ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೨೩. ಚೌಲ-ಅಕ್ಷರಾಭ್ಯಾಸ
ಶ್ರೀ ಶಕೆ ೧೫೨೦ ನೆಯ ಹೇವಿಳಂಬಿ ಸಂ। ವೈಶಾಖಮಾಸದ ಒಂದು ಶುಭದಿನ305 ಆಗತಾನೆ ಭಗವಾನ್ ದಿನಮಣಿಯು ಉದಯಿಸಿದ್ದಾನೆ. ಸೂರ್ಯದೇವನು ತನ್ನ ಹೊಂಗಿರಣಗಳಿಂದ ಜಗತ್ತಿಗೆ ಭವ್ಯ ಬೆಳಕನ್ನು ನೀಡುತ್ತಿದ್ದಾನೆ. ಅದನ್ನು ಅವಲೋಕಿಸಿದರೆ, ಸೂರ್ಯದೇವನು ತನ್ನ ವಂಶದೀಪಕನಾದ ಶ್ರೀರಾಮಚಂದ್ರನ ಆರಾಧಕನಾಗಿ ಶ್ರೀರಾಘವೇಂದ್ರನೆಂಬ ಹೆಸರಿಂದ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಲಿರುವ ಬಾಲಕ ವೇಂಕಟನಾಥನು ನಡೆಸಲಿರುವ ಜ್ಞಾನಯಜ್ಞದ ಪ್ರಾರಂಭೋತ್ಸವವನ್ನು ತನ್ನ ಹೊಂಗಿರಣಗಳಿಂದ ಇಣಕಿನೋಡುತ್ತಿರುವಂತೆ ಭಾಸವಾಗುತ್ತಿದೆ. ಆಚಾರರ ಭವ್ಯಭವನ ತಳಿರುತೋರಣಗಳಿಂದ ಅಲಂಕೃತವಾಗಿದೆ. ಊರನಾರಿಯರು, ಪೌರರು, ಪಂಡಿತರು, ವರ್ಣಮಯ ವಸ್ತಗಳಿಂದ ಶೋಭಿಸುತ್ತಾ ಆಚಾರರಮನೆಗೆ ಬಂದುಸೇರುತ್ತಿದ್ದಾರೆ. ಸುಸ್ವರನಾಗಸ್ವರದ ಮಂಗಳನಿನಾದ ಎಲ್ಲೆಡೆ ವ್ಯಾಪಿಸಿದೆ. ಶ್ರೀರಂಗಾದಿ ಪಟ್ಟಣಗಳಿಂದ ಆಚಾರರ ಅತ್ತೆ, ಮಾವ, ಬಾಂಧವರು, ಕುಂಭಕೋಣದಿಂದ ಶ್ರೀವಿಜಯೀಂದ್ರರ ಸೋದರರ ಕುವಾರರಾದ ಪಂಡಿತ ರಾಮಚಂದ್ರಾಚಾರರು ಮತ್ತು ಕೆಲಮಠದ ಪಂಡಿತರೂ ಆಗಮಿಸಿದ್ದಾರೆ. ಎಲ್ಲ ಕಡೆ ಸಂಭ್ರಮದ ವಾತಾವರಣ, ವೆಂಕಟಾಂಬಾದೇವಿ, ಗುರುರಾಜರು ತಮ್ಮನ ಚೌಲ ಸಮಾರಂಭಕ್ಕೆ ಪುರೋಹಿತರಿಗೆ ಸಹಾಯಮಾಡುತ್ತಾ ಸಡಗರದಿಂದ ಓಡಾಡುತ್ತಿದ್ದಾರೆ, ಪೂರ್ವಾಭಿಮುಖವಾಗಿ ಹಾಕಿರುವ ಹಸೆಯಮಣೆಯ ಮೇಲೆ ತಿಮ್ಮಣ್ಣಾಚಾರ ದಂಪತಿಗಳು ಕುಮಾರ ವೇಂಕಟನಾಥನೊಡನೆ ಕುಳಿತಿದ್ದಾರೆ. ಚೌಲಾಂಗವಾದ ವೈದಿಕವಿಧಿಗಳೆಲ್ಲವೂ ಮುಗಿದು ಜಗಲಿಯ ಮೇಲೆ ಹಾಕಿದ ಮಣೆಯಲ್ಲಿ ಕೂಡಿಸಿ ವೇಂಕಟನಾಥನಿಗೆ ಕುರಕರ್ಮಮಾಡಿಸಿ, ಚಂಡಿಕೆಬಿಡಿಸಿ ಮಂಗಳಸ್ನಾನ ಮಾಡಿಸಿದರು. ವೆಂಕಟಾಂಬಾ-ಗುರುರಾಜರು ಸಹೋದರನನ್ನು ಸ್ವರ್ಣಮಯ ನಾಗಮುರಿಗೆ, ಕಂಕಣ, ಉಂಗುರ, ಹಾರ, ಪೀತಾಂಬರಗಳಿಂದ ಅಲಂಕರಿಸಿ ಹಣೆಗೆ ತಿಲಕವಿಟ್ಟು ನೋಡಿ ಆನಂದಿಸಿ ವೆಂಕಟನಾಥನನ್ನು ಹಸೆಮಣೆಗೆ ಕರೆತಂದು ಕೂಡಿಸಿದರು. ಪುರೋಹಿತರು ಹಸೆಮಣೆಯ ಮುಂಭಾಗದಲ್ಲಿ ಬೆಳ್ಳನೆಯ ಮರಳನ್ನು ಹರವಿ ಅದರ ಸುತ್ತ ರಂಗದಲ್ಲಿ ಕೆಮ್ಮಣ್ಣುಗಳಿಂದ ಅಲಂಕಾರಮಾಡಿಸಿ ಅಕ್ಷರಾಭ್ಯಾಸಾಂಗವಾಗಿ ಗೋಮಯದಿಂದ ವಿಶ್ಲೇಶನನ್ನು ರಚಿಸಿ ತಾಯಿ ತಂದೆ ಮತ್ತು ವೇಂಕಟನಾಥರಿಂದ ಪೂಜೆ, ನಿವೇದನ, ಮಂಗಳಾರತಿಮಾಡಿಸಿದರು.
ಪಂಡಿತ ತಿಮ್ಮಣ್ಣಾಚಾರರು ಮರಳಿನಮೇಲೆ ಓಂಕಾರವನ್ನು ಬರೆದು ಅರಿಶಿನ, ಕುಂಕುಮ, ಮಂತ್ರಾಕ್ಷತೆ ಪುಷ್ಪಗಳಿಂದ ಕುಮಾರನಹಸ್ತಗಳಿಂದ ಪೂಜೆಮಾಡಿಸಿ, ವೇಂಕಟನಾಥನನ್ನು ಹತ್ತಿರಕೂಡಿಸಿಕೊಂಡು ಓಂಕಾರವನ್ನು ತೋರಿಸಿ “ಕುಮಾರ ! ಇದನ್ನು ಓಂ ಎಂದು ಬಾಯಿಯಲ್ಲಿ ಹೇಳುತ್ತಾ ತಿದ್ದು” ಎಂದು ಹೇಳಿದರು. ವೆಂಕಟನಾಥನು ತಂದೆಯ ಆಜ್ಞೆಯಂತೆ ಓಂ ಎಂದುಚ್ಚರಿಸುತ್ತಾ ಪ್ರಣವವನ್ನು ತಿದ್ದಿದನು. ಆನಂತರ ತಂದೆಯನ್ನು ನೋಡಿ “ಅಪ್ಪಾ, ನಿನ್ನನ್ನು ಒಂದು ಮಾತು ಕೇಳಲಾ ?” ಎಂದಾಗ ಆಚಾರರು ಕೌತುಕದಿಂದ “ಅದೇನು ಮಗು ? ನಿನಗೆ ತೋರಿದ್ದನ್ನು ಕೇಳು” ಎಂದರು. ಆಗ ವೇಂಕಟನಾಥನು “ಜನಕ, ಶ್ರೀಹರಿಯ ಗುಣಪೂರ್ಣತ್ವವನ್ನು ಈ ಸಣ್ಣರೇಖೆಯಿಂದ ತಿಳಿಯುವುದೆಂತು ?306 ಎಂದನು. ಅವನ ಮಾತು ಕೇಳಿ ಎಲ್ಲರೂ ಅಚ್ಚರಿಗೊಂಡರು. ಮಗನ ಮಾತಿನಿಂದ ಬೆರಗಾದ ಆಚಾರ್ಯರು ಅದೇಕೆ ಮಗು ಹಾಗೆ ಕೇಳುವೆ ?” ಎಂದರು.
ವೇಂಕಟನಾಥನು “ಈ ಪುಟ್ಟರೇಖೆಯಲ್ಲಿ ಹರಿಯ ಗುಣಪೂರ್ಣತ್ವವನ್ನು ತಿಳಿಯುವುದು ಕಷ್ಟವಲ್ಲವೇ ? ಅಪ್ಪಾ, ಆದರೂ ವಿಚಾರಮಾಡಿದಾಗ ಅದು ಸ್ಪಷ್ಟವಾಗುವುದೆಂದು ನಾನು ಭಾವಿಸಿದ್ದೇನೆ” ಎನಲು ತಿಮ್ಮಣ್ಣಾಚಾರ್ಯರು ಅದನ್ನು ವಿವರಿಸಿ ಹೇಳಬಹುದಾಗಿದ್ದರೂ ಮಗನನ್ನು ಪರೀಕ್ಷಿಸಲೋ ಎಂಬಂತೆ ವೇಂಕಟನಾಥ, ನೀನೇ ಹೇಳಿದೆಯಲ್ಲ, ವಿಚಾರದಿಂದ ಸ್ಪಷ್ಟವಾಗುವುದೆಂದು ! ಮಗು, ನೀನು ಅದನ್ನು ಸ್ಪಷ್ಟಪಡಿಸಬಲ್ಲೆಯಾ ?” ಎಂದರು. ಹತ್ತಿರವಿದ್ದ ಪಂಡಿತರು-ಧಾರ್ಮಿಕರು ಬಾಂಧವರು ಕುಮಾರನು ಏನು ಹೇಳುವನೋ ಎಂಬ ಕೌತುಕದಿಂದ ಕಿವಿ ನೆಟ್ಟಗೆ ಮಾಡಿ ಕುಳಿತರು.
ಆಗ ವೆಂಕಟನಾಥನು “ಪೂಜ್ಯ ತಂದೆಯೇ, ನಾನು ಬಾಲಕ, ಆದರೂ ನಿನ್ನಾಜ್ಞೆಯಂತೆ ನನಗೆ ಸ್ಪುರಿಸಿದ ವಿಚಾರವನ್ನು ಹೇಳುತ್ತೇನೆ. ತಪ್ಪಾಗಿದ್ದರೆ ಕ್ಷಮಿಸು” ಎಂದು ಕೋರಿ ಓಂಕಾರಾರ್ಥವನ್ನು ತನ್ನ ಮುದ್ದಾದ ಮಾತುಗಳಿಂದ ಹೀಗೆ ವಿವರಿಸಿಲಾರಂಭಿಸಿದನು -
“ಅ, ಉ, ಮ, ನಾದ, ಬಿಂದು ಘೋಷ, ಶಾಂತ, ಅತಿಶಾಂತ ಎಂಬ ಎಂಟು ಅಕ್ಷರಗಳನ್ನು ಈ ಓಂಕಾರವು ಅಥವಾ ಪ್ರಣವವು ಒಳಗೊಂಡಿದೆ, ಅಲ್ಲವೇ ಅಪ್ಪಾ” ಮಗನ ಮಾತು ಕೇಳಿ ರೋಮಾಂಚನರಾದ ಆಚಾರರು ಆಹುದು ಮಗು”
ಎಂದರು. ವೆಂಕಟನಾಥ ಮುಂದುವರೆದು ಹೇಳಿದ -
“ವೆಂ, ಓಂಕಾರದಲ್ಲಿರುವ ಈ ಎಂಟು ಅಕ್ಷರಗಳು ಕ್ರಮವಾಗಿ ವಿಶ್ವ, ತೈಜಸ, ಪ್ರಾಜ್ಞ ತುರೀಯ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ಮ ಎಂಬ ಎಂಟು ಭಗವದ್ರೂಪಗಳನ್ನು ನಿರೂಪಿಸುತ್ತವೆ. ಓಂಕಾರವೆಂದರೂ ಪ್ರಣವವೆಂದರೂ ಒಂದೇ,307 ಅಂತೆಯೇ ಇದು ಅಷ್ಟು ಮಹತ್ತ್ವಪೂರ್ಣವಾಗಿದೆ. ಇಂಥ ಓಂಕಾರದ ಅರ್ಥವನ್ನು ಭೂಃ ಭುವಃ ಸ್ವಃ ಎಂಬ ವ್ಯಾಹೃತಿಗಳು ತಿಳಿಸುತ್ತವೆ. ಆ ವ್ಯಾಹೃತಿಯ ಅರ್ಥವನ್ನೇ ಋಗಾದಿವೇದಗಳು ವಿಸ್ತಾರವಾಗಿ ನಿರೂಪಿಸುವುವು, ಋಗಾದಿವೇದಗಳ ಸಮಗ್ರ ಅರ್ಥವನ್ನು ಸಂಕ್ಷೇಪವಾಗಿ ಪುರುಷಸೂಕ್ತವು ಸೂಚಿಸುತ್ತದೆ. ಆದ್ದರಿಂದಲೇ ಈ ಪುರುಷ ಸೂಕ್ತವನ್ನು ಸಕಲವೇದಗಳೂ ಅನುಸರಿಸಿವೆ.
ಸಮಸ್ತವೇದಗಳೂ ಪರಮಮುಖ್ಯವೃತ್ತಿಯಿಂದ ಶ್ರೀಮನ್ನಾರಾಯಣನ ಅನಂತ ಕಲ್ಯಾಣಗುಣಪೂರ್ಣತ್ವ, ದೋಷದೂರತ್ವ, ಜಗಜ್ಜನ್ಮಾದಿಕಾರಣತ್ವ, ಅಚಿಂತ್ಯಾದ್ಭುತಶಕ್ತಿತ್ವ, ಅಪ್ರತಿಹತಮಹಾಮಹಿಮಾತ್ವ, ರಮಾಬ್ರಹ್ಮರುದ್ರೇಂದ್ರಾದ್ಯಖಿಲ ಸುರಸಂದ್ರೋಹಮದತ್ತ, ಸರ್ವೋತ್ತಮತ್ವ, ಪರಬ್ರಹ್ಮ ಸ್ವರೂಪತ್ವ, ಸರ್ವತ್ರ ವ್ಯಾಪತ್ವ ಸಕಲಮುಮುಕ್ಷುಗಳಿಂದಜೇಯನಾಗಿರುವುದು, ಗಮ್ಯನಾಗಿರುವುದು, ಅಖಿಲ ಲೋಕಗುರುತ್ವ, ನಿರವದ್ಯ ಚಾರಿತ್ರಾದಿಗಳನ್ನೂ, ವೇದೈಕವೇದ್ಯತ್ವಾದಿಗಳನ್ನೂ ಸಾರುವುವು, ಇವೆಲ್ಲವೂ ಪರಮಾತ್ಮನ ಅನಂತಕಲ್ಯಾಣಗುಣಗಳನ್ನೇ ಸಮರ್ಥಿಸುತ್ತವೆ. ಆದುದರಿಂದ ಇವೆಲ್ಲಕ್ಕೂ ಮೂಲವಾದ ಪ್ರಣವ ಅಥವಾ ಓಂಕಾರವು ಸಣ್ಣರೇಖೆಯ ಆಕಾರದಲ್ಲಿ ವಿಷ್ಣುವಿನ ಗುಣಪೂರ್ಣತ್ವಸಂಜ್ಞೆಯಾಗಿ ಕಂಗೊಳಿಸುತ್ತಿದೆ ಎಂದು ತಿಳಿಯಬೇಕು. ಸಕಲ ವೇದಾರ್ಥಸಾರವಾದ, ಪೂರ್ಣವಾದ ಪರಬ್ರಹ್ಮ ಸ್ವರೂಪನಾದ ಶ್ರೀಹರಿಯ ಗುಣಪೂರ್ಣತ್ವನ್ನು ಸಾರುವ ಓಂಕಾರವು ಸಕಲಶಾಸ್ತ್ರಗಳಿಗೂ ಮೂಲವಾಗಿರುವುದರಿಂದಲೇ ಜ್ಞಾನಿಗಳಾದ ಪರಮಹಂಸರಿಗೆ ಈ ಪ್ರಣವವೇ ಮುಖ್ಯಜಪವಾಗಿ ವಿಹಿತವಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ನಿರೂಪಿಸಿದನು. ಮೂರುವರ್ಷದ ಬಾಲಕನ ಮುಖದಿಂದ ಹೊರಹೊಮ್ಮಿದ ಸಕಲ ತತ್ವಸಾರಭೂತವಾದ ನಿರೂಪಣೆಯನ್ನಾಲಿಸಿ ನಿಬ್ಬೆರಗಾಗಿ ಎಲ್ಲ ಪಂಡಿತರೂ ಪರಮಾನಂದತುಂದಿಲರಾಗಿ “ಆಹಾ, ಎಂಥ ಜ್ಞಾನ, ಅದೇನು ಪ್ರತಿಭೆ ! ಇವನು ಮಾನವನಲ್ಲ” ಎಂದು ಹೇಳುತ್ತಾ 'ಶ್ರುತಪ್ರೋತವಂ, ದೃಷ್ಟಯದೃಷ್ಟವಂ' ಮಹಾಪಂಡಿತನು ಹೇಳಬಹುದಾದ ತತ್ವಸಾರವನ್ನು ಮೂರುವರ್ಷದ ಬಾಲಕನಿಂದ ಕೇಳಿದ ನಮ್ಮ ಕರ್ಣಗಳು ಧನ್ಯತೆ ಪಡೆದವು. ಇಂಥಾ ಪ್ರಜ್ಞಾವಂತ ಬಾಲಕನನ್ನು ಕಂಡು ನಮ್ಮ ಕಣ್ಣುಗಳು ಸಾರ್ಥಕವಾದವು” ಮುಂತಾಗಿ ಶ್ಲಾಘಿಸಿದರು.
ವೇಂಕಟನಾಥನನ್ನು ಪಂಡಿತರು ಶ್ಲಾಘಿಸಿ ವಿಸ್ಟಾರಿತನೇತ್ರರಾಗಿ ನೋಡುತ್ತಿರುವುದು, ನೆರೆದ ಸ್ತ್ರೀಪುರುಷರ ದೃಷ್ಟಿಗಳೆಲ್ಲ ಕುಮಾರನಲ್ಲಿ ಕೇಂದ್ರೀಕೃತವಾಗಿರುವುದನ್ನು ಕಂಡು ಗೋಪಮ್ಮನು ಆನಂದನಿರ್ಭರಳಾದರೂ ಮಗನಿಗೆಲ್ಲಿ ದೃಷ್ಟಿತಾಕುವುದೋ ಎಂಬ ಭಯದಿಂದ ಮೆಲ್ಲನೆ ವೇಂಕಟನಾಥನನ್ನು ಎತ್ತಿಕೊಂಡು ತಮ್ಮ ವಿಶ್ರಾಂತಿಕೊಠಡಿಗೆ ತೆರಳಿ ಅಲ್ಲಿ ಕುಮಾರಿನಿಗೆ ದೃಷ್ಟಿ ನಿವಾಳಿಸಿದರು. ಇತ್ತ ಸಭೆಯಲ್ಲಿ ವೇಂಕಟನಾಥನ ಪ್ರತಿಭೆಯ ಪ್ರಶಂಸೆ ನಡೆದೇ ಇದ್ದಿತು.
ಒಬ್ಬ ಪಂಡಿತರೆಂದರು “ಈ ಬಾಲಕ ಸಾಮಾನ್ಯನಲ್ಲ. ಆವನೋ ಮಹಾತ್ಮನೇ ಆಗಿರಬೇಕು.” ವೃದ್ಧಪಂಡಿತರು ಅದನ್ನು ಸಮರ್ಥಿಸಿ “ನಿಜ, ಆಚಾರರೇ, ಸಾಮಾನ್ಯ ಬಾಲಕರಿಗೆ ಈ ಜ್ಞಾನ-ಪ್ರತಿಭೆಗಳು ಸಾಧ್ಯವೇ ? ಈತನು ದೇವಾಂಶಸಂಭೂತನೇ ಇರಬೇಕು” ಎಂದರು. ಆಗ ಒಬ್ಬ ಪಂಡಿತರು “ವಿಬುಧರೇ, ನೀವೀಗ ಹೇಳಿದ್ದನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಸಾಧ್ಯವೇ?” ಎಂದು ಪ್ರಶ್ನಿಸಲು ಆ ವೃದ್ಧಪಂಡಿತರು ಅವಶ್ಯವಾಗಿ ಹೇಳಬಲ್ಲೇ ! ಕೇಳಿ, “ಅಶ್ರುತಪ್ರತಿಭಾಯಸ್ಯ ಶ್ರುತಿಸ್ಮೃತ್ಯ ವಿರೋಧಿನೀ | ವಿಸ್ಮತಂ ನರಜಾತಂ ಚ ತಂ ವಿದ್ಯಾತ್ ದೇವಸಮ್” ಎಂದು ಪ್ರಮಾಣವಿದೆ. ವೇದ-ಸ್ಕೃತಿಗಳಿಗೆ ಅವಿರುದ್ಧವಾಗಿ ಈವರಿಗೆ ಕೇಳರಿಯದ ಮಹಾಪ್ರತಿಭೆಯನ್ನು ಯಾರು ಪ್ರಕಟಿಸುವರೋ, ಅಂಥವರು ಮಾನವರಾಗಿ ಜನಿಸಿದ್ದರೂ ಶ್ರೇಷ್ಠದೇವತೆಯೆಂದು ತಿಳಿಯಬೇಕು ಎಂದು ಮೇಲಿನ ಪ್ರಮಾಣವು ಸಾರುವುದರಿಂದ ಪ್ರಾಮಾಣ್ಯವಾದಿಗಳಾದ ನಾವು ಇಂದು ಬಾಲಕ ವೇಂಕಟನಾಥನಲ್ಲಿ ಆಶ್ರುತಪ್ರತಿಭೆಯನ್ನು ಕಂಡಿರುವುದರಿಂದ ಆತ ಜಗತ್ತಿನ ಜನತೆಯನ್ನು ಜ್ಞಾನೋಪದೇಶದಿಂದ ಉದ್ದರಿಸಲು ಅವತರಿಸಿರುವ ದೇವತೆಯೆಂದು ಧೈರವಾಗಿ ಹೇಳಬಹುದು !” ಆಗ ಎಲ್ಲರೂ “ಅಹುದು ಅಹುದು” ಎಂದು ಹೇಳಿ “ಆಚಾರರೇ, ಇಂಥ ಸತ್ಪುತ್ರನನ್ನು ಪಡೆದ ನೀವೇ ಧನ್ಯರು” ಎಂದು ತಿಮ್ಮಣ್ಣಾಚಾರ್ಯರನ್ನು ಶ್ಲಾಘಿಸಿದರು. ಆಚಾರ್ಯರು ಪರಮ ಹರ್ಷಗೊಂಡರು. ಮೈಪುಳಕಿಸಿತು, ಆಗವರಿಗೆ ಶ್ರೀವೇಂಕಟೇಶನು ಸ್ವಪ್ನದಲ್ಲಿ ಹೇಳಿದ್ದ ವಿಚಾರ, ವರಪ್ರದಾನಾದಿಗಳು ಸ್ಮರಣೆಗೆ ಬಂದಿತು. ಶ್ರೀವಿಜಯೀಂದ್ರಗುರುಗಳ ಭವಿಷ್ಯವಾಣಿ ಜ್ಞಾಪಕಕ್ಕೆ ಬಂದಿತು. ಮನದಲ್ಲಿ ಹರಿಗುರುಗಳಿಗೆ ವಂದಿಸಿ ತಮ್ಮ ಪುತ್ರನು ದೀರ್ಘಾಯುಷ್ಯವಂತನಾಗಿ ಬಾಳುವಂತೆ ಅನುಗ್ರಹಿಸಬೇಕೆಂದು ಪಾರ್ಥಿಸಿದರು. ಆವರೆವಿಗೆ ಒಂದು ಪವಾಡದಂತೆ ಜರುಗಿದ ಪ್ರಸಂಗವನ್ನು ಕಂಡು ಮೂಕವಿಸ್ಮಿತರಾಗಿ ಕುಳಿತಿದ್ದ ರಾಮಚಂದ್ರಾಚಾರರು "ಶ್ರೀಗುರುಪಾದರ ಭವಿಷ್ಯ ಸತ್ಯವಾಯಿತು. ಅಚಾರ, ನೀವು ಪರಮಧನ್ಯರು” ಎಂದು ಅಭಿನಂದಿಸಿದರು. ಅನಂತರ "ಗುರುಗಳು ಕಳಿಸಿರುವ ಉಡುಗೊರೆ ಕೊಡಬೇಕು. ಕುಮಾರನನ್ನೂ ನಿಮ್ಮ ಧರ್ಮಪತ್ನಿಯನ್ನೂ ಕರೆಯಿರಿ” ಎಂದರು. ಆಚಾರ್ಯರು ಹಿರಿಯಮಗ ಗುರುರಾಜನನ್ನು ತಾಯಿ ತಮ್ಮಂದಿರನ್ನು ಕರೆತರಲು ಕಳಿಸಿದರು.
ಗುರುರಾಜ ತಾಯಿಯ ಕೊಠಡಿಗೆ ಬಂದ, ಗೋಪಮ್ಮ ವೇಂಕಟನಾಥನನ್ನು ಬಿಗಿದಪ್ಪಿ ಮುದ್ದಿಸಿ ಅವನಿಗೆ ರಜತಪಾತ್ರೆಯಲ್ಲಿದ್ದ ಹಾಲು ಕುಡಿಸುತ್ತಾ ಮಗು ಅಕ್ಷರಾಭ್ಯಾಸಕಾಲದಲ್ಲಿ ಅಷ್ಟೊಂದು ವಿಚಾರ ಹೇಳಿದೆಯಲ್ಲ, ಅದನ್ನು ನಿನಗಾರು ಕಲಿಸಿದರು ?” ಎಂದು ಪ್ರಶ್ನಿಸಿದರು. ವೇಂಕಟನಾಥನು, “ಅಮ್ಮಾ, ಅದನ್ನು ನನಗಾರೂ ಹೇಳಿಕೊಡಲಿಲ್ಲ. ತಂದೆಯವರು ಓಂ ಎಂದು ಇದನ್ನು ತಿದ್ದು ಎಂದು ಹೇಳಿದಾಗ ಅದರಂತೆ ಉಚ್ಚರಿಸುತ್ತಾತಿದ್ದುತ್ತಿರುವಾಗ ನನ್ನ ಶರೀರದಲ್ಲಿ ಆವುದೋ ವಿಚಿತ್ರ ಶಕ್ತಿ ಪ್ರವಹಿಸಿದಂತಾಯಿತು. ಒಂದು ಬಗೆ ಹುಮ್ಮಸ್ಸು, ಉತ್ಸಾಹವುಂಟಾಯಿತು. ಅನೇಕ ವಿಚಾರಗಳು ಸ್ಪುರಿಸಹತ್ತಿದವು. ಹೃದಯಾಂತರಾಳದಿಂದ ಒಂದು ಗಂಭೀರದ್ದನಿಯು ಹೇಳು, ಹೇಳು ಎಂದಂತಾಯಿತು. ನನಗರಿವಿಲ್ಲದಂತೆಯೇ ಹೇಳಲಾರಂಭಿಸಿದೆ. ಅಷ್ಟೇ ನನಗೆ ಗೊತ್ತು !” ಎಂದನು. ಅದನ್ನಾಲಿಸಿ ಅಚ್ಚರಿಗೊಂಡ ಗೋಪಮ್ಮ “ನೀನು ಶ್ರೀನಿವಾಸನು ಅನುಗ್ರಹಿಸಿದ ವರಪುತ್ರನಪ್ಪ, ನೂರುವರ್ಷಬಾಳು ಕಂದ” ಎಂದಾಶೀರ್ವದಿಸಿದರು. ವೇಂಕಟನಾಥ ನಗುತ್ತಾ “ನೂರುವರ್ಷ ಬದುಕಿದರೆ ಸಾಕೇನಮ್ಮ ಎಂದನು. ಅಪ್ರತಿಭಳಾದ ಗೋಪಮ್ಮ “ವೆಂಕಣ್ಣ, ಸುದೀರ್ಘಕಾಲ ಚಿರಂಜೀವಿಯಾಗಿ ಬಾಳಪ್ಪ” ಎನಲು ವೇಂಕಟನಾಥನು “ಹಾಂ ಇದೀಗ ಸರಿ. ನಿನ್ನಿ ಆಶೀರ್ವಾದದ ಬಲವಿದ್ದರೆ ಏನು ಬೇಕಾದರೂ ಸಾಧಿಸಬಹುದಮ್ಮ” ಎಂದನು. ಅಣ್ಣಗುರುರಾಜನು ಅದೆಲ್ಲಮಾತನ್ನೂ ಕೇಳಿ ಆನಂದದಿಂದ ತಮ್ಮನನ್ನು ಆಲಿಂಗಿಸಿ “ವೇಂಕಟನಾಥ, ನೀನು ನಮ್ಮ ಕುಲದೀಪಕನಪ್ಪಾ” ಎನ್ನುತ್ತಾ ಅವನನ್ನು ಎತ್ತಿಕೊಂಡು ತಾಯಿಯೊಡನೆ ತಂದೆಯ ಬಳಿಗೆ ಬಂದು ಹಸೆಮಣೆಯ ಮೇಲೆ ಕೂಡಿಸಿದನು. ಶ್ರೀರಾಮಚಂದ್ರಾಚಾರರು ಉಭಯಗುರುಗಳು ಕಳಿಸಿದ್ದ ಉಡುಗೊರೆಯನ್ನು ಕೊಟ್ಟು ಆಶೀರ್ವದಿಸಿದರು. ತರುವಾಯ ಅನೇಕರು ವಿವಿಧ ಉಡುಗೊರೆಗಳಿನ್ನಿತ್ತರು. ಆ ತರುವಾಯ ಫಲಪೂಜೆಯಾಗಿ ಸರ್ವರಿಗೂ ಫಲ ತಾಂಬೂಲ ಪ್ರದಾನವಾಯಿತು. ಅದಾದಮೇಲೆ ಸುಮಂಗಲಿಯರು ಆರತಿಮಾಡಿದರು. ವಿಪ್ರರು ವೇದಮಂತ್ರಗಳಿಂದ ಆಶೀರ್ವದಿಸಿದರು.
ಅದಾದ ಮೇಲೆ ತಾಯಿ ಮಗ ಮಗಳು ಅಂತರ್ಗಹಕ್ಕೆ ಬಂದಾಗ ವೆಂಕಟಾಂಬಾದೇವಿಯು 'ತಮ್ಮನಿಗೆ ದೃಷ್ಟಿಯಾಗಿದೆ ನಾನು ದೃಷ್ಟಿ ನಿವಾಳಿಸುತ್ತೇನೆ' ಎಂದು ಹೇಳಿ ತೆಂಗಿನಕಡ್ಡಿಗಳನ್ನು ಹಚ್ಚಿತಂದು ಅದು ಉರಿಯುತ್ತಿರುವಾಗ ವೇಂಕಟನಾಥನ ಮುಖ ಸರ್ವಾಂಗಗಳಿಗೆ ಮೂರುಬಾರಿ ಸುತ್ತಿ ಒಂದು ಮೂಲೆಯಲ್ಲಿಟ್ಟಳು. ಅದು ಚಟಚಟ ಶಬ್ದ ಮಾಡುತ್ತಾ ಉರಿದು ಬೂದಿಯಾಯಿತು ! ಆಗ ಎಂಟು ವರ್ಷದ ವೆಂಕಟಾಂಬೆಯು “ಅಮ್ಮಾ ನೋಡಿದೆಯಾ ? ನನ್ನ ಮುದ್ದು ತಮ್ಮನಿಗೆ ಎಷ್ಟು ಜನರ ದೃಷ್ಟಿ ತಾಕಿತ್ತು !” ಎಂದು ರಕ್ಷೆಯನ್ನು ವೇಂಕಟನಾಥನ ಹಣೆ ಗಲ್ಲಗಳಿಗೆ ಹಚ್ಚಿದಳು. ಅಂದು ಆ ಕುಟುಂಬದವರಿಗಾದ ಆನಂದ ಅವರ್ಣನೀಯ.
ಮಧ್ಯಾಹ್ನ ದೇವಪೂಜಾ, ಬ್ರಾಹ್ಮಣ-ಸುವಾಸಿನಿಯರ ಸಂತರ್ಪಣೆ, ತಾಂಬೂಲ ದಕ್ಷಿಣಾಪ್ರದಾನಗಳಾದ ಮೇಲೆ ವೇದವಿದ್ಯಾವಿಶಾರದರಾದ ಭೂಸುರರು ವೇದಮಂತ್ರಗಳನ್ನು ಹೇಳಿ ಬಾಲಕ ವೇಂಕಟನಾಥನಿಗೆ ಆಶೀರ್ವದಿಸಿ ಮಂತ್ರಾಕ್ಷತೆಯನ್ನು ಹಾಕಿದರು. ಮನೆಯವರೆಲ್ಲರೂ ಭೋಜನಮಾಡಿ ತಾಂಬೂಲಚರ್ವಣಮಾಡುತ್ತಿರುವಾಗ ರಾಮಚಂದ್ರಾಚಾರರು ಶ್ರೀವಿಜಯೀಂದ್ರ ಗುರುಗಳು ಅಚಾರರಿಗೆ ಕಳಿಸಿದ್ದ ಶ್ರೀಮಖವನ್ನು ನೀಡಿದರು. ತಿಮ್ಮಣ್ಣಾಚಾರರು ಅದನ್ನು ಶಿರಸಾಧಾರಣಮಾಡಿ ತಮ್ಮ ಮನದಲ್ಲೇ ಓದತೊಡಗಿದರು. ಓದುತ್ತಿರುವಂತೆ ಅವರ ದೇಹ ಕಂಪಿಸಿತು. ಆನಂದದ ಕಣ್ಣೀರು ಹರಿಯಿತು. ಪರಮಾನಂದಭರಿತರಾದರು. ಗೋಪಮ್ಮ, ಗುರುಗಳು ಏನು ಅಪ್ಪಣೆಮಾಡಿದ್ದಾರೆ ? ಎಂದು ಕೇಳಿದಳು. ಆಚಾರರು ಶ್ರೀಮುಖದ ಪ್ರಮುಖ ವಿಚಾರಗಳನ್ನು ಹೇಳದೇ “ಚಿ ವೇಂಕಟನಾಥನಿಗೆ ಆಶೀರ್ವದಿಸಿ ಉಡುಗೊರೆ ಕಳಿಸಿರುವುದಾಗಿಯೂ, ಬಹುದಿನದಿಂದ ಶ್ರೀಮಠಕ್ಕೆ ಬಂದಿಲ್ಲ. ಈ ಸಲ ಶ್ರೀಸುರೇಂದ್ರತೀರ್ಥರ ಮಹಾ ಸಮಾರಾಧನೆಗೆ ಪರಿವಾರಸಹಿತರಾಗಿ ಬರಬೇಕೆಂದು ಅಪ್ಪಣೆಮಾಡಿದ್ದಾರೆ” ಎಂದಷ್ಟು ಮಾತ್ರ ತಿಳಿಸಿದರು. ಗುರುಗಳು ತಮ್ಮ ಕುಟುಂಬದಲ್ಲಿ ಮಾಡುತ್ತಿರುವ ಅನುಗ್ರಹದಿಂದ ಸರ್ವರೂ ಮುದಿಸಿದರು.
ಸಮಾರಂಭವು ಮುಗಿದ ಮೂರುನಾಲ್ಕು ದಿನಗಳಾದ ಮೇಲೆ ಬಂದಿದ್ದ ಬಂಧು ಬಾಂಧವರೆಲ್ಲರೂ ಆಚಾರದಂಪತಿಗಳ ಅನುಮತಿ ಪಡೆದು ಊರಿಗೆ ಪ್ರಯಾಣ ಬೆಳೆಸಿದರು.