ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೩೭. ಅಪೂರ್ವ ವೀಣಾವಾದನ !
ಮಧ್ಯಾಹ್ನ ನಾಲ್ಕು ಗಂಟೆಯ ಸಮಯ, “ಸರಸ್ವತೀಮಂದಿರ” ದಲ್ಲಿ ಅಸಾಧ್ಯ ಜನಸಂದಣೆ, ಉನ್ನತ ವೇದಿಕೆಯ ಮೇಲೆ ಉಭಯಗುರುಗಳು ಭದ್ರಾಸನದಲ್ಲಿ ಮಂಡಿಸಿದ್ದಾರೆ. ಕುಮಾರಕೃಷ್ಣಪ್ಪನಾಯಕ ಚಿತ್ರಾಸನದಲ್ಲಿ ಕುಳಿತಿದ್ದಾನೆ. ಮುಂಭಾಗದ ಸಂಗೀತವೇದಿಕೆಯ ಮೇಲೆ ಪಕ್ಕವಾದ್ಯಗಾರರೊಡನೆ ವೆಂಕಟನಾಥ ವೀಣೆ ಹಿಡಿದು ಕುಳಿತಿದ್ದಾನೆ. ಸುತ್ತ ಸಂಗೀತವಿದ್ಯಾವಿಶಾದರದರು, ಕಲೆಗಾರರು ಕುಳಿತಿದ್ದಾರೆ, ದರ್ಬಾರಿನ ಖ್ಯಾತ ವೇಣುಗಾನಕೋವಿದರಾದ ವೀರರಾಘವಾಚಾರ್ಯ, ಗೋಟುವಾದ್ಯದ ಮಹಾಶಿವಯ್ಯ, ವೀಣೆಯ ರಾಮನಾಥಶರ್ಮರಂಥ ಪ್ರತಿಭಾಶಾಲಿಗಳೇ ವೇಂಕಟನಾಥನ ಕಛೇರಿಗೆ ಪಕ್ಕವಾದ್ಯಗಾರರಾಗಿ ಕುಳಿತಿರುವುದೂ, ಈ ಕಛೇರಿಗಾಗಿಯೇ ದಕ್ಷಿಣಭಾರತದಲ್ಲೇ ವಿಖ್ಯಾತರಾದ ರಾಮನಾಡಿನ “ತಾಳಬ್ರಹ್ಮ” ಬಿರುದಾಂಕಿತ ಶಂಕರಾನಂದಪಿಳ್ಳೆಯವರು ಮೃದಂಗ ಬಾರಿಸಲು ವಿಶೇಷಾಹ್ವಾನದಿಂದ ಬಂದಿರುವುದು ಒಂದು ಅಪೂರ್ವ ಸಂದರ್ಭವೆಂದು ಜನರಾಡಿಕೊಳ್ಳುತ್ತಿದ್ದಾರೆ.
ತೇಜಸ್ವೀ ತರುಣ ವೇಂಕಟನಾಥ ಗುರುಗಳ ಅಪ್ಪಣೆ ಪಡೆದು ವೀಣಾವಾದನಕ್ಕೆ ಸಿದ್ಧನಾದ. ಒಮ್ಮೆ ವೀಣೆಯ ತಂತಿಗಳ ಮೇಲೆ ಮೆಲ್ಲನೆ ಬೆರಳಾಡಿಸಿದ. ಆ ಮಂಜುಳನಾದ ಸಭಿಕರನ್ನು ರೋಮಾಂಚನಗೊಳಿಸಿತು. ಮೊದಲು ಹಂಸಧ್ವನಿರಾಗದ ಆರೋಹಣಾವರೋಹಣ ಸ್ವರಗಳನ್ನು ನುಡಿಸಿ, ಶೂನ್ಯದಲ್ಲಿ ಬೆರಳುಗಳಿಂದ ತಾಳಸ್ವರೂಪವನ್ನು ತಿಳಿಸಿ, ಶ್ರೀಪುರಂದರದಾಸರ “ಗಜವದನ ನಿನ್ನಡಿಗಳ ನಮಿಸುವೆ 1 ತ್ರಿಜಗವಂದಿತನೇ ಗೌರೀತನಯ” ಎಂಬ ಕೃತಿಯಿಂದ ಕಛೇರಿಯನ್ನು ಪ್ರಾರಂಭಿಸಿದ. ಪಕ್ಕವಾದ್ಯಗಾರರೂ ತಮ್ಮ ಪಾಂಡಿತ್ಯಪ್ರದರ್ಶನಪೂರಕವಾಗಿ ಸಹಕರಿಸುತ್ತಿದ್ದಾರೆ, ಆದರೆ ಮೃದಂಗವಾದದವರು ಮಾತ್ರ “ಈತನೇನು ಮಹಾ” ಎಂಬ ನಿರ್ಲಕ್ಷದಿಂದ ಮೃದಂಗ ಬಾರಿಸಲಾರಂಭಿಸಿದರು.
ಆನಂತರ ವೇಂಕಟನಾಥ ಆರಭಿರಾಗವನ್ನು ಆಲಾಪನೆಗೆ ತೆಗೆದುಕೊಂಡು ವಿಸ್ತಾರವಾಗಿ ಬಾರಿಸಲಾರಂಭಿಸಿದನು. ಅವನ ಕರಾಂಗುಲಿಗಳು ವೀಣೆಯ ಮೇಲೆ ಮಿಂಚಿನಂತೆ ಸಂಚರಿಸುತ್ತಿದ್ದಂತೆ ಸಂಮೋಹಕ ರಾಗವು ವಿಸ್ತ್ರತವಾಗುತ್ತಾ ಮಧುರನಾದಲಹರಿಯು ಹೊರಹೊಮ್ಮಿ ಸಭಿಕರು ವಿಸ್ಮಯತಪಕ್ಷಪುಟಲೋಚನರಾಗಿ ಆನಂದದಲ್ಲಿ ತಲ್ಲೀನರಾಗುವಂತೆ ಮಾಡುತ್ತಿದೆ ! ಆ ವೀಣಾವಾದನ ಚತುರತೆಯಿಂದ ಎಲ್ಲರೂ ಇದೆಂತಹ ಅಪೂರ್ವವಾದನವೆಂದು ನಿಬ್ಬೆರಗಾಗುತ್ತಿದ್ದಾರೆ. ಆಲಾಪನೆ ಮುಗಿಯಿತು. ವೇಂಕಟನಾಥ ದಾಸರಾಯರ ಆಡಿದೆನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣಿಯೊಳು” ಎಂಬ ಕೀರ್ತನೆಯನ್ನು ಪ್ರಾರಂಭಿಸಿ ಒಮ್ಮೆ ವೀಣೆಯಲ್ಲಿ ನುಡಿಸುವುದು, ಮತ್ತೊಮ್ಮೆ ತನ್ನ ಸುಮಧುರ ಕಂಠದಿಂದ ಹಾಡುವುದು ಹೀಗೆ ಮುಂದುವರಿಸಿದನು. ಅವನನ್ನು ಅನುಸರಿಸಲಾಗದೆ ಪಕ್ಕವಾದ್ಯಗಾರರು ತಡಬಡಿಸುತ್ತಿದ್ದಾರೆ. ಇದ್ದಕ್ಕಿದ್ದಂತೆ ವೇಂಕಟನಾಥ ಅತ್ಯಪೂರ್ವವೆನಿಸುವ ಸ್ತರವಿನ್ಯಾಸಗಳಿಂದ ಮಿಂಚಿನ ಓಟದಲ್ಲಿ ವೀಣಾವಾದನ ಮಾಡಹತ್ತಿದ. ಅಹಂಕಾರದಿಂದ ನಿರ್ಲಕ್ಷ್ಯದಿಂದ ಮೃದಂಗ ನುಡಿಸುತ್ತಿದ್ದ ಪಿಳ್ಳೆಯವರೂ ವೇಂಕಟನಾಥನನ್ನು ಅನುಸರಿಸಲಾಗದೆ ತಪ್ಪಹತ್ತಿದರು. ಅವನ ಪಾಂಡಿತ್ಯಗರ್ವವಿಳಿಯಹತ್ತಿ ವೇಂಕಟನಾಥರ ಬಗ್ಗೆ ಗೌರವ, ಭಯಗಳುಂಟಾದವು. ಕೀರ್ತನೆ ಮುಗಿಯಿತು, ಸಭಿಕರು ಕರತಾಡನಮಾಡಿ ಉತ್ಸಾಹದಿಂದ ಸರಿಯಾಗಿ ಕುಳಿತರು.
ವೇಂಕಟನಾಥ ಶ್ರೀವಿಜಯೀಂದ್ರಗುರುಪಾದರಿಗೆ ಕಣ್ಣಿನಿಂದಲೇ ವಂದನೆಗಳನ್ನರ್ಪಿಸಿ ನಗೆಮೊಗದಿಂದ ಹಿಂದೋಳ ರಾಗಾಲಾಪನೆ ಪ್ರಾರಂಭಿಸಿದ. ವಿಜಯೀಂದ್ರರ ಮುಖ ಪ್ರಫುಲ್ಲಿಸಿತು. ಕಣ್ಣಂಚಿನಲ್ಲಿ ನೀರಾಡಿತು. ಮಿಂಚಿನ ಗೊಂಚಲುಗಳ ಕಾಂತಿಯನ್ನು ಹೊರಸೂಸುವ ಕಣ್ಣುಗಳ ಚಾಲನೆಯಿಂದ ತಮ್ಮ ಆನಂದವನ್ನು ವ್ಯಕ್ತಪಡಿಸಿದರು. ಅದನ್ನು ಕಂಡು ವೇಂಕಟನಾಥನ ದೇಹ ಪುಳಕಿಸಿತು. ಅದಾವುದೋ ಒಂದು ಅಪೂರ್ವಶಕ್ತಿ ಅವನ ನರನಾಡಿಗಳಲ್ಲಿ ಪ್ರವಹಿಸಿದಂತಾಯಿತು. ನೂತನೋತ್ಸಾಹದ ಅವನ ವಾದನದಿಂದ ಹಿಂದೋಳ ರಾಗವಾಹಿನಿ ವೀಣೆಯಿಂದ ಹೊರಹೊಮ್ಮಿ ಆ ಸುಮಧುರ ಮಂಜುಳನಾದತರಂಗಗಳು ಶ್ರಾವಕರ ಹೃದಯದಲ್ಲಿ ಹರುಷದ ಹೊನಲನ್ನು ಹರಿಸಹತ್ತಿತು. ವಿಸ್ತಾರವಾದ ಆಲಾಪನೆಯನ್ನಾಲಿಸಿ ಸಂಗೀತಗಾರರೂ ಹಿಂದೋಳರಾಗವನ್ನು ಈ ಮಟ್ಟಿಗೆ ವೀಣೆಯಲ್ಲಿ ನುಡಿಸಲು ಸಾಧ್ಯವೇ ಎಂದು ಬೆರಗಾದರು. ಮಧುರಾಧಿಪತಿ ಮಂತ್ರಮುಗ್ಧನಾಗಿ ಆನಂದಾಂಬುಧಿಯಲ್ಲಿ ಓಲಾಡಹತ್ತಿದನು.
ವೈವಿಧ್ಯಪೂರ್ಣವಾಗಿ ಸಾಗಿದೆ ವೀಣಾವಾದ ! ಇದ್ದಕ್ಕಿಂದ್ದಂತೆ ವೀಣೆಯಿಂದ ಅದುವರೆಗೂ ಯಾರೂ ಕೇಳರಿಯದ, ಅಪೂರ್ವವೂ, ವಿನೂತನವೂ ಆದ ನಾದತರಂಗ ಹೊರಹೊಮ್ಮಿತು. ಹಿಂದೆಂದೂ ಕೇಳದ ಗಮಕಗಳು, ಪಲಕುಗಳು, ಮೂರ್ಛನಗಳು, ತಾನವಿನ್ಯಾಸಗಳನ್ನು ಆಲಿಸಿ ಸಮಸ್ತ ಸಭಿಕರು ತಮ್ಮ ಕಿವಿಯನ್ನೇ ತಾವು ನಂಬದಂತಾಗಿದ್ದಾರೆ ! “ಅಬ್ಬಾ, ಇದೆಂತಹ ದೈವಿಕಗಾನ, ಅದೇನು ಸೊಗಸು, ಇದೆಂತಹ ಪಾಂಡಿತ್ಯ, ಇದಾವ ಬಗೆಯ ಸಂಗೀತ ? ಅದ್ಭುತ, ಅಸಾಧಾರಣ”, ಎಂದು ಸಭಿಕರು ಕರತಾಡನ ಮಾಡುತ್ತಿದ್ದಾರೆ !
ವೀಣಾವಾದನ ಮುಂದುವರೆಯಿತು. ಮೂರು ಕಾಲಗಳಲ್ಲಿ ಮಿಂಚಿನ ಸಂಚಾರ ಮಾಡುತ್ತಾ ವೇಂಕಟನಾಥನ ಕರಾಂಗುಲಿಗಳು ದೈವಿಕ ಸಂಗೀತಸುಧಾರಸದ ಹೊನಲನ್ನೇ ಹರಿಸಲಾರಂಭಿಸಿದವು. ಪಕ್ಕವಾದ್ಯಗಾರರು ನುಡಿಸುವುದನ್ನು ನಿಲ್ಲಿಸಿ ಕರಮುಗಿದು ಕುಳಿತುಬಿಟ್ಟರು. ಮೃದಂಗ ವಿದ್ವಾಂಸರು ವೇಂಕಟನಾಥನ ಅದ್ವಿತೀಯ ವಾದನಕ್ಕೆ ಹೊಂದಿಕೊಂಡು ಬಾರಿಸಲಾಗದೆ ಮೂಕವಿಸ್ಮಿತರಾದರು. ವೇಂಕಟನಾಥ ಶ್ರೀಮಧ್ವಾಚಾರರ ಶ್ರೀಹರಿಗೀತೆ(ದ್ವಾದಶಸ್ತೋತ್ರ)ಯ ಒಂದು ಭಾಗವನ್ನು ಎತ್ತಿಕೊಂಡು “ಆನಂದ ಮುಕುಂದ ಅರವಿಂದನಯನ | ಆನಂದತೀರ್ಥ ಪರಾನಂದವರದ ” ಎಂಬ ಗೀತೆಯನ್ನು ಅಪೂರ್ವವಾದ ಒಂದು ತಾಳದಲ್ಲಿ, ಹಾಡುತ್ತಾ ವೀಣೆ ನುಡಿಸಲಾರಂಭಿಸಿದನು. ವೇಂಕಟನಾಥನ ವೀಣಾವಾದನಕ್ಕೆ ಮೃದಂಗ ನುಡಿಸುವುದಿರಲಿ, ಅದಾವ ತಾಳವೆಂದೂ ತಿಳಿಯದೆ ತತ್ತರಿಸುತ್ತಿದ್ದಾರೆ “ತಾಳಬ್ರಹ್ಮ” ಬಿರುದಾಂಕಿತ ಪಿಳ್ಳೆಯವರು ! ಅದನ್ನು ಕಂಡು ಗರ್ವಿಷ್ಟನಾದ ಪಿಳ್ಳೆಗೆ ತಕ್ಕಶಾಸ್ತಿಯಾಯಿತೆಂದು ದರ್ಬಾರಿನ ಸಂಗೀತಗಾರರು-ವಾದ್ಯಗಾರರು ನಗಹತ್ತಿದರು. ಪಿಳ್ಳೆಯವರ ಮುಖ ವಿವರ್ಣವಾಯಿತು. ಅವರ ಕಷ್ಟವನ್ನರಿತ ವೇಂಕಟನಾಥ ವಾದನವನ್ನು ಸ್ವಲ್ಪಕಾಲ ನಿಲ್ಲಿಸಿ ತಾಳಕ್ರಮವನ್ನು ಬೆರಳುಗಳಿಂದ ಸೂಚಿಸಿ ವೀಣಾವಾದನ ತತ್ಪರನಾದ. ಇದರಿಂದ ಪಿಳ್ಳೆಯವರಿಗೆ ತುಂಬಾ ಅಗೌರವವಾಯಿತು. ಏನು ಮಾಡುತ್ತಾರೆ ಪಾಪ, ದಕ್ಷಿಣಭಾರತದಲ್ಲಿ ತನಗೆ ಸಮಾನರೇ ಇಲ್ಲವೆಂಬ ಅಹಂಕಾರದಿಂದ ಮತ್ತರಾಗಿದ್ದ ಅವರು ಧರೆಗಿಳಿದುಹೋದರು. 'ಈ ವೀಣಾವಾದಕ ಈ ಲೋಕದ ವ್ಯಕ್ತಿಯಲ್ಲ ! ಇಂತಹ ಮಹಾಕಲಾವಿದನನ್ನು ತರುಣನೆಂದು ಕಡೆಗಣಿಸಿ ತಪ್ಪು ಮಾಡಿದೆ' ಎಂದು ಯೋಚಿಸಿ ಪಶ್ಚಾತಪರಾದರು. ಕೂಡಲೇ ಮೇಲೆದ್ದು “ಮಹಾನುಭಾವ, ನೀವು ವಯಸ್ಸಿನಲ್ಲಿ ತರುಣನಾದರೂ ನೀವು ಸರಸ್ವತಿಯ ವರಪುತ್ರರಾದ ಗಂಧರ್ವಾಂಶ ಸಂಭೂತರು ! ಇಂತಹ ಪಾಂಡಿತ್ಯ - ಈ ನೂತನ ಸಂಗೀತ ಈವರೆಗೆ ನಾನು ಕೇಳಿದ್ದಿಲ್ಲ. ನನ್ನ ಅಪರಾಧವನ್ನು ಕ್ಷಮಿಸಿ” ಎಂದು ಯಾಚಿಸಿದರು. ಸಭೆಯು ಪ್ರಚಂಡ ಕರತಾಡನದಿಂದ ವೇಂಕಟನಾಥನ ವಿಜಯವನ್ನು ಕೊಂಡಾಡಿತು.
ವೇಂಟನಾಥ ಪಿಳ್ಳೆಯ ಕರಪಿಡಿದು “ಛೇ ಹಾಗನ್ನಬಾರದು, ನೀವು ಮಹಾಪಂಡಿತರು, ನಾನಿನ್ನೂ ವಿದ್ಯಾರ್ಥಿ” ಎಂದು ಅವರನ್ನು ಸಂತೈಸಿದರು. ವೆಂಕಟನಾಥನ ವಿನಯಪರಗುಣವನ್ನು, ಶ್ಲಾಘಿಸುವ ಔದಾರ್ಯವನ್ನು ಕಂಡು ಸರ್ವರೂ ಸಂತಸಗೊಂಡರು.
ಆನಂತರ ಆ ಕೃತಿಯನ್ನು ಮುಗಿಸಿ ವೇಂಕಟನಾಥ ಷಣ್ಮುಖಪ್ರಿಯರಾಗವನ್ನು ಆಲಾಪಿಸಿ ದಾಸರಾಯರ “ಧವಳಗಂಗೆಯ ಗಾಂಗಾಧರ ಮಹಾಲಿಂಗ | ಮಾಧವನ ತೋರಿಸಯ್ಯ ಗುರುಕುಲೋತ್ತುಂಗ” ಎಂಬ ಕೃತಿಯನ್ನು ಸುಂದರವಾಗಿ ನುಡಿಸಿ ಅನಂತರ ಉಪಮಾ, ರೂಪಕ, ಸಿದ್ಧವಸೂಕ್ಷಾ ಮುಂತಾದ ಅಲಂಕಾರಗಳು, ಲಲಿತಪದಕುಂಜರಂಜಿತವಾಗಿ ಅನೇಕಾರ್ಥಗರ್ಭಿತವಾದ ವಿಜಯೀಂದ್ರರು ರಚಿಸಿರುವ 'ವಿಜಯನಾಗರಿ' ರಾಗದ “ಚಂದಿರ, ರಾಮನರಾಣಿ ಸೀತೆಯ ಮುಖದಂಡಕೆ ಸೋತು ಲಜ್ಜೆಯಿಂದ ರಾತ್ರಿಚರನಾದ” ಎಂಬ ಅಪೂರ್ವ ಕೃತಿಯನ್ನು ನುಡಿಸಿ ಸಭಿಕರನ್ನು ಮೆಚ್ಚಿಸಿದ. ತರುವಾಯ ಸುಧೀಂದ್ರಗುರುಗಳು ವಿಜಯೀಂದ್ರರನ್ನು ನಾಯಕರನ್ನಾಗಿ ಮಾಡಿ ರಚಿಸಿರುವ 'ಅಲಂಕಾರಮಂಜರಿಯ' ಒಂದು ಪದ್ಯವನ್ನು ಆರಿಸಿಕೊಂಡು ರಾಗಮಾಲಿಕೆಯಲ್ಲಿ ಹಾಡುತ್ತಾ ವೀಣೆ ನುಡಿಸಹತ್ತಿದ.
“ಸ ಜಯತಿ ಯತಿಚಂದ್ರಃ ಸಾಹಿತಿಶಾಸ್ತ್ರಸಾಂದ್ರಃ | ಸತತಗಲಿತತಂದ್ರಃ ಸದೃಶಾಃ ಶ್ರೀಜಯೀಂದ್ರಃ || ಜಹಿ ಹಿ ನಿಜಜಯಾಶಾ ಜಾಗ್ರದಾಯಾಸಲೇಶಾತ್ |
ಜಡ ! ಯದಧಿನಿದೇಶಾಜ್ಞಾತಹರ್ಷಾ ದಿಗೀಶಾಃ ।”
ವಿಜಯೀಂದ್ರರ ಮಹಿಮಾತಿಶಯವರ್ಣನಪರವಾದ ಆ ಪದ್ಯವನ್ನಾಲಿಸಿ, ವೀಣೆಯಲ್ಲಿ ನುಡಿಸಿದ ವೇಂಕಟನಾಥನ ಅನಿತರಸಾಧಾರಣ ವೈದುಷ್ಯವನ್ನು ಕಂಡು ಸಭಿಕರು “ಸಾಧು ಸಾಧು” ಎಂದು ಕೊಂಡಾಡಿದರು. ಸುಧೀಂದ್ರರಿಗೆ ಪರಮಾನಂದವಾಯಿತು. ಆಗ ವೇದಿಕೆಯಲ್ಲಿ ಶ್ರೀಯವರ ಪಕ್ಕ ರಾಮಚಂದ್ರಾಚಾರರ ತೊಡೆಯ ಮೇಲೆ ಕುಳಿತಿದ್ದ ನಾಲ್ಕು ವರ್ಷದ ಬಾಲಕನೊಬ್ಬ ಮೆಲ್ಲನೆ ತಂದೆಯ ತೊಡೆಯಿಂದಿಳಿದು ವೇಂಕಟನಾಥ ಕುಳಿತು ವೀಣೆ ನುಡಿಸುತ್ತಿದ್ದ ವೇದಿಕೆಯ ಮುಂದೆ ಬಂದು ಕರಮುಗಿದು ಕುಳಿತು ಶ್ರದ್ಧೆಯಿಂದ ವೀಣಾವಾದನ ಕೇಳಲಾರಂಭಿಸಿದನು. ಆ ಬಾಲಕನ ತನ್ಮಯತೆಯನ್ನು ಕಂಡು ಸಭಿಕರು ಅಚ್ಚರಿಪಡುತ್ತಿರುವಾಗ ರಾಮಚಂದ್ರಾಚಾರರು ನಗುತ್ತಾ ಬಂದು ಅವನನ್ನು ಎತ್ತಿಕೊಂಡು ಹೋಗಿ ವೇದಿಕೆಯ ಮೇಲೆ ಕುಳಿತರು. ಅದನ್ನು ಕಂಡು ವಿಜಯೀಂದ್ರರು ಮುಗುಳುನಗೆ ಬೀರಿದರು. ವೇಂಕಟನಾಥ ಶ್ಲೋಕವನ್ನು ಮುಗಿಸಿ, ಹಿಂದೂಸ್ಥಾನಿಕ್ರಮದ 'ಬಹಾರ್' ರಾಗದಲ್ಲಿ ಒಂದು ಸ್ವರಚಿತ ಕೀರ್ತನೆಯನ್ನು ಹಾಡುತ್ತಾ ವೀಣೆ ನುಡಿಸಲಾರಂಭಿಸಿದ.
“ಜಯಜಯ ಶ್ರೀವಿಜಯೀಂದ್ರ ಯತೀಂದ್ರ |
ಜಯ ವಿದ್ಯಾಸಾಮ್ರಾಜ್ಯ ಮಹೇಂದ್ರ
ಜಯ ಶ್ರೀಮಧ್ವಮತಾಂಬುಧಿಚಂದ್ರ | ಜಯ ನರಪತಿನುತ ಸದ್ಗುಣಸಾಂದ್ರ
ಚತುರಧಿಕೋಜ್ವಲಶತಕೃತಿತರಣಾ | ಪ್ರತಿಮ ಚತುಃಷಷ್ಟಿ ಸುಕಲಾನಿಪುಣ || ವಿತತಮಹಿಮ ಪರವಾದಿಜಯಾರ್ಜಿತ |
ಶತಜಯಪತ್ರಾರ್ಪಿತ ಶ್ರೀರಮಣ.
ಶ್ರೀವಿಜಯೀಂದ್ರರ ಮಹಿಮಾನಿರೂಪಣಪರವಾದ ಆ ಕೃತಿಯನ್ನಾಲಿಸಿ ಪಂಡಿತ ಮಂಡಳಿ “ಸಾಧು ಸಾಧು” ಎಂದು ಪ್ರಶಂಸಿಸಿತು, ಆನಂತರ ವೇಂಕಟನಾಥ ಕಾಂಭೋಜಿರಾಗವನ್ನು ವಿಸ್ತಾರವಾಗಿ ಆಲಾಪನೆಗೆ ತೆಗೆದುಕೊಂಡ. ಅಲೆಅಲೆಯಾಗಿ ಹರಿದುಬರುತ್ತಿದೆ. ಮಂಜುಳಮನೋಹರರಾಗವಾಹಿನಿ !ಸಭಿಕರಿಗೆ ಗಂಧರ್ವಲೋಕದಲ್ಲಿ ವಿಹರಿಸುತ್ತಿರುವಂತೆ ಭಾಸವಾಗುತ್ತಿದೆ. ಕೂಡಲೇ ಅಶ್ರುತಪೂರ್ವವಾದ ತಾನಲಹರಿ ಪ್ರಾರಂಭವಾಯಿತು. ಕಾಂಭೋಜಿ ರಾಗದೇವತೆಯೇ ಧರೆಗಿಳಿದು ಬಂದಂತಾದ ಭಾವ ಸಮಾಧಿಯಲ್ಲಿ ಸಭಿಕರು ಮೈಮರೆತಿರುವಾಗಲೇ ವೆಂಕಟನಾಥ ಪಲ್ಲವಿಯನ್ನಾರಂಭಿಸಿದ.
“ಸಾರುವೇ ನಿನ್ನದು ಪದವೇ | ಶ್ರೀಸುಧೀಂದ್ರ ಪರಂತಪನೇ ' ಹೃದಯಾಂತರಾಳದಿಂದ ಭಕ್ತಿಭಾಗೀರಥಿಯು ಪುಟ್ಟಿದೆದ್ದು ವೇಂಕಟನಾಥ ಹೃದಯಭೂಮಿಯನ್ನು ಪಾವನಗೊಳಿಸುತ್ತಿರುವಾಗ ವಿನಯ, ಭಕ್ತಿ, ಗೌರವಗಳನ್ನು ಒಂದೊಂದು ಅಕ್ಷರಗಳಿಂದಲೂ ಪ್ರಕಟಗೊಳಿಸುತ್ತಾ ಸುಂದರವಾಗಿ ಹಾಡುತ್ತಾ, ವೀಣೆ ನುಡಿಸುತ್ತಿರುವುದನ್ನು ಕಂಡು ವಿಜಯೀಂದ್ರರು ಸುಧೀಂದ್ರರತ್ತ ಸೂಚ್ಯವಾಗಿ ಮಂದಹಾಸಬೀರಿದರು. ಸುಧೀಂದ್ರರ ಹೃದಯ ತುಂಬಿ ಬಂದು ಆನಂದಾಶ್ರುಹರಿಯಿತು. ಮಹಾರಾಜ, ಕುಮಾರಕೃಷ್ಣಪ್ಪನಾಯಕನಂತೂ ಇಹಲೋಕವ್ಯಾಪಾರವನ್ನೇ ಮರೆತು ಆ ಸುರಚಿರಗಾನಸುಧಾಬಿಯಲ್ಲಿ ಓಲಾಡುತ್ತಾ ಕರಮುಗಿದು ಕುಳಿತುಬಿಟ್ಟಿದ್ದಾನೆ. ಮೂರು ಕಾಲದ, ವಿಚಿತ್ರ ನಡೆಯ, ಅದ್ಭುತ ಸ್ವರಗಳ ನಾದವೈಭವವನ್ನು ಕೇಳಿ ಸಮಸ್ತ ಸಭಿಕರೂ ತಮ್ಮ ಜನ್ಮ ಸಾರ್ಥಕವಾಯಿತೆಂದು ಹರ್ಷಿಸಿ ಕರತಾಡನದಿಂದ ಆಚಾರರನ್ನು ಪ್ರಶಂಸಿಸುತ್ತಿರುವಂತೆಯೇ ಪಲ್ಲವಿಯ ಮುಕ್ತಾಯವಾಯಿತು. ಆಗಲೇ ಮೂರು ಘಂಟೆಗಳ ಕಾಲ ಕಛೇರಿ ನಡೆದಿತ್ತು. ವೇಂಕಟನಾಥನು ಮಂಗಳ ಹಾಡಿದನು -
“ಮಂಗಳಂ ಮೂಲರಾಮಾಯ ಲೋಕನಾಥಾಯ ವಿಷ್ಣುವೇ |
ಮಂಗಳಂ ಶ್ರೀರಮಾದೇವೈ ಮಂಗಳಂ ವಾಯುಸೂನವೇ ||”
ಮಧ್ಯಮಾವತಿಯಲ್ಲಿ ಮಂಗಳಹಾಡಿ, ಶ್ರೀರಾಗಛಾಯೆಯೊಡನೆ ಸಮಾಪ್ತಿಗೊಳಿಸುತ್ತಾ ವೀಣಾವಾದನವನ್ನು ಮುಗಿಸಿ ಉಭಯಗುರುಗಳಿಗೆ ನಮಸ್ಕರಿಸಿ ವೆಂಕಟನಾಥ ಕೃತಾರ್ಥನಾದನು.
ಆಗ ದರ್ಬಾರಿನ ಶ್ರೇಷ್ಠ ಸಂಗೀತಗಾರರು, ವಾದ್ಯಗಾರರು ವೇಂಕಟನಾಥನ ವೀಣಾವಾದನ ಕೌಶಲವನ್ನು ಮನಮುಟ್ಟಿ ಕೊಂಡಾಡಿದರು. ಮಹಾರಾಜರು ವೇಂಕಟನಾಥನ ಅಪೂರ್ವಪಾಂಡಿತ್ಯ-ಪ್ರತಿಭೆಗಳನ್ನು ವರ್ಣಿಸಿ, “ಇಂಥಾ ವೀಣಾವಾದನವನ್ನು ಕೇಳಿರಲಿಲ್ಲ. ಇವರು ಹೊರಗೆಲ್ಲೂ ಕಛೇರಿಮಾಡುವುದಿಲ್ಲ. ಅವರ ವಿದ್ಯೆ, ದೇವರಿಗೆ ಗುರುಗಳಿಗೆ ಮಾತ್ರ ಮೀಸಲು, ಮುಂತಾಗಿ ಹೇಳಿ, ಮೀನಾಕ್ಷಿ ಗುಡಿಯಲ್ಲಾದ ತಮ್ಮ ಅನುಭವವನ್ನು ಹೇಳಿ, ಪೂಜ್ಯ ಗುರುಪಾದರ ಕಾರುಣ್ಯದಿಂದ ಈ ಮಹಾವಿದ್ವಾಂಸರ ವೀಣಾವಾದನ ಚಾತುರವನ್ನು ಆಲಿಸಿ ಆನಂದಿಸಲು ನಮಗೆ ಅವಕಾಶವಾಯಿತು. ಇಂದು ದಕ್ಷಿಣಭಾರತದಲ್ಲಿ ಈ ಕಲಾವಿದರನ್ನು ಸರಿಗಟ್ಟುವ ಪಂಡಿತರಾರೂ ಇಲ್ಲ. ಇಂಥವರನ್ನು ಕಿರಿಯ ಗುರುಗಳು “ಸಕಲಕಲಾವಲ್ಲಭನೆಂಬ ಪ್ರಶಸ್ತಿಯಿಂದ ಗೌರವಿಸಿದರು. ಗುರುಮನೆಯಾಯಿತು. ಈಗ ಅರಮನೆಯಿಂದ ಇವರನ್ನು ಸನ್ಮಾನಿಸಲು ನಿಶ್ಚಯಿಸಿದ್ದೇವೆ. ಪಂಡಿತ ವೇಂಕಟನಾಥರಿಗೆ ನಾವು 'ವೈಣಿಕಚಕ್ರವರ್ತಿ” ಎಂಬ ಮಹಾಪ್ರಶಸ್ತಿಯನ್ನು ಗುರುಗಳ ಹಸ್ತದಿಂದ ಕೊಡಿಸಿ ಗೌರವಿಸುತ್ತೇವೆ” ಎಂದರು. ಆನಂದನಿರ್ಭರರಾದ ಸಭಾಜನರು ಕರತಾಡನ ಮಾಡಿ ಹರ್ಷಧ್ವನಿಗೈದರು. ಕುಮಾರಕೃಷ್ಣಪ್ಪನಾಯಕ ಸುವರ್ಣಸಿಂಹಲಲಾಟ ಕಡಗ, ಮುಕ್ತಾಮಾಲೆ, ಪೀತಾಂಬರಗಳು, ಸುವರ್ಣನಾಣ್ಯಗಳನ್ನೂ ಶ್ರೀವಿಜಯೀಂದ್ರ-ಸುಧೀಂದ್ರ ಗುರುಗಳಿಂದ ಕೊಡಿಸಿ ನಮಸ್ಕರಿಸಿದ. ನಂತರ ಎಲ್ಲ ಪಕ್ಕವಾದ್ಯಗಾರರಿಗೂ ಸೂಕ್ತ ರೀತಿಯಲ್ಲಿ ಸನ್ಮಾನಮಾಡಿಸಿದನು. ಉಭಯ ಶ್ರೀಯವರು ವೇಂಕಟನಾಥನನ್ನು ಮನಃಪೂರ್ವಕವಾಗಿ ಆಶೀರ್ವದಿಸಿದರು.
ಸಮಾರಂಭ ಮುಗಿದ ಮೇಲೆ ವಿದ್ವತ್ಸಭಾ ಸಮಾರೋಪಸಮಾರಂಭಾಂಗವಾಗಿ ಉಭಯಗುರುಗಳ ಉಪದೇಶವಾದ ಮೇಲೆ ಮಹಾರಾಜನು ವಿದ್ವತ್ಸಭೆಯಲ್ಲಿ ಪಾಲ್ಗೊಂಡ ಸರ್ವರಿಗೂ ಉದಾರವಾಗಿ ಸಂಭಾವನೆಯನ್ನು ಕೊಡಿಸಿ, ಸರ್ವರನ್ನೂ ಸಂತೋಷಗೊಳಿಸಿದನು. ವಂದನಾರ್ಪಣೆಯೊಡನೆ ದೀಪಾವಳಿಯ ಮಹಾಭಿಷೇಕ ವಿದ್ವತ್ಸಭಾಸಮಾರಂಭವು ಮುಕ್ತಾಯವಾಯಿತು.
ಲಕ್ಷ್ಮೀನರಸಿಂಹಾಚಾರರಿಗೆ ಶ್ರೀಯವರು ಹೇಳಿದಂತೆ ಚಿರಂಜೀವ ವೆಂಕಟನಾರಾಯಣನ ಉಪನಯನಮಹೋತ್ಸವವನ್ನು ಶ್ರೀಮಠದ ಖರ್ಚಿನಿಂದಲೇ ವೈಭವದಿಂದನೆರವೇರಿಸಿಕೊಟ್ಟು ವಟುವಿಗೆ ಗುರೂಪದೇಶ ಮಾಡಿ ಅನುಗ್ರಹಿಸಿದರು. ಗುರುರಾಜಾಚಾರ್ಯರು ಗುರುಗಳಿಗೆ ಕೃತಜ್ಞತೆ ಸಮರ್ಪಿಸಿ ಅಪ್ಪಣೆ ಪಡೆದು ತೆರಳಿದರು.