ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೩೪. ಮಧುರೆಯಲ್ಲಿ ಶ್ರೀವಿಜಯೀಂದ್ರಗುರುಗಳು
ಆಶ್ವಿನ ಕೃಷ್ಣ ತ್ರಯೋದಶೀ, ನೀರು ತುಂಬುವ ಹಬ್ಬ, ಆಚಾರ್ಯರ ಮನೆಯಲ್ಲಿ ಬಹಳ ಸಂಭ್ರಮ, ಮಧ್ಯಾಹ್ನ ಭೋಜನವಾದ ಮೇಲೆ ಉಪನಯನಕ್ಕೆ ಮೂರ್ಹೂತವಿಡಿಸಿಕೊಂಡು ಬರಲು ಹೋದ ಲಕ್ಷ್ಮಿ ನರಸಿಂಹಾಚಾರ್ಯರು ಏಳೆಂಟು ಘಂಟೆಯ ಹೊತ್ತಿಗೆ ಬಂದು ಅವಸರವಾಗಿ ಮಡಿಯುಟ್ಟು ಸಾಯಂ ದೀಪಾರಾಧನೆ, ನಿವೇದನಗಳನ್ನು ಪೂರೈಸಿದರು. ನಂತರ ವೆಂಕಟಾಂಬಾ, ಕಮಲಾದೇವಿಯರು ಎಲೆ ಹಾಕಿ ಹಬ್ಬದಡಿಗೆಯನ್ನು ಬಡಿಸಿದರು. ಆಚಾರ್ಯರು ಎಲ್ಲರಿಗೂ ತೀರ್ಥಕೊಟ್ಟು, ಊಟಕ್ಕೆ ಕೂಡಿಸಿ, ತಾವೂ ಕುಳಿತು ಎಲ್ಲರೂ ಹಬ್ಬದೂಟ ಮಾಡಿದರು. ಹೆಂಗಸರೂ ಭೋಜನ ಮುಗಿಸಿ ಪಡಸಾಲೆಗೆ ಬಂದು ಕುಳಿತರು.
ಆಗ ಲಕ್ಷ್ಮೀನರಸಿಂಹಾಚಾರ್ಯರು ಉಪನಯನ ಮುಹೂರ್ತವಿಡಿಸಲು ಹೊರಟಾಗ ಬೀದಿಯಲ್ಲಿ ದರ್ಬಾರಿನ ಪುರೋಹಿತರು ಭೇಟಿಯಾಗಿ, ಶ್ರೀವಿಜಯೀಂದ್ರಗುರುಗಳು ಮತ್ತು ಪೂಜ್ಯ ಶ್ರೀಸುಧೀಂದ್ರತೀರ್ಥರು ಸಂಜೆ ಮಧುರೆಗೆ ಬರಲಿರುವ ವಿಚಾರವನ್ನು ತಿಳಿಸಿ ಅರಮನೆಗೆ ತಮ್ಮೊಡನೆ ಕರೆದುಕೊಂಡು ಹೋದದ್ದು, ಅಲ್ಲಿ ಮಹಾರಾಜರು ಎಲ್ಲ ಪಂಡಿತರೊಡನೆ ಸಮಸ್ತ ಗೌರವದೊಡನೆ ಹೊರಟು, ಗುರುದ್ವಯರನ್ನು ಸ್ವಾಗತಿಸಿ ಕರೆತಂದು ಬಿಡಾರಮಾಡಿಸಿದ್ದು, ಶ್ರೀಗುರುಗಳು ತಮ್ಮನ್ನು ಕರೆದು ಕುಶಲಪ್ರಶ್ನೆಮಾಡಿ ದೀಪಾವಳಿ ಹಬ್ಬ ಪೂರ್ತಾ ಶ್ರೀಮಠಕ್ಕೆ ಕುಟುಂಬಸಹಿತರಾಗಿ ತೀರ್ಥ-ಪ್ರಸಾದಕ್ಕೆ ಬರಬೇಕೆಂದು ಆಜ್ಞಾಪಿಸಿದ್ದು, ತಾವು ವೆಂಕಟನಾರಾಯಣನ ಉಪನಯನ ವಿಚಾರವನ್ನು ವಿಜ್ಞಾಪಿಸಿದಾಗ ಶ್ರೀಯವರು ನಸುನಕ್ಕು ತಿಮ್ಮಣ್ಣನ” ಪೌತ್ರನ ಉಪನಯನವನ್ನು ನಾವೇ ಮಾಡಿಸುತ್ತೇವೆ. ಅದು ನಮ್ಮ ಕರ್ತವ್ಯ. ನಾಳೆ ನರಕಚತುರ್ದಶೀ ಬೆಳಗಿನಝಾವ ಪೂಜೆಗೆ ಮನೆಯವರೆಲ್ಲರೂ ಬಂದುಬಿಡಿ” ಎಂದು ಹೇಳಿದ್ದು. ತಾವು ಒಪ್ಪಿಕೊಂಡು ಅಪ್ಪಣೆ ಪಡೆದುಬಂದುದೇ ಮೊದಲಾಗಿ ಎಲ್ಲ ವಿಚಾರವನ್ನೂ ತಿಳಿಸಿ "ಗುರಣ್ಣ ! ಶ್ರೀಗಳವರ ಆಜ್ಞೆ, ನಾವೆಲ್ಲ ಅದಕ್ಕೆ ಶಿರಬಾಗಿ ನಡೆಯಬೇಕಪ್ಪ” ಎಂದು ಹೇಳಿದರು.