|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೨೭. ಸಹೋದರರ ಅಭ್ಯುದಯ

ಗುರುರಾಜ-ವೇಂಕಟನಾಥರು ವಿದ್ಯೆಯಲ್ಲಿ ಅಪಾರ ಪ್ರಗತಿ ಸಾಧಿಸಹತ್ತಿದರು. ವೇಂಕಟನಾಥನ ಅಣ್ಣ ಗುರುರಾಜನು ತಂದೆಯಲ್ಲಿ ವೇದ, ನ್ಯಾಯ, ಮೀಮಾಂಸಾ, ವೇದಾಂತ ಮತ್ತು ಸಾಹಿತಶಾಸ್ತ್ರಗಳನ್ನು ಅಧ್ಯಯನಮಾಡುತ್ತಾ ಹಗಲಿರುಳು ಅಸಂಖ್ಯಚಿಂತನ-ಅಭ್ಯಾಸಗಳಿಂದ ಶಾಸ್ತ್ರಗಳಲ್ಲಿ ಪರಿಣತನಾಗಿ ಉತ್ತಮ ಪಂಡಿತನಾಗುತ್ತಿದ್ದನು. ನೋಡಲು ಅವನು ಬಹು ಸ್ಪುರದ್ರೂಪಿಯಾಗಿದ್ದನು. ಎಣ್ಣೆಗೆಂಪು ಮೈಬಣ್ಣ, ನೀಟಾದ ನಾಸಿಕ, ಅಗಲವಾದ ಕಣ್ಣುಗಳು, ವಿಶಾಲವಾದ ವಕ್ಷಸ್ಥಳ, ಎತ್ತರದ ನಿಲುವು, ಯೋಗಾಸನಾದಿಗಳಿಂದ ಹುರಿಗಟ್ಟಿದ ಮೈಮಾಟ, ಇಂತು ಸರ್ವಾಂಗ ಸುಂದರನಾದ ಗುರುರಾಜ ಸಂಗೀತದಲ್ಲಿ ವೀಣಾವಾದನದಲ್ಲಿಯೂ ಪಾರಂಗತನಾಗ ಹತ್ತಿದನು. ಸದಾಚಾರಸಂಪನ್ನನಾಗಿ, ಗುರುಹಿರಿಯರು, ಮಾತಾಪಿತೃಗಳಲ್ಲಿ ಭಕ್ತಿ ನಮ್ರತೆಗಳಿಂದ ನಡೆದುಕೊಂಡು ಸಹೋದರನಲ್ಲಿ ಅವ್ಯಾಜಪ್ರೇಮತೋರುತ್ತಾ ಸಮವಯಸ್ಕರಿಗೆ ಉತ್ತಮಮಿತ್ರನಾಗಿ ಸಕಲ ಜನರ ಪ್ರೀತ್ಯಾದರಗಳಿಗೆ ಪಾತ್ರನಾದನು. 

ಹಿರಿಯ ಮಗ ಗುರುರಾಜನು ವಿವಾಹ ಯೋಗ್ಯನಾಗಿರುವನೆಂದು ಭಾವಿಸಿದ ತಂದೆತಾಯಿಗಳು ಅವನ ವಿವಾಹ ವಿಷಯದಲ್ಲಿ ಯೋಚಿಸಹತ್ತಿದರು. ಗೋಪಿಕಾಂಬಾದೇವಿಯು ತನ್ನ ಸಹೋದರನಾದ ಪದ್ಮನಾಭಾಚಾರ್ಯನ ಪುತ್ರಿ ಕಮಲಾದೇವಿಯು ಗುರುರಾಜನಿಗೆ ಅರ್ಹಳಾದ ವಧುವೆಂದು ಬಗೆದು ಪತಿಯಲ್ಲಿ ತನ್ನಾಶಯವನ್ನು ಅರುಹಿದಳು. 

ಸೌಂದರ್ಯ-ಲಾವಣ್ಯ-ಶೀಲ-ವಿನಯ-ವಿಧೇಯತೆ, ಉತ್ತಮ ನಡತೆಗಳಿಂದಲೂ ವಿದ್ಯಾವತಿಯಾಗಿ ಸುಸ್ವರವಾಗಿ ಹರಿದಾಸರ ಪದಗಳನ್ನು ಹಾಡಿ ಬಾಂಧವರನ್ನು ರಂಜಿಸುತ್ತಾ, ಎಲ್ಲರ ಪ್ರೀತಿಗೆ ಪಾತ್ರಳಾಗಿರುವ ಕಮಲಾದೇವಿಯನ್ನು ಸೊಸೆಯಾಗಿ ಪಡೆಯಲಾರಿಸಿದ ಪತ್ನಿಯ ಮಾತು ಆಚಾರರಿಗೆ ಸಮ್ಮತವಾಯಿತು. ತಿಮ್ಮಣ್ಣಾಚಾರ್ಯರು ಅತ್ತೆ, ಮಾವ, ಭಾವಮೈದುನರೊಡನೆ ಮಾತನಾಡಿ ಲಗ್ನವನ್ನು ನಿಷ್ಕರ್ಷಿಸಿದರು. ಒಂದು ಶುಭಮುಹೂರ್ತದಲ್ಲಿ ಗುರುರಾಜ-ಕಮಲಾದೇವಿಯರ ವಿವಾಹವನ್ನು ಅದ್ದೂರಿಯಿಂದ ನೆರವೇರಿಸಿದರು. ಲಗ್ನಕ್ಕೆ ಬಂದವರೆಲ್ಲರೂ ವಧುವರರ ರೂಪ-ಲಾವಾಣಾದಿಸಾಮ್ಯವನ್ನು ಕಂಡು ಹರ್ಷಿಸಿದರು. ಆನಂದತೀರ್ಥಾಚಾರ್ಯ ದಂಪತಿಗಳು (ತಿಮ್ಮಣ್ಣಾಚಾರ್ಯರ ಮಾವ-ಅತ್ತೆ) ಪೌತ್ರಿಯು ಮಗಳ ಮನೆ ಸೇರಿದಳೆಂದು ಆನಂದಿಸಿದರು. 

ವೇಂಕಟನಾಥನು ಅಣ್ಣನ ಲಗ್ನಕಾಲದಲ್ಲಿ ಉತ್ಸಾಹದಿಂದ ಓಡಾಡಿ ಎಲ್ಲರ ಪ್ರೀತಿಗಳಿಸಿದನು. ಅತ್ತಿಗೆ ಕಮಲಾದೇವಿಗೆ ಮೈದುನ ವೆಂಕಟನಾಥನಲ್ಲಿ ಮೊದಲಿನಿಂದಲೂ ಅಪಾರ ಪ್ರೀತಿ ವಾತ್ಸಲ್ಯಗಳಿದ್ದು ಅದೀಗ ವಿಶೇಷಾಕಾರವಾಗಿ ಅಭಿವೃದ್ಧಿಸಿತು. ಗುರುರಾಜಾಚಾರ್ಯ ದಂಪತಿಗಳು ವೆಂಕಟನಾಥನಲ್ಲಿ ತಂದೆತಾಯಿಗಳಂತೆ ಪ್ರೇಮ ಮಾಡುತ್ತಿದ್ದರು. ವೆಂಕಟನಾಥನಿಗೂ ಅಣ್ಣ ಅತ್ತಿಗೆಯರಲ್ಲಿ ಪಂಚಪ್ರಾಣ, ಅಪಾರ ಗೌರವದಿಂದ, ಪ್ರೀತಿ ಸಲಿಗೆಯಿಂದ ಅವರನ್ನು ತಂದೆತಾಯಿಗಳಂತೆ ಕಾಣುತ್ತಿದ್ದನು. ವಿಧೇಯರಾದ ಪುತ್ರರು, ವಿಧೇಯಳಾದ ಸೊಸೆ, ಪ್ರೀತಿಯ ಪತ್ನಿ-ಅಚಾರ್ಯರಿಗೆ ಇನ್ನೇನು ಬೇಕು, ಅವರ ಸಂಸಾರ ಸುಖದ ನೆಲೆವೀಡಾಯಿತು. 

ಒಂದು ದಿನ ತಿಮ್ಮಣ್ಣಾಚಾರ್ಯರಿಗೆ ಸ್ವಪ್ನದಲ್ಲಿ ವಿಜಯೀಂದ್ರರು ದರ್ಶನವಿತ್ತು “ತಿಮ್ಮಣ್ಣ ! ನಾನು ನಿನಗೆ ಔತ್ತರೇಯ ಸಂಗೀತಗಾರರನ್ನು ಜಯಿಸಲು ಕಲಿಸಿಕೊಟ್ಟ, ಈ ಭೂಲೋಕದಲ್ಲಿ ಪ್ರಚಾರದಲ್ಲಿಲ್ಲದ, ದೇವಲೋಕದಲ್ಲಿ ಪ್ರಸಿದ್ಧವಾಗಿರುವ “ಗಾಂಧಾರಗ್ರಾಮ” ಸಂಗೀತಕ್ರಮವನ್ನು ಚಿರಂಜೀವಿ ವೆಂಕಟನಾಥನಿಗೆ ಉಪದೇಶಿಸು. ಅವನಿಗೆ ಅದು ಅವಶ್ಯವಾಗಿದೆ. ಇದರಿಂದ ನೀನು ನಮಗೆ ಗುರುದಕ್ಷಿಣೆ ಸಲ್ಲಿಸದಂತೂ ಆಗುವುದು” ಎಂದು ಹೇಳಿದಂತಾಯಿತು. ಎಚ್ಚರಗೊಂಡ ಆಚಾರ್ಯರಿಗೆ ಪರಮಾನಂದವಾಯಿತು. 

ಅಂದು ಮಧ್ಯಾಹ್ನ ಏಕಾಂತದಲ್ಲಿ ವೇಂಕಟನಾಥನನ್ನು ಹತ್ತಿರ ಕೂಡಿಸಿಕೊಂಡು ಹಿಂದೆ ತಂಜಾವೂರಿನಲ್ಲಿ ನಾವು ಉತ್ತರಾದಿ ಸಂಗೀತಗಾರರನ್ನೂ ವೈಣಿಕರನ್ನೂ ಜಯಿಸಿದ ಸಂದರ್ಭ, ವಿಜಯೀಂದ್ರರು ಹಿಂದಿನ ದಿನ ಕಲಿಸಿಕೊಟ್ಟ ವೀಣಾವಾದನ ವೈವಿಧ್ಯ, ಮತ್ತು 'ಗಾಂಧಾರಗ್ರಾಮ' ಸಂಗೀತದ ಮಹತ್ವವನ್ನು ಉಪದೇಶಿಸಿ, ಸ್ವತಃ ತಾವೇ ವೀಣೆಯಲ್ಲಿ ನುಡಿಸಿ ತೋರಿಸಿ, ತಮಗೂ ಅಭ್ಯಾಸ ಮಾಡಿಸಿದ್ದು, ತಾವು ಔತ್ತರೇಯ ವೈಣಿಕನನ್ನು ಅದರ ಬಲದಿಂದ ಸುಲಭವಾಗಿ ಜಯಿಸಿ ತಂಜಾಪುರಾಧೀಶರಿಂದ “ಬಾಲ ಸರಸ್ವತಿ” ಎಂಬ ಪ್ರಶಸ್ತಿ ಪಡೆದ ವಿಚಾರ ಮುಂತಾಗಿ ಸಮಸ್ತವನ್ನೂ ವಿವರವಾಗಿ ವೆಂಕಟನಾಥನಿಗೆ ತಿಳಿಸಿ “ಮಗು, ಇಂದು ಶ್ರೀವಿಜಯೀಂದ್ರರು ಆ “ಗಾಂಧಾರಗ್ರಾಮ” ಸಂಗೀತಕ್ರಮವನ್ನು ನಿನಗೆ ಕಲಿಸಿಕೊಡಬೇಕೆಂದು ಸ್ವಪ್ನದಲ್ಲಿ ಅಪ್ಪಣೆಮಾಡಿದ್ದಾರೆ. ಇದು ಅತಿರಹಸ್ಯ ವಿದ್ಯೆಯಾದ್ದರಿಂದ ಜೀವನದಲ್ಲಿ ಒಮ್ಮೆ ಅಥವಾ ಎರಡು ಸಲ ಮಾತ್ರ ಪ್ರದರ್ಶಿಸಬಹುದೆಂದೂ ಅದನ್ನು ಹೆಚ್ಚು ಪ್ರದರ್ಶಿಸದೇ ಕೇವಲ ಹರಿಗುರು ಪ್ರೀತಿಗಾಗಿ ಮಾತ್ರ ಸೇವಾರೂಪವಾಗಿ ಸಲ್ಲಿಸಬೇಕೆಂದೂ ಉತ್ತಮ ಶಿಷ್ಯನಿಗೆ ಮಾತ್ರ ಉಪದೇಶಿಸಬೇಕೆಂದೂ ಅವರು ಹಿಂದೆ ಆಜ್ಞಾಪಿಸಿದ್ದರು. ನೀನೇ ಯೋಗ್ಯಶಿಷ್ಯನೆಂದು ಗುರುಗಳು ತಿಳಿಸಿರುವುದರಿಂದ ನಿನಗೆ ಇಂದಿನಿಂದಲೇ ಆ ವಿದ್ಯೆಯನ್ನು ಕಲಿಸಲು ಪ್ರಾರಂಭಿಸುತ್ತೇನೆ. ಇದನ್ನು ನೀನು ಶ್ರದ್ಧೆಯಿಂದ ಕಲಿತು ಒಮ್ಮೆಯಾದರೂ ಈ ಸಂಗೀತಕ್ರಮದಲ್ಲಿ ವೀಣಾವಾದನಮಾಡಿ ಗುರುಪಾದರನ್ನು ಸಂತೋಷಪಡಿಸಿ ಅವರ ಅನುಗ್ರಹವನ್ನು ಸಂಪಾದಿಸು ನಾನು ಹೇಳಿದ ಈ ಎಲ್ಲ ವಿಚಾರವೂ ರಹಸ್ಯವಾಗಿರಲಿ” ಎಂದು ಹೇಳಿದರು. 

ವೇಂಕಟನಾಥ ಪರಮಾನಂದಭರಿತನಾಗಿ ವಿನಯಪೂರ್ವಕವಾಗಿ “ಅಪ್ಪಾ ನಿನ್ನಾಜ್ಞೆಯಂತೆ ವರ್ತಿಸುತ್ತೇನೆ” ಎಂದು ವಿಜ್ಞಾಪಿಸಿದ. ಅಂದಿನಿಂದ ತಿಮ್ಮಣ್ಣಾಚಾರ್ಯರು ಏಕಾಂತದಲ್ಲಿ ಹತ್ತಾರುದಿನಪರಂತವಾಗಿ ವೀಣಾವಾದನದ ವಿಶಿಷ್ಟಕ್ರಮಗಳನ್ನೂ, ಅಶ್ರುತಪಾರ್ವವೂ ಪವಿತ್ರವಾ ಆದ “ಗಾಂಧಾರಗ್ರಾಮ” ಸಂಗೀತವಿದ್ಯೆಯನ್ನೂ ಉಪದೇಶಿಸಿ, ತಾವೂ ನುಡಿಸಿ, ಮಗನಿಂದಲೂ ವೀಣಾವಾದನಮಾಡಿಸುತ್ತಾ ಅಭ್ಯಾಸಮಾಡಿಸಲಾರಂಭಿಸಿದರು. ವೆಂಕಟನಾಥ 'ಗಾಂಧಾರಗ್ರಾಮ' ಪದ್ಧತಿಯಂತೆ ವೀಣೆಯನ್ನು ನುಡಿಸುವಾಗ ಅವನಿಗೆ ಅದನ್ನೆಲ್ಲೋ ಹಿಂದೆ ಕೇಳಿದ್ದಂತೆ, ತಾನೂ ನುಡಿಸುತ್ತಿದಂತೆ ಭಾಸವಾಗುತ್ತಿತ್ತು. ಅದು ಯಾವಾಗ ಎಲ್ಲಿ ಎಂಬುದು ಮಾತ್ರ ಸ್ಪಷ್ಟವಾಗಲಿಲ್ಲ. ಎಲ್ಲವೂ ಮಸಕುಮಸುಕಾಗಿತ್ತು. ಮನದಭಾವನೆಯನ್ನೂ ಹೊರಗೆಡಹುವ ಇಚ್ಛೆಯಿದ್ದರೂ ತಂದೆಯ ಮುಂದೆ ಹೇಳಲಾಗದೆ ಸುಮ್ಮನಾದನು, ತಮ್ಮ ತಂದೆಯು ಹೇಳಿಕೊಟ್ಟ ವಿದ್ಯೆಯನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಕಲಿಯಹತ್ತಿದನು. ಶ್ರೀಹರಿವಾಯುಗಳ ಪೂರ್ಣಕೃಪಾಪಾತ್ರನೂ, ಅಸಾಧಾರಣ ಪ್ರತಿಭಾನ್ವಿತನೂ ಆದ ವೇಂಕಟನಾಥನು ತಂದೆಯು ಉಪದೇಶಿಸಿದ ಸಮುದ್ರದಂತೆ ಆಗಾಧವಾದ ಗಾಂಧಾರಗ್ರಾಮ ಸಂಗೀತಸುಧೆಯನ್ನು ನೀರು ಕುಡಿದಂತೆ ಸುಲಭವಾಗಿ ಪಾನಮಾಡಿ ಅರಗಿಸಿಕೊಂಡನು. ಐದಾರುವರ್ಷವಯಸ್ಸಿನ ಬಾಲಕನಾಗಿದ್ದರೂ, ಪೂರ್ವಾರ್ಜಿತಜ್ಞಾನ, ಪುಣ್ಯ, ಹರಿಗುರ್ವನುಗ್ರಹಗಳಿಂದ ವೆಂಕಟನಾಧನು ಮಹಾಪಾಂಡಿತ್ಯಗಳಿಸಿ ತಂದೆಯನ್ನು ಆನಂದ ಪರವಶಗೊಳಿಸಿದನು. ಆಚಾರರು ಗುರುವಿಜಯೀಂದ್ರರು ತಮಗುಪದೇಶಿಸಿದ್ದ ದೈವಿಕ ಸಂಗೀತವನ್ನು ಸತ್ಪಾತ್ರನಲ್ಲಿ ದಾನಮಾಡಿದ್ದರಿಂದ ಒಂದು ದೊಡ್ಡ ಹೊರೆ ಇಳಿದಂತಾಗಿ ತೃಪ್ತಿ, ಸಮಾಧಾನತಾಳಿದರು.