ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೨೫. ಪ್ರತಿಭಾಪ್ರದರ್ಶನ
ಮೇಲಿನ ಪ್ರಕರಣ ನಡೆದ ಕೆಲದಿನಗಳಲ್ಲೇ ವೇಂಕಟನಾಥನ ಮಹತ್ವ, ಜ್ಞಾನಗಳನ್ನು ಬೆಳಕಿಗೆ ತಂದ ಸಂದರ್ಭವೊಂದು
ಜರುಗಿತು.
ಒಂದು ದಿನ ಊರಿನ ಶ್ರೀಹರಿ ಮಂದಿರದಲ್ಲಿ ಪ್ರಖ್ಯಾತ ಕೀರ್ತನಕಾರರ 'ಪ್ರಹ್ಲಾದಚರಿತ್ರೆ' ಹರಿಕಥಾನುವಾದವಾಯಿತು. ನೂರಾರು ಜನ ಸ್ತ್ರೀ-ಪುರುಷರು ಭಗವತ್ಕಥೆಯನ್ನು ಶ್ರವಣಮಾಡಲು ಅಲ್ಲಿ ಸೇರಿದ್ದರು. ಗೋಪಮ್ಮ ವೇಂಕಟನಾಥನೊಡನೆ ಹರಿಕಥೆಗೆ ಹೋದರು. ಸ್ತ್ರೀಯರ ಗುಂಪಿನಲ್ಲಿದ್ದವರು ಗೋಪಮ್ಮನನ್ನು ಆದರದಿಂದ ಕರೆದು ಸ್ಥಳಮಾಡಿಕೊಟ್ಟು ಕೂಡಿಸಿದರು. ಆಚಾರರ ಮಿತ್ರರೊಬ್ಬರು ವೇಂಕಟನಾಥನನ್ನು ಕರೆದು ತಮ್ಮ ಪಕ್ಕದಲ್ಲಿ ಕೂಡಿಸಿಕೊಂಡರು.
ಹರಿದಾಸರು ಭಾಗವತ ಸಂಪ್ರದಾಯದ ಸ್ಮಾರ್ತಬ್ರಾಹ್ಮಣರು, ನಲವತ್ತು ವಯಸ್ಸಿನ ಅವರು ಒಳ್ಳೇ ತೇಜಸ್ವಿಗಳಾಗಿದ್ದರು. ದೇವಾಲಯಾಧಿಕಾರಿಗಳ ಸೂಚನೆಯಂತೆ ದಾಸರು ಶ್ರೀಕೃಷ್ಣನ ಮೇಲಿನ ಪ್ರಾರ್ಥನಾಪದದೊಡನೆ “ಪ್ರಹ್ಲಾದಚರಿತ್ರೆ” ಹರಿಕಥೆಯನ್ನು ಪ್ರಾರಂಭಿಸಿದರು. ಹರಿಕಥೆ ಭರದಿಂದ ಸಾಗಿದೆ. ಮಧ್ಯೆ ಶ್ಲೋಕಗಳನ್ನೂ ಪದಗಳನ್ನೂ ಸುಶ್ರಾವ್ಯವಾಗಿ ಹಾಡುತ್ತಿದ್ದಾರೆ. ಪ್ರಹ್ಲಾದಚರಿತ್ರೆ ಸ್ವಾರಸ್ಯವಾಗಿ ಮುಂದುವರೆಯಿತು. ಹಿರಣ್ಯಕಶ್ಯಪನ ದಾಂಧಲೆಯಿಂದ ಕಂಗೆಟ್ಟ; ಅಸುರ ಸಂಹಾರಕ್ಕಾಗಿ ಭಗವಂತನನ್ನು ಪ್ರಾರ್ಥಿಸುವ ಪ್ರಕರಣ. ಶ್ರೀಹರಿಯು “ನಿರ್ವೈರಾಯ ಪ್ರಶಾಂತಾಯ” ಮುಂತಾಗಿ ಹೇಳಿ ಪ್ರಹ್ಲಾದರಿಗೆ ದ್ರೋಹ ಬಗೆದು ಹಿಂಸಿಸಿದಾಗ “ನಾನು ಆ ದೈತ್ಯನನ್ನು ಸಂಹರಿಸುತ್ತೇನೆ' ಎಂದು ಅಭಯವಿತ್ತು ದೇವತೆಗಳನ್ನು ಸಂತೈಸಿ ಕಳಿಸುತ್ತಾನೆ. ದಾಸರು ಶ್ಲೋಕಾರ್ಥವನ್ನು ಸುಂದರವಾಗಿ ನಿರೂಪಿಸಿದರು. ತರುವಾಯ ಪ್ರಹ್ಲಾದನ ಗುಣಗಳನ್ನು ವರ್ಣಿಸುವ ಘಟ್ಟ. ಪ್ರಹ್ಲಾದನ ಸದ್ಗುಣಗಳನ್ನು ಬಗೆಬಗೆಯಾಗಿ ವರ್ಣಿಸಿದ ದಾಸರು ಪ್ರಹ್ಲಾದನು ಆಜನ್ಮ ವೈಷ್ಣವನೆಂದು ಹೇಳಿ ಅದಕ್ಕೆ ಅರ್ಥ ಹೇಳದೆ ಮುಂದುವರೆದರು.
ಅದುವರೆಗೆ ಸುಮ್ಮನೆ ಕುಳಿತಿದ್ದ ವೇಂಕಟನಾಥ ಎದ್ದು ನಿಂತು ದಾಸರನ್ನು ಪ್ರಶ್ನಿಸಿದ - “ಸ್ವಾಮಿ, ದಾಸರೇ, ಪ್ರಹ್ಲಾದನು ಆಜನ್ಮ ವೈಷ್ಣವನೆಂದು ಹೇಳಿದಿರಿ. ಅದಕ್ಕೆ ಅರ್ಥವನ್ನೇಕೆ ಹೇಳಲಿಲ್ಲ ?”
ವೇಂಕಟನಾಥ ಹೇಳುವವರೆಗೆ ಆ ಪದಕ್ಕೆ ಅರ್ಥ ಹೇಳದಿದ್ದುದನ್ನು ಯಾರೂ ಗಮನಿಸಿರಲಿಲ್ಲ. ಕುಮಾರನ ಪ್ರಶ್ನೆಯಿಂದ ಎಲ್ಲರೂ ದಾಸರು ಏನು ಹೇಳುವರೋ ಎಂದು ಅವರ ದೃಷ್ಟಿ ಬೀರಿದರು. ದಾಸರು ಹುಡುಗನ ಆ ಪ್ರಶ್ನೆಯಿಂದ ತಡಬಡಾಯಿಸಿದರು. ನಕ್ಕು "ಮಗು, ಅದು ಎಲ್ಲರಿಗೂ ತಿಳಿದಿರುವ ಅರ್ಥ. ಅದರಲ್ಲೇನೂ ಅಂಥ ಮಹತ್ವವಿಲ್ಲ. ಆದ್ದರಿಂದ ಹೇಳಲಿಲ್ಲ” ಎಂದರು.
ವೇಂಕಟ : ದಾಸರೇ, ತಾವು ಹಾಗೆ ಹೇಳುವುದು ಸರಿಯಲ್ಲ.
ದಾಸರು : ಏಕೆ ಸರಿಯಲ್ಲ ? ಆಜನ್ಮವೈಷ್ಣವ ಎಂಬುದರಲ್ಲೇನು ಅಂಥಹ ಮಹತ್ವವಡಗಿದೆ ?
ವೇಂಕಟ : ಇದೇನು ಹೀಗೆ ಹೇಳುವಿರಿ ? ಪ್ರಹ್ಲಾದನ ಸಂಪೂರ್ಣ ವ್ಯಕ್ತಿತ್ವವೆಲ್ಲವೂ ಆ ಪದದಲ್ಲೇ ಅಡಗಿದೆ. ಅವನ ಎಲ್ಲ ಹಿರಿಮೆ, ಗರಿಮೆಗಳಿಗೂ ಅದೇ ಮೂಲ ! ಅಂಥ ಮಹತ್ವಪದದ ಬಗ್ಗೆ ನೀವು ಹೀಗೆ ಉದಾಶೀನಮಾಡಬಹುದೆ ?
ದಾಸರಿಗೆ ಒಂದು ರೀತಿ ಅಗೌರವಾದಂತಾಯಿತು, ಅವರು ಸ್ವಲ್ಪಗಡುಸಾಗಿ “ಮಗು ಕಥೆ ಮಧ್ಯೆ ಹೀಗೆ ಹುಚ್ಚು ಪ್ರಶ್ನೆ ಕೇಳಬಾರದು” ಎಂದರು.
ವೇಂಕಟ : (ವಿನೀತನಾಗಿ) ಸಿಟ್ಟಾಗಬೇಡಿ ದಾಸರೆ, ನನ್ನದು ಹುಚ್ಚು ಪ್ರಶ್ನೆಯಾಗಿರಬಹುದು. ಪ್ರಹ್ಲಾದನ ಹುಚ್ಚಿಗೂ ಆ ಪದವೇ ಕಾರಣ ! ದಯವಿಟ್ಟು ಅರ್ಥವನ್ನು ಹೇಳಿರಿ ?
ದಾಸರು : (ಉಪಹಾಸದಿಂದ) ನೋಡು ಮಗು ಆಜನ್ಮ ವೈಷ್ಣವ ಎಂದರೆ ಹುಟ್ಟಿನಿಂದಲೇ ವೈಷ್ಣವ ಎಂದರ್ಥ. ವೇಂಕಟ : ವೈಷ್ಣವ ಎಂದರೇನರ್ಥ ?
ದಾಸರು : “ಅಷ್ಟೂ ತಿಳಿಯದೆ ? ವೈಷ್ಣವ ಎಂದರೆ ರಾಮಾನುಜೀಯನೋ ಮಾಧ್ವನೋ ಎಂದರ್ಥ ಅಷ್ಟೇ !? ಎಂದು ನಕ್ಕರು.
ವೇಂಕಟ : ಇದು ಅಪಹಾಸ್ಯ ಸಂದರ್ಭವಲ್ಲ ದಾಸರೇ, ನೀವು ಹರಿದಾಸರು, ಜನರು ನೀವು ಹೇಳಿದ್ದನ್ನು ನಂಬುತ್ತಾರೆ. ನಿಮ್ಮ ಮಾತು ಅವರ ಮೇಲೆ ಪರಿಣಾಮ ಬೀರುವುದು. ಅಂದಮೇಲೆ ಜನರಿಗೆ ಸಪ್ರಮಾಣವಾಗಿ ಬೋಧಿಸಿ ಮಾರ್ಗದರ್ಶನ ಮಾಡಬೇಕೇ ಹೊರತು ಜನರನ್ನು ಅಡ್ಡದಾರಿಗೆ ಎಳೆಯಬಾರದು !
ದಾಸರು ಕುಮಾರನ ಮಾತು ಕೇಳಿ ಅಪ್ರತಿಭರಾದರೂ ಅದನ್ನು ತೋರಿಸಿಕೊಳ್ಳದೆ ನಗುತ್ತಾ “ಏನಪ್ಪಾ ನೀನೇ ಹರಿಕಥೆ ಮಾಡುವಂತಿದೆಯಲ್ಲ ! ನಾನು ಹೇಳಿದ್ದರಲ್ಲಿ ತಪ್ಪೇನಿದೆ ?” ಎಂದರು.
ವೇಂಕಟ : ನಾನು ಬಾಲಕ, ಹೀಗೆ ಹೇಳುವೆನೆಂದು ಕೋಪಿಸಿಕೊಳ್ಳಬೇಡಿ, ತಪ್ಪೇನಿದೆ ಎಂದು ಕೇಳಿದಿರಿ. ಸ್ವಾಮಿ, ಆಜನ್ಮ ವೈಷ್ಣವ ಎಂಬುದರ ನಿಜವಾದ ಅರ್ಥ ತಿಳಿಯದಿರುವುದು ಮೊದಲ ತಪ್ಪು, ವೈಷ್ಣವ ಎಂದರೆ ರಾಮಾನುಜೀಯ ಅಥವಾ ಮಾಧ್ಯ ಎಂದು ಹೇಳಿದ್ದು ಎರಡನೆಯ ತಪ್ಪು, ಹೀಗೆ ತಪ್ಪು ಹೇಳಿದರೂ ಅದನ್ನು ಒಪ್ಪದಿರುವುದು ಮೂರನೆಯ ತಪ್ಪು !
ದಾಸರಿಗೀಗ ತಿಳಿಯಿತು ಈ ಬಾಲಕ ಸಾಮಾನ್ಯನಲ್ಲವೆಂದು ! ತಮ್ಮ ತಪ್ಪಿನ ಅರಿವೂ ಆಯಿತು. ನಾಚಿಕೆಯಿಂದ ತಲೆತಗ್ಗಿಸುವಂತಾಯಿತು. ಅಹಂಭಾವ, ಆಧ್ಯತೆ ಮಾಯವಾಯಿತು. ಕುಗ್ಗಿದ ಧ್ವನಿಯಲ್ಲಿ ಮಗು, ನಾನು ತಪ್ಪು ಹೇಳಿದೆ, ನಿಜ, ನೀನು ಅದರ ಸರಿಯಾದ ಅರ್ಥ ಹೇಳಿಬಿಡಪ್ಪಾ” ಎಂದರು.
ವೇಂಕಟ : ಸ್ವಾಮಿ, ವೈಷ್ಣವನೆಂದರೇನೆಂದು ನೀವೇ ಸ್ವಲ್ಪ ವಿಚಾರಮಾಡಿದ್ದರೆ ನಿಮಗೆ ಅರ್ಥವಾಗುತ್ತಿತ್ತು. ಹಾಗೆ ಹೇಳುತ್ತಿರಲಿಲ್ಲ ಏಕೆ ಗೊತ್ತೆ ? ಪ್ರಹ್ಲಾದನ ಕಥೆ ಜರುಗಿದ್ದು ಕೃತಯುಗದಲ್ಲಿ ! ರಾಮಾನುಜಾಚಾರರು, ಮಧ್ವಾಚಾರರು ಅವತರಿಸಿ ಮತಸ್ಥಾಪನೆ ಮಾಡಿದ್ದು ಕಲಿಯುಗದಲ್ಲಿ ! ಅವರು ಮತಸ್ಥಾಪಿಸಿದ ಮೇಲಲ್ಲವೇ ಅವರವರ ಅನುಯಾಯಿಗಳಿಗೆ ರಾಮಾನುಜೀಯ (ಶ್ರೀವೈಷ್ಣವ) ಮಾಧ್ವ ಎಂಬ ಹೆಸರು ಬಂದಿದ್ದು ? ಅಂದಮೇಲೆ ಕೃತಯುಗದಲ್ಲಿ ಜನಿಸಿದ ಪ್ರಹ್ಲಾದನಿಗೆ ಆಜನ್ಮ ವೈಷ್ಣವ ಎನ್ನಲು ರಾಮಾನುಜೀಯ ಅಥವಾ ಮಾದ್ದನೆಂದು ಹೆಸರು ಬರಲು ಸಾಧ್ಯವೇ ? ಆ ಅರ್ಥವೂ ಯುಕ್ತವಾದೀತೇ ನೀವೇ ಹೇಳಿರಿ.
ಆಗ ಸಭೀಕರಿಗೆ ವೇಂಕಟನಾಥನ ಆಂತರ್ಯ ಅರ್ಥವಾಯಿತು. ದಾಸರಿಗೂ ತಾವು ಮಾಡಿದ ತಪ್ಪಿನ ಅರಿವಾಯಿತು. ಆಸ್ತಿಕ ಸಭಿಕರು ವೇಂಕಟನಾಥನ ಮಾತುಗಳಿಂದ ಅಚ್ಚರಿಗೊಂಡರು. ದಾಸರು ಧರೆಗಿಳಿದು ಹೋದರು. ಅವರು ವಿನೀತರಾಗಿ “ಮಗು ನೀನು ಅಸಮಾನ್ಯ ಬಾಲಕ ! ಪ್ರಾಜ್ಞ, ವಿಚಾರಶೀಲ, ನನ್ನ ತಪ್ಪನ್ನು ಒಪ್ಪುತ್ತೇನೆ. ಆಜನ್ಮ ವೈಷ್ಣವ ಎಂಬುದರ ಅರ್ಥವನ್ನು ನೀನೇ ಹೇಳಪ್ಪಾ” ಎಂದರು.
ವೇಂಕಟ : ಯಾರು ವಿಷ್ಣುವಿನ ಪಾರಮ್ಯವಾದಿಗಳೋ, ವಿಷ್ಣುನಿಷ್ಠರೋ, ಅಂಥವರನ್ನು ವೈಷ್ಣವರೆಂದು ಗೌರವದಿಂದ ಕರೆಯುತ್ತಾರೆ. ಪ್ರಹ್ಲಾದರು ವಿಷ್ಣುಪಾರಮ್ಯ ಸ್ಥಾಪಕರು. ಶ್ರೀವಿಷ್ಣುವಿನ ಪರಮಭಕ್ತರು. ಅಂತೆಯೇ ಅವರಿಗೆ ಪರಮವೈಷ್ಣವರೆಂಬ ಕೀರ್ತಿಯಿದೆ. ಅವರು ತಾಯಿಯ ಗರ್ಭದಲ್ಲಿರುವಾಗಲೇ ಜ್ಞಾನಿಗಳಾದ ನಾರದರಿಂದ ಶ್ರೀಹರಿತತ್ವಜ್ಞಾನವನ್ನು ಪಡೆದು ಗರ್ಭದಲ್ಲಿರುವಾಗಲೇ ವಿಷ್ಣುವಿನ ಭಕ್ತಾಗ್ರಣಿಗಳೂ ವಿಷ್ಣುಪಾರಮ್ಯವಾದಿಗಳೂ ಆಗಿದ್ದರು, ಅಂತೆಯೇ ಅವರನ್ನು ಆಜನ್ಮವೈಷ್ಣವರೆಂದು ಭಾಗವತಾಚಾರ್ಯರು ಕೊಂಡಾಡಿದ್ದಾರೆ. ಇದೇ ವೇದವ್ಯಾಸರಿಗೆ ಸಮ್ಮತವಾದ ಅರ್ಥ.
ಕುಮಾರ ವೇಂಕಟನಾಥನ ಪ್ರತಿಭೆ, ವಿವರಣಾಕ್ರಮಗಳನ್ನು ಕೇಳಿ ಸಮಸ್ತ ಸಭಿಕರೂ ಅವನನ್ನು ಕೊಂಡಾಡಿದರು. ಆಗ ದಾಸರು-ವೇಂಕಟನಾಥರ ಕರಪಿಡಿದು “ಮಗು ನೀನು ಬಾಲಕನಾಗಿರಬಹುದು. ಆದರೆ ನಿನ್ನಲ್ಲಿ ಅಪಾರ ಜ್ಞಾನವು ಮನೆಮಾಡಿದೆ. ಮುಂದೆ ನೀನು ಮಹಾಜ್ಞಾನಿಯಾಗಿ ಕೀರ್ತಿಗಳಿಸುತ್ತಿಯೆ. ನಿನ್ನಿಂದ ಇಂದು ಒಂದು ಪಾಠವನ್ನು ನಾನು ಕಲಿತಿದ್ದೇನೆ. ನೀನು ಹೇಳಿದಂತೆ ಮುಂದೆ ಸರಿಯಾದ ರೀತಿಯಲ್ಲಿ ಜನರಿಗೆ ಸನ್ಮಾರ್ಗದರ್ಶಕವಾಗುವಂತೆ ಹರಿಕಥೆ ಮಾಡುತ್ತೇನೆ” ಎಂದು ಹೇಳಿ ಹರಿಕಥೆಯನ್ನು ಮುಂದುವರೆಸಿ ಪ್ರಹ್ಲಾದರ ಪಟ್ಟಾಭಿಷೇಕದೊಂದಿಗೆ ಮಂಗಳ ಹಾಡಿದರು.
ಲೌಕಿಕ ಸ್ತ್ರೀ-ಪುರುಷರು, ಪಂಡಿತರು ಇಂಥ ಅಸಾಧಾರಣ ಪ್ರಜ್ಞಾಶಾಲಿಯಾದ ಮಗನನ್ನು ಪಡೆದ ತಿಮ್ಮಣ್ಣಾಚಾರ್ಯ ದಂಪತಿಗಳನ್ನು ಶ್ಲಾಘಿಸಿದರು. ಮಗನ ಸಮಯಪ್ರಜ್ಞೆ, ಪ್ರತಿಭೆಗಳಿಂದ ಚಕಿತಳಾಗಿದ್ದ ಗೋಪಮ್ಮ ಜನರ ಹೊಗಳಿಕೆಯಿಂದ ಆನಂದಿಸಿ ಇಂಥ ಸತ್ಪುತ್ರನನ್ನು ಪಡೆದೆನಲ್ಲಾ ಎಂದು ಹೆಮ್ಮೆಗೊಂಡು ಮಗನೊಡನೆ ಮನೆಗೆ ತೆರಳಿದಳು.
ಒಂದು ಸಂಧ್ಯಾಕಾಲ ವೇಂಕಟನಾಥ ದೇವಾಲಯಕ್ಕೆ ಹೋಗಿ ದೇವರದರ್ಶನ ಮಾಡಿ ಹಿಂತಿರುಗಿತ್ತಿದ್ದಾಗ ಅವರ ಗೆಳೆಯರು ಬಂದು “ವೇಂಕಟನಾಥ, ನೀನು ಇತ್ತೀಚೆಗೆ ನಮ್ಮೊಡನೆ ಸೇರುವುದಿಲ್ಲ, ಮಾತನಾಡುವುದಿಲ್ಲ, ಆಟಕ್ಕೆ ಬರುವುದಿಲ್ಲ, ನಾವೇನಾದರೂ ತಪ್ಪುಮಾಡಿದ್ದೇವೆಯೇ ?” ಎಂದು ಪ್ರಶ್ನಿಸಿದರು. ವೇಂಕಟನಾಥ ಗಂಭೀರವಾಗಿ “ಹಾಗೇನಿಲ್ಲ ಮಿತ್ರರೇ, ಈಗ ತಂದೆಯವರು ಸಂಸ ತಪಾಠ ಮತ್ತು ವೀಣಾಪಾಠಗಳನ್ನು ಹೆಚ್ಚಾಗಿ ಹೇಳಿಕೊಡುತ್ತಿದ್ದಾರೆ. ಅದರ ಅಭ್ಯಾಸದಲ್ಲೇ ಆಸಕ್ತನಾಗಿರುವುದರಿಂದ ಇತರ ವಿಷಯಗಳಿಗೆ ಗಮನಕೊಡಲು ಅವಕಾಶವಿಲ್ಲ. ಅಷ್ಟೇ” ಎಂದ.
ಆಗೊಬ್ಬ ಗೆಳೆಯ ವೇಂಕಟನಾಥನ ಕರಪಿಡಿದು “ಮಿತ್ರ, ಇಂದು ಸಿಕ್ಕಿರುವೆ, ಬಾ, ಸ್ವಲ್ಪ ಆಟವಾಡೋಣ” ಎಂದನು. ವೇಂಕಟನಾಥನು “ಇಲ್ಲ ಗೆಳೆಯರೆ, ನಾನೀಗ ವೀಣಾಭ್ಯಾಸ ಮಾಡಬೇಕು. ಮಂತ್ರಪಠನೆ ಮಾಡಬೇಕು. ನನಗೀಗ ಆಟಕ್ಕೆ ಅವಕಾಶವಿಲ್ಲ ಕ್ಷಮಿಸಿ” ಎಂದನು. ಆಗ ಎಲ್ಲಾ ಗೆಳೆಯರು ಬಲಾತ್ಕರಿಸಲು ವೇಂಕಟನಾಥ ಅವರನ್ನು ಒಂದು ಮಂಟಪದತ್ತ ಕರೆದೊಯ್ದು ಅಲ್ಲಿ ಕುಳಿತು “ಗೆಳೆಯರೆ, ಆಟಗಳಲ್ಲಿ ಆಸಕ್ತರಾಗಿ ವಿದ್ಯೆಯನ್ನು ಮರೆಯುವುದು ಯುಕ್ತವಲ್ಲ. ಅದರಿಂದ ನಿಮ್ಮ ತಂದೆ-ತಾಯಿಗಳಿಗೂ ಮನನೋಯುವುದು, ಕಾಲವನ್ನು ವ್ಯರ್ಥಮಾಡದೇ ವಿದ್ಯೆ ಕಲಿಯುವುದರಲ್ಲಿ ಶ್ರದ್ದೆವಹಿಸಬೇಕು. ಅದೇ ಯುಕ್ತ” ಎಂದು ಅವರಿಗೆ ತಿಳಿಯಹೇಳಿದನು.
ಒಬ್ಬ ಮಿತ್ರನು ನಗುತ್ತಾ "ವೆಂಕಣ್ಣ, ನೂರುವರ್ಷ ಆಯುಷ್ಯದಲ್ಲಿ ಬಾಲಕರಾಗಿರುವಾಗ ಆಟವಾಡಿಕೊಂಡಿರಬೇಕು, ದೊಡ್ಡವರಾದ ಮೇಲೆ ವಿದ್ಯಾಭ್ಯಾಸ ಮಾಡಬೇಕು, ಇದೂ ಯುಕ್ತವೇ ಅಲ್ಲವೇ” ಎಂದನು.
ಆಗ ವೇಂಕಟನಾಥನು “ಮಿತ್ರ, ನೀನು ತಪ್ಪು ತಿಳಿದಿರುವೆ. ವಿದ್ಯೆಗೆ ವಯೋಮಿತಿಯಿಲ್ಲ, ಬಾಲ್ಯದಿಂದಲೇ ಜ್ಞಾನಾರ್ಜನೆಮಾಡಬೇಕು. ಈಗ ಹುಡುಗರ ಮನಸ್ಸು ತಿಳಿಯಾಗಿ, ಪರಿಶುದ್ಧವಾಗಿರುತ್ತೆ. ಕಲಿತ ವಿದ್ಯೆ ಹತ್ತುತ್ತದೆ. ಬಾಲ್ಯದ ವಿದ್ಯಾಭ್ಯಾಸವೇ ಫಲಕಾರಿಯಾದುದು. ನೀವು ಪ್ರಹ್ಲಾದನ ಕತೆ ಕೇಳಿಲ್ಲವೇ ? ಅವರು ದೈತ್ಯಬಾಲಕರಿಗೆ “ಕೌಮಾರ ಆಚರೇತಾಜ ಧರ್ಮಾನ್ ಭಾಗವತಾನಿಹ” - ಬಾಲ್ಯದಿಂದಲೇ ವಿವೇಕಿಯಾದವನು ಸದ್ದಿದ್ಯಾಧ್ಯಯನನಾದಿಗಳಿಂದ ಪ್ರಾಜ್ಞನಾಗಿ ಭಗವತಿಕರವಾದ ಧರ್ಮಾಚರಣರತರಾಗಬೇಕು ಎಂದು ಉಪದೇಶಿಸಿದ್ದಾರಲ್ಲವೇ ? ನಿಮ್ಮಿ ಗೆಳೆಯನು ನೂರು ವರ್ಷ ಆಯುಷ್ಯದಲ್ಲಿ ಬೇಕಾದ್ದು ಸಾಧಿಸಬಹುದು ಎಂದು ಹೇಳಿದ್ದು ನೀವೆಲ್ಲ ಕೇಳಿದಿರಿ. ನಿಜ ನೂರುವರ್ಷ ಆಯಷ್ಯವಿದೆ. ಆದರೆ ಅದು ಹೇಗೆ ಕಳೆಯುತ್ತೆ ವಿಚಾರಮಾಡಿದ್ದೀರಾ ? ನಮ್ಮಂಥ ಹುಡುಗರಿಗೆ ಉಪದೇಶಿಸಲೆಂದೇ ಪೂಾಜ್ಯಶ್ರೀವಿಜಯೀಂದ್ರಗುರುಗಳು 'ದುರಿತಾಪಹಾರಸ್ತೋತ್ರ'ದಲ್ಲಿ ಹೀಗೆ ಹೇಳಿದ್ದಾರೆ –
ನ ತದಸ್ತಿ ಶರೀರಣಾಂ ಶತಾಬ್ದಾಯುಷಿ ಶಾಸ್ತ್ರಪ್ರಮಿತೇಽಪಿ ಕಿಂಚಿದೇವ | ಭಗರ್ವ ಖಲು ತತ್ರ ರಾತ್ರಿಕಾಲೋ ಜಲಹೋಮಸ್ಯ ಸಮಾನತಾಮುತಿ |
ದ್ವಿದಶಾಯುಗಂ ದಿವಾಪಿ ಪೂವೋತ್ತರಮೀಶ ಸ್ಥವಿರತ್ವ ಶೈಶವಾಭ್ಯಾಂ | ಸಮಯಾಂಶ್ಚ ನಯಾಮಿ ಸರ್ವರೋಗ್ಯರ್ಬಹುಲೀಲಾಭಿರಸಿ ಪ್ರಮೂಢಬುದ್ಧಾ ಪರಿಶೀಷಿತ ಮಧ್ಯಮೋSಪಿ ಕಾಲಃ ಸುಕೃತೇ ಭಾರತಭೂತಲೇವಶಿಷ್ಟಃ |
ತದಿಹಾಸಿ ಸದೈವ ಪಾಪಚಿತ್ತೇ ಮಯಿ ಪಶ್ವಂತ್ಯಜಯೋಶ್ಚ ಕೋSಪರಾಧಃ |” ಆದ್ದರಿಂದ ನಾವು ಈಗಿನಿಂದಲೇ ವಿದ್ಯೆಯನ್ನು ಕಲಿತು ಧರ್ಮಾಚರಣರತರಾಗಬೇಕು” ಎಂದನು.
ಆಗ ಎಲ್ಲಾ ಬಾಲಕರು “ಮಿತ್ರ, ನೀನೇನೋ ಶ್ಲೋಕಗಳನ್ನು ಹೇಳಿಬಿಟ್ಟೆ ! ಅದು ನಮಗೆ ಅರ್ಥವಾಗಲಿಲ್ಲ. ಶ್ರೀವಿಜಯೀಂದ್ರ ಗುರುಗಳು ಈ ಸ್ತುತಿಯಿಂದ ಏನು ಉಪದೇಶಿಸಿದ್ದಾರೆ ? ಭಗವಂತನನ್ನು ಏನೆಂದು ಪ್ರಾರ್ಥಿಸಿದ್ದಾರೆ ? ತಿಳಿಸಪ್ಪ” ಎಂದರು.
ವೇಂಕಟನಾಥನು ಸಂತೋಷದಿಂದ, “ಗೆಳೆಯರೇ ಇದು ಸರಿಯಾದ ಕ್ರಮ, ತಿಳಿಯಬೇಕೆಂಬ ಹಂಬಲ, ಆಸೆಗಳೇ ಮನುಷ್ಯನನ್ನು ಜ್ಞಾನದ ದಾರಿಗೆ ಕರೆದೊಯ್ಯುತ್ತದೆ. ಶ್ರೀವಿಜಯೀಂದ್ರರು ತಮ್ಮ ನಿಮಿತ್ತಮಾಡಿಕೊಂಡು ಜಗತ್ತಿನ ಸಜ್ಜನರಿಗೆ ದೇವರನ್ನು ಹೀಗೆ ಪ್ರಾರ್ಥಿಸಬೇಕೆಂದು ಉಪದೇಶಿಸಿದ್ದಾರೆ. ನಾನು ಹೇಳಿದ ಶ್ಲೋಕಾಭಿಪ್ರಾಯ ಹೀಗಿದೆ -
ಮಾನವರಿಗೆ ನೂರುವರ್ಷ ಆಯುಷ್ಯವೆಂದು ಶಾಸ್ತ್ರದಲ್ಲಿ ಉಕ್ತವಾಗಿದೆ. ಆದರೆ ಭಗವಂತ ! ನೂರುವರ್ಷದಲ್ಲಿ ಅರ್ಧಭಾಗ ರಾತ್ರಿಕಾಲ ನೀರಿನಲ್ಲಿ ಮಾಡಿದ ಹೋಮದಂತೆ ವ್ಯರ್ಥವಾಗುವುದು, ಉಳಿದಿದ್ದು ಐವತ್ತು ವರ್ಷಮಾತ್ರ. ಅದರಲ್ಲಿ ಬಾಲ್ಯ ಇಪ್ಪತ್ತು ವರ್ಷ, ವೃದ್ದಾಪ್ಯ ಇಪ್ಪತ್ತು ವರ್ಷ ಹೀಗೆ ನಲವತ್ತು ವರ್ಷಗಳ ಕಾಲ ವಿವಿಧ ರೋಗ-ರುಜಿನ, ಆಟ-ಪಾಠಗಳಲ್ಲಿ ವ್ಯರ್ಥವಾಗುತ್ತದೆ. ಇನ್ನು ಉಳಿದಿದ್ದು ಹತ್ತು ವರ್ಷ ಮಾತ್ರ. ಅಂಥ ಬೆಲೆಬಾಳುವ ಹತ್ತು ವರ್ಷಗಳನ್ನು ಯೌವನದಲ್ಲಿ ಸಂಸಾರದಲ್ಲಿ ನಿರತರಾಗಿ ವ್ಯಯಮಾಡುತ್ತೇವೆ - ಸ್ವಾಮಿ, ಹೀಗೆ ಮತ್ತರಾದ ನಮಗೂ ಪಶುಚಂಡಾಲರಿಗೂ ವ್ಯತ್ಯಾಸವೇನು ? ಆದ್ದರಿಂದ ನಮಗೆ ಸುದ್ಭುದ್ಧಿಯಿತ್ತು ಬಾಲ್ಯದಿಂದಲೂ ಜ್ಞಾನಾರ್ಜನೆಮಾಡಿ ನಿನ್ನ ಸೇವಾರತರಾಗಿ, ಭಾಗವತಧರ್ಮಾಚರಣರತರಾಗುವಂತೆ ಅನುಗ್ರಹಿಸು - ಎಂದು ಪ್ರಾರ್ಥಿಸಿದ್ದಾರೆ. ಆದ್ದರಿಂದ ನಾವು ಆಟ-ಪಾಠದಲ್ಲಿ ಕಾಲಕಳೆದು ವಿದ್ಯೆ ಕಲಿಯದೆ ತಂದೆ-ತಾಯಿಗಳಿಗೆ ದುಃಖವನ್ನುಂಟುಮಾಡುವುದು ನ್ಯಾಯವೇ ಹೇಳಿ” ಎಂದು ವೇಂಕಟನಾಥನು ಕಳಕಳಿಯಿಂದ ನಿರೂಪಿಸಿದನು.
ವೇಂಕಟನಾಥನ ಉಪದೇಶ ಆ ಬಾಲಕರ ಮೇಲೆ ಒಳ್ಳೆಯ ಪರಿಣಾಮ ಉಂಟುಮಾಡಿತು. ಅವರು ತಮ್ಮ ತಪ್ಪನ್ನರಿತರು. ಇನ್ನು ಮುಂದಾದರೂ ವಿದ್ಯಾಭ್ಯಾಸಾದಿಗಳನ್ನು ಚೆನ್ನಾಗಿ ಮಾಡಬೇಕೆಂದು ನಿಶ್ಚಯಿಸಿ "ಮಿತ್ರ, ನೀನು ಹೇಳಿದ್ದು ನ್ಯಾಯವಾಗಿದೆ. ಇನ್ನು ಮುಂದೆ ನಾವು ನೀನು ಹೇಳಿದಂತೆ ವಿದ್ಯಾಭ್ಯಾಸ ಮಾಡುತ್ತಾ ನಿನ್ನ ಸಲಹೆಯಂತೆ ವರ್ತಿಸುತ್ತೇವೆ. ಆದರೆ ನೀನು ಮಾತ್ರ ನಮಗೆ ಜೊತೆಗಾರನಾಗಿದ್ದು ಮಾರ್ಗದರ್ಶನ ಮಾಡಬೇಕು” ಎಂದರು.
ಅವರ ಮಾತು ಕೇಳಿ ವೇಂಕಟನಾಥನಿಗೆ ಸಂತೋಷವಾಯಿತು. “ಗೆಳೆಯರೇ, ಸಂತೋಷ, ನನ್ನ ಸಹಕಾರ ಯಾವಾಗಲೂ ನಿಮಗಿದೆ. ಸರಿಯಾಗಿ ವಿದ್ಯೆಯನ್ನು ಕಲಿತು ಕೀರ್ತಿಗಳಿಸಿ” ಎಂದು ಹೇಳಿ ಅವರಿಂದ ಬೀಳ್ಕೊಂಡು ಮನೆಗೆ ತೆರಳಿದನು.