ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೨೯. ವೇಂಕಟನಾಥನ ಉಪನಯನ
ಭಾವ ಲಕ್ಷ್ಮೀನರಸಿಂಹಾಚಾರ, ವೆಂಕಟಾಂಬಾದೇವಿಯರು ಮತ್ತು ತಾಯಿ ಗೋಪಮ್ಮನವರ ಅಪೇಕ್ಷೆಯಂತೆ ಗುರುರಾಜಾಚಾರರು ತಮ್ಮ ವೇಂಕಟನಾಥನ ಉಪನಯನವನ್ನು 314 ವೈಭವದಿಂದ ನೆರವೇರಿಸಲು ಸಿದ್ದತೆ ಮಾಡಲಾರಂಭಿಸಿದರು. ಮನೆಗೆ ಸುಣ್ಣ-ಬಣ್ಣ ಅಲಂಕಾರಗಳಾದವು. ಮುಂಭಾಗದಲ್ಲಿ ದೊಡ್ಡದಾದ ಹಸಿರುವಾಣಿ ಚಪ್ಪರಹಾಕಿಸಿ ತಳಿರುತೋರಣ- ರಂಭಾಸ್ತಂಭಗಳಿಂದ ಅಲಂಕರಿಸಲಾಯಿತು. ವೆಂಕಟಾಂಬಾ, ಕಮಲಾದೇವಿಯರು ಸಕಲ ಕಾರ್ಯಗಳನ್ನು ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದರು. ಉಪನಯನ ವಿಚಾರವರಿತು ಎಲ್ಲ ಬಂಧು-ಬಾಂಧವರು, ಮಿತ್ರರು ಕಾವೇರಿಪಟ್ಟಣಕ್ಕೆ ಬಂದು ಸೇರಿದರು.
ವೈಶಾಖ ಶುಕ್ಲ ಚತುರ್ಥಿ ದಿವಸ ಉಪನಯನಾಂಗವಾಗಿ ಕುಲದೇವತೆಯಾದ ಶ್ರೀನಿವಾಸನ ಪೂಜಾರೂಪವಾಗಿ ದೇವರ ಸಮಾರಾಧನೆಯು ವೈಭವದಿಂದನೆರವೇರಿತು. ಗುರುರಾಜಾಚಾರ ದಂಪತಿಗಳು, ವೇಂಕಟನಾಥರು ಮಂಗಳಸ್ನಾನ ಮಾಡಿ ಹಸೆಯ ಮಣೆಯ ಮೇಲೆ ಕುಳಿತರು. ಹಿರಿಯರಾದ ರಾಮಚಂದ್ರಾಚಾರ, ನರಸಿಂಹಾಚಾರ, ಆನಂದತೀರ್ಥಾಚಾರರು ಹಾಗೂ ಲಕ್ಷ್ಮೀನರಸಿಂಹಾಚಾರರ ಮೇಲ್ವಿಚಾರಣೆ, ಮಾರ್ಗದರ್ಶನದಲ್ಲಿ ಪಾಷಿಕಕುಲಕ್ರಮಾಗತ ಸಂಪ್ರದಾಯದಂತೆ ಗುರುರಾಜಾಚಾರ್ಯರು ಪುಣ್ಯಾಹ, ನಾಂದಿ, ಕುಲದೇವತಾಪೂಜೆ, ನವಗ್ರಹಪೂಜೆ, ಹವನಹೋಮಗಳನ್ನು ಪುರೋಹಿತರ ಸಹಕಾರದಿಂದ ನೆರವೇರಿಸಿದರು.
ಮಧ್ಯಾಹ್ನ ದೇವಪೂಜಾ, ಹೂವಿಳ್ಳಾದಿಗಳು ಜರುಗಿದವು. ಆನಂತರ ಗುರುರಾಜಾಚಾರರು ಸಕಲ ಬ್ರಾಹ್ಮಣ ಸುವಾಸಿನಿಯರಿಗೆ ಭೂರಿಭೋಜನಮಾಡಿಸಿ, ದಕ್ಷಿಣಾ-ತಾಂಬೂಲಗಳನ್ನಿತ್ತು ಸಂತೋಷಪಡಿಸಿದರು. ಮಧ್ಯಾಹ್ನ ವೇದವಿದ್ಯಾವಿಶಾರದರಿಂದ ಚಿರಂಜೀವಿ ವೇಂಕಟನಾಥನಿಗೆ ವೇದೋಕ್ತ ಆಶೀರ್ವಾದ ಮಾಡಿಸಿದರು.
ಶ್ರೀಶಾಲಿವಾಹನ ಶಕೆ ೧೫೨೫ ನೆಯ ಶುಭಕೃತು ಸಂವತ್ಸರದ ವೈಶಾಖ ಶುಕ್ಲ ಪಂಚಮೀ315 ದಿವಸ ಪ್ರಾತಃಕಾಲ ಮಂಗಳವಾದ್ಯಗಳಾಗುತ್ತಿರಲು ಎಣ್ಣೆಶಾಸ್ತ್ರ, ಆರತಿ, ವಿಪ್ರಾಶೀರ್ವಾದಗಳಾದ ಮೇಲೆ ಮಂಗಳಸ್ನಾನಮಾಡಿ ಗುರುರಾಜಾಚಾರ ದಂಪತಿಗಳು ವೇಂಕಟನಾಥನನ್ನು ಅರಿಶಿನ ವರ್ಣದ ಕೌಪೀನ - ಶುಚಿಯಾದ ವಸ್ತ್ರಗಳಿಂದ ಅಲಂಕರಿಸಿ ಹಸೆಯ ಮೇಲೆ ಬಲಗಡೆ ಕೂಡಿಸಿಕೊಂಡು ಉಪನಯನ ಮಹೋತ್ಸವಾಂಗ ವೇದೋಕ್ತವಿಧಿಗಳಲ್ಲಿ ಆಸಕ್ತರಾದರು.
ಮೊದಲು ವೇಂಕಟನಾಥನಿಂದ ಮಂತ್ರೋಚ್ಚಾರಣೆಯಿಲ್ಲದೆ ಆಚಮನಪೂರ್ವಕ ಸಂಕಲ್ಪ ಮಾಡಿಸಿ ತಾಯಿಯ ಸ್ಥಾನದಲ್ಲಿರುವ ಕಮಲಾದೇವಿಯು ವೇಂಕಟನಾಥನಿಂದ ಬ್ರಾಹ್ಮಣರಿಗೆ ದಕ್ಷಿಣಾ ಪ್ರದಾನ ಮಾಡಿಸಿದಳು. ಅನಂತರ ವಟುವಿಗೆ ಪ್ರಾಯಶ್ಚಿತ್ತ ಮಾಡಿಸಿ “ನಮಸ್ಸದಸೇ” ಎಂಬ ಮಂತ್ರೋಚ್ಚಾರಣಪೂರ್ವಕ “ಅಶುಷೇ......... ಅನುಗೃಹಾಣ” ಎಂದು ಹೇಳಿಸಿ ಸದಸ್ಸಿಗೆ ನಮಸ್ಕಾರ ಮಾಡಿಸಿದರು. ಮೂರು ಎಳೆಯ ನವತಂತುವನ್ನು “ನವೋ ನವೋ” ಎಂಬ ಮಂತ್ರ ಹೇಳಿ ಗುರುರಾಜಾಚಾರ- ಕಮಲಾದೇವಿಯರು ಅದನ್ನು ಕರದಲ್ಲಿ ಹಿಡಿದು ಯಜೋಪವೀತದಂತೆ ಧಾರಣಮಾಡಿಸಿ ಆಚಮನ ಮಾಡಿಸಿದರು. ತರುವಾಯ ಯಜ್ಯೋಪವೀತ, ದೇವತಾಪೂಜೆ ಮಾಡಿಸಿ ಯಜ್ಯೋಪವೀತ-ಗೋಪಿಚಂದನವನ್ನು ಬ್ರಾಹ್ಮಣರಿಗೆ ಕೊಡಿಸಿ, ವಟು ಧರಿಸಿದ ಜನಿವಾರವನ್ನು ಬ್ರಾಹ್ಮಣರಿಂದ ಮುಟ್ಟಿಸಿ ಗುರುರಾಜಾಚಾರ ದಂಪತಿಗಳು ಅದನ್ನು ವೇಂಕಟನಾಥನೊಡನೇ ಹಿಡಿದು “ಯಜ್ಯೋಪವೀತಂ ಪರಮಂ ಪವಿತ್ರಂ” ಎಂಬ ಮಂತ್ರವನ್ನು ಹೇಳಿ ವೇಂಕಟನಾಥನಿಗೆ ಧಾರಣ ಮಾಡಿಸಿದರು. ಆಗ ಸುಮಂಗಲಿಯರು ಆರತಿಮಾಡಿ ಹರಸಿದರು. ತರುವಾಯ ಅನೇಕ ವಟುಗಳೊಡನೆ ವೆಂಕಟನಾಥನಿಗೆ ಮಾತೃಭೋಜನಶಾಸ್ತ್ರ ಮಾಡಿಸಲಾಯಿತು. ಆಗ ಗುರುರಾಜಾಚಾರರು ತಾವೇ ಮಂತ್ರವನ್ನು ಹೇಳುತ್ತಾ ವೆಂಕಟನಾಥನಿಂದ ಪ್ರೋಕ್ಷಣ, ಪರಿಶೇಚನ ಮಾಡಿಸಿ ಆಪೋಶನಸಹಿತ ಪ್ರಾಣಾಹುತಿಗಳನ್ನು ಕೊಡಿಸಿ ಕ್ಷಾರ, ಲವಣರಹಿತವಾಗಿ ಭೋಜನಮಾಡಿಸಿ ಉತ್ತರಾಪೋಶನದೊಡನೆ ಮಾತೃ ಭೋಜನ ಮಾಡಿಸಿದರು.
ಆನಂತರ ಚೌಲಸಂಸ್ಕಾರೋಕ್ತಕ್ರಮದಂತೆ ವೇಂಕಟನಾಥನಿಗೆ ಕ್ಷುರಕರ್ಮ ಮಾಡಿಸಿ, ಶಿಖೆಯನ್ನು ಬಿಡಿಸಿ, ಮಂಗಳಸ್ನಾನಾನಂತರ ಕೌಪೀನ ಊರ್ಧ್ವಪುಂಡ್ರಧರಿಸಿ ಶಿಖಾಬದ್ಧನಾದ ತಮ್ಮನನ್ನು ಆಚಾರರು ದರ್ಬಾಸನದಲ್ಲಿ ಕೂಡಿಸಿಕೊಂಡು ಸುಮಂಗಲೆಯರಿಂದ ಅಗ್ನಿಯನ್ನು ತರಿಸಿ “ಅಯುರ್ದಾ ದೇವ ಜರಾಸಂಗೃಣಾನೋ” ಎಂಬ ಮಂತ್ರದೊಡನೆ ಒಂದು ಸಮಿತ್ತನ್ನು ಅಗ್ನಿಯಲ್ಲಿ ವಟುವಿನಿಂದ ಹೋಮಮಾಡಿಸಿ, ತರುವಾಯ ಅಗ್ನಿಗೆ ಉತ್ತರಭಾಗದಲ್ಲಿ ಸಾಣೆಕಲ್ಲಿನಮೇಲೆ ವಟುವನ್ನು ನಿಲ್ಲಿಸಿ “ಆತಿಷ್ಟೇಮಮಶಾನಂ” ಎಂಬ ಮಂತ್ರದಿಂದ ಪ್ರದಕ್ಷಿಣೆ ಮಾಡಿಸಿ, ಆಚಾರರು ತಮ್ಮನ ಬಲಗೈ ಮೇಲೆತ್ತಿ ಹಿಡಿದು “ರೇವತೀಸ್ತಾ” ಎಂಬ ಮಂತ್ರೋಚ್ಚಾರಪೂರ್ವಕ ವಸಕ್ಕೆ ಪ್ರೋಕ್ಷಣೆ ಮಾಡಿ 'ಯಾಅಕೃಂತನ' ಮುಂತಾದ ಮಂತ್ರದಿಂದ ಹಳದಿವರ್ಣದ ವಸ್ತವನ್ನು ತಮ್ಮನಿಗೆ ಉಡಿಸಿ, “ಪರೀದಂ ವಾಸೋ” ಎಂಬ ಮಂತ್ರದಿಂದ ಯಜ್ಯೋಪವೀತಕ್ರಮದಲ್ಲಿ ಉಪವೀತವನ್ನು ಹೊದ್ದಿಸಿ, “ಇಯಂ ದುರತ್ತಾತ್' ಎಂಬ ಮಂತ್ರದಿಂದ ಮೌಂಜೀಮೇಖಲೆಗಳನ್ನು ಧಾರಣಮಾಡಿಸಿ. ಮಿತ್ರಸ್ಯ ಚಕ್ಷು” ಎಂಬ ಮಂತ್ರದಿಂದ ಕೃಷ್ಣಾಜಿನ ಚೂರನ್ನು ಜನಿವಾರಕ್ಕೆ ಕಟ್ಟಿಸಿದರು. “ಅಗಂತ್ರಾ' ಮಂತ್ರದೊಡನೆ ವೇಂಕಟನಾಥನು ಅಗ್ನಿಗೆ ಪ್ರದಕ್ಷಿಣೆ ಬಂದು ಪಶ್ಚಿಮಾಭಿಮುಖವಾಗಿ ನಿಂತಮೇಲೆ ಆಚಾರರು ಜಲಪೂರ್ಣಅರ್ಘಫ್ಯಾಲವನ್ನು ಹಿಡಿದು ಸಮುದ್ರಾ ದೂರ್ಮಿ” ಎಂಬ ಮಂತ್ರ ಹೇಳಿ ವಟುವಿನ ಬೊಗಸೆಯಲ್ಲಿ ಹಾಕಿ ಅರ್ಘಪ್ರಾದಾನ ಮಾಡಿಸಿದರು. ಅದೇ ಜಲದಿಂದ ಮೂರುಬಾರಿ ಪ್ರೋಕ್ಷಿಸಿ “ಅಗ್ನಿಷ್ಟೇಹಸ್ತಮಾಗಧೀತ್” ಮುಂತಾದ ಅಗ್ನಿ-ಸೋಮಾದಿ ಏಕಾದಶ ದೇವತಾಕ ಮಂತ್ರಗಳನ್ನು ವಟುವಿನ ರಕ್ಷಣಾರ್ಥಕವಾಗಿ ಪುರೋಹಿತರು ಉಚ್ಚರಿಸುತ್ತಿರುವಾಗ ವೇಂಕಟನಾಥನಿಂದ ಅಗ್ನಿಗೆ ಹಸ್ತಪ್ರದರ್ಶನ ಮಾಡಿಸಿದರು.
ಆ ತರುವಾಯ ಅಂತಃಪಟವನ್ನು ಹಿಡಿಸಿ, ಮಂಗಳಾಷ್ಟಕವನ್ನು ಹೇಳಿಸಿ, ಗುರುರಾಜಾಚಾರರು ವೇಂಕಟನಾಥನನ್ನು ಆಲಿಂಗಿಸಿ ಅಭಿಮುಖವಾಗಿ ಮಣೆಯ ಮೇಲೆ ಕೂಡಿಸಿಕೊಂಡು ಅವನ ಬಲಗಿವಿಯಲ್ಲಿ ಸುಪ್ರಜಾ ಪ್ರಜಯಾ ಭೂಯಾಸಂ ಎಂಬ ಮಂತ್ರವನ್ನು ಜಪಿಸಿದರು. ಆಗ ವೆಂಕಟನಾಥನು ಪುರೋಹಿತರು ಹೇಳಿಕೊಟ್ಟಂತೆ “ಬ್ರಹ್ಮರ್ಚಮಗಾಂ” ಎಂದು ಹೇಳಿದ ಮೇಲೆ ಗುರುರಾಜಾಚಾರರು ವಟುವಿನ ಬಲಗೈ ಹಿಡಿದು “ನಾಮಾಸಿ” ಎಂದು ಪ್ರಶ್ನಿಸಿದರು. ವಟುವು “ಯಜ್ಞಶರ್ಮನಾಮಾಸ್ಮಿ” ಎನಲು ಆಚಾರರು ಕಸ್ಯ ಬ್ರಹ್ಮಚಾರ್ಯಸಿ” ಎಂದು ಪ್ರಶ್ನಿಸಿದಾಗ ವೇಂಕಟನಾಥನು “ಪ್ರಾಣಸ್ಯ ಬ್ರಹ್ಮಚಾರ್ಯ” ಎಂದುತ್ತರಿಸಿದನು.
ಆನಂತರ “ಅದ್ದನಾಂ ಅದ್ದಪತೇ” ಎಂಬ ಮಂತ್ರವನ್ನು ಬ್ರಹ್ಮಚಾರಿಯಿಂದ ಹೇಳಿಸಿ, ಅವನನ್ನು ಅಗ್ನಿಗೆ ಅಭಿಮುಖವಾಗಿ ಕೂಡಿಸಿ “ಯೋಗೇ ಯೋಗೇತವಸ್ತರಂ” ಎಂಬ ಒಂಬತ್ತು ಮಂತ್ರಗಳಿಂದ, ಅವನಿಂದ ತುಪ್ಪದಿಂದ ಅಗ್ನಿಯಲ್ಲಿ ಹೋಮ ಮಾಡಿಸಿದರು. ಅನಂತರ ಹೋಮದ ಸಮೃದ್ಧಿಗಾಗಿ “ಚಿತ್ತಂ ಚ ಸ್ವಾಹಾ ಚಿತ್ತಾಖೈದಂ ನ ಮಮ” ಎಂಬ ಐವತ್ತೆಂಟು ಮಂತ್ರಗಳಿಂದ “ಜಯಾದಿ” ಹೆಸರಿನಹೋಮ ಮಾಡಿಸಿ ಪ್ರಾಣಾಯಾಮಾನಂತರ ವಟುವಿನ ಉಪನಯನ ಕರ್ಮದಲ್ಲಿ ಅವಿಜ್ಞಾತ ಪ್ರಾಯಶ್ಚಿತ್ತ ಹೋಮ ಮಾಡಿಸಿದರು. ಆಮೇಲೆ ದರ್ಭೆಯ ಕೂರ್ಚವನ್ನು ಉತ್ತರಾಗ್ರವಾಗಿ ಮಣೆಯಕೆಳಗೆ ಆಸನಕ್ಕಾಗಿ ಹಾಕಿ “ರಾಷ್ಟ್ರಭದಸ್ಯಾಚಾರ್ಯ” ಎಂಬ ಮಂತ್ರ ಹೇಳಿ ಕೂಡಿಸಿದರು.
ಆನಂತರ ವೇಂಕಟನಾಥನು ಎದ್ದು ನಿಂತು ತಾಯಿ ಗೋಪಮ್ಮನಿಗೂ ಗುರುಸ್ಥಾನದಲ್ಲಿರುವ ಅಣ್ಣಗುರುರಾಜಾಚಾರ ದಂಪತಿಗಳಿಗೆ, ಭಾವ-ಅಕ್ಕಂದರಿಗೆ ಪಾದಪೂಜೆ ಮಾಡಿದನು. ತದನಂತರ ಕರಜೋಡಿಸಿ “ಸಾವಿತ್ರೀಂ ಭೋ ಅನುಬ್ರಹಿ” ಎಂದು ಅಣ್ಣನನ್ನು ಪ್ರಾರ್ಥಿಸಿದನು. ಆಗ ಗುರುರಾಜಾಚಾರರು ತಾಯಿ-ಭಾವ ಮತ್ತು ಶ್ರೀಮಠದ ಪ್ರತಿನಿಧಿಗಳು, ಹಿರಿಯರ ಅಪ್ಪಣೆಪಡೆದು ವೆಂಕಟನಾಥನ ಬಲಕರವನ್ನು ಹಿಡಿದು ಬಲತೊಡೆಯಮೇಲೆ ಕೂಡಿಸಿಕೊಂಡು ಪರಿಷತ್ತಿನ ಅಪ್ಪಣೆಪಡೆದು ತಮ್ಮಿಬ್ಬರ ಮೇಲೂ ವಸ್ತ್ರದಿಂದ ಮುಸುಕುಹಾಕಿಕೊಂಡು ವೆಂಕಟನಾಥನಿಗೆ ಬ್ರಹ್ಮಪದೇಶ ಮಾಡಿದರು.
ಮೊದಲು ಧೈಯಸ್ಸದಾ ಸವಿತೃಮಂಡಲಮಧ್ಯವರ್ತಿ ನಾರಾಯಣಃ ಸರಸಿಜಾಸನ ಸನ್ನಿವಿಷ್ಟಃ | ಕೇಯೂರರ್ವಾ ಮಕರಕುಂಡಲವಾನ್ ಕಿರೀಟೀ ಹಾರೀ ಹಿರಣ್ಮಯವಪುಃ ಧೃತಶಂಖಚಕ್ರಃ || ಪ್ರೋದ್ಯದಾದಿತ್ಯ ವರ್ಣಾಭಃ ಸೂರಮಂಡಲ ಮಧ್ಯಗಃ | ಚಕ್ರಶಂಖಧರೋಂಕಸ್ಥ ದೋರ್ಧ್ವಯೋ ರ್ಧೈಯ ಏವ ಚ ||” ಎಂಬ ಗಾಯತ್ರೀಮಂತ್ರದ ಧ್ಯಾನಶ್ಲೋಕವನ್ನು ಉಪದೇಶಿಸಿ, “ಓಂ ಭೂರ್ಭುವಸ್ವಃ ತತ್ಸವಿತೃವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ||” ಎಂದು ಗಾಯತ್ರೀಮಂತ್ರವನ್ನೂ ಪಾದ, ಅರ್ಧ, ಪೂರ್ಣಪಾಠದೊಡನೆ ಉಪದೇಶಿಸಿ, ಶ್ರೀನಾರಾಯಣ ಅಷ್ಟಾಕ್ಷರಮಂತ್ರ ಮತ್ತು ಗುರುಮಂತ್ರವನ್ನು ಉಪದೇಶಿಸಿದರು.
ಆ ತರುವಾಯ ವೇಂಕಟನಾಥನು 'ಅವೃಧಮಸೌ' ಎಂಬ ಮಂತ್ರದಿಂದ ತುಟಿಯನ್ನು ಸವರಿಕೊಂಡು ಆಚಮನಮಾಡಿ ಕರ್ಣಗಳನ್ನು ಕರಗಳಿಂದ ಸ್ಪರ್ಶಿಸಿ “ಬ್ರಹ್ಮಣ ಆಣೀಸ್ತಾ” ಎಂಬ ಮಂತ್ರ ಹೇಳಿ ಪಾಲಾಶದಂಡವನ್ನು ಹಿಡಿದು “ಸ್ಕೃತಂ ಚ ಮೇ ಸ್ಮೃತಂ ಚ ಮೇ” ಎಂದಾರಂಭಿಸಿ “ಸರ್ವವ್ರತೋ ಭೂಯಾಸಂ” ಎಂಬವರೆಗೆ ಗುರುರಾಜಾಚಾರರು ಹೇಳಿಕೊಟ್ಟ ಮಂತ್ರವನ್ನುಚ್ಚರಿಸಿ ಕಾಣಿಕೆ ನೀಡಿ, “ದೇವಸ್ಯತ್ವಾ ಸವಿತುಃ” ಎಂಬ ಮಂತ್ರದಿಂದ ಅಣ್ಣನಿಗೆ ನಮಸ್ಕರಿಸಿದನು. ಆಗ ಆಚಾರರು “ಉದಾಯುಷಾ” ಎಂಬ ಮಂತ್ರ ಹೇಳಿ ವಟುವನ್ನು ಎಬ್ಬಿಸಿ ಆಲಿಂಗಿಸಿ “ಎಲೈ ವಟುವೇ ನೀನು ವೇದಾಧ್ಯಯನ-ಶಾಸ್ತ್ರಾಧ್ಯಯನ- ವ್ಯಾಖ್ಯಾನ ಸಮರ್ಥನಾಗು” ಎಂದಾಶೀರ್ವದಿಸಿದರು.
ತರುವಾಯ ಗುರುರಾಜಾಚಾರರು ತಮ್ಮನಿಗೆ ಸಮಿದಾಧಾನವನ್ನು ಉಪದೇಶಿಸಿ ಅಗ್ನಿಕಾರ್ಯ ಮಾಡಿಸಿದರು. ನಂತರ ವೇಂಕಟನಾಥನು “ಯತ್ತೇ ಅಷ್ಟೇ ತೇಜಸ್ತೇನ ಅಹು ಗುಂ ತೇಜಸ್ವೀ ಭೂಯಾಸ” ಎಂದಾರಂಭಿಸಿ” ಮಯಿಸೂರೋ ಭ್ರಾಜೋದಧಾತು” ಎಂಬವರೆಗೆ ಮಂತ್ರಹೇಳಿ ಅನ್ನು ಪಸ್ಥಾನಮಾಡಿ, ಅಗ್ನಿಯ ಉತ್ತರಭಾಗದಿಂದ ರಕ್ಷೆಯನ್ನು ಸ್ವೀಕರಿಸಿ, 'ಮಾನಸ್ತೋಕೆ' ಮಂತ್ರದಿಂದ ರಕ್ಷೆಯನ್ನು ಅಭಿಮಂತ್ರಿಸಿ ಮೇಧಾವೀ ಭೂಯಾಸಂ' ಇತ್ಯಾದಿ ಕ್ರಮದಿಂದ ಹಣೆ, ಶಿರಸ್ಸು ಮುಂತಾದ ಸ್ಥಳಗಳಲ್ಲಿ ರಕ್ಷೆಯನ್ನು ಹಚ್ಚಿಕೊಂಡು “ಸ್ವಸ್ತಿಶ್ರದ್ಧಾ ಮೇಧಾಂ” ಮುಂತಾಗಿ ಅಗ್ನಿಯನ್ನು ಪ್ರಾರ್ಥಿಸಿ, ತನ್ನೆರಡು ಹಸ್ತಗಳಿಂದ ಕಿವಿಗಳನ್ನು ಸ್ಪರ್ಶಿಸುತ್ತಾ ಚತುಸ್ಸಾಗರಪರಂತಂ ಗೋಬ್ರಾಹ್ಮಣೇಭ್ಯಃ ಶುಭಂ ಭವತು. ಆಂಗೀರಸ ಆಯಾಸ್ಯ ಗೌತಮ್ ತಯಾರ್ಷೇಯ ಪ್ರವರಾನ್ವಿತ ಗೌತಮ್‌ಸಗೋತ್ರಃ ಆಪಸ್ತಂಭಸೂತ್ರಃ ಯಜುಶಾಖಾಧ್ಯಾಯೀ ವೇಂಕಟನಾಥಶರ್ಮಾಹು ಭೂ ಅಭಿವಾದಯೇ” ಎಂದು ಪ್ರವರೋಚ್ಚಾರಪೂರ್ವಕವಾಗಿ ನಮಸ್ಕರಿಸಿದನು.
ಆನಂತರ ಗುರುರಾಜಾಚಾರ್ಯರು ವಿಧ್ಯುಕ್ತವಾಗಿ “ಬ್ರಹ್ಮಚಾರ್ಯಸಿ” ಎಂಬ ಆರು ಅರ್ಥಗಳುಳ್ಳ ಸಂಶಾಸನವನ್ನು ಮಾಡಿದರು. ಅನಂತರ ವೆಂಕಟಾಂಬಾ-ಕಮಲಾದೇವಿಯರಿಂದ “ ಭವತಿ ಭಿಕ್ಷಾ ಧೇಹಿ” ಎಂದು ಮಾತೃಭಿಕ್ಷೆಯನ್ನು ಸ್ವೀಕರಿಸಿದನು.
ತರುವಾಯ ಫಲಪೂಜೆ ಮಾಡಿ ಗುರುರಾಜಾಚಾರ, ವೇಂಕಟನಾಥಾಚಾರರು ಶ್ರೀಮಠದ ಪ್ರತಿನಿಧಿಗಳಾದ, ಶ್ರೀನರಸಿಂಹಾಚಾರರಿಗೆ ಗಂಧ, ಪುಷ್ಪಹಾರ. ಫಲ ತಾಂಬೂಲ, ದಕ್ಷಿಣೆಗಳನ್ನು “ನಕರ್ಮಣಾ” ಎಂಬ ವೇದಮಂತ್ರ ಮತ್ತು ಶ್ರೀಮಠದ ಬಿರುದಾವಳಿ, ಗುರುನಾಮೋಚ್ಚಾರಣ ಪೂರ್ವಕವಾಗಿ ಸಮರ್ಪಿಸಿ ಆಶೀರ್ವಾದ ಪಡೆದರು. ಅದಾದ ಮೇಲೆ ಸರ್ವಬ್ರಾಹ್ಮಣ-ಸುವಾಸಿನಿಯರಿಗೆ ಫಲತಾಂಬೂಲ-ದಕ್ಷಿಣಾ ಪ್ರದಾನವಾಯಿತು.
ಆಗ ಉಭಯಗುರುಗಳು ಕಳಿಸಿಕೊಟ್ಟಿದ್ದ ಉಡುಗೊರೆ ಫಲ-ಮಂತ್ರಾಕ್ಷತೆಗಳನ್ನು ನರಸಿಂಹಾಚಾರರು ಗುರುರಾಜಾಚಾರ ದಂಪತಿಗಳು, ವೇಂಕಟನಾಥನಿಗೆ ಕೊಟ್ಟು ಆಶೀರ್ವದಿಸಿದರು. ತರುವಾಯ ಅನೇಕ ಬಂಧು-ಬಾಂಧವ, ಮಿತ್ರ, ಪರಿಚಿತರು ಉಡುಗೊರೆಗಳನ್ನರ್ಪಿಸಿದರು.
ಆನಂತರ ಯಜುಶ್ಯಾಖೆಯ ಸಂಪ್ರದಾಯದಂತೆ ಗುರುರಾಜಾಚಾರೈರು ವೇಂಕಟನಾಥನಿಗೆ ಮಾಧ್ಯಾತ್ಮಿಕ ಸಂಧ್ಯೆಯನ್ನು ಹೇಳಿಕೊಟ್ಟು ಮಾಡಿಸಿದರು. ತರುವಾಯ ಭೂರಿಭೋಜನವಾಯಿತು. ಬ್ರಾಹ್ಮಣರು ಭೋಜನಕ್ಕೆ ಕೂಡುವ ಮೊದಲು ವೇಂಕಟನಾಥನು ಐದು ಜನ ಬ್ರಾಹ್ಮಣರಿಂದ “ಭವಾನ್ ಭಿಕ್ಷಾನ್ ದದಾತು” ಎಂದು ಪ್ರಾರ್ಥಿಸಿ ಭಿಕ್ಷೆಯನ್ನು ಸ್ವೀಕರಿಸಿದನು. ಭೂರಿಭೋಜನಾನಂತರ ಬ್ರಾಹ್ಮಣಾಶೀರ್ವಾದವಾದ ಮೇಲೆ ಆಪ್ತಷರೊಡನೆ ಗುರುರಾಜಾಚಾರ ಮುಂತಾದವರು ಭೋಜನಕ್ಕೆ ಕುಳಿತರು. ಆಗ ಆಚಾರರು ತಮ್ಮನಿಗೆ ಪರಿಶೇಚನೆ, ಚಿತ್ರಾವತಿ ಸಮರ್ಪಣೆ, ಪ್ರಾಣಾಹುತಿಕ್ರಮಗಳನ್ನು ಹೇಳಿಕೊಟ್ಟರು. ಆನಂತರ ಸರ್ವರೂ ಭೋಜನ ಮಾಡಿದರು.
ಸಾಯಂಕಾಲ ವೇಂಕಟನಾಥನಿಗೆ ಸಾಯಂಸಂಧ್ಯಾ, ಅಗ್ನಿಕಾರ್ಯಗಳನ್ನು ಹೇಳಿಕೊಟ್ಟು ಮಾಡಿಸಿದರು. ವೇಂಕಟನಾಥ ವೇದಾಧ್ಯಯನಾಧಿಕಾರಿಯಾದ, ರಾತ್ರಿ ಆರತಕ್ಷತೆಗಳು ವಿಜೃಂಭಣೆಯಿಂದ ನಡೆಯಿತು. ಹೀಗೆ ವೇಂಕಟನಾಥನ ಉಪನಯನ ಸಮಾರಂಭವು ವೇದೋಕ್ತಕ್ರಮದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಉಪನಯನದ ಸಂಭ್ರಮವೆಲ್ಲವೂ ಮುಗಿದಮೇಲೆ ಲಕ್ಷ್ಮೀನರಸಿಂಹಾಚಾರೈರು ರಾಮಚಂದ್ರಾಚಾರರು, ಗೋಪಮ್ಮ, ಗುರುರಾಜಾಚಾರ ದಂಪತಿಗಳು ಮತ್ತು ವೇಂಕಟನಾಥರು ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿರುವಾಗ ಗುರುರಾಜಾಚಾರರ ಪ್ರೌಢವ್ಯಾಸಂಗ, ವೇಂಕಟನಾಥನ ಗುರುಕುಲವಾಸ ಮುಂತಾದ ವಿಚಾರಗಳ ಬಗ್ಗೆ ಚರ್ಚಿಸಿದರು. ಕೊನೆಗೆ ಲಕ್ಷ್ಮೀನರಸಿಂಹಾಚಾರ-ರಾಮಚಂದ್ರಾಚಾರರ ಸಲಹೆ, ಶ್ರೀವಿಜಯೀಂದ್ರಗುರುಗಳ ಆದೇಶದಂತೆ, ವೇಂಕಟನಾಥನು ಮಧುರೆಯಲ್ಲಿ ಅಕ್ಕ-ಭಾವಂದಿರ ಆಶ್ರಯದಲ್ಲಿದ್ದು ವ್ಯಾಸಂಗ ಮಾಡುವುದೆಂದೂ ಗುರುರಾಜಾಚಾರ್ಯ ದಂಪತಿಗಳು ತಾಯಿಯೊಡನೆ ಕುಂಭಕೋಣದಲ್ಲಿ ಶ್ರೀಮಠದ ಆಶ್ರಯದಲ್ಲಿದ್ದು ನ್ಯಾಯ-ಮಿಮಾಂಸಾ, ವೇದಾಂತಶಾಸ್ತ್ರಗಳ ಉದ್ಭಂಥಗಳನ್ನು ಅಧ್ಯಯನ ಮಾಡುವುದೆಂದೂ ತೀರ್ಮಾನಿಸಲಾಯಿತು.
ಲಕ್ಷ್ಮೀನರಸಿಂಹಾಚಾರರು, “ಶ್ರೀಹರಿವಾಯುಗಳು, ಉಭಯಗುರುಪಾದರ ಅನುಗ್ರಹಾಶೀರ್ವಾದಬಲದಿಂದ ನಾನೀಗ ಮಧುರೆಯ ಆಸ್ಥಾನ ಮಹಾಪಂಡಿತನಾಗಿ, ವಿದ್ಯಾಪೀಠದ ನ್ಯಾಯ-ವೇದಾಂತಶಾಸ್ತ್ರಗಳ ಪ್ರಧಾನಾಧ್ಯಾಪಕನಾಗಿದ್ದೇನೆ. ನಮ್ಮ ವೇಂಕಟನಾಥನನ್ನು ವಿದ್ಯಾಪೀಠಕ್ಕೆ ಸೇರಿಸಿ ಅಲ್ಲಿ ಮತ್ತು ಮನೆಯಲ್ಲಿ ನಾನೇ ಸ್ವತಃ ಪಾಠಹೇಳಿ ಉತ್ತಮ ವಿದ್ವಾಂಸನನ್ನಾಗಿ ಮಾಡುತ್ತೇನೆ. ಈ ಬಗ್ಗೆ ಸಂಶಯಬೇಡ, ಗುರುರಾಜಾ ! ನೀನು ಶ್ರೀಸುಧೀಂದ್ರಗುರುಗಳಲ್ಲಿ ಉದ್ಭಂಥವ್ಯಾಸಂಗಮಾಡಿ ಮಹಾ ಪಂಡಿತನೆನಿಸಿ ಶ್ರೀಮಠದ ಆಸ್ಥಾನಪಂಡಿತನಾಗಿ, ವಿದ್ಯಾಪೀಠದ ಅಧ್ಯಾಪಕನಾಗಿ ಕೀರ್ತಿ-ಪ್ರತಿಷ್ಠೆಗಳನ್ನು ಗಳಿಸು, ವೇಂಕಟನಾಥನ ವಿದ್ಯಾಭ್ಯಾಸ ಪೂರ್ಣವಾದ ಮೇಲೆ ನೀವೆಲ್ಲರೂ ಒಂದೆಡೆ ಸುಖವಾಗಿ ಬಾಳಿರಿ” ಮುಂತಾಗಿ ಹೇಳಿದರು.
ಗೋಪಮ್ಮನವರು “ಪೂಜ್ಯ ಗುರುಗಳು ನಮ್ಮ ವಂಶದ ಹಿತಚಿಂತಕರು, ನಮ್ಮ ಪೋಷಕರು. ಅವರ ಅಪ್ಪಣೆ ಮತ್ತು ಅಳಿಯಂದಿರ ಅಭಿಪ್ರಾಯಗಳಂತೆ ನೀವು ನಡೆದು ಅಭಿವೃದ್ಧಿಗೆ ಬರಬೇಕು” ಎಂದು ಮಕ್ಕಳಿಗೆ ಹೇಳಿದರು.
ಹೀಗೆ ಒಂದು ರೀತಿಯಾಗಿ ಎಲ್ಲವೂ ನಿಶ್ಚಯವಾದ ಮೇಲೆ ರಾಮಚಂದ್ರಾಚಾರರು ಈ ವಿಚಾರಗಳನ್ನು ಗುರುಗಳಲ್ಲಿ ವಿಜ್ಞಾಪಿಸುವುದಾಗಿ ಹೇಳಿ ಕುಂಭಕೋಣಕ್ಕೆ ಹೊರಟರು.
ಒಂದು ಶುಭಮುಹೂರ್ತದಲ್ಲಿ ಲಕ್ಷ್ಮೀನರಸಿಂಹಾಚಾರರು-ವೆಂಕಟಾಂಬ-ವೆಂಕಟನಾಥರು ಮಧುರೆಗೆ ಪ್ರಯಾಣ ಬೆಳಸಿದರು. ಗುರುರಾಜಾಚಾರೈರು ತಂದೆ ತಿಮ್ಮಣ್ಣಾಚಾರರ ವೀಣೆಯನ್ನು ವೆಂಕಟನಾಥನಿಗೆ ಕೊಟ್ಟು ವೀಣಾಭ್ಯಾಸವನ್ನೂ ಬಿಡದೆ ಮಾಡುತ್ತಿರಬೇಕೆಂದು ಹೇಳಿ ಅವರನ್ನು ಊರ ಹೊರವಲಯದವರಿಗೆ ಬಂದು ಬೀಳ್ಕೊಟ್ಟ, ಸಮಾಧಾನದ ನಿಟ್ಟಿಸುರುಬಿಟ್ಟು ಮನೆಗೆ ಹಿಂದಿರುಗಿದರು