಕ ಪಾಠ ಹೇಳಲಾರಂಭಿಸಿದ್ದಲ್ಲದೆ, ವೀಣಾಭ್ಯಾಸವನ್ನೂ ಮಾಡಿಸಹತ್ತಿದರು. ಹೀಗೆ ಪ್ರತಿದಿನ ವೀಣಾ-ನಾಟಕ ಅಭ್ಯಾಸ ಸಾಗಿತು. ಬುದಿವಂತಳೂ, ಪ್ರತಿಭಾಶಾಲಿನಿಯೂ ಆದ ಸರಸ್ವತಿಯು ಪ್ರತಿದಿನ ಶ್ರದ್ಧೆಯಿಂದ ಕಲಿಯುತ್ತಿದ್ದುದರಿಂದ ನಾಲ್ಕಾರು ತಿಂಗಳುಗಳಲ್ಲಿ ಸುಭದ್ರಾಪರಿಣಯ ಮುಗಿಸಿದ್ದಲ್ಲದೆ, ವೀಣೆಯಲ್ಲೂ ಪ್ರತಿಭೆ ನೈಪುಣ್ಯ ತೋರಲಾರಂಭಿಸಿದಳು. ವೇಂಕಟನಾಥ - ಸರಸ್ವತಿಯರ ಸಂಸಾರವು ಹೀಗೆ “ಕಾವ್ಯಶಾಸ್ತ್ರ ವಿನೋದೇನ ಕಾಲೋ ಗಚ್ಛತಿ ಧೀಮತಾಂ” ಎಂಬಂತೆ ಸಂತಸ-ಉತ್ಸಾಹಗಳಿಂದ ಸಾಗಹತ್ತಿತು.
ಒಂದು ಮಧ್ಯಾಹ್ನ ವೇಂಕಟನಾಥರು ತಾಯಿ-ಪತ್ನಿಯರೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಾ ಪಡಸಾಲೆಯಲ್ಲಿ ಕುಳಿತಿರುವಾಗ ಆಚಾರರ ಪರಿಚಿತರಾದ ಪಂಡಿತರೊಬ್ಬರು ಬಂದು “ಮಹಾನುಭಾವರಾದ ಪೂಜ್ಯ ಶ್ರೀವಿಜಯೀಂದ್ರಗುರುಗಳು ಹರಿಪದಸೇರಿದ ರೆಂಬ ವಿಚಾರ, ಅವರ ಮಹಾಸಮಾರಾಧನೆ ಮುಗಿಸಿಕೊಂಡು ತಾವು ಬಂದು ವಿಚಾರಗಳನ್ನೆಲ್ಲಾ ಹೇಳಿದರು. ಸಿಡಿಲಿನಂತಹ ದುಃಖವಾರ್ತೆಯನ್ನು ಕೇಳಿದೊಡನೆ ಮನೆ-ಮಂದಿಗೆಲ್ಲಾ ದೊಡ್ಡ ಆಘಾತವಾದಂತಾಯಿತು. ದುಃಖ ಉಮ್ಮಳಿಸಿತು. ಗುರುಗಳು ನಿರ್ಯಾಣ ಹೊಂದಿದ್ದಕ್ಕಾಗಿ ಆಚಾರರು ಅಪಾರ ವೇದನೆಯಿಂದ ಬಾಡಿ ಬೆಂಡಾದರು. ಪಂಡಿತರಿಂದ ಎಲ್ಲ ವಿಚಾರಗಳನ್ನೂ ತಿಳಿದು ವೇಂಕಟನಾಥರು ಕಣ್ಣೀರು ಸುರಿಸುತ್ತಾಆ ಮಹಾನುಭಾವರ ಪಾಂಡಿತ್ಯ, ವಿದ್ವಜ್ಜನಪಕ್ಷಪಾತ, ತಮ್ಮ ಮನೆತನದಲ್ಲಿ ಅವರು ಮಾಡುತ್ತಿದ್ದ ಅಪಾರ ಕಾರುಣ್ಯ, ಪ್ರೀತಿ, ಸಹಾಯ, ತಮ್ಮ ಅಭ್ಯುದಯದಲ್ಲಿ ಅವರಿಗಿದ್ದ ಶ್ರದ್ಧೆಗಳನ್ನೆಲ್ಲಾ ನೆನೆದು ನೆನೆದು ಮಕ್ಕಳಂತೆ ಬಿಕ್ಕಿ ಬಿಕ್ಕಿ ಅಳಹತ್ತಿದರು. ಗೋಪಮ್ಮ, ಸರಸ್ವತಿಯರ ಕಣ್ಣುಗಳಿಂದಲೂ ದುಃಖಾಶ್ರು ಮಿಡಿಯಹತ್ತಿತು. ಸ್ವಲ್ಪಹೊತ್ತಾದ ಮೇಲೆ ಗೋಪಮ್ಮ ಮಗನಿಗೆ ಸಮಾಧಾನ ಹೇಳಿದರು. ಆಚಾರರು “ನಾವು ಅನಾಥರಾದವು. ಅಮ್ಮಾ, ನಾವೀಗ ಸ್ನಾನಮಾಡಿ ಆ ಪೂಜ್ಯರಿಗೆ ಶ್ರದ್ಧಾಂಜಲಿಯನ್ನರ್ಪಿಸಬೇಕು. ಇಂದು ರಾತ್ರಿ ಉಪವಾಸದಿಂದ ಸಚ್ಛಾಸ್ತ್ರಪಾರಾಯಣ ವೀಣಾವಾದನ, ಭಜನೆಗಳಿಂದ ಕಳೆದು ಅವರಿಗೆ ಭಕ್ತಿಯನ್ನು ಸಮರ್ಪಿಸೋಣ” ಎಂದು ಹೇಳಿದರು. ಮನೆಯವರೆಲ್ಲಾ ಸ್ನಾನಮಾಡಿದರು. ಆಚಾರೈರು ನಾಮಧಾರಣ ಮಾಡಿಕೊಂಡು ಗೀತಾ, ಮಂತ್ರ, ಸ್ತೋತ್ರಪಾರಾಯಣ ಮಾಡಹತ್ತಿದರು. ರಾತ್ರಿ ಉಪೋಷಣದಿಂದ ತಾಯಿ, ಪತ್ನಿಯರೊಡನೆ ಕುಳಿತು ವೀಣಾವಾದನ, ಅಪರೋಕ್ಷಜ್ಞಾನಿಗಳ ಪದಗಳ ಭಜನೆಮಾಡುತ್ತಾ ರಾತ್ರಿ ಕಳೆದು, ಗುರುಗಳಿಗೆ ಶ್ರದ್ಧಾಂಜಲಿಯನ್ನರ್ಪಿಸಿ ಮರುದಿನ, ಸ್ನಾನ, ಸಂಧ್ಯಾ, ಜಪ-ತಪ, ದೇವಪೂಜಾದಿಗಳನ್ನು ಮುಗಿಸಿ ಭೋಜನ ಮಾಡಿದರು. ದಿನಗಳು ಕಳೆದಂತೆ ಶ್ರೀವಿಜಯೀಂದ್ರಗುರುಗಳ ವಿಯೋಗ ದುಃಖ ಕಡಿಮೆಯಾಗಹತ್ತಿತು. ಹೀಗೆ ನಾಲೈದು ತಿಂಗಳುಗಳುರುಳಿದವು.
ಒಂದು ದಿನ ಆಚಾರರ ಮಾವ ವಾಸುದೇವಾಚಾರರ ಭಾವಮೈದುನ ಕೇಶವಾಚಾರರು ಬಂದು ದೀಪಾವಳಿಹಬ್ಬಕ್ಕೆ ಬರಬೇಕೆಂದು ಆಹ್ವಾನಿಸಿದರು. ತಾಯಿಯೊಡನೆ ವಿಚಾರಮಾಡಿ ವೇಂಕಟನಾಥರು ತಾಯಿಪತ್ನಿಯರೊಡನೆ ಪ್ರಯಾಣ ಬೆಳೆಸಿ ಸಂತೋಷದಿಂದ ಮಾವನ ಮನೆಗೆ ಹಬ್ಬದೂಟಕ್ಕೆ ಆಗಮಿಸಿದರು. ಅಷ್ಟುಹೊತ್ತಿಗೆ ರಾಮಚಂದ್ರಪುರದಿಂದ ಅಣ್ಣ, ಅತ್ತಿಗೆ, ವೆಂಕಟನಾರಾಯಣರೂ ಬಂದು ಸೇರಿದರು. ಬಹುದಿನದ ಮೇಲೆ ಭೇಟಿಯಾದ ಅಣ್ಣ-ತಮ್ಮಂದಿರು ಆನಂದಿಸಿದರು. ವಾಸುದೇವಾಚಾರ್ಯ ದಂಪತಿಗಳಿಗೆ ಅಳಿಯ-ಮಗಳನ್ನು ಕಂಡು ಅಪಾರ ಆನಂದವಾಯಿತು. ಐದು ದಿನಕಾಲ ವೈಭವದಿಂದ ದೀಪಾವಳಿಯನ್ನಾಚರಿಸಿ ಅಳಿಯನನ್ನು ಸಂತೋಷಪಡಿಸಿ ಕಳಿಸಿಕೊಟ್ಟರು. ಅಲ್ಲಿಂದ ಹೊರಟು ಅಣ್ಣನ ಮನೆಯಲ್ಲಿ ನಾದು ದಿನವಿದ್ದು ಅಪ್ಪಣೆ ಪಡೆದು ಕುಂಭಕೋಣಕ್ಕೆ ಬಂದರು.
ಮೊದಲು ಕಾವೇರಿಯಲ್ಲಿ ಮಿಂದು ಶ್ರೀವಿಜಯೀಂದ್ರರ ಬೃಂದಾವನ ಸನ್ನಿಧಿಗೆ ಬಂದರು. ಗುರುಪಾದರ ಬೃಂದಾವನದರ್ಶನ- ವಾದೊಡನೆ ವೇಂಕಟನಾಥರ ಕಣ್ಣುಗಳಿಂದ ಧಾರಾಕಾರವಾಗಿ ದುಃಖಾಶ್ರು ಹರಿಯಿತು. “ನಮ್ಮನ್ನು ಅನಾಥರನ್ನಾಗಿ ಮಾಡಿ ಹರಿಪದ ಸೇರಿದಿರಾ ಗುರುದೇವ ! ನಮಗಿನ್ನಾರು ಮಾರ್ಗದರ್ಶಕರು” ಎಂದು ದುಃಖಿಸಿದರು. ಸ್ವಲ್ಪ ದುಃಖಶಮನವಾದ ಮೇಲೆ ಬೃಂದಾವನ ಪ್ರದಕ್ಷಿಣೆ - ನಮಸ್ಕಾರ ಮಾಡಿ, ಅರ್ಚಕರಿಂದ ಪಾದೋದಕ - ಮಂತ್ರಾಕ್ಷತೆ ಸ್ವೀಕರಿಸಿ ಶ್ರೀಮಠಕ್ಕೆ ಬಂದರು. ಆ ಹೊತ್ತಿಗೆ ಮೊದಲ ಪಂಕ್ತಿಭೋಜನ ಮುಗಿದಿತ್ತು. ಆಚಾರರನ್ನು ಕಂಡ ನರಸಿಂಹಾಚಾರ್ಯರು ಸ್ವಾಗತಿಸಿ, ಅವರೆಲ್ಲರಿಗೂ ಭೋಜನಮಾಡಿಸಿ ಶ್ರೀಸುಧೀಂದ್ರತೀರ್ಥರ ಬಳಿಗೆ ಕರೆತಂದರು. ಆಚಾರ್ಯರನ್ನು ಕಂಡು ಗುರುಗಳು “ಬನ್ನಿ ಆಚಾರ್ಯ” ಎಂದು ಸ್ವಾಗತಿಸಿದರು. ಶ್ರೀಯವರಿಗೆ ನಮಸ್ಕರಿಸಿ ಕುಳಿತ ವೇಂಕಟನಾಥರು ಹಿರಿಯ ಶ್ರೀಪಾದಂಗಳವರು ದೇವರ ಯಾತ್ರೆ ಮಾಡಿದ ವಿಷಯ ತಿಳಿದು ತಮಗಾದ ದುಃಖವನ್ನು ತೋಡಿಕೊಂಡು ಕಣ್ಣೀರು ಸುರಿಸಿದರು. ಶ್ರೀಸುಧೀಂದ್ರರ ಕಣ್ಣಿನಲ್ಲಿಯೂ ನೀರು ಹರಿಯಿತು. ದುಃಖದಿಂದ ಅಂಥ ಮಹಾನುಭಾವರನ್ನು ಬಹುಕಾಲ ಸೇವಿಸುವ ಭಾಗ್ಯ ನಮಗಿಲ್ಲವಾಯಿತು. ದೈತಸಿದ್ಧಾಂತಸೂರ ಅಸ್ತಂಗತನಾದ, ಮಾದ್ದರೆಲ್ಲ, ಮುಖ್ಯವಾಗಿ ನಾವು ಅನಾಥರಾದೆವು. ದೈವೇಚ್ಛೆ, ಉಪಾಯವಿಲ್ಲ” ಎಂದು ಹೇಳಿ ಅನಂತರ “ಗುರುಪಾದರು ಯಾತ್ರೆಮಾಡುವ ಹಿಂದಿನದಿನವೂ ನಿಮ್ಮ ವಿಚಾರವಾಗಿಯೇ ಹೇಳುತ್ತಿದ್ದರು. ನೀವು ನಮ್ಮಲ್ಲಿ ಅಧ್ಯಯನಮಾಡಬೇಕೆಂದು ಅವರ ಆಶೆಯಾಗಿತ್ತು. ನಮ್ಮ ಸಂಸ್ಥಾನದ ಮಹಾಪಂಡಿತರನ್ನಾಗಿ ಮಾಡಿ, ಕಾವೇರಿಪಟ್ಟಣದಲ್ಲಿ ಮತ್ತೆ ನಿಮ್ಮಿಂದ ವಿದ್ಯಾಪೀಠ ಪ್ರಾರಂಭಮಾಡಿಸಿ ಅದರ ಹೊಣೆ ನಿಮಗೊಪ್ಪಿಸಬೇಕೆಂದು ಅಪ್ಪಣೆಮಾಡಿದರು” ಎಂದು ಹೇಳಿ ಒಂದು ಸಾವಿರ ವರಹದ ಥೈಲಿಯೊಂದನ್ನು ಆಚಾರ್ಯರಿಗೆ ನೀಡಿದರು. ವೇಂಕಟನಾಥರು “ಇದೇನು ಗುರುದೇವ?” ಎನಲು “ಇದು ಗುರುಗಳ ಆಜ್ಞೆ, ಮಹಾಪಂಡಿತರ ವಾರ್ಷಿಕ ಸಂಭಾವನೆ” ಎಂದರು. ಆಚಾರ್ಯರು ದಾಕ್ಷಿಣ್ಯದಿಂದ “ತಮ್ಮ ಅನುಗ್ರಹಬಲವೊಂದಿದ್ದರೆ ಸಾಕು” ಎನಲು “ಗುರುಪಾದರ ಆಜ್ಞೆ, ಅದನ್ನು ಶಿರಸಾ ಧರಿಸುವುದು ನಮ್ಮ ನಿಮ್ಮ ಕರ್ತವ್ಯ” ಎಂದು ಹೇಳಲು ಆಚಾರರು “ಗುರುಪ್ರಸಾದ” ಎಂದು ಸಂತೋಷದಿಂದ ಅದನ್ನು ಶಿರಸಾಧರಿಸಿದರು. ಆನಂತರ ಬಹುಹೊತ್ತು ಅನೇಕ ವಿಚಾರ ಮಾತನಾಡುತ್ತಿದ್ದು ಆಚಾರರನ್ನು ಕಾವೇರಿಪಟ್ಟಣಕ್ಕೆ ಕಳಿಸುವ ವ್ಯವಸ್ಥೆಮಾಡುವಂತೆ ಪಂಡಿತ ನರಸಿಂಹಾಚಾರರಿಗೆ ಹೇಳಿ ಫಲಮಂತ್ರಕ್ಷತಾ ನೀಡಿಕಳಿಸಿದರು.
ಮರುದಿನ ನರಸಿಂಹಾಚಾರೈರು ತಮ್ಮ ಮನೆಯಲ್ಲಿ ಆಚಾರ ಪರಿವಾರದವರಿಗೆ ಬೇಗ ಭೋಜನಮಾಡಿಸಿ ಶ್ರೀಮಠದ ಪೆಟ್ಟಿಗೆಗಾಡಿಯಲ್ಲಿ ಅವರನ್ನು ಕಾವೇರಿಪಟ್ಟಣಕ್ಕೆ ಹೋಗಲು ಬೀಳ್ಕೊಟ್ಟರು.