ಕಲಿಯುಗ ಕಲ್ಪತರು ಐದನೆಯ ಉಲ್ಲಾಸ ಶ್ರೀರಾಘವೇಂದ್ರಗುರುಸಾರ್ವಭೌಮರು ೧೯. ತಿರುಪತಿಯಲ್ಲಿ ತಪಸ್ಸು-ವರಪ್ರಾಪ್ತಿ
ವೆಂಕಟಾಂಬಾದೇವಿಗೆ ಆರುವರ್ಷ, ಗುರುರಾಜನಿಗೆ ನಾಲ್ಕು ವರ್ಷ ವಯಸ್ಸಾಗಿ ಹುಡುಗರು ಚೆನ್ನಾಗಿ ಬೆಳೆಯುತ್ತಿದ್ದರು. ಚಿ|| ಗುರುರಾಜನು ಜನಿಸಿದ ಮೇಲೆ ಮತ್ತೆ ಆಚಾರ್ಯದಂಪತಿಗಳಿಗೆ ಮಕ್ಕಳಾಗಲಿಲ್ಲ. ವಂಶದಕೀರ್ತಿಯನ್ನು ಬೆಳಗಿಸಿ ಲೋಕಮಾನ್ಯರಾಗಿ ರಾಜಿಸುವ ಮತ್ತೊಬ್ಬ ಪುತ್ರನನ್ನು ಪಡೆಯಲು ಇದು ಸಕಾಲವೆಂದು ಆಚಾರ್ಯರು ನಿಶ್ಚಯಿಸಿದರು. ಒಬ್ಬ ಪುತ್ರನಿಂದ ಹೆಚ್ಚು ಸೌಖ್ಯ ದೊರಕುವುದಿಲ್ಲ. ಇಬ್ಬರು ಪುತ್ರರಿದರೆ ಅಧಿಕಸಂತೋಷವಾಗುವುದು. ದರ್ಶ ಮತ್ತು ಪೂರ್ಣಮಾಸಗಳೆಂಬ ಎರಡು ಯಾಗಗಳು ಪರಸ್ಪರ ಮಿಲಿತವಾಗಿ ಅನುಷ್ಠಿತವಾದರೇನೇ ಅದು ಫಲಪ್ರದವಾಗುವುದು. ಒಂದನ್ನು ಬಿಟ್ಟು ಮತ್ತೊಂದನ್ನಾಚರಿಸಿದರೆ ಫಲಪ್ರದವಾಗದು. ಅದರಂತೆ ಗುರುರಾಜನಿಗೆ ಸಹಾಯಕನಾದ ಸಹೋದರನಿಲ್ಲದೇ ಅವನು ಸುಖಿಯಾಗಲಾರ. ಸಹೋದರನ ಸಹಾಯ ದೊರೆತು ಅಣ್ಣ-ತಮ್ಮಂದಿರಿಬ್ಬರೂ ಒಟ್ಟಾಗಿಸೇರಿದಾಗ ದರ್ಶ-ಪೂರ್ಣವಾಸಗಳಂತೆ ಆ ಪುತ್ರರು ತಮಗೆ ಫಲಪ್ರದರಾಗಿ ಸುಖ ನೀಡುವರೆಂದಾಲೋಚಿಸಿದ ತಿಮ್ಮಣ್ಣಾಚಾರರು ಕುಲದೇವನಾದ ಶ್ರೀನಿವಾಸನಲ್ಲಿ ಮತ್ತೊಬ್ಬ ಪುತ್ರನಿಗಾಗಿ ಪ್ರಾರ್ಥಿಸಿ ಸೇವಿಸಲು ಸಂಸಾರಸಹಿತರಾಗಿ ತಿರುಪತಿಗೆ ದಯಮಾಡಿಸಿದರು.
ಆಚಾರ್ಯ ದುಪತಿಗಳು ಸಂಸಾರಸಹಿತರಾಗಿ ಪರಮಾತ್ಮನ ಸೇವೆಗೆ ಬಂದಿರುವ ವಿಚಾರ ತಿಳಿದು ಶ್ರೀಮಠ ಅಧಿಕಾರಿಗಳೂ, ಆತ್ಮೀಯರೂ ಆದ ಪಂಡಿತ ಜಗನ್ನಾಥಾಚಾರ್ಯರು ಆಚಾರ್ಯರನ್ನು ಪ್ರೀತಿಯಿಂದ ಸ್ವಾಗತಿಸಿ ಅವರಿಗೆ ವಸತಿ-ಭೋಜನಗಳ ಅನುಕೂಲವನ್ನು ಏರ್ಪಡಿಸಿಕೊಟ್ಟು ತಿಮ್ಮಣ್ಣಾಚಾರ್ ದಂಪತಿಗಳು ನಿರಾಲೋಚನೆಯಿಂದ ದೇವರ ಸೇವೆ ಮಾಡಲು ಸಹಾಯಮಾಡಿದರು. ತಿಮ್ಮಣ್ಣಾಚಾರ್ಯ-ಗೋಪಿಕಾಂಬಾದೇವಿಯರು ಆಕಾಶಗಂಗೆ, ಸ್ವಾಮಿಪುಷ್ಕರಣಿಗಳಲ್ಲಿ ಸ್ನಾನಮಾಡಿ ಶ್ರೀವರಾಹದೇವರ ಗುಡಿಯಲ್ಲಿ ಆಕಾದಿಗಳನ್ನು ಮುಗಿಸಿ ಶ್ರೀ ಶ್ರೀನಿವಾಸನ ದರ್ಶನಮಾಡಿ ಸಂಕಲ್ಪ ಪೂರ್ವಕವಾಗಿ ಸೇವೆಯನ್ನು ಪ್ರಾರಂಭಿಸಿದರು.
ಲೋಕಕಲ್ಯಾಣಕಾರನೂ, ಜಗನ್ಮಾನನೂ, ಭಾಗವತಾಗ್ರಣಿಯೂ ಆದ ವಂಶಭೂಷಣನಾದ ಸುತ್ಪುತ್ತನಿಗಾಗಿ ಹಂಬಲಿಸುತ್ತಿದ್ದ ಆಚಾರ್ಯದಂಪತಿಗಳು ಅಂತಹ ಪತ್ರನುದಯಿಸುವ ಪಾತ್ರ ಪವಿತ್ರವಾಗಿರಬೇಕು. ಆ ಮಾತಾ-ಪಿತೃಗಳು ಮನೋವಾಕ್ಕಾಯಗಳಿಂದ ಶುದ್ಧರಾಗಿರಬೇಕಾಗುವುದೆಂಬುದನ್ನು ಅರಿತಿದ್ದ ಶಾಸ್ತ್ರಕೋವಿದರಾದ ತಿಮ್ಮಣ್ಣಾಚಾರ್ಯರು, ಪತ್ನಿಗೆ ಅದನ್ನು ವಿವರವಾಗಿ ತಿಳಿಸಿ, ವ್ರತ-ನಿಯಮ-ಉಪವಾಸಾದಿಗಳಿಂದ ದೇಹದಂಡನೆ ಮಾಡಿ ಭಗವಾನ, ಸೇವೆ, ಪೂಜಾದಿಗಳಿಂದ ಪವಿತ್ರಾತ್ಮರಾಗಿರ- ಬೇಕೆಂದೂ ಬೋಧಿಸಿ, ಕೃಷ್ಣ, ಚಾಂದ್ರಾಯಣ, ಏಕಭುಕ್ತಿ, ಸಚ್ಛಾಸ್ತ್ರಪಾರಾಯಣ, ಪ್ರದಕ್ಷಿಣೆ-ನಮಸ್ಕಾರ-ಪ್ರಾರ್ಥನೆಗಳಿಂದ ಸರ್ವೋತ್ತಮನಾದ ಶ್ರೀವೆಂಕಟೇಶ್ವರನನ್ನು ಒಲಿಸಿಕೊಳ್ಳಲು ಹಗಲಿರಳೂ ಭಕ್ತಿಶ್ರದ್ಧೆಗಳಿಂದ ಸೇವಿಸಲಾರಂಭಿಸಿದರು.
ಮೊದಲು ಪ್ರಾತಃಕಾಲದಿಂದ ಮೂರುನಾಲ್ಕುಗಂಟೆಗಳವರಿಗೆ ಶ್ರೀಮದ್ದ ಮುನಿಗಳ ಸರ್ವಮೂಲಗ್ರಂಥಗಳ ಪಾರಾಯಣ ಮಾಡುತ್ತಿದ್ದರು. ಶ್ರೀತಿಮ್ಮಣ್ಣಾಚಾರ್ಯರು ಗೋಪಿಕಾಂಬಾದೇವಿಯರು ಪರಮಭಕ್ತಿಯಿಂದ ಶ್ರೀವೆಂಕಟೇಶನ ಧ್ಯಾನಮಾಡುತ್ತಾ ಶ್ರೀಪಾದರಾಜ, ವ್ಯಾಸರಾಜ, ವಿಜಯೀಂದ್ರ, ವಾದಿರಾಜ, ಪುರಂದರದಾಸ, ಕನಕದಾಸಾದಿ ಅಪರೋಕ್ಷಜ್ಞಾನಿಗಳು ರಚಿಸಿದ ಶ್ರೀಹರಿಯ ಲೀಲಾವಿಲಾಸ, ಮಹಿಮಾವರ್ಣನಪರ ಪದ, ಪದ್ಯ, ಸುಳಾದಿಗಳನ್ನು ಸುಸ್ವರವಾಗಿ ಗಾನಮಾಡುತ್ತಾ ಪ್ರದಕ್ಷಿಣೆ, ಹೆಜ್ಜೆನಮಸ್ಕಾರಾದಿಗಳಿಂದ ಶ್ರೀರಮಾಜಾನಿಯನ್ನು ಸೇವಿಸಹತ್ತಿದರು. ಹೀಗೆ ದೇಹದಂಡನೆಯಿಂದ, ವ್ರತ-ಉಪವಾಸಗಳಿಂದ ಆ ದಂಪತಿಗಳು ಕೃಶರಾಗಿ ಸೇವಿಸುತ್ತಿದ್ದರೂ ಅವರ ಮುಖದಲ್ಲಿ ಒಂದು ಅಪೂರ್ವ ಕಾಂತಿ-ತೇಜಸ್ಸುಗಳು ಬೆಳಗುತ್ತಿತ್ತು. ಅವರ ದೈವಭಕ್ತಿ, ನಿಷ್ಠೆಗಳನ್ನೂ ಕಂಡು ಸರ್ವರೂ ಅವರ ಬಗೆಗೆ ಗೌರವ ತಾಳಿದರು.
ಒಂದು ದಿನ ಬೆಟ್ಟದ ಮೇಲಿನ ವಿದ್ವಜ್ಜನರು, ಧಾರ್ಮಿಕರು ಆಚಾರ್ಯರಲ್ಲಿ ಬಂದು “ಆಚಾರ್ಯರೇ, ತಮ್ಮ ಈ ಅಮೋಘಸೇವೆ, ಹರಿಭಕ್ತಿ, ಜ್ಞಾನಸಂಪತ್ತುಗಳನ್ನು ಕಂಡು ನಮಗತೀವ ಹರ್ಷವಾಗಿದೆ. ಸ್ವಾಮಿ, “ಭಕ್ತಾಭಾಗವತಂ ಶಾಸ್ತ್ರಂ' ಎಂದು ಪ್ರಮಾಣವಿದೆ. ನಮಗೆ ಬಹುದಿನದಿಂದ ನಿಮ್ಮಂಥ ಜ್ಞಾನಿಗಳ ಮುಖದಿಂದ ಭಾಗವತಶ್ರವಣಮಾಡುವ ಆಕಾಂಕ್ಷೆಯಿತ್ತು. ನೀವು ಮಹಾಪಂಡಿತರು ದಯಮಾಡಿ ನಮಗಾಗಿ ನೀವು ಶ್ರೀಮದ್ಭಾಗವತ ಪುರಾಣವನ್ನು ಅನುವಾದಮಾಡಬೇಕು. ಆದರಿಂದ ಭಗವಂತ ಸುಪ್ರೀತನಾಗಿ ಶೀಘ್ರವಾಗಿ ನಿಮ್ಮ ಕಾಮಿತವನ್ನು ಕರುಣಿಸುತ್ತಾನೆಂದು ನಮಗೆ ಪ್ರೇರಣೆಯಾಗುತ್ತಿದೆ. ಸಚ್ಛಾಸಶ್ರವಣಮಾಡಿದ ನಾವೂ ಧನ್ಯರಾಗುತ್ತೇವೆ” ಎಂದು ಪ್ರಾರ್ಥಿಸಿದರು. ಆಚಾರರು “ಭಗವದಿಚ್ಛೆ, ನಿಮ್ಮ ರೂಪದಲ್ಲಿ ಭಗವಂತ ಆಜ್ಞಾಪಿಸಿದ್ದಾನೆ ಎಂದು ಭಾವಿಸುತ್ತೇನೆ, ಸಂತೋಷ, ನನ್ನ ಯೋಗ್ಯತಾನುಸಾರ ಶ್ರೀಭಾಗವತವನ್ನು ಅನುವಾದ ಮಾಡುತ್ತೇನೆ” ಎಂದು ಹೇಳಿ ಮರುದಿನದಿಂದಲೇ ಭಾಗವತ ಅನುವಾದವನ್ನು ಪ್ರಾರಂಭಿಸಿದರು. ಅಂದಿನಿಂದ ಆಚಾರ್ಯ ದಂಪತಿಗಳು ಮತ್ತಷ್ಟು ನಿಷ್ಠೆಯಿಂದ ಸೇವೆ ಪ್ರಾರಂಭಿಸಿದರು. ಕಶ್ಯಪರು-ಅದಿತಿದೇವಿಯವರು ಭಗವಂತನನ್ನು ಪುತ್ರನನ್ನಾಗಿ ಪಡೆಯಲು ಕ್ಷೀರವ್ರತಾದಿಗಳಿಂದ ಪರಮಾತ್ಮನನ್ನು ಕುರಿತು ತಪಸ್ಸನ್ನಾಚರಿಸಿದಂತೆ ತಾವಾಸಹ ಭಗವದ್ಭಕ್ತನೂ, ದೇವಾಂಶಸಂಭೂತನೂ ಆದ ಪುತ್ರನನ್ನು ಪಡೆಯಲು ಕ್ಷೀರವ್ರತಾನುಷ್ಠಾನವನ್ನು ಕೈಗೊಂಡರು. ಆ ದಂಪತಿಗಳ ಉದರದಿಂದ ಭಾಗವತಾಗ್ರಣಿಯ ಅವತಾರವಾಗಬೇಕಾಗಿದೆ. ಅಂತಹ ಅಸಾಧಾರಣ ಮಹಿಮೆಯುಳ್ಳ ಮಗನನ್ನು ಪಡೆಯಲು ಅರ್ಹತೆಯನ್ನು ಕರುಣಿಸಲೋ ಎಂಬಂತೆ ಶ್ರೀನಿವಾಸನು ಅವರಿಂದ ವಿವಿಧರೀತಿಯಿಂದ ಸೇವೆಯನ್ನು ಸ್ವೀಕರಿಸಿ, ಅವರನ್ನು ಪವಿತ್ರಾತ್ಮರನ್ನಾಗಿಮಾಡಿ ತನ್ನ ಭಕ್ತಾಗ್ರಣಿಯ ಅವತಾರಕ್ಕೆ ಭೂಮಿಕೆಯನ್ನು ಸಿದ್ಧಪಡಿಸಿದನೆಂದು ಹೇಳಿದರೆ ತಪ್ಪಾಗದು. ಭಗವಂತನ ಸೇವೆಯನ್ನು ಆಚಾರ ದಂಪತಿಗಳು ಒಂದು ತಪಸ್ಸಿನಂತೆ ಆಚರಿಸುತ್ತಾ ಪ್ರಾಚೀನ ಋಷಿದಂಪತಿಗಳಂತೆ ಕಂಗೊಳಿಸಿದರು.
ಆಚಾರರು ಬೆಳಗ್ಗೆ ಎಂಟುಘಂಟೆಯಿಂದ ಮಧ್ಯಾಹ್ನ ಮೂರುಘಂಟೆಯವರೆಗೆ ಭಾಗವತ ಅನುವಾದವನ್ನು ಶ್ರೀವಿಮಾನ ಶ್ರೀನಿವಾಸದೇವರ ಸನ್ನಿಧಿಯಲ್ಲಿ ನೆರವೇರಿಸುತ್ತಿದ್ದರು. ನೂರಾರುಜನ ಪಂಡಿತರು, ಧರ್ಮಾಭಿಮಾನಿಗಳು ಇತರ ಸ್ತ್ರೀ-ಪುರುಷರುಗಳು ಭಕ್ತಿಯಿಂದ ಶ್ರವಣಮಾಡುತ್ತಿದ್ದರು. ಆಚಾರರ ಪ್ರವಚನ ಭಕ್ತಿಪ್ರಚೋದಕವೂ ವಿದ್ವತ್ತೂರ್ಣವೂ ಆಗಿತ್ತು. ಅನೇಕ ಗಡುಚಾದ ಪ್ರಮೇಯಭಾಗ ಶಾಸ್ತಾರ್ಥರಹಸ್ಯ, ಶ್ರೀಹರಿಯಲೀಲಾವಿಲಾಸ, ಮಹಿಮಾತಿಶಯ, ಭಕ್ತವಾತ್ಸಲ್ಯಾದಿ ವಿಚಾರಗಳನ್ನು ಸರಳ ಸುಂದರಪದವಿನ್ಯಾಸದಿಂದ ಸಕಲರಿಗೂ ಅರ್ಥವಾಗುವಂತೆ ಅಸ್ಕಲಿತ ವಾಗೈಖರಿಯಿಂದ ನಿರೂಪಿಸುತ್ತಿದ್ದರೆ ಶ್ರಾವಕರು ರೋಮಾಂಚಿತರಾಗಿ ಆನಂದಬಾಷ್ಪಸಿಕ್ತನಯನರಾಗಿ ಹರ್ಷನಿರ್ಭರರಾಗುತ್ತಿದ್ದರು.
ವ್ಯಾಸರಾಜ-ವಿಜಯೀಂದ್ರ ಮಠಾಧಿಕಾರಿಗಳಿಂದ ತಿಮ್ಮಣ್ಣಾಚಾರ್ಯರ ವೀಣಾಪಾಂಡಿತ್ಯ ವಿಚಾರವನ್ನರಿತ ದೇವಾಲಯದ ಅಧಿಕಾರಿಗಳು ಬಂದು ವಿಶೇಷರೀತಿಯಿಂದ ಪ್ರಾರ್ಥಿಸಿದ್ದರಿಂದ ತಿಮ್ಮಣ್ಣಾಚಾರ್ಯರು ತಮ್ಮ ಕುಲಕ್ರಮಾಗತ ವಿದ್ಯೆಯಾದ ವೀಣಾವಾದನದಿಂದಲೂ ಶ್ರೀಹರಿಯ ಸೇವೆ ಸ್ವೀಕರಿಸಲು ಆಶಿಸಿದ್ದಾನೆಂದರಿತು ಸಂತೋಷದಿಂದ ಬೆಳಗಿನಜಾವ, ರಾತ್ರಿ ಶಯನೋತ್ಸವ ಕಾಲಗಳಲ್ಲಿ ತಮ್ಮ ಅಗಾಧ ವೀಣಾವಾದನ ಚಾತುರದಿಂದ ಗಾನರೂಪ ಸೇವೆ ಸಲ್ಲಿಸಿ ಶ್ರೀನಿವಾಸನನ್ನು ಸಂತೋಷಗೊಳಿಸಹತ್ತಿದರು. ಆಚಾರರ ವೀಣಾವಾದನದಿಂದ ಭಕ್ತವೃಂದ ಪರಮಾನಂದಗೊಂಡು ಆಚಾರರನ್ನು ಕೊಂಡಾಡುತ್ತಿತ್ತು.
ಇಂದು ಭಾಗವತ ಸಪ್ತಮಸ್ಕಂಧದಲ್ಲಿ ಪ್ರಹ್ಲಾದರ ಕರೆಗೆ ಓಗೊಟ್ಟು “ಸತ್ಯಂ ವಿಧಾತು ನಿಜಧೃತಭಾಷಿತು”-ತನ್ನ ಸೇವಕನೂ, ಭಕ್ತಾಗ್ರಣಿಯೂ ಆದ ಪ್ರಹ್ಲಾದನು “ಶ್ರೀಹರಿಯು ಎಲ್ಲೆಡೆಯಲ್ಲಿಯೂ ವ್ಯಾಪ್ತನಾಗಿದ್ದಾನೆ - ಅವನೊಬ್ಬನೇ ಸರ್ವೋತ್ತಮನು - ಸರ್ವಶಕ್ತನು” ಎಂದು ಹೇಳಿದ ಮಾತನ್ನು ಸತ್ಯಮಾಡಲು ಶ್ರೀಹರಿಯು ನರಹರಿರೂಪ ತಾಳಿ ಕಂಬ೦ದಿದೊಡೆದು ಬಂದು ಲೋಕಕಂಟಕನಾದ ಹಿರಣ್ಯಕಶಿಪುವನ್ನು ಸಂಹರಿಸಿದಾಗ ಪರಮಾತ್ಮನ ಕೋಪವನ್ನು ಶಾಂತಗೊಳಿಸಲು ಬ್ರಹ್ಮದೇವರು ಪ್ರಹ್ಲಾದನನ್ನೇ ಮುಂದೆಮಾಡಿದಾಗ ಪ್ರಹ್ಲಾದರಾಜ ಭಕ್ತಿಯಿಂದ ಮೈಮರೆತು ಶ್ರೀಹರಿಯನ್ನು ಸ್ತೋತ್ರಮಾಡಿ ಶಾಂತಗೊಳಿಸಿದ ಭಾಗವನ್ನು ಆಚಾರರು ಭಕ್ತಿ ಪರವಶರಾಗಿ ಅನುವಾದಮಾಡುತ್ತಿದ್ದಾರೆ. ನೂರಾರುಜನರು ಆ ಪವಿತ್ರ ಅನುವಾದವನ್ನು ಕೇಳುತ್ತಾ ಪುಳಕಿತಗಾತ್ರರಾಗಿ, ಆನಂದಾಶ್ರುಹರಿಸುತ್ತಾ ಮೈಮರೆತು ಆಲಿಸುತ್ತಿದ್ದಾರೆ. ಅನುವಾದಮಾಡುತ್ತಿರುವ ಆಚಾರರಿಗೂ ಅಂದೇನೋ ಒಂದು ವಿಧ ವಿಚಿತ್ರ ಅವ್ಯಕ್ತ ಆನಂದಾನುಭವವಾಗುತ್ತಿದೆ. ಅನುವಾದ ಮುಂದುವರೆದು ಮಧ್ಯಾಹ್ನ ಮೂರು ಗಂಟೆಗೆ ಪ್ರಹ್ಲಾದರಾಜರ ಪಟ್ಟಾಭಿಷೇಕದೊಡನೆ ಸಪ್ತಮಸ್ಕಂಧ ಅನುವಾದ ಪೂರ್ಣವಾಗಿ ಆಚಾರರು ಮಂಗಳಮಾಡಿದರು. ಸರ್ವರೂ ಆಚಾರರ ಪಾಂಡಿತ್ಯ, ಪ್ರತಿಭೆ, ಅನುವಾದ ವೈಖರಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿ, ಮಂಗಳಪ್ರಸಾದ - ಮಂತ್ರಾಕ್ಷತೆ ಸ್ವೀಕರಿಸಿದರು. ಆಚಾರ್ಯದಂಪತಿಗಳು ದೇವರದರ್ಶನಮಾಡಿ ಅಂದೇ ಕ್ಷೀರವ್ರತದ ಪರಿಸಮಾಪ್ತಿಮಾಡಿ ಭಗವತ್ಪಸಾದವನ್ನು ಸ್ವೀಕರಿಸಿ ಕೃತಾರ್ಥರಾದರು.
ಅಂದು ಶಯನೋತ್ಸವಕಾಲದಲ್ಲಿ ಭಕ್ತಿಪರವಶರಾಗಿ ಆಚಾರರು ವೀಣೆಯನ್ನು ನುಡಿಸುತ್ತಾ ಭಗವಂತನ ಪಾದಗಳಲ್ಲಿಯೇ ನೆಟ್ಟದೃಷ್ಟಿಯಿಟ್ಟು ಹಾಡುತ್ತಿರುವಾಗ ದೇವರಿಗೆ ಹಾಕಿದ ಪುಷ್ಪಹಾರವು ಬಲಭಾಗದಿಂದ ಕಳಚಿಬಿದ್ದಿತು ! ಶ್ರೀಹರಿಯು ವರಪ್ರದಾನಮಾಡಿದನೆಂದು ಆಚಾರದಂಪತಿಗಳು ಪರಮಹರ್ಷಿತರಾಗಿ ಮಂಗಳ ಹಾಡಿ ಪ್ರಸಾದಸ್ವೀಕರಿಸಿ ಬಿಡಾರಕ್ಕೆ ಬಂದು ಹರಿಧ್ಯಾನದಿಂದ ವಿಶ್ರಾಂತಿ ಪಡೆದರು.
ಅಂದು ರಾತ್ರಿ ಕಳೆದು ಬ್ರಾಹ್ಮಮುಹೂರ್ತ ಬರುತ್ತಿರುವ ಸಮಯದಲ್ಲಿ ತಿಮ್ಮಣ್ಣಾಚಾರದಂಪತಿಗಳೊಂದು ಮಧುರ ಸ್ವಪ್ನವನ್ನು ಕಂಡರು ! ಕನಸಿನಲ್ಲಿ ಆ ದಂಪತಿಗಳು ಶ್ರೀನಿವಾಸನ ಗರ್ಭಗುಡಿಯಮುಂದೆ ನಿಂತು ವಂಶಭೂಷಕನಾದ ಸತ್ಪುತ್ರನನ್ನು ಕರುಣಿಸುವಂತೆ ಭಕ್ತಿಯಿಂದ ಪ್ರಾರ್ಥಿಸುತ್ತಿದ್ದಾರೆ. ಆಗ ಏಕಕಾಲದಲ್ಲಿ ಕೋಟಿಸೂರ್ಯರುದಯಿಸಿದಂತಾಗಿ ಆ ಅಪೂರ್ವತೇಜಸ್ಸಿನ ಪ್ರಕಾಶಮಧ್ಯದಲ್ಲಿ ಕೌಸ್ತುಭ, ವನಮಾಲಾ, ಕಿರೀಟಕುಂಡಲಕಂಕಣಹಾರ ವಿಭೂಷಿತನಾಗಿ ಶಂಖ-ಚಕ್ರಧಾರಿಯೂ ಪೀತಾಂಬರಶೋಭಿತನೂ ಆಗಿ ಲೋಕಮೋಹಕ ಸೌಂದರ್ಯರಾಶಿಯಿಂದ ಮಂದಹಾಸವದನಾರವಿಂದನಾಗಿ ಶ್ರೀವೆಂಕಟೇಶ್ವರನು ದರ್ಶನವಿತ್ತು ಅಭಯಪ್ರಧಾನ ಮಾಡುತ್ತಿದ್ದಾನೆ. ಪರಮಾತ್ಮನ ದಿವ್ಯಮಂಗಳ ಸ್ವರೂಪದರ್ಶನದಿಂದ ಪುಳಕಿತಗಾತ್ರರಾದ ತಿಮ್ಮಣ್ಣಾಚಾರ್ಯರು ಆನಂದಬಾಷ್ಪಹರಿಸುತ್ತಾ ಗದ್ಗದಕಂಠದಿಂದ ಶ್ರೀನಿವಾಸನನ್ನು ಸ್ತುತಿಸಲಾರಂಭಿಸಿದರು -
“ದೇವದೇವ ! ಜಗನ್ನಾಥ, ಕಮಲಾಲಯಾಕಮಲಭವಶರ್ವಾದಿ ಸರ್ವಗೀರ್ವಾಣ ಗಣಾರಾಧ್ಯಪಾದಪಂಕಜ ! ಜಗಜ್ಜನ್ಮಾದಿಕಾರಣ, ಅನಂತಕಲ್ಯಾಣಗುಣಪೂರ್ಣ, ದೋಷದೂರ, ಮುಕ್ತಿದಾಯಕ, ವೇದೈಕವೇದ್ಯ, ಮತ್ತುಲಸ್ವಾಮಿನ್, ಭಕ್ತವತ್ಸಲ ! ಈ ದಾಸನಸೇವೆಗೊಲಿದು ಪ್ರಸನ್ನನಾಗಿ ನಮ್ಮನ್ನು ಪೊರೆಯಲು ಮೈದೋರಿದಯಾ ? ಪ್ರಭು ! ನಮ್ಮ ಮನೋರಥವನ್ನು ಪೂರ್ಣಮಾಡಿ ಕಾಪಾಡು” ಎಂದು ಪ್ರಾರ್ಥಿಸಿ ಸಾಷ್ಟಾಂಗವೆರಗಿದರು. ಆಗ ನಗೆಮೊಗದಿಂದ ಶ್ರೀನಿವಾಸನು ವರಪ್ರದಾನ ಮಾಡುತ್ತಾ ಇಂತು ಅಪ್ಪಣೆಕೊಡಿಸಿದನು - “ಆಚಾರ್ಯ, ಕುಮಾರಿ, ನಿಮ್ಮ ತಪಸ್ಸಿನಿಂದ ಪ್ರೀತನಾಗಿದ್ದೇನೆ. ನೀವು ಲೋಕವಿಖ್ಯಾತನೂ ಕುಲಭೂಷಣನೂ ಆದ ಪುತ್ರನನ್ನು ಬಯಸಿದ್ದೀರಿ. ಭಕ್ತವರ ! ತಿಮ್ಮಣ್ಣ, ಇಂದು ನೀನು ನನ್ನ ಭಕ್ತಾಗ್ರಣಿ ಪ್ರಹ್ಲಾದನ ಕಥಾಭಾಗವನ್ನು ಯಥಾವತ್ತಾಗಿ ಭಕ್ತಿಯಿಂದ ಅನುವಾದಮಾಡಿ ನನಗೆ “ಪ್ರಹ್ಲಾದ'ವನ್ನಿತ್ತಿದ್ದೀಯೇ ! 289 ಅದರಿಂದ ಸುಪ್ರೀತನಾದ ನಾನು ನಿನಗೆ “ಪ್ರಹ್ಲಾದ'ವನ್ನೇ ಕರುಣಿಸುತ್ತೇನೆ ! ಆಚಾರ್ಯ. ನನಗತಿ ಪ್ರೀತ್ಯಾಸ್ಪದನೂ, ಭಕ್ತರಲ್ಲಿ ಅಗ್ರಣಿಯೂ ಸತತ ಶ್ರೀವಾಯುದೇವನ ಪರಮಾವೇಶಯುಕ್ತನಾದ, ಮಹಾಮಹಿಮನ ಅವತಾರವಿಂದು ಅವಶ್ಯವಾಗಿರುವುದರಿಂದ ಲೋಕಕಲ್ಯಾಣಕ್ಕಾಗಿ ಆ ಮಹಾತ್ಮನನ್ನೇ ನಿನಗೆ ಪುತ್ರನನ್ನಾಗಿ ಅನುಗ್ರಹಿಸಿದ್ದೇನೆ ! ಆಚಾರ್ಯ, ನಿನಗೆ ಜನಿಸುವ ಪುತ್ರನು, ಜಗತ್ತಿನ ಉದ್ದಾರಕನಾಗಿ, ಸತ್ತತ್ವಸ್ಥಾಪಕನಾಗಿ, ತ್ರಿಲೋಕಗಳಲ್ಲಿಯೂ ಗೀಯಮಾನ ಕೀರ್ತಿ ಸಂಪನ್ನನಾಗಿ ಭಾಗವತಧರ್ಮ ಪ್ರಸಾರಕನಾಗಿ ನಿನ್ನ ವಂಶಮಾತ್ರವಲ್ಲ, ನನ್ನಿಂದ ಪ್ರವೃತ್ತವಾದ ಹಂಸವಂಶದ ಕೀರ್ತಿಯನ್ನೂ ಜಗತ್ತಿನಲ್ಲೆಲ್ಲಾ ಬೆಳಗಿಸಿ ಲೋಕಮಾನ್ಯನಾಗಿ ಮೆರೆಯುವನು ! ಪ್ರೀತ್ಯಾಸ್ಪದನಾದ ಆಚಾರ ! ಭಾಗವತ ಅನುವಾದವನ್ನು ಮುಗಿಸಿ ಮಂಗಳಮಾಡಿ ಧರ್ಮಪತ್ನಿಯೊಡನೆ ನಿನ್ನೂರಿಗೆ ಪ್ರಮಾಣಬೆಳೆಸು. ನಿನಗೆ ಮಂಗಳವಾಗಲಿ” ಎಂದು ಹೇಳಿ ಅದೃಶ್ಯನಾದನು !
ಆ ಕಮನೀಯ ಕನಸಿನ ಕನವರಿಕೆಯಲ್ಲೇ ಆನಂದದ ಕಣ್ಣೀರುಹರಿಸುತ್ತಾ ಮೈಮರೆತಿದ್ದ ಆಚಾರ್ಯದಂಪತಿಗಳು ತಟ್ಟನೆ ಎಚ್ಚರಗೊಂಡರು. ತಮಗಾದ ಸ್ವಪ್ನವನ್ನು ನೆನೆದು ದಂಪತಿಗಳಿಬ್ಬರೂ ತಮಗಾದ ಅನುಭವ-ಭಗವದನುಗ್ರಹಗಳನ್ನು ಪರಸ್ಪರತಿಳಿಸಿ ಆನಂದದಿಂದ ನಲಿದಾಡಿದರು. ಕೂಡಲೇ ಹಾಸಿಗೆಯಿಂದ ಮೇಲೆದ್ದು ಸ್ವಾಮಿಪುಷ್ಕರಣಿಯಲ್ಲಿ ಮಿಂದು ಮಡಿಯುಟ್ಟು ದೇವರದರ್ಶನ ಮಾಡಿ ಪ್ರಾರ್ಥಿಸಿದರು.
ಪರಮಾತ್ಮನ ಅಪ್ಪಣೆಯಂತೆ ಭಾಗವತ ಅನುವಾದ ಮುಗಿಸಿ ಮಂಗಳಮಾಡಿ ಶ್ರೀನಿವಾಸನಿಗೆ ಸೇವೆಸಲ್ಲಿಸಿ ಪ್ರಸಾದ ಸ್ವೀಕರಿಸಿ ಸಂತೋಷದಿಂದ ಪ್ರಯಾಣಬೆಳೆಸಿ ಕಾವೇರೀಪಟ್ಟಣಕ್ಕೆ ಬಂದು ಅಗ್ರಹಾರದಲ್ಲಿ ಸ್ವಗೃಹದಲ್ಲಿ ಭಗವದಾರಾಧನ, ಧ್ಯಾನಮಗ್ನರಾಗಿ ಸತ್ಪುತ್ರನು ಜನಿಸುವ ಶುಭದಿನವನ್ನು ನೀರಿಕ್ಷಿಸುತ್ತಾ ಸಂತೋಷದಿಂದ ಕಾಲ ಕಾಲಕಳೆಯಹತ್ತಿದರು.