ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೨೬. ವೆಂಕಟಾಂಬಾ ವಿವಾಹ - ಗುರುರಾಜನ ಉಪನಯನ
ಜಗದ್ವಿಖ್ಯಾತ ಪಾಷಿಕವಂಶದಲ್ಲಿ ಕಾಶ್ಯಪಗೋತ್ರಸಂಜಾತರಾದ ಅನೇಕ ಮಹನೀಯರು ವಿಖ್ಯಾತರಾದರು. ಶ್ರೀವ್ಯಾಸರಾಜಗುರುವರ್ಯರ ಕಾಶ್ಯಪವಂಶಬಂಧುಗಳನೇಕರು ದಕ್ಷಿಣಭಾರತದಲ್ಲಿ ಅನೇಕ ರಾಜಾಸ್ಥಾನಗಳಲ್ಲಿ ಆಶ್ರಯ ಪಡೆದು ಕೀರ್ತಿಗಳಿಸಿದ್ದರು. ಅಂಥ ಪ್ರಖ್ಯಾತ ವಂಶದಲ್ಲಿ ಶ್ರೀವ್ಯಾಸರಾಜರು, ಶ್ರೀಸುರೇಂದ್ರರು ಶ್ರೀವಿಜಯೀಂದ್ರರು ಹಾಗೂ ಶ್ರೀಸುಧೀಂದ್ರರಿಗೆ ವಂಶಬಂಧುಗಳಾದ ತಿಮ್ಮಣ್ಣಾಚಾರ್ಯರೆಂಬುವವರು 'ಡಂಕಿಪುರ' ಗ್ರಾಮಾಧಿಪತಿಗಳಾಗಿದ್ದರು.
ನಾಕಿನಾಯಕನಾದ ಇಂದ್ರನ ರಕ್ಷಕರಾಗಿ ಅವನ ಪದವಿಗೆ ಅಪೋಹಬರದಂತೆ ಇಂದ್ರನನ್ನೂ ಸುರರನ್ನೂ ಅನುಗ್ರಹಿಸಲು ದೇವತೆಗಳ ಪ್ರಾರ್ಥನೆಯಂತೆ ಕಶ್ಯಪ-ಅದಿತಿದೇವರ ತಪಸ್ಸಿಗೆ ಮೆಚ್ಚಿದ ಶ್ರೀಮನ್ನಾರಾಯಣನು ವಾಮನರೂಪದಿಂದ ಅವತರಿಸಿದ ಪವಿತ್ರ ಕಾಶ್ಯಪವಂಶಸಂಜಾತರಾದ ತಿಮ್ಮಣ್ಣಾಚಾರ್ಯರು ಮಧುರೆಯ ಪಾಂಡ್ಯರಾಜರ ಗೌರವಕ್ಕೆ ಪಾತ್ರರಾಗಿ, ವೇದ-ವೇದಾಂಗ-ವೇದಾಂತಾದಿಶಾಸ್ತ್ರಕೋವಿದರಾಗಿದ್ದರು. ಅವರಲ್ಲಿ ಅತಿ ಭಕ್ತಿಶ್ರದ್ಧೆಯನ್ನಿಟ್ಟುಕೊಂಡಿದ್ದ ಪಾಂಡ್ಯಭೂಪತಿಯು ಅವರನ್ನು “ಡಂಕಿಪುರದ” ಅಧಿಪತಿಯನ್ನಾಗಿ ಮಾಡಿ ಮಾನಿಸಿದ್ದನು. ಅವರನ್ನು ಜನರು “ತಿಮ್ಮಣ್ಣಢಣಾಯಕರು” ಎಂದೇ ಗೌರವದಿಂದ ಕರೆಯುತ್ತಿದ್ದರು.
ಮುಂದೆ ಈ ವಂಶದಲ್ಲಿ ದ್ವಿಜಶ್ರೇಷ್ಠರಾದ ತಿಮ್ಮರಸು ಎಂಬ ಹೆಸರಿನ ಮಹನೀಯರು ಜನಿಸಿ ತಮ್ಮ ಪಾಂಡಿತ್ಯ-ಶೌಯ್ಯ-ಪ್ರತಾಪಗಳಿಂದ ಪಾಂಡ್ಯದೇಶಾಧಿಪತಿಗಳಿಂದ ಸಂಪಾದಿಸಿ ವಿಖ್ಯಾತವಾದ “ನಾರೀಸರಸ್ಸು” ಎಂಬ ಪುರದಲ್ಲಿ ವಾಸಮಾಡುತ್ತಾ ದಾನ-ಧರ್ಮಪರಾಯಣರೆಂದು ಹೆಸರು ಗಳಿಸಿದರು. ಷಾಷಿಕಕುಲಾವತಂಸರೂ, ಮಹಾಪಂಡಿತರೂ, ಪರಾಕ್ರಮಿಗಳೂ, ಅನೇಕಯುದ್ಧಗಳಲ್ಲಿ ಪಾಂಡ್ಯರಾಜನ ಪರವಾಗಿ ಹೋರಾಡಿ ಜಯಶೀಲರಾದ, ನಾರೀಸರಿಸ್ಸಿನ ಜಾಗೀರುದಾರರಾದ, ಈ ತಿಮ್ಮಣ್ಣಾಚಾರ್ಯರನ್ನು ಜನರು ರಾಜರು. ಅರಸು ಎಂದೇ ಗೌರವದಿಂದ ಸಂಭೋಧಿಸುತ್ತಿದ್ದರು. ಅಂತೆಯೇ ಆರ ತಿಮ್ಮರಸರು ಎಂಬ ಹೆಸರೇ ವಿಖ್ಯಾತವಾಯಿತು.
ಭೂಸುರೋತ್ತಮರಾದ ತಿಮ್ಮಣ್ಣಾಚಾರ್ಯ (ತಿಮ್ಮರಸು) ರಿಗೆ ದೈವಾನುಗ್ರಹದಿಂದ ವಾಸುದೇವಾಚಾರ್ಯ (ಶೇಷಶಾಯಿಆಚಾರ್ಯ) ಎಂಬ ಸದ್ಗುಣಮಂಡಿತರಾದ ಜೇಷ್ಠಪುತ್ರರೂ, ಆನಂತರ ಬಹುಕಾಲದ ಮೇಲೆ ವೆಂಕಟಸುಧೀ ಎಂಬ ಪುತ್ರರಾದರು. ಜೇಷ್ಠಪುತ್ರರಾದ ವಾಸುದೇವಾಚಾರ್ಯರು (ಶೇಷಶಾಯಿ) ಪಿತೃವಿಯೋಗವಾದ ಮೇಲೆ ನಾರೀಸರಸ್ಸು ಗ್ರಾಮವನ್ನು ಸಹೋದರ ವೆಂಕಟಸುಧೀಗೆ ವಹಿಸಿಕೊಟ್ಟು ಪಾಂಡರಾಜಧಾನಿಯಾದ ಮಧುರೆಯಲ್ಲಿ ವಾಸಮಾಡಲಾರಂಭಿಸಿದರು.
ಪರವಾದಿವಿಜಯವಿಶಾರದರೂ ವಿದ್ಯಾದೇವಿಗೆ ಆವಾಸಸ್ಥಾನರೂ ಅಭೂತಪೂರ್ವ ಸದ್ಗುಣಸಾಗರರೂ ಆದ ಶ್ರೀಲಕ್ಷ್ಮೀನರಸಿಂಹಾಚಾರ್ಯರೆಂಬುವರು ವಾಸುದೇವಾಚಾರ್ಯರಿಗೆ (ಶೇಷಶಾಯಿ) ಸತ್ಪುತ್ರರಾಗಿ ಜನಿಸಿದರು. ವಾಸುದೇವಾಚಾರ್ಯರು ಪುಣ್ಯವೇ ಮೈವೆತ್ತು ಧರೆಗಿಳಿದು ಬಂದಂತಿರುವ ಲಕ್ಷ್ಮೀನರಸಿಂಹಾಚಾರರಿಗೆ ಉಪನಯನ ಮಾಡಿ ಸಕಲಶಾಸ್ತ್ರಗಳನ್ನು ಅಧ್ಯಯನಮಾಡಿಸಿದರು. ತಾರುಣ್ಯದಲ್ಲಿ ಪದಾರ್ಪಣಮಾಡಿ ಸೌಂದರ್ಯ, ಸೌಶೀಲ್ಯ-ಪಾಂಡಿತ್ಯಗಳಿಂದ ವಿರಾಜಿಸುವ ಲಕ್ಷ್ಮೀ ನರಸಿಂಹಾಚಾರ್ಯರಿಗೆ ವಿವಾಹಮಾಡಲಾಶಿಸಿ ಪತ್ನಿ-ಪುತ್ರರಿಂದ ಸಹಿತರಾಗಿ ಸತ್ಕುಲ ಪ್ರಸೂತಕನೆಯನ್ನರಸುತ್ತ ರಾಮಚಂದ್ರಪುರಕ್ಕೆ ಬಂದರು. ಅಲ್ಲಿ ತಿಮ್ಮಣ್ಣಾಚಾರ ದಂಪತಿಗಳೂ ಮಗಳ ಮದುವೆಮಾಡಲು ಆತುರಪಡುತ್ತಿದ್ದರು.
ವಾಸುದೇವಾಚಾರ್ಯರು ಪರಿಚಿತಮಿತ್ರರ ಮನೆಯಲ್ಲಿಳಿದುಕೊಂಡು ಅವರ ಮಧ್ಯಸ್ತಿಕೆಯಲ್ಲಿ ವಿವಾಹಪ್ರಸ್ತಾಪವನ್ನು ಮಾಡಿ, ಆನಂತರ ತಿಮ್ಮಣ್ಣಾಚಾರ್ಯರ ಮನೆಗೆ ಬಂದು ತಮ್ಮ ಪುತ್ರನಿಗೆ ಕನ್ಯಾಪ್ರದಾನಮಾಡಬೇಕೆಂದು ತಿಮ್ಮಣ್ಣಾಚಾರರನ್ನು ಕೋರಿದರು. ಆಚಾರ್ಯದಂಪತಿಗಳು ರೂಪ-ವಿದ್ಯಾ-ಗುಣಸಂಪನ್ನರಾದ ತರುಣ ಲಕ್ಷ್ಮೀನರಸಿಂಹಾಚಾರ್ಯನು ತಮ್ಮ ಮಗಳಿಗೆ ಸರ್ವವಿಧದಿಂದ ಪತಿಯಾಗಲು ಅರ್ಹನೆಂದು ನಿರ್ಧರಿಸಿ ಕನೈಯನ್ನು ತೋರಿಸಿದರು. ಸಂಗೀತ-ಸಾಹಿತ್ಯ ಕಲಾಕುಶಲಳೂ, ರೂಪಸಿಯೂ ಗುಣವತಿಯೂ ಆದ ವೆಂಕಟಾಂಬಾದೇವಿಯನ್ನು ನೋಡಿ ಪರಮಾನಂದಭರಿತರಾಗಿ ವಾಸುದೇವಾಚಾರದಂಪತಿಗಳು ತಮ್ಮ ಸಮ್ಮತಿಯನ್ನು ತಿಳಿಸಿದರು.
ಶ್ರೀಹರಿ-ವಾಯು-ಗುರುಗಳ ಅನುಗ್ರಹದಿಂದ ಉತ್ತಮ ಸಂಬಂಧ ದೊರಕಿದ್ದರಿಂದ ತೃಪ್ತರಾದ ಆಚಾರ್ಯರು ಮಗಳ ವಿವಾಹ ಮತ್ತು ಅದಕ್ಕೆ ಪೂರ್ವಭಾವಿಯಾಗಿ ಗುರುರಾಜನ ಉಪನಯನವನ್ನು ನೆರವೇರಿಸಲು ನಿಶ್ಚಯಿಸಿ ಸಕಲ ವ್ಯವಸ್ಥೆ ಮಾಡಿಕೊಂಡು ಶುಭಮೂಹೂರ್ತದಲ್ಲಿ ಮಗನ ಉಪನಯನವನ್ನೂ, ವೆಂಕಟಾಂಬಾದೇವಿಯ ವಿವಾಹವನ್ನು ತಿಮ್ಮಣ್ಣಾಚಾರ್ಯರು ವೈಭವದಿಂದ ನೆರವೇರಿಸಿದರು.
ವೆಂಕಟಾಂಬೆಯ ಮದುವೆಯನ್ನು ವಿಜೃಂಭಣೆಯಿಂದ ನೆರವೇರಿಸಿದ ತಿಮ್ಮಣ್ಣಾಚಾರ್ಯರು ಅಳಿಯ-ಮಗಳಿಗೆ ಹೇರಳವಾದ ಬಳುವಳಿಗಳನ್ನೂ ಧನಕನಕವಸ್ತ್ರಾಭರಣಗಳನ್ನೂ ನೀಡಿ ಸಂತೋಷಪಡಿಸಿದರು. ಮತ್ತು ವಾಸುದೇವಾಚಾರ್ಯ ದಂಪತಿಗಳು - ಇತರ ಬಾಂಧವರನ್ನು ಆದರೋಪಚಾರ-ಉಡುಗೊರೆಗಳಿಂದ ಪೂಜಿಸಿ ಆನಂದಪಡಿಸಿದರು.