|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೨೨. ವೇಂಕಟನಾಥನ ಬಾಲಲೀಲೆಗಳು

ಬಾಲಕ ವೇಂಕಟನಾಥ ಇತರ ಬಾಲಕರಗಿಂತ ಭಿನ್ನವಾಗಿದ್ದ, ಅವನ ಬಾಲಲೀಲೆಗಳೂ ವಿಚಿತ್ರವಾಗಿದ್ದವು. ಅವನ ಆಟ-ಮಾತು-ನಡೆ ಎಲ್ಲವೂ ದೇವರು, ತತ್ವ, ಧರ್ಮ, ನೀತಿಗಳನ್ನು ಎತ್ತಿತೋರುತ್ತಿದ್ದವು. ಇನ್ನೂ ಮೂರುವರ್ಷ ತುಂಬದ ಆ ಬಾಲಕನನ್ನು ಕಂಡು ಜನರು “ಅಬ್ಬಾ, ಇವನೆಂಥ ಅಪೂರ್ವಬಾಲಕ !” ಎಂದು ವಿಸ್ಮಿತರಾಗುತ್ತಿದ್ದರು. ಮಗನ ಈ ವಿಶಿಷ್ಟರೀತಿ ತಂದೆತಾಯಿಗಳಿಗೆ ಅಪಾರ ಹರ್ಷ ನೀಡುತ್ತಿತ್ತು. ಜನಮೆಚ್ಚಿನ ಮುದ್ದು ಕುವರನಿಗೆ ಎಲ್ಲಿ ದೃಷ್ಟಿತಾಕುವುದೋ ಎಂದು ಅವರು ದೃಷ್ಟಿ ನಿವಾಳಿಸಿಹಾಕುವರು, ಇಂತು ಸರ್ವರ ಕಣ್ಮಣಿಯಾಗಿ ಬೆಳೆಯತೊಡಗಿದ ವೆಂಕಟನಾಥ, ಗೋಪಿಕಾಂಬಾದೇವಿ ಮಗನನ್ನು ಒಂದು ಕ್ಷಣವೂ ಬಿಟ್ಟಿರುತ್ತಿರಲಿಲ್ಲ. ವೆಂಕಟನಾಥ ಅವರ ಜೀವನದುಸಿರಾಗಿದ್ದ. ಅವನಲ್ಲಿ ಪಂಚಪ್ರಾಣವನ್ನಿಟ್ಟಿದ್ದ ಗೋಪಮ್ಮ ಅವನನ್ನು ಪ್ರೀತಿಯಿಂದ ಪೋಷಿಸುತ್ತಿದ್ದರು. ವೆಂಕಟನಾಥನೂ ಅಷ್ಟೇ, ತಾಯಿಯಲ್ಲಿ ಅಪಾರ ಪ್ರೀತಿ, ತನ್ನೆಲ್ಲ ಕೆಲಸಗಳನ್ನೂ ಅಮ್ಮನೇ ಮಾಡಬೇಕು, ಇಲ್ಲದಿದ್ದರೆ ಅವನಿಗೆ ಸಮಾಧಾನವಾಗುತ್ತಿರಲಿಲ್ಲ. ಆದ್ದರಿಂದಲೇ ಮಗನನ್ನು ಎಬ್ಬಿಸುವುದರಿಂದಾರಂಭಿಸಿ ರಾತ್ರಿ ಮಲಗಿಸುವವರೆಗೆ ಅವನ ಬೇಕು - ಬೇಡಗಳನ್ನರಿತು ಮಗನಿಗೆ ಹಿತವಾಗುವಂತೆ ಪ್ರೇಮದಿಂದ ನೋಡಿಕೊಳ್ಳುತ್ತಿದ್ದರು. 

ಒಂದು ದಿನ ರಾತ್ರಿ ಎಷ್ಟು ಹೊತ್ತಾದರೂ ವೇಂಕಟನಾಥ ಮಲಗಿ ನಿದ್ರಿಸಲಿಲ್ಲ. ಏನೋ ಹಟಮಾಡುತ್ತಿದ್ದ. ಗೋಪಮ್ಮ ಅವನನ್ನು ರಮಿಸುತ್ತಾ ದೇವರ ಮೇಲಿನ ಜೋಗುಳವನ್ನು ಸುಸ್ಥರವಾಗಿ ಹಾಡುತ್ತಿರಲು ವೆಂಕಟನಾಥ ಕಣ್ಣು ತೆರೆದು ನಗುತ್ತಾ “ಅಮ್ಮಾ” ಎಂದ. ಗೋಪಮ್ಮ ಕೇಳಿದರು. “ಏನು ಮಗು ?” 

ವೇಂಕಟನಾಥ : ಏನುಮಾಡುತ್ತಿದ್ದೀಯಮ್ಮಾ? 

ಗೋಪಮ್ಮ : ಹಾಡುತ್ತಿದ್ದೇನೆ ಕಂದ, 

ವೆಂ : ಯಾರಿಗೆ ಜೋಗುಳ ಹಾಡುತ್ತಿರುವೆಯಮ್ಮಾ?

ಗೋ : ನಾರಾಯಣನಿಗೆ 

ವೆಂ : ಏಕಮ್ಮಾ? 

ಗೋ : ಅವನು ನಿದ್ರಿಸಲೆಂದು ಮಗು.

ವೆಂ : ಅವನೇಕೆ ನಿದ್ರಿಸಬೇಕು ? ಅವನು ನಿದ್ರಿಸಿದರೆ ಜಗತ್ತನ್ನು ಪಾಲಿಸುವವರಾರಮ್ಮ' 

ಗೋ : ದೇವರ ನಿದ್ರೆ ನಮ್ಮಂತಲ್ಲವಪ್ಪ, ಅವನದು ಯೋಗನಿದ್ರೆ ! 

ವೆಂ : ಅವನು ಯೋಗನಿದ್ರೆ ಮಾಡಿದರೆ ನಿನಗೇನು ಲಾಭ ? 

ಗೋ : ವೆಂಕಣ್ಣ ! ಹರಿಯು ಮಲಗಿದರೆ ನಿನಗೂ ನಿದ್ರೆಯನ್ನು ಕರುಣಿಸುತ್ತಾನೆ. ಅದಕ್ಕಾಗಿ ಹಾಡುತ್ತಿರುವೆನಪ್ಪ. ವೆಂ : (ನಗುತ್ತಾ) ಓಹೋ ಹಾಗೋ, ಸರಿ. ಆ ನಾರಾಯಣ ಎಲ್ಲಿದ್ದಾನೆ ? 

ಗೋ : ಅವನು ಕ್ಷೀರಸಮುದ್ರದಲ್ಲಿ ಶೇಷಶಯ್ಕೆಯಲ್ಲಿ ಪವಡಿಸಿದ್ದಾನೆ. 

ವೆಂ : ಕ್ಷೀರಸಮುದ್ರವೆಲ್ಲಿದೆಯಮ್ಮಾ ? 

ಗೋ : ಬಹಳ ದೂರದಲ್ಲಿದೆ ಮಗು. 

ವೆಂ : ಹಾಗಾದರೆ ದೂರದಲ್ಲಿರುವ ಕ್ಷೀರಸಮುದ್ರದಲ್ಲಿ ಪವಡಿಸಿರುವ ಆ ನಾರಾಯಣನಿಗೆ ಇಲ್ಲಿ ನೀನು ಹಾಡುವುದು ಹೇಗೆ ಕೇಳಿಸುತ್ತದೆ ! 

ವೆಂಕಟಕನಾಥನ ವಾದಸರಣಿಯನ್ನು ಕೇಳಿ ಮೂಕವಿಸ್ಮಿತಳಾದ ಗೋಪಮ್ಮ ಏನು ಹೇಳಲೂ ತೋರದೆ ಸುಮ್ಮನೆ ಕುಳಿತಳು. 

ವೆಂ : ಅಮ್ಮಾ, ಏಕೆ ಸುಮ್ಮನಾದೆ ? ಶ್ರೀಹರಿಯು ಇಲ್ಲಿಲ್ಲವೇ ? 

ಗೋ : ಇಲ್ಲಿಯೂ ಇದ್ದಾನಪ್ಪ. 

ವೆಂ : ನಿನ್ನಲ್ಲಿರುವನೇ ? 

ಗೋ : ಇದ್ದಾನೆ ಕಂದ. 

ವೆಂ : ನನ್ನಲ್ಲಿ ? 

ಗೋ : ನಿನ್ನಲ್ಲೂ ಇದ್ದಾನೆ ಕಣೋ. 

ವೆಂ : ಹಾಗಾದರೆ ಅವನೇಕೆ ಇನ್ನೂ ಮಲಗಿಲ್ಲ. ನನಗೂ ನಿದ್ರೆಯನ್ನೇಕೆ ಕೊಟ್ಟಿಲ್ಲ ? 

ಗೋ : (ನಸುಗೋಪದಿಂದ) ವೆಂಕಣ್ಣ ! ನೀನು ಬರಬರುತ್ತಾ ತುಂಬಾ ತುಂಟನಾದೆ. 

ವೆಂ : (ಕಿಲಕಿಲನೆ ನಗುತ್ತಾ) ಆ ನನ್ನ ಗೊಲ್ಲಕೃಷ್ಣನ ಹಾಗೋ ? 

ಗೋ : ಮಗು, ಕೃಷ್ಣನು ಪರಮಾತ್ಮ, ಅವನನ್ನು ಗೊಲ್ಲವೆನ್ನಬಹುದೇನೋ ? 

ವೆಂ : ಅವನು ಪರಮಾತ್ಮನಾದರೂ ನನಗೆ ಮಾತ್ರ ಪ್ರೀತಿಯ ಗೊಲಕೃಷ್ಣನೇ ! ಹಾಗೆ ಕರೆದರೆ ಅವನಿಗೆ ಸಂತೋಷ, ಪ್ರೀತಿ, ಅಮ್ಮಾ, ನನಗೆ ಕೃಷ್ಣನೆಂದರೆ ತುಂಬಾ ಪ್ರೀತಿಕಣಮ್ಮಾ.

ಗೋ : ಅದೇಕೆ ?  

ವೆಂ : ನಿಜವಾಗಿ ಹೇಳಬೇಕೆಂದರೆ ನನಗೆ ನರಸಿಂಹ, ರಾಮ, ಕೃಷ್ಣ, ವೇದವ್ಯಾಸ, ನಾರಾಯಣ ಇವರೆಲ್ಲರಲ್ಲೂ ಪ್ರೇಮವಿದೆ. ಇವರೆಲ್ಲರೂ ಬೇರೆಬೇರೆ ರೂಪದ ಒಂದೇ ಮೂಲರೂಪದ ಅವತಾರವೆಂದೂ ಅಪ್ಪ ಹೇಳುತ್ತಿದ್ದುದರಿಂದ ತಿಳಿದಿದೆ. ಆದರೆ ಅದೇಕೋ ನನಗೆ ಕೃಷ್ಣರೂಪದಲ್ಲೇ ಬಹಳ ಪ್ರೇಮ ! 

ಗೋ : ಅದೇಕೆ ವೇಂಕಟನಾಥ ? 

ವೆಂ : ಅದೇನೋ ನಾನರಿಯೆ. ಕೃಷ್ಣ ಎಂದಕೂಡಲೇ ನನ್ನ ಹೃದಯವರಳುವುದು ! ಅಪಾರ ಆನಂದವಾಗುತ್ತದೆ. ಕೆಲವರು ನನಗೆ ಕೃಷ್ಣನ ಹುಚ್ಚು ಎನ್ನುವರು. ಅನೇಕರು ನನ್ನನ್ನು ಕಂಡು “ಇವನಿಗೆ ಕೃಷ್ಣನೆಂಬ ಗ್ರಹಹಿಡಿದಿದೆ (ಕೃಷ್ಣಗ್ರಹಗೃಹೀತಾತ್ಮಾ) ಎನ್ನುತ್ತಿದ್ದರು. ಬಹುಶಃ ಅದು ನಿಜವಿರಬುದೇನೋ ? 

ಗೋ ಗೋ : (ಅಚ್ಚರಿಯಿಂದ) ಕಂದ, ನಿನ್ನನ್ನು ಅದಾರು ಹಾಗೆನ್ನುತ್ತಿದ್ದರು ? 

ವೆಂ : ಅದೊಂದು ದೊಡ್ಡ ಕಥೆ ! ಹೋಗಲಿಬಿಡು, ಆ ವಿಚಾರವೀಗೇಕೆ ? ಅಮ್ಮಾ, ನೀನೀಗ ಕೃಷ್ಣನ ಮೇಲೊಂದು ಜೋಗುಳವನ್ನು ಹಾಡು. ಅವನು ನನಗೆ ನಿದ್ರೆ ಕೊಡುತ್ತಾನೆ. 

ಗೋ : ತನ್ನ ಮಗನಿಗೆ ಕೃಷ್ಣನ ಮೇಲಿರುವ ಅಪಾರ ಭಕ್ತಿ-ಶ್ರದ್ಧೆಗಳನ್ನು ಕಂಡು ಆಶ್ಚರದಿಂದ ಆನಂದಿಸಿದ ಗೋಪಮ್ಮ ಸದ್ಯ, ಇವನು ಮಲಗಿದರೆ ಸಾಕೆಂದು ಜೋಗುಳ ಹಾಡಹತ್ತಿದರು. 

ಜೋ ಜೋ ಜೋ ಜೋ ಬಾಲಕೃಷ್ಣ | ಜೋಜೋ ಮಲಗೊ ಮುದ್ದು ಕೃಷ್ಣ ||” 

ವೆಂ : ಅಮ್ಮಾ ಹಾಗಲ್ಲ, ಸರಿಯಾಗಿ ಹಾಡು. 

ಗೋ : (ಹತಾಶಳಾಗಿ) ವೆಂಕಟನಾಥ ನೀನು ಬಹಳ ಹಟಮಾರಿಯಾದೆ. ಇನ್ನು ಹೇಗೆ ಹಾಡಬೇಕೋ ಅದನ್ನಾದರೂ 

ಹೇಳು ಮಹರಾಯ ! 

ವೆಂ : ನನಗೆ ನಿದ್ರೆಕೊಡಬೇಕೆಂದಲ್ಲವೇ ನೀನು ಹಾಡುತ್ತಿರುವುದು ? 

ಗೋ : ಅಹುದಪ್ಪ. 

ವೆಂ : ನೋಡಮ್ಮ ನನ್ನ ಮುದ್ದು ಕೃಷ್ಣ ಪರಮಾತ್ಮನಲ್ಲವೇ ? ಅವನು ಜೀವರಲ್ಲಿ ಮೂರು ರೂಪದಿಂದಿದ್ದು ಮೂರುಕಾರ ಮಾಡುತ್ತಾನೆಂದು ಶಾಸ್ತ್ರದಲ್ಲಿ ಹೇಳಿದೆ ಎಂದು ಅಪ್ಪ ಹೇಳುತ್ತಿರಲಿಲ್ಲವೇ ? 

ಗೋ : (ಕುತೂಹಲದಿಂದ) ನಿನ್ನ ಮಾತೇ ನನಗರ್ಥವಾಗುತ್ತಿಲ್ಲ. ಅವರು ಏನು ಹೇಳುತ್ತಿದ್ದರು ? 

ವೆಂ : ಕೃಷ್ಣಪರಮಾತ್ಮನು ಜೀವರಲ್ಲಿ ವಿಶ್ವ, ತೈಜಸ, ಪ್ರಾಜ್ಞಎಂಬ ಮೂರುನಾಮಗಳಿಂದ ಜಾಗೃತ್‌, ಸ್ವಪ್ನ, ಸುಷುಪ್ತಿ ಎಂಬ ಮೂರು ಕಾರಪ್ರವರ್ತಕನಾಗಿರುತ್ತಾನೆಂದು ಅಪ್ಪ ಹೇಳಿದ್ದು ಮರೆತುಬಿಟ್ಟೆಯಾ ? 

ಗೋ : ನನಗೆ ಜ್ಞಾಪಕವಿಲ್ಲವಪ್ಪಾ, ಅದಕ್ಕೂ ನಿನ್ನೀ ಮಾತಿಗೂ ಏನು ಸಂಬಂಧ ? 

ವೆಂ : ಕೇಳಮ್ಮ, ಕೃಷ್ಣ ವಿಶ್ವನಾಮಕನಾಗಿ ಜೀವರ ಬಲಗಣ್ಣಿನಲ್ಲಿದ್ದು ಎಚ್ಚರ ನೀಡುತ್ತಾನೆ. ಕಂಠದಲ್ಲಿ ತೈಜಸನಾಮದಿಂದಿದ್ದು ಜೀವರನ್ನು ಸ್ವಪ್ನಾವಸ್ಥೆಗೆ ತರುತ್ತಾನೆ. ಹಾಗೆಯೇ ಪ್ರಾಜ್ಞನಾಮದಿಂದ ಹೃದಯದಲ್ಲಿದ್ದು ಸುಷುಪ್ತಿ ಅಂದೆ ನಿದ್ರೆಯನ್ನು ಕರುಣಿಸುತ್ತಾನೆ. ನಾನು ನಿದ್ರೆಮಾಡಬೇಕೆಂದಲ್ಲವೇ ನೀನು ಇಚ್ಛಿಸುವದು.

ಗೋ : (ಮಗನ ತಾತ್ವಿಕ ಪ್ರಜ್ಞೆಯನ್ನು ಕಂಡು ಸೋಜಿಗಗೊಂಡು) ಅಹುದಪ್ಪ, 

ವೆಂ : ಈಗ ಹೇಳು ನಿದ್ರೆಗೆ ಕಾರಣರಾರು ? 

ಗೋ : ನೀನೇ ಹೇಳಿದೆಯಲ್ಲೋ ಪ್ರಾಜ್ಞನಾಮಕನೆಂದು.

ವೆಂ : ಹೌದಾ ? ಹಾಗಾದರೆ ನನಗೆ ನಿದ್ರೆಕೊಡೆಂದು ಯಾವನಾಮದಿಂದ ಕೃಷ್ಣನನ್ನು ಸಂಭೋದಿಸಿ ಹಾಡಬೇಕು, ಹೇಳು. ಗೋ : (ಮುಗುಳುನಕ್ಕು) ಓಹೋ, ಪ್ರಾಜ್ಞನಾಮಕ ಕೃಷ್ಣನಿಗೆ ಜೋಗುಳ ಹಾಡಬೇಕೆಂದೂ ನಿನ್ನ ಆಸೆ ? 

ವೆಂ : (ಮಂದಹಾಸಬೀರಿ) ಅಹುದಮ್ಮ, ಮಾಡುವ ಕಾರ್ಯ ಸರಿಯಾಗಿ ಅರಿತು ಮಾಡಿದರಲ್ಲವೇ ಫಲದೊರಕುವುದು! ಗೋ : (ತಾನೆ ಸೋತವಳಂತೆ) ಸರಿಯಪ್ಪ ನೀನು ಹೇಳಿದಂತೆಯೇ ಹಾಡುತ್ತೇನೆ. 

ವೆಂ : ಹೂ, ಹಾಡುಮತ್ತೆ. 

ಗೋಪಿಕಾಂಬಾದೇವಿ ನಕ್ಕು ಸುಸ್ವರವಾಗಿ ಹಾಡಿದರು - 

'ಪ್ರಾಜ್ಞನಾಮಕದೇವ ! ನನ್ನು ಸುಕುಮಾರನಿಗೆ 

ಸರ್ವಜ್ಞ! ನಿದ್ರೆಯನ್ನು ಕರುಣಿಸೋ ಕೃಷ್ಣಾ ಜೋಜೋ ||” 

ತಾಯಿಯು ಮಧುರ ಧ್ವನಿಯಿಂದ ಹಾಡುತ್ತಿರಲು ವೇಂಕಟನಾಥನು ತಾಯಿಯತ್ತ ನಗೆಬೀರಿ ಕಣ್ಣುಮುಚ್ಚಿ ಕೂಡಲೇ ನಿದ್ರೆಹೋದನು ! ಗೋಪಮ್ಮ ಪುತ್ರನ ಈ ದೈವಭಕ್ತಿ, ನಿಷ್ಠೆ, ಪ್ರಮೇಯಜ್ಞಾನಗಳನ್ನು ಕಂಡು ಹಿಗ್ಗಿದಳು. ವೇಂಕಟನಾಥನು ಇಂತಹ ಸರಸ-ಸುಂದರಪ್ರಸಂಗ-ಸಲ್ಲಾಪಗಳಿಂದ ತಾಯಿಯನ್ನು ಸಿಟ್ಟಿಗೇಳಿಸುವುದು, ಪ್ರೀತಿಸುವುದು, ಸಮಾಧಾನಪಡಿಸುವುದು, ವಿಸ್ಮಯಗೊಳಿಸುವುದು-ಹೀಗೆ ತನ್ನ ಲೀಲೆಗಳಿಂದ ಮಾತೆಯ ವಿಶೇಷಮಮತೆಗೆ ಪಾತ್ರನಾಗಿ ಬೆಳೆಯಹತ್ತಿದನು. 

ಮತ್ತೊಂದು ದಿನ ವೇಂಕಟನಾಥನು ಸಮವಯಸ್ಕರೊಡನೆ ಮನೆಯ ಅಂಗಳದಲ್ಲಿ ಕ್ರೀಡಿಸುತ್ತಿದ್ದಾನೆ. ಬಟ್ಟೆ, ಹುಲ್ಲು, ಬಣ್ಣಗಳಿಂದ ತಯಾರಿಸಿದ ಆಟದ ಹಾವಿನ ಮೇಲೆ ತಕತಕನೆ ಕುಣಿಯುತ್ತಿದ್ದಾನೆ. ಅವನ ಗೆಳೆಯರು ಜಾಗಟೆ-ಚಯ್ಯಾಳಿಗಳನ್ನು ಬಾರಿಸುತ್ತಿದ್ದಾರೆ. ಈ ಗದ್ದಲವನ್ನು ಕೇಳಿ ಮನೆಗೆಲಸದಲ್ಲಿ ಮಗ್ನಳಾಗಿದ್ದ ಗೋಪಮ್ಮ ಹೊರಬಂದು “ವೆಂಕಣ್ಣ, ಇದೇನಪ್ಪ ನಿನ್ನ ಗಲಾಟೆ ?” ಎಂದರು. ಅವರನ್ನು ಕಂಡ ಹುಡುಗರು ಓಡಿಹೋದರು. ವೇಂಕಟನಾಥ ಕುಣಿಯುತ್ತಲೇ ಇದ್ದ. 

ಗೋಪಮ್ಮ ಮಗನಕೈ ಹಿಡಿದು “ಮಗು, ಹೀಗೇಕೆ ಕುಣಿಯುತ್ತಿದ್ದಿಯೇ ?” ಎನಲು ಕಣ್ಣು ತೆರೆದು ತಾಯಿಯನ್ನು ಕಂಡು ವೆಂಕಟನಾಥನು “ಓಹ್, ಕಾಳಿಂಗಮರ್ದನವನ್ನು ಅಭ್ಯಾಸಮಾಡುತ್ತಿರುವಾಗ ನನ್ನೇಕೆ ತಡೆದೆಯಮ್ಮ ? ಎಂದನು. ಆಟದ ಹಾವನ್ನು ನೋಡಿ ನಕ್ಕು “ಕಾಳಿಂಗಮರ್ದನ ಮಾಡಲು ನೀನೇನು ಕೃಷ್ಣನೇನೋ ? ಎಂದರು. 

ವೆಂ : (ನಗುತ್ತಾ) ನಿಜ, ನಾನೂ ಕೃಷ್ಣನ ಹಾಗೆ ಕಾಳಿಂಗಮರ್ದನ ಮಾಡುತ್ತಿದ್ದೇನೆ. 

ಗೋ : (ಗಲ್ಲಬಡಿದುಕೊಂಡು) ಛೇ ಹಾಗನ್ನಬಾರದಪ್ಪ. 

ವೆಂ : ಅದೇಕಮ್ಮಾ ? 

ಗೋ : ಕೃಷ್ಣ ದೇವರೆಂದು ಅಂದು ನೀನೇ ಹೇಳಿ ಈಗ ನಾನೂ ಕೃಷ್ಣ ಎನ್ನುವುದು ತಪ್ಪಲ್ಲವೇ ಮಗು ? 

ವೆಂ : ನಾನು ಹೇಳಿದ್ದೇ ನಿನಗರ್ಥವಾಗಲಿಲ್ಲ. ನಾನೇ ಕೃಷ್ಣ-ದೇವರು ಎನ್ನಲು ನಾನೇನು ಮಾಯಾವಾದಿಯೇ ?

ಗೋ : ಸುಳ್ಳಾಡಬೇಡವೋ, ಈಗ ತಾನೇ ಹಾಗಂದೆಯಲ್ಲೋ !

ವೆಂ : (ನಕ್ಕು) ಅಯ್ಯೋ ಅಮ್ಮಾ, ಹುಚ್ಚಮ್ಮಾ ! “ನಾನೂ ಕೃಷ್ಣನಂತೆ ಕಾಳಿಂಗಮರ್ದನ ಮಾಡುತ್ತೇನೆ” ಎಂದಲ್ಲವೇ ನಾನು ಹೇಳಿದ್ದು ? 

ಗೋ : ಹಾಗಂದರೂ ನಾನೂ ದೇವರೂ ಒಂದೇ ಎಂಬ ಭಾವನೆ ಬರುವುದಿಲ್ಲವೇ ? 

ವೆಂ : ಊಹೂಂ, ನಾನೇ ಕೃಷ್ಣ ಎನ್ನುವುದಕ್ಕೂ, ನಾನೂ ಕೃಷ್ಣನ ಹಾಗೆ ಎನ್ನುವುದಕ್ಕೂ ವ್ಯತ್ಯಾಸವಿಲ್ಲವೇನಮ್ಮ ? 

ಗೋ : ಅದು ಹೇಗೆ ಮಗು ? 

ವೆಂ : ನಾನೇ ಕೃಷ್ಣಎಂದರೆ (ಅಹಂಬ್ರಹ್ಮಾಸ್ಮಿ) ನಾನೇ ದೇವರು ಎಂದರ್ಥ, ಅದು ತಪ್ಪ, ನಾವೆಂದಿಗೂ ದೇವರಾಗುವುದಿಲ್ಲ, ನಾವೆಲ್ಲರೂ ಅವನ ದಾಸರು, (ದಾಸೋಹಂ) ಎಂದರೆ ತಪ್ಪಲ್ಲ, ನಾನು 'ಕೃಷ್ಣನಂತೆ' ಎಂದನೇ ವಿನಃ ಅವನೇ ನಾನೆಂದು ಹೇಳಲಿಲ್ಲ. ಕೆಲವಂಶದಲ್ಲಿ ಜೀವರೂ ಅವನಿಗೆ ಸದೃಶರು, ಕೃಷ್ಣ ಬಿಂಬ ನಾವು ಪ್ರತಿಬಿಂಬ-ಇದು ಶಾಸ್ತ್ರಸಮ್ಮತ ವಿಷಯವೆಂದು ಅಪ್ಪ ಹೇಳಿದ್ದರಲ್ಲವೇ ? ಕೃಷ್ಣನಂತೆ ಎಂದರೆ ತಪ್ಪಾಗುವುದಿಲ್ಲ, ಶ್ರೀಕೃಷ್ಣಪರಮಾತ್ಮ ಭಕ್ತಪ್ರಿಯ, ತನ್ನ ಭಕ್ತರು, ದಾಸರು ತನ್ನಂತೆ ನಟಿಸಿ ಆಡುವುದು ಅವನಿಗೆ ತುಂಬಾ ಇಷ್ಟವಂತೆ ! ಆದ್ದರಿಂದಲೇ ನಾನೂ ಅವನಂತೆ ಕಾಳಿಂಗಮರ್ದನ ಮಾಡುತ್ತಿದ್ದೆ. ಇದು ಹೇಗೆ ತಪ್ಪಾಗುವುದು ? 

ಗೋ : (ನಸುನಕ್ಕು) ಅದು ಸರಿ, ಕೃಷ್ಣ ಏಕೆ ಕಾಳಿಂಗಮರ್ದನ ಮಾಡಿದ ನಿನಗೆ ಗೊತ್ತೆ ? 

ವೆಂ : ಗೊತ್ತಮ್ಮ, ನೀನೇ ಅನೇಕ ಸಲ ಆ ಕಥೆಯನ್ನು ಹೇಳಿದ್ದೀಯೇ ! ಆದರೂ ನಿನ್ನ ಬಾಯಿಂದ ಮತ್ತೊಮ್ಮೆ ಕೇಳಲು ಆಸೆಯಾಗುತ್ತಿದೆ. ಹೇಳಮ್ಮ. 

ಗೋ : ಗೋವು-ಗೋಪಾಲರಲ್ಲಿ ಕೃಷ್ಣನಿಗೆ ತುಂಬಾ ಪ್ರೇಮ, ಅವರ ಸಂರಕ್ಷಣೆಯೇ ಅವನ ಗುರಿ ! ಅಂತೆಯೇ ಅವನಿಗೆ ಗೋಪಾಲ ಎಂದು ಹೆಸರು. ಒಮ್ಮೆ ಯಮುನೆಯ ಮಡುವಿನಲ್ಲಿ ಕಾಳಿಯ ಎಂಬ ಕ್ರೂರಸರ್ಪರಾಜ ಸೇರಿಕ್ಕೊಂಡು ತಾನು ಬಲಶಾಲಿ, ಸಮರ್ಥ, ಸ್ವತಂತ್ರ, ತನಗೆ ಸಮರಾರಿಲ್ಲವೆಂಬ ಗರ್ವದಿಂದ ಯಮುನೆಯಲ್ಲಿ ವಿಷವನ್ನು ಕಾರಿ ಜಲವನ್ನು ವಿಷಮಯಮಾಡಿದ. ಅದು ತಿಳಿಯದೆ ಗೋವುಗಳು - ಗೊಲ್ಲರು ನೀರು ಕುಡಿದು ಸಂಕಟಪಡುತ್ತಾ ವಿಷಬಾಧೆಯಿಂದ ಮರಣಾಸನ್ನರಾದರು. ಇದರಿಂದ ಕೃಷ್ಣನಿಗೆ ಬಹಳ ಕೋಪವುಂಟಾಯಿತು. ಕಾಳಿಂಗನಿಗೆ ಬುದ್ದಿ ಕಲಿಸಲು ಕೃಷ್ಣನು ಯಮುನೆಯ ಮಡುವಿಗೆ ಧುಮುಕಿ ಕಾಳಿಂಗನನ್ನು ಮರ್ದಿಸಿ “ಎಲವೋ ಗರ್ವಿಷ್ಠನಾದ ಕಾಳಿಯ ! ಹದಿನಾಲ್ಕು ಲೋಕಗಳಲ್ಲಿ ನಾನೊಬ್ಬನೇ ಸರ್ವೋತ್ತಮ, ಸ್ವತಂತ್ರ, ಅಚಿಂತ್ಯಾದ್ಭುತಶಕ್ತ ! ನೀನು ಅಲ್ಪಶಕ್ತ, ಅಸ್ವತಂತ್ರನನ್ನ ಪ್ರೀತಿಯ ಗೋವುಗಳಿಗೆ ಸಂಕಟವನ್ನು ತಂದಿತ್ತ ನಿನ್ನನ್ನು ಶಿಕ್ಷಿಸಿದ್ದೇನೆ. ಇನ್ನಾದರೂ ವಿವೇಕದಿಂದ ವರ್ತಿಸಿ, ನನಗೆ ಶರಣಾಗು” ಎಂದು ಅವನಿಗೆ ಬುದ್ಧಿಹೇಳಿ, ತನ್ನ ಅಮೃತಮಯ ದೃಷ್ಟಿಯಿಂದ ಗೋ-ಗೋಪಾಲರನ್ನೀಕ್ಷಿಸಿ ಉಜ್ಜಿವನಗೊಳಿಸಿದನು. ಇದೇ ಕಾಳಿಂಗಮರ್ದನ, ಅದಕ್ಕೂ ನಿನ್ನ ಕಾಳಿಂಗಮರ್ದನ ಕ್ರೀಡೆಗೂ ಏನು ಸಂಬಂಧ ? 

ವೆಂ : ಅಮ್ಮಾ, ಹಿಂದೆ ಒಬ್ಬ ಕಾಳಿಯನಿದ್ದ, ಈಗ ಅನೇಕ ಕಾಳಿಯರಾಗಿದ್ದಾರೆ. ಹಿಂದೆ ಕಾಳಿಯನ್ನು ನಾನೇ ಬಲಶಾಲಿ, ಸ್ವತಂತ್ರನೆಂದು ಗೋವುಗಳು ಗೋಪಾಲಕರು ವಿಷಜಲಪ್ರಾಶನ ಮಾಡಿ ಸಂಕಟಪಡುವಂತೆ ಮಾಡಿದ್ದ, ಅಲ್ಲವೇ ? 

ಗೋ : ಅಹುದು. 

ವೆಂ : ಈಗ ಮಾಯಾವಾದಿಗಳೆಂಬ ಕಾಳಿಂಗರು ಬಲಿತು ನಾವೇ ದೇವರು, ನನಗೂ ಅವನಿಗೂ ಭೇದವಿಲ್ಲ ಎಂಬ, ಅವೈದಿಕ ವಿಷತುಲ್ಯಕುತತ್ವಗಳನ್ನು ಸಾರುತ್ತಾ ಕೃಷ್ಣಪ್ರಿಯರಾದ, ಗೋವುಗಳಂತೆ ಸಾತ್ವಿಕರಾದ ಸುಜೀವಿಗಳು ಸಂಸಾರಚಕ್ರವೆಂಬ ಯಮುನೆಯ ಮಡುವಿನಲ್ಲಿ ಭದ್ರವಾಗಿ ಸಿಲುಕಿ, ಜೀವಬ್ರಕ್ಯರೂಪ ವಿಷಪಾನ ಮಾಡಿ ಶಾಶ್ವತ ನರಕರೂಪ ಸಂಕಟಕ್ಕೆ ಗುರಿಯಾಗುವಂತೆ ಮಾಡುತ್ತಿದ್ದಾರೆ. ಅಂಥಾ ಮಾಯಾವಾದಿ ಕಾಳಿಂಗರನ್ನು ಎದುರಿಸಿ ಪರಮಾತ್ಮನೊಬ್ಬನೇ ಸ್ವತಂತ್ರ, ಜಗಜ್ಜನ್ಮಾದಿಕಾರಣ, ಸರ್ವಸಮರ್ಥ ಶಾಶ್ವತ ಸುಖಪ್ರದ. ನಾವೆಲ್ಲರೂ (ಜೀವರು) ಅವನ ದಾಸರು. ಅವನಿಗೂ ನಮಗೂ ಆತ್ಯಂತಿಕ ಭೇದವಿದೆ. ಅವನ ಪ್ರಸಾದದಿಂದಲೇ ಎಲ್ಲ ಜೀವರೂ ಮುಕ್ತರಾಗಿ ಶಾಶ್ವತಸುಖಭಾಗಿಗಳಾಗುವರು-ಎಂಬ ಸತ್ತತ್ವವನ್ನು ಮನದಟ್ಟು ಮಾಡಿಕೊಟ್ಟು ಕೃಷ್ಣಪ್ರಿಯರಾದ ಸಾಧು-ಸಜ್ಜನರನ್ನು ಜೀವಬ್ರಹ್ಮಕ್ಯ ವಿಷಬಾಧೆಯಿಂದ ಪಾರುಮಾಡಿ ಭಗವತ ಪಾಪಾತ್ರರಾಗುವಂತೆ ಮಾಡಲು ಈಗಿನಿಂದ ನಾನು ಆ ಕೃಷ್ಣನ ಲೀಲೆಯನ್ನು ಅಭ್ಯಾಸಮಾಡುತ್ತಿದ್ದೇನಮ್ಮಾ ! ಇಷ್ಟೇ ಅಲ್ಲ, ಈಗೇನೋ ನಾನೇ ದೇವರು ಎಂದು ಬೋಧಿಸುವ ಕಾಳಿಯರಿದ್ದಾರೆ. ಮುಂದೆ ಶತ ಶತಮಾನಗಳುರುಳಿದಮೆಲೆ ಇವರನ್ನೂ ಮೀರಿಸದ, ನಾಸ್ತಿಕರು, ಭೌತಿಕ ವಿಜ್ಞಾನ ಬಲದಿಂದ ಮದಿಸಿದ ಮಾನವರು ದೇವರೇ ಇಲ್ಲ, ಅತೀಂದ್ರಯ ವಸ್ತು. ಧರ್ಮಾದಿಗಳೆಲ್ಲ ಸುಳ್ಳು, ಮಾನವನೊಬ್ಬನೇ ಸರ್ವಸಮರ್ಥ ಎಂದು ವಾದಿಸುತ್ತಾ ದೇವರ ಅಸ್ತಿತ್ವವನ್ನೇ ಅಲ್ಲಗಳೆಯುವ ಸಾವಿರಾರುಜನ ಕಾಳಿಯರು ಹುಟ್ಟಿ ನಮ್ಮ ಭಾರತ ವರ್ಷದ ಸತ್ಪರಂಪರೆಗೇ ಧಕ್ಕೆ ತರುವರಮ್ಮಾ ! ಅವರ ಸವಾಲನ್ನು ಎದುರಿಸಿ ನಿಮ್ಮಿ ಭೌತಿಕವಿಜ್ಞಾನದ ಶಕ್ತಿ ಅಪೂರ್ಣ, ಪಾರತ್ರಿಕ-ಆತ್ಮವಿಜ್ಞಾನವೊಂದೇ ಪರಿಪೂರ್ಣ ಎಂಬುದನ್ನು ತೋರಿಸಿಕೊಟ್ಟು ಆ ನಾಸ್ತಿಕ-ವಿಜ್ಞಾನಿ ಕಾಳಿಯರಿಂದ ನಮ್ಮ ಭಾರತವನ್ನು ನಮ್ಮ ಸತ್ತತ್ವಗಳು, ಧರ್ಮ, ನಂಬಿಕೆಗಳನ್ನು ಎತ್ತಿಹಿಡಿದು ಕಾಪಾಡಬೇಕಾಗಿದೆಯಮ್ಮಾ ! ಅದಕ್ಕಾಗಿಯೇ ಅಭ್ಯಾಸಮಾಡುತ್ತಿದ್ದೇನೆ ! 

ಗೋಪಮ್ಮ ಮಗನ ಅದ್ಭುತ ವಿಚಾರಶಕ್ತಿ ವಾದಕ್ರಮಗಳನ್ನು ಕೇಳಿ ಬಹಳ ಸೋಜಿಗಗೊಂಡು “ವೇಂಕಟನಾಥ ! ಆ ಕಾರಮಾಡಲು ನಿನಗೆ ಶಕ್ತಿಯಿದೆಯೇ ? ಇವೆಲ್ಲಾ ನಿನಗಾರು ಹೇಳಿಕೊಟ್ಟರು ?” ಎಂದು ಪ್ರಶ್ನಿಸಲು, ವೇಂಕಟನಾಥನು ನಗುತ್ತಾ “ಇದೆಲ್ಲವೂ ನಮ್ಮ ಕಾಳಿಂಗಮರ್ದನ ಕೃಷ್ಣನ ಪ್ರಭಾವ-ಅನುಗ್ರಹವಮ್ಮ ! ಇವೆಲ್ಲವನ್ನೂ ಅವನೇ ನನಗೆ ಪ್ರೇರಿಸುತ್ತಿದ್ದಾನೆ - ಯಾರೂ ಹೇಳಿಕೊಟ್ಟಿಲ್ಲ !” ಎಂದು ಹೇಳಿದನು. 

ಗೋಪಮ್ಮ ಮಗನ ಮಾತು ಕೇಳಿ ಅಚ್ಚರಿಗೊಂಡಳು. ಆನಂದಪರವಶಳಾಗಿ “ಇವನು ಸಾಮಾನ್ಯ ಬಾಲಕನಲ್ಲ ! ಶ್ರೀವೆಂಕಟೇಶನು ಅಪ್ಪಣೆಕೊಡಿಸಿದಂತೆ ಲೋಕಕಲ್ಯಾಣಕ್ಕಾಗಿ ಅವತರಿಸಿದ ದೇವಾಂಶಸಂಭೂತನಾದ ಶ್ರೀಹರಿಯ ಭಕ್ತ” ಎಂದು ಮನದಲ್ಲೇ ಅಂದುಕೊಂಡು “ಸರಿಯಪ್ಪ, ವೇಂಕಟನಾಥ” ಎಂದಿಷ್ಟೇ ಹೇಳಿ ಮನೆಗೆಲಸದತ್ತ ಗಮನಹರಿಸಿದಳು. ಹೀಗೆ ನಮ್ಮ ಬಾಲಕ ವೇಂಕಟನಾಥನು ಅದ್ಭುತ ಬುದ್ಧಿಶಕ್ತಿ, ಪ್ರತಿಭೆ, ಸಾತ್ವಿಕ ಲೀಲೆಗಳಿಂದ ಸರ್ವರನ್ನೂ ಆನಂದಪಡಿಸುತ್ತಾ ಬೆಳೆಯಹತ್ತಿದನು.