|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೩೦. ಗುರುಕುಲವಾಸ

ಮಧುರೆಯು ಸಿರಿಸಂಪತ್ತು, ವೈಭವ, ಸಕಲವಿದ್ಯೆ-ಕಲೆಗಳಿಗೆ ನೆಲೆವೀಡಾಗಿತ್ತು. ಕನ್ನಡಸಾಮ್ರಾಜ್ಯದ ಮಾಂಡಲೀಕನಾಗಿದ್ದ ವಿಶ್ವನಾಥನಾಯಕ ಅದನ್ನು ಬಹು ಅಭಿವೃದ್ಧಿಗೆ ತಂದಿದ್ದನು. ಈಗ ಕುಮಾರ ಕೃಷ್ಣಪ್ಪನಾಯಕನು ಮಧುರೆಯನ್ನಾಳುತ್ತಿದ್ದನು. ಅವನು ಶ್ರೀವಿಜಯೀಂದ್ರಗುರುಗಳಲ್ಲಿ ವಿಶ್ವನಾಥನಾಯಕನಂತೆಯೇ ತುಂಬಾ ಭಕ್ತಿಶ್ರದ್ಧಾನ್ವಿತನಾಗಿ ಅವರ ಅನುಗ್ರಹಕ್ಕೆ ಪಾತ್ರನಾಗಿದ್ದನು. ಅವನ ಆಡಳಿತದಲ್ಲಿ ಮಧುರೆಯು ಸಿರಿಸಂಪತ್ತು-ಸಂತೋಷಗಳಿಂದ ಕಂಗೊಳಿಸುತ್ತಿತ್ತು. 

ಮಧುರೆಯ ಮುಖ್ಯಬೀದಿಯೊಂದರಲ್ಲಿ ಐದಡಿಯ ಆವರಕಗೋಡೆಯ ಮಧ್ಯೆ ಎರಡಂತಸ್ತಿನ ವಿಶಾಲವಾದ “ವಾಸುದೇವ ನಿಲಯ ತಲೆಯೆತ್ತಿ ನಿಂತಿದ್ದಿತು. ಅದೇ ನಮ್ಮ ಲಕ್ಷ್ಮೀನರಸಿಂಹಾಚಾರ್ಯರಮನೆ, ನಾಲ್ಕಾರು ಕೊಠಡಿಗಳು. ವಿಸ್ತಾರವಾದ ಎರಡು ಹಜಾರ, ಸುಂದರ - ಕಲಾತ್ಮಕ ಪೀಠೋಪಕರಣಗಳು, ದೇವಗೃಹಾದಿಗಳಿಂದ ಆ ಮನೆ ಶೋಭಿಸುತ್ತಿತ್ತು. ಲಕ್ಷ್ಮೀನರಸಿಂಹಾಚಾರರ ಪೂರ್ವಿಕರು ಮಧುರಾಧಿಪತಿಗಳ ನಿಕಟವರ್ತಿಗಳಾಗಿ ತಮ್ಮ ಪರಾಕ್ರಮ-ವಿದ್ಯೆಗಳಿಂದ ನಾಡು-ನುಡಿಗಳ ಸೇವೆ ಮಾಡಿದ್ದರಿಂದ ಲಕ್ಷ್ಮೀನರಸಿಂಹಾಚಾರರಿಗೆ ರಾಜಾಸ್ಥಾನದಲ್ಲಿ ವಿಶೇಷ ಗೌರವವಿತ್ತು. ಅವರು ಆಸ್ಥಾನದ ಮಹಾಪಂಡಿತರಾಗಿ, ಸಂಸ ತ ವಿದ್ಯಾಪೀಠದ ಪ್ರಧಾನಾಧ್ಯಾಪಕರಾಗಿ ತಾರುಣ್ಯದಲ್ಲೇ ಕೀರ್ತಿ-ಪ್ರತಿಷ್ಠೆಗಳನ್ನು ಗಳಿಸಿದ್ದರು. 

ಲಕ್ಷ್ಮೀನರಸಿಂಹಾಚಾರರು ಕಾವೇರಿಪಟ್ಟಣದಿಂದ ಬಂದು ಐದಾರು ದಿನಗಳಾದ ಮೇಲೆ ವೇಂಕಟನಾಥನನ್ನು ವಿದ್ಯಾಪೀಠಕ್ಕೆ ಸೇರಿಸಿದರು ಮತ್ತು ಒಂದು ಶುಭಮೂಹೂರ್ತದಲ್ಲಿ ಮನೆಯಲ್ಲಿ ಸ್ವತಃ ಅವನಿಗೆ ವೇದ, ಕಾವ್ಯ, ನಾಟಕ, ನ್ಯಾಯವೇದಾಂತ ಪಾಠಗಳನ್ನು ಹೇಳಹತ್ತಿದರು. ವೆಂಕಟನಾಥನ ಗುರುಕುಲವಾಸ ಪ್ರಾರಂಭವಾಯಿತು. 

ಸರ್ವಜ್ಞನೂ ನಿಖಿಲವಿದ್ಯಾನಿಧಿಯೂ ಆದ ಶ್ರೀಕೃಷ್ಣಪರಮಾತ್ಮನು ಸಾಂದೀಪಿನ್ಯಾಚಾರರಲ್ಲಿ ವಿದ್ಯಾಭ್ಯಾಸಮಾಡಿದಂತೆ ವೇಂಕಟನಾಥನೂ ಭಾವನವರಲ್ಲಿ ವ್ಯಾಸಂಗ ಮಾಡಿದನು. ಸ್ವಶಾಖಾಯಜುರ್ವೇದವನ್ನು ಸ್ಟೇಚ್ಛೆಯಿಂದಲೇ ಭಾವನವರಲ್ಲಿ ಅಧ್ಯಯನಮಾಡಿದನು. ಬುದ್ಧಿವಂತರಾದ ಅನೇಕ ವಟುಗಳೂ ಅವನ ಜತೆಗೆ ವ್ಯಾಸಂಗಮಾಡುತ್ತಿದ್ದರು. ಆಚಾರರು ಎರಡು, ಐದು, ಹತ್ತು, ಒಮ್ಮೊಮ್ಮೆ ಒಂದೇ ಆವೃತ್ತಿ ಪಾಠ ಹೇಳುತ್ತಿದ್ದರು. ವೇಂಕಟನಾಥ ಅದನ್ನು ಜ್ಞಾಪಕದಲ್ಲಿಟ್ಟುಕೊಂಡು ಗುರುಗಳು ಕೇಳಿದಾಗ ಸುಲಭವಾಗಿ ಒಪ್ಪಿಸುತ್ತಿದ್ದನು.

ಇದರಂತೆ ಅನಧ್ಯಯನಕಾಲದಲ್ಲಿ ವೆಂಕಟನಾಥನು ಸಹಾಧ್ಯಾಯಿಗಳೊಡನೆ “ಮಧ್ವವಿಜಯ, ಉಷಾಹರಣ, ಅಮೃತಾಹರಣಾದಿ” ಕಾವ್ಯಗಳನ್ನು ಓದುತ್ತಿದನು. ಅವನು ಒಂದು ಸಲ ಓದಿದ ಮೇಲೆ ಮತ್ತೆ ಅದನ್ನು ಓದುತ್ತಿರಲಿಲ್ಲ. ಇದನ್ನು ಗಮನಿಸಿದ ಆಚಾರರು ಪಾಠಹೇಳಿದ ಕಾವ್ಯಗಳಲ್ಲಿ ಪರೀಕ್ಷೆಮಾಡಿದಾಗ ಶ್ಲೋಕ, ಅನ್ವಯಾರ್ಥ, ಕ್ರಿಯಾಪದ, ಅಲಂಕಾರ, ತಾತ್ಪರ್ಯ, ವಿಶೇಷವಿಚಾರಗಳೆಲ್ಲವನ್ನೂ ದಡದಡನೆ ಒಪ್ಪಿಸಿ ಗುರುಗಳನ್ನು ಚಕಿತಗೊಳಿಸುತ್ತಿದ್ದನು. ಅವನ ಧಾರಣಾಶಕ್ತಿ ಅಸಾಧಾರಣವಾಗಿದ್ದಿತು. ಅವನ ಸಹಾಧ್ಯಾಯಿಗಳು ಅಹೋರಾತ್ರಿ ಕುಳಿತು ಪದೇ ಪದೇ ಚಿಂತನಮಾಡಿದ್ದರಿಂದ ಅವರ ಬುದ್ದಿಯು ವಿಶದವಾಗಿ ಬೆಳೆಯುತ್ತಿತ್ತು. ಶ್ರೀನಿವಾಸನ ಅನುಗ್ರಹ ತಿಮ್ಮಣ್ಣಾಚಾರರ ಸುಕೃತಫಲದಿಂದ ವೆಂಕಟನಾಥನ ಬುದ್ಧಿಯು ಅತಿಶಯವಾಗಿ ವಿಕಸಿತವಾಯಿತು. 

ವಿದ್ಯಾಪೀಠದ ವಿದ್ಯಾರ್ಥಿಗಳೆಲ್ಲ ಗುಂಪಾಗಿಸೇರಿ ಅನೇಕ ಕ್ರೀಡೆಗಳನ್ನಾಡುತ್ತಿದ್ದರು. ಅದನ್ನು ನೋಡಿ ವೆಂಕಟನಾಥನು ಇವರು ಆಟದಲ್ಲಿ ತೋರುವ ಉತ್ಸಾಹಕ್ಕಿಂತ ಅಧಿಕಉತ್ಸಾಹದಿಂದ ನಾನು ತಪಸ್ಸನ್ನೆಸಗುತ್ತೇನೆ” ಎಂದು ಯೋಚಿಸಿ ತಪಸ್ಸಿನ ಅಭ್ಯಾಸಕ್ಕಾಗಿಯೋ ಎಂಬಂತೆ ಸಹಾಧ್ಯಾಯಿಗಳೊಡನೆ ಆಟವಾಡುತ್ತಿದ್ದನು.318 ಒಮ್ಮೆ ಗೆಳೆಯರಾಡುವ ಕ್ರೀಡೆಯನ್ನು ನೋಡಿದರೆ ಸಾಕು ಅದನ್ನು ಅವರಕ್ಕಿಂತ ಚೆನ್ನಾಗಿ ಆಡಿತೋರಿಸುತ್ತಿದ್ದನು. ತುಂಬಿ ಭರದಿಂದ ಹರಿವ ಕೃತಮಾಲಿಕಾ ನದಿಯನ್ನು, ಬಾಣವು ವಾಯುವೇಗದಿಂದ ಗುರಿಮುಟ್ಟುವಂತೆ ಈಜಿ ದಡವನ್ನು ಮುಟ್ಟುತ್ತಿದ್ದನು. ಗುರಿಮುಟ್ಟುವಮಾರ್ಗ ಎರಡುವಿಧ, ಒಂದು ವಕ್ರ, ಮತ್ತೊಂದು ಸರಳ, ವಕ್ರಮಾರ್ಗದಲ್ಲಿ ಹೋದರೆ ಗುರಿಮುಟ್ಟುವುದು ಕೇಶದಾಯಕ, ಸರಳಮಾರ್ಗದಿಂದ ಕೇಶವಿಲ್ಲ. ಫಲವೂ ಕಟ್ಟಿಟ್ಟದ್ದು, ನಾವು ಅರಿಯಬೇಕಾದ ಪರಬ್ರಹ್ಮನನ್ನು ಸರಳವಾದ ಶ್ರವಣ-ಮನನಾದಿಗಳ ದ್ವಾರವೇ ಹೊಂದಬೇಕು. ವಕ್ರಮಾರ್ಗದಿಂದ ಹೋಗಕೂಡದೆಂಬ ಸಾಧನಮಾರ್ಗ ರಹಸ್ಯವನ್ನು ತಿಳಿಸಿಕೊಡಲೋ ಎಂಬಂತೆ ವೇಂಕಟನಾಥನು ನೇರವಾಗಿ ಈಜಿ ನದಿಯನ್ನು ದಾಟಿ ದಡಸೇರಿ ತನ್ನ ಆಶಯವನ್ನು ವ್ಯಕ್ತಪಡಿಸುತ್ತಿದ್ದನು. 

ಇದರಂತೆ ಗೆಳೆಯರು ನದಿಯ ಮರಳಿನ ಮೇಲೆ ಎರಡು ಗುಂಪಾಗಿ “ಗುಡು ಗುಡು” (ಕಬಡಿ ಆಟ) ಕ್ರೀಡೆಯನ್ನಾಡುತ್ತಿದ್ದರು. ಈ ಕ್ರೀಡೆಯಲ್ಲಿ ಉಸಿರು ಬಿಡದೆ 'ಗುಡು ಗುಡು' (ಕಬಡಿ-ಕಬಡಿ)' ಎಂದು ಹೇಳುತ್ತಾ ಪ್ರತಿಪಕ್ಷದವರಿಂದ ತಪ್ಪಿಸಿಕೊಂಡು ಅವರನ್ನು ಸ್ಪರ್ಶಿಸಿ, ಸಿಕ್ಕಿಬಿದ್ದರೂ ಉಸಿರು ಬಿಡದೆ ತನ್ನ ಸ್ಥಳಕ್ಕೆ ಹಿಂದಿರುಗುವುದು ಮುಖ್ಯ, ಇದು ಕಷ್ಟಕರವಾದ ಆಟ, ಪ್ರಾಣಾಯಾಮಾದಿಗಳಲ್ಲಿ ಪರಿಣಿತರಾದವರಿಗೆ ಇದು ಸುಲಭ. ಅದಿಲ್ಲದವರಿಗೆ ಸೋಲು ನಿಶ್ಚಯ, ಈ ಕ್ರೀಡೆಯಲ್ಲಿ ವೇಂಕಟನಾಥ ಪ್ರವೀಣನಾಗಿದ್ದನು. 

ಮುಂದೆ ವೇಂಕಟನಾಥನು ಯತಿಯಾದ ಮೇಲೆ ಮಿತಿ ಇಲ್ಲದಷ್ಟು ಪ್ರಣವವನ್ನು ಜಪಿಸಬೇಕಾಗಿದೆ. ಪ್ರತಿಜಪಕ್ಕೂ ಪ್ರಾಣಾಯಾಮ ಮಾಡಬೇಕು. ಅದು ರೇಚಕ, ಪೂರಕ, ಕುಂಭಕ ಎಂದು ಮೂರು ಬಗೆಯಾಗಿದೆ. ಶ್ವಾಸವನ್ನು ಹೊರಗೆ ಬಿಡುವುದೇ ರೇಚಕ, ಶ್ವಾಸವನ್ನು ಒಳಕ್ಕೆ ತೆಗೆದುಕೊಳ್ಳುವುದು ಪೂರಕ, ಶ್ವಾಸವನ್ನು ಒಳಗೆ ತಡೆದಿಟ್ಟುಕೊಳ್ಳುವುದಕ್ಕೆ ಕುಂಭಕವೆಂದು ಹೆಸರು. ನಾನು ಮುಂದೆ ಮಾಡಬೇಕಾದ ಪ್ರಾಣಾಯಾಮದ ಈ ಎಲ್ಲಾ ಕ್ರಿಯೆಗಳ ಅಭ್ಯಾಸಕ್ಕಾಗಿ ಈ ಆಟವನ್ನು ಆಡುತ್ತೇನೆ ಎಂದಾಲೋಚಿಸಿ ವೇಂಕಟನಾಥನು ಈ ಕ್ರೀಡೆಯನ್ನಾಡುತ್ತಿರುವಂತೆ ಭಾಸವಾಗುತ್ತಿತ್ತು.319 ಹೀಗೆ ವೆಂಕಟನಾಥನ ಎಲ್ಲ ಕ್ರೀಡೆಗಳೂ ಅವನ ಮನಸ್ಸನ್ನು ಪರಬ್ರಹ್ಮನ ಕಡೆಗೆ ಒಯ್ಯಲು ಸಾಧನಗಳಾದ ಆಟವೇ ಆಗಿರುತ್ತಿತ್ತು ! 

ಲಕ್ಷ್ಮೀನರಸಿಂಹಾಚಾರರಿಗೆ ಸಂತಾನವಾಗಿರಲಿಲ್ಲ, ದೈವಾನುಗ್ರಹವೋ ಅಥವಾ ವೆಂಕಟನಾಥನ ಕಾಲ್ಗುಣದಿಂದಲೋ ವೆಂಕಟಾಂಬೆಯು ಗರ್ಭಿಣೆಯಾದಳು. ದಂಪತಿಗಳಿಗೆ ಪರಮಾನಂದವಾಯಿತು.

ರಾಜಮನ್ನಾರುಗುಡಿಯಲ್ಲಿ ಅಲ್ಲಿನ ದೊರೆ ಚಿನ್ನಚವ್ವಪ್ಪನಾಯಕನು ಶ್ರೀವಿಜಯೀಂದ್ರ-ಸುಧೀಂದ್ರ ಗುರುಗಳನ್ನು ತನ್ನ ರಾಜಧಾನಿಯಲ್ಲಿ ಮಧ್ವನವರಾತ್ರೋತ್ಸವ, ತದಂಗವಾಗಿ ವಿದ್ವತ್ಸಭೆಯನ್ನು ನೆರವೇರಿಸಬೇಕೆಂದು ಪ್ರಾರ್ಥಿಸಿ ಅದಕ್ಕೆ ವ್ಯವಸ್ಥೆ ಮಾಡಿದ್ದನು. ಆ ಮಹೋತ್ಸವಕ್ಕೆ ಬರಬೇಕೆಂದು ಆಚಾರರಿಗೆ ಶ್ರೀಗುರುಗಳು ಶ್ರೀಮುಖವನ್ನು ಕಳಿಸಿದ್ದರು. ಅದನ್ನು ಶಿರಸಾಧಾರಣಮಾಡಿ ಆಚಾರರು ಪತ್ನಿಯಲ್ಲಿ ವಿಷಯ ತಿಳಿಸಿ ರಾಜಮನ್ನಾರುಗುಡಿಗೆ ಹೊರಟರು. 

ರಾಜಮನ್ನಾರುಗುಡಿಯಲ್ಲಿ ಶ್ರೀವಿಜಯೀಂದ್ರತೀರ್ಥರು ಶ್ರೀಮಧ್ವನವರಾತ್ರೋತ್ಸವ ಮತ್ತು ವಿದ್ದ=ಭೆಯನ್ನೂ ವೈಭವದಿಂದ ನೆರವೇರಿಸುತ್ತಿದ್ದರು. ಪ್ರತಿಪದದಿಂದ ಶ್ರೀಸುಮಧ್ವವಿಜಯ ಅನುವಾದವನ್ನು ಪಂಡಿತ ರಾಮಚಂದ್ರಾಚಾರರು ವಿದ್ವತ್ತೂರ್ಣವಾಗಿ ನೆರವೇರಿಸುತ್ತಾ ಸಾವಿರಾರು ಜನ ಧಾರ್ಮಿಕರನ್ನು ಆನಂದಗೊಳಿಸುತ್ತಿದ್ದಾರೆ. ಪ್ರತಿದಿನ ನೂರಾರುಜನ ವಿದ್ಯಾರ್ಥಿಗಳು, ಪಂಡಿತರು, ವಾಕ್ಯಾರ್ಥ, ವಿವಿಧ ಶಾಸ್ತ್ರ, ಪರೀಕ್ಷೆ, ಸಂಗೀತ, ಹರಿಕಥೆ, ಕವಿತಾಸ್ಪರ್ಧೆ - ಹೀಗೆ ವಿವಿಧ ರೀತಿಯಿಂದ ತಮ್ಮ ಪಾಂಡಿತ್ಯ ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಎಲ್ಲ ಕಾರಕ್ರಮಗಳಲ್ಲಿಯೂ ವೇಂಕಟನಾಥನೂ ಪಾಲ್ಗೊಂಡು ತನ್ನ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿ ಶ್ರೀಯವರ ಅನುಗ್ರಹ ಸಂಪಾದಿಸಿದನು. ಅವನು ಪದ, ವಾಕ್ಯ, ಕ್ರಮ, ಜಟೆ - ಈ ವಿಧದಲ್ಲಿ ಅದ್ಭುತ ವೇದಪರಾಯಣ ಕಾವ್ಯ-ನ್ಯಾಯ-ವೇದಾಂತಗ್ರಂಥಗಳಲ್ಲಿ ಉತ್ತಮ ರೀತಿಯಲ್ಲಿ ಪರೀಕ್ಷೆಕೊಟ್ಟು ವಿದ್ವಾಂಸರನ್ನು ಚಕಿತಗೊಳಿಸಿದನು. 

ಇಂದು ಮಧ್ವವಿಜಯಮಂಗಳ, ಶ್ರೀಯವರಿಂದ ಶ್ರೀಮೂಲರಾಮದೇವರ ಪೂಜಾರಾಧನೆ, ತೀರ್ಥಪ್ರಸಾದವಿಯೋಗಳಾದ ಮೇಲೆ ಸಹಸ್ರಾಧಿಕ ಭೂಸುರರ ಭೋಜನವಾಯಿತು. ಸಾಯಂಕಾಲ ವಿದ್ವತ್ಸಭಾ ಸಮಾರೋಪ ಜರುಗಿ ಉಭಯಗುರುಗಳ ಉಪದೇಶವಾದ ಮೇಲೆ ಮಹಾರಾಜಾ ಚಿನ್ನಚವ್ವಪ್ಪನಾಯಕನು ಎಲ್ಲ ವಿದ್ಯಾರ್ಥಿಗಳು, ಪಂಡಿತರು, ಕಲೆಗಾರರುಗಳಿಗೆ ಶ್ರೀಯವರ “ಮಹಾರಾಜಾ, ಹಿಂದೆ ನಿಮ್ಮ ಹಸ್ತದಿಂದ ವಿಶೇಷ ಸಂಭಾವನೆಗಳನ್ನು ಕೊಡಿಸಿದನು. ಆಗ ವಿಜಯೀಂದ್ರರು ನಸುನಗುತ್ತಾ ಅಣ್ಣ ಚನ್ನಪ್ಪನಾಯಕರಿಂದ “ಬಾಲಸರಸ್ವತಿ” ಎಂಬ ಪ್ರಶಸ್ತಿ ಪಡೆದಿದ್ದರಲ್ಲ ! ತಿಮ್ಮಣ್ಣಾಚಾರರು ! ಅವರ ದ್ವಿತೀಯ ಪುತ್ರನೇ ಈತ !” ಎಂದು ಹೇಳಲು “ಓಹ್ ಆ ಮಹನೀಯರ ಪುತ್ರರೇ ! ಅಂತೆಯೇ ಇವರಲ್ಲಿ ಇಂತಹ ಪ್ರತಿಭೆ, ತೇಜಸ್ಸು, ವಾಕ್ಷಟುತ್ತಗಳಿವೆ” ಎಂದು ಹೇಳಿ ನಾಯಕ ವೆಂಕಟನಾಥನಿಗೆ ಪ್ರತ್ಯೇಕವಾಗಿ ಶ್ರೀಯವರ “ವಿಶೇಷ ಸಂಭಾವನೆ ಕೊಡಿಸಿ ಕೃತಾರ್ಥನಾದನು. 

ಮರುದಿನ ಲಕ್ಷ್ಮೀನರಸಿಂಹಾರ್ಯರು ವೆಂಕಟನಾಥನೊಡನೆ ಊರಿಗೆ ಪ್ರಯಾಣ ಬೆಳೆಸಲು ಸನ್ನಿಧಿಗೆ ಬಂದಾಗ ಸುಧೀಂದ್ರರು “ಬನ್ನಿ ಆಚಾರ್ಯ ! ಚಿರಂಜೀವಿ ವೇಂಕಟನಾಥನು ಮೂರು ವರ್ಷದವನಿದ್ದಾಗ ನೋಡಿದ್ದೆವು. ಎಷ್ಟು ಸುಂದರನಾಗಿ ಬೆಳೆದಿದ್ದಾನೆ, ಮುಖದಲ್ಲಿ ಎಂತಹ ವರ್ಚಸ್ಸು ಬೆಳಗುತ್ತಿದೆ. ಇಂತಹ ಶಿಷ್ಯ ನಿಮಗೆ ದೊರಕಿದ್ದು ನಿಮ್ಮ ಪುಣ್ಯ” ಎಂದರು. ಆಚಾರರು “ನಿಜ, ಇವನು ಅಸಾಧ್ಯ ಬಾಲಕ. ಇವೆಲ್ಲ ಗುರುಗಳ ಪಾದಾನುಗ್ರಹ ಫಲ” ಎಂದರು. ಶ್ರೀವಿಜಯೀಂದ್ರರು “ನಮ್ಮ ವೇಂಕಟನಾಥ ಮಹಾಪಂಡಿತನಾಗಿ ಜಗನ್ಮಾನ್ಯನಾಗುವಂತೆ ಮಾಡುವ ಜವಾಬ್ದಾರಿ ನಿಮ್ಮದು!” ಎಂದು ಹೇಳಿದರು. ಆಗ ಆಚಾರ್ಯರು “ಗುರುಪಾದರ ಅನುಗ್ರಹಾಶೀರ್ವಾದ ಇರುವಾಗ ಯಾವುದು ತಾನೇ ಅಸಾಧ್ಯವಾಯಿತು! ಅಪ್ಪಣೆಯಂತೆ ಯೋಗ್ಯತಾನುಸಾರ ಇವನನ್ನು ತಯಾರುಮಾಡುತ್ತೇನೆ. ನಮ್ಮ ಗುರುರಾಜನನ್ನು ಕುಂಭಕೋಣಕ್ಕೆ ಕರೆಯಿಸಿಕೊಂಡು ಸಕಲ ಶಾಸ್ತ್ರಗಳನ್ನು ಕಿರಿಯ ಶ್ರೀಪಾದರಿಂದ ಪಾಠ ಹೇಳಿಸಿ ಮಹಾಪಂಡಿತರನ್ನಾಗಿ ಮಾಡಿ ಮಹಾಸಂಸ್ಥಾನದ ಆಸ್ಥಾನವಿದ್ದತ್ವದವಿಯಿತ್ತುದಲ್ಲದೆ 'ರಾಮಚಂದ್ರಪುರ'ದ ವಿದ್ಯಾಪೀಠದ ಪ್ರಧಾನಾಧ್ಯಾಪಕನನ್ನಾಗಿ ಮಾಡಿ ತಾಯಿ, ಪತ್ನಿಯರೊಡನೆ ಅವನು ಮಾನ-ಮಯ್ಯಾದೆ, ಜನಪ್ರಿಯತೆಗಳಿಗೆ ಪಾತ್ರನಾಗಿ ಜೀವನ ಸಾಗಿಸುವಂತೆ ಅನುಗ್ರಹಮಾಡೋಣವಾಗಿದೆ. ತಮ್ಮ ಶಿಷ್ಯಪ್ರೇಮ ಅಸಾಧಾರಣ. ಅಪ್ಪಣೆಯಾದರೆ ಊರಿಗೆ ಹೋಗಿಬರುತ್ತೇನೆ” ಎಂದು ವಿಜ್ಞಾಪಿಸಿದರು. ಉಭಯಶ್ರೀಗಳವರೂ ಹರ್ಷಿತರಾಗಿ ಫಲ-ಮಂತ್ರಾಕ್ಷತೆ, ವಿಶೇಷ ಸಂಭಾವನೆಗಳನ್ನು ನೀಡಿದರು. ವೇಂಕಟನಾಥ ಭಾವನೊಡನೆ ಮಧುರೆಗೆ ಪ್ರಯಾಣ ಬೆಳೆಸಿದನು. 

ಆಚಾರರು ತೆರಳಿದ ಮೇಲೆ ಸುಧೀಂದ್ರರು ಮಂದಹಾಸದಿಂದ “ಗುರುದೇವ ! ಹಿಂದೆ ಮೂರು ವರ್ಷ ಬಾಲಕನಾಗಿದ್ದ ವೇಂಕಟನಾಥನನ್ನು ತೊಡೆಯ ಮೇಲೆ ಕೂಡಿಸಿ ಮುದ್ದುಮಾಡಿ ಮೈಮರೆತು ಆನಂದಬಾಷ್ಪಹರಿಸಿದ್ದೀರಿ. ಇದರ ಅರ್ಥ ನಮಗಾಗಲಿಲ್ಲ ಈಗಲಾದರೂ ದಯವಿಟ್ಟು ತಿಳಿಸಬೇಕಾಗಿ ಕೋರುತ್ತೇನೆ” ಎಂದು ಪ್ರಾರ್ಥಿಸಿದರು.

ವಿಜಯೀಂದ್ರರು ನಸುನಕ್ಕು ಕೇಳಿ, ನಮ್ಮ ಗುರುಪಾದರು ಸುರೇಂದ್ರ ಗುರುಗಳಿಗೆ ನಮ್ಮನ್ನು ಒಪ್ಪಿಸಿಕೊಟ್ಟಾಗ ಅವರನ್ನು ಬಿಟ್ಟಗಲಲಾರದೆ ನಾವು ಕಣ್ಣೀರಿಡುತ್ತಿದ್ದಾಗ ಗುರುಪಾದರು ನಮ್ಮನ್ನು ಸಮಾಧಾನ ಪಡಿಸಿ, “ಚಿಂತಿಸಬೇಡಿ, ನಮ್ಮ ಮನಸ್ಸು ಸರ್ವದಾ ನಿಮ್ಮಲ್ಲಿಯೇ ಇರುತ್ತದೆ, ಅಷ್ಟೇ ಅಲ್ಲ, ನಾವೂ ನಿಮ್ಮ ಪ್ರಶಿಷ್ಯರಾಗಿ ನಿಮ್ಮ ಪೀಠದಲ್ಲಿ ಬಂದೇವು !” ಎಂದು ಹೇಳಿದ್ದರು ! ತಿಮ್ಮಣ್ಣನಿಗೆ ಶ್ರೀನಿವಾಸ ನಿತ್ತವರ, ಅಭಯ, ವೇಂಕಟನಾಥನ ಜನನ, ಇವುಗಳು ಪರಸ್ಪರ ಸಂಬದ್ಧವಾಗಿದ್ದಂತೆ ನಮಗೆ ಭಾಸವಾಗುತ್ತಿತ್ತು. ತಿಮ್ಮಣ್ಣ ಮೂರು ವರ್ಷದ ವೇಂಕಟನಾಥನೊಡನೆ ಕುಂಭಕೋಣಕ್ಕೆ ಬಂದಾಗ ವೇಂಕಟನಾಥನನ್ನು ನೋಡಿದಾಗ ನಮ್ಮ ಗುರುಪಾದರ ರೂಪ-ಲಾವಣ್ಯ ತೇಜಸ್ಸುಗಳೇ ನಮ್ಮ ಕಣ್ಣಿಗೆ ಕಟ್ಟಿದಂತಾಗಿತ್ತು, ಆ ಮಹನೀಯರೇ ಮತ್ತೆ ವೆಂಕಟನಾಥನ ರೂಪದಿಂದ ಅವತರಿಸಿದ್ದಾರೆ ಎಂದೇ ನಮ್ಮ ಭಾವನೆ, ಅವನಲ್ಲಿ ನಮಗೆ ಇಷ್ಟು ಪ್ರೇಮ-ಆದರಗಳಿಗೆ ಅದೇ ಕಾರಣ ! ನೀವೇ ಅವನಿಗೆ ಮುಂದೆ ಸಂಪೂರ್ಣ ವಿದ್ಯಾಭ್ಯಾಸ ಮಾಡಿಸಿ ನಿಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡು ಮಹಾಸಂಸ್ಥಾನದ ಕೀರ್ತಿ ದಿಗಂತವಿಶ್ರಾಂತವಾಗುವಂತೆ ಮಾಡಬೇಕಾಗಿರುವುದರಿಂದ ನಿಮಗೆ ತಿಳಿಸಿದ್ದೇವೆ ! ಇದನ್ನು ಗೌಪ್ಯವಾಗಿಟ್ಟು ವೆಂಕಟನಾಥನ ಅಭ್ಯುದಯಮಾಡಬೇಕು” ಎಂದಾಜ್ಞಾಪಿಸಿದರು. ಗುರುಗಳ ವಚನವನ್ನಾಲಿಸಿ ಸುಧೀಂದ್ರರ ಮೈ ರೋಮಾಂಚನ 

ಮೈ ಗೊಂಡಿತು. ಗುರುಗಳಿಗೆ ಸಾಷ್ಟಾಂಗವೆರಗಿ “ಧನ್ನೋSಸ್ಮಿ ! ಕೃತ ಕೃತ್ಯೋ !! ತಮ್ಮ ಅಪ್ಪಣೆಯಂತೆ ವರ್ತಿಸುತ್ತೇನೆ” ಎಂದು ವಿಜ್ಞಾಪಿಸಿದರು. ಆನಂತರ ಗುರು-ಶಿಷ್ಯರು ಸಾಯಂದೀಪಾರಾಧನೆಗೆ ದಯಮಾಡಿಸಿದರು. 

ರಾಜಮನ್ನಾರುಗುಡಿಯಿಂದ ಬಂದಮೇಲೆ ಅಲ್ಲಿನ ವೈಭವಗಳನ್ನು ಪತಿ - ತಮ್ಮ ಇವರಿಂದ ತಿಳಿದು ವೆಂಕಟಾಂಬಾ ಮುದಿಸಿದಳು. 

ಗರ್ಭಿಣಿಯಾದ ವೆಂಕಟಾಂಬೆಗೆ ಆಚಾರರು ಐದನೇ ತಿಂಗಳಲ್ಲಿ ಹೂಮುಡಿಸುವುದು, ಏಳನೇ ತಿಂಗಳಿನಲ್ಲಿ ಪುಂಸವನ, ಸೀಮಂತಗಳನ್ನು ವೈಭವದಿಂದ ನೆರವೇರಿಸಿದರು. ಉತ್ಸವಕ್ಕೆ ಬಂದಿದ್ದ ಗುರುರಾಜಾಚಾರರು ತಾಯಿ ಮತ್ತು ಪತ್ನಿಯರನ್ನು ವೆಂಕಟಾಂಬೆಯ ಪ್ರಸವಕ್ಕೆ ಸಹಾಯಕರಾಗಿರಲು ಬಿಟ್ಟು ರಾಮಚಂದ್ರಪುರಕ್ಕೆ ಮರಳಿದರು. ಗೋಪಮ್ಮ, ಅತ್ತಿಗೆ ಕಮಲಾದೇವಿಯರು ತನ್ನ ಸಹಾಯಕ್ಕಾಗಿ ಉಳಿದುಕೊಂಡಿದ್ದು ವೆಂಕಟಾಂಬೆಗೆ ಬಹು ಸಂತೋಷ-ತೃಪ್ತಿಗಳನ್ನು ನೀಡಿತು. ಮೊದಲಿನಿಂದ ತುಂಬಾ ಸ್ನೇಹ-ಪ್ರೀತಿಗಳಿಂದಿದ್ದ ಅತ್ತಿಗೆ-ನಾದಿನಿಯರು ಈಗ ತುಂಬಾ ಹತ್ತಿರವಾದರು. 

ವೆಂಕಟಾಂಬಾದೇವಿ ಒಂಭತ್ತನೆಯ ತಿಂಗಳಿನಲ್ಲಿ ವಂಶದೀಪಕನಾದ ಪುತ್ರನನ್ನು ಪ್ರಸವಿಸಿದಳು. ವೃದ್ಧಿ ಕಳೆದು ಮಂಗಳಸ್ನಾನವಾದ ಮೇಲೆ ಆಚಾರರು ಮಗನಿಗೆ ಜಾತಕರ್ಮ, ನಾಮಕರಣಗಳನ್ನು ನೆರವೇರಿಸಿ “ನಾರಾಯಣ” ಎಂದು ನಾಮಕರಣ ಮಾಡಿದರು. ಗುರುರಾಜಾಚಾರರು ತಾಯಿ-ಪತ್ನಿಯರೊಡನೆ ಊರಿಗೆ ತೆರಳಿದರು. ವೆಂಕಟಾಂಬೆಯ ಮಗ ನಾರಾಯಣ ಜನಮುದ್ದಿನ ಕೂಸಾಗಿದ್ದನು. ವೇಂಕಟನಾಥ ಮಗುವನ್ನು ಲಾಲಿಸುತ್ತಾ, ಅವನ ಆಟಪಾಟಗಳಿಂದ ಹರ್ಷಿಸುತ್ತಿದ್ದನು. 

ವೇಂಕಟನಾಥ ಬೆಳಗಿನಝಾವ ನಾಲ್ಕು ಘಂಟೆಗೆ ಎದ್ದು ಕಾಲಕೃತ್ಯಗಳನ್ನು ತೀರಿಸಿ, ತರ್ಕಶಾಸ್ತ್ರದಲ್ಲಿ ಹಿಂದಿನದಿನವಾದ ಪಾಠವನ್ನು ಚಿಂತನೆಮಾಡುವನು. ನಂತರ ವೀಣಾಭ್ಯಾಸ ಮಾಡಿ, ಸ್ನಾನ-ಸಂಧ್ಯಾ-ಅಗ್ನಿಕಾರಗಳನ್ನು ಪೂರೈಸಿ ಆಚಾರರಲ್ಲಿ ಇತರ ಸಹಾಧ್ಯಾಯಿಗಳೊಡನೆ ವೇದ-ವೇದಾಂತ ಪಾಠಗಳನ್ನು ಅಧ್ಯಯನಮಾಡಿ ಗುರುಗಳೊಡನೆ ವಿದ್ಯಾಪೀಠಕ್ಕೆ ಹೋಗುವನು. ಅಲ್ಲಿ ಇತರ ವೇದಗಳು. ವ್ಯಾಕರಣ, ಮೀಮಾಂಸಾಶಾಸ್ತ್ರಗಳನ್ನು ವ್ಯಾಸಂಗಮಾಡಿ ಮನೆಗೆ ಬಂದು ಅಂದು ಓದಿದ ಪಾಠಗಳ ಚಿಂತನೆ ಮಾಡುತ್ತಿದ್ದನು. ಆಚಾರರು ಮನೆಗೆ ಬಂದು ದೇವತಾರ್ಚನೆಮಾಡುತ್ತಿರುವಾಗ ಮಾಧ್ಯಾತ್ಮಿಕವನ್ನು ಮುಗಿಸಿ ಮಂತ್ರ-ಸ್ತೋತ್ರಗಳನ್ನು ಪಠಿಸುವನು. ಭಾವಂದಿರೊಡನೆ ಭೋಜನ ಮಾಡಿ ಮತ್ತೆ ವಿದ್ಯಾಪೀಠಕ್ಕೆ ತೆರಳಿ ಕಾವ್ಯ-ನಾಟಕ-ಅಲಂಕಾರಶಾಸ್ತ್ರ, ಯೋಗಶಾಸ್ತ್ರಗಳ ಅಧ್ಯಯನ, ಯೋಗಾಭ್ಯಾಸವನ್ನು ವಿವಿಧ ಯೋಗಾಸನಗಳೊಡನೆ ನೆರವೇರಿಸಿ, ಸಹಾಧ್ಯಾಯಿಗಳೊಡನೆ ವೈಘಾನದಿಗೆ ಹೋಗಿ ಅಲ್ಲಿ ಸಾಯಂ ಸಂಧ್ಯೆಯನ್ನು ಪೂರೈಸಿ, ಮನೆಗೆ ಬಂದು ಅಗ್ನಿಕಾರ-ಸ್ತೋತ್ರ-ಮಂತ್ರಪಠನಗಳನ್ನು ಮುಗಿಸಿ, ಸ್ವಲ್ಪ ಹೊತ್ತು ನಾರಾಯಣನೊಡನೆ ಚಕ್ಕಂದವಾಡಿ, ರಾತ್ರಿ ಭೋಜನಾನಂತರ, ವಿಶ್ರಾಂತಿ ಕೊಠಡಿಗೆ ಬಂದು ಸ್ವಲ್ಪ ಹೊತ್ತು ವೀಣಾಭ್ಯಾಸ ಮಾಡಿ ವಿಶ್ರಮಿಸುವನು. ಹೀಗೆ ವೆಂಕಟನಾಥನು ಬಿಡುವಿಲ್ಲದ ಕಾರಕ್ರಮ, ವಿದ್ಯಾಭ್ಯಾಸಗಳಿಂದ ಅಕ್ಕ, ಭಾವ, ವಿದ್ಯಾಪೀಠದ ಅಧ್ಯಾಪಕರು, ವಿದ್ಯಾರ್ಥಿಗಳ ಮೆಚ್ಚುಗೆ-ಪ್ರೀತಿಗಳಿಗೆ ಪಾತ್ರನಾಗಿ ಜ್ಞಾನ ಮತ್ತು ದೈಹಿಕವಾಗಿ ಅಭಿವೃದ್ಧಿಸಹತ್ತಿದರು. 

ಲಕ್ಷ್ಮೀನರಸಿಂಹಾಚಾರರು ನಾರಾಯಣನಿಗೆ ಮೂರನೆಯ ವರ್ಷದಲ್ಲಿ ಚೌಲ, ಅಕ್ಷರಾಭ್ಯಾಸ ಸಂಸ್ಕಾರವನ್ನು ನೆರವೇರಿಸಿದರು. ಐದನೆಯ ವರ್ಷದಲ್ಲಿ ಮಗನನ್ನು ವಿದ್ಯಾಪೀಠಕ್ಕೆ ಸೇರಿಸಿದರು. ನಾರಾಯಣನು ವಿದ್ಯಾಪೀಠದಲ್ಲಿ ಅಧ್ಯಯನಮಾಡಿದರೂ ವೇಂಕಟನಾಥನು ಸೋದರಳಿಯನಿಗೆ ಸ್ತೋತ್ರ, ಕಾವ್ಯಗಳನ್ನು ಹೇಳಿಕೊಟ್ಟು ಚಿಂತನೆ ಮಾಡಿಸುತ್ತಿದ್ದನು. ನಾರಾಯಣನಲ್ಲಿ ವೇಂಕಟನಾಥನಿಗೆ ಅಪಾರ ಪ್ರೇಮ, ನಾರಾಯಣನಿಗೂ ಮಾವನಲ್ಲಿ ಅತಿಶಯ ಪ್ರೀತಿ, ಮಾವ-ಅಳಿಯಂದಿರ ಈ ಸೌಜನ್ಯ-ಪ್ರೇಮವನ್ನು ಕಂಡು ವೆಂಕಟಾಂಬೆಗೆ ಪರಮಾನಂದವಾಗುತ್ತಿತ್ತು. ಹೀಗೆ ದಿನಗಳುರುಳಿದವು. 

ರಾಮಚಂದ್ರಪುರದಲ್ಲಿ ಗುರುರಾಜಾಚಾರರ ಪತ್ನಿ ಕಮಲಾದೇವಿಯು ಪುತ್ರರತ್ನವನ್ನು ಪ್ರಸವಿಸಿದಳು. ಗುರುರಾಜಾಚಾರರು ಮಗನಿಗೆ “ವೆಂಕಟನಾರಾಯಣ” ಎಂದು ನಾಮಕರಣ ಮಾಡಿದರು. ವೆಂಕಟನಾರಾಯಣನು, ಬೆಳೆದು ಐದಾರು ವರ್ಷದವನಾದನು. ಅವನಿಗೆ ತಂದೆ ಸಕಾಲದಲ್ಲಿ ಅಕ್ಷರಾಭ್ಯಾಸಮಾಡಿಸಿ ನಾನಾ ಲಿಪಿ, ಕೋಶ, ಮಂತ್ರ-ಸ್ತೋತ್ರಗಳನ್ನು ಹೇಳಿಕೊಟ್ಟು ತ ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಪ್ರಾಪ್ತವಯಸ್ಕನಾದ ನಾರಾಯಣನಿಗೆ ಮಧುರೆಯಲ್ಲಿ ಲಕ್ಷ್ಮೀನರಸಿಂಹಾಚಾರರು ವಿಜೃಂಭಣೆಯಿಂದ ಉಪನಯನವನ್ನು ನೆರವೇರಿಸಿ ವೇದ-ಶಾಸ್ತ್ರಾಧ್ಯಯನಗಳಿಗೆ ಅವನನ್ನು ಅಧಿಕಾರಿಯನ್ನಾಗಿ ಮಾಡಿದರು.