|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೨೦. ಭಾಗವತಾಗ್ರಣಿಯ ಅವತಾರ

“ಕಿಮಲಭ್ಯಂ ಭಗವತಿಪ್ರಸನ್ನೇ ಶ್ರೀನಿಕೇತನೇ ?” ಲಕ್ಷ್ಮೀನಿಲಯನಾದ ಭಗವಂತನು ಪ್ರಸನ್ನನಾದರೆ ದೊರೆಯದ ವಸ್ತುವಾವುದು ? ಶ್ರೀನಿವಾಸನ ವರ ಶೀಘ್ರವಾಗಿಯೇಫಲಿಸಿತು. ಇತಿರಾದೇವಿಯು ಮಹಿದಾಸನನ್ನೂ, ಪ್ರಾಚೀದಿಕ್ಕು ಚಂದ್ರನನ್ನೂ ಭೂಮಿಯು ನವನಿಧಿಗಳನ್ನೂ ತಮ್ಮ ಗರ್ಭದಲ್ಲಿ ಧರಿಸಿದಂತೆ ಗೋಪಿಕಾಂಬಾದೇವಿಯು ಕುಮಾರನನ್ನು ತನ್ನ ಉದರದಲ್ಲಿ ಧರಿಸಿದಳು. (ಗರ್ಭಿಣಿಯಾದಳು). ಗರ್ಭಿಣಿಯಾದ ಗೋಪಮ್ಮ ಅತಿ ಸುಂದರಿಯಾಗಿ ಕಾಣುತ್ತಿದ್ದರು. ಅವರ ದೇಹ ಸ್ವಾಭಾವಿಕ ಧವಳಕಾಂತಿಯಿಂದ ಕಂಗೊಳಿಸಿತು. ಅವರನ್ನು ನೋಡಿದವರು ತಮಗೆ ತೋರಿದಂತೆ ಬಣ್ಣಿಸತೊಡಗಿದರು. ಚಂದ್ರನ ಕಲಾಸಮೂಹವೇ ಇವಳೆಂದರೆ, ಅದಶುಭ್ರ ಮರುಳುರಾಶಿಯಿಂದ ಬೆಳಗುವ ಸಮುದ್ರದಡವೆಂದರು ಮತ್ತೊಬ್ಬರು ! ಇನ್ನು ಕೆಲವರು ತಿಮ್ಮಣ್ಣಾಚಾರ್ಯರ ಫಲಿತವಾದ ಪುಣ್ಯಪುಂಜವೇ ಇವಳಾಗಿರಬಹುದೇ ? ಅಥವಾ ಪತಿಯ ಇಲ್ಲವೇ ಗರ್ಭಸ್ಥಶಿಶುವಿನ ಕೀರ್ತಿಯೇ ಗೋಪಮ್ಮನಲ್ಲಿ ಸಾಕಾರ ತಾಳಿರಬಹುದೇ ? ಅದಲ್ಲದಿದ್ದರೆ ಬೆಳದಿಂಗಳೇ ರೂಪತಾಳಿ ಬಂದಿರಬಹುದೇ? ಯಾರೀಲಾವಣ್ಯಪತಿ ? ಎಂದು ಊರಿನ ಜನರು ಅವಳನ್ನು ಶ್ಲಾಘಿಸುತ್ತಿದ್ದರು. 

ಗೋಪಿಕಾಂಬೆಯ ಅಂಗಾಂಗಗಳೆಲ್ಲ ಪಾಂಡುರವರ್ಣಸ್ವರೂಪದೇ ಆಗಿದ್ದಿತು. ಉದರದಲ್ಲಿರುವ ಪುತ್ರನೆಂಬ ಚಂದ್ರನ ಬೆಳದಿಂಗಳು ಅವಳ ಸರ್ವಾಂಗಗಳಲ್ಲಿ ವ್ಯಾಪಿಸಿತ್ತು. ಬೆಳದಿಂಗಳ ರಾತ್ರಿ ಚಕ್ರವಾಕಪಕ್ಷಿಗಳಿಗೆ ವಿಯೋಗವು ಸ್ವಾಭಾವಿಕ. ಆದರೆ ಸುಚಂದ್ರಿಕೆಯಿದ್ದರೂ ಗೋಪಮ್ಮನ ಕುಚಗಳೆಂಬ ಚಕ್ರವಾಕದಂಪತಿಗಳು ಮಿಲಿತವಾಗಿಯೇ ಇದ್ದುದು ಅಚ್ಚರಿಯೇನಲ್ಲ ! ಏಕೆಂದರೆ ಗೋಪಮ್ಮನ ಗರ್ಭದಲ್ಲಿ ಈಗ ಜಗದುದ್ಧಾರಕ ತಪೋನಿಧಿ (ಸೂರ್ಯ) ರಾಜಿಸುತ್ತಿರುವುದರಿಂದ ಸೂರ್ಯನಿರುವಾಗ ಚಕ್ರವಾಕ್ಯಗಳು ಸೇರಿರುವುದು ಸಹಜವಲ್ಲವೇ ? ಅಥವಾ, ಅವರ ಉದರದಲ್ಲಿ ಮಹಾತ್ಮನಾದ ತಪಸ್ವಿ ಬೆಡಗುಗೊಂಡಿದ್ದಾನೆ. ತಪಸ್ವಿಗಳಿರುವಲ್ಲಿ ವಿರುದ್ಧ ಧರ್ಮಗಳುಳ್ಳ ಹುಲಿ, ಚಿರತೆ, ಗೋವು, ಜಿಂಕೆ, ಸಿಂಹ, ಆನೆ ಮುಂತಾದ ಪ್ರಾಣಿಗಳು ದ್ವೇಷವನ್ನು ತ್ಯಜಿಸಿ ಸ್ನೇಹದಿಂದಿರುವುದು ಕಂಡುಬಂದಿದೆ. ಅಂತೆಯೇ ಗರ್ಭಸ್ಥ ಮಹಾ ಮಹಿಮ (ತಪಸ್ವಿ) ಶಿಶುವಿನ ಮಹಿಮೆಯಿಂದ ಕುಚಗಳೆಂಬ ಚಕ್ರವಾಕಪಕ್ಷಿಗಳು ಸೇರಿದ್ದು ಅಚ್ಚರಿಯಲ್ಲ.293 ಸಾಮಾನ್ಯವಾಗಿ ಗರ್ಭಿಣಿಯರು ತಮಗಿಷ್ಟವಾದ, ಪ್ರಿಯವಾದ ಅಲಂಕಾರ, ಸ್ನಾನ, ತಿಂಡಿತಿನಿಸುಗಳನ್ನು ಬಯಸುವರು. ಆದರೆ ತರುಣಿಯಾದ ಗೋಪಮ್ಮನು ಇದೆಲ್ಲದರಲ್ಲಿ ವೈರಾಗ್ಯತಾಳಿದ್ದಾಳೆ ! ಇದಕ್ಕೆ ಕಾರಣವೇನಿರಬಹುದು? ನಿಜ, ಗೋಪಮ್ಮನ ಗರ್ಭದಲ್ಲೀಗ ವೈರಾಗ್ಯನಿಧಿಯಾದ ಮಹಾತ್ಮನಿದ್ದಾನೆ. ಅಂತೆಯೇ ಮಗನ ವೈರಾಗ್ಯವು ಆಯತಾಕ್ಷಿಯಾದ ಆಕೆಯ ದೇಹದಲ್ಲೆಲ್ಲಾ ವ್ಯಾಪಿಸಿರುವುದರಿಂದ ಗೋಪಮ್ಮನಲ್ಲೂ ವೈರಾಗ್ಯವುಂಟಾಗಿರುವುದು ಸಹಜವಷ್ಟೆ !294 ಗೋಪಮ್ಮನ ಗರ್ಭ ಬೆಳೆಯಹತ್ತಿತು. ಸಾಮಾನ್ಯವಾಗಿ ಸ್ತ್ರೀಯರಿಗೆ ನಾಭಿಯ ಕೆಳಗೆ ತ್ರಿವಳಿ ಎಂಬ ರೇಖೆ ಇರುತ್ತದೆ. ಗರ್ಭವು ಬೆಳೆದಿದ್ದರಿಂದ ಗೋಪಮ್ಮನ ತ್ರಿವಳಿಯು ಕಾಣದಂತಾಯಿತು ಇದಕ್ಕೆ ಕವಿಗಳು ಹೀಗೆ ಸ್ವಾರಸ್ಯವಾಗಿ ವರ್ಣಿಸುವರು - ಬ್ರಾಹ್ಮಣನಿಗೆ ಋಷಿ, ದೇವ, ಪಿತೃಋಣವೆಂದು ಮೂರು ಋಣವಿರುತ್ತದೆ. ನಮ್ಮ ತಿಮ್ಮಣ್ಣಾಚಾರ್ಯರು ಬ್ರಹ್ಮಚರ್ಯದಿಂದ ಋಷಿಋಣವನ್ನೂ, ವಿವಾಹವಾಗಿ ಯಜ್ಞಾಚರಣಗಳಿಂದ ದೇವಋಣವನ್ನೂ ತೀರಿಸಿದ್ದಾರೆ. ಈಗವರು ಪುತ್ರನನ್ನು ಪಡೆದು ಪಿತೃ ಋಣದಿಂದ ಮುಕ್ತರಾಗುವರೆಂದು ಸೂಚಿಸಲೋ ಎಂಬಂತೆ ಬ್ರಹ್ಮದೇವರು ಮೂರು ಋಣದಂತಿರುವ ಗೋಪಮ್ಮನ ತ್ರಿವಳಿಯನ್ನು ಕಾಣದಂತೆ ಮಾಡಿರಬೇಕು - ಎಂದು ತ್ರಿವಳಿರಹಿತಳಾದ ಆ ತಾಯಿಯನ್ನು ಬಣ್ಣಿಸಿದ್ದಾರೆ. 

ಸಾಮಾನ್ಯವಾಗಿ ಗರ್ಭಿಣಿಯರು ಕೆಮ್ಮಣ್ಣು ತಿನ್ನುವುದು ಕಂಡುಬಂದಿದೆ. ನಮ್ಮ ಗೋಪಿಕಾಂಬೆಯು ಕೆಮ್ಮಣ್ಣು ತಿನ್ನಲು ಕಾರಣ ಅದಲ್ಲ, ಅವರ ಉದರದಲ್ಲಿ ಜಗನ್ಮಾನ್ಯನಾಗುವ ಸನ್ಯಾಸಿಯು ಬೆಳೆಯುತ್ತಿದ್ದಾನೆ. ಸನ್ಯಾಸಿಗಳಿಗೆ ಕೆಮ್ಮಣ್ಣು ಮತ್ತು ಕಾಷಾಯವಸ್ತ್ರಗಳು ಅತ್ಯವಶ್ಯವಾದವು. ಮುಂದೆ ತನಗೆ ಜನಿಸುವ ಕುಮಾರನು ಸನ್ಯಾಸಿಯಾಗುವುದರಿಂದ ಅವನಿಗೆ ಈಗಿನಿಂದಲೇ ಕೆಮ್ಮಣ್ಣು ಕೆಂಪುವಸ್ತ್ರಗಳಲ್ಲಿ ಅನುರಾಗ ಉಂಟಾಗುವಂತೆ ಮಾಡಲು ತನ್ನ ಉದರದಲ್ಲಿ ಗೋಪಮ್ಮನು ಕೆಮ್ಮಣ್ಣನ್ನು ಶೇಖರಿಸಲು ಅದನ್ನು ಹೆಚ್ಚಾಗಿ ತಿನ್ನುತ್ತಿರಬಹುದಲ್ಲವೇ ?

ಗೋಪಿಕಾಂಬೆಯ ಮನೆಯಲ್ಲಿ ಸ್ವರ್ಣಪಾತ್ರದಲ್ಲಿ ಕಾಯಿಸಿದ ಬಿಸಿನೀರನ್ನು ಹದವಾಗಿ ಸಿದ್ಧಪಡಿಸಲಾಗಿತ್ತು. ಮನೆಯಲ್ಲಿ ರುಚಿ ರುಚಿಯಾದ ಭಕ್ಷ್ಯ ಭೋಜ್ಯಗಳೂ ಸಿದ್ಧವಾಗಿರುತ್ತಿದ್ದವು. ಆದರೂ ಗೋಪಮ್ಮ ಅವೆಲ್ಲವನ್ನೂ ತ್ಯಜಿಸಿ ಮಂಜಿನ ತುಂತುರುಗಳಿಂದ ತಂಪಾದ ನದಿಯ ನೀರನ್ನೇ ಕುಡಿಯಬಯಸುತ್ತಿದ್ದಳು. ಸಿದ್ಧವಾಗಿದ್ದ ಭಕ್ಷಭೋಜ್ಯಗಳನ್ನು ತಿನ್ನದೇ ರುಚಿ ಇರಲಿ, ಇಲ್ಲದಿರಲಿ, ಪರಕೀಯರ ಮನೆಯಿಂದ ತಂದ ತಿಂಡಿ-ತಿನಿಸು, ಉಪ್ಪಿನಕಾಯಿ, ತೊಕ್ಕು, ಗೊಜ್ಜು, ನೆಲ್ಲಿಕಾಯಿ, ಮಾವಿನಕಾಯಿ, ಮಾಗಳೀಬೇರು ಇವುಗಳ ರಸವನ್ನೇ ಬಯಸಿ ಸಂತೋಷದಿಂದ ಸೇವಿಸುತ್ತಿದ್ದಳು ! ಅವಳು ಗರ್ಭಿಣಿಯರಿಗೆ ಸಹಜವಾದಂತೆ ಹಾಗೆ ಮಾಡುತ್ತಿರಲಿಲ್ಲ. ಅದಕ್ಕೆ ಬೇರೆ ಕಾರಣವೇ ಇತ್ತು. ತನ್ನ ಗರ್ಭದಲ್ಲಿರುವ ಮಗುವು ಮುಂದೆ ಸನ್ಯಾಸಿಯಾಗುತ್ತಾನೆ. ಸನ್ಯಾಸಿಗಳಿಗೆ ಪರಕೀಯ ಮನೆಯ ಊಟವೇ (ಭಿಕ್ಷೆ) ವಿಹಿತವಾಗಿದೆ, ಆದ್ದರಿಂದ ಮುಂದೆ ಪರಮಹಂಸನಾಗುವ ತನ್ನ ಪುತ್ರನಿಗೆ ಈಗಿನಿಂದಲೂ ಆ ಅನುಭವವುಂಟಾಗಲಿ ಎಂದು ಮತ್ತೊಬ್ಬರ ಮನೆಯಿಂದ ತಂದುದ್ದನ್ನೇ ಆಕೆ ಭುಂಜಿಸುತ್ತಿದ್ದಳು. 

ಗೋಪಿಕಾಂಬಾದೇವಿಯು ಬಾಲ್ಯದಿಂದಲೂ ಕಾವ್ಯ, ನಾಟಕಾದಿ ಸಾಹಿತ್ಯ ಮತ್ತು ಸಂಗೀತಗಳಲ್ಲಿ ಪ್ರವೀಣಳಾದ ವಿದುಷಿಯಾಗಿದ್ದಳು, ಮತ್ತು ಉತ್ತಮ ಕವಿಯತ್ರಿಯಾಗಿದ್ದಳು. ಈಗವಳು ತುಂಬಿದ ಗರ್ಭಿಣಿ, ಅವಳು ತನ್ನ ಆಲಸ್ಯ ಪರಿಹಾರ, ಮತ್ತು ಸತ್ಕಾಲಕ್ಷೇಪ ಪ್ರಕಾರಗಳನ್ನೇರ್ಪಡಿಸಿಕೊಂಡು ಕಾಲಕ್ಷೇಪ ಮಾಡುತ್ತಿದ್ದಳು. ಅಂತೆಯೇ ನಮ್ಮ ಗೋಪಮ್ಮನು “ಗರುಡವಾಹನ ಲಕ್ಷ್ಮೀನಾರಾಯಣ ದೇವರ ಅಂಕಿತ' ದಿಂದ ಪುರಾಣಪ್ರಸಿದ್ಧವಾದ ಅನೇಕ ಕಥಾನಕಗಳನ್ನೂ, ಸಂಸ ತ-ಕನ್ನಡಗೀತೆಗಳನ್ನೂ ರಚಿಸುತ್ತಾ, ಸಮವಯಸ್ಕರಾದ ಅನೇಕ ಕುಲೀನವನಿತೆಯರನ್ನು ಸೇರಿಸಿಕೊಂಡು ಆ ಸಭೆಯಲ್ಲಿ ಭದ್ರಾಸನಮಂಡಿತಳಾಗಿ, ವಾವದೂಕಳಾಗಿ, ಗಂಗಾ ಪ್ರವಾಹದಂತೆ ವಾಗೈಭವದಿಂದ ಶ್ರೀಹರಿಮಹಿಮಾಪರ ಕಥಾಕನಕಗಳನ್ನೂ ಅನುವಾದ ಮಾಡುತ್ತಾ ಅನೇಕ ಸ್ವಕೃತ ಕವಿತೆ-ಗೀತೆಗಳನ್ನು ಸುಸ್ವರವಾಗಿ ಗಾನಮಾಡುತ್ತಾ ಸರ್ವರನ್ನೂ ಆನಂದಗೊಳಿಸುತ್ತಾ ಕಾಲಕಳೆಯುತ್ತಿದ್ದಳು.

ತಿಮ್ಮಣ್ಣಾಚಾರ್ಯರು ಏಳನೆಯ ತಿಂಗಳಲ್ಲಿ ಪತ್ನಿಗೆ ಷೋಡಶಸಂಸ್ಕಾರಗಳಲ್ಲೊಂದಾದ ಸೀಮಂತವನ್ನೂ, ಗರ್ಭಸ್ಥಶಿಶುವಿಗೆ 'ಪುಂಸವನ' ಸಮಾರಂಭವನ್ನೂ ವಿಜೃಂಭಣೆಯಿಂದನೆರವೇರಿಸಿದರು. ಸೀಮಂತಕಾಲದಲ್ಲಿ ಗರ್ಭಸ್ಥಶಿಶುವಿಗೆ ವೇದೋಕ್ತವಾದ “ಸೋಮಜೇ ವ ನೋ ರಾಜೇತ್ಯಾಹ ಬ್ರಾಹ್ಮಣೀ ಪ್ರಜಾಃ ಆಸೀನಾಸೀರೇಣ ಕಪಿಲೇ ತವ” ಎಂಬ ಮಂತ್ರವನ್ನು ವೀಣೆಯಲ್ಲಿ ನುಡಿಸುತ್ತಾ, ಬೇರೆಯವರಿಗೆ ಕೇಳಿಸದಂತೆ ಶ್ರವಣಮಾಡಿಸುವುದು ಷಾಷಿಕಮನೆತನದ ಸಂಪ್ರದಾಯ, ಅದರಂತೆ ವೀಣಾ ಕೋವಿದರಾದ ಆಚಾರ್ಯರು ಸ್ವತಃ ಸುಸ್ವರವಾಗಿ ಆ ವೇದಮಂತ್ರವನ್ನು ಮಂದ್ರಸ್ಥಾಯಿಯಲ್ಲಿ ಮೆಲ್ಲನೆ ಹೇಳುತ್ತಾ ವೀಣೆಯನ್ನು ನುಡಿಸಿ ಉದರಸ್ಥಶಿಶುವಿಗೆ ಶ್ರವಣಮಾಡಿಸಿದರು. ಈ ಸಂಪ್ರದಾಯವನ್ನು ಕಂಡು ಸರ್ವರೂ ವಿಸ್ಮಿತರಾದರು. 

ಆನಂತರ ಪುಂಸವನ ಸಂಸ್ಕಾರವನ್ನು ಜರುಗಿಸಿದರು. ಆಗ ತಿಮ್ಮಣ್ಣಾಚಾರರು ಮಾಗಿದ (ಅಶ್ವಗಂಧಿ) ಫಲಗಳನ್ನು “ಯಾಃ ಫಲಿನೀರ್ಯಾಃ ಅಫಲಾ ಅಪುಷ್ಪಾಶ್ಚ ಪುಷ್ಪಣಿಃ | ಬೃಹಸ್ಪತಿಪ್ರಸೂತಾಸ್ತಾನೋ ಮುಂಚಂತ ಗುಂ ಹಸ” ಇತ್ಯಾದಿ ಫಲ ಮಂತ್ರಗಳನ್ನು ಅಭಿಮಂತ್ರಿಸಿ ವಸ್ತ್ರದಲ್ಲಿ ಹಾಕಿ, ಗರ್ಭಿಣಿಯಾದ ಗೋಪಿಕಾಂಬೆಯ ನಾಸಿಕಾರಂಧ್ರದದ್ವಾರಾ ಹಿಂಡಿ, ಅದರ ರಸವನ್ನು ಗರ್ಭದಲ್ಲಿರುವ ಮಗುವಿಗೆ ಆಹಾರರೂಪದಲ್ಲಿ ಕೊಟ್ಟು ತೃಪ್ತಿಪಡಿಸಿದರು. 

ಇದು ಶಾಸ್ರೋಕ್ತ ಶಿಷ್ಟಾಚಾರವಾಗಿದೆ. ಈ ಸಂಸ್ಕಾರದಿಂದ ಉದರದಲ್ಲಿರುವ ಶಿಶುವ ತೃಪ್ತಿಗೊಂಡು ವೇದಮಂತ್ರ ಪಾತ ಫಲರಸದ ಮಹಿಮೆಯಿಂದ ಸಕಲವೇದಾದಿ ಶಾಸ್ತ್ರಸಾರವನ್ನು ಗ್ರಹಿಸುತ್ತದೆ ಮತ್ತು ಜನನಕ್ಕೆ ಸಂಬಂಧಿಸಿದಂತೆ ಪಟಪಕ್ಷಫಲವನ್ನು ಮಗುವಿಗೆ ಸಮರ್ಪಿಸುವುದರಿಂದ ಜನಿಸುವ ಮಗುವು ಮಹಾತ್ಮನಾಗಿ ವಿಷಯ ವೈರಾಗ್ಯಶೀಲನಾಗಿ ಸನ್ಯಾಸಿಯಾಗಿ ಜೋಳಿಗೆಯಲ್ಲಿ ಭಿಕ್ಷವನ್ನು ಸ್ವೀಕರಿಸಿ ಜಗದ್ವಂದ್ಯನಾಗಿ ಭಕ್ತಸಮುದಾಯವನ್ನು ಕಾಪಾಡುತ್ತಾನೆ ಎಂಬ ಭಾವವನ್ನು ಈ ಪಟಪಕ್ವಫಲರಸಾಸ್ವಾದನ- ರೂಪವಾದ ಸಂಸ್ಕಾರವು ಸೂಚಿಸುತ್ತಿರುವಂತೆ ಆ ಸಮಾರಂಭಕ್ಕೆ ಆಗಮಿಸಿದ್ದ ಜನರು ಭಾವಿಸಿದರು. ಇದು ಸನ್ಯಾಸಿಗಳಿಗೆ ಉಕ್ತವಾದ ಉಪದೇಶರೂಪ ಆಚಾರವನ್ನು ಈ ಸಂಸ್ಕಾರವು ಸೂಚಿಸುತ್ತಿತ್ತು. 

ಸೀಮಂತಕ್ಕೆ ಬಂದಿದ್ದ ಆಚಾರ್ಯರ ಅತ್ತೆ ಮಾವಂದಿರು-ಬಾಂಧವರು ಮಹೋತ್ಸವವು ಮುಗಿದ ಮೇಲೆ ಪ್ರಯಾಣ ಬೆಳೆಸಿದರು. ತಿಮ್ಮಣ್ಣಾಚಾರ್ಯರ ಮಾವಂದಿರು ಮಗಳು ಪೂರ್ಣಗರ್ಭಿಣಿಯಾಗಿರುವುದರಿಂದ ಅವಳಿಗೆ ಸಹಾಯಕರಾಗಿರಲು ತಮ್ಮ ಪತ್ನಿಯನ್ನು, ಮಗಳು ಅಳಿಯಂದಿರ ಕೋರಿಕೆಯಂತೆ ಅಳಿಯನ ಮನೆಯಲ್ಲಿಯೇ ಬಿಟ್ಟು ಊರಿಗೆ ತೆರಳಿದರು. 

ಶ್ರೀ ಶಾಲಿವಾಹನಶಕೆ ೧೫೧೮ ನೆಯ ಮನ್ಮಥನಾಮಸಂವತ್ಸರದ ಫಾಲ್ಗುಣ ಶುಕ್ಲ ಸಪ್ತಮೀ ಗುರುವಾರ 299 ಮೃಗಶಿರಾನಕ್ಷತ್ರದಲ್ಲಿ ಶುಭಗ್ರಹಗಳು ಉಚ್ಚರಾಗಿದ್ದು, ಚಂದ್ರ ಮತ್ತು ಬೃಹಸ್ಪತ್ಯಾದಿ (ಗುರು ಮುಂತಾದ) ಗ್ರಹಗಳು ಪೂರ್ಣದೃಷ್ಟಿಯುಳ್ಳ ಶುಭಲಗ್ನದಲ್ಲಿ ಸ್ವರ್ಗಾಧಿಪತಿಯಾದ ದೇವೇಂದ್ರಸಂಬಂಧಿಯಾದ ಪೂರ್ವದಿಗಂಗನೆಯು ಉಡುರಾಜನಾದ (ದ್ವಿಜೇಂದ್ರ) ಚಂದ್ರನನ್ನು ಪ್ರಸವಿಸಿದಂತೆ ಗೋಪಿಕಾಂಬಾದೇವಿಯವರು ಅಖಿಲದ್ವಿಜರಾಜವಂದನೀಯ ಪಾದಾರವಿಂದನಾದ ಸುತನನ್ನು ಪ್ರಸವಿಸಿದಳು.

ಜಗತ್ತಿನ ಅಜ್ಞಾನಕತ್ತಲೆಯನ್ನು ಪರಿಹರಿಸುವ ದಿನಮಣಿಯುದಯಿಸಿದನು. ಶ್ರೀಮನ್ಮಧ್ವಾಚಾರ್ಯರ ಮಶಸುಧಾಬಿಚಂದ್ರಮನ ಅವತಾರವಾಯಿತು ! ಜಗತ್ಕಲ್ಯಾಣಕಾರಕ, ಜಗದ್ವಂದ್ವ, ಪರಮಮಂಗಳಮೂರ್ತಿಗಳಾದ ಶ್ರೀರಾಘವೇಂದ್ರಗುರುಸಾರ್ವಭೌಮರು ಅವತರಿಸಿದರು !! ಭೂಮಂಡಲದ ಭಾಗ್ಯರವಿ ಧರೆಗಿಳಿದು ಬಂದನು. ಜಗತ್ತಿನ ಕಲ್ಯಾಣದ ನಾಂದಿಯಾಯಿತು !! 

ಗೋಪಿಕಾಂಬಾದೇವಿಯು ಶ್ರೀಗುರುರಾಜರನ್ನು ಪ್ರಸವಿಸಿದ ಸಮಯದಲ್ಲಿ ತಿಮ್ಮಣ್ಣಾಚಾರ್ಯರಿಗಾದ ಅನುಭವ ಪ್ರಸಂಗವು, ಅವತರಿಸಿದ ಪುತ್ರನ ಮಹಿಮಾದಿ ಮಹತ್ವ ಸೂಚಕವಾಗಿದ್ದಿತು. 

ಅಂದು ಬೆಳಗಿನ ಜಾವದಿಂದ ಆಚಾರರ ಮನೆಯಲ್ಲಿ ಸಂಭ್ರಮ, ಗೋಪಮ್ಮ ಪ್ರಸವಿಸುವಕಾಲ ಸನ್ನಿಹಿತವಾಗಿದೆ. ಹಿಂದೆಂದೂ ಕಾಣದ ವಿಲಕ್ಷಣತೇಜಸ್ಸಿನಿಂದ ಬೆಳಗುತ್ತಿದ್ದ ಗೋಪಮ್ಮಗೆ ಪ್ರಸವವೇದನೆ ಪ್ರಾರಂಭವಾಯಿತು. ಗೋಪಮ್ಮನ ತಾಯಿ ಮತ್ತು ಹಿರಿಯ ಬಾಂಧವಸ್ತ್ರೀಯರು ಗೋಪಮ್ಮನನ್ನು ದೇವರಮನೆಗೆ ಕರೆತಂದು ದೇವರಿಗೆ ನಮಸ್ಕಾರಮಾಡಿಸಿದರು. ಅಲ್ಲಿಂದ ಹಜಾರಕ್ಕೆ ಬಂದ ಗೋಪಮ್ಮ ಅಲ್ಲಿ ತೂಗುಬಿಟ್ಟಿದ್ದ ಶ್ರೀಮದ್ದ-ಜಯರಾಜ-ಶ್ರೀಪಾದರಾಜ-ವ್ಯಾಸರಾಜ-ವಿಜಯೀಂದ್ರ ಗುರುಗಳ ತೈಲಚಿತ್ರಗಳಿಗೆ ನಮಸ್ಕರಿಸಿ ಅಲ್ಲಿಯೇ ನಿಂತಿದ್ದಪತಿಗಳಿಗೆ ನಮಸ್ಕರಿಸಿದಳು. ತಿಮ್ಮಣ್ಣಾಚಾರರು ಮಂದಹಾಸಬೀರಿ “ಸೌಮಂಗಲ್ಯಾಭಿವೃದ್ಧಿರಸ್ತು, ಸುಪುತ್ರಾವಾಪ್ತಿರಸ್ತು' ಎಂದು ಹರಸಿದರು. ಹಿರಿಯ ಸ್ತ್ರೀಯರು ಗೋಪಮ್ಮನನ್ನು ಅಂತಗ್ರ್ರಹಕ್ಕೆ ಕರೆದೊದು ತಲ್ಪದಲ್ಲಿ ಕೂಡಿಸಿ ಪ್ರಸವಪೂರ್ವಭಾವೀಸಿದ್ದತೆಯಲ್ಲಿ ತೊಡಗಿದರು. 

ತಿಮ್ಮಣ್ಣಾಚಾರರು ಗುರುರಾಜನೊಡನೆ ಸ್ನಾನಾನೀಕಾದಿಗಳನ್ನು ಪೂರೈಸಿ ಮಗನನ್ನು ಮನೆಯಲ್ಲಿ ಬಿಟ್ಟು ಸನಿಹದಲ್ಲಿದ್ದ ದೇವಾಲಯಕ್ಕೆ ಹೋಗಿ ದೇವರಿಗೆ ನಮಸ್ಕರಿಸಿ, ಪ್ರಾರ್ಥಿಸಿ ಮನೆಯತ್ತ ನಡೆದರು. ಸೂರ್ಯೋದಯವಾಗಿ ಒಂದು ಘಳಿಗೆಯಾಗಿರಬಹುದು. ಇದ್ದಕ್ಕಿದ್ದಂತೆ ಮೋಡಕವಿದಂತಾಗಿ ಒಂದು ನಿಮಿಷಕಾಲ ವೃಷ್ಟಿಯಾಯಿತು ! ಇದೇನಚ್ಚರಿಯೆಂದು ಆಚಾರ್ಯರು ಮನೆಯತ್ತ ಧಾವಿಸಿದರು. ಮನೆಯ ಆವರಕಗೋಡೆಯ ಬಾಗಿಲನ್ನು ತೆಗೆದು ಅಂಗಳದಲ್ಲಿ ಕಾಲಿರಿಸಿದರು. ಅವರ ಮನೆಯ ಎಡ-ಬಲಪಾರ್ಶ್ವಗಳಲ್ಲಿ ಗೋಡೆಗೆ ಹೊಂದಿಕೊಂಡು ಹನ್ನೆರಡು ಅಡಿಗಳೆತ್ತರ ಬೆಳೆದು ಮನೆಯ ಮೇಲ್ಬಾಗವನ್ನು ಛತ್ರಿಯಂತೆ ವಿಸ್ತಾರವಾಗಿ ವ್ಯಾಪಿಸಿದ್ದ ಎರಡು ಪಾರಿಜಾತವೃಕ್ಷಗಳು ಚಲಿಸಿದಂತಾಗಿ ಪಾರಿಜಾತ ಕುಸುಮರಾಶಿಯು ಎಲ್ಲೆಡೆ ವೃಷ್ಟಿಯಾದಂತೆ ಉದುರಿತು ! ಅದೇ ಸಮಯದಲ್ಲಿ ದೇವಾಲಯದಿಂದ ಭೇರಿ-ದುಂದುಭಿ ಮಂಗಳವಾದ್ಯಗಳ ದಿವ್ಯನಿನಾದವು ಕೇಳಿ ಬಂದಿತು ! ಆಚಾರರು ಹೀಗೆ ಅಚ್ಚರಿಯ ಮೇಲಚ್ಚರಿಯನ್ನು ಕಂಡು-ಕೇಳಿ, ಅವ್ಯಕ್ತ ಆನಂದಾನುಭವದಿಂದ ರೋಮಾಂಚಿತರಾಗಿ ಇವೆಲ್ಲವೂ ಶುಭಲಕ್ಷಣಗಳೆಂದು ಹಿಗ್ಗಿ ಮನೆಯನ್ನು ಪ್ರವೇಶಿಸಬೇಕೆನ್ನುವಷ್ಟರಲ್ಲಿ ಗುರುರಾಜ ಹೊರಗೆ ಓಡಿಬಂದು “ಅಪ್ಪಾ ! ನನಗೆ ತಮ್ಮ ಹುಟ್ಟಿದ !” ಎಂದು ಉತ್ಸಾಹದಿಂದ ಹೇಳಿದನು. ಆಚಾರರ ಮುಖ ಪ್ರಪುಲ್ಲವಾಯಿತು. ಆಮಂದಾನಂದಾಂಬುಧಿಯಲ್ಲಿ ಮುಳಿಗೇಳುತ್ತಾ “ಸಂತೋಷ, ಮಗು ! ಶ್ರೀಕಮಲಾಕಾಂತನ ವರ ಫಲಿಸಿತು. ನಮ್ಮ ಕುಲಕೋಟಿ ಉದ್ಧಾರವಾಯಿತು” ಎಂದು ಮನೆಯೊಳಗೆ ಪ್ರವೇಶಿಸಿದರು. 

ಆಚಾರ್ಯರು ಬಂದುದನ್ನರಿತು ಆಚಾರ್ಯರ ಅತ್ತೆ, ಮಗಳು ವೆಂಕಟಾಂಬಾ ಮತ್ತಿಬ್ಬರು ಹಿರಿಯ ಮುತ್ತೈದೆಯರು ಸಂತಸ ಸಂಭ್ರಮಗಳಿಂದ ಪುತ್ರೋತ್ಸವದ ಶುಭವಾರ್ತೆಯನ್ನು ಹೇಳಿ “ಮಗುವು ಅಪೂರ್ವ ತೇಜಸ್ಸು-ಕಾಂತಿಗಳಿಂದ ರಾಜಿಸುತ್ತಿದೆ ! ಆಶ್ಚರ್ಯದ ಸಂಗತಿಯೆಂದರೆ ಮಗುವು ಜನಿಸುವಾಗ ಏನೋ ಒಂದು ಬಗೆಯ ಅಪೂರ್ವ ಕಾಂತಿಯು ಅಂತರ್ಗೃಹದಲ್ಲಿ ಮಿಂಚಿನಂತೆ ಮಿನುಗಿ ಮಾಯವಾಯಿತು ! ಅಬ್ಬಾ, ಅದೆಂಥಹ ಕಾಂತಿ ! ಅದು ಹೇಗಾಯಿತೆಂದು ಹೇಳಲು ಸಾಧ್ಯವಿಲ್ಲ ! ಇದು ಸೋಜಿಗವಲ್ಲವೇ ?” ಎಂದರು. ಆಚಾರರು ಹರ್ಷಪುಳಕಿತರಾದರು. ಭಗವಂತನ ವರ ಸತ್ಯವಾಗುವುದೆಂಬ ವಿಶ್ವಾಸ ಅವರಿಗೆ ಧೃಢವಾಯಿತು. ಅಂದು ಜರುಗಿದ ಆ ಅದ್ಭುತ ರಮ್ಯಪ್ರಸಂಗವು ಜನಿಸಿದ ಮಗುವಿನ ಅಸಾಧಾರಣ ಮಹಿಮಾದ್ಯೋತಕವೆಂದು ಹೇಳಬಹುದು. 

ಪುರಾಣಾದಿಗಳಲ್ಲಿ ಭಗವಂತನ, ಭಗವದ್ಭಕ್ತರ ಅವತಾರವಾದಾಗ ಪುಷ್ಪವೃಷ್ಟಿಯಾಗುವುದು, ಆನಕದುಂದುಭಿಮಂಗಳವಾದ್ಯಗಳು ಮೊಳಗುವುದನ್ನು ಓದಿದ್ದೇವೆ. ಅದೇರೀತಿಯ ಒಂದು ಘಟನೆಯು ನಮ್ಮ ಕಥಾನಾಯಕರ ಅವತಾರಕಾಲದಲ್ಲಿಯೂ ನಡೆದುದು. ಆಶ್ಚರ್ಯವೇನಲ್ಲ ! ಅವತರಿಸಿದ ಮಹನೀಯ ಭಾಗವತಾಗ್ರೇಸರನಾದ ಪ್ರಹ್ಲಾದರಾಜ ! ಅವನಲ್ಲಿ ಶ್ರೀ ಹರಿವಾಯುಗಳ ಸತತಸನ್ನಿಧಾನವಿದೆ. ಲೋಕ ಕಲ್ಯಾಣ, ದೀನದಲಿತ ಜನರ, ಆಪಂಡಿತಪಾಮರರ ಉದ್ಧಾರ, ಸತ್ವ, ಭಾಗವತ ಧರ್ಮಪ್ರಸಾರ, ಧರ್ಮಸಂಸ್ಥಾಪನೆಗಾಗಿಯೇ ಶ್ರೀಪ್ರಹ್ಲಾದ-ಬಾಹ್ಲಿಕ-ವ್ಯಾಸರಾಜರೇ ಮತ್ತೆ ಅವತರಿಸಿದ್ದರಿಂದ ಅಮಂದಾನಂದಭರಿತರಾದ ದೇವತೆಗಳು ಕಾಲ ದೇಶಾನುಸಾರವಾಗಿ ನಿಮೇಷಕಾಲ ಅಮೃತವೃಷ್ಟಿ (ಮಳೆ), ಭೇರಿದುಂದುಭಿಮಂಗಳ ವಾದ್ಯಗಳು (ದೇವಾಲಯದಿಂದ) ರಾಶಿ ರಾಶಿ ಪಾರಿಜಾತಪುಷ್ಪವೃಷ್ಟಿಗೈದರೆಂದು ಭಾವಿಸಿದರೆ ತಪ್ಪಾಗದು. ಶ್ರೀಗುರುರಾಜರು ಅವತರಿಸುವ ಕಾಲದಲ್ಲಿಯೇ ಇವೆಲ್ಲವೂ ಜರುಗಿದ್ದು ಮೇಲಿನ ವಿಚಾರವನ್ನು ದೃಢಪಡಿಸುವುದು. 

ಲೋಕಕಲ್ಯಾಣಕ್ಕಾಗಿ ಶ್ರೀ ವೆಂಕಟೇಶನ ವರದಿಂದ ಅವತರಿಸಿದ ಪ್ರಹ್ಲಾದನೇ ಶ್ರೀರಾಘವೇಂದ್ರ ಗುರುಸಾರ್ವಭೌಮರಾಗಿ ಅವತರಿಸಿದರೆಂಬ ಹರ್ಷದಿಂದ ದೇವತೆಗಳು ಅಮೃತವೃಷ್ಟಿಗೈದರು. ಮಂಗಳವಾದ ದುಂದುಭಿಗಳು ಮೊಳಗಿದವು, ಮಹೇಂದ್ರನ ನಂದನವನದಲ್ಲಿ ವಿರಾಜಿಸುವ ಕಲ್ಪವೃಕ್ಷವು ಮುಂದೆ ಜಗತ್ತಿನಲ್ಲಿ 'ಕಲ್ಪತರು' ಎಂದು ಕೀರ್ತಿಗಳಿಸಲಿರುವ ಶ್ರೀಗುರುರಾಜರ ಅವತಾರದಿಂದ ತನಗಾದ ಆನಂದವನ್ನು ಸೂಚಿಸಲು ಆಚಾರರ ಮನೆಯಲ್ಲಿದ್ದ ಪಾರಿಜಾತತರುವಿನಲ್ಲಿ ಸನ್ನಿಹಿತವಾಗಿ ಪುಷ್ಪವೃಷ್ಟಿ ಮಾಡಿತು ಎಂದು ಧಾರಾಳವಾಗಿ ಹೇಳಬಹುದು. 

ಪುತ್ರೋತ್ಸವವಾದ ಸುವಾರ್ತೆಯೆಂಬ ಅಮೃತಾಬಿಜಲದಲ್ಲಿ ಅಂದರೆ ನದೀಜಲದಲ್ಲಿ ಸ್ನಾನಮಾಡಿದ ಆಚಾರರು ಆನಂದಾಂಬುಧಿಯಲ್ಲಿಯೂ ಮಗ್ನರಾದರು, ಸ್ನಾನ ಮಾಡಿದ ಮಹೋದಯಪುಣ್ಯಕಾಲದಲ್ಲಿ ಪಿತೃದೇವತೆಗಳ ಋಣವೆಂಬ ಕೆಸರಿನ ಸಮುದ್ರದಿಂದಲೂ ಬಿಡುಗಡೆ ಹೊಂದಿದರು. “ಪ್ರಜಯಾ ಪಿತೃಭ” ಎಂಬ ಶ್ರುತಿವಾಕ್ಯದಂತೆ ಆಚಾರರ ಪಿತೃಋಣವು ಪುತ್ರನು ಜನಿಸಿದ್ದರಿಂದ ಪರಿಹಾರವಾಯಿತು.

ಆಚಾರರು ವೃದ್ಧಿ ಕಳೆದ ಮೇಲೆ ಹನ್ನೊಂದನೆಯ ದಿನ ಮಗುವನ್ನು ತೊಟ್ಟಿಲಲ್ಲಿ ಮಲಗಿಸುವ ಹೆಂಗಸರ ಶಾಸ್ತ್ರವನ್ನು ನೆರವೇರಿಸಿದರು. ಮಗುವು ಸಹಜವಾಗಿ “ಕರಾರವಿಂದೇನ ಪದಾರವಿಂದು ! ಮುಖಾರವಿಂದೇ ವಿನಿವೇಶಮಾನಂ” ಎಂಬಂತೆ ತನ್ನ ಪಾದಾಂಗುಷ್ಟವನ್ನು ಬಾಯಲ್ಲಿಟ್ಟು ಚೀಪಿತು ! ಅದನ್ನು ನೋಡಿದವರಿಗೆ “ನನ್ನ ಭಕ್ತ-ಶಿಷ್ಯಜನರು ನನ್ನಿಪಾದಾರವಿಂದವನ್ನು ಸೇವಿಸುತ್ತಾರೆ. ಇದು ಆಗಂತುಕವಾಗಿ ಬಂದುದಲ್ಲ, ಈಗಿನಿಂದಲೂ ಇದೆ” ಎಂದು ತೋರಿಸಲು ಪಾದಾಂಗುಷ್ಟವನ್ನು ಹಿಡಿದು ಬಾಯಲ್ಲಿಟ್ಟು ಚೀಪುತ್ತಿರುವಂತೆ ಕಾಣುತ್ತಿತ್ತು.