ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೪೦. ಗೃಹಪ್ರವೇಶ
ಶ್ರೀವಿಜಯೀಂದ್ರ-ಸುಧೀಂದ್ರಗುರುಗಳಿಗೆ ವಿವಾಹಿತರಾಗಿ ಬಂದ ವೇಂಕಟನಾಥ ದಂಪತಿಗಳನ್ನು ಕಂಡು ಆನಂದವಾಯಿತು. ಅನುರೂಪ ದಂಪತಿಗಳಾದ ವೇಂಕಟನಾಥ - ಸರಸ್ವತಿಯರಿಗೆ ಗುರುಗಳು ಹೃತ್ತೂರ್ವಕವಾಗಿ ಆಶೀರ್ವದಿಸಿದರು. ನೂತನ ವಧೂವರರು ಉಭಯಗುರುಗಳಿಗೆ ಪಾದಪೂಜೆಮಾಡಿ, ಮಂತ್ರಮುದ್ರಾಧಾರಣ, ಫಲ-ಮಂತ್ರಾಕ್ಷತೆಯನ್ನು ಪಡೆದರು. ಅಂದು ಮಧ್ಯಾಹ್ನ ಗುರುಗಳು ಗುರುರಾಜಾಚಾರ, ವೆಂಕಟನಾಥರನ್ನು ಹತ್ತಿರಕೂಡಿಸಿಕೊಂಡು “ತಿಮ್ಮಣ್ಣಾಚಾರ್ಯರು ನಮ್ಮ ಪ್ರೀತಿಯ ಶಿಷ್ಯರಾಗಿದ್ದರು. ನೀವು ಹೀಗೆ ಅಭಿವೃದ್ಧಿಸಿದ್ದನ್ನು ಕಂಡಿದ್ದರೆ ಅವರೆಷ್ಟು ಹರ್ಷಿಸುತಿದ್ದರೋ ! ಆದರೆ ದೈವಸಂಕಲ್ಪ ಅದನ್ನು ಆಗಗೊಡಿಸಲಿಲ್ಲ. ಶ್ರೀಹರಿಚಿತ್ತ, ನಮ್ಮ ಶಿಷ್ಯರ ಪತ್ರರೂ ವಿದ್ಯಾ-ವಿನಯಸಂಪನ್ನರೂ ಆದ ನಿಮಗೆ ನಾವು ಬೇಕಾದ ಸಹಾಯಮಾಡಲು ಸಿದ್ಧರಾಗಿದ್ದೇವೆ. ನೀವು ನಮ್ಮಿಂದ ಏನು ಅಪೇಕ್ಷಿಸುವಿರಿ ?” ಎಂದರು.
ಗುರುರಾಜ : ಮಹಾಸ್ವಾಮಿ, ನಾವಿಂದು ಜೀವಿಸುತ್ತಿರುವುದೇ ತಮ್ಮ ಅನುಗ್ರಹದಿಂದ, ವಿದ್ಯಾದಾನಮಾಡಿ, ಜೀವನ ಸೌಕರ್ಯವನ್ನೇರ್ಪಡಿಸಿಕೊಟ್ಟು ಕಾಪಾಡುತ್ತಿದ್ದೀರಿ. ಇದೇ ಅನುಗ್ರಹ ಶಾಶ್ವತವಾಗಿರಲಿ ಇಷ್ಟೇ ನನ್ನ ಬೇಡಿಕೆ.
ವೆಂಕಟನಾಥ : (ವಿನಯದಿಂದ) ಗುರುವರ್ಯ, ಬಾಲಕನಾಗಿದ್ದ ನನ್ನನ್ನು ಶಿಷ್ಯಪುತ್ರನೆಂಬ ವಾತ್ಸಲ್ಯದಿಂದ ದೊಡ್ಡಪಂಡಿತರ ಗುಂಪಿಗೆ ಸೇರಿಸಿ ಸನ್ಮಾನಿಸಿದ್ದೀರಿ ! ಸರ್ವಜ್ಞಸನ್ನಿಧಿಯಲ್ಲಿ ನಿಂತು ಮಾತನಾಡುವ ಅರ್ಹತೆಯಿಲ್ಲದ ನನಗೆ ಪ್ರಶಸ್ತಿಬಹುಮಾನಗಳನ್ನಿತ್ತು ಗೌರವಿಸಿದ್ದೀರಿ. ಈಗ ವಿವಾಹಮಾಡಿಸಿ ನೆಮ್ಮದಿಯಿಂದ ಬಾಳುವಂತೆ ಮಾಡಿರುವ ತಮ್ಮಲ್ಲಿ ಹೆಚ್ಚೇನು ಬೇಡುವುದಿದೆ ? ಈಗ ತಮ್ಮ ಕಾರುಣ್ಯದಿಂದ ಪಂಡಿತಮಂಡಲಿಯಲ್ಲಿ ನನಗೆ ದೊರಕಿರುವ ಕೀರ್ತಿ-ಗೌರವಗಳನ್ನು ಉಳಿಸಿಕೊಂಡು ಸಿದ್ಧಾಂತ ಸೇವೆಯನ್ನು ಹೆಚ್ಚಾಗಿಮಾಡಲು ಶಕ್ತನಾಗುವಂತೆ ಆಶೀರ್ವದಿಸಬೇಕು ಇಷ್ಟೇ ನನ್ನ ಪ್ರಾರ್ಥನೆ.
ಹೀಗೆ ವಿಜ್ಞಾಪಿಸಿ ಅಣ್ಣ-ತಮ್ಮಂದಿರು ಉಭಯಗುರುಗಳಿಗೆ ನಮಸ್ಕರಿಸಿದರು. ಅವರ ಈ ವಿನಯಾದಿ ಸದ್ಗುಣಗಳಿಂದ
ಗುರುಗಳು ಮುದಿಸಿದರು.
ಶ್ರೀವಿಜಯೀಂದ್ರರು : ಗುರುಪೀಠದ ಪರವಾಗಿ ಹೇಳಿದ್ದಾಯಿತು. ಈಗ ತಿಮ್ಮಣ್ಣಾಚಾರರ ಸ್ಥಾನದಲ್ಲಿದ್ದು ಹಿರಿಯರಾಗಿ ನಿಮಗೆ ಒಂದು ಮಾತು ಹೇಳಬಯಸುತ್ತೇವೆ. ನೀವು ಆದರ್ಶ ಸಹೋದರರಾಗಿದ್ದೀರಿ. ನಿಮ್ಮ ತಾಯಿಯನ್ನು ಗೌರವ-ಭಕ್ತಿಯಿಂದ ನೋಡಿಕೊಂಡು ಅವರಿಗೆ ಸಂತೋಷವಾಗುವಂತೆ ಬಾಳಬೇಕು. ನಿಮ್ಮ ತಾತ-ಕನಕಾಚಲಾಚಾರ್ಯ, ತಂದೆ-ತಿಮ್ಮಣ್ಣಾಚಾರ್ಯರಿಗೆ ಶ್ರೀಮಠದಿಂದ ಕಾವೇರಿಪಟ್ಟಣ ಮತ್ತು ರಾಮಚಂದ್ರಪುರಾಗ್ರಹಾರಗಳಲ್ಲಿ ವೃತ್ತಿಗಳು, ಭೂಸ್ವಾಸ್ತಿ, ಮನೆಗಳನ್ನು ಅನುಗ್ರಹಿಸಿದ್ದೇವೆ. ಗುರುರಾಜಾಚಾರರೇ, ನೀವು ಮನೆಯ ಹಿರಿಯರಾಗಿರುವುದರಿಂದ ರಾಮಚಂದ್ರಪುರದಲ್ಲೂ, ವೇಂಕಟನಾಥರು ತಂದೆಗೆ ಪ್ರಿಯವಾಗಿದ್ದ ಕಾವೇರೀಪಟ್ಟಣದಲ್ಲೂ ವಾಸಿಸುತ್ತಾ, ಆಸ್ತಿಪಾಸ್ತಿಗಳನ್ನು ಅನುಭವಿಸುತ್ತಾ ಪಾಠಪ್ರವಚನಾಸಕ್ತರಾಗಿ ಬಾಳಬೇಕು. ಇದು ನಮ್ಮ ಆಶಯ.
ಗುರು-ವೆಂಕಟ : ಗುರುಪಾದರ ಆಜ್ಞೆಯಂತೆ ವರ್ತಿಸುತ್ತೇವೆ. ಆಗ ವಿಜಯೀಂದ್ರರು “ವೇಂಕಟನಾಥರು ಇನ್ನೊಂದು ಮುಖ್ಯವಿಚಾರ. ನಮ್ಮ ಮಹಾಸಂಸ್ಥಾನಕ್ಕೆ ನಿಮ್ಮ ಸೇವೆಯನ್ನು ನಾವು, ನಮ್ಮ ಪ್ರಿಯಶಿಷ್ಯರೂ ಅಪೇಕ್ಷಿಸುತ್ತೇವೆ.
ನೂತನವಾಗಿ ಗೃಹಸ್ಥಾಶ್ರಮದಲ್ಲಿ ಪದಾರ್ಪಣ ಮಾಡಿರುವ ನೀವು ಕೆಲಕಾಲ ಸಂಸಾರವನ್ನು ನಿರ್ವಹಿಸಿ ಅನಂತರ ಶ್ರೀಮಠದಲ್ಲಿದ್ದು ನಮ್ಮ ಪ್ರಿಯಶಿಷ್ಯರಲ್ಲಿ ಅಧ್ಯಯನಮಾಡಿ ಗ್ರಂಥರಚನೆ, ವಾದಿ ದಿಗ್ವಿಜಯ, ಪಾಠಪ್ರವಚನಗಳ ದ್ವಾರಾ ದೈತಸಿದ್ಧಾಂತದ ಹಿರಿಮೆ-ಗರಿಮೆಗಳನ್ನು ಎತ್ತಿ ಹಿಡಿದು ಜಗತ್ತಿನಲ್ಲಿ ಅಮಲಕೀರ್ತಿಯಿಂದ ವಿರಾಜಿಸಬೇಕೆಂದು ನಾನು ಆಶಿಸುತ್ತೇವೆ. ಇದೇ ನಾನು ನಿಮಗೆ ಗುರುಸ್ಥಾನದಲ್ಲಿದ್ದು ನೀಡುವ ಆದೇಶ !”
ಹೀಗೆ ಹೇಳಿ ಆನಂದಬಾಷ್ಪಸಿಕ್ತನಯನರಾಗಿ ವೇಂಕಟನಾಥರ ಶಿರದ ಮೇಲೆ ತಮ್ಮ ಅಮೃತಹಸ್ತವನ್ನಿಟ್ಟು ಆಶೀರ್ವದಿಸಿದರು. ಶ್ರೀಯವರ ಒಂದೊಂದು ಮಾತೂ ವೇಂಕಟನಾಥರನ್ನು ರೋಮಾಂಚನಗೊಳಿಸಿತು. ವೆಂಕಟನಾಥನು ಗದ್ದಗ ಕಂಠದಿಂದ “ಗುರುಪಾದರ ಆಜ್ಞೆಯಂತೆ ನಡೆಯುತ್ತೇನೆ” ಎಂದು ವಿಜ್ಞಾಪಿಸಿದರು. ತರುವಾಯ ಸರ್ವರೂ ಉಭಯಗುರುಗಳಿಂದ ಫಲಮಂತ್ರಾಕ್ಷತೆ ಪಡೆದು ಗೃಹಪ್ರವೇಶಮಹೋತ್ಸವಕ್ಕಾಗಿ ರಾಮಚಂದ್ರಪುರಾಗ್ರಹಾರಕ್ಕೆ ಪ್ರಯಾಣ ಬೆಳೆಸಿದರು.
ರಾಮಚಂದ್ರಪುರದಲ್ಲಿ ಹಿರಿಯರ ನಿರ್ದೇಶನದಲ್ಲಿ ನೂತನವಧುವಿನ ಗೃಹಪ್ರವೇಶ ಸಮಾರಂಭವನ್ನು ವಿಜೃಂಭಣೆಯಿಂದ ನೆರವೇರಿಸಿ ಸರಸ್ವತಿಯನ್ನು ಮನೆ ತುಂಬಿಸಿಕೊಂಡರು. ಬೀಗರು ವಧು-ವರರನ್ನು ಮಿತ್ರರ ಮನೆಯಲ್ಲಿ ಬಿಡಾರಮಾಡಿಸಿ ಗುರುರಾಜಾಚಾರರು ಸುಮುಹೂರ್ತದಲ್ಲಿ ವಾದ್ಯವೈಭವದೊಡನೆ ಮನೆಗೆ ಕರತಂದರು. ಮನೆಯ ಬಾಗಿಲಿನಲ್ಲಿ ವಧೂವರರಿಗೆ ಆರತಿ ಮಾಡಿದರು. ವೆಂಕಟಾಂಬೆಯ ಸೂಚನೆಯಂತೆ ಸರಸ್ವತಿಯು ಮನೆಬಾಗಿಲಿನ ಹೊಸ್ತಿಲ ಮೇಲೆ ಅಕ್ಕಿ-ಬೆಲ್ಲಗಳಿಟ್ಟಿದ್ದ ಪಾತ್ರೆಯನ್ನು ಬಲಗಾಲಿನಿಂದ ದೂಡಿ ಪತಿಗೃಹವನ್ನು ಪ್ರವೇಶಿಸಿದಳು. ಪುರೋಹಿತರು ವಧುವಿನಿಂದ ಲಕ್ಷ್ಮೀಪೂಜೆ ಮಾಡಿಸಿದ ಮೇಲೆ ಹಸೆಯಮಣೆಯ ಮೇಲೆ ವಧೂವರರು ಕುಳಿತು ಫಲಪೂಜೆ ಮಾಡಿ ಬ್ರಾಹ್ಮಣ ಸುವಾಸಿನಿಯರಿಗೆ ಗಂಧ ಪುಷ್ಪಫಲತಾಂಬೂಲ, ದಕ್ಷಿಣೆಗಳನ್ನು ನೀಡಿದರು. ಅನಂತರ ಸುಮಂಗಲೆಯರು ಆರತಿ ಮಾಡಿದರು. ವಿಬುಧರು ಆಶೀರ್ವದಿಸಿದರು.
ಅಂದು ಮಧ್ಯಾಹ್ನ ಬ್ರಾಹ್ಮಣ-ಸುವಾಸಿನಿಯರು, ಆತ್ಮೀಯರಿಗೆ ಮೃಷ್ಟಾನ್ನ ಭೋಜನವಾಯಿತು. ಸಂಜೆ, ಉರುಟಣಿ, ಆರತಕ್ಷತೆಗಳಾಗಿ ಗೃಹಪ್ರವೇಶ ಸಮಾರಂಭವು ಸಾಂಗವಾಗಿ ಮುಕ್ತಾಯವಾಯಿತು.
ಮರುದಿನ ವಾಸುದೇವಾಚಾರ್ಯ ದಂಪತಿಗಳು ಸರಸ್ವತಿಗೆ ಪತಿಗೃಹದಲ್ಲಿ ನಡೆದುಕೊಳ್ಳಬೇಕಾದ ರೀತಿ-ನೀತಿಗಳನ್ನು ಉಪದೇಶಿಸಿ ಎಲ್ಲರಿಂದ ಬೀಳ್ಕೊಂಡು ಸ್ವಗ್ರಾಮಕ್ಕೆ ತೆರಳಿದರು.
ಐದಾರು ದಿನಗಳಾದ ಮೇಲೆ ಲಕ್ಷ್ಮೀನರಸಿಂಹಾಚಾರ್ಯರು “ಚೈತ್ರಬಹುಳ ಪಂಚಮೀದಿನ ವೇಂಕಟನಾಥ-ಸರಸ್ವತಿಯರು ತಮ್ಮ ಮನೆಯಲ್ಲೆ ಸಂಸಾರ ಹೂಡಲು ಶುಭಮುಹೂರ್ತವಿದೆ. ಅಲ್ಲಿ ಮನೆಯ ಸುಣ್ಣ-ಬಣ್ಣ, ಸಂಸಾರಕ್ಕೆ ಅವಶ್ಯವಾದ ಎಲ್ಲ ಸಲಕರಣೆಗಳ ವ್ಯವಸ್ಥೆ ಮಾಡಲು ನಾನು ಹೊರಡುತ್ತೇನೆ. ನೀವು ಆ ಸಮಯಕ್ಕೆ ವಧೂವರರೊಡನೆ ಕಾವೇರಿಪಟ್ಟಣಕ್ಕೆ ಬರಬೇಕು” ಎಂದು ತಿಳಿಸಿ ಮರುದಿನ ಕಾವೇರಿಪಟ್ಟಣಕ್ಕೆ ಕುಮಾರ ನಾರಾಯಣನೊಡನೆ ಪ್ರಯಾಣ ಬೆಳೆಸಿದರು.
ವೇಂಕಟನಾಥರು ಮನೆಯವರೊಡನೆ ಕಾವೇರಿಪಟ್ಟಣಕ್ಕೆ ಪ್ರಯಾಣ ಬೆಳೆಸಿದರು. ಅವರು ಕುಳಿತ ಎರಡು ಪೆಟ್ಟಿಗೆ ಗಾಡಿಗಳು ಘಲು ಘಲು ಶಬ್ದಮಾಡುತ್ತಾ ಹೊರಟು ತುಂಡೀರಮಂಡಲಸೀಮೆ ತಲುಪಿದವು. ಅಂದಿನ ತುಂಡೀರಮಂಡಲವು ಫಲಪುಷ್ಪ, ಭತ್ತ, ವಿವಿಧ ಧಾನ್ಯಗಳ ಫಸಲುಗಳಿಂದಲೂ, ಕಾವೇರಿ ನದಿಯಿಂದಲೂ ಸಮೃದ್ಧವಾಗಿ ವಿರಾಜಿಸುತ್ತಿತ್ತು. ರಾಜಮಾರ್ಗದಲ್ಲಿ ಅನೇಕ ಗ್ರಾಮ, ಪಟ್ಟಣ, ಹಳ್ಳಿ, ಅಗ್ರಹಾರ, ಉಪವನ, ತೋಟ, ಸರೋವರಗಳಿಂದ ರಮಣೀಯವಾಗಿ ಶೋಭಿಸುತ್ತಿದ್ದವು. ಮಾರ್ಗದ ಇಕ್ಕೆಲದಲ್ಲಿ ಸೊಂಪಾಗಿ ಬೆಳೆದ ಸಾಲು ವೃಕ್ಷಗಳು, ಸಳಗಳನೆ ಹರಿಯುವ ಕಾವೇರಿಗಳಿಂದ ಮನೋಹರವಾಗಿದ್ದವು. ಅವೆಲ್ಲವನ್ನೂ ಅಕ್ಕ, ಅತ್ತಿಗೆ, ಪತ್ನಿಯರಿಗೆ ತೋರಿಸುತ್ತಾ ವೇಂಕಟನಾಥರು ಆ ದೃಶ್ಯವನ್ನು ವರ್ಣಿಸುತ್ತಿದ್ದರು. ಮಾರ್ಗಮಧ್ಯೆ ಉಪವನಗಳಲ್ಲಿ ಅಶೋಕ, ಕುರಬಕ, ಬಕುಲ, ತಿಲಕ, ನಮೇರು, ಭೂತ, ಪ್ರಿಯಾಲ, ಸಿಂಧುವಾರ, ಕರ್ಣಕಾರ, ಸಂಪಿಗೆ, ಕಿಂಶುಕ ಮೊದಲಾದ ವೃಕ್ಷಗಳು ಬೆಡಗಿನಿಂದ ಬೀಗುತ್ತಿದ್ದವು. ಆ ಉಪವನಗಳಲ್ಲಿ ಸುಂದರಿಯರಾದ ತರುಣಿಯರು ಸರಸ ಸಲ್ಲಾಪಗೈಯುತ್ತಾ ವಿವಿಧ ಕ್ರೀಡೆಗಳನ್ನಾಡುತ್ತಿದ್ದರು. ಆ ರೂಪಸಿಯರು ದೋಹಲ ಕ್ರೀಡಾಸಕ್ತರಾಗಿದ್ದರು.
ತರುಣರನ್ನು ಕೆಣಕಿ ಅವರ ಮನವನ್ನು ಚಾಂಚಲ್ಯಗೊಳಿಸಿ ಮೋಹಪರವಶಗೊಳಿಸುವ ಕಾಮಿನಿಯರ ಈ ವೃಕ್ಷದೋಹಲ ಕ್ರೀಡೆಯನ್ನು ನೋಡುತ್ತಾತರುಣವೃಂದವು ಮದನಶರಾಹತಿಗೆ ಸಿಕ್ಕು ಪರವಶರಾಗುತ್ತಿದುದನ್ನು, ವೇಂಕಟನಾಥರು ಆ ಲೀಲಾವಿಲಾಸದ ಬೆಡಗು-ಬಿನ್ನಾಣಗಳನ್ನು ಕಂಡರೂ ಕಾಣದವರಂತೆ ಉಪೇಂದ್ರ ವಜ್ರಾಯುಧದಂತೆ ದೃಢಮನಸ್ಕರಾಗಿ, ಕಿಂಚಿದ್ದಿಕಾರವನ್ನೂ ಹೊಂದದೆ ನಸುನಗುತ್ತಾ ಅವೆಲ್ಲ ದೃಶ್ಯವನ್ನು ಅಕ್ಕ, ಅತ್ತಿಗೆ, ಪತ್ನಿಯರಿಗೆ ತೋರಿಸುತ್ತಾ ಕಾವೇರಿ ಪಟ್ಟಣದ ಅಗ್ರಹಾರವನ್ನು ತಲುಪಿದರು.
ಲಕ್ಷ್ಮೀನರಸಿಂಹಾಚಾರರು ನೂತನ ವಧೂವರರ ಸಂಸಾರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿ ತಳಿರುತೋರಣಗಳಿಂದ ಮನೆಯನ್ನು ಸಿಂಗರಿಸಿ ಊರಿನ ಪ್ರಮುಖ ಪಂಡಿತ, ವೈದಿಕ, ಲೌಕಿಕ ಧಾರ್ಮಿಕರೊಡನೆ ವಧೂವರರನ್ನು ಸ್ವಾಗತಿಸಿ ವಾದ್ಯವೈಭವದಿಂದ ವಧುವನ್ನು ಮನೆತುಂಬಿಸಿಕೊಳ್ಳುವ ಶಾಸ್ತ್ರಮಾಡಿ, ಭೋಜನ, ಫಲತಾಂಬೂಲ ದಕ್ಷಿಣಾದಿಗಳಿಂದ ಸಕಲರನ್ನೂ ಆನಂದಗೊಳಿಸಿದರು. ಅಗ್ರಹಾರದ ಸುಜನರು ವಿದ್ಯಾ, ವಿನಯ, ರೂಪಲಾವಣ್ಯಗಳಿಂದ ಶೋಭಿಸುವ ವೆಂಕಟನಾಥ ಸರಸ್ವತಿಯರನ್ನು ಕಂಡು ಪರಮಾನಂದಭರಿತರಾದರು.