|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೩೧. ತ್ರಿವೇಣೀಸಂಗಮ

ವೇಂಕಟನಾಥನಲ್ಲಿ ತಾರುಣ್ಯವು ಪದಾರ್ಪಣಮಾಡಿತು ! ಹದಿನೇಳು - ಹದಿನೆಂಟರ ಹರೆಯದ ವೇಂಕಟನಾಥನ ಅಂಗಾಂಗಗಳಲ್ಲಿ ತಾರುಣ್ಯವು ತುಂಬಿತುಳುಕುತ್ತಿದ್ದಿತು. ಅವನ ರೂಪ ಅಲೌಕಕವಾಗಿತ್ತು. ಬಂಗಾರದಂತೆ ಹೊಳೆಯುವ ಮೈಕಾಂತಿ, ವ್ಯಾಯಾಮ, ಯೋಗಾಭ್ಯಾಸಗಳಿಂದ ಪರಿಪುಷ್ಟವಾಗಿ ಹುರಿಗಟ್ಟಿದ ಮೈಕಟ್ಟು, ವಿಶಾಲವಾದ ವಕ್ಷಸ್ಥಳ, ತಾವರೆಯಂತೆ ಅರಳಿದ ಕಣ್ಣುಗಳು, ನೀಟಾದ ನಾಸಿಕ, ಹವಳದ ಕುಡಿಯಂತಿರುವ ತುಂಬುತುಟಿಗಳು. ಚಂದ್ರಿಕೆಯನ್ನು ನಾಚಿಸುವ ಹೊಳೆವ ದಂತಪಂಕ್ತಿ, ವಿಸ್ತಾರವಾದ ಫಾಲಪ್ರದೇಶ, ಗಿರಿಶಿಖರದಂತಿರುವ ಭುಜಪ್ರದೇಶ, ನೀಳ ತೋಳುಗಳು, ಮಂದಹಾಸದ ಬೆಳದಿಂಗಳಿನಿಂದ ಬೆಳಗುವ, ಪಾಂಡಿತ್ಯ-ಪ್ರತಿಭೆಗಳನ್ನು ಹೊರಸೂಸುವ ಸುಂದರವಾದ ಮುಖ, ಮನಮೋಹಕ ರೂಪಲಾವಣ್ಯ, ಇಂತು ತೇಜಃಪುಂಜ ಭವ್ಯಾಕೃತಿಯ ವೇಂಕಟನಾಥ ದೇವಲೋಕದ ಸೌಂದರ್ಯಸಾರವೆಲ್ಲವೂ ಒಟ್ಟಾಗಿ ಸೇರಿ ಧರೆಗಿಳಿದು ಬಂದ ನವಮನ್ಮಥನಂತೆ ಕಂಗೊಳಿಸುತ್ತಿದ್ದನು ! ಶ್ರೀವೆಂಕಟನಾಥರ ಸೌಂದರವನ್ನು ಶ್ರೀರಾಘವೇಂದ್ರವಿಜಯದ ೧೬ ನೇ ಪದ್ಯದಿಂದ ೩೬ ನೇ ಪದ್ಯದವರೆಗೆ ಸುಂದರವಾಗಿ ಹೀಗೆ ವರ್ಣಿಸಿದ್ದಾರೆ. 

ಸಕಲ ವಿದ್ಯೆಗಳಿಗಭಿಮಾನಿನಿ ಚತುರವದನನ ಪಟ್ಟದ ರಾಣಿ, ವೀಣಾಪಾಣಿ ಸರಸ್ವತಿಯು ವೇಂಕಟನಾಥರಲ್ಲಿ ಸನ್ನಿಹಿತಳಾದಳು, ಅದರಿಂದ ಅವನಲ್ಲಿ ವಿದ್ಯೆಯ ಕಲೆಯು ಅಭಿವೃದಿಸಿತು. ಕಮಲಸಂಭವರ ಸನ್ನಿಧಾನದಿಂದ ಮುಖದಲ್ಲಿ ಬ್ರಹ್ಮವರ್ಚಸ್ಸು ವೃದ್ಧಿಸಿತು. ಸರಸ್ವತಿಯು ನಾಲಗೆಯಲ್ಲಿನೆಲೆಸಿದ್ದರಿಂದ ಚತುರತೆಯ ಕಳೆ ತಾಂಡವಿಸಿತು. ವೇಂಕಟನಾಥನಲ್ಲಿ ಬ್ರಹ್ಮ -ಮನ್ಮಥರಿಗೆ ಪಿತನಾದ ನಾರಾಯಣನು ವಿಶೇಷ ಸನ್ನಿಧಾನವಿಟ್ಟು ವಿಹರಿಸುತ್ತಿದ್ದನು. ಇಂತು ಸರಸತಿಸಹಿತವಾದ ಬ್ರಹ್ಮ ದೇವರು ವೇಂಕಟನಾಥನ ಮುಖದಲ್ಲಿ ನೆಲೆಸಿರುವುದನ್ನು ಕಂಡು ಮನ್ಮಥನಿಗೆ ಅಸೂಯೆಯುಂಟಾಯಿತು. 'ನನ್ನ ಭೂವಿಲಾಸದಿಂದ ಮಾತಾಪಿತೃಗಳ ಸಂಗಮದಿಂದ ಜನಿಸಿದ ವೇಂಕಟನಾಥನಲ್ಲಿ ವಾಸಿಸಲು ನಾನೇ ಅರ್ಹ ! ಆದರೆ ನನಗಿಂತ ಮೊದಲೇ ನನ್ನ ಅಣ್ಣ ಬ್ರಹ್ಮದೇವ, ಅಲ್ಲಿನೆಲೆಸಿಬಿಟ್ಟಿದ್ದಾನೆ. ಇದನ್ನು ನಾನು ಸಹಿಸಲಾರೆ ! ಆದ್ದರಿಂದ ನಾನೂ ರತಿಸಹಿತನಾಗಿ ವೇಂಕಟನಾಥನಲ್ಲಿ ವಾಸಿಸುತ್ತೇನೆ' ಎಂದು ಯೋಚಿಸಿ ಮಾರನು ಸುಕುಮಾರ ಸುಂದರ ಶರೀರದ ವೇಂಕಟನಾಥನಲ್ಲಿ ರತಿಸಹಿತನಾಗಿ ವಾಸಿಸಿದನು ! ತಾರುಣ್ಯದಲ್ಲಿ ಅಡಿಯಿಟ್ಟ ವೇಂಕಟನಾಥ ಅಲೌಕಿಕ ಸೌಂದರ್ಯದಿಂದ ಕಂಗೊಳಿಸಿದನು.

ವೇಂಕಟನಾಥನ ಎರಡು ಕಣ್ಣುಗಳು ಮೀನಿನಂತೆ ದೀರ್ಘವಾಗಿದ್ದವು, “ವಿದ್ಯೆಯನ್ನು ಗ್ರಹಿಸುವುದರಲ್ಲಿ ವೇಂಕಟನಾಥ ಸಮರ್ಥನಾಗಿದ್ದಾನೆ. ಈಗಾಗಲೇ ಅವನ ವಾಣಿಯಲ್ಲಿ ಸರಸ್ವತಿಸಹಿತನಾದ ಬ್ರಹ್ಮದೇವನು ವಾಸಿಸುತ್ತಿದ್ದಾನೆ. ಇವರಿಬ್ಬರೂ ನನಗೆ ಪ್ರೀತ್ಯಾಸ್ಪದರು. ಹಿಂದೆ ನಾನು ಎರಡು ಬಾರಿ ಮತ್ಯಾವತಾರ ತಾಳಿದ್ದೆನು. ಈಗ ಬ್ರಹ್ಮ ಮತ್ತು ವೇಂಕಟನಾಥರಿಗೆ ಏಕಕಾಲದಲ್ಲಿ ವೇದಾದಿ ಸಚ್ಛಾಸ್ತ್ರಗಳನ್ನು ಉಪದೇಶಿಸುತ್ತೇನೆ” ಎಂದು ಯೋಚಿಸಿದ ಶ್ರೀನಾರಾಯಣನು ಎರಡು ಮೀನ ರೂಪ ತಾಳಿದನು. ಅದೇ ನಮ್ಮ ವೇಂಕಟನಾಥನ ಎರಡು ಕಣ್ಣುಗಳು ! ಎಂದು ಸಜ್ಜನರು ತರ್ಕಿಸುತ್ತಿದ್ದರು. ನವತಾರುಣ್ಯವೆಂಬ ರಂಗಮಂಚದಲ್ಲಿ ಶೋಭಿಸುವ ವೇಂಕಟನಾಥರ ಸುಂದರ-ಮನೋಹರ ಕಪೋಲಗಳಲ್ಲಿ ಕೋಮಲ ಬಾಲಾಲಕಗಳು (ಮೃದುವಾದ ಎಳೆಗೂದಲುಗಳು) ಒಡಮೂಡುತ್ತಿದ್ದವು. ಆದರಿಂದ ಅವನ ವದನಾರವಿಂದವು ಅಂದ-ಚಂದಗಳಿಂದ ಕಂಗೊಳಿಸುತ್ತಿತ್ತು. ಕವಿಗಳು ಮುಖವನ್ನು ಚಂದ್ರಬಿಂಬಕ್ಕೆ ಹೋಲಿಸುವರು. ವೇಂಕಟನಾಥನ ವಿಷಯದಲ್ಲಿ ಅದು ಸರಿಹೊಂದುವುದಿಲ್ಲ. ಏಕೆಂದರೆ ಚಂದ್ರಮಂಡಲದಲ್ಲಿ ಒಂದೆಡೆ ಮಾತ್ರ ಕಪ್ಪಾದ ಕಳಂಕವಿದೆ. ವೇಂಕಟನಾಥನ ಎರಡು ಕಪೋಲಗಳಲ್ಲಾದರೋ ನವಕೋಮಲ ರೋಮರಾಜಿಗಳು ಬೆಳಗುತ್ತಿವೆ. ಚಂದ್ರನ ಬಿಂಬದಂತಿವನ ಕಪೋಲದ್ವಯವು ಸುಂದರವಾಗಿದೆ. ಆದ್ದರಿಂದ ಕವಿಗಳು ಹೇಳುವ ಸಾದೃಶ್ಯ ಸರಿಯಲ್ಲ ಎಂದು ನೋಡಿದವರು ಭಾವಿಸುತ್ತಿದ್ದರು. ವೆಂಕಟನಾಥನ ಮೀಸೆಯ ಉಭಯಪಾರ್ಶ್ವದಲ್ಲಿ ಹರಡಿರುವ ಕಾಂತಿಯ ಎರಡುಸಾಲು ಮನೋಹರವಾಗಿತ್ತು ಅವನ ಮೀಸೆಯು ಎರಡು ಕಬ್ಬಿಣದ ಸರಪಳಿಗಳಂತೆ ಮಿನುಗುತ್ತಿದ್ದವು, ಅವರ ಬಾಯಿ ಸುವರ್ಣಭಾಂಡೆಯಂತಿತ್ತು. ಅದರಲ್ಲಿ ಲೋಕವಿಖ್ಯಾತವಾದ ಮಧ್ವಶಾಸ್ತ್ರಾದಿ ವಿವಿಧ ಶಾಸ್ತ್ರನಿಧಿಯು ವಿರಾಜಿಸುತ್ತಿತ್ತು. ಅದನ್ನು ನೋಡಿದರೆ ವೇಂಕಟನಾಥನ ಬಾಯಿಯೆಂಬ ಚಿನ್ನದ ಪಾತ್ರೆಯಲ್ಲಿ ವಿಖ್ಯಾತಶಾಸ್ತ್ರನಿಧಿಯನ್ನಿಟ್ಟು ಮೀಸೆಗಳ ಕಾಂತಿಸಾಲೆಂಬ ಎರಡು ಸರಪಳಿಗಳಿಂದ ಕಟ್ಟಿ ತೂಗಿಬಿಟ್ಟಂತೆ ಕಾಣುತ್ತಿತ್ತು ! 

ಬ್ರಹ್ಮದೇವರು ವೇಂಕಟನಾಥನನ್ನು ಸೃಜಿಸುವಾಗ ತನ್ನೆಲ್ಲ ಪ್ರತಿಭೆಗಳನ್ನೂ ವಿನಿಯೋಗಿಸಿ ಈತನ ಮುಖ ಚಂದ್ರನಂತಿರಬೇಕೆಂದು ನಿರ್ಧರಿಸಿ ಜಿಂಕೆಯ ಕಳಂಕ ಸಹಿತನಾಗಿದ್ದ ಚಂದ್ರನ ಅರ್ಧಭಾಗದಿಂದ ವೇಂಕಟನಾಥನ ಅರ್ಧಚಂದ್ರಾಕೃತಿಯ ಹಣೆಯನ್ನೂ ಉಳಿದ ಕಳಂಕರೇಖಾಯುಕ್ತವಾದ ಇನ್ನರ್ಧಭಾಗದಿಂದ ವೇಂಕಟನಾಥನ ಹುಬ್ಬಿನ ಬಳ್ಳಿಗಳನ್ನೂ (ಕಪ್ಪುತಿಲಕದಂತೆ) ರಚನೆ ಮಾಡಿದರು. ಶ್ರುತಿಗಳು ಸತ್ವಗುಣವನ್ನು ಬೆಳಗೂ, ರಜೋಗುಣವನ್ನು ಕೆಂಪಗೂ, ತಮೋಗುಣವನ್ನು ಕಪ್ಪಗೂ ಬಣ್ಣಿಸುವುವು. ಕಣ್ಣು ಮತ್ತು ಕೆಳತುಟಿಗಳು ಕೆಂಪಾಗಿರುವುದು ಸೌಂದರ್ಯದ ಲಕ್ಷಣವಾಗಿ ಕವಿಗಳು ವರ್ಣಿಸುವರು. ವೇಂಕಟನಾಥನ ಕಣ್ಣು - ತುಟಿಗಳು ಕೆಂಪಾಗಿದ್ದವು. ಅದಕ್ಕೆ ಕಾರಣವನ್ನು ಬೇರೊಂದು ಬಗೆಯಾಗಿ ಸ್ವಾರಸ್ಯವಾಗಿ ಕವಿಗಳು ಇಲ್ಲಿ ವರ್ಣಿಸುವರು. 

ಕೆಂಪಾದ ರಜೋಗುಣವು ವೆಂಕಟನಾಥನ ಶುದ್ಧವಾದ ಮನಸ್ಸನ್ನು ಪ್ರವೇಶಿಸಲು ಪ್ರಯತ್ನಿಸಿತು. ಆದರೆ ವೆಂಕಟನಾಥನ ತಪಸ್ಸಿನ ತೀವ್ರತೆಯ ತಾಪವನ್ನು ಸಹಿಸಲಾಗದೆ, ಮನಸ್ಸನ್ನು ಪ್ರವೇಶಿಸಲು ಅಶಕ್ತವಾಗಿ ಮುಂದೆ ಎಂದಾದರೊಂದು ದಿನ ಅವನ ಮನಸ್ಸನ್ನು ಪ್ರವೇಶಿಸಲು ಇಲ್ಲೇ ಕಾದುಕುಳಿತಿರೋಣವೆಂಬ ದುರಾಶೆಯಿಂದ ಆಚಾರನ ಕಣ್ಣು ಮತ್ತು ತುಟಿಗಳನ್ನು ಆಶ್ರಯಿಸಿತು. ಅಂತೆಯೇ ಮನೋಹರವಾದ ವೇಂಕಟನಾಥನ ನಯನಗಳು ಮತ್ತು ಅಧರಗಳು ಕೆಂಪಾಗಿ ರಾಜಿಸುತ್ತಿವೆ - ಎಂದು ನೋಡಿದವರು ಭಾವಿಸುತ್ತಿದ್ದರು. ವೇಂಕಟನಾಥನ ಬಾಯಿಯೇ ಅಂತಃಪುರ, ನಾಲಿಗೆಯೇ ಹಂಸತೂಲಿಕಾತಲ್ಪ, ಅವನ ದಂತಪಂಕ್ತಿಯೇ ಮುತ್ತಿನ ಮಾಲೆಯಂತೆ ಕಾಣುತ್ತಿತ್ತು. ಅದನ್ನು ಕಂಡವರು ವೇಂಕಟನಾಥನ ಬಾಯೆಂಬ ಅಂತಃಪುರದಲ್ಲಿ, ನಾಲಿಗೆಯೆಂಬ ಹಂಸತೂಲಿಕಾತಲ್ಪದಲ್ಲಿ ಸಾಕ್ಷಾತ್ ವಿದ್ಯಾದೇವಿಯಾದ ಶ್ರೀಸರಸ್ವತಿಯು ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾಳೆ. ಅವಳ ಕಂಠದಲ್ಲಿ ಮುಕ್ತಾಮಾಲಿಕೆ ರಾಜಿಸಿದೆ. ಅದೇ ಆಚಾರನ ದಂತಪಂಕ್ತಿ ಎಂದು ಭಾವಿಸುತ್ತಿದ್ದರು. ಇನ್ನು ಕೆಲ ಪಂಡಿತರು “ವೇಂಕಟನಾಥನು ಮುಂದೆ ಪರಮಹಂಸನಾಗಿ ಸಕಲಶಾಸ್ತ್ರಪಾರಂಗತನಾಗಿ ಅಮೋಘ ವಿಜಯ ಪರಂಪರೆಯನ್ನು ಸಾಧಿಸಬೇಕಾಗಿದೆ. ಆಗ ನಾನು ಅವನ ನಾಲಿಗೆಯಲ್ಲಿ ಸದಾ ನರ್ತಿಸಬೇಕಾಗಿದೆ. ಮುಂದೆ ನನಗೆ ವಿಶ್ರಾಂತಿಯೇ ದೊರಕುವುದಿಲ್ಲ. ಆದ್ದರಿಂದ ಅಲ್ಲಿಯವರೆಗೆ ಇವನ ರಸನಾಯೆಂಬ ಹಂಸತೂಲಿಕೆಯಲ್ಲಿ ಮಲಗಿ ವಿಶ್ರಾಂತಿ ಪಡೆಯೋಣವೆಂದು ನಿರ್ಧರಿಸಿ ವೀಣಾಪಾಣಿಯು ವೇಂಕಟನಾಥನ ನಾಲಿಗೆಯೆಂಬ ಹಂಸತೂಲಿಕೆಯಲ್ಲಿ ಮಲಗಿದ್ದಾಳೆ !” ಎಂದು ಭಾವಿಸಿದರಂತೆ ! 

ಕನ್ನಡಕುಲಚೂಡಾಮಣಿಯಾದ ವೇಂಕಟನಾಥನ ಎರಡು ಕಿವಿಗಳು ಅತಿಮನೋಹರವಾಗಿದ್ದವು. ಗುಂಡಾದ ರಂಧ್ರದಿಂದ ಬೆಡಗುಗೊಂಡ ಅವನ ಕಿವಿಗಳನ್ನು ಭಾವುಕರು ಶ್ರೀಲಕ್ಷ್ಮೀಮಂತ್ರದ ಬೀಜಾಕ್ಷರವೆಂದು ಬಣ್ಣಿಸುತ್ತಿದ್ದರು. ಅವನಲ್ಲಿ ಗೌರವತಾಳಿದ ಚತುರರಾದ ದ್ರಾವಿಡಭೂಸುರರು ಅವನ ಎರಡು ಕಿವಿಗಳೂ ದ್ರಾವಿಡ ಭಾಷೆಯ ಶ್ರೀಕಾರ-ಓಂಕಾರಗಳಂತಿವೆಯೆಂದು ಹೇಳುತ್ತಿದ್ದರು. ಆಂಧ್ರರು, ತಮಿಳರು ಕ್ರಮವಾಗಿ ಆಚಾರರ ಕಿವಿಗಳು ತೆಲುಗು-ತಮಿಳು ಶ್ರೀಕಾರ-ಓಂಕಾರಗಳಂತಿವೆಯೆಂದು ಹೇಳುತ್ತಾ ತಮಗೂ ವೇಂಕಟನಾಥ ಸೇರಿದವನೆಂದು ಸಂಬಂಧವನ್ನು ಈ ರೀತಿ ಕಲ್ಪಿಸಿಕೊಂಡು ಹೆಮ್ಮೆಯಿಂದ ಹರ್ಷಿಸುತ್ತಿದ್ದರಂತೆ. 

ವೇಂಕಟನಾಥನ ಮುಖಕಾಂತಿಯೆಂಬ ಸಮುದ್ರದಲ್ಲಿರತಿಯೊಡನೆ ವಿಹರಿಸುತ್ತಿದ್ದ ಮನ್ಮಥನೆಂಬ ಗಜಶ್ರೇಷ್ಠ ಲೀಲೆಯಿಂದ ಮೇಲೆತ್ತಿದ ಸೊಂಡಲುಗಳಂತೆ ವೆಂಕಟನಾಥನ ಎರಡು ಹುಬ್ಬುಗಳು ರಾರಾಜಿಸುತ್ತಿತ್ತು ! ವೆಂಕಟನಾಥನ ಸತ್ವಗುಣಪೂರ್ಣವಾದ ಮನಸ್ಸು, ಶ್ರೀಲಕ್ಷ್ಮೀಪತಿಯಾದ ನಾರಾಯಣನ ಕೇಳಿಗೃಹವೆಂದೂ ಅವನ ಮನಸ್ಸು ಸರ್ವದಾ ಶ್ರೀಲಕ್ಷ್ಮೀನಾರಾಯಣನಲ್ಲೇ ಆಸಕ್ತವಾಗಿತ್ತು ಎಂಬ ಭಾವಸೂಚಕವಾದ ಕವಿಗಳ ವರ್ಣನಾವೈಖರಿ ನೋಡಿ ಎಷ್ಟು ಹೃದಯಂಗಮವಾಗಿದೆ. 

ವೇಂಕಟನಾಥನ ಹೃದಯ ವಿಸ್ತಾರವಾಗಿತ್ತು. ಅದು ಸಮುದ್ರದಂತಿತ್ತು. ಕ್ಷೀರಸಾಗರಕುವರಿಯಾದ ರಮೆಯೊಡನೆ ವಿಹರಿಸುವ ಶ್ರೀಹರಿಯ ಅಂತಃಪುರದಂತೆ ಅದು ಶೋಭಿಸುತ್ತಿತ್ತು. ಆಚಾರರ ಮನಸ್ಸೇ ಅಂತಃಪುರ ! ಅಂತಃಪುರವೆಂದಮೇಲೆ ಅದಕ್ಕೆ ದೊಡ್ಡಬಾಗಿಲು, ಬಾಗಿಲನ್ನು ಬಂಧಿಸಲು ಸರಪಳಿ, ಕೀಲಿಗಳು ಅವಶ್ಯಕವಷ್ಟೇ ? ನಿಜ, ವೆಂಕಟನಾಥನ ಮನಸ್ಸೇ, ಅಂತಃಪುರ, ವಿಸ್ತಾರವಾದ ಹೃದಯವೇ ಬಾಗಿಲು, ಎದೆಯ ಮೇಲೆ ಬೆಳೆದಿರುವ ರೋಮರಾಜಿಯೇ ಸರಪಳಿ, ಅವನ ಎರಡು ಸ್ತನಗಳೇ ಕೀಲಿಗಳು ! ಹೀಗೆ ಅವನ ಹೃದಯದಲ್ಲಿ ಶ್ರೀಲಕ್ಷ್ಮೀರಮಣನು ವಿಹರಿಸುತ್ತಿದ್ದಾನಂತೆ ! ವೇಂಕಟನಾಥನ ನಾಸಿಕೆಯ ಕಾಂತಿಯೇ ಗಂಗಾನದಿ, ಫಾಲಪ್ರದೇಶ ಕಾಂತಿಯೇ ಸಮುದ್ರ. ಎರಡು ಹುಬ್ಬುಗಳ ಮಧ್ಯಭಾಗವೇ ಗಂಗಾಸಮುದ್ರ ಸಂಗಮಸ್ಥಾನ ! ಮಹಾಪುರುಷಲಕ್ಷಣರೂಪವಾದ, ಅಲ್ಲಿರುವ ದುಂಡಾದ ಸುಳಿರೇಖೆಯೇ ಗಂಗಾಸಮುದ್ರ ಸಂಗಮಸ್ಥಾನದ ಮಹಾಸುಳಿ, ಅದರ ಎರಡು ಪಾರ್ಶ್ವದಲ್ಲಿರುವ ಎರಡು ಹುಬ್ಬುಗಳೇ ಗಂಗಾ-ಸಮುದ್ರಗಳ ಭೇದವನ್ನು ತಿಳಿಸುವ ಸುಮುದ್ರದ ಎರಡು ದಂಡೆಗಳು ! ಹೀಗೆ ವೇಂಕಟನಾಥನ ನಾಸಿಕೆ, ಹಣೆ, ಹುಬ್ಬುಗಳ ಮಧ್ಯಭಾಗ ಹಾಗೂ ಭೂಗಳು ರಾಜಿಸುತ್ತಿದ್ದವು. ಅನಂತ ಕಲ್ಯಾಣಗುಣಗಳಿಗೆ ಶ್ರೀಹರಿಯೇ ಮುಖ್ಯಾಶ್ರಯನು. ಅವನ ಸಕಲಲೋಕಗಳಲ್ಲಿಯೂ ವ್ಯಾಪ್ತಸ್ವರೂಪನಾಗಿದ್ದಾನೆ. ಇಂಥ ಶ್ರೀಹರಿಯನ್ನು ತನ್ನ ಹೃದಯದಲ್ಲಿ ಸಾಕ್ಷಾತ್ಕರಿಸಿಕೊಳ್ಳಲು ವೆಂಕಟನಾಥನು ಅಪೇಕ್ಷಿಸಿದನು. ಅಂತೆಯೇ ಅಂತಹ ಪರಮಾತ್ಮನನ್ನು ಹೃದಯದಲ್ಲಿ ಸ್ಥಾಪಿಸಿಕೊಳ್ಳಲು ಸಹಾಯಕವಾಗಲೆಂದು ಕ್ರಮವಾಗಿ ಆಚಾರನ ಹೃದಯವು ವಿಸ್ತಾರವಾಗಿ ಶೋಭಿಸಿತು. 

ವೇಂಕಟನಾಥನ ಸುಂದರವದನವು ವಿಕಸಿತಪುಷ್ಪಕಾಂತಿಯಿಂದ ಶೋಭಿಸುತ್ತಿತ್ತು. ಅದನ್ನು ಕಂಡು ಕೆಲಕವಿಗಳು ವೇಂಕಟನಾಥನ ಮುಖವು ಕಮಲದಂತಿರುವುದರಿಂದ ಆಚಾರ್ಯನ ಕಂಠವನ್ನು ಕಮಲನಾಳವೆಂದೂ, ಮತ್ತೆ ಕೆಲವರು ಅವನ ಸೌಂದರ್ಯ ಮಾಧುರದಿಂದ ಮುಗ್ಧರಾಗಿ ಅವನ ಮುಖವು ಹೊಳೆಯುವ ಕನ್ನಡಿಯಂತಿರುವುದರಿಂದ ಅವನ ಕಂಠವು ಮುಖಕನ್ನಡಿಯ ಹಿಡಿಕೆಯಂತೆ ರಾಜಿಸುವುದೆಂದು ಬಣ್ಣಿಸುತ್ತಿದ್ದರು. 'ನಮ್ಮ ವೇಂಕಟನಾಥನು ಶ್ರೀಹರಿಗೆ ಪ್ರೀತಿಪಾತ್ರ, ಮಹಿಮಾಶಾಲಿ, ಇವನು ನನ್ನ ತಂದೆ ಶ್ರೀಹರಿಯ ಸಂಕಲ್ಪದಂತೆ ಮುಂದೆ ಮೂರುಲೋಕದ ಸಜ್ಜನರನ್ನೂ ರಕ್ಷಿಸುವನು. ಆದ್ದರಿಂದ ಇವನು ತ್ರಿಲೋಕ ಸಂರಕ್ಷಕನೆಂದು ಜಗತ್ತಿಗೆ ತಿಳಿಸಲು ಇವನ ಉದರದಲ್ಲಿ ತ್ರಿವಳಿ (ಮೂರುರೇಖೆ)ಯನ್ನು ರಚಿಸುತ್ತೇನೆ' ಎಂದು ನಿರ್ಧರಿಸಿ ಬ್ರಹ್ಮದೇವರು ನಿರ್ಮಿಸಿದ ಮೂರುರೇಖೆಗಳೇ ಆಚಾರನ ಉದರದ ತ್ರಿವಳಿಯಾಗಿ ರಾರಾಜಿಸುತ್ತಿತ್ತು ! ವೇಂಕಟನಾಥನ ಕಂಠವು ಶಂಖದಂತೆ ಬೆಳಗುತ್ತಿತ್ತು. ಶಂಖವು ಆಚಾರನ ಕಂಠವನ್ನು ಆಶ್ರಯಿಸಲು ಒಂದು ಮಹತ್ತಾದ ಕಾರಣವಿದೆ. ಅದೇನೆಂದರೆ ಶಂಖವು ಸಮುದ್ರದಲ್ಲಿತ್ತು. ಆಗ ಅದು ಬಹುಕಷ್ಟಗಳಿಗೆ ಗುರಿಯಾಯಿತು ! ಸಮುದ್ರದಲ್ಲಿ ಬಡಬಾನಲವು ಅದನ್ನು ದಹಿಸುತ್ತಿತ್ತು ಅದರಿಂದ ಶಂಖಕ್ಕೆ ಬಹಳ ಬಾಧೆಯಾಗುತ್ತಿತ್ತು. ಮುಂದೆ ಶ್ರೀರಾಮಚಂದ್ರ ಸಮುದ್ರಕ್ಕೆ ಸೇತುವೆ ಕಟ್ಟಿಸಿದ, ಆಗ ಕಪಿವೀರರು ಕಲ್ಲು ಬಂಡೆ, ಪರ್ವತ, ವೃಕ್ಷಗಳನ್ನು ಕಿತ್ತುತಂದು ಸಮುದ್ರಕ್ಕೆ ಎಸೆಯುತ್ತಿದ್ದರು. ಅದರ ಆಘಾತದಿಂದ ಶಂಖಕ್ಕೆ ಬಹು ಕಷ್ಟವಾಯಿತು. ಅದಾದ ಮೇಲೆ ಅಗಸ್ತರು ಸಮುದ್ರವನ್ನು ಪಾನಮಾಡಿದ್ದರಿಂದಲೂ ತೊಂದರೆಯಾಯಿತು. ಮತ್ತೊಮ್ಮೆ ದೇವಾಸುರರು ಸೇರಿ ಮಂದರಪರ್ವತದಿಂದ ಸಮುದ್ರಮಥನ ಮಾಡಿದರು. ಆಗ ಶಂಖಕ್ಕೆ ಉಂಟಾದ ತೊಂದರೆ ಅವರ್ಣನೀಯ ! ಹೀಗೆ ಸಮುದ್ರದಲ್ಲಿದ್ದ ಶಂಖವು ಬಡಬಾನಲದಾಹ, ಬಂಧನ, ಆಘಾತ, ಶೋಷಣೆ, ಮಥನಾದಿಗಳಿಂದ ಕಂಗೆಟ್ಟಿತು, ಮತ್ತೆ ಮತ್ತೆ ಕಷ್ಟಕೊಡುತ್ತಿರುವ ಈ ಸಮುದ್ರದ ಸಹವಾಸವೇ ನನಗೆ ಬೇಡ ! ಯಾವುದಾದರೊಂದು ನಿರ್ಭಯಸ್ಥಳದಲ್ಲಿ ವಾಸಮಾಡುತ್ತೇನೆಂದು ಹುಡುಕುತ್ತಾ ಹೊರಟು ವೇಂಕಟನಾಥನ ಕಂಠವನ್ನು ಕಂಡು ಇದೇ ನನಗೆ ವಾಸಿಸಲು ಸರಿಯಾದ ಸ್ಥಳವೆಂದು ನಿರ್ಧರಿಸಿ ಪ್ರೀತಿಯಿಂದ ವೇಂಕಟನಾಥನ ಕಂಠದಲ್ಲಿ ಆಶ್ರಯ ಪಡೆದು ವಿರಾಜಿಸಿತು ! 

ವೇಂಕಟನಾಥನ ಕಂಗಳೆರಡೂ ಕಮಲಗಳಂತೆ ಕೆಂಪಾಗಿ ರಾಜಿಸುತ್ತಿತ್ತು. ಬ್ರಹ್ಮದೇವರು ಇವನ ಕರವನ್ನು ಕವಿಗಳು ವರ್ಣಿಸುವಂತೆ ನವಚೂತಪಲ್ಲವದಂತೆ ಮಾಡಿದರೆ ಸದಾ ಅರ್ಥಪ್ರದಾನಾದಿನಿರತನಾದ ಇವನ ಕರವು ಕೆಟ್ಟುಹೋಗುವುದು ! ಪಾಪ, ವೆಂಕಟನಾಥನ ಕರಗಳು ಅದನ್ನು ಹೇಗೆ ಸಹಿಸಿಯಾವು ? ನಾನು ಇವನ ಕರಗಳನ್ನು ಎಳೆಮಾವಿನ ಸುಳಿಯಂತೆ ಮಾಡುವುದಿಲ್ಲ ! ಇವನ ಕರಗಳನ್ನು ಕಮಲದಂತೆ ಮಾಡಿ ಬಿಡುತ್ತೇನೆ. ಕಮಲವು ಸರ್ವದಾ ನೀರಿನಲ್ಲಿಯೇ ಹುಟ್ಟಿ ಸದಾ ಜಲಸಂಬಂಧವಿರುವುದರಿಂದ ವೆಂಕಟನಾಥನಕರಗಳನ್ನು ಕಮಲವನ್ನಾಗಿ ಮಾಡಿದರೆ ಸದಾಜಲಸಂಬಂಧವಿರುವುದರಿಂದ ಅವನು ಎಷ್ಟೇ ದಾನ-ಅರ್ತೃಪ್ರದಾನಗಳನ್ನು ಮಾಡಿದರೂ ಕರಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ ! ಎಂದು ಯೋಚಿಸಿ ಅದರಂತೆ ಮಾಡಿದರು. ಆದ್ದರಿಂದಲೇ ವೆಂಕಟನಾಥನ ಕರಗಳು ಕಮಲಗಳಂತೆ ಮೃದುವಾಗಿಯೂ, ಕೆಂಪಾಗಿಯೂ, ಸುಂದರವಾಗಿಯೂ ಕಂಗೊಳಿಸುತ್ತಿದೆ ಎಂದು ಜನರು ಊಹಿಸುತ್ತಿದ್ದರು.321 ವೆಂಕಟನಾಥನು ಸುಮಕೋಮಲ ಸುಂದರಶರೀರಯಾಗಿದ್ದನು. ಅವನ ಪಾದತಳ ಭಾಗವನ್ನು (ಅಂಗಾಲು) ನಿರ್ಮಿಸುವಾಗ ಬ್ರಹ್ಮದೇವರು ಇವನ ಅಂಗಾಲನ್ನು ಕಠಿಣವಾಗಿ, ಗಟ್ಟಿಯಾಗಿ ಮಾಡಿದರೆ ಇವನು ಎಲ್ಲ ಕಡೆ ಕಾಲು ನಡಿಗೆಯಿಂದ ಪ್ರಯಾಣ ಮಾಡುವುದನ್ನು ನಾನು ಸಹಿಸಲಾರೆ. ಆದ್ದರಿಂದ ಇವನು ಮೇನೆ, ಪಲ್ಲಕ್ಕಿ, ಅಂಬಾರಿಗಳಲ್ಲಿ ಸಂಚರಿಸಬೇಕು. ಅದಕ್ಕಾಗಿ ನಾನು ಇವನ ಅಂಗಾಲುಗಳನ್ನು ಮೃದುವಾಗಿ ಮಾಡುತ್ತೇನೆಂದು ನಿರ್ಧರಿಸಿದರು. ಆದುದರಿಂದಲೇ ವೆಂಕಟನಾಥನ ಅಂಗಾಲುಗಳು ಅತಿಮೃದುವಾಗಿದ್ದವು. 

ಹೀಗೆ ನಮ್ಮ ವೇಂಕಟನಾಥನು ರೂಪ-ಲಾವಣ್ಯ-ಸೌಂದರ್ಯವಿರಾಜಿತನಾಗಿ, ನವತಾರುಣ್ಯದಿಂದ ಲೋಕಮೋಹಕನಾಗಿ ಶೋಭಿಸುತ್ತಿದ್ದನು. ವೇದ-ವೇದಾಂತ ವ್ಯಾಕರಣ-ಮೀಮಾಂಸಾ-ಸಾಹಿತ್ಯ-ವೇದಾಂತ-ಸಂಗೀತವಿದ್ಯೆಗಳೆಂಬ ಗಂಗಾನದಿಯೂ, ಸೌಂದಯ್ಯ-ಲಾವಣ್ಯಗಳೆಂಬ ಸದ್ಗುಣಗಳೆಂಬ ಗುಪ್ತಗಾಮಿನಿ ಸರಸ್ವತಿನದಿಯೂ ಅವನಲ್ಲಿ ಸಂಗಮಿಸಿ ಅವನು ತ್ರಿವೇಣಿಸಂಗಮವಾಗಿ ರಾಜಿಸುತ್ತಿದ್ದನು. ಹೀಗೆ ವೇಂಕಟನಾಥನು ಎಲ್ಲದರಲ್ಲೂ ಎತ್ತರಕ್ಕೆ, ಉತ್ತುಂಗ, ಮೇರುಶೃಂಗದೆತ್ತರಕ್ಕೆ ಬೆಳೆದು, ಪಂಡಿತರು. ವಿದ್ಯಾರ್ಥಿಗಳು ಬಂಧು-ಬಾಂಧವರು, ಸಕಲಸಜ್ಜನರ ಪ್ರೇಮಾದರ-ಗೌರವಗಳಿಗೆ ಪಾತ್ರನಾದನು.