|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೪೧. ವೈವಾಹಿಕ ಜೀವನ

ಸರಸ್ವತಿಯು ಪತಿಯಮನೆಗೆ ಬಂದಮೇಲೆ ಅತ್ತೆ, ಅತ್ತಿಗೆ ಕಮಲಾದೇವಿ, ಭಾವ ಲಕ್ಷ್ಮೀನರಸಿಂಹಾಚಾರೈರು, ಇವರ ಉದಾರ ಸ್ವಭಾವ, ಉದಾತ್ತಭಾವನೆಗಳು, ಅವರು ತನ್ನಲ್ಲಿ ಮಾಡುವ ಪ್ರೀತಿ ವಿಶ್ವಾಸಗಳನ್ನು ಕಂಡು ವಿಸ್ಮಿತಳಾದಳು. ಅವಳ ಮನಸ್ಸಿನಲ್ಲಿ ಅವರಿಸಿದ್ದ ಭೀತಿ ತೊಲಗಿತು. ಇಷ್ಟೊಂದು ಪ್ರೀತಿಯಿಂದ ಕಾಣುವುದು ಅವಳಿಗೆ ಸಂತಸವನ್ನುಂಟುಮಾಡಿತು. ನಾಲ್ಕಾರು ದಿನಗಳಲ್ಲೇ ಅವಳು ಹತ್ತಾರು ವರ್ಷ ಅತ್ತೆಯ ಮನೆಯಲ್ಲಿ ಪಳಗಿದಂತಾದಳು. ಅತ್ತೆಯ ಪ್ರೇಮಲ ಸ್ವಭಾವ, ಔದಾರ್ಯ, ಸೊಸೆಯನ್ನು ಗೃಹಲಕ್ಷ್ಮಿಯಂತೆ ಕಾಣುವ ಉತ್ತಮ ಗುಣ, ಮಗಳಿಗಿಂತ ಹೆಚ್ಚಾಗಿ ಪ್ರೀತಿಸುವ ಸೌಜನ್ಯಾದಿಗಳನ್ನು ಕಂಡು ಸರಸ್ವತಿಯ ಮನಸ್ಸು ಪ್ರಫುಲ್ಲಿಸಿತು. ಗೋಪಮ್ಮನವರನ್ನು ಅವಳು ತಾಯಿಗಿಂತ ಅಧಿಕವಾಗಿ ಪ್ರೀತಿಸಿ ಪೂಜಿಸಹತ್ತಿದಳು. ವೆಂಕಟಾಂಬಾ, ಕಮಲಾದೇವಿಯರಂತೂ ಸರಸ್ವತಿಯ ಬಹಿಃಪ್ರಾಣರಂತಾದರು. ಅವರನ್ನು ಒಂದು ಘಳಿಗೆಯೂ ಬಿಟ್ಟಿರಲಾಗದಷ್ಟು ಅವರಲ್ಲಿ ಆತ್ಮೀಯತೆ ಬೆಳೆಯಿತು. ಅತ್ತೆಯನ್ನು “ಅಮ್ಮಾ” ಎಂದೇ ಅವಳು ಕರೆಯುತ್ತಿದ್ದಳು. ವೆಂಕಟಾಂಬೆಯನ್ನು ಅಂಬಾ” ಎಂದು ಕಮಲಾದೇವಿಯನ್ನು “ಅಕ್ಕ” ಎಂದೂ ಸಂಬೋಧಿಸುತ್ತಿದ್ದಳು. ಇದರಿಂದ ಅವರೆಲ್ಲರಿಗೂ ಸರಸ್ವತಿಯಲ್ಲಿ ವಿಶೇಷ ಮಮತೆ ಬೆಳೆಯಲು ಕಾರಣವಾಯಿತು. 

ಸರಸ್ವತಿಗೆ ಪತಿ ಸಾಕ್ಷಾತ್ ದೇವರೇ ಆಗಿದ್ದ, ವಿದ್ಯಾ, ವಿನಯ, ಶೀಲ, ಸ್ವಭಾವ, ರೂಪಲಾವಣ್ಯ, ಸರಳ ನಡತೆ, ಸದಾ ಮುಖದಲ್ಲಿ ಹೊರಸೂಸುವ ಮಂದಹಾಸ ಇವೆಲ್ಲವನ್ನೂ ಕಂಡು ಅವಳು ಇಂತಹ ಮಹನೀಯನ ಮಡದಿಯಾದ ತಾನು ಭಾಗ್ಯವಂತಳೆಂದು ಹಿಗ್ಗುತ್ತಿದ್ದಳು. ಪತಿಯ ಮನಸ್ಸಿಗೆ ಬೇಸರವಾಗದಂತೆ ವರ್ತಿಸುತ್ತಾ ಅನುರೂಪಳಾದ ಸತಿಯೆನಿಸಿಕೊಳ್ಳಬೇಕೆಂಬ ಹಂಬಲ ಅವಳಲ್ಲಿಸದಾ ಜಾಗೃತವಾಗಿರುತ್ತಿತ್ತು. ಸ್ವಾಭಾವಿಕವಾಗಿಯೇ ಉದಾರಚರಿತಳಾದ ಸರಸ್ವತಿಯು ತನ್ನ ನಡೆ, ನುಡಿ, ಶೀಲ, ಚಾರಿತ್ರ್ಯ, ಕೋಮಲ ಸ್ವಭಾವ, ಸಾತ್ವಿಕಾಚರಣೆ, ಗುರು-ಹಿರಿಯರು ಅತ್ತೆ, ಅತ್ತಿಗೆ, ನಾದಿನಿಯರಲ್ಲಿ ಗೌರವ-ಭಕ್ತಿ, ಪ್ರೀತಿ, ಪತಿಯಲ್ಲಿ ಅಪಾರ ಅನುರಾಗ, ಭಕ್ತಿ-ಗೌರವಗಳಿಂದ ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರಳಾದಳು. 

ವೇಂಕಟನಾಥ ಸರಸ್ವತಿಯರ ಸಂಸಾರ ಹಾಲು-ಸಕ್ಕರೆ ಬೆರೆಸಿದಂತೆ ಸುಮಧುರವಾಗಿತ್ತು. ವೇಂಕಟನಾಥರು ಪತ್ನಿಯನ್ನು ಅತಿಶಯವಾಗಿ ಪ್ರೀತಿಸುತ್ತಿದ್ದರು. ನಿಜವಾಗಿ ಸರಸ್ವತಿಯು ಬಹು ಭಾಗ್ಯಶಾಲಿನಿಯಾಗಿದ್ದಳು. ಒಬ್ಬ ಪತ್ನಿಯು ಅಪೇಕ್ಷಿಸುವುದೆಲ್ಲವೂ ಅವಳಿಗೆ ದೈವಾನುಗ್ರಹದಿಂದ ದೊರಕಿತ್ತು. ರೂಪ-ಗುಣ-ವಿದ್ಯಾ-ಪ್ರೇಮಲಸ್ವಭಾವದ ರಸಿಕನಾದ ರೂಪ-ಗುಣ-ವಿದ್ಯಾ- ಪ್ರೇಮಲಸ್ವಭಾವದ ರಸಿಕನಾದ ಪತಿಯನ್ನಲ್ಲವೇ ಪ್ರತಿಯೊಬ್ಬ ಮಡದಿ ಅಪೇಕ್ಷಿಸುವುದು ? ಇವೆಲ್ಲವೂ ವೇಂಕಟನಾಥರಲ್ಲಿ ಸಾಕಾರ ರೂಪತಾಳಿ ರಾಜಿಸುತ್ತಿತ್ತು. ಜೊತೆಗೆ ಪತಿ-ಪತ್ನಿಯರ ಪ್ರೇಮವರ್ಧನೆಗಾಗಿ ಮನೆಯವರೆಲ್ಲರೂ ಇಂಬು ನೀಡುತ್ತಿದ್ದರು. ಸರಸ್ವತಿ ಇದಕ್ಕಿಂತ ಹೆಚ್ಚೇನನ್ನು ಬಯಸಿಯಾಳು ? 

ವೇಂಕಟನಾಥರು ಸರಸ್ವತಿಯಂತಹ ಪತ್ನಿ ದೊರಕಿದ್ದಕ್ಕೆ ಹಿಗ್ಗುತ್ತಿದ್ದರು. ಸಂಗೀತ ಸಾಹಿತ್ಯ ಕಲೆಗಳಲ್ಲಿ ನಿಪುಣಳೂ, ಗುರುವಿಧೇಯಚರಿತಳೂ, ವಿನಯ, ದಯಾ, ದಾಕ್ಷಿಣ್ಯ-ಶೀಲಾದಿಗುಣಪೂರ್ಣಳೂ, ಪತಿಸೇವಾತತ್ಪರಳೂ, ಮೃದುಹೃದಯಳೂ, ಸಂಗೀತಜ್ಞಳೂ ಆದ ಮಡದಿ ಅವರಿಗೆ ದೊರಕಿದಳು. ಅಂತೆಯೇ ಆದರ್ಶ ದಂಪತಿಗಳಾದ ಅವರ ಸಂಸಾರ ಹಾಲು-ಜೇನು ಸೇರಿದಂತೆ ಮಾಧುರ್ಯಮಯವಾಗಿದ್ದಿತು. ನೆರೆಹೊರೆಯವರು ಈ ದಂಪತಿಗಳ ಸದ್ಗುಣಗಳನ್ನು ಮನಮುಟ್ಟಿ ಹೊಗಳುತ್ತಿದ್ದರು. ಸರಸ್ವತಿ-ವೇಂಕಟನಾಥರು ಸಂತೋಷದಿಂದ ಸಂಸಾರವನ್ನು ನಡೆಸಹತ್ತಿದರು. 

ವೇಂಕಟನಾಥ-ಸರಸ್ವತಿಯರ ಗೃಹಸ್ಥಜೀವನ ನಲಿವು-ಒಲವುಗಳಿಂದ ಆನಂದಪ್ರದವಾಗಿ ಸಾಗಿರುವುದನ್ನು ಕಂಡು ಪರಮಾನಂದಭರಿತರಾಗಿ, ತೃಪ್ತರಾದ, ಲಕ್ಷ್ಮೀನರಸಿಂಹಾಚಾರ್ಯ ದಂಪತಿಗಳು, ಗುರುರಾಜಾಚಾರ್ಯ ದಂಪತಿಗಳು ತಮ್ಮ ಪುತ್ರರೊಡನೆ, ಗೋಪಮ್ಮ-ವೇಂಕಟನಾಥ ದಂಪತಿಗಳಿಂದ ಬೀಳ್ಕೊಂಡು ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು.