|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೩೮. ಮಧುರೆಯಿಂದ ಮನೆಗೆ

ದೀಪಾವಳಿ ಮುಗಿದು ಐದಾರು ದಿನಗಳಾದ ಮೇಲೆ ಕುಂಭಕೋಣಕ್ಕೆ ಹೊರಡುವ ಮುನ್ನ ವಿಜಯೀಂದ್ರರು ಲಕ್ಷ್ಮೀನರಸಿಂಹಾಚಾರರ ಮನೆಯವರೆಲ್ಲರನ್ನೂ ಕರೆಸಿಕೊಂಡರು. ಎಲ್ಲರೂ ಉಭಯಗುರುಗಳಿಗೆ ನಮಸ್ಕರಿಸಿ ಗುರುಗಳ ಅಪ್ಪಣೆ ಪಡೆದು ಕುಳಿತರು. ವಿಜಯೀಂದ್ರರು 'ಆಚಾರರೇ, ನಮ್ಮ ರಾಮಚಂದ್ರಾಚಾರರು ಒಂದು ಶುಭಕಾರಕ್ಕಾಗಿ ನಮ್ಮಲ್ಲಿಗೆ ಬಂದಿದ್ದಾರೆ. ಗುರುರಾಜಾಚಾರ, ನೀವು ವಾಸಿಸುವ ಅಗ್ರಹಾರಕ್ಕೆ ಸಮೀಪದಲ್ಲಿರುವ ಅಗ್ರಹಾರದಲ್ಲಿ ನಮ್ಮ ಪ್ರಿಯಶಿಷ್ಯರ ಬಂಧುಗಳೂ, ಆಪ್ತರೂ, ಷಾಷಿಕಮನೆತನದ ವಾಸುದೇವಾಚಾರರೆಂಬ ಜಹಗೀರದಾರರು ವಾಸಿಸುತ್ತಿದ್ದಾರೆ. ಅವರು ಶ್ರೀಮಂತರು, ಸದಾಚಾರಸಂಪನ್ನರು. ಅವರಿಗೆ “ಸರಸ್ವತಿ” ಎಂಬ ವಿವಾಹಯೋಗ್ಯ ಕನೈಯಿದ್ದಾಳೆ. ಸರಸ್ವತಿಯು ಸಂಸ ತ-ಕನ್ನಡ ಭಾಷೆ, ಸಾಹಿತ್ಯ, ಸಂಗೀತಗಳಲ್ಲಿ ಪರಿಣತಳಾಗುತ್ತಿದ್ದಾಳೆ. ಸದ್ಗುಣವತಿ, ರೂಪದಲ್ಲಿ ರತಿಯೇ ಆಗಿದ್ದಾಳೆ. ಅವಳಿಗೆ ಯೋಗ್ಯವರನನ್ನು ನಿಶ್ಚಯಿಸಿಕೊಡಬೇಕೆಂದು ಕೋರಿದ್ದಾರೆ. ರಾಮಚಂದ್ರಾಚಾರರು ವೇಂಕಟನಾಥನ ಹೆಸರನ್ನು ಪ್ರಸ್ತಾಪಿಸಿದರು. ನಮಗೆ ಪರಮಾನಂದವಾಯಿತು. ವೆಂಕಟನಾಥನೇ ಸರಸ್ವತಿಗೆ ಸರಿಯಾದ ವರನೆಂದು ನಾವು ತೀರ್ಮಾನಿಸಿಬಿಟ್ಟಿದ್ದೇವೆ. ಗುರುರಾಜಾಚಾರರೆ ನೀವು, ನಿಮ್ಮ ತಾಯಿ, ಭಾವ, ಅಕ್ಕ ಎಲ್ಲರೂ ಇದ್ದೀರಿ. ನಿಮ್ಮ ಅಭಿಪ್ರಾಯ ತಿಳಿಸಬೇಕು” ಎಂದು ಹೇಳಿದರು. 

ಗುರುರಾಜಾಚಾರರು ವಿನಯದಿಂದ “ಗುರುದೇವ, ವಾಸುದೇವಾಚಾರರಂಥ ಶ್ರೀಮಂತರೂ, ಗುರುಸಂಬಂಧಿಗಳೂ ಆದವರೊಡನೆ ಸಂಬಂಧ ಬೆಳೆಸುವ ಅರ್ಹತೆ ನಮಗಿದೆಯೇ ಎಂದು ಸಂಕೋಚಪಡುತ್ತಿದ್ದೇನೆ” ಎಂದು ವಿಜ್ಞಾಪಿಸಲು ಸುಧೀಂದ್ರರು “ಆಚಾರ, ನಮ್ಮ ವೇಂಕಟನಾಥನ ವಿದ್ಯಾಶ್ರೀಮಂತಿಕೆಯ ಮುಂದೆ ವಾಸುದೇವಾಚಾರರ ಶ್ರೀಮಂತಿಕೆಗೆ ಅತ್ಯಲ್ಪ ! ನೀವೆಲ್ಲ ಒಪ್ಪಿದರೆ ನಮಗೂ ಗುರುಪಾದರಿಗೂ ಆನಂದವಾಗುತ್ತದೆ” ಎಂದರು. 

ಆಗ ಗೋಪಮ್ಮಾದಿಗಳೊಡನೆ ಸ್ವಲ್ಪಕಾಲ ಮಾತನಾಡಿ ಲಕ್ಷ್ಮೀನರಸಿಂಹಾಚಾರರು “ಗುರುಪಾದರ ಅಪ್ಪಣೆಯಂತೆ ನಾವೆಲ್ಲ ನಡೆಯುತ್ತೇವೆ” ಎಂದರು. ವಿಜಯೀಂದ್ರರು 'ಸಂತೋಷ ಏನಪ್ಪಾ, ವೇಂಕಟನಾಥ ! ನಿನ್ನ ಅಭಿಪ್ರಾಯವೇ ಮುಖ್ಯ. ನೀನೇನು ಹೇಳುತ್ತೀಯೆ ?” ಎಂದು ನಗುತ್ತಾ ಕೇಳಿದರು. ವೇಂಕಟನಾಥ ಲಜ್ಜೆಯಿಂದ ಮುಖ ತಗ್ಗಿಸಿ, ವಿನಯಪೂರ್ವಕವಾಗಿ “ನನ್ನ ಸ್ವರೂಪೋದ್ಧಾರಕಗುರುಗಳಾದ ಉಭಯ ಶ್ರೀಪಾದರ ಆಜ್ಞೆನನಗೆ ಶಿರೋಧಾರ” ಎಂದು ವಿಜ್ಞಾಪಿಸಿದ. ಅದರಿಂದ ಸರ್ವರಿಗೂ ತೃಪ್ತಿ, ಸಂತೋಷಗಳುಂಟಾದವು. 

ಅದೇ ಸಮಯದಲ್ಲಿ ರಾಮಚಂದ್ರಾಚಾರ್ಯರ ತೊಡೆಯಮೇಲೆ ಕುಳಿತಿದ್ದ೪ ವರ್ಷದ ಬಾಲಕ ಎದ್ದು ವೇಂಕಟನಾಥನ ಹತ್ತಿರ ಬಂದು ಅವನ ಮುಖನೋಡಿ ನಗುತ್ತಾ ಕುಳಿತ. ಶ್ರೀವಿಜಯೀಂದ್ರರು “ವೇಂಕಟನಾಥ, ನೋಡಿದೆಯಾ ನಮ್ಮ ರಾಮಚಂದ್ರನ ಮಗ ಕೃಷ್ಣನನ್ನು, ನಿನ್ನ ವೀಣಾವಾದನವಾದಾಗ ನಿನ್ನ ಶಿಷ್ಯನಾಗುತ್ತೇನೆ ಎಂದನಂತೆ. ಈಗ ಮತ್ತೆ ನಿನ್ನ ಬಳಿ ಬಂದು ಕುಳಿತಿದ್ದಾನೆ ನೋಡು. ಇವನು ನಿನ್ನಲ್ಲೇ ವಿದ್ಯೆ ಕಲಿಯಬೇಕಂತೆ ! ಹೂಂ, ಶ್ರೀಮೂಲರಾಮನ ಚಿತ್ರಕ್ಕೆ ಬಂದರೆ ಯಾವುದು ತಾನೆ ಅಸಾಧ್ಯ ? ಈ ನಮ್ಮ ಕೃಷ್ಣ ಮುಂದೆ ನಿನ್ನ ಶಿಷ್ಯನಾಗಿ ಪಾಂಡಿತ್ಯ ಗಳಿಸಿ ಗ್ರಂಥಕಾರನೂ ಆಗಬಹುದು !” ಎಂದುದ್ದರಿಸಿದರು. ಆಗ ಶ್ರೀವಿಜಯೀಂದ್ರರು ಅದಾವ ಒಂದು ಶುಭಗಳಿಗೆಯಲ್ಲಿ ಭವಿಷ್ಯ ನುಡಿದರೋ ಅದು ಮುಂದೆ ಸತ್ಯವಾಗಿ ಪರಿಣಮಿಸಿತು. ವೇಂಕಟನಾಥರು ಮುಂದೆ ಶ್ರೀರಾಘವೇಂದ್ರಸ್ವಾಮಿಗಳಾದಾಗ ಬಾಲಕ ಕೃಷ್ಣನು ಅವರಲ್ಲಿ ಸಕಲಶಾಸ್ತ್ರಗಳನ್ನು ಅಧ್ಯಯನಮಾಡಿ ಅವರ ಅಪ್ಪಣೆಯಂತೆ “ಸ್ಮೃತಿಮುಕ್ತಾವಳಿ” ಎಂಬ ಧರ್ಮಶಾಸ್ತ್ರಗ್ರಂಥವನ್ನು ರಚಿಸಿದರು. 'ಕೃಷ್ಣಾಚಾರಸ್ಮೃತಿ' ಎಂದೇ ಅದು ಜಗದ್ವಿಖ್ಯಾತವಾಯಿತು. ಆ ಗ್ರಂಥವೇ ಶ್ರೀರಾಘವೇಂದ್ರಸ್ವಾಮಿಗಳಮಠದಲ್ಲಿ ಧರ್ಮಶಾಸ್ತ್ರಕ್ಕೆ ಪ್ರಮಾಣಗ್ರಂಥವಾಗಿದೆ.

ರಾಮಚಂದ್ರಾಚಾರ್ಯರು “ಗುರುಪಾದರು ಕೃಷ್ಣನ ಭವಿಷ್ಯವನ್ನೇ ಸೂಚಿಸುತ್ತಿದ್ದಾರೆ” ಎಂದಾಗ ಎಲ್ಲರೂ ನಸುನಕ್ಕರು. ವೇಂಕಟನಾಥನೂ ನಕ್ಕು “ಗುರುದೇವರ ಭವಿಷ್ಯ ನಿಜವಾಗಲಿ ಎಂದೇ ನಾನೂ ಪ್ರಾರ್ಥಿಸುತ್ತೇನೆ” ಎಂದರುಹಿದನು. 

ಆನಂತರ ಮದುವೆಯ ಮುಂದಿನ ಮಾತುಕಥೆಗಳನ್ನು ರಾಮಚಂದ್ರಾಚಾರ್ಯರೊಡನೆ ನಡೆಸಿ ಲಗ್ನ ನಿಶ್ಚಯಿಸಿ ತಮಗೆ ವಿಜ್ಞಾಪಿಸಬೇಕೆಂದು ಉಭಯ ಗುರುಗಳೂ ಹೇಳಿ, ಎಲ್ಲರಿಗೂ ಫಲಮಂತ್ರಾಕ್ಷತೆಗಳನ್ನು ಅನುಗ್ರಹಿಸಿ ಕಳುಹಿಸಿಕೊಟ್ಟರು. 

ವೆಂಕಟನಾಥಾಚಾರ್ಯರು ಮಧುರೆಯ ವಿದ್ಯಾಪೀಠದಲ್ಲಿ ಗುರುಕುಲವಾಸವು ಸಂಪೂರ್ಣವಾದ ಮೇಲೆ ಮಧುರಾಧಿಪತಿಗಳ ಅಧ್ಯಕ್ಷತೆಯಲ್ಲಿ ನೆರವೇರಿದ ಘಟಿಕೋತ್ಸವ ಸಮಾರಂಭದಲ್ಲಿ ನ್ಯಾಯ-ಮೀಮಾಂಸಾ-ವ್ಯಾಕರಣ-ಸಾಹಿತ್ಯ ಹಾಗೂ ವೇದ-ವೇದಾಂತಶಾಸ್ತ್ರಗಳಲ್ಲಿ ವಿದ್ವತ್ಪದವಿಗಳನ್ನೂ, ವಿಶೇಷ ಪ್ರತಿಭಾ ಸಂಭಾವನೆಗಳನ್ನೂ ಪಡೆದುದಲ್ಲದೆ, ಮಧುರಾಧಿಪತಿಗಳ ಪ್ರಾರ್ಥನೆಯಂತೆ ಆಸ್ಥಾನ ಮಹಾವಿದ್ವತ್ಪದವಿ ವಾರ್ಷಿಕ ಸಂಭಾವನಾದಿಗಳನ್ನು ಸ್ವೀಕರಿಸಿ, ಅಧ್ಯಾಪಕ ವರ್ಗ, ವಿದ್ವಜ್ಜನರು, ಸಹಾಧ್ಯಾಯಿಗಳ ಗೌರವಾದರಗಳಿಗೆ ಪಾತ್ರರಾದರು. 

ಅಂದು ಲಕ್ಷ್ಮೀನರಸಿಂಹಾಚಾರ್ಯ ದಂಪತಿಗಳಿಗಾದ ಆನಂದ ಅವರ್ಣನೀಯ. ವೆಂಕಟನಾಥರಂತಹ ಶಿಷ್ಯರಿಗೆ ಗುರುಗಳೆನಿಸಿದ ಭಾಗ್ಯ ತಮಗೆದೊರೆಯಿತೆಂಬ ಸಂತೋಷ ಗುರುರಾಜಾಚಾರ್ಯ - ಅತ್ತೆ ಗೋಪಮ್ಮನವರು ತಮಗೊಪ್ಪಿಸಿದ ಹೊಣೆಯನ್ನು ಯಶಸ್ವಿಯಾಗಿ ಪೂರೈಸಿದ ತೃಪ್ತಿ-ಸಮಾಧಾನಗಳಿಂದ ಮುದಿಸಿದರು. ನಾಲ್ಕಾರು ದಿನಗಳಾದ ಮೇಲೆ ಲಕ್ಷ್ಮೀನರಸಿಂಹಾಚಾರ್ಯ ದಂಪತಿಗಳು ವೇಂಕಟನಾಥ - ಪುತ್ರ ನಾರಾಯಣರೊಡನೆ ಮಧುರೆಯಿಂದ ಹೊರಟು ರಾಮಚಂದ್ರಪುರಾಗ್ರಹಾರದ ಮನೆಗೆ ಬಂದು ಸೇರಿದರು. ಮನೆಯವರೆಲ್ಲ ವೆಂಕಟನಾಥರನ್ನು ಪ್ರೇಮಾನಂದಭರದಿಂದ ಸ್ವಾಗತಿಸಿದರು. ಅತ್ತೆ, ಭಾವಮೈದುನರ ಕೋರಿಕೆಯಂತೆ ವೆಂಕಟನಾಥರ ವಿವಾಹವನ್ನು ಮುಗಿಸಿಕೊಂಡೇ ಹೋಗಲು ತೀರ್ಮಾನಿಸಿ ಲಗ್ನ ಸಂಬಂಧಿ ಕಾರಗಳಲ್ಲಿ ಹಿರಿಯರಾಗಿ ನಿಂತು ಆಚಾರ್ಯರು ಸಹಾಯಮಾಡುತ್ತಾ, ವಿವಾಹವ್ಯವಸ್ಥೆಯಲ್ಲಿ ಆಸಕ್ತರಾದರು.