ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೩೬. ಸಕಲಕಲಾವಲ್ಲಭ!
ಇಂದು ಬಲಿಪಾಡ್ಯಮಿ, ದೀಪಾವಳೀ ಬೆಳಗಿನಝಾವ ದೇವರ ದೀಪಾರಾಧನೆ, ತುಳಸೀಪೂಜೆ, ಗೋಪೂಜೆಗಳಾದ ಮೇಲೆ ಉಭಯ ಶ್ರೀಗಳವರು ವಿದ್ಯಾಪೀಠದಲ್ಲಿ ಕುಳಿತ ಮೇಲೆ ಅವರ ಅಪ್ಪಣೆಯಂತೆ ಲಕ್ಷ್ಮೀನರಸಿಂಹಾಚಾರೈರು ಇಂದು ದೈತಸಿದ್ಧಾಂತದಲ್ಲಿ ವಿದ್ಯಾರ್ಥಿಗಳ ಪರೀಕ್ಷೆ, ವಾಕ್ಯಾರ್ಥಗಳು ನಡೆಯುತ್ತವೆ. ಯಾರು ಬೇಕಾದರೂ ಭಾಗವಹಿಸಬಹುದು” ಎಂದರು.
ವೇಂಕಟನಾಥ ಉಭಯ ಶ್ರೀಗಳವರಿಗೆ ನಮಸ್ಕರಿಸಿ ವೇದಿಕೆಯನ್ನೇರಿ ಕುಳಿತ, ಕಳದೆರಡು ದಿನಗಳಿಂದ ಸಭಿಕರನ್ನಾಕರ್ಷಿಸಿದ್ದ ವೇಂಕಟನಾಥ 'ತತ್ತೋದ್ಯೋತ' ಗ್ರಂಥದ ಒಂದು ಘಟ್ಟವನ್ನು ಆರಿಸಿಕೊಂಡು ವಿಷಯವಿಚಾರವನ್ನಾರಂಭಿಸಿದ. ಸರಸ್ವತಿಯ ನಾಟ್ಯರಂಗದಂತಿರುವ ವೆಂಕಟನಾಥನ ವದನಾರವಿಂದದಿಂದ ದೇವಗಂಗೆಯು ಉತ್ತುಂಗ ತರಂಗದಂತೆ ಹೊರಹೊಮ್ಮಿದಳು, ಶ್ರೀಮದಾನಂದತೀರ್ಥಭಾರತಿ ! ಕಂಚಿನಧ್ವನಿಯನ್ನನುಕರಿಸುವ ಕಂಠದಿಂದ ಹರಿದು ಬರುತ್ತಿರುವ ಆ ಪವಿತ್ರ ವಾಗರಿಯಲ್ಲಿ ಗಂಗೆಯ ಪಾವಿತ್ರ್ಯ, ತುಂಗೆಯ ಮಧುರತೆ, ಸಿದ್ದಾಂತವಿದಗ್ಧತೆ, ಸುಧೆಯ ಮಾಧುರ್ಯ ಪ್ರಪಂಚವಂಚಕಮಾಯ್ಸಳ ವಂಚನೆಯಪಂಚತ್ವದಿಸುವ ಧೀಮಂತಿಕೆ, ಪ್ರತಿಭೆಯ ಶ್ರೀಮಂತಿಕೆ. ಕೋಗಿಲೆಯ ಮಂಜುಳಸ್ವರವನ್ನು ಲಜ್ಜಿಸುವ ಮಂಜುಳದಿಂಚರ, ಅಂಚೆಯ ನಡೆ, ಮಿಂಚಿನ ಓಟ, ನವಿಲಿನ ನರ್ತನದ ಚಾಂಚಲ್ಯ, ಶ್ರುತಿ-ಸ್ಮೃತಿ-ಸೂತ್ರ-ಪುರಾಣ-ಇತಿಹಾಸಶಾಸ್ತ್ರಾದಿಗಳ ಕೋಲಾಹಲ, ಸಮೀರಸಮಯಸಂವರ್ಧಕ ಉಪದೇಶ, ಪ್ರಾಮಾಣ್ಯ ನಿರೂಪಣೆಯ ಪ್ರಾಮಾಣಿಕ ಪ್ರಯತ್ನ - ಇವೆಲ್ಲವೂ ಹಾಸುಹೊಕ್ಕಾಗಿ ಮೇಳವಿಸಿ ಶ್ರಾವಕರನ್ನು ಅದಾವುದೋ ಒಂದು ಭವ್ಯ-ದಿವ್ಯ ಸ್ವರ್ಗಸಾಮ್ರಾಜ್ಯದತ್ತ ಕರೆದೊದು ಅಮಂದಾನಂದದಿಂದ ಮೈಮರೆಸುತ್ತಿದ್ದರೆ, ಅವನೊಡನೆ ವಾದಮಾಡಬಯಸಿದ ವಿಬುಧರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಿದೆ !
ಆಗ ತಂಬಕಶಾಸ್ತ್ರಿಗಳೆಂಬ ಪಂಡಿತರೊಬ್ಬರು ವೇಂಕಟನಾಥನ ವಾದವನ್ನು ಖಂಡಿಸಲು ಪ್ರಾರಂಭಿಸಿದರು. ವೇಂಕಟನಾಥ ನಸುನಕ್ಕು ಪಂಡಿತರೇ, ನೀವು ಶ್ರಮ ವಹಿಸಬೇಕಾಗಿಲ್ಲ. ನಿಮ್ಮ ಮತವನ್ನು ಬೆಂಬಲಿಸುವ ಪ್ರಮಾಣಾನುಸಾರವಾಗಿ ನೀವು ಮಾಡಬಹುದಾದ ಎಲ್ಲ ಆಶಂಕೆ, ಪೂರ್ವಪಕ್ಷಗಳನ್ನೂ ನಾನೇ ಅನುವಾದ ಮಾಡುವವನಿದ್ದೆ. ಅಷ್ಟರಲ್ಲಿ ಅವಸರಪಟ್ಟಿರಿ ಪರವಾಗಿಲ್ಲ, ನನ್ನ ವಾದ, ನಿಗಮನಗಳು ಮುಗಿದ ಮೇಲೆ ಏನಾದರೂ ಹೇಳಲು ಸಾಧ್ಯವಿದ್ದರೆ ಆಗ ನೀವು ಮಾತನಾಡಬಹುದು. ಈಗ ನನ್ನ ಅನುವಾದವನ್ನು ಲಾಲಿಸಿರಿ !” ಎಂದು ಹೇಳಿ, ಶ್ರೀವಿಜಯೀಂದ್ರಗುರುಗಳು “ತಪ್ಪೋದ್ಯೋತ'ದ ಮೇಲೆ ರಚಿಸಿರುವ “ಗೂಢಭಾವಪ್ರಕಾಶಿಕಾ” ಎಂಬ ಟಿಪ್ಪಣಿಯ ಆಧಾರದಿಂದ, ಅದರಲ್ಲಿ ಗುರುಪಾದರು ಆಶಂಕಿಸಿರುವ ಎಲ್ಲ ಪೂರ್ವಪಕ್ಷಗಳನ್ನೂ ಅನುವಾದಮಾಡಿ, ಆನಂತರ ಶ್ರೀಯವರು ದೈತಸಿದ್ಧಾಂತವನ್ನು ಸಮರ್ಥಿಸಿ ಮಾಡಿರುವ ನಿಗಮನದಂತೆ ಸರಸುಂದರವಚೋವಿನ್ಯಾಸದಿಂದ ಸಿದ್ಧಾಂತವನ್ನು ಸ್ಥಾಪಿಸಿ, ಇದರ ಮೇಲೆ ಏನಾದರೂ ಹೇಳಬಯಸುವಿರಾ ಪಂಡಿತರೇ? ಎಂದು ತ್ರಂಬಕಶಾಸ್ತ್ರಿಗಳನ್ನು ಪ್ರಶ್ನಿಸಿದನು. ಅವರು ವೇಂಕಟನಾಥನ ವಾಗ್ವಜ್ರಾಘಾತದಿಂದ ಛಿನ್ನ-ಭಿನ್ನವಾದ, ತಾವು ಮಾಡಬಯಸಿದ್ದ ಪೂರ್ವಪಕ್ಷದ ಗತಿಯನ್ನು ಕಂಡು ಹತಾಶರಾಗಿ, ಏನೂ ಹೇಳಲು ತೋಚದೆ ನಿರುತ್ತರರಾಗಿ ತಲೆ ತಗ್ಗಿಸಿ ಕುಳಿತರು.
ತಮ್ಮ ಕೃತಿಯನ್ನು ಇಷ್ಟು ಸುಂದರವಾಗಿ ಪಾಂಡಿತ್ಯಪೂರ್ಣವಾಗಿ ಅನುವಾದಿಸಿ ಪ್ರತಿವಾದಿಯ ಬಾಯಿಕಟ್ಟಿದ ವೇಂಕಟನಾಥನ ವಾದಕೌಶಲ್ಯದಿಂದ ಪರಮಾನಂದಭರಿತರಾದ ಶ್ರೀವಿಜಯೀಂದ್ರರು “ಸಾಧು, ಸಾಧು” ಎಂದರು. ಶ್ರೀಸುಧೀಂದ್ರರು ಮೈಮರೆತು “ಅದ್ಭುತ, ಅದ್ಭುತ” ಎಂದು ಶ್ಲಾಘಿಸಿದರು, ಸಭಾಸದರು ಹರ್ಷಧ್ವನಿಗೈದರು. ಎರಡು ಗಂಟೆಗಳ ಕಾಲ ವೇಂಕಟನಾಥನು ಮಾಡಿದ ಅನುವಾದವನ್ನಾಲಿಸಿ ಜ್ಞಾನಾರ್ಥಿಗಳಾದ ಶೋತೃಗಳು ಇಂದಿನ ಶಾಸ್ತ್ರಾರ್ಥ ವಿಚಾರಶ್ರವಣದಿಂದ ತಮ್ಮ ಜೀವನಸಾರ್ಥಕವಾಯಿತೆಂದು ಹಿಗ್ಗಿದರು.
ಶ್ರೀವಿಜಯೀಂದ್ರರು ವೇಂಕಟನಾಥನನ್ನು ಕರೆದು ತಾವು ಹೊದ್ದಿದ್ದ ಶಾಲನ್ನು ಹೊದ್ದಿಸಿ “ಕುಮಾರ ! ಸರ್ವಜ್ಞಸಿದ್ಧಾಂತ ಸ್ಥಾಪಕೋಸಿ ! ಮಹಾನಾನಂದಂಜಾತಃ” - “ಕುಮಾರ, ನೀನು ಶ್ರೀಮಧ್ವಾಚಾರ್ಯರ ಸಿದ್ಧಾಂತಸ್ಥಾಪಕನಾಗಿದ್ದೀಯೆ ತುಂಬಾ ಸಂತೋಷವಾಯಿತು” ಎಂದಾಶೀರ್ವದಿಸಿದರು.
ಶ್ರೀಸುಧೀಂದ್ರರು ನಮಸ್ಕರಿಸಿದ ವೆಂಕಟನಾಥನ ಬೆನ್ನು ಚಪ್ಪರಿಸಿ "ಧರ್ಮಾಭಿಮಾನಿಗಳೇ, ಇಂದು ನಮಗಾದ ಆನಂದವನ್ನು ವಾಕ್ಯಗಳಿಂದ ಹೇಳಲು ಸಾಧ್ಯವಿಲ್ಲ. ಸಕಲ ಶಾಸ್ತ್ರಗಳಲ್ಲಿ ಅಸದೃಶ ವೈದುಷ್ಯವನ್ನು ಪ್ರದರ್ಶಿಸಿರುವ ಈ ಪಂಡಿತಪುಂಡರೀಕನನ್ನು ಗೌರವಿಸುವುದು ಸರ್ವಜ್ಞರ ವಿದ್ಯಾಸಾಮ್ರಾಜ್ಯಾಧೀಶರಾದ ನಮ್ಮ ಕರ್ತವ್ಯ ! ಅಂತೆಯೇ ಈ ಪ್ರತಿಭಾಶಾಲಿ ವಿದ್ವಾಂಸನನ್ನು ಸನ್ಮಾನಿಸಬಯಸಿದ್ದೇವೆ” – ಎಂದು ಹೇಳಿ ತಮ್ಮ ಕೊರಳಲ್ಲಿದ್ದ ಸುವರ್ಣ-ಮಣಿಖಚಿತ ತುಳಸೀಮಾಲೆಯನ್ನು ತೆಗೆದು ವೇಂಕಟನಾಥನ ಕೊರಳಿಗೆ ಹಾಕಿ “ಇಂದಿನಿಂದ ಈ ವೇಂಕಟನಾಥನು “ಸಕಲಕಲಾವಲ್ಲಭ” ನೆಂಬ ಪ್ರಶಸ್ತಿಯಿಂದ ಲೋಕವಿಖ್ಯಾತನಾಗಲಿ ಎಂದು ಆಶೀರ್ವದಿಸುತ್ತೇವೆ” ಎಂದಪ್ಪಣೆ ಮಾಡಿದರು. ಸಭಾಸದರು ತಮ್ಮ ಹರ್ಷವನ್ನು ಸೂಚಿಸಿದರು. ಲಕ್ಷ್ಮೀನರಸಿಂಹಾಚಾರ-ಗುರುರಾಜಾಚಾರರು ಹಾಗೂ ಪ್ರೇಕ್ಷಕರ ಗುಂಪಿನಲ್ಲಿ ಕುಳಿತಿದ್ದ ಗೋಪಮ್ಮ, ವೆಂಕಟಾಂಬಾ, ಕಮಲಾದೇವಿಯರಿಗಾದ ಆನಂದ ಅವರ್ಣನೀಯ.
ಆಗ ವೇಂಕಟನಾಥನು ವಿನಯದಿಂದ “ಗುರುದೇವ, ನಾನಿನ್ನೂ ಬಾಲಕ ವಿದ್ಯಾರ್ಥಿ. ಇಂತಹ ಭಾರ ಹೊರುವ ಯೋಗ್ಯತೆ ನನಗಿಲ್ಲ” ಎಂದು ಹೇಳಲು ಸುಧೀಂದ್ರರು ನಗುತ್ತಾ “ನಿಜ, ನೀನು ಬಾಲಕನೇ, ವಿದ್ಯಾರ್ಥಿಯೇ. ಬಾಲನೆಂದರೇನು ? “ಅಧೀತನ್ಯಾಯಮೀಮಾಂಸಾ-ವ್ಯಾಕರಣ-ಸಾಹಿತ್ಯಾದಿಶಾಸ್ತ್ರ-ಬಾಲಃ” ಅಲ್ಲವೇ !? ನೀನು ವಿದ್ಯಾರ್ಥಿ ನಿಜ. ನಾವೆಲ್ಲರೂ ವಿದ್ಯಾರ್ಥಿಗಳೇ ! ಶ್ರೀಮದಾಚಾರರೇ ಬಾದರಾಯಣರಲ್ಲಿ ವ್ಯಾಸಂಗ ಮಾಡುತ್ತಿರುವರೆಂದ ಮೇಲೆ ನಮ್ಮ ಪಾಡೇನು ? ನೀನು ಬಾಲ ಮತ್ತು ವಿದ್ಯಾರ್ಥಿಯೆಂದೇ ಈ ಮರ್ಯಾದೆಗೆ ಅರ್ಹನಾಗಿರುವೆ. ಈಗ ತಾನೆ ನಮ್ಮ ಗುರುಪಾದರು ಏನು ಹೇಳಿದರು ? “ಕುಮಾರ ! ಸರ್ವಜ್ಞಸಿದ್ಧಾಂತ ಸ್ಥಾಪಕೋಸಿ” ಎಂದಲ್ಲವೇ ? ಅವರ ಬಾಯಿಯಿಂದ ಹೊರಟ ಆ ವಾಕ್ಯವು ಭವಿಷ್ಯಕಧನವೆಂದೇ ನಾವು ಭಾವಿಸಿದ್ದೇವೆ. ನೀನೂ ಚಿರಂಜೀವಿಯಾಗುವೆ !ದೈತಸಿದ್ಧಾಂತವು ಆಚುದ್ರಾರ್ಕಸ್ಥಾಯಿಯಾಗಿ ನಿಷ್ಕಂಟಕವಾಗಿ ಬೆಳಗುವಂತೆ ಮಾಡಿ ಅದರ ಫಲವನ್ನು ಸರ್ವರೂ ಆಸ್ವಾದಿಸಿ ಸುಖಿಸುವಂತೆ ಮಾಡುತ್ತೀಯೆ ! ಇದು ಸತ್ಯ !” ಎಂದು ಆನಂದದಿಂದ ಆಶೀರ್ವದಿಸಿದರು.
ಇದೆಲ್ಲವನ್ನೂ ಗಮನಿಸುತ್ತಾ ಕುಳಿತಿದ್ದ ಮಧುರಾಧಿಪತಿ ವಿಜಯೀಂದ್ರರ ಬಳಿಗೆ ಬಂದು “ಮಹಾಸ್ವಾಮಿ, ಕಿರಿಯ ಗುರುವರರು ಈ ವೇಂಕಟನಾಥರನ್ನು “ಸಕಲಕಲಾವಲ್ಲಭರೆಂದು ಗೌರವಿಸಿದ್ದು ಸೂಕ್ತವಾಗಿದೆ. ಇವರು ಎಲ್ಲಾ ಶಾಸ್ತ್ರಗಳಲ್ಲಿ ಪಾರಂಗತರು ಮಾತ್ರವಲ್ಲ; ವೀಣಾವಾದನದಲ್ಲಿಯೂ ಅದ್ವಿತೀಯರಾಗಿದ್ದಾರೆ” ಎಂದಾಗ ಶ್ರೀಯವರು ನಕ್ಕು ಅದು ಅವರ ವಂಶಕ್ಕೆ ಒಲಿದು ಬಂದ ವಿದ್ಯೆ ! ನಮ್ಮ ತಿಮ್ಮಣ್ಣಾಚಾರ್ಯರ ಮಗನಲ್ಲವೇ ಈತ !” ಎಂದಾಗ ಕುಮಾರಕೃಷ್ಣಪ್ಪನಾಯಕನು “ಗುರುವರ್ಯ, ವೇಂಕಟನಾಥರು ತಿಮ್ಮಣ್ಣಾಚಾರರ ಪುತ್ರರೆಂದು ಹೇಳಿದಿರಿ. ಹಾಗಾದರೆ.....ಹಿಂದೆ ತಂಜಾಪುರದ ಗೌರವರಕ್ಷಣೆಗಾಗಿ ಉತ್ತರಾದಿವೈಣಿರೊಡನೆ ಸ್ಪರ್ಧಿಸಿ ಜಯಗಳಿಸಿದರಲ್ಲ. ಆ ತಿಮ್ಮಣ್ಣಾಚಾರರ ಮಕ್ಕಳೇನು ?” ಎಂದು ಪ್ರಶ್ನಿಸಿದ. ಶ್ರೀಯವರು ಅಹುದೆಂದು ಶಿರಃಕಂಪನಮಾಡಿದರು.
ಆಗ ವೇಂಕಟನಾಥ ಮನದಲ್ಲಿ ಅಪ್ಪನಿಗೆ ವೀಣೆಯಲ್ಲಿ “ಗಾಂಧಾರಗ್ರಾಮ” ಸಂಗೀತಕ್ರಮವನ್ನು ಕಲಿಸಿದ ಇವರ ಮುಂದೆ ಒಂದು ಸಲವಾದರೂ ನಾನು ಅದನ್ನು ಬಾರಿಸಿ ತೋರಿಸಿ ಕೃತಾರ್ಥನಾಗಬೇಕೆಂದು ಅಪ್ಪ ಹೇಳಿದ್ದರು ! ಆ ಭಾಗ್ಯ ನನಗೆ ದೊರೆತರೆ.........” ಎಂದು ಯೋಚಿಸುತ್ತಿದ್ದನು. ಮಧುರಾಧಿಪತಿಯೂ “ಈ ಗಂಧರ್ವಾಂಶರಾದ ವೆಂಕಟನಾಥರ ವೀಣೆಯನ್ನು ಮತ್ತೊಮ್ಮೆ ಕೇಳುವ ಭಾಗ್ಯ ನನಗೆ ದೊರಕೀತೇ........” ಎಂದು ಯೋಚಿಸುತ್ತಿದ್ದನು.
ಇವರಿಬ್ಬರ ಮನದಿಂಗಿತವನ್ನರಿತೋ ಎಂದು ವಿಜಯೀಂದ್ರರು “ತಥಾಸ್ತು ! ರಾರ್ಜ, ವೆಂಕಟನಾಥ | ನಿಮ್ಮಿಬ್ಬರ ಆಶೆಯೂ ಪೂರ್ಣವಾಗುವುದು” ಎಂದು ಹೇಳಲು ಇಬ್ಬರೂ ತಮ್ಮ ಮನಸ್ಸಿನಲ್ಲಿ ಯೋಚಿಸುತ್ತಿದ್ದುದನ್ನು ಅರಿತು ಗುರುಗಳು ಹೇಳಿಬಿಟ್ಟರಲ್ಲಾ ”
” ಎಂದು ಆಶ್ಚರಚಕಿತರಾದರು. ಮಹಾರಾಜ - ವೇಂಕಟನಾಥರು ಸಂತೋಷದಿಂದ “ಮಹಾಭಾಗ್ಯ ! ಅನುಗೃಹೀತರಾದೆವು” ಎಂದರು. ವಿಜಯೀಂದ್ರರು “ವೇಂಕಟನಾಥ, ನಾಳೆ ಸಭಾಪರಿಸಮಾಪ್ತಿ ಸಮಾರಂಭವಿದೆ. ಆ ಕಾಲದಲ್ಲಿ ನಿನ್ನ ವೀಣಾವಾದನದಿಂದ ನಮ್ಮನ್ನು ಆನಂದಗೊಳಿಸು !” ಎಂದಾಜ್ಞಾಪಿಸಿ ಶಿಷ್ಯರೊಡನೆ ಶ್ರೀಮೂಲರಾಮರ ಮಹಾಭಿಷೇಕಕ್ಕಾಗಿ ದಯಮಾಡಿಸಿದರು.
ಶ್ರೀಮೂಲರಾಮದೇವರ ಮಹಾಭಿಷೇಕ ವೈಭವದಿಂದ ಮುಗಿದು ಶ್ರೀಪಾದರು ಸರ್ವರಿಗೂ ದೇವರ ವಿಶ್ವರೂಪದರ್ಶನ ಮಾಡಿಸಿದರು.
ಆನಂತರ, ತೀರ್ಥಪ್ರಸಾದ-ಭೂರಿಭೋಜನಾದಿಗಳು ನೆರವೇರಿದವು. ರಾತ್ರಿ ದೀಪಾರಾಧನೆ, ವಿದ್ವತ್ಸಭಾ, ಹರಿಕಥೆ, ಗುರುಗಳ ಆಶೀರ್ವಾದ ಭಾಷಣಗಳಾಗಿ ಮಹಾಭಿಷೇಕವು ವೈಭವದಿಂದ ಸಾಂಗವಾಯಿತು.