|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೩೩. ಸಹೋದರರ ಸಮಾಗಮ

ಆತುರದಿಂದ ಮನೆಯತ್ತ ಹೊರಟ ವೇಂಕಟನಾಥ ಪ್ರಶ್ನಿಸಿದ - “ನಾರಾಯಣ! ಅಣ್ಣ ಅತ್ತಿಗೆ. ಅಮ್ಮ ಸೌಖ್ಯವಾಗಿದ್ದಾರಾ? ಪುಟ್ಟ ವೆಂಕಟನಾರಾಯಣ ಹೇಗಿದ್ದಾನೆ? ಈಗ ಬಹಳ ಬೆಳದಿರಬೇಕಲ್ಲವೇ?” ನಾರಾಯಣ ಮಾವನ ಪ್ರಶ್ನೆಗೆ ಸಡಗರದಿಂದ ಉತ್ತರಿಸುತ್ತಾ ಬರುತ್ತಿರುವಂತೆಯೇ ಮನೆ ಸಮೀಪಸಿತು. ವೇಂಕಟನಾಥ ಆತುರ-ಸಂಭ್ರಮ-ಕುತೂಹಲಗಳಿಂದ ಮನೆಯನ್ನು ಪ್ರವೇಶಿಸಿ ಹಜಾರದತ್ತ ನಡೆದ.

ಪಡಸಾಲೆಯ ಮಧ್ಯದಲ್ಲಿ ತೂಗುಮಣೆಯ ಮೇಲೆ ಲಕ್ಷ್ಮೀನರಸಿಂಹಾಚಾರ - ಗುರುರಾಜಾಚಾರರು ಕುಳಿತು ಮಾತನಾಡುತ್ತಿದ್ದಾರೆ. ವೇಂಕಟನಾಥ ಬಂದುದನ್ನು ಗಮನಿಸಿ ಆಚಾರರು “ಬಾ ವೇಂಕಟನಾಥ ಯಾರು ಬಂದಿದ್ದಾರೆ ನೋಡು” ಎನಲು ವೇಂಕಟನಾಥ ಮುಂದೆ ಬಂದು ವಿನಯದಿಂದ ಕರ್ಣಗಳನ್ನು ಸ್ಪರ್ಶಿಸಿ ಚತುಸ್ಸಾಗರ ಪರಂತಂ ಗೋಬ್ರಾಹ್ಮಣೇಭ್ಯಃ ಶುಭಂ ಭವತು ಅಂಗಿರಸ, ಆಯಾಸ್ಯ ಗೌತಮ ತ್ರಯಾರ್ಷೇಯ ಪ್ರವರಾನ್ವಿತ ಗೌತಮಸಗೋತ್ರಃ ಆಪಸ್ತಂಭಸೂತ್ರಃ ಯಜುಶಾಖಾಧ್ಯಾಯೀ ವೆಂಕಟನಾಥಶರ್ಮಾಹಂ ಭೂ ಅಭಿವಾದಯೇ” ಎಂದುಚ್ಚರಿಸಿ ಅಣ್ಣ ಗುರುರಾಜಾಚಾರರ ಪಾದಸ್ಪರ್ಶಮಾಡಿ ಸಾಷ್ಟಾಂಗವೆರಗಿದನು. 

ಸಂಪ್ರದಾಯದೀಕ್ಷೆ, ವಿನಯ, ವಿಧೇಯತೆಯಿಂದ ಸುರಸುಂದರನಾಗಿ ಕಂಗೊಳಿಸುತ್ತಾನಮಸ್ಕರಿಸಿದ ತಮ್ಮನನ್ನು ಕಂಡು ಗುರುರಾಜಾಚಾರರ ಹೃದಯ ತುಂಬಿ ಬಂದಿತು. ಆನಂದದಿಂದ ಮೇಲೆದ್ದು ವೇಂಕಟನಾಥನನ್ನು ಆಲಿಂಗಿಸಿ “ದೀರ್ಘಾಯುಷ್ಮಾನ್ ಭವ, ಸಹೋದರ ! ವಂಶದೀಪಕೋ ಭವ” ಎಂದಾಶೀರ್ವದಿಸಿದರು. 

ವೇಂಕಟನಾಥನು ಮನೆಗೆ ಬಂದ ವಿಚಾರತಿಳಿದು ಗೋಪಮ್ಮ, ವೆಂಕಟಾಂಬಾ, ಕಮಲಾದೇವಿ, ವೆಂಕಟನಾರಾಯಣ ಪಡಸಾಲೆಗೆ ಬಂದರು. ತಾಯಿಯನ್ನು ಕಂಡ ವೇಂಕಟನಾಥ ಅವಳತ್ತ ಧಾವಿಸಿ 'ಅಮ್ಮಾ' ಎಂದು ಗೋಪಮ್ಮನ ಪಾದಮುಟ್ಟಿ ನಮಸ್ಕರಿಸಿ “ಎಷ್ಟು ವರ್ಷವಾಯಿತಮ್ಮಾ ನಿನ್ನ ನೋಡಿ, ಚೆನ್ನಾಗಿದ್ದೀಯಾ ?” ಎಂದ. ತಾರುಣ್ಯಪೂರ್ಣನಾಗಿರುವ ಮಗನನ್ನು ನೋಡಿ ಆ ತಾಯಿ ಹಿಗ್ಗಿದಳು. ಹೃದಯವರಳಿತು. ಪ್ರೀತಿಯಿಂದ ಮಗನ ಮೈದಡವಿ "ಸೌಖ್ಯವಾಗಿದ್ದೀನಪ್ಪಾ, ವೇಂಕಟನಾಥ. ನೀನು ಚೆನ್ನಾಗಿದ್ದೀಯಾ ?” ಎನಲು “ನಿನ್ನಾಶೀರ್ವಾದದಿಂದ ಸೌಖ್ಯವಾಗಿದ್ದೀನಮ್ಮಾ” ಎಂದು ಹೇಳಿ, ಅತ್ತಿಗೆಯನ್ನು ನೋಡಿ ನಗುತ್ತಾ ನಮಸ್ಕರಿಸಿ “ಸೌಖ್ಯವಾ ಅತ್ತಿಗೆ?” ಎಂದ, ನವತಾರುಣ್ಯ ರೂಪ-ಗುಣಮಂಡಿತನಾದ, ಮನ್ಮಥನಂತೆ ಬೆಳಗುತ್ತಿರುವ ಮೈದುನನನ್ನು ನೋಡಿ ಹಿಗ್ಗಿನಿಂದ “ವೆಂಕಟೂ! ಆರು ವರ್ಷಗಳಲ್ಲೇ ಎಷ್ಟು ಬೆಳೆದುಬಿಟ್ಟಿದ್ದೀಯಲ್ಲೋ ? ನೂರುವರ್ಷ ಸುಖವಾಗಿ ಬಾಳಪ್ಪಾ” ಎಂದು ಹರ್ಷದಿಂದ ಹರಸಿದಳು. 

ನಗೆಮಲ್ಲಿಗೆಯನ್ನು ಹೊರಸೂಸುತ್ತಾ ವೇಂಕಟನಾಥನು “ಹೌದು, ಅತ್ತಿಗೆ ಬೆಳೆದಿದ್ದೇನೆ ! ಇನ್ನೂ ಹತ್ತು-ಹದಿನೈದು ವರ್ಷ ಬಿಟ್ಟು ಬಂದು ನೋಡಿದ್ದರೆ ಮುದುಕನೂ ಆಗಿರುತ್ತಿದ್ದೆ !” ಎಂದನು. ಕಮಲಾದೇವಿ ಪತಿಯತ್ತ ಕಟಾಕ್ಷ ಬೀರಿ “ನೋಡಿದಿರಾ, ನಮ್ಮ ವೆಂಕಟೂ ಮಾತಿನ ಚಾಟಿಯ ಏಟನ್ನು ? ಆರು ವರ್ಷಗಳಿಂದ ನಾವು ಬಂದಿಲ್ಲವೆಂದು ಹೇಗೆ ಆಪಾದಿಸುತ್ತಿದ್ದಾನೆ ! ಅತ್ತೆ - ನಾನು ಎಷ್ಟು ಬಾರಿ ಹೇಳಿದೆವು. ಬಹುವರ್ಷವಾಯಿತು. ನಿನ್ನನ್ನು ನೋಡಿ ಬರೋಣ ಎಂದು, ನೋಡಪ್ಪಾ, ನಮ್ಮ ಮಾತು ಕೇಳಿದರೆ ತಾನೆ ನಿಮ್ಮಣ್ಣ !” ಎಂದು ಮುಗುಳುನಗೆ ಬೀರಿದಳು. 

ಗುರುರಾಜಾಚಾರರು ಪತ್ನಿಯ ಮಾತು ಕೇಳಿ ನಗುತ್ತಾ “ವೇಂಕಟನಾಥ, ಇವಳ ಮಾತು ನಂಬಬೇಡ ! ನಾನು, ಅಮ್ಮ ಎಷ್ಟೋ ಬಾರಿ ಮಧುರೆಗೆ ಹೋಗಿ ಅಕ್ಕ-ಭಾವ, ವೇಂಕಟನಾಥರನ್ನು ನೋಡಿಬರೋಣ ಎಂದರೆ ಇವಳು ಅಯ್ಯೋ ಬಿಡಿ, ಅವರಿಗೇನು ? ಮಹಾರಾಯರಾಗಿ ಚೆನ್ನಾಗಿರುತ್ತಾರೆ, ಹೋದರಾಯಿತು ಬಿಡಿ ಎನ್ನುತ್ತಿದ್ದಳು. ನಾನೇನು ಮಾಡಲಿ ಹೇಳು” ಎನಲು ಕಮಲಾದೇವಿ ಕಣ್ಣರಳಿಸುತ್ತಾ “ಇದೇನಾಯ ! ವೆಂಕಟೂ, ನಿಮ್ಮಣ್ಣನ ಮಾತು ನಂಬಬೇಡಪ್ಪಾ, ಅತ್ತಿಗೆ-ಮೈದುನರಲ್ಲಿ ಜಗಳ ಹುಟ್ಟಿಸಲು ಇವರು ಈ ಆಟ ಹೂಡಿದ್ದಾರೆ” ಎಂದು ಅಳುವವರಂತೆ ಮುಖಮಾಡಿ ಸೆರಗಿನಿಂದ ಕಣ್ಣೂರಿಸಿಕೊಂಡು ನಗಹತ್ತಿದಳು. ವೇಂಕಟನಾಥ “ಅಣ್ಣನ ವಿಚಾರ ನನಗೆ ತಿಳಿಯದೆ ? ನೀವೇಕೆ ಚಿಂತಿಸುವಿರಿ. ನಿಮ್ಮ ಪ್ರೀತಿ-ವಾತ್ಸಲ್ಯ ನನಗೆ ಹೊಸದಾಗಿ ತಿಳಿಯಬೇಕೆ ?” ಎನಲು ಗುರುರಾಜಾಚಾರರು “ಹೌದಪ್ಪಾ, ನನ್ನದೇ ತಪ್ಪು-ಸರಿ ತಾನೆ. ಸಣ್ಣವನಾಗಿರುವಾಗಿನಿಂದಲೂ ನೀನು ಅತ್ತಿಗೆಯ ಪಕ್ಷ ವಹಿಸುತ್ತಿದ್ದವನಲ್ಲವೇ ?” ಎಂದು ನಗಲಾರಂಭಿಸಿದರು. ಅಣ್ಣ-ಅತ್ತಿಗೆಯರ ಅಭಿನಯ ಕಂಡು ವೇಂಕಟನಾಥನೂ ನಕ್ಕ. ಇವರ ಸರಸ ಸಂಭಾಷಣೆ-ಪ್ರೀತಿಗಳನ್ನು ಕಂಡು ಲಕ್ಷ್ಮೀನರಸಿಂಹಾಚಾರ-ಗೋಪಮ್ಮ-ವೆಂಕಟಾಂಬೆಯರೂ ನಗಹತ್ತಿದರು. ಅದನ್ನು ಕೇಳಿ ಪುಟ್ಟ ವೆಂಕಟನೂ 'ಹೋ' ಎಂದು ಗಟ್ಟಿಯಾಗಿ ಚಪ್ಪಾಳೆ ಬಾರಿಸಿ ನಗಲಾರಂಭಿಸಿದ. ಮನೆಯಲ್ಲಿ ಹರ್ಷದ ಹೊನಲು ಹರಿಯಿತು.

ಆಗ ವೇಂಕಟನಾಥನ ದೃಷ್ಟಿ ಅತ್ತಿಗೆ ಸೀರೆಯ ಮರೆಯಲ್ಲಿ ನಿಂತು ಇಣುಕಿ ನೋಡುತ್ತಿದ್ದ ವೆಂಕಟನಾರಾಯಣನತ್ತ ಹರಿಯಿತು. ಅವನನ್ನು ಹತ್ತಿರ ಕರೆದು ತಬ್ಬಿ ಮುದ್ದಾಡಿ “ನಾಣಿ ! ಎಷ್ಟು ದೊಡ್ಡವನಾಗಿದ್ದೀಯಲ್ಲೋ, ನನ್ನ ನೆನಪಿದೆಯೇನೋ?” ಎಂದು ಬೆನ್ನು ಚಪ್ಪರಿಸಿದನು. ಪುಟ್ಟ ವೆಂಕಟೂ ಚಿಕ್ಕಪ್ಪನನ್ನು ತಬ್ಬಿ “ಚಿಕ್ಕಪ್ಪ, ನೀನು ದೊಡ್ಡ ಪಂಡಿತನಾಗುತ್ತೀಯಂತೆ ಹೌದೆ ? ಅಮ್ಮ-ಅಪ್ಪ ಅನ್ನುತ್ತಿದ್ದರು. ನಾನೂ ನಿನ್ನಂತೆ ಪಂಡಿತನಾಗಬೇಕು. ನನಗೆ ಪಾಠ ಹೇಳಿಕೊಡುತ್ತೀಯಾ ಚಿಕ್ಕಪ್ಪಾ” ಎಂದನು. ತನ್ನ ಹೊಗಳಿಕೆ ಕೇಳಿ ನಾಚಿ ತಲೆತಗ್ಗಿಸಿ ವೇಂಕಟನಾಥ “ಆಗಲಿ, ನಾಣಿ, ನಾನು ಕಲಿತಿರುವುದನ್ನೆಲ್ಲಾ ನಿನಗೆ ಹೇಳಿಕೊಡುತ್ತೇನೆ” ಎಂದನು. 

ರಾತ್ರಿ ಭೋಜನಮಾಡಿ ಎಲ್ಲರೂ ಪಡಸಾಲೆಯಲ್ಲಿ ತಾಂಬೂಲ ಸೇವಿಸುತ್ತಿರುವಾಗ ವೇಂಕಟನಾಥ “ಅಣ್ಣ, ವೆಂಕಟನಾರಾಯಣನಿಗೆ ಉಪನಯನ ಯಾವಾಗ ಮಾಡುವಿರಿ ?” ಎಂದು ಪ್ರಶ್ನಿಸಿದಾಗ ಗುರುರಾಜಾಚಾರರು “ಬೇಗ ಮಾಡಬೇಕಪ್ಪಾ. ಅಮ್ಮ ಮತ್ತು ನಿನ್ನತ್ತಿಗೆ ಉಪನಯನ ಬೇಗ ಮಾಡಲು ಬಲಾತ್ಕರಿಸುತ್ತಿದ್ದಾರೆ” ಎಂದಾಗ ಲಕ್ಷ್ಮೀನರಸಿಂಹಾಚಾರರು “ಗುರಣ್ಣ, ಹೇಗಿದ್ದರೂ ದೀಪಾವಳಿಯ ಹಬ್ಬಕ್ಕೆ ಬಂದಿದ್ದೀರಿ. ಒಂದು ಶುಭಮುಹೂರ್ತದಲ್ಲಿ ಉಪನಯನವನ್ನೂ ಮುಗಿಸಿಕೊಂಡೇ ಹೋಗುವಿರಂತೆ” ಎಂದರು. ಗುರುರಾಜಾಚಾರ್ಯರು ಭಾವನ ಮೇಲೆ ಭಾರ ಹೇರಲು ಸಂಕೋಚಪಟ್ಟು ಸುಮ್ಮನಾಗಲು ವೆಂಕಟಾಂಬಾದೇವಿಯು “ಗುರಣ್ಣ, ಏನು ಯೋಚಿಸುವೆ ? ನಾವು ಹೊರಗಿನವರೇನು ? ಅಮ್ಮ, ನೀನೇ ಹೇಳು. ವೆಂಕಟನಾರಾಯಣನ ಉಪನಯನ ನಾವು ಮಾಡಿಸಬಾರದೇ” ಎಂದು ಪ್ರಶ್ನಿಸಿದಳು. ಗೋಪಮ್ಮ “ಗುರಣ್ಣ ಅಳಿಯಂದಿರು-ವೆಂಕಟಾಂಬೆ ಹೇಳಿದಂತೆ ಉಪನಯನ ಮುಗಿಸಿಕೊಂಡೇ ಹೋಗೋಣ” ಎನಲು ಗುರುರಾಜಾಚಾರ ದಂಪತಿಗಳೂ ಸಮ್ಮತಿಸಿದರು. 

ಅನಂತರ ಗುರುರಾಜಾಚಾರ್ಯರು ತಮ್ಮನ ಅಧ್ಯಯನದ ಬಗ್ಗೆ ವಿಚಾರಮಾಡಿದರು. ನರಸಿಂಹಾಚಾರೈರು ನಸುನಕ್ಕು ಉತ್ಸಾಹದಿಂದ "ಗುರಣ್ಣ, ನಿನ್ನ ತಮ್ಮನ ಬುದ್ದಿ, ಪ್ರತಿಭೆ, ಗ್ರಹಣಶಕ್ತಿ ಎಲ್ಲವೂ ಅಸಾಧಾರಣ. ಅವನಿಗೆ ಪಾಠ ಹೇಳುವುದೇ ಒಂದು ಭಾಗ್ಯ ! ಸರ್ವಶಾಸ್ತ್ರಗಳಲ್ಲಿ ಅವನು ತೋರುವ ಪ್ರತಿಭೆಯನ್ನು ನೋಡಿದರೆ ಹಿಂದಿನ ಜನ್ಮದಲ್ಲೇ ಅವನು ಸಕಲಶಾಸ್ತ್ರ ಪಾರಂತನಾಗಿದ್ದನೆನಿಸುವುದು. ಹನ್ನೆರಡು-ಹದಿನಾಲ್ಕು ವರ್ಷಗಳಲ್ಲಿ ಕಲಿಯಬಹುದಾದ್ದನ್ನು ಎಂಟೇ ವರ್ಷಗಳಲ್ಲಿ ಕಲಿತು ಪ್ರವೀಣನಾಗಿದ್ದಾನೆ” ಎಂದು ಮುಕ್ತಕಂಠದಿಂದ ಹೊಗಳಿದರು. ಗುರುರಾಜಾಚಾರರಿಗೆ ತಮ್ಮನ ಅಭ್ಯುದಯದಿಂದ ಪರಮಾನಂದವಾಯಿತು. 

ಗೋಪಮ್ಮ, ಗುರುರಾಜಾಚಾರ ದಂಪತಿಗಳು ಬಂದು ನಾಲ್ಕು ದಿನಗಳಾಗಿತ್ತು, ಒಂದು ಮಧ್ಯಾಹ್ನ ಅಭ್ಯಾಸದ ಕೊಠಡಿಯಲ್ಲಿ ಕುಳಿತು ವೇಂಕಟನಾಥ ಗ್ರಂಥಾವಲೋಕನ ಮಾಡುತ್ತಿದ್ದಾಗ ವೆಂಕಟನಾರಾಯಣನು ಬಂದು ಪಕ್ಕದಲ್ಲಿ ಕುಳಿತನು. ವೇಂಕಟನಾಥ ಅವನನ್ನು ನೋಡಿ “ಏನು ನಾಣಿ” ಎಂದ. 

ವೆಂಕಟನಾರಾಯಣ “ಚಿಕ್ಕಪ್ಪ, ಇಂದೇನಾಯಿತು ಗೊತ್ತೇ ? ನಾನು ವಿದ್ಯಾಪೀಠಕ್ಕೆ ಬಂದಾಗ ಅಲ್ಲಿ ನಾಣಿ ಕೆಲ ಹುಡುಗರೊಡನೆ ಮಾತನಾಡುತ್ತಿದ್ದ. ಆಗ ಸಾಂಬ ಎಂಬ ಹುಡುಗ ನಾಣಿಯನ್ನು ನೋಡಿ “ಅಲ್ಲಯ್ಯ ನಾರಾಯಣ, ನೀವು ಭೇದ ಭೇದ ಎಂದು ಹೇಳುತ್ತಿರಲಿಲ್ಲ, ಭೇದವೆಲ್ಲಿದೆ !! ಜೀವಬ್ರಹ್ಮ ಮತವೇ ಸರಿಯಾದದ್ದು. ನಿಮ್ಮ ಮತ ಅಪ್ರಾಮಾಣಿಕ! ಇದಕ್ಕೆ ನೀನೇನು ಹೇಳುತ್ತಿ?” ಎಂದು ಪ್ರಶ್ನಿಸಿದ. ಆಗ ನಾಣೀಗೂ ಅವನಿಗೂ ವಾದವಾಯಿತು. ನಾಣಿ ಏನೇನೋ ಹೇಳಿದ ಆಮೇಲೆ ಒಂದು ಶ್ಲೋಕ ರಚಿಸಿ ಹೇಳಿ ಇದಕ್ಕೆ ಉತ್ತರ ಕೊಡು ಎಂದನು. ಆಗ ಸಾಂಬನು 'ನೀನೇ ಗೆದ್ದೆ, ಹೋಗು' ಎಂದು ಓಡಿಹೋದ” ಎಂದು ಹೇಳಿದ. 

ಅದೇ ಹೊತ್ತಿಗೆ ನಾರಾಯಣ ಬಂದನು. ಅವನನ್ನು ನೋಡಿ ವೇಂಕಟನಾಥ ನಗುತ್ತಾ ಅದೆನೋ ವಿಜಯ ಸಾಧಿಸಿದೆಯಂತಲ್ಲ ನಾರಾಯಣ? ಅದೇನು ಹೇಳು” ಎನಲು ನಾಚಿ ತಲೆ ತಗ್ಗಿಸಿ ನಾರಾಯಣ “ಏನೂ ಇಲ್ಲ ಮಾವ” ಎಂದ, “ಇರಲಿ ಹೇಳಪ್ಪ, ನೀನು ರಚಿಸಿದ ಶ್ಲೋಕ ಯಾವುದು ಹೇಳು” ಎಂದ ವೇಂಕಟನಾಥ. ಆಗ ನಾರಾಯಣನು “ಅಲ್ಲ ಮಾವ ! ನಿನ್ನ ಮುಂದೆ ಹೇಳುವಂತಹ ಕವನವೇನಲ್ಲ. ಏನೋ ಸ್ಪುರಿಸಿತು. ರಚಿಸಿದೆ ಅಷ್ಟೇ” ಎಂದ. “ಪರವಾಗಿಲ್ಲ ಹೇಳಪ್ಪಾ ಎಂದು ವೇಂಕಟನಾಥ ಬಲಾತ್ಕರಿಸಿದ ಮೇಲೆ ನಾರಾಯಣ ರಾಗವಾಗಿ ಹೇಳಹತ್ತಿದ. 

ಶ್ರೀಮಾನ್ ವೇದೈಕವೇದ್ಯೋ ಶುಭಗುಣನಿಲಯಃ ದೋಷದೂರೋ ಪರೇಶಃ | ಬ್ರಹ್ಮಶಾನಾದಿ ನಂಪ್ರತಿಹತಮಹಿಮಾ ಪದ್ಮನಾಭೋ ರಮೇಶಃ || ಜೀವೋಲಲಶಕ್ತ ಜನಿಮ್ಮತಿಸಹಿತೋ ದೋಷಪೂರ್ಣ ಸುಖೀ ಚ | ಐಕ್ಯಂ ಶಕ್ಯಂ ಕಿಮದಶಗುಣಯುತಯೋ ಭೇದಯುಗ್ಧಃ ಪರತ್ರ || 

ಸೋದರಳಿಯನ ಕವನಪ್ರಣಯನ ಚಾತುರವನ್ನು ಕಂಡು ಮುದಗೊಂಡ ವೇಂಕಟನಾಥನು “ಭಲೇ ನಾರಾಯಣ ! ಕವಿತೆ ಸ್ವಾರಸ್ಯವಾಗಿದೆ. ವಯಸ್ಸಿಗೆ ಮೀರಿದ ಪ್ರತಿಭೆ ತೋರಿದ್ದೀಯೆ. ಸರಳ-ಸುಂದರವಾಗಿ ಹರಿದುಬಂದಿದೆ ಕಾವ್ಯವಾಹಿನಿ ! ವಿಷಯ ನಿರೂಪಣೆ ಹೃದ್ಯವಾ ಪ್ರಮಾಣಬದ್ಧವೂ ಆಗಿದೆ. ಸ್ರಗ್ಧರಾವೃತ್ತದ ಈ ಪದ್ಯ ಆದ್ಯಾಚಾರರಾದ ಶ್ರೀಮದಾನಂದತೀರ್ಥರ ಚರಣಕಮಲಗಳಿಗೆ ನೀನು ಅರ್ಪಿಸಿದ ಪ್ರಥಮ ಕಾವ್ಯಪುಷ್ಪವಾಗಿದೆ. ಶ್ರೀಹರಿವಾಯುಗಳ ಅನುಗ್ರಹ ನಿನ್ನ ಮೇಲಿದೆ. ಮುಂದೆ ಮಹಾಕವಿಯೆನಿಸಿ ಖ್ಯಾತನಾಗುವೆ” ಎಂದು ಹೊಗಳಿ ಬೆನ್ನು ಚಪ್ಪರಿಸಿದನು. 

ಆನಂತರ ನಾರಾಯಣ ತನಗೂ ಸಾಂಬನಿಗೂ ನಡೆದ ವಾಗ್ವಾದ ಮುಂತಾದವನ್ನು ನಿರೂಪಿಸಿದಾಗ ಎಲ್ಲರೂ ಸಂತಸದಿಂದ ನಗಹತ್ತಿದರು. ಹುಡುಗರ ನಗುವನ್ನು ಕೇಳಿ ಗೋಪಮ್ಮ-ವೆಂಕಟಾಂಬಾ-ಕಮಲಾದೇವಿಯರು ಬಂದು ಸಮಾಚಾರವೇನೆಂದು ಪ್ರಶ್ನಿಸಿದರು. ವೇಂಕಟನಾಥ ಎಲ್ಲವನ್ನೂ ತಿಳಿಸಲು, ಕಮಲಾದೇವಿ ಅದೇನು ಶ್ಲೋಕ ? ಅದನ್ನು ಹೇಳಿ ಅರ್ಥ ವಿವರಿಸು” ಎಂದರು. 

ವೇಂಕಟನಾಥ ನಾರಾಯಣನಿಂದ ಶ್ಲೋಕ ಹೇಳಿಸಿ ಹೀಗೆ ಅರ್ಥವನ್ನು ವಿವರಿಸಿದನು. “ಪರಮಾತ್ಮ ಜೀವಾತ್ಮರಿಗೆ ಐಕ್ಯ ಸಾಧ್ಯವಿಲ್ಲ. ಏಕೆಂದರೆ, ಶ್ರೀಹರಿ ವೇದಪ್ರತಿಪಾದ್ಯಮಹಿಮನು, ಪರಿಪೂರ್ಣ, ಶ್ರೀಮಂತ, ಕಾಂತಿಪೂರ್ಣ. ಅವನು ವೇದೈಕವೇದ್ಯ, ಅನಂತಕಲ್ಯಾಣಗುಣಮಂದಿರ, ದೋಷದೂರ, ದೇವತೆಗಳಲ್ಲಿ ಶ್ರೇಷ್ಠರಾದ ಬ್ರಹ್ಮ ರುದ್ರಾದಿವಂದ್ಯನೂ, ಅಪ್ರತಿಹತಮಹಿಮನೂ, ಜಗದೃಷ್ಟಿಗೆ ಮೂಲನಾದ ಪದ್ಮನಾಭನೂ, ಅಕ್ಷರಾಭಿಮಾನಿಯಾದ ಲಕ್ಷ್ಮೀದೇವಿಗೆ ಸ್ವಾಮಿಯೂ ಆಗಿರುವ ಶ್ರೀಹರಿ ಪರಬ್ರಹ್ಮನು, ಜೀವನು ಅಲ್ಪಜ್ಞ, ಅಲ್ಪಶಕ್ತಿಯುಳ್ಳವ, ಜನನ-ಮರಣಯುಕ್ತನಾಗಿದ್ದಾನೆ. ಜೀವ ದೋಷಪೂರ್ಣನೂ, ದುಃಖಿಯೂ ಆಗಿದ್ದಾನೆ. ಹೀಗೆ ಪೂರ್ಣ-ಆಪೂರ್ಣರಾದ, ಪಾರಮಾರ್ಥಿಕ ಭೇದವುಳ್ಳ ಪರಮಾತ್ಮ - ಜೀವಾತ್ಮರಿಗೆ ಇಲ್ಲಾಗಲೀ, ಮುಕ್ತಿಯಲ್ಲಾಗಲಿ ಐಕ್ಯವು ಶಕ್ಯವಾದೀತೇ ? ಎಂದಿಗೂ ಸಾಧ್ಯವಿಲ್ಲ - ಎಂದು ಈ ಪದ್ಯದ ಭಾವ. ನೋಡಿದೆಯಾ ಅಮ್ಮಾ ! ನಿನ್ನ ಪೌತ್ರನ ಕವಿತಾಶಕ್ತಿ ಹೇಗಿದೆ ?” ಎಂದು ಹೇಳಲು ಎಲ್ಲರೂ ಸಂತೋಷಿಸಿದರು. ಅನಂತರ ವೇಂಕಟನಾಥನು ನಾರಾಯಣ-ವೆಂಕಟನಾರಾಯಣರ ಸಂಗಡ ಸಂಧ್ಯೆಗಾಗಿ ನದಿಯ ಕಡೆಗೆ ಹೊರಟನು. 

ವೇಂಕಟನಾಥನು ಹೊರಟಮೇಲೆ ಗೋಪಮ್ಮ “ವೆಂಕೂ, ನಿನ್ನ ತಮ್ಮ ವೀಣಾವಾದನದಲ್ಲಿ ಹೇಗಿದ್ದಾನೆ ?” ಎಂದು ಪ್ರಶ್ನಿಸಿದರು. ವೆಂಕಟಾಂಬಾದೇವಿ ನಸುನಕ್ಕು “ಅಮ್ಮಾ, ಅವನ ವೀಣಾಪಾಂಡಿತ್ಯವಿಚಾರ ಏನೆಂದು ಹೇಳಲಿ ? ಅವನು ವೀಣಾವಾದನದಲ್ಲಿ ತೋರುವ ಪಾಂಡಿತ್ಯ-ಪ್ರತಿಭೆಗಳು ರಾಜದರ್ಬಾರಿನಲ್ಲೂ ಖ್ಯಾತವಾಗಿದೆ, ಅಪ್ಪನನ್ನೂ ಮೀರಿಸಿ ಕೀರ್ತಿಶಾಲಿಯಾಗುತ್ತಾನೆ ಎಂದು ಮೊನ್ನೆ ನಮ್ಮವರು ಹೇಳುತ್ತಿದ್ದರು” ಎಂದು ಹೇಳಲು ಗೋಪಮ್ಮ ಕಮಲಾದೇವಿ ಆನಂದಪುಳಕಿತರಾದರು. ಕಮಲಾದೇವಿ “ನಿಜವಾಗಿಯೂ ನಮ್ಮ ವೆಂಕಟೂ ಅಷ್ಟು ಕೀರ್ತಿ ಗಳಿಸಿರುವನೇ?” ಎನಲು ವೆಂಕಟಾಂಬಾ ಹೇಳಹತ್ತಿದರು. 

ವೆಂಕಟಾಂಬಾ : ನೋಡು ಕಮಲಾ, ಈಗೆರಡು ತಿಂಗಳ ಹಿಂದೆ ನಡೆದ ಪ್ರಸಂಗ ಹೇಳುತ್ತೇನೆ ಕೇಳು, ವೇಂಕಟನಾಥ ಏಕಾಂತವಾಗಿ ವೀಣೆ ನುಡಿಸುತ್ತಾನೆ. ಸಾರ್ವಜನಿಕವಾಗಿ ಎಲ್ಲೂ ಬಾರಿಸುವುದಿಲ್ಲ, ವಿಶೇಷ ದಿನಗಳಲ್ಲಿ ವರ್ಷಕ್ಕೆ ನಾಲ್ಕಾರು ಬಾರಿ ಶ್ರೀಮೀನಾಕ್ಷಿದೇವಿಯ ಗುಡಿಯಲ್ಲಿ ಜನರ ಸದ್ದುಗದಲ್ಲವಿಲ್ಲದ ಸಮಯದಲ್ಲಿ ಭಕ್ತಿಯಿಂದ ಮೈಮರೆತು ದೇವಿಯ ಮುಂದೆ ವೀಣೆ ನುಡಿಸಿ, ನಮಸ್ಕರಿಸಿ ಬರುತ್ತಾನೆ. ಇದು ಅವನ ವಾಡಿಕೆ. 

ಅದೊಂದು ದಿನ, ಹೂಂ, ಅನಂತನ ಹಬ್ಬದ ದಿನ ನಮ್ಮ ನಾರಾಯಣನೊಡನೆ ಮಧ್ಯಾಹ್ನ ನಾಲ್ಕು ಘಂಟೆಗೆ ಜನರ ಗದ್ದಲವಿಲ್ಲದ್ದರಿಂದ ಮೀನಾಕ್ಷಿ ಗುಡಿಗೆ ಹೋಗಿ ದೇವಿಯ ಮುಂದೆ ವೀಣಾವಾದನಮಾಡುತ್ತಾ ತಲ್ಲೀನನಾಗಿದ್ದನಂತೆ, ಮಹಾರಾಜರು ದೇವಾಲಯಕ್ಕೆ ದೇವಿಯ ದರ್ಶನ ಪಡೆದು ಹೋಗಲು ಬಂದರಂತೆ, ಒಳಗೆ ವೇಂಕಟನಾಥ ಭಾವನಾಪರವಶನಾಗಿ ವೀಣಾವಾದನಿರತನಾಗಿರುವುದನ್ನು ಕಂಡು ಸ್ವಲ್ಪ ಮರೆಯಲ್ಲಿ ನಿಂತು ಕೇಳಹತ್ತಿದರಂತೆ. ವೇಂಕಟನಾಥ ಭೈರವೀ ಆಲಾಪವನ್ನೆತ್ತಿಕೊಂಡು ವಿಸ್ತಾರವಾಗಿ ಅಪೂರ್ವರೀತಿಯಲ್ಲಿ ವೀಣೆಯನ್ನು ನುಡಿಸಲಾರಂಭಿಸಿದ. ಆ ಮಂಜುಳನಾದವೈಭವದಿಂದ ಮಂತ್ರಮುಗ್ಧರಾದ ಮಹಾರಾಜರು ವೀಣಾವಾದನ ಮುಗಿಸಿ ವೇಂಕಟನಾಥ ಮೇಲೆದ್ದ ಕೂಡಲೇ ಮುಂದೆ ಬಂದು ಕರಮುಗಿದು “ನಿಮ್ಮ ವೀಣಾವಾದನ ಚಾತುರ ಅತ್ಯಮೋಘ ! ಭೈರವಿಯನ್ನು ಇಷ್ಟು ವಿಸ್ತಾರವಾಗಿ ವೈವಿಧ್ಯಪೂರ್ಣವಾಗಿ ಬಾರಿಸುವ ಪಂಡಿತರನ್ನು ನಾವಿದುವರೆಗೆ ಕಂಡಿರಲಿಲ್ಲ ! ಇಂದು ನಮ್ಮ ಕರ್ಣಗಳು ಸಾರ್ಥಕವಾದವು ! ತಮ್ಮ ಪರಿಚಯವಾಗಲಿಲ್ಲ.........ಮಧುರೆಗೆ ಹೊಸಬರೆಂದು ತೋರುತ್ತದೆ” ಎಂದು ಹೇಳಿದರಂತೆ. 

ಆಗ ತಿಳಿಯಿತು ವೇಂಕಟನಾಥನಿಗೆ ಮಹಾರಾಜರು ಬಂದುದು ಮತ್ತು ತನ್ನ ವೀಣಾವಾದನ ಕೇಳಿದ್ದು, ವಿನಯದಿಂದ ತಲೆತಗ್ಗಿಸಿ “ನಾನು ತಮ್ಮ ರಾಜಾಸ್ಥಾನದ ಮಹಾವಿದ್ವಾಂಸರಾದ ಶ್ರೀಲಕ್ಷ್ಮೀನರಸಿಂಹಾಚಾರರ ಭಾವಮೈದುನ. ಈಗೆಂಟು. ವರ್ಷಗಳಿಂದ ತಮ್ಮ ವಿದ್ಯಾಪೀಠದಲ್ಲೂ ಭಾವನವರಲ್ಲೂ ಶಾಸ್ತ್ರವ್ಯಾಸಂಗಮಾಡುತ್ತಿದ್ದೇನೆ” ಎಂದರಂತೆ. 

ಅದನ್ನು ಕೇಳಿ ಹರ್ಷಿತರಾದ ಮಹಾರಾಜರು 'ಪೂಜ್ಯ ಆಚಾರ್ಯರ ಭಾವ-ಮೈದುನ ನೀವೇ ಏನು ? ಶಾಸ್ತ್ರಗಳಲ್ಲಿ, ವೀಣಾವಾದನದಲ್ಲಿ ನೀವು ಅದ್ವೀತಿಯರೆಂದು ನಮ್ಮ ಆಸ್ಥಾನದ ಕೆಲ ಪಂಡಿತರಿಂದ ಕೇಳಿದ್ದೆವು. ಇಂದು ಪ್ರತ್ಯಕ್ಷವಾಗಿ ಕಂಡು ಆನಂದವಾಯಿತು. ಒಮ್ಮೆ ದರ್ಬಾರಿನಲ್ಲಿ ನಿಮ್ಮ ವೀಣಾಕಛೇರಿ ನೆರವೇರಿಸಿಕೊಟ್ಟು ನಮ್ಮೆಲ್ಲರನ್ನೂ ಸಂತೋಷಪಡಿಸಬೇಕು. ಎಂದರಂತೆ. ಆಗ ವೇಂಕಟನಾಥ “ಕ್ಷಮಿಸಬೇಕು ಮಹಾಪ್ರಭು ! ದರ್ಬಾರಿನಲ್ಲಿ ಕಛೇರಿ ಮಾಡುವಷ್ಟು ಪಂಡಿತ ನಾನಲ್ಲ ! ಏನೋ ತೋರಿದಾಗ ದೇವರ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿ ಹೋಗುತ್ತಿದ್ದೇನೆ, ಅಷ್ಟೆ, ಅಪ್ಪಣೆಯಾದರೆ ಬರುತ್ತೇನೆ” ಎಂದು ಹೇಳಿ ನಾರಾಯಣನೊಡನೆ ಮನೆಗೆ ಬಂದುಬಿಟ್ಟ. ಇದೊಂದು ವಿಚಾರವನ್ನೂ ಅವನು ಯಾರಲ್ಲೂ ಹೇಳಲೇ ಇಲ್ಲ, ನಾಲ್ಕಾರು ದಿನವಾದ ಮೇಲೆ ನಮ್ಮವರು ದರ್ಬಾರಿಗೆ ಹೋದಾಗ ಮಹಾರಾಜರೇ ಈ ವಿಚಾರವನ್ನು ಹೇಳಿ “ಆಚಾರ್ಯರೇ, ನಿಮ್ಮ ಭಾವಮೈದುನ ಮಹಾಪ್ರತಿಭಾಶಾಲಿ !ವೀಣಾವಾದನದಲ್ಲಿ ಅದೆಂಥ ಪಾಂಡಿತ್ಯ ? ಈವರಿಗೆ ನಾವಿಂಥ ವೀಣಾವಾದನ ಕೇಳಿರಲಿಲ್ಲ! ನಿಮ್ಮ ಭಾವಮೈದುನ ಬಹು ಚಾಣಾಕ್ಷರು. ದರ್ಬಾರಿನಲ್ಲಿ ಕಛೇರಿ ಮಾಡಬೇಕೆಂದು ನಾವು ಹೇಳಿದಾಗ ವಿನಯದಿಂದಲೇ “ನನ್ನ ವೀಣಾವಾದನ ಕೇವಲ ದೇವರಿಗೆ ಮೀಸಲು” ಎಂದು ಪರ್ಯಾಯವಾಗಿ ಹೇಳಿ ಹೋಗಿಬಿಟ್ಟರು ! ಅವರ ವೀಣಾವಾದನ ಕೇಳುವ ಸೌಭಾಗ್ಯ ಮತ್ತೆ ಯಾವಾಗ ದೊರೆಯುವುದೋ ಕಾಣೆ ?” ಎ೦ದರ೦ತೆ. 

ನಂತರ ವೆಂಕಟಾಂಬಾದೇವಿಯು ಹೇಳಿದ್ದನ್ನೆಲ್ಲಾ ಕಿವಿಗೊಟ್ಟು ಕೇಳಿದ ಗೋಪಮ್ಮ-ಕಮಲಾದೇವಿಯರು ಆನಂದಿಸಿದರು. ಮಗನ ಅಭ್ಯುದಯದಿಂದ ಆ ತಾಯಿಯ ಹೃದಯವರಳಿತು. ಮೂವರೂ ಇದೇ ವಿಚಾರ ಬಹುಹೊತ್ತು ಮಾತಾನಾಡುತ್ತಿದ್ದು ನ ಮನೆಗೆಲಸದತ್ತ ಗಮನಹರಸಿದರು.