ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೨೮. ಪಿತೃವಿಯೋಗ
ಗೋಪಿಕಾಂಬಾದೇವಿಗೆ ಸೊಸೆಯು ಮನೆಗೆ ಬಂದಿದ್ದರಿಂದ ಪರಮಸಂತೋಷವಾಗಿತ್ತು. ಷಾಷಿಕಮನೆತನದಲ್ಲಿ ಅನುವಂಶಿಕವಾಗಿ ನಡೆದುಬಂದು ಪದ್ಧತಿಯ ಪ್ರಕಾರವಾಗಿ ಕುಲವಧುಗಳಿಗೆ ಮುಖ್ಯವಾದ ಅನೇಕ ಪೂಜಾ-ಪುರಸ್ಕಾರಗಳನ್ನು ಗೋಪಮ್ಮ ಪ್ರೀತಿಯ ಸೊಸೆ ಕಮಲಾದೇವಿಯಿಂದ ಮಾಡಿಸಿದಳು. ಚೈತ್ರಮಾಸದಲ್ಲಿ ಭದ್ರಾಸನದಲ್ಲಿ ಉಯ್ಯಾಲೆಯ ವಸಂತಗೌರಿಯನ್ನು ಕೂಡಿಸಿ ಒಂದು ತಿಂಗಳಕಾಲ ಊರಿನ ಸುಮಂಗಲೆಯರನ್ನು ಮನೆಗೆ ಕರೆದು ಸೊಸೆಯಿಂದ ವೈಭವಪೂರ್ಣವಾಗಿ ವಸಂತಗೌರಿಯ ಪೂಜೆಮಾಡಿಸಿ, ಮುತ್ತೈದೆಯರಿಗೆ ಕಾಲುತೊಳೆಯಿಸಿ, ಸೊಸೆಯಿಂದ ಅರಿಶಿನ, ಕುಂಕುಮ ಗಂಧ, ವೀಳ್ಯ, ಪ್ರಸಾದಗಳನ್ನು ಕೊಡಿಸಿ ಆಶೀರ್ವಾದ ಮಾಡಿಸಿ ಸಂತೋಷಿಸಿದಳು.
ಆಷಾಢಕೃಷ್ಣ ದ್ವಾದಶಿ ದಿವಸ ದೀಪಧೂಪನೈವೇದ್ಯಾದಿಗಳಿಂದ ಮಂಗಳಗೌರಿಯ ಪೂಜೆಯನ್ನು ಸೊಸೆಯಿಂದ ನೆರವೇರಿಸಿ ಸುವಾಸಿನಿಯರಿಗೆ ಅರಿಶಿನ, ಕುಂಕುಮ, ತಾಂಬೂಲಗಳನ್ನು ಕೊಡಿಸಿದರು. ಆಷಾಢ ಕೃಷ್ಣ ಅಮಾವಾಸ್ಯಾದಿವಸ ಕಮಲಾದೇವಿಯಿಂದ ದಿವಸೀ ಗೌರಿಯ ಪೂಜೆ ಮಾಡಿಸಿದರು. ಸಂಪ್ರದಾಯದಂತೆ ಅಂದು 'ಗಂಡನ ಪೂಜೆ' ಯನ್ನು ನೆರವೇರಿಸಲಾಯಿತು. ಗೋಪಮ್ಮ ಪುತ್ರಗುರುರಾಜನನ್ನು ಆಸನದಲ್ಲಿ ಕೂಡಿಸಿದಾಗ ಮನೆಯ ಪರಿವಾರದವರೆಲ್ಲರೂ ಆನಂದದಿಂದ ಹಾಸ್ಯ ಚಟಾಕಿಯನ್ನೆಸೆಯುತ್ತಿರುವಾಗ ಕಮಲಾದೇವಿಯು ಲಜ್ಜೆಯಿಂದ ಗಂಡನಪೂಜೆಮಾಡಿ ಎಲ್ಲರನ್ನೂ ಸರಿತೋಷಗೊಳಿಸಿದಳು.
ಇದರಂತೆ ಗೋಪಕಾಂಬಾದೇವಿಯು ಶ್ರಾವಣಮಾಸದಲ್ಲಿ ಐದು ಮಂಗಳವಾರಗಳಲ್ಲಿ ಗೌರೀಪೂಜೆಯನ್ನು, ಭಾದ್ರಪದಮಾಸದಲ್ಲಿ ವಿದ್ಯುಕ್ತವಾಗಿ ಸ್ವರ್ಣಗೌರಿ, ವಿನಾಯಕನ ಪೂಜೆಗಳನ್ನೂ ಪ್ರೀತಿಯ ಸೊಸೆಯಿಂದ ಮಾಡಿಸಿ, ಹದಿನಾರುಜನ ಸುಮಂಗಲೆಯರಿಗೆ ಮರದಬಾಗಣವನ್ನು ಕೊಡಿಸಿ, ಅವರಿಂದ “ಸೌಮಂಗಲ್ಯಾಭಿವೃದ್ಧಿರಸ್ತು” ಎಂದು ಆಶೀರ್ವಾದಮಾಡಿಸಿದಳು.
ಕಮಲಾದೇವಿಯು ಪೂಜಾಪುರಸ್ಕಾರಗಳಿಂದಲೂ, ವಿನಯವಿಧೇಯತೆ, ಶೀಲಾದಿ ಸದ್ಗುಣಗಳಿಂದಲೂ ಎಲ್ಲರನ್ನೂ ಸಂತೋಷಪಡಿಸುತ್ತಾ ಅತ್ತೆ, ಮಾವ ಪತಿಗಳ ಮತ್ತು ಇತರ ಹಿರಿಯರ ಸೇವೆಮಾಡುತ್ತಾ ಮೈದುನ ವೇಂಕಟನಾಥನಲ್ಲಿ ಪುತ್ರವತ್ ಪ್ರೀತಿಮಾಡುತ್ತಾ, ಅತ್ತೆಮಾವಂದಿರಿಗೆ ಅಚ್ಚುಮೆಚ್ಚಾಗಿ ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರಳಾದಳು.
ಬಹುದಿನದಿಂದ ತಿಮ್ಮಣ್ಣಾಚಾರ್ಯರಿಗೆ ರಾಮೇಶ್ವರಯಾತ್ರೆ ಮಾಡುವ ಹಂಬಲವಿದ್ದಿತು. ತಮ್ಮ ಮನದಾಶೆಯನ್ನು ಪತ್ನಿಪುತ್ರಾದಿಗಳಲ್ಲಿ ಪ್ರಸ್ತಾಪಿಸಿ ಅವರೆಲ್ಲರ ಸಲಹೆ ಪಡೆದು ಒಂದು ಶುಭದಿವಸ ಕುಟುಂಬಸಹಿತರಾಗಿ ಆಚಾರರು ಮಧುರೆ, ರಾಮನಾಡು ಮಾರ್ಗವಾಗಿ ರಾಮೇಶ್ವರಯಾತ್ರೆಗೆ ಹೊರಟರು. ಮಧುರೆಯಲ್ಲಿ ಅಳಿಯ ಲಕ್ಷ್ಮೀನರಸಿಂಹಾಚಾರ್ಯರ ಮನೆಯಲ್ಲಿ ಒಂದೆರಡುದಿನವಿದ್ದು ಮತ್ತೆ ಹೊರಟು ರಾಮನಾಡಿನಲ್ಲಿ ಪರಿಚಿತರ-ಮಿತ್ರರ ಆಗ್ರಹದಿಂದ ಎರಡುದಿನ ಅವರ ಆತಿಥ್ಯ ಸ್ವೀಕರಿಸಿ ಅಲ್ಲಿಂದ ಹೊರಟು ಕೆಲದಿನಗಳಲ್ಲಿ ರಾಮೇಶ್ವರವನ್ನು ತಲುಪಿದರು.
ಆಚಾರರು ಕುಟುಂಬಪರಿವಾರಸಹಿತರಾಗಿ ಸೇತುಸ್ನಾನ, ಬಿಂದುಮಾಧವ, ರಾಮೇಶ್ವರರ ದರ್ಶನ, ಸೇವಾದಿಗಳಿಂದ ದೃಷ್ಟಾಂತಃಕರಣರಾದರು. ದರ್ಭಶಯನ ಮತ್ತಿತರ ಪ್ರೇಕ್ಷಣೀಯಸ್ಥಳಗಳ ತೀರ್ಥದರ್ಶನ, ಸೇವನಗಳಿಂದ ಆನಂದಿಸಿ, ಕ್ಷೇತ್ರವಿಧಿಗಳನ್ನು ಪೂರೈಸಿದರು. ರಾಮೇಶ್ವರದಲ್ಲಿ ಆಚಾರರು ಹದಿನೈದುದಿನಗಳವರೆಗಿದ್ದು ಪ್ರತಿದಿನ ಸಮುದ್ರಸ್ನಾನ, ದೇವರದರ್ಶನ, ದಾನಧರ್ಮಾದಿಗಳಿಂದ ಪವಿತ್ರಾತ್ಮರಾದರು. ಹೊರಡುವಮುನ್ನ ದೇವರಿಗೆ ಸೇವೆಸಲ್ಲಿಸಿ, ಪ್ರಸಾದಸ್ವೀಕರಿಸಿ ಸಂತೋಷದಿಂದ ಊರಿನಕಡೆ ಪ್ರಯಾಣಬೆಳೆಸಿದರು. ಪ್ರತಿದಿನ ಪ್ರಯಾಣಮಾಡುತ್ತಾ ಅಲ್ಲಲ್ಲಿ ಉಳಿದು ದೇವಪೂಜಾ, ಭೋಜನಾದಿಗಳನ್ನು ಪೂರೈಸಿ ಮತ್ತೆ ಪ್ರಯಾಣಿಸುತ್ತಾ ಶ್ರಾವಣ ಶುಕ್ಲ ಪಂಚಮಿಯ ಹಾಗೆ ಕಾವೇರಿಪಟ್ಟಣಕ್ಕೆ ಬಂದುಸೇರಿದರು. ಶ್ರಾವಣ ಕೃಷ್ಣ ಅಷ್ಟಮೀ ದಿವಸ ಕೃಷ್ಣಾಷ್ಟಮೀ ವ್ರತವನ್ನೂ, ಮರುದಿವಸ ಪಾರಣೆಯನ್ನೂ ಅದರೊಂದಿಗೆ ರಾಮೇಶ್ವರಯಾತ್ರಾಸಮಾರಾಧನೆಯನ್ನೂ ವಿಜೃಂಭಣೆಯಿಂದ ಆಚರಿಸಿ ಬ್ರಾಹ್ಮಣಸುವಾಸಿನಿಯರಿಗೆ ಮೃಷ್ಟಾನ್ನಭೋಜನಮಾಡಿಸಿ, ಫಲ, ತಾಂಬೂಲ ದಕ್ಷಿಣೆಗಳನ್ನಿತ್ತು ಸಂತೋಷಪಡಿಸಿದರು.
ಅನೇಕ ದಿನಗಳ ಪ್ರಯಾಣ, ಕಾಯಶ್ಲೇಷಗಳಿಂದ ತಿಮ್ಮಣ್ಣಾಚಾರ್ಯರು ಹಾಸಿಗೆ ಹಿಡಿದರು. ಗೋಪಮ್ಮ ಗುರುರಾಜಾಚಾರರು ವೈದ್ಯರಿಂದ ಔಷಧೋಪಚಾರಗಳನ್ನು ಮಾಡಿಸಿ ಹಗಲೂ ರಾತ್ರಿ ಸೇವೆಮಾಡಿದರು. ಅದರ ಫಲವಾಗಿ ಆಚಾರರ ದೇಹಸ್ಥಿತಿ ಸುಧಾರಿಸಿತು. ಮನೆಯವರಿಗೆಲ್ಲಾ ಮನಸ್ಸಮಾಧಾನವಾಯಿತು.
ಆಚಾರರ ಮನೆಯಲ್ಲಿ ಭಾದ್ರಪದ ಶುಕ್ಲತದಿಗೆ-ಚೌತಿದಿನಗಳಲ್ಲಿ ಸಂಪ್ರದಾಯದಂತೆ ಸ್ವರ್ಣಗೌರಿ-ಗಣಪತಿಹಬ್ಬವನ್ನಾ- ಚರಿಸಲಾಯಿತು. ಗೋಪಮ್ಮ ಗೌರೀಪಾಜೆ-ಗಣೇಶನ ಪೂಜೆಗಳನ್ನು ಭಕ್ತಿಯಿಂದಾಚರಿಸಿದರು. ಅಂದು ರಾತ್ರಿ ಆಚಾರರಿಗೆ ಎದೆನೋವು ಕಾಣಿಸಿಕೊಂಡಿತು. ವೈದ್ಯರು ಬಂದು ಔಷಧವಿತ್ತು ಹೋದರು. ಮರುದಿನ ಮತ್ತೆ ಎದೆನೋವುಂಟಾಯಿತು. ಮನೆಯವರೆಲ್ಲಾ ಗಾಬರಿಯಾದರು. ಆಚಾರರು ಗುರುರಾಜನನ್ನು ಕರೆದು ಅವನಿಗೆ ಅನೇಕ ವಿಚಾರಗಳನ್ನು ತಿಳಿಸಿ ನ್ಯಾಯವೇದಾಂತಾದಿ ಶಾಸ್ತ್ರಗಳ ಉದ್ಬಂಥಗಳನ್ನು ಗುರುಪಾದ ಶ್ರೀಸುಧೀಂದ್ರರಲ್ಲಿ ವ್ಯಾಸಂಗಮಾಡಿ ಶ್ರೇಷ್ಠಪಂಡಿತರಾಗಿ ಮಶಗೌರವ ಕಾಪಾಡಬೇಕೆಂದೂ, ಕುಮಾರ ವೇಂಕಟನಾಥನನ್ನು ಸರ್ವವಿಧದಿಂದ ಸಂರಕ್ಷಿಸಿ ಮುಂದಕ್ಕೆ ತರಬೇಕೆಂದೂ ಹೇಳಿ ಗುರುರಾಜನಿಂದ ಹಾಗೆ ಮಾಡುವುದಾಗಿ ವಚನ ಪಡೆದರು. ಇದರಿಂದ ಗೋಪಮ್ಮನಿಗೆ ಏನೋ ಭಯ-ಕಳವಳ-ಸಂಕಟಗಳಾಗಹತ್ತಿತು. ಅವರು ಪತಿಯ ಪಾದಗಳ ಮೇಲೆ ಶಿರವಿರಿಸಿ ನಮಸ್ಕರಿಸಿ, “ನನ್ನ ಕೈ ಬಿಡಬೇಡಿ” ಎಂದು ಗಳಗಳನೆ ಅತ್ತುಬಿಟ್ಟರು. ಆಚಾರ್ಯರ ಕಣ್ಣಿನಲ್ಲಿಯೂ ನೀರೂರಿತು. ಪ್ರೇಮದಿಂದ ಪತ್ನಿಯ ಭುಜ ಹಿಡಿದು ಮೇಲೆತ್ತಿ ಆಚಾರರು “ಗೋಪಿ, ಏಕೆ ಹೆದರುವೆ ? ನನಗೇನೂ ಆಗುವುದಿಲ್ಲ, ಚಿಂತಿಸಬೇಡ” ಎಂದು ಸಮಾಧಾನ ಹೇಳಿದರು. ದೈವಾನುಗ್ರಹದಿಂದ ನಾಲ್ಕಾರು ದಿನಗಳಲ್ಲಿ ಆಚಾರರ ಆರೋಗ್ಯ ಸುಧಾರಿಸಿತು, ಆದರೂ ತುಂಬಾ ನಿಶ್ಯಕ್ತರಾಗಿದ್ದುದರಿಂದ ಅವರು ಸಂಪೂರ್ಣ ವಿಶ್ರಾಂತಿಯಲ್ಲಿರಬೇಕೆಂದು ವೈದ್ಯರು ಹೇಳಿದರು. ಅದರಂತೆ ಆಚಾರರು ತಮ್ಮ ಕೊಠಡಿಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು.
ಒಂದು ದಿನ ಅಚಾರರ ಕೊಠಡಿಯಿಂದ ವೀಣೆಯ ಧ್ವನಿ ಕೇಳಿಸಿತು. ಗೋಪಮ್ಮ ಗುರುರಾಜ-ವೇಂಕಟನಾಥರು ಆಕಾಲದಲ್ಲೇಕೆ ವೀಣೆ ನುಡಿಸುವರೆಂದು ಕೊಠಡಿಗೆ ಹೋಗಿ ನೋಡಿದರು. ಆಚಾರರು ಮಂಚದಿಂದಿಳಿದು ಕೆಳಗೆ ಕೃಷ್ಣಾಜಿನದ ಮೇಲೆ ಕುಳಿತು ತೊಡೆಯ ಮೇಲೆ ವೀಣೆಯನ್ನಿಟ್ಟುಕೊಂಡು ನುಡಿಸುತ್ತಿದ್ದಾರೆ. ಅವರ ಕಣ್ಣುಗಳಿಂದ ನೀರು ಹರಿಯುತ್ತಿದೆ ಹೀಗೆ ಪತ್ನಿಪುತ್ರರು ಬಂದುದನ್ನು ನೋಡಿ ಹೋಗುವಂತೆ ಸಂಜ್ಞೆ ಮಾಡಿದರು. ಗೋಪಮ್ಮ ಪತಿಯ ಪಕ್ಕದಲ್ಲಿ ಕುಳಿತಳು. ಗುರುರಾಜಾಚಾರರು ಧೈರತಾಳಿ “ಅಪ್ಪಾ, ಈಗೇಕೆ ವೀಣೆಯನ್ನು ನುಡಿಸುತ್ತಿರುವೇ ? ವೈದ್ಯರು ಶ್ರಮಪಡಬಾರದೆಂದು ಹೇಳಿಲ್ಲವೇ ? ಆಯಾಸವಾಗುತ್ತದೆ” ಎನಲು ತಿಮ್ಮಣ್ಣಾಚಾರರು ಶುಷ್ಯನಗೆ ಬೀರಿ “ಗುರುರಾಜ ! ಇದೊಂದು ದಿನ ಮಾತ್ರ ವೀಣೆ ನುಡಿಸುತ್ತೇನೆ. ಮುಂದೆ ನೀವು ಬಾರಿಸು ಎಂದರೂ ಬಾರಿಸಲಾರೆ ! ಹೂಂ, ನೀವೆಲ್ಲ ಹೊರಗೆ ಹೋಗಿರಿ” ಎಂದರು. ಎದುರು ಮಾತಾಡಲು ಧೈರವಿಲ್ಲದೆ ಗುರುರಾಜ-ವೇಂಕಟನಾಥರು ಹೊರಬಂದರು. ಗೋಪಮ್ಮ ಮಾತ್ರ ಪತ್ನಿಯನ್ನು ಬಿಟ್ಟು ಕದಲಲಿಲ್ಲ. ವೀಣೆಯ ನಿನಾದ ಎಲ್ಲೆಡೆ ಹರಡಹತ್ತಿತ್ತು. ಕರುಣಾರಸಪ್ರಧಾನವಾದ ನಾದನಾಮಾಕ್ರಿಯಾ' ರಾಗವಾಹಿನಿ ಅಲೆಅಲೆಯಾಗಿ ಹೊರಹೊಮ್ಮಿ ಬರುತ್ತಿದೆ. ತಮ್ಮ ಹೃದಯದ ನೋವನ್ನೆಲ್ಲಾ ಆ ರಾಗದ ಮೂಲಕ ತೋಡಿಕೊಳ್ಳುತ್ತಿರುವಂತೆ ಬಾರಿಸುತ್ತಿದ್ದರೆ ಎಲ್ಲರ ಮನವನ್ನು ಕಲುಕುತ್ತಿದೆ ನಾದವಾಹಿನಿ, ಆಚಾರರ ವೀಣಾವಾದನ ಮುಂದುವರೆಯುತ್ತಿದೆ. ಒಂದು, ಎರಡು, ಮೂರನೇ ಕಾಲಗಳಲ್ಲಿ ವೀಣಾವಾದನ ನಡೆಯುತ್ತಿದೆ. ಆಗ ಇದ್ದಕ್ಕಿದ್ದಂತೆ ವೀಣೆಯ ತಂತಿಯು ಕಡಿದು 'ತಣ್' ಎಂಬ ಶಬ್ದವಾಯಿತು. ಅದರೊಂದಿಗೆ “ಶ್ರೀನಿವಾಸ, ಶ್ರೀಮಧ್ವಗುರುರಾಜ, ಶ್ರೀವಿಜಯೀಂದ್ರ ಗುರೋ ನಮೋ ನಮಃ” ಎಂಬ ಧ್ವನಿಯೂ, ಕಿಟ್ಟನೆ ಕಿರುಚಿದ ತಾಯಿಯ ಹೃದಯವಿದ್ರಾವಕಧ್ವನಿಯೂ ಕೇಳಿಬಂದಿತು. ಅನಂತರ ನಿಃಶಬ್ದ, ನೀರವತೆ ಎಲ್ಲಾ ಕಡೆ ಪಸರಿಸಿತು ! ಮನೆಯವರೆಲ್ಲ ಗಾಬರಿಯಿಂದ ಆಚಾರರ ಕೊಠಡಿಗೆ ಧಾವಿಸಿದರು. ಆಚಾರರು ವೀಣೆಯ ಮೆಲೆ ತಲೆಯಿಟ್ಟು ಕುಳಿತಿದ್ದಾರೆ, ಅವರ ಕರಾಂಗುಲಿಗಳು ತಂತಿಯ ಮೇಲೆ ಸ್ತಬ್ಧವಾಗಿ ನಿಂತಿವೆ, ಹರಿದು ನೇತಾಡುತ್ತಿರುವ ತಂತಿಯೊಂದು ಆಚಾರರ ಜೀವನವೀಣೆಯು ಹರಿದುಹೋದ ಅಂತಿಮ ದೃಶ್ಯವನ್ನು ಪ್ರಕಟಿಸುತ್ತಾ ನಿಶ್ಚಲವಾಗಿ ಬಿದ್ದಿದೆ ! ಗೋಪಮ್ಮ ಮೂರ್ಛಿತರಾಗಿ ಬಿದ್ದಿದ್ದಾರೆ ! ಆಚಾರರ ನಿಧನದಿಂದ ಮನೆಯವರೆಲ್ಲರೂ ಶೋಕಾಬಿಯಲ್ಲಿ ಮುಳುಗಿಹೋದರು. ಊರಿನ ಪ್ರತಿಷ್ಠಿತ ಲೌಕಿಕ ವೈದಿಕ-ಪಂಡಿತಜನರೆಲ್ಲರೂ ಬಂದರು. ಜಗದ್ವಿಖ್ಯಾತಪಂಡಿತರು ಸ್ವರ್ಗಸ್ಥರಾದುದಕ್ಕೆ ಬಹಳ ದುಃಖಿಸಿ ಮನೆಯವರಿಗೆ ಬಹುವಿಧವಾಗಿ ಸಮಾಧಾನ ಹೇಳಿದರು. ಬ್ರಾಹ್ಮಣ ಸಮುದಾಯದವರು ಮುಂದೆ ನಿಂತು ಆಚಾರ್ಯರ ಅಂತ್ಯಕ್ರಿಯೆಯನ್ನು ಶಾಸ್ಪೋಕ್ತರೀತಿಯಲ್ಲಿನೆರವೇರಿಸಲು ಸಹಾಯಮಾಡಿದರು. 'ಮಹಾಪಂಡಿತರ ನಿಧನದಿಂದ ಭೂಸುರಸಮಾಜಕ್ಕೆ ಅಪಾರಹಾನಿಯಾಯಿತು' ಎಂದು ಎಲ್ಲರೂ ಕಣ್ಣೀರು ಸುರಿಸಿದರು.
ತಿಮ್ಮಣ್ಣಾಚಾರ್ಯರು ಸ್ವರ್ಗಸ್ಥರಾದ ವಿಚಾರ ತಿಳಿದು ಶ್ರೀರಂಗದಿಂದ ಆನಂದತೀರ್ಥಾಚಾರ ದಂಪತಿಗಳು, ಮಗ-ಸೊಸೆಯರು ಮಧುರೆಯಿಂದ ಲಕ್ಷ್ಮೀನರಸಿಂಹಾಚಾರ ದಂಪತಿಗಳು, ಕುಂಭಕೋಣದಿಂದ ಶ್ರೀವಿಜಯೀಂದ್ರರ ಅಪ್ಪಣೆಯಂತೆ ರಾಮಚಂದ್ರಾಚಾರ ಪ್ರಕೃತಿಗಳು ಕಾವೇರಿಪಟ್ಟಣಕ್ಕೆ ಬಂದು ಅಪರ ಕರ್ಮಾದಿಗಳೆಲ್ಲ ಸಾಂಗವಾಗಲು ಸಹಾಯಕರಾದರು ಮತ್ತು ಗೋಪಮ್ಮ, ಗುರುರಾಜ, ವೇಂಕಟನಾಥರಿಗೆ ಪರಿಪರಿಯಿಂದ ಸಮಾಧಾನ ಹೇಳಿದರು. ಶುಭಸ್ವೀಕಾರವಾದ ಮೇಲೆ ರಾಮಚಂದ್ರಾಚಾರೈರು ಮನೆಯವರೆಲ್ಲರನ್ನೂ ಕೂಡಿಸಿಕೊಂಡು ಶ್ರೀವಿಜಯೀಂದ್ರ-ಸುಧೀಂದ್ರ ಗುರುಗಳಿಗೆ ಪ್ರಿಯಶಿಷ್ಯ ತಿಮ್ಮಣ್ಣಾಚಾರ್ಯರ ನಿಧನದಿಂದಾದ ದುಃಖವನ್ನು ಹೇಳಿ “ಶ್ರೀಯವರು ಆಚಾರರ ಕುಟುಂಬದವರಿಗೆ ಸರ್ವವಿಧದಿಂದ ಸಹಾಯಮಾಡುವುದಾಗಿಯೂ, ಗುರುರಾಜಾಚಾರರು ಒಂದು ವರ್ಷ ಮನೆ ಜವಾಬ್ದಾರಿ ವಹಿಸಿದ್ದು ತಾಯಿ, ತಮ್ಮಂದಿರ ರಕ್ಷಣೆ, ವೇಂಕಟನಾಥನ ವಿದ್ಯಾಭ್ಯಾಸದತ್ತ ಗಮನಕೊಡಬೇಕೆಂದೂ, ವೇಂಕಟನಾಥನಿಗೆ ಉಪನಯನಮಾಡಿ ಗುರುಕುಲಕ್ಕೆ ಸೇರಿಸಿ, ಗುರುರಾಜಾಚಾರರು ಉದ್ಧಂಥ ವ್ಯಾಸಂಗಕ್ಕೆ ಶ್ರೀಮಠಕ್ಕೆ ಬರಬೇಕೆಂದೂ” ಶ್ರೀಪಾದಂಗಳವರೂ ಅಪ್ಪಣೆಮಾಡಿರುವುದನ್ನು ನಿವೇದಿಸಿದರು.
ಸರ್ವರೂ ಉಭಯಗುರುಗಳಿಗೆ ತಿಮ್ಮಣ್ಣಾಚಾರರ ಕುಟುಂಬದ ಮೇಲಿರುವ ಪ್ರೇಮ ಅನುಗ್ರಹಗಳನ್ನು ಕಂಡು ತುಂಬಾ ಸಮಾಧಾನ ತಾಳಿದರು. ಮತ್ತು ಶ್ರೀಯವರ ಅಪ್ಪಣೆಯಂತೆಯೇ ವರ್ತಿಸುವುದಾಗಿ ಗುರುಗಳಲ್ಲಿ ವಿಜ್ಞಾಪಿಸಸುವಂತೆ ರಾಮಚಂದ್ರಾಚಾರರಿಗೆ ತಿಳಿಸಿದರು. ಲಕ್ಷ್ಮೀನರಸಿಂಹಾಚಾರರು, ಗೋಪಮ್ಮ, ಕಮಲಾದೇವಿಯವರಿಗೆ ಒತ್ತಾಸೆಯಾಗಿದ್ದು ಸಹಾಯ ಮಾಡುವಂತೆ ಹೇಳಿ ತಮ್ಮ ಪತ್ನಿ ವೆಂಕಟಾಂಬಾದೇವಿಯನ್ನು ಅಲ್ಲಿಯೇ ಬಿಟ್ಟು ಮಧುರೆಗೆ ತೆರಳಿದರು. ಆನಂತರ ಆನಂದತೀರ್ಥಾಚಾರರೇ ಮೊದಲಾದ ಬಂಧುಗಳೂ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದರು.