|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೨೧. ಜಾತಕರ್ಮ-ನಾಮಕರಣ

ತಿಮ್ಮಣ್ಣಾಚಾರ್ಯರಿಗೆ ಪುತ್ರೋತ್ಸವವಾದ ವಿಚಾರ ತಿಳಿದು ಮಾವ-ಬಂಧುಮಿತ್ರರು ನಾಮಕರಣಕ್ಕಾಗಿ ಬಂದರು. ಶ್ರೀವಿಜಯೀಂದ್ರತೀರ್ಥರು ಪುತ್ರೋತ್ಸವ ವಿಚಾರವರಿತು ಶ್ರೀಸುಧೀಂದ್ರರ ಸೋದರಬಂಧುಗಳಾದ ಅಣ್ಣಯ್ಯಾಚಾರರನ್ನು ಫಲಮಂತ್ರಾಕ್ಷತೆಯೊಡನೆ ಕಳಿಸಿದ್ದರು ! ತಳಿರುತೋರಣಗಳಿಂದಲಂಕೃತವಾದ ಆಚಾರ್ಯರಮನೆಯಲ್ಲಿ ಮಂಗಳವಾದ್ಯವಾಗುತ್ತಿತ್ತು. ಪುರಪ್ರಮುಖರು ನೂರಾರು ಜನ ಸ್ತ್ರೀಪುರುಷರು ಆಗಮಿಸಿದ್ದರು. 

ಮಗನ ಜಾತಕರ್ಮ ನಾಮಕರಣಾಂಗವಾಗಿ ಆಚಾರರು ಪುಣ್ಯಾಹ, ನಾಂದಿ, ನವಗ್ರಹಪೂಜಾ, ಅಗ್ನಿಮುಖಾದಿ ಅಂಗೋಪಾಂಗಕರ್ಮಗಳನ್ನು ಮಾಡಿಕೊಂಡು ಜಾತಕರ್ಮದಲ್ಲಿ ಧಾತಾ ದಧಾತು ನೋ” ಎಂಬ ಎಂಟು ಮಂತ್ರಗಳಿಂದ ಜಾತಕರ್ಮ ಹೋಮವನ್ನಾಚರಿಸಿ, ಪ್ರಕೃತಕರ್ಮಸಮೃದ್ಧಿಗಾಗಿ ಚಿತ್ತಂ ಚ ಸ್ವಾಹಾ ಚಿತ್ರಾಯೇದಂ ನ ಮಮ” ಮುಂತಾಗಿ ಐವತ್ತೆಂಟು ಹವಿಸ್ಸುಗಳನ್ನು ಹೋಮಮಾಡಿ ಉಪಸಂಹಾರಮಾಡಿದರು. ಯಜ್ಞಕುಂಡದಲ್ಲಿ ಸುತ್ತಬಳಸಿ ಜ್ವಾಲಾಕರಗಳಿಂದ ಅಗ್ನಿ ಪ್ರಜ್ವಲಿಸಿತು. ಅದು “ಜಗತ್ತಿನಲ್ಲಿ ಸನ್ಯಾಸಧರ್ಮಗಳಲ್ಲಿ ಈ ಶಿಶುವಿಗೆ ಸಮರಾದವರನ್ನು ನಾನು ಕಂಡಿಲ್ಲ” ಎಂದು ಜ್ವಾಲಾಕರಗಳ ಚಾಲನೆಯಿಂದ ಸೂಚಿಸುವಂತಿತ್ತು. ಆನಂತರ ತಿಮ್ಮಣ್ಣಾಚಾರರು “ಅಂಗಾದಂಗಾತ್ ಸಂಭವಸಿ ಹೃದಯಾದ್ಧದಯಾದಧಿ ಆತ್ಮಾ ವೈ ಪುತ್ರನಾಮಸಿ | ಸಂಜೀವ ಶರದಶವತ್ತು” ಎಂಬ ಮಂತ್ರದಿಂದ ಬಂಗಾರದ ಉಂಗುರವನ್ನು ಮಧುವಿನಲ್ಲಿ ಅದ್ದಿ ಮಗುವಿನ ನಾಲಿಗೆಗೆ ಆಸ್ವಾದನಮಾಡಿಸಿ ಜಾತಕ ಕರ್ಮಮಾಡಿ ಅದಕ್ಕೆ ಸಂಬಂಧಿಸಿದ ನವವಿಧಧಾನ್ಯಗಳನ್ನು ಭೂಸುರರಿಗೆ ಯಥೇಚ್ಚವಾಗಿ ದಾನಮಾಡಿದರು. ಆಗ ಬಾಂಧವರು ಮಾತಾಪಿತೃ-ಶಿಶುಗಳಿಗೆ ಉಡುಗೊರೆ ನೀಡಿದರು. ಸುಮಂಗಲಿಯರು ಆರತಿ ಮಾಡುವಾಗ "ಪಾಪ್ತಾ ಅನಂತರಾಯಾಯ ಶತಮಾನಂಭವತಿ, ಸಮಂಗಲೀಯಂ” ಮುಂತಾದ ವೇದಮಂತ್ರಗಳಿಂದ ವಿದ್ವಜ್ಜನರು ಆಶೀರ್ವದಿಸಿದರು. ಆನಂತರ ತಿಮ್ಮಜ್ಞಾಚಾರರು ಶ್ರೀವೆಂಕಟೇಶನ ವರಪ್ರಸಾದದಿಂದ ಜನಿಸಿದ ಪುತ್ರನಿಗೆ “ವೇಂಕಟನಾಥ” ಎಂದು ನಾಮಕರಣಮಾಡಿದರು. ತಮ್ಮ ಕುಮಾರನು ಕೇವಲ ದ್ವಿಜಮಂಡಲಿಯಿಂದ ಮಾತ್ರವಲ್ಲ ಉದಯಾಚಲದಿಂದ ಅಸ್ತಾಚಲದವರೆಗೆ, ಮಲಯಾಚಲದಿಂದ ಮೇರುಪರ್ವತದವರೆಗೆ ವಿಸ್ತಾರವಾಗಿರುವಭಾರತಾವನಿಯಲ್ಲಿ ಸಂಚರಿಸುವ ಸಮಸ್ತ ಜನರಿಂದ ವಂದನಾದ ಶ್ರೀವೆಂಕಟೇಶ್ವರನಂತೆಯೇ ನನ್ನ ಪುತ್ರನೂ ಸಂಸೇವಿತನಾಗಲಿ ಎಂಬ ಅಭಿಪ್ರಾಯದಿಂದ ಮಗನಿಗೆ “ವೇಂಕಟನಾಥ” ನಂದೇ ನಾಮಕರಣಮಾಡಿದರು. 

ಆಚಾರರು ಮಗನಿಗೆ ವೇಂಕಟನಾಥನೆಂದು ಹೆಸರಿಟ್ಟಿದ್ದರ ಸಾರ್ಥಕತೆಯ ಬಗ್ಗೆ ಅಲ್ಲಿ ಸೇರಿದ್ದ ಮೀಮಾಂಸಾ, ವೇದಾಂತಾದಿ ಶಾಸ್ತ್ರ ಪಂಡಿತರು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಗೊಳಿಸಹತ್ತಿದರು. ಅಗ ಮೀಮಾಂಸಾಪಂಡಿತರೊಬ್ಬರು- “ಜ್ಯೋತಿಷ್ಟೋಮಾದಿ ಯಾಗಗಳಿಗೆ ಆಯಾ ಹೆಸರೆಂಬ ಗುಣವಿಧಾನಮಾಡುವಂತೆ ಮಗನಿಗೆ ವೇಂಕಟನಾಥನೆಂದು ಹೆಸರಿಟ್ಟರು” ಎಂದರು. ಇನ್ನೊಬ್ಬರು “ಈ ಮಗುವಿನಲ್ಲಿ ಇಂತಿಂಥ ಗುಣವಿದೆಯೆಂದು ಹೇಳದಿದ್ದರೂ ಸ್ವತ ಏವ ಆಯಾಗುಣಗಳು ಇವನಲ್ಲಿ ಸಿದ್ಧವಾಗಿದೆಯೆಂದು ತಿಳಿಸಲು ಹೆಸರಿಟ್ಟರು” ಎಂದರು. ಆಗ ಬೇರೊಬ್ಬರು - “ಪರಮಾತ್ಮನಲ್ಲಿರುವ ಗುಣಗಳು ಈ ಶಿಶುವಿನಲ್ಲಿಯೂ ಇದೆ ಎಂದು ಅತಿದೇಶ (ಉದಾಹರಣೆ ಕೊಟ್ಟು ಹೋಲಿಸುವುದು)ಕ್ಕಾಗಿ ಹೀಗೆ ಹೆಸರಿಟ್ಟರು” ಎನಲು ಮತ್ತೊಬ್ಬರು “ನಹಿ ದೃಷ್ಟಾಂತೇ ಸರ್ವಸಾಮ್ಯಂ ! ಉದಾಹರಣೆ ಕೊಟ್ಟು ಹೇಳುವಾಗ ಎಲ್ಲವನ್ನೂ ಅನ್ವಯಮಾಡಬಾರದು. ಯಥಾಯೋಗ್ಯವಾಗಿ ಈ ಮಗುವಿನಲ್ಲಿ ಆ ಯೋಗ್ಯಗುಣಗಳಿವೆ. ಆದ್ದರಿಂದ ಇವನು ವೇಂಕಟೇಶನಂತಿದ್ದಾನೆ ನಾಮಕರಣಮಾಡಿದರೆಂದರು. ಆಗ ವೇದಾಂತಿಗಳೊಬ್ಬರು ಭಗವದ್ಗೀತೆಯ ೧೫ ನೇ ಅಧ್ಯಾಯದಲ್ಲಿ ಮಮೈವಾಂಶೋ ಜೀವಸಂಘ” ಎಂದು ಶ್ರೀಕೃಷ್ಣ ಹೇಳಿದ್ದಾನೆ. ಅಂದರೆ ಪರಮಾತ್ಮನ ಏಕದೇಶ ಸಾಮ್ಯಸಾಮರ್ಥ್ಯವಿರುವ ಜೀವನು ಭಗವಂತನ ಭಿನ್ನಾಂಶನೆಂದು ತಾತ್ಪರ್ಯ, ಈ ಮಗುವು ಪರಮಾತ್ಮನ ಅಂಶವೇ ಆಗಿದೆ. ಮತ್ತು ಈ ಮಗುವು ಭಗವಂತನ ಪೂರ್ಣ ಸನ್ನಿಧಾನಪಾತ್ರದ್ದಾಗಿರುವುದರಿಂದ ವೆಂಕಟನಾಥನೆಂದು ನಾಮಕರಣ ಮಾಡಿದ್ದು ಯುಕ್ತವಾಗಿದೆ” ಎಂದರು. ಆಗ ಮತ್ತೊಬ್ಬ ವಿದ್ವಾಂಸರು “ಅಂಗಾದಂಗಾತ್ತಂಭವಸಿ ಆತ್ಮಾ ವೈ ಪುತ್ರನಾಮಾಸಿ” ಇತ್ಯಾದಿಶ್ರುತಿಗಳು ಮಗನು ತಂದೆಯ ಅಂಶವೆಂದು ತಿಳಿಸುವವು. ಇಂಥ ಪುತ್ರನಲ್ಲಿ ಗುಣವೃದ್ಧಿ, ವ್ಯವಹಾರಸಿದ್ದಿ, ಪರಮಾತ್ಮನ ಆಜ್ಞಾನಿರ್ವಹಣಗಳಿಗಾಗಿ ಆಚಾರರು ಹೀಗೆ ಹೆಸರಿಟ್ಟುದು ಅನ್ವರ್ಥಕ” ವೆಂದು ಸಾಧಿಸಿದರು. ಆಗ ಮತ್ತೊಬ್ಬರು “ನಿಜ, ಏಕಾದಶೀಹನಿ ಪಿತಾ ನಾಮಕುರಾತ್‌' ಎಂಬ ಶ್ರುತಿ ದ್ವಾರ ಶ್ರೀಹರಿಯು ಮಾಡಿರುವ ಆಜ್ಞೆಯನ್ನು ನೆರವೇರಿಸಲು ಈ ಹೆಸರಿಟ್ಟಿದ್ದಾರೆ. ಶ್ರೀವೆಂಕಟೇಶನ ಆಜ್ಞೆಯಂತೆ ಇಟ್ಟಿರುವ ಈ ಹೆಸರು ಶಿಶುವಿಗೆ ಚೆನ್ನಾಗಿ ಸಲ್ಲುತ್ತದೆ” ಎಂದರು. ಆಗ ಮತ್ತೊಬ್ಬ ಪಂಡಿತರು ಅಂಗಾದಂಗಾತ್” ಮುಂತಾಗಿ ಹೇಳಿದರು. ಮತ್ತೊಬ್ಬರು 'ಮಮೈವಾಂ' ಎಂದು ಹೇಳಿದರು. ಒಬ್ಬರ ಪ್ರಕಾರ ಪುತ್ರನು ತಂದೆಯ ಅಂಶವೆಂದೂ, ಮತ್ತೊಬ್ಬರಂತೆ ಶಿಶುವು ಪರಮಾತ್ಮನ ಅಂಶವೆಂದೂ ವ್ಯಕ್ತವಾಗುವುದು, ಎರಡೂ ಸರಿಯಾಗಿದೆ. ಆದರೆ ಸಾಕ್ಷಾತ್ ಕೃಷ್ಣನೇ ಹೇಳಿರುವುದರಿಂದ ಈ ಮಗುವು ಪರಮಾತ್ಮನ ಅಂಶ (ನ ಹಿ ದೃಷ್ಟಾಂತೇ ಸರ್ವಸಾಮ್ಯಂ) ಎಂದು ಹೇಳುವುದು ಸಮಂಜಸವಾಗಿದೆ” ಎಂದು ತಿಳಿಸಿದರು. ಹೀಗೆ ಪಂಡಿತರು ವಿವೇಚನೆಮಾಡಿ ವೆಂಕಟನಾಥನೆಂದು ಹೆಸರಿಟ್ಟಿದ್ದು ಸರಿಯೆಂದು ತಿಮ್ಮಣ್ಣಾಚಾರ್ಯರನ್ನು ಶ್ಲಾಘಿಸಿದರು.

ಪಂಡಿತರುಗಳ ವಾದ ಮತ್ತು ವಿವೇಚನೆಗಳನ್ನು ಕೇಳಿ ಸಕಲರೂ ಆನಂದಭರಿತರಾದರು. ಆ ತರುವಾಯ ತಿಮ್ಮಣ್ಣಾಚಾರ್ಯರು, ಫಲಪೂಜೆಮಾಡಿ, ಶ್ರೀಮಠಕ್ಕೆ ಗೌರವಸಲ್ಲಿಸಿ, ಆನಂತರ ಸಕಲ ಬ್ರಾಹ್ಮಣಸುವಾಸಿನಿಯರಿಗೆ ಫಲತಾಂಬೂಲ ದಕ್ಷಿಣಾ ಪ್ರದಾನಮಾಡಿದರು ಮತ್ತು ಮೃಷ್ಟಾನ್ನಭೋಜನ ಮಾಡಿಸಿದರು. ಸಕಲರೂ ಆಚಾರರ ಭಾಗ್ಯವನ್ನು ಕೊಂಡಾಡಿ ಶ್ರೇಷ್ಠ ಪುತ್ರನನ್ನು ಪಡೆದ ಆ ದಂಪತಿಗಳನ್ನು ಅಭಿನಂದಿಸಿದರು. 

ಶ್ರೀರಾಘವೇಂದ್ರವಿಜಯದಲ್ಲಿ ಘಟತೇ ತನಯೇಭಿದಾ ತದಂಶೇ ಗುಣ ವೃದ್ಧರ್ಥ ಮನುಕ್ತಿಸಿದ್ದಯೇ ಚ | ಅತಿದೇಶಕೃತೇ ಹರೇರ್ಗುಣಾನಾಂ ವಿವದಂತೆ ಖಲು ಜೈಮಿನೀಯ ಶೌಂಡಾ” ಎಂದು ನಾಮಕರಣದ ಬಗ್ಗೆ ವರ್ಣಿತವಾಗಿದೆ, ಇಲ್ಲಿ ಕೆಲ ಮಹತ್ವ ವಿಚಾರಗಳು ವ್ಯಕ್ತವಾಗುವುದು. ಈ ಪದ್ಯದಲ್ಲಿನ 'ಹರೇರ್ಗುಣಾನಾಂ ಅತಿದೇಶಕೃತೇ ತದಂಶ' ಎಂಬ ಪದಗಳಿಂದ ಕವಿಗಳಾದ ನಾರಾಯಣಾಚಾರ್ಯರು ಶ್ರೀರಾಘವೇಂದ್ರಸ್ವಾಮಿಗಳು ಪ್ರಹ್ಲಾದಾಂಶರೆಂದು ಸೂಚಿಸಿರುವುದಾಗಿ ನಾವು ಭಾವಿಸುತ್ತೇವೆ. ನಮ್ಮ ಮುಂದಿನ ವಿಚಾರಮೋಹನದಿಂದ ಈ ವಿಚಾರವು ಸಿದ್ಧವಾಗುವುದು. 

'ತದುಶೇ' ಎಂದರೆ ಪ್ರಕೃತದಲ್ಲಿ 'ಹರೇರ್ಗುಣಾನಾಂ ಅತಿದೇಶಕೃತೇ' ಈ ಪದಗಳ ಸಮಭಿವ್ಯಾಹಾರಬಲದಿಂದ ಜೀವನು ಪರಮಾತ್ಮನ ಅಂಶವೆಂದು ಸ್ಪಷ್ಟವಾಗುವುದು. ಭಗವದ್ಗೀತೆಯಲ್ಲಿ ಕೃಷ್ಣನು “ಮಮೈವಾಂಶೋ ಜೀವಲೋಕಃ ಜೀವ ಭೂತಸ್ಸನಾತನಃ ।” ಎಂದಿದ್ದಾನೆ. ಅಂದರೆ- ಅರ್ಜುನಾ ! ಸನಾತನನಾದ ಜೀವನು ಜೀವಲೋಕದಲ್ಲಿ ನನ್ನ ಅಂಶನೇ (ಪ್ರತಿಬಿಂಬವೇ) ಆಗಿದ್ದಾನೆ” ಎಂದು ಹೇಳಿದ್ದಾನೆ. ಇನ್ನು ವಿಭೂತ್ಯಧ್ಯಾಯದಲ್ಲಿ 'ಪ್ರಹ್ಲಾದಶ್ಚಾಸ್ತ್ರಿ ದೈತ್ಯಾನಾಂ' ದೈತ್ಯರ ಮಧ್ಯೆ ಪ್ರಹ್ಲಾದನಲ್ಲಿ ವಿಭೂತಿರೂಪನಾಗಿದ್ದೇನೆ ಎಂದಿರುವನು. ಈ ವಿಶೇಷಣಗಳಿಂದಲೂ ಧ್ವನಿಮೂಲಕವೂ ಕವಿಗಳ ಅಭಿಪ್ರಾಯದಲ್ಲಿ ಶ್ರೀಗುರುರಾಜರು ಭಗವದ್ವಿಭೂತಿರೂಪ ತಾಳಿಬಂದಿರುವ ಶ್ರೀಪ್ರಹ್ಲಾದರ ಅವತಾರರೇ ಆಗಿದ್ದಾರೆ ಎಂದು ಸೂಚಿತವಾಗುತ್ತದೆ. 

ತಿಮ್ಮಣ್ಣಾಚಾರರು ಮಗನಿಗೆ ವೆಂಕಟನಾಥ ಎಂದು ಹೆಸರಿಟ್ಟಿದ್ದಾರೆ. ಈ 'ವೆಂಕಟನಾಥ', 'ಪ್ರಹ್ಲಾದ' ಮತ್ತು ಸನ್ಯಾಸಿಗಳಾದ ಮೇಲಿನ 'ರಾಘವೇಂದ್ರ' ಎಂಬ ಮೂರು ಹೆಸರುಗಳೂ ಸಮಾನಾರ್ಥಕವೆಂದು ತಿಳಿಸುವುದು ಕವಿಗಳ ಆಶಯವಿದ್ದಂತೆ ಭಾಸವಾಗುತ್ತದೆ. ಅದನ್ನು ಸ್ವಲ್ಪ ವಿಚಾರಮಾಡೋಣ. ಶ್ರೀನಿವಾಸದೇವರಿಗೆ 'ಶ್ರೀವೇಂಕಟೇಶ' ಎಂಬ ಹೆಸರು ಪ್ರಸಿದ್ಧವಾಗಿದೆ. “ವೇಂ ಪಾಪಂ ಕಟತೇ ಯಸ್ಮಾತಾಪದಾಹನಶಕ್ತಿತಃ !” - ವೇಂಕಟಾಚಲವು ವೇಂ-ಪಾಪಗಳನ್ನು ಕಟತೇ-ಪರಿಹರಿಸುತ್ತದೆ-ಹೀಗೆ ಪಾಪದಾಹನಶಕ್ತಿಯುತವಾದ್ದರಿಂದ ಆ ಪರ್ವತವು ವೇಂಕಟಾಚಲವೆಂದು ಪ್ರಸಿದ್ಧವಾಗಿದೆ. ಇಂಥ ವೇಂಕಟಾಚಲಕ್ಕೆ ಸ್ವಾಮಿಯಾದವನೇ ಶ್ರೀವೇಂಕಟೇಶ ಅಥವಾ ವೇಂಕಟನಾಥನೆಂದು ಹೆಸರುಬಂದಿದೆ. ಶ್ರೀವೆಂಕಟೇಶ್ವರನನ್ನು ಆದಿತ್ಯ ಪುರಾಣದಲ್ಲಿ “ಬ್ರಹ್ಮರುದ್ರಾದಿವದಂ ತ್ವಾಂ ಭಜೇ ವೇಂಕಟನಾಯಕಂ | ನಿವಾರಯಾನ್ದನಿಷ್ಪಾನಿ ಸಾಧಯೇಷಾನಿ ಮಾಧವ ||” ಎಂದು ಸ್ತುತಿಸಿರುವುದರಿಂದ ಪಾಪಪರಿಹಾರಪೂರ್ವಕ ಇಷ್ಟಾರ್ಥಗಳನ್ನಿತ್ತು, ಹೆಚ್ಚಾದ ಆನಂದವನ್ನು ಕೊಡುತ್ತಾನಾದ್ದರಿಂದ ಶ್ರೀವೇಂಕಟೇಶ ಅಥವಾ ವೇಂಕಟನಾಥ ಎಂಬ ಹೆಸರು ಸಾರ್ಥಕವಾಗಿದೆ. 

ಇಂಥ ಶ್ರೀವೇಂಕಟೇಶನ ವರದಿಂದ ಜನಿಸಿದ್ದರಿಂದಲೂ, 'ಮಮೈವಾಂಶ' 'ಪ್ರಹ್ಲಾದಶ್ಚಾಸ್ತ್ರಿ' ಮುಂತಾದ ಪ್ರಮಾಣಗಳಿಂದಲೂ ವೇಂಕಟನಾಥ ಪರಮಾತ್ಮನ ಅಂಶ, ಪ್ರಹ್ಲಾದಾವತಾರಿ ಎಂದು ವ್ಯಕ್ತವಾಗುವುದರಿಂದ ನಮ್ಮ ವೇಂಕಟನಾಥನೂ ಭಕ್ತರ ಪಾಪ ಕಳೆದು ಇಷ್ಟಾರ್ಥವಿತ್ತು ಆನಂದದಾಯಕನಾಗಿದ್ದಾನೆ. 

ಮೇಲಿನ ಅರ್ಥವನ್ನೇ 'ಪ್ರಹ್ಲಾದ' ಎಂಬುದೂ ತಿಳಿಸುತ್ತದೆ. 'ಪ್ರಕರ್ಷಣ ಆಹ್ಲಾದಯತೀತಿ ಪ್ರಹ್ಲಾದ' ಎಂಬುತ್ಪತ್ತಿಯಿಂದ ಹೆಚ್ಚಾದ ಸಂತೋಷವನ್ನು ನೀಡುತ್ತಾನೆ ಅಂದರೆ ಪಾಪನಿವಾರಣಪೂರ್ವಕ ವಾಂಛಿತಾರ್ಥಗಳನ್ನಿತ್ತು ಆನಂದ ಪಡಿಸುತ್ತಾನೆ ಎಂದು ಅರ್ಥವಾಗುವುದರಿಂದ ಪ್ರಹ್ಲಾದನಾಗಿರುವ ಪ್ರಹ್ಲಾದನ 'ಪ್ರಹ್ಲಾದ' ಎಂಬ ಹೆಸರೂ ಸಾರ್ಥಕವಾಗಿದೆ. 

'ಶ್ರೀರಾಘವೇಂದ್ರ' ಎಂಬ ಹೆಸರೂ ಇದೇ ಅರ್ಥವನ್ನು ಕೊಡುತ್ತದೆ. ಅಘಶ್ಚ ವೇಂ ಚ ಅಘವೇಂ. ಅಘವೇಂ ದೃತಿ ರಾತೀತಿ ಅಘವೇಂದ್ರ ರಾಜತೇ ಇತಿ ರಃ, ರಾಸ್‌ ಅಘವೇಂದ್ರ ರಾಘವೇಂದ್ರ” ಎಂಬ ವುತ್ಪತ್ತಿಯಿಂದ ಶ್ರೀರಾಘವೇಂದ್ರ ಸ್ವಾಮಿಗಳು ಭಕ್ತರ ಪಾಪಗಳನ್ನು ಕಳೆದು, ಬೇಡಿಬೇಡಿದ ಇಷ್ಟಾರ್ಥಗಳನ್ನಿತ್ತು, ಆನಂದಪಡಿಸುತ್ತಾ ವಿರಾಜಿಸುವರು ಎಂದು ಅರ್ಥವಾಗುವುದರಿಂದ ಶ್ರೀರಾಘವೇಂದ್ರ ಎಂಬ ಪದವೂ ಅನ್ವರ್ಥಕವಾಗಿದೆ !

ಹೀಗೆ ಶ್ರೀವೆಂಕಟನಾಥ, ಪ್ರಹ್ಲಾದ, ರಾಘವೇಂದ್ರ ಎಂಬ ಪದಗಳು ಅವಯವ ಶಕ್ತಿಯಿಂದ (ಪ್ರವೃತ್ತಿನಿಮಿತ್ತಪೌಷ್ಕಲದಿಂದ) ಎಂದರೆ, ಯೌಗಿಕವಾಗಿ ಸಮಾನಾರ್ಥಕಗಳಾಗಿರುವುದರಿಂದ ಶ್ರೀವೇಂಕಟೇಶ್ವರನಂತೆ ಪಾಪ ಪರಿಹಾರಘಾರ್ವಕ ವಾಂಛಿತಾರ್ಥಗಳನ್ನು ಕರುಣಿಸಿ ಆನಂದಪಡಿಸುವ ಪ್ರಹ್ಲಾದರಾಜನೇ ಅದೇ ಗುಣಗಳಿಂದ ವಿಶಿಷ್ಟರಾಗಿ ವೇಂಕಟನಾಥರಾಗಿ (ಶ್ರೀರಾಘವೇಂದ್ರರಾಗಿ) ಅವತರಿಸಿರುವುದರಿಂದ ಅವರಿಗೆ ಪ್ರಹ್ಲಾದನೆಂದೂ, ವೇಂಕಟನಾಥನೆಂದೂ, ರಾಘವೇಂದ್ರನೆಂದೂ ಹೆಸರಿಟ್ಟರೆಂದು ಕವಿಗಳು “ಘಟತೇ” ಎಂಬ ನಾಮಕರಣಸಮರ್ಥಕ ಪದ್ಯದಿಂದ ಸೂಚಿಸಿದ್ದಾರೆಂದು ಘಂಟಾಘೋಷಕವಾಗಿ ಹೇಳಬಹುದು. 

- ಗ್ರಂಥಕರ್ತಾ. 

ವೆಂಕಟನಾಥ ದಿನೇ ದಿನೇ ಶರತ್ಕಾಲೀನ ಚಂದ್ರನಂತೆ ಅಭಿವೃದ್ಧಿಸಿದನು. ಅವನು ಬಾಲಕ ಸಹಜಲೀಲೆಗಳಿಂದ ತಂದೆತಾಯಿಗಳಿಗೆ ಸಂತಸವನ್ನೀಯುತ್ತಿದ್ದನು. ಲೌಕಿಕಶಿಶುವಂತೆ ವೇಂಕಟನಾಥ ಕ್ರೀಡಿಸುತ್ತಿದ್ದರೂ ಅವನ ಒಂದೊಂದು ಕ್ರೀಡೆಯೂ ತಾತ್ವಿಕ ಧಾರ್ಮಿಕ ಪ್ರಜ್ಞೆಯನ್ನು ಪ್ರಚೋದಿಸುವಂತಿತ್ತು. ವೇಂಕಟನಾಥ ಕಾಲಕ್ರಮದಲ್ಲಿ ಅಂಬೆಗಾಲಿಡುತ್ತಾ ಮನೆಯಲ್ಲೆಲ್ಲಾ ಓಡಾಡಹತ್ತಿದನು. ಅದನ್ನು ನೋಡಿದರೆ ನಾಲ್ಕು ಪಾದಗಳಿಂದ ಶೋಭಿಸುತ್ತಿದ್ದ ಕಾಮಧೇನು ರೂಪ ಧರಿಸಿದ ಧರ್ಮವೇ ಮೈವೆತ್ತು ಬಂದಂತೆ ಕಾಣುತ್ತಿತ್ತು. ಧರ್ಮವು ನಾಲ್ಕು ಪಾದಗಳಿಂದ ಕಾಮಧೇನುವಿನ ರೂಪ ತಾಳಿ ವಿರಾಜಿಸುತ್ತಿತ್ತು. ಆ ಬಾಲಕನು ಎರಡು ಕೈಕಾಲುಗಳನ್ನು ಬಳಸಿ ಆಕಳಿನಂತೆ ಅಂಬೆಗಾಲಿಕ್ಕಿ ಮನೆಯಲ್ಲಿ ಸಂಚರಿಸುತ್ತಿದ್ದರೆ “ಓಹೋ ಧರ್ಮವೇ ಕಾಮಧೇನು ರೂಪ ತಾಳಿ ಇಲ್ಲಿ ಸಂಚರಿಸುತ್ತಿದೆ” ಎಂದು ನೋಡಿದವರು ಉದ್ಧರಿಸುತ್ತಿದ್ದರು. ಆ ಮಗುವು “ಸಂಪೂರ್ಣ ಧರ್ಮಾಕೃತಿಯುಳ್ಳ ನಾನು ಮುಂದೆ ಲೋಕದ ಜನತೆಗೆ ಕಾಮಧೇನುವಿನಂತೆ ಇಷ್ಟಾರ್ಥಗಳನ್ನು ನೀಡುತ್ತೇನೆ” ಎಂದು ಸೂಚಿಸುತ್ತಿರುವಂತೆ ವೇಂಕಟನಾಥ ಕ್ರೀಡಿಸುತ್ತಿದ್ದನು.303 ಒಂದು ದಿನ ಆ ಶಿಶುವು ತನ್ನ ಕರದ ಹೆಬ್ಬೆರಳನ್ನು ಬಾಯಿಯಲ್ಲಿ ಇಟ್ಟುಕೊಂಡು ಚೀಪಿತು.ಅದನ್ನು ನೋಡಿದಜನರಿಗೆ ಹೀಗೆ ತೋರಿತಂತೆ ! “ಪರಮಾತ್ಮನು ಜೀವರ ಹೃದಯದಲ್ಲಿ ಹೆಬ್ಬೆಟ್ಟಿನ ಪರಿಮಾಣದಿಂದಲೂ, ಅವರ ಸ್ವರೂಪದೇಹದಲ್ಲಿ ಜೀವರ ಅಂಗುಷ್ಟ ಪರಿಮಾಣದಿಂದಲೂ ಇರುವನೆಂದೂ ಶಾಸ್ತ್ರಗಳಲ್ಲಿ ಉಕ್ತವಾಗಿದೆ,304 ಈ ಶಿಶುವು ಹವಳದಬಳ್ಳಿಯಂತೆ ಕೆಂಪಾದ ಅಂಗುಷ್ಟವನ್ನು ವದನಾರವಿಂದದಲ್ಲಿ ಇಟ್ಟುಕೊಂಡಿರುವುದನ್ನು ನೋಡಿದರೆ - ನನ್ನಲ್ಲಿ ಅಂತರ್ಗತನಾಗಿರುವ ಪರಮಾತ್ಮನು ನನ್ನ ಹೃದಯದಲ್ಲಿ ಹೆಬ್ಬೆಟ್ಟಿನ ಪ್ರಮಾಣದಲ್ಲಿಯೂ, ನನ್ನ ಸ್ವರೂಪದೇಹದಲ್ಲಿ ಅಂಗುಷ್ಟ ಪ್ರಮಾಣದಿಂದಲೂ ಶೋಭಿಸುತ್ತಿದ್ದಾನೆ ! ಎಂದು ನಮಗೆ ವೇದಾಂತ ತತ್ವವನ್ನು ಉಪದೇಶಿಸುತ್ತಿರುವಂತೆ ಕಾಣುವುದಲ್ಲ!” ಎಂದು ಅಚ್ಚರಿಪಡುತ್ತಿದ್ದರಂತೆ! 

ಆ ಬಾಲಕನು ಕ್ರಮೇಣ ನಡಿಗೆಯನ್ನು ಕಲಿಯಲಾರಂಭಿಸಿದನು. ಪುಟ್ಟಪುಟ್ಟ ಹೆಜ್ಜೆಯನ್ನಿಟ್ಟು ನಡೆಯುವಾಗ ಬಾಲಸ್ವಭಾವದಂತೆ ಬೀಳುವುದು, ಮುಗ್ಗುರಿಸುವುದು ಮತ್ತೆ ಏಳುವುದು ಮಾಡುತ್ತಿದ್ದನು. ಅದನ್ನು ಕಂಡು ಜನರು “ಬಹುಶಃ ಈ ಬಾಲಕನು ಮುಂದೆ ಶ್ರೀಲಕ್ಷ್ಮೀಕಾಂತನ ಪಾದಕಮಲಗಳಿಗೆ ಬಾಗಿ ನಮಸ್ಕರಿಸುವುದನ್ನು ಈಗಿನಿಂದಲೇ ಅಭ್ಯಾಸಮಾಡುತ್ತಿದ್ದಾನೆ” ಎಂದು ಅಚ್ಚರಿಯಿಂದ ಅವನನ್ನು ಶ್ಲಾಘಿಸುತ್ತಿದ್ದರು. ವೆಂಕಟನಾಥನು ಮನೆಯ ಹೊರ ಅಂಗಳದಲ್ಲಿ ಆಡುತ್ತಿರುವಾಗ ಎದ್ದುಬೀಳುತ್ತಿದ್ದುದರಿಂದ ಭೂಮಿಯ ಕೆಂದೂಳು ಅವನ ಮೈಯಲ್ಲಿ ಲೇಪಿತವಾಗಿತ್ತು. ಅದನ್ನು ನೋಡಿದರೆ ಪರಮಾತ್ಮನನ್ನು ಆಶ್ರಯಿಸಿರುವ ಜಗತ್ತಿನ ರೂಪದಲ್ಲಿ ಪರಿಣಾಮಹೊಂದಿರುವ ಮೂಲಪ್ರಕೃತಿಯೇ ಪ್ರತ್ಯಕ್ಷಳಾಗಿರುವಂತೆ ಕಾಣುತ್ತಿತ್ತು !