ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೨೪. ಬಾಲ್ಯಪಾಠ-ಪ್ರಗತಿ
ಸಮಾರಂಭದ ಗಡಿಬಿಡಿಯೆಲ್ಲಾ ಮುಗಿದ ಮೇಲೆ ಆಚಾರರು ಕುಮಾರ ವೇಂಕಟನಾಥನ ವಿದ್ಯಾಭ್ಯಾಸದತ್ತ ಗಮನಹರಿಸಿದರು. ಆಚಾರರು ಬೆಳಗಿನಝಾವ ಐದು ಗಂಟೆಗೆ ಕುಮಾರನೊಡನೆ ಎದ್ದು ಕಾಲಕೃತ್ಯಗಳನ್ನು ತೀರಿಸಿ ತುಳಸೀ ಮೃತ್ತಿಕೆಯನ್ನು ಧರಿಸಿ ದೇವರಿಗೆ ನಮಸ್ಕರಿಸಿ ದೇವಮಂದಿರದ ಮುಂದೆ ಕುಳಿತು ಪುತ್ರನಿಗೆ ಪ್ರಾತಃಕಾಲ ಪಠಿಸಲು ಯೋಗ್ಯವಾದ ಅನೇಕ ಮಂತ್ರ ಸ್ತೋತ್ರಗಳನ್ನು ಹೇಳಕೊಡಲಾರಂಭಿಸಿದರು. ಅನಂತರ ಅಮರ, ಶಬ್ದ, ಧಾತುರೂಪ, ಸಮಾಸಚಕ್ರಗಳನ್ನು ಸಂತೆ ಹೇಳುತ್ತಿದ್ದರು. ಅದಾದಮೇಲೆ ಸಂಸ ತ-ಕನ್ನಡಲಿಪಿ-ಕಾಗುಣಿತ-ವಾಕ್ಯರಚನೆಗಳನ್ನು ಹೇಳಿಕೊಡುತ್ತಿದ್ದರು, ಮಧ್ಯಾಹ್ನ ಭೋಜನವಾದ ಮೇಲೆ ಮಗನಿಗೆ ವೀಣಾವಾದನವನ್ನೂ ಕಲಿಸಹತ್ತಿದರು.
ವೀಣಾಪಾಠಕ್ಕೆ ಹಿಂದೆ ಗುರುರಾಜನಿಗಾಗಿ ಮಾಡಿಸಿದ ಸಣ್ಣ ವೀಣೆಯನ್ನು ವೇಂಕಟನಾಥನಮುಂದಿಟ್ಟು ತಾವು ತಾತ ಕೃಷ್ಣಾಚಾರ್ಯರು ಉಪಯೋಗಿಸುತ್ತಿದ್ದ'ವಾಗ್ಗೇವಿ' ಎಂಬ ವೀಣೆಯನ್ನಿಟ್ಟುಕೊಂಡು ಕುಳಿತು ಕುಮಾರನಿಂದ ವೀಣೆಗೆ ಪೂಜೆ ಮಾಡಿಸಿ ದೇವರಿಗೆ ನಮಸ್ಕಾರ ಮಾಡಿಸಿ, ಪ್ರಾರ್ಥಿಸಿ, ಪಾಠವನ್ನು ಪ್ರಾರಂಭಿಸಿದರು. ಮೊದಲು ಮಾಯಾಮಾಳವಗೌಳರಾಗದ ಆರೋಹಣಾವರೋಹಣ ಸ್ವರಗಳ ವೈಶಿಷ್ಟಾದಿಗಳನ್ನು ವಿವರಿಸಿ ತಾವು ನುಡಿಸಿ ತೋರಿ ಮಗನಿಗೂ ಅಭ್ಯಾಸಮಾಡಿಸಿದರು. ಏಕಸಂಧಿಗ್ರಾಹಿಯೂ ಮೇಧಾವಿಯೂ ಅದ ವೇಂಕಟನಾಥ ಕೇವಲ ಶ್ರವಣಮಾತ್ರದಿಂದಲೇ ಗ್ರಹಿಸಿ ಒಂದು ಸಲ ಬಾರಿಸುವುದರಿಂದಲೇ ಅದನ್ನು ಕರಗತಮಾಡಿಕೊಳ್ಳುತ್ತಿದ್ದನು. ಪುತ್ರನ ಈ ರಭಸದ ಅಭ್ಯಾಸದಿಂದ ಮುದಗೊಂಡು ತಿಮ್ಮಣ್ಣಾಚಾರರು ವಿಶೇಷ ಉತ್ಸಾಹದಿಂದ ವೀಣಾವಾದನ ಕಲೆಯನ್ನು ಮಗನಿಗೆ ಕಲಿಸಹತ್ತಿದರು.
ಸರಳೆ, ಜಂಟಿವರಸೆ, ಅವುಗಳ ವೈವಿದ್ಯ ವಿಶೇಷಗಳು, ಗೀತೆ ಅಲಂಕಾರ, ವರ್ಣಗಳ ಪಾಠಗಳನ್ನು ಕುಮಾರ ವೆಂಕಟನಾಥನು ಲೀಲೆಯಿಂದಲೇ ಕಲಿತುಬಿಟ್ಟನು. ಮಗನ ಪ್ರಗತಿಯಿಂದ ಮುದಗೊಂಡ ಆಚಾರ್ಯರು ಇವನಿಂದ ತಮ್ಮ ಕೀರ್ತಿ ಬೆಳಗುವುದೆಂದು ನಂಬಿದರು. ಅನಂತರ ಆಚಾರರು ಕ್ರಮವಾಗಿ ತೊಂಭತ್ತು ಮೇಳಕರ್ತರಾಗಗಳನ್ನು ಕಲಿಸತೊಡಗಿ ಪ್ರತಿರಾಗದ ಆರೋಹಣಾವರೋಹಣ, ಸರಳೆ, ಅದರ ವೈವಿಧ್ಯಾದಿ ಕ್ರಮಗಳನ್ನೂ, ಆಲಾಪನಾಕ್ರಮಗಳನ್ನೂ, ಚೆನ್ನಾಗಿ ಅಭ್ಯಾಸಮಾಡಿಸಿ ಶ್ರೀಪಾದರಾಜ, ವ್ಯಾಸರಾಜ, ವಿಜಯೀಂದ್ರ, ವಾದಿರಾಜ, ಪುರಂದರದಾಸ, ಕನಕದಾಸ ಮುಂತಾದ ಅಪರೋಕ್ಷಜ್ಞಾನಿಗಳ ಉತ್ತಮ ಕೃತಿಗಳನ್ನೂ, ಹಿಂದೂಸ್ಥಾನೀಪದ್ಧತಿಯ ಸಂತರು ರಚಿಸಿದ ಕೃತಿಗಳನ್ನೂ ಪಾಠಹೇಳಿ ಅಭ್ಯಾಸಮಾಡಿಸಿದರು.
ಅನಂತರ ಒಂದೊಂದುರಾಗಗಳು ಅದರ ವೈಶಿಷ್ಟ್ಯಗಳು, ಆಲಾಪನೆ, ಗಮಕ, ನರವಲ್, ಪಲಕು, ತ್ರಿಕಾಲದಲ್ಲಿ ಸ್ವರವಿನ್ಯಾಸ, ಅದರ ವೈವಿಧ್ಯ, ವಿವಿಧ ತಾಳಗಳ ಸ್ವರೂಪ, ಅವುಗಳ ಭೇದಗಳು, ಕ್ಲಿಷ್ಟತಾಳಗಳಲ್ಲಿ ವೀಣೆನುಡಿಸುವ ಚಮತ್ಕಾರ, ಯಾವ ತಾಳದಲ್ಲಿ ನುಡಿಸುತ್ತಿದ್ದಾರೆ ಎಂದು ವ್ಯಕ್ತವಾಗದಂತೆ ವೀಣಾವಾದನಮಾಡುವ ಅಪರೂಪಕ್ರಮಗಳನ್ನೂ ಆಚಾರರು ವಿದ್ದತ್ತೂರ್ಣವಾಗಿ ಮಗನಿಗೆ ಕಲಿಸಿದರು. ತಂದೆಯು ಹೇಳಿಕೊಡುತ್ತಿದಂತೆಯೇ ಅವೆಲ್ಲವನ್ನೂ ಚೆನ್ನಾಗಿ ಗ್ರಹಿಸಿ ಅದರಲ್ಲಿ ಅದ್ವಿತೀಯ ಪ್ರತಿಭೆತೋರುತ್ತಾ ತಂದೆಯನ್ನೇ ವಿಸ್ಮಯಗೊಳಿಸುತ್ತಿದ್ದ ನಮ್ಮ ಬಾಲವೆಂಕಟನಾಥ !
ವೇಂಕಟನಾಥ ಒಂದು ವರ್ಷದಲ್ಲಿಯೇ ವಯಸ್ಸಿಗೆ ಮೀರಿದ ಪ್ರತಿಭೆಯಿಂದ ಸಂಸ ತ - ಕನ್ನಡಗಳಲ್ಲಿ ವಾಕ್ಯರಚನೆಮಾಡಿ ಬರೆಯುವುದರಲ್ಲಿ ಪ್ರವೀಣನಾದ, ತ್ರಿಕಾಂಡ ಅಮರ ಶಬ್ದಗಳು, ಸಮಾಸ, ಧಾತುಗಳು ಮಂತ್ರ-ಸ್ತೋತ್ರಗಳಲ್ಲಿಯೂ ಪ್ರಾವೀಣ್ಯತೆ ಗಳಿಸಿ ತಂದೆ-ತಾಯಿಗಳಿಗೆ ಹರ್ಷನೀಡಿದನು. ಹೀಗೆ ಅವ್ಯಾಹತವಾಗಿ ವಿದ್ಯಾಭ್ಯಾಸಸಾಗಿತು.
ವಿಶೇಷ ಆಹ್ವಾನದಂತೆ ಕುಂಭಕೋಣಕ್ಕೆ ಶ್ರೀಸುರೇಂದ್ರತೀರ್ಥರ ಮಹಾಸಮಾರಾಧನೆಗೆ ಕುಟುಂಬಸಹಿತರಾಗಿ ತಿಮ್ಮಣ್ಣಾಚಾರರು ಬಂದಿದ್ದರಿಂದ ಉಭಯಗುರುಗಳಿಗೆ ಆನಂದವಾಯಿತು. ಪ್ರತಿದಿನ ಪೂಜೆ, ವಿದ್ವತ್ಸಭೆ, ವಾಕ್ಯಾರ್ಥಮುಂತಾದ ಕಾರಕ್ರಮಗಳು ಜರುಗುತ್ತಿದ್ದಾಗ ಕುಮಾರ ವೇಂಕಟನಾಥ ಬಹುಶ್ರದ್ಧೆಯಿಂದ ಅವೆಲ್ಲವನ್ನೂ ಗಮನಿಸುತ್ತಿದ್ದನು. ಶ್ರೀವಿಜಯೀಂದ್ರರು ಶ್ರೀಮೂಲರಾಮನನ್ನು ಪೂಜಿಸುವಾಗಲಂತೂ ಅವನು ಮೈಮರೆತು ಕುಳಿತು ಪ್ರತಿಯೊಂದು ಪೂಜಾವಿಧಾನವನ್ನು ಗಮನಿಸಿ ಸಂತೋಷಿಸುತ್ತಿದ್ದನು. ಕುಮಾರನ ಈ ಏಕಾಗ್ರತೆಯನ್ನು ಕಂಡು ವಿಜಯೀಂದ್ರ, ಸುಧೀಂದ್ರ ಗುರುಗಳಿಗೆ ಅಪಾರ ಪ್ರಮೋದವಾಗುತ್ತಿತ್ತು. ಅವನ ಅಭ್ಯಾಸ ವಿಚಾರಾದಿಗಳನ್ನೆಲ್ಲಾ ಆಚಾರರಿಂದ ತಿಳಿದು ಉಭಯಗುರುಗಳೂ ಮುದಿಸಿದರು.
ಮಹಾಸಮಾರಾಧನೆ ಮುಗಿದ ಮೇಲೆ ಊರಿಗೆ ಹೊರಡಲು ತಿಮ್ಮಣ್ಣಾಚಾರರು ಗುರುಗಳಿಂದ ಅಪ್ಪಣೆ ಪಡೆಯಲು ಗುರುಸನ್ನಿಧಿಗೆ ಸಂಸಾರ ಸಮೇತರಾಗಿ ಹೋದರು. ಶ್ರೀವಿಜಯೀಂದ್ರರು ಸುಧೀಂದ್ರರೊಡನೆ ಚಿತ್ರಾಸನದಲ್ಲಿ ಮಂಡಿಸಿದ್ದರು. ಗೋಪಮ್ಮನ ಕೈಹಿಡಿದು ಬರುತ್ತಿದ್ದ ವೇಂಕಟನಾಥನನ್ನು ಕಂಡು ವಿಜಯೀಂದ್ರರ ಮುಖವರಳಿತು. ಅವನನ್ನೇ ನೆಟ್ಟದೃಷ್ಟಿಯಿಂದ ನೋಡುತ್ತಿದ್ದ ಗುರುಗಳ ಕಣ್ಣಾಲಿಗಳು ತೇವಗೊಂಡವು. ಅತ್ಯಂತ ಸುಂದರನೂ, ಸುವರ್ಣಛಾಯೆಯಿಂದ ಆಕರ್ಷಕ ದೇಹ-ಭವಸ್ವರೂಪದಿಂದ ಮಂದಹಾಸದಿಂದ ಬೆಳಗುವ ಸುಂದರ ಮುಖದಿಂದ ಎಲ್ಲರ ಕಣ್ಮನಗಳನ್ನು ಸೆಳೆಯುತ್ತಿದ್ದ ಅ ಮುದ್ದು ವೆಂಕಟನಾಥನನ್ನು ವಿಜಯೀಂದ್ರರು ಕರೆದು ಬರಸೆಳೆದಪ್ಪಿ, ಮುದ್ದಾಡಿ, ತೊಡೆಯ ಮೇಲೆ ಕೂಡಿಸಿಕೊಂಡು ಅವನ ಬೆನ್ನು, ತಲೆ ಸವರುತ್ತಾ “ಆಹಾ, ಅದೇ ರೂಪ, ಅದೇ ತೇಜಸ್ಸು, ಇವನ ನೋಟ, ನಗು, ಮಾತು, ಠೀವಿ ಎಲ್ಲವೂ ಅದೇ ಹೂಂ, ತಿಮ್ಮಣ್ಣಾ, ನೀನು ಮಹಾಭಾಗ್ಯಶಾಲಿ ! ಇವನನ್ನು ನಮಗೆ ಕೊಟ್ಟುಬಿಡು !” ಎಂದು ಬಡಬಡಿಸುತ್ತಾ ಮೈಮರೆತ ಗುರುಗಳ ಈ ಭಾವೋದ್ವೇಗ, ವೇಂಕಟನಾಥನಲ್ಲಿ ತೋರುತ್ತಿರುವ ಪತ್ರವತ್ ಪ್ರೇಮಾದರ, ಅರ್ಥವಾಗದ ನುಡಿಗಳನ್ನೆಲ್ಲಾ ಕಂಡು-ಕೇಳಿ ಆಶ್ಚರ್ಯವಾಯಿತು. ಆನಂತರ ಧಾರಾಕಾರವಾಗಿ ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಂಡು ಶ್ರೀವಿಜಯೀಂದ್ರರು “ತಿಮ್ಮಣ್ಣಾ ! ನಾವು ನಿನಗೆ ಶ್ರೀಮುಖದಲ್ಲಿ ಬರೆದಿದ್ದಂತೆ ಇವನು ಮಹಾಮಹಿಮನಾಗಿ ಮೆರೆಯುತ್ತಾನೆ. ಇವನನ್ನು ಸರಿಯಾಗಿ ತಯಾರುಮಾಡು. ಮುಂದೆ ಇವನ ಪ್ರೌಢವಿದ್ಯಾಭ್ಯಾಸ ನಮ್ಮ ಶಿಷ್ಯರಿಂದೇ ಆಗಬೇಕಾಗಿದೆ. ಅದರಿಂದ ಮಹಾಸಂಸ್ಥಾನದ ಕೀರ್ತಿ ಮತ್ತು ನಿಮ್ಮ ವಂಶದ ಪ್ರತಿಷ್ಠೆ ಜಗದ್ವಿಖ್ಯಾತವಾಗುವುದು” ಮುಂತಾಗಿ ಹೇಳಿ ಎಲ್ಲರಿಗೂ ಫಲ-ಮಂತ್ರಾಕ್ಷತೆಯನ್ನು ಕರುಣಿಸಿ ಕಳಿಸಿಕೊಟ್ಟರು. ಉಭಯಗುರುಗಳ ಅಪ್ಪಣೆ ಪಡೆದು ಆಚಾರರು ಸಂಸಾರಸಹಿತರಾಗಿ ಊರಿಗೆ ಪ್ರಮಾಣ ಬೆಳೆಸಿದರು.
ಅವರೆಲ್ಲರು ತೆರಳಿದಮೇಲೆ ಶ್ರೀಸುಧೀಂದ್ರರು “ಗುರುವರ್ಯ ! ಕುಮಾರ ವೇಂಕಟನಾಥನಲ್ಲಿ ಅದೇನು ತೇಜಸ್ಸಿದೆ ! ಗುರುಗಳು ಅವನನ್ನು ಅಪ್ಪಿ ತನ್ಮಯರಾದ ಕಾರಣ ಹೇಳಬಹುದೇ ?” ಎಂದರು. ವಿಜಯೀಂದ್ರರು ನಸುನಕ್ಕು “ಅವನು ಮಹಾಮಹಿಮನಾಗುತ್ತಾನೆ. ನಮ್ಮ ಪ್ರೇಮಾಸ್ಪದನವನು ! ಅವನ ಬಗ್ಗೆ ಸಮಯ ಬಂದಾಗ ನಿಮಗೆ ತಿಳಿಸುತ್ತೇವೆ” ಎಂದು ಹೇಳಿ ಸಾಯಂದೀಪಾರಾಧನೆಗಾಗಿ ದಯಮಾಡಿಸಿದರು.
ಕುಂಭಕೋಣದಿಂದ ಮರಳಿ ಬಂದ ಮೇಲೆ ವೇಂಕಟನಾಥನಲ್ಲಿ ಬಹಳ ಮಾರ್ಪಾಟಾಯಿತು, ಇತರ ಬಾಲಕರೊಡನೆ ಆಟವಾಡುವುದನ್ನು ಬಿಟ್ಟು ಗಂಭೀರನಾದನು. ಮಾತು ಕಡಿಮೆಯಾಯಿತು, ಸದಾ ಅಧ್ಯಯನ-ಚಿಂತನ, ಹೊಸಹೊಸಪಾಠ, ವಿವೇಚನೆಗಳು-ಆರಂಭವಾದವು, ವೇಂಕಟನಾಥ ತಂದೆಯೇ ಬೇಸರಗೊಳ್ಳುವಷ್ಟು ಹೊತ್ತು ವೀಣಾಪಾಠ, ಸಾಧನೆಗಳಲ್ಲಿ ತಲ್ಲೀನನಾದನು. ಮಗನ ತಾತ್ವಿಕ, ಸಾಹಿತ್ಯಕ, ಧಾರ್ಮಿಕ ಪ್ರಜ್ಞೆಯನ್ನೂ ತೇಜಸ್ಸು, ಧೀಶಕ್ತಿಗಳನ್ನು ಕಂಡು ವಿಸ್ಮಿತರಾಗಿ ಆಚಾರರು ಅವನಿಗೆ ಎಲ್ಲ ಬಗೆಯ-ಉತ್ತೇಜನ ನೀಡುತ್ತಾ, ತಾತ್ವಿಕವಿಚಾರಗಳನ್ನು ಸುಲಭವಾಗಿ ತಿಳಿಯುವಂತೆ ಬೋಧಿಸುತ್ತಿದ್ದರೂ ಗೋಪಮ್ಮ ಮಗನನ್ನು ಹತ್ತಿರ ಕೂಡಿಸಿಕೊಂಡು ಅವನಿಗೆ ಅನೇಕ ರಾಮಾಯಣ-ಭಾರತಾದಿ ಇತಿಹಾಸ, ಪುರಾಣಗಳಲ್ಲಿನ ಬಾಲವೀರರು, ಭಕ್ತರು, ತತ್ವಜ್ಞಾನಿಗಳ ಕಥೆಗಳನ್ನೂ, ತಾತ್ವಿಕ, ನೈತಿಕ, ಧಾರ್ಮಿಕಪ್ರಜ್ಞೆಯನ್ನೂ ಉಜ್ವಲಗೊಳಿಸುವ ಅನೇಕ ಆಖ್ಯಾನ-ಉಪಾಖ್ಯಾನಗಳನ್ನು ಹೇಳುತ್ತಿದ್ದರು. ಒಟ್ಟಿನಲ್ಲಿ ತಿಮ್ಮಣ್ಣಾಚಾರರು ಸುಪುತ್ರರ ಅಭ್ಯುದಯದಿಂದ ಹಿಗ್ಗುತ್ತಿದ್ದರು. ಅವರ ಸಂಸಾರ ಸುಖಮಯವಾಗಿ ಸಾಗಿತ್ತು.
ಒಂದು ದಿನ ವೇಂಕಟನಾಥನು ಒಂದು ದೇವರ ಮಂಟಪವನ್ನು ಹಜಾರದಲ್ಲಿಟ್ಟು ತಂದೆಯ ಕೊಠಡಿಯಲ್ಲಿದ್ದ ರಾಮ-ಕೃಷ್ಣಪ್ರತಿಗಳನ್ನು ಮಂಟಪದಲ್ಲಿ ಮಂಡಿಸಿ ದೀಪಸ್ತಂಭವನ್ನೂ, ಗಂಟೆ, ಪೂಜಾಸಾಮಗ್ರಿಗಳನ್ನು ತಂದಿಟ್ಟುಕೊಂಡು ತೋಟದಲ್ಲಿದ್ದ ಹೂವು, ತುಳಸಿಗಳನ್ನೂ ತಂದು ಶ್ರೀವಿಜಯೀಂದ್ರರು ತನಗೆ ಕೊಟ್ಟ ಜರಿಯ ಕಾವಿಶಾಟಿಯನ್ನು ಶ್ರೀವಿಜಯೀಂದ್ರರಂತೆ ತಲೆಗೆ ಕಟ್ಟಿಕೊಂಡು ಅವರು ಮಾಡುವಂತೆ ದೇವರಪೂಜೆ ಮಾಡುತ್ತಾ ಮಂತ್ರಪಠಿಸುತ್ತಾ ಮೈಮರೆತು ಕುಳಿತಿದ್ದನು.
ಏನನ್ನೋ ಹುಡುಕಿಕೊಂಡು ಮನೆಯ ಹಿತ್ತಲುಬಾಗಿಲಿನಿಂದ ಮನೆಯ ಮಗ್ಗಲುಭಾಗಕ್ಕೆ ಬಂದ ಗೋಪಮ್ಮನು ಆಕಸ್ಮಾತ್ ಕಿಟಕಿಯತ್ತ ದೃಷ್ಟಿಹಾಯಿಸಿದಳು. ಅವಳಿಗೆ ವೇಂಕಟನಾಥನ ಪೂಜಾವೈಭವ ಗೋಚರಿಸಿತು. ಆ ಮಂಗಳಕರ ದೃಶ್ಯವನ್ನು ಕಂಡು ಪರವಶಳಾದಳು, ಅದೇ ಸಮಯಕ್ಕೆ ಮನೆಗೆ ಬರುತ್ತಿರುವ ತಿಮ್ಮಣ್ಣಾಚಾರರನ್ನು ಕಂಡು ಅವರ ಬಳಿಗೆ ಹೋಗಿ “ಏನೂಂದ್ರೆ, ಬನ್ನಿ, ನಿಮಗೊಂದು ಅಪೂರ್ವದೃಶ್ಯ ತೋರಿಸುತ್ತೇನೆ” ಎಂದು ಪತಿಯ ಕರಹಿಡಿದು ಕಿಟಕಿಯ ಬಳಿಗೆ ಕರೆತಂದು ಒಳಗಿನ ದೃಶ್ಯ ತೋರಿಸಿದಳು. ಆಚಾರರು ಉತ್ಸುಕತೆಯಿಂದ ಕಿಟಕಿಯಲ್ಲಿ ಇಣುಕಿ ನೋಡಿದರು. ಕುಮಾರ ದೇವರಿಗೆ ನೇವೇದ್ಯ ಸಮರ್ಪಿಸಿ, ಮಂಗಳಾರತಿ ಮಾಡುತ್ತಿದ್ದಾನೆ ! ಅವನ ಮುಖಭಾವ, ತೇಜಸ್ಸು, ಭಕ್ತಿಪರವಶತೆಗಳನ್ನು ಕಂಡು ಆಚಾರರು ದಿಗ್ಧಾಂತರಾದರು. ವೇಂಕಟನಾಥ ಪೂಜೆ ಮುಗಿಸಿ ಕೈಯಲ್ಲಿ ಒಂದು ಕೋಲು, ಪಂಚಪಾತ್ರೆಗಳನ್ನು ಕಮಂಡಲುಗಳಂತೆ ಹಿಡಿದು ಮಂತ್ರವನ್ನು ಹೇಳುತ್ತಾ ವಿಜಯೀಂದ್ರರನ್ನು ಅನುಕರಿಸಿ ಪ್ರದಕ್ಷಿಣೆ, ನಮಸ್ಕಾರಗಳನ್ನು ಮಾಡುತ್ತಿದ್ದಾನೆ. ಆ ದೃಶ್ಯ ತಂದೆ-ತಾಯಿಗಳನ್ನು ರೋಮಂಚನಗೊಳಿಸಿ ಆನಂದಬಾಷ್ಪ ಹರಿಸಿತು. ಮೆಲ್ಲನೆ ಅಲ್ಲಿಂದ ಮನೆಯ ಮುಂಭಾಗಕ್ಕೆ ಬಂದರು ಆ ಭಾಗ್ಯಶಾಲಿ ತಂದೆ-ತಾಯಿಗಳು !
ಗೋಪಮ್ಮ “ನೋಡಿದಿರಾ ನಿಮ್ಮ ಕುಮಾರನ ಪೂಜಾವೈಭವವನ್ನು ? ಇವನ ಪ್ರತಿಯೊಂದು ನಡವಳಿಕೆಯೂ ಅಚ್ಚರಿಯನ್ನುಂಟುಮಾಡುವವು. ನಾಲ್ಕು ವರ್ಷದ ಈ ಬಾಲಕನಿಗೆ ಇವೆಲ್ಲ ಯಾರು ಹೇಳಿಕೊಟ್ಟರು” ಎಂದು ಉದ್ಧರಿಸಿದರು.
ಆಗ ಆಚಾರರು ನಸುನಕ್ಕು 'ಗೋಪಿ, ಇದು ಹೇಳಿಕೊಟ್ಟರೆ ಬರುವಂತಹುದಲ್ಲ, ಪೂರ್ವಜನ್ಮ ಸಂಸ್ಕಾರಬಲದಿಂದ ಬಂದುದೇ ಹೊರತು ಬೇರೆ ಅಲ್ಲ, ಕೇಳು ವೇಂಕಟನಾಥನ ಚೌಲಕ್ಕೆ ರಾಮಚಂದ್ರಾಚಾರರು ಬಂದಾಗ ಶ್ರೀವಿಜಯೀಂದ್ರರು ಅವರ ಹಸ್ತ ನನಗೆ ಒಂದು ಶ್ರೀಮುಖವನ್ನು ಕಳಿಸಿದ್ದರು. ಗೋಪಿ, ನಾನು ಇದುವರೆಗೂ ನಿನಗೂ ತಿಳಿಸದಿದ್ದರಹಸ್ಯವೊಂದನ್ನು ಈಗ ಹೇಳುತ್ತೇನೆ ಕೇಳು, ನಾನು ಹಿಂದೆ ವೇಂಕಟನಾಥನ ಜಾತಕವನ್ನು ಶ್ರೀಗಳವರಿಗೆ ಅರ್ಪಿಸಿ ಜಾತಕಫಲಗಳನ್ನು ವಿಚಾರಮಾಡಿ ತಿಳಿಸಬೇಕೆಂದು ಪ್ರಾರ್ಥಿಸಿದ್ದೆ. ಶ್ರೀಗಳವರು ಕಳಿಸಿದ ಶ್ರೀಮುಖದಲ್ಲಿ ಕುಮಾರನ ಜಾತಕವನ್ನು ವಿಮರ್ಶಿಸಿ ಅನೇಕ ಅದ್ಭುತ ವಿಚಾರ-ಭವಿಷ್ಯಗಳನ್ನು ಗುರುಗಳು ಬರೆದು ಇನ್ನೂ ಅನೇಕ ಮುಖ್ಯವಿಚಾರಗಳಿವೆ. ಭವಿಷ್ಯವನ್ನು ಮುಂದಾಗಿ ತಿಳಿಸಬಾರದಾದ್ದರಿಂದ ನಾವೀಗ ಅದನ್ನು ತಿಳಿಸಲಿಚ್ಛಿಸುವುದಿಲ್ಲ ಮುಂತಾಗಿ ಬರೆದಿದ್ದರು. ಗುರುಗಳು ಬರೆದ ವಿಚಾರಗಳನ್ನು ಸಾರಭೂತವಾಗಿ ನಿನಗೀಗ ತಿಳಿಸುತ್ತೇನೆ. ನಮ್ಮ ವೇಂಕಟನಾಥನು ದೇವಾಂಶಸಂಭೂತನಂತೆ ! ಅವನು ಲೋಕಕಲ್ಯಾಣಕ್ಕಾಗಿಯೇ ಅವತರಿಸಿರುವನಂತೆ, ಅವನು ಜಗನ್ಮಾನ್ಯ ಜ್ಞಾನಿಯಾಗಿ, ಗ್ರಂಥಕಾರನಾಗಿ, ರಾಜಮಾನ್ಯನಾಗಿ, ಪರವಾದಿಭಯಂಕರನಾಗಿ, ದೈತಸಿದ್ಧಾಂತಸ್ಥಾಪಕನಾಗಿ, ಕಲಿಯುಗದ ದೀನ-ದಲಿತ-ಆಪಂಡಿತ-ಪಾಮರರ ಉದ್ಧಾರಕನಾಗಿ ಮೆರೆಯುವನಂತೆ ! ತಮ್ಮ ಭವಿಷ್ಯ ಸತ್ಯವೆಂಬುದು ನನಗೆ ಕುಮಾರನ ಅಕ್ಷರಾಭ್ಯಾಸಕಾಲದಲ್ಲಿ ಪ್ರಕಟವಾಗುವುದೆಂದೂ ಬರೆದಿದ್ದರು. ಅದನ್ನು ನಾವೆಲ್ಲ ಕಂಡು ಬೆರಗಾಗಿದ್ದು ನಿನಗೆ ಗೊತ್ತೇ ಇದೆ. ಇಂದು ಕುಮಾರನ ಪೂಜಾವೈಭವ-ಭಕ್ತಿಭಾವಗಳನ್ನು ಕಂಡು ತಡೆಯಲಾಗದೆ ನಿನಗೆ ಆ ವಿಚಾರವನ್ನು ಹೇಳಿಬಿಟ್ಟೆ ! ಇದು ರಹಸ್ಯವಾಗಿರಲಿ, ಶ್ರೀನಿವಾಸನ ವರ, ಗುರುಗಳ ಭವಿಷ್ಯ ಸತ್ಯವಾಗುವುದರಲ್ಲಿ ಸಂದೇಹವಿಲ್ಲ, ನಾವು ನಿಜವಾಗಿ ಭಾಗ್ಯಶಾಲಿಗಳು, ದೇವರು ಕುಮಾರನಿಗೆ ದೀರ್ಘಾಯುಷ್ಯ ಕೊಟ್ಟು ಕಾಪಾಡಲಿ” ಎಂದು ನುಡಿದು ಪತ್ನಿಯೊಡನೆ ಏನೂ ಅರಿಯದವರಂತೆ ಮನೆಗೆ ಪ್ರವೇಶಿಸಿದರು.