|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೩೨. ತೇಜಸ್ವೀ ತರುಣ!

ಪರಮಪಾವನೆಯಾದ ವೈಫ್‌ಯು ಭರದಿಂದ ಹರಿಯುತ್ತಿದ್ದಾಳೆ. ಸಳಗಳನೆ ಮಂಜುಳನಿನಾದಗೈಯುತ್ತಿರುವ ವೈಘಾನದಿಯು, ಕಂಕಣದಿಂಚರ, ಕಾಲೆಜ್ಜೆಯ ಝಣತ್ಕಾರ, ವೈಯ್ಯಾರ, ಹಾವಭಾವ, ವಿಲಾಸಗಳಿಂದ ಯುವಕರ ಮನಸೆಳೆಯುವ ಮುಗ್ಧ ತರುಣಿಯಂತೆ ಸಕಲರ ಕಣ್ಮನಗಳನ್ನಾಕರ್ಷಿಸುತ್ತಿದ್ದಾಳೆ ! ಶುಭ್ರವಾದ ಸೋಪಾನ ಪಂಕ್ತಿ, ಮಧ್ಯೆ ಮಧ್ಯೆ ಶಿಲಾಮಂಟಪಗಳಿಂದ ಶೋಭಾಯಮಾನವಾದ ಇಕ್ಕೆಲಗಳನ್ನು ಭರದಿಂದ ತುಂಬಿ ಹರಿಯುತ್ತಿರುವ ಆ ತರಂಗಿಣಿಯ ಗತಿ ರಮಣೀಯವಾಗಿದೆ. ಅಲ್ಲಿನ ಸೋಪಾನಪಂಕ್ತಿ, ಶಿಲಾಮಂಟಪದಲ್ಲಿ ಕುಳಿತು ಮಧುರೆಯ ವಿದ್ಯಾಪೀಠದ ಅನೇಕ ತರುಣ ವಿದ್ಯಾರ್ಥಿಗಳು ಸಾಯಂಸಂಧ್ಯೆಯಲ್ಲಿ ಆಸಕ್ತರಾಗಿದ್ದಾರೆ. 

ಶಿಲಾಮಂಟಪವೊಂದರಲ್ಲಿ ಸರ್ವಾಂಗಸುಂದರ ಭವ್ಯಾಕಾರದ ವ್ಯಕ್ತಿಯೊಂದು ನಿಮೀಲಿತಾರ್ಧನಯನದಿಂದ ಗಾಯತ್ರೀ ಜಪಾಸಕ್ತವಾಗಿ ಕುಳಿತಿದೆ. ಎಲ್ಲರ ಚಿತ್ತವನ್ನೂ ಸೂರೆಗೊಳ್ಳುವ ನವಲಾವಣ್ಯಯೌವನಪೂರ್ಣ ಸ್ವರ್ಣಕಾಂತಿಯಿಂದ ಕಂಗೊಳಿಸುವ ಆ ವ್ಯಕ್ತಿ ಪದ್ಮಾಸನಾಸೀನವಾಗಿದೆ. ಲೋಕವಿಲೋಕನನಾದ ಭಗರ್ವಾ ಸೂರನು ನಾನು ಇನ್ನೇನು ಅಸ್ತಾದ್ರಿಯನ್ನು ಸೇರಲಿರುವೆನು ! ಮತ್ತೆ ಉದಯಿಸುವವರಿಗೆ ನನ್ನೆಲ್ಲಾ ಕಾಂತಿ ಸಂತತಿಯನ್ನೂ ನನಗೆ ಪ್ರಿಯನಾದ ಈ ವ್ಯಕ್ತಿಯಲ್ಲಿ ಕೇಂದ್ರೀಕರಿಸಿ ಹೋಗುತ್ತೇನೆ. ಎಂದು ನಿಶ್ಚಯಿಸಿಯೋ ಎಂಬಂತೆ ಕೆಂಗಿರಣನು ತನ್ನ ಹೊಂಗಿರಣಗಳನ್ನು ಆ ವ್ಯಕ್ತಿಯಮೇಲೆ ಪ್ರಸರಿಸುತ್ತಿದ್ದಾನೆ ! ಮೊದಲೇ ಸ್ವರ್ಣವರ್ಣದಿಂದ ಬೆಡಗುಗೊಂಡ ಆ ವ್ಯಕ್ತಿಯ ದೇಹಸೌಂದರ್ಯ ದಿನಮಣಿಯ ಹೊಂಬಿಸಿಲಿನ ದೀಪ್ತಿಯಿಂದ ಮತ್ತಷ್ಟು ತೇಜೋಮಯವಾಗಿ ತಪ್ತಕಾಂಚನಸಂಕಾಶವಾಗಿ ಬೆಳಗುತ್ತಿದೆ. 

ತೇಜಃಪುಂಜವಾದ ಮುಖಕಮಲ, ಸಂಪಿಗೆಯ ಮೊಗ್ಗಿನಂತಹ ನಾಸಿಕ. ಅದಕ್ಕೆ ಹೊಂದುವ ಕಿವಿಗಳು, ಶುಭ್ರವಾದ ದಂತಪಂಕ್ತಿ, ಮಿಂಚುವ ಕಂಗಳು, ಹವಳದಕುಡಿಯಂತೆ ಮಿರುಗುವ ಅಧರ, ನೀಲವರ್ಣದ ಮನೋಹರ ಶಿಖೆ, ವಿಸ್ತಾರವಾದ ಬಾಹುಗಳು, ವಿಶಾಲ ವಕ್ಷಸ್ಥಳ, ನಿಮ್ನನಾಭಿ, ಸಿಂಹಕಟಿ, ವ್ಯಾಯಾಮ-ಸಾಧನೆಗಳಿಂದ ಹುರಿಗಟ್ಟಿ ಪುಷ್ಟವಾದ ದೇಹದ ಮಾಟ, ಅಗಲವಾದ ಫಾಲಪ್ರದೇಶದಲ್ಲಿ ಶ್ರೀಗಂಧದಿಂದ ತಿದ್ದಿ ಹಚ್ಚಿದ ಊರ್ಧ್ವಪುಂಡ್ರ ಅಕ್ಷತೆಗಳು, ದ್ವಾದಶನಾಮ, ತುಳಸೀಮಾಲೆ, ಕಿವಿಗಳಲ್ಲಿ ಕರ್ಣಕುಂಡಲಗಳು, ಬಲಕರದಲ್ಲಿ ಸುವರ್ಣಕಂಕಣ, ಪಾಂಡುರವರ್ಣದ ಯಜ್ಯೋಪವೀತ, ಕೇಸರಿ-ಹಸಿರು ಬಣ್ಣದ ರೇಷ್ಮೆಯವಸ್ತ್ರ - ಉತ್ತರೀಯಗಳಿಂದ ದೇದೀಪ್ಯಮಾನವಾಗಿರುವ ಆ ತೇಜಸ್ವಿಯ ವದನಾರವಿಂದವು ವೀಣಾಪಾಣಿಯ ರಂಗಸ್ಥಳದಂತೆ, ಚಂದ್ರಿಕೆಯ ಚೆಲುವನ್ನು ನಾಚಿಸುವ ಮಂದಹಾಸದಿಂದ ಬಂಧುರವಾಗಿದೆ. ಸಂದ್ಯೋಪಸ್ಥಾನ ಕೃಷ್ಣಾರ್ಪಣಪೂರ್ವಕ ಸಂಧ್ಯಾವಂದನೆಯನ್ನು ಪೂರೈಸಿ ಮೆಲ್ಲನೆ ಮೇಲೆದ್ದು ನಿಂತ ಆ ವ್ಯಕ್ತಿಯೇ ನಮ್ಮ ಕಥಾನಾಯಕನಾದ ವೇಂಕಟನಾಥ ! 

ವೇಂಕಟನಾಥನು ಗೆಳೆಯ ವಿದ್ಯಾರ್ಥಿಗಳೊಡನೆ ಅಂದು ನ್ಯಾಯಶಾಸ್ತ್ರಪಾಠದಲ್ಲಿ ಅಧ್ಯಾಪಕರು ವಿವರಿಸಿದ “ನೀಲೋ ಘಟಃ” ಎಂಬ ವಿಷಯವನ್ನೆತ್ತಿಕೊಂಡು ಅದರ ಸ್ವಾರಸ್ಯವನ್ನೂ, ಅನೇಕ ಪೂರ್ವಪಕ್ಷಗಳನ್ನು ಆಶಂಕಿಸಿ ಸುಂದರ ಶೈಲಿಯಲ್ಲಿ ಪರಿಷ್ಕಾರ ಮಾಡುತ್ತಿರುವಂತೆಯೇ ಬಾಲಕನೋರ್ವನು ಓಡಿಬಂದು - “ಮಾವ, ಅಜ್ಜಿ, ಗುರಣ್ಣ ಮಾವ, ಅತ್ತಿಗೆ-ನಾಟಿ, ಎಲ್ಲರೂ ಊರಿನಿಂದ ಬಂದಿದ್ದಾರೆ. ಅಮ್ಮ ನಿನ್ನನ್ನು ಕರೆತರಲು ಕಳಿಸಿದ್ದಾಳೆ” ಎಂದನು. ವೇಂಕಟನಾಥನ ಮುಖವರಳಿತು, ತುಟಿಯಂಚಿನಲ್ಲಿದರಹಾಸ ಮಿನುಗಿತು. ಮನೆಗೆ ಹೋಗಿಬರುವುದಾಗಿ ಸಮವಯಸ್ಕರಿಗೆ ತಿಳಿಸಿ “ಬಾ ನಾರಾಯಣ, ಮನೆಗೆ ಹೋಗೋಣ” ಎಂದು ಆ ಬಾಲಕನ ಭುಜದ ಮೇಲೆ ಕರವಿರಿಸಿ ಅವನೊಡನೆ ಹೊರಟನು.