|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೩೫. ದೀಪಾವಳಿ ಮಹಾಭಿಷೇಕ - ವಿದ್ವತ್ಸಭೆ

ಮಧುರೆಯ ದೊರೆ ಕುಮಾರಕೃಷ್ಣಪ್ಪ ಶ್ರೀವಿಜಯೀಂದ್ರಗುರುಗಳ ಪರಮಭಕ್ತ. ಅವನ ಬಹುದಿನದ ಪ್ರಾರ್ಥನೆಯಂತೆ ಶ್ರೀಯವರು ಪ್ರಿಯಶಿಷ್ಯರೊಡನೆ ಬಂದು ದೀಪಾವಳಿ - ಶ್ರೀಮೂಲರಾಮರ ಮಹಾಭಿಷೇಕ ಮತ್ತು ವಿದ್ವತ್ಸಭೆಯನ್ನು ನೆರವೇರಿಸುತ್ತಿದ್ದಾರೆ. ವೈಭವದಿಂದ ಸಮಾರಂಭ ಪ್ರಾರಂಭವಾಗಿದೆ. ನರಕಚತುರ್ದಶೀ ದಿವಸ ಬೆಳಗಿನಝಾವ ಪೂಜೆ, ತುಳಸೀಪಾಜೆ-ಗೋಪಾಜೆ, ಎಣ್ಣೆಶಾಸ್ತ್ರ, ಫಲಮಂತ್ರಾಕ್ಷತಾ ಪ್ರದಾನಾದಿಗಳು ಜರುಗಿ, ಸಾವಿರಾರು ಜನ ಭಕ್ತರು, ಸಮಾರಂಭದಲ್ಲಿ ಭಾಗವಹಿಸಿ ಪುನೀತರಾದರು. ಅಂದಿನಿಂದ ಪ್ರತಿದಿನವೂ ಶ್ರೀಮೂಲರಾಮರ ಪೂಜಾ, ತೀರ್ಥ-ಪ್ರಸಾದ, ಭೂರಿಭೋಜನಗಳಾಗಹತ್ತಿತು. 

ಶ್ರೀವಿಜಯೀಂದ್ರರ ಅಧ್ಯಕ್ಷತೆಯಲ್ಲಿ ವಿದ್ವತ್ಸಭೆಯೂ ಪ್ರಾರಂಭವಾಯಿತು. ಶ್ರೀಸುಧೀಂದ್ರ ಗುರುಗಳು ಪ್ರಾಸ್ತವಿಕ ಭಾಷಣಮಾಡಿ ದೈತಸಿದ್ಧಾಂತಸ್ಥಾಪನೆಯೇ ಈ ವಿದ್ವತ್ಸಭೆಯಗುರಿ ಎಂದು ತಿಳಿಸಿ 'ನ್ಯಾಯಾಮೃತ'ದ ಒಂದು ಕ್ಷಿಷ್ಟಘಟ್ಟವನ್ನಾರಿಸಿಕೊಂಡು ಗುರುಗಳ ಆಮೋದ' ಗ್ರಂಥಾನುಸಾರವಾಗಿ ಪೂರ್ವಪಕ್ಷ, ಸಮಾಧಾನಪೂರ್ವಕವಾಗಿ ಅನುವಾದಿಸಿ ದೈತಸಿದ್ಧಾಂತವನ್ನು ಪ್ರತಿಷ್ಠಾಪಿಸಿ ಉಪದೇಶಮಾಡಿ ನಂತರ “ತಾವು ಪ್ರತಿಪಾದಿಸಿದ ವಿಷಯದ ಮೇಲೆ ಯಾರಾದರೂ ವಿಷಯವಿಚಾರ ಮಾಡುವಂತಿದ್ದರೆ ಮುಂದೆ ಬರಬಹುದು” ಎಂದಾಜ್ಞಾಪಿಸಿದರು. ಸರಸ್ವತಿಯ ಅಪರಾವತಾರರೆಂದು ಭಾರತಾದ್ಯಂತ ವಿಖ್ಯಾತರಾದ ಶ್ರೀಪಾದಂಗಳವರ ಅನುವಾದವನ್ನು ಮಂತ್ರಮುಗ್ಧರಾಗಿ ಕೇಳುತ್ತಿದ್ದಪಂಡಿತಪಾಂಡಲಿ ಮೌನವಾಗಿ ಕುಳಿತಿತು ! ಸಭಾಸದರು ಶ್ರೀಯವರ ಜಯಜಯಕಾರ 

ಮಾಡಿದರು.  

ಆನಂತರ ನ್ಯಾಯ, ವ್ಯಾಕರಣ, ಮೀಮಾಂಸಾ, ಅಲಂಕಾರಶಾಸ್ತ್ರಗಳಲ್ಲಿ ಅನೇಕ ವಿದ್ಯಾರ್ಥಿಗಳು ಉದ್ಧಂಥಗಳಲ್ಲಿ ಪರೀಕ್ಷೆ ಕೊಟ್ಟರು. ಎರಡು ದಿವಸ ಜರುಗಿದ ಮಹಾಸಭೆಯಲ್ಲಿ ವೇಂಕಟನಾಥನು ವಿವಿಧಶಾಸ್ತ್ರಗಳ ವಾಕ್ಯಾರ್ಥದಲ್ಲಿ ಭಾಗವಹಿಸಿ ಅಸದೃಶಪ್ರತಿಭೆ ಪಾಂಡಿತ್ಯಗಳನ್ನು ಪ್ರದರ್ಶಿಸಿದನು. ವೇದ-ವೇದಾಂಗಗಳು, ಯೋಗಶಾಸ್ತ್ರಗಳಲ್ಲಿಯೂ ಪಾರೀಣತೆಯನ್ನು ತೋರಿದ ವೇಂಕಟನಾಥ ಉಭಯಗುರುಗಳ ಪ್ರೀತಿಗೆ ಪಾತ್ರನಾದನು.