ಕಲಿಯುಗ ಕಲ್ಪತರು ಐದನೆಯ ಉಲ್ಲಾಸ ಶ್ರೀರಾಘವೇಂದ್ರಗುರುಸಾರ್ವಭೌಮರು ೧೮. ವಿಜಯನಗರದಲ್ಲಿ ತಿಮ್ಮಣ್ಣಾಚಾರ್ಯರು
ಕುಂಭಕೋಣದಲ್ಲಿ ವಿದ್ಯಾಮಠದಲ್ಲಿ ವಿಜಯೀಂದ್ರರು ಮತ್ತು ಸುಧೀಂದ್ರರು ಒಂದು ದಿನ ಮಧ್ಯಾಹ್ನ ವಿಶ್ರಾಂತಿಯಲ್ಲಿರುವಾಗ ಪಂಡಿತ ತಿಮ್ಮಣ್ಣಾಚಾರರು ಬಂದು ಗುರು-ಶಿಷ್ಯರಿಗೆ ನಮಸ್ಕರಿಸಿ ಕುಳಿತರು. ಅವರನ್ನು ಕಂಡು ಗುರುಗಳ ಮುಖವರಳಿತು.
ಇದೇನು ತಿಮ್ಮಣ್ಣ ಮಡದಿ ಮನೆಗೆ ಬಂದಮೇಲೆ ಮಠ, ಗುರುಗಳನ್ನು ಮರೆತುಬಿಟ್ಟೆಯಾ ?” ಎಂದು ನಕ್ಕರು. ತಿಮ್ಮಣ್ಣರು “ಮರೆತು ಜೀವಿಸಬಹುದೇ ಗುರುವರ್ಯ ನಿಮ್ಮಡಿಯ ! ಬರುತಿಹೆನು ಪ್ರತಿವರುಷ ಗುರುಮಹಾರಾಧನೆಗೆ ! ಬಡಶಿಷ್ಯನಾದೆನ್ನ ಹಂಗಿಸುವುದು ತರವೇ?” ಎಂದು ನಸುನಕ್ಕು ಬಿನ್ನವಿಸಿದರು. ಆಚಾರ್ಯರ ಭಾವಪೂರ್ಣ ಕಾವ್ಯಶೈಲಿಯ ಮಾತನ್ನಾಲಿಸಿ ಉಭಯಗುರುಗಳು ಮಂದಹಾಸಬೀರಿದರು.
ವಿಜಯೀಂದ್ರರು : ಏನೀ ಅಪೂರ್ವ ಭೇಟಿ ?
ತಿಮ್ಮಣ್ಣ : ಕಿರಿಯಗುರುಗಳ ಮಹಾದಿಗ್ವಿಜಯ ರಾಜಮಾನ್ಯತೆಗಳನ್ನು ಕೇಳಿ ಮೈಮರೆತು ಗುರುದರ್ಶನಕ್ಕಾಗಿ ಬಂದೆ. ಕಿರಿಯ ಶ್ರೀಪಾದಂಗಳವರ ಈ ವಿಜಯ ಪರಂಪರೆ ಮಹಾಸಂಸ್ಥಾನದ ಕೀರ್ತಿಯನ್ನು ಬೆಳಗಿಸಿದೆ. ನಮಗೆಲ್ಲ ಈ ವಿಜಯ ಬಹುಹೆಮ್ಮೆಯನ್ನುಂಟುಮಾಡಿದೆ.
ಶ್ರೀಸುಧೀಂದ್ರರು ಆಚಾರ್ಯರವಚನದಿಂದ ಸುಪ್ರಸನ್ನರಾಗಿ ದಿಗ್ವಿಜಯದ ಎಲ್ಲ ಸಮಾಚಾರಗಳನ್ನೂ ಆತ್ಮೀಯತೆಯಿಂದ ವಿವರವಾಗಿ ತಿಳಿಸಿದರು. ವಿಜಯೀಂದ್ರರು ಮುಗುಳುನಗೆಯಿಂದ ತಿಮ್ಮಣ್ಣ ! ಮಡದಿಯ ಮೋಹದಲ್ಲಿ ಮುಳಗಿ ಮಠವನ್ನು ಮರೆತ ನಿನಗೆ ಶಿಕ್ಷೆ ವಿಧಿಸುತ್ತೇವೆ' ಎಂದರು. ತಿಮ್ಮಣ್ಣಾಚಾರ್ಯರು “ಸಂತೋಷದಿಂದ ಅನುಭವಿಸುತ್ತೇನೆ” ಎಂದು ವಿಜ್ಞಾಪಿಸಲು ಹಿರಿಯಗುರುಗಳು “ಏನಿಷ್ಟು ಧೈರವಾಗಿ ಹೇಳುತ್ತಿರುವೆಯಲ್ಲಾ?” ಎಂದು ಅಚ್ಚರಿಯಿಂದ ಪ್ರಶ್ನಿಸಿದರು. ಆಚಾರರು “ಗುರುಗಳು ನನಗೆ ನೀಡುವ ಶಿಕ್ಷೆ ಇನ್ನೇನು ? ಯಾವುದೋ ಒಂದು ಮಹತ್ಕಾರದಲ್ಲಿ ತೊಡಗಿಸುವುದು ತಾನೆ ? ಅಂತೆಯೇ ಈ ಧೈರ್ಯ” ಎನಲು ಉಭಯಗುರುಗಳೂ ನಗಹತ್ತಿದರು.
ಅನಂತರ ವಿಜಯೀಂದ್ರರು ಆನೆಗುಂದಿ (ವಿಜಯನಗರ)ಯ ಶಿಷ್ಯಭಕ್ತರು ಅಲ್ಲೊಂದು ವಿದ್ಯಾಪೀಠ ಸ್ಥಾಪಿಸಿ ಅಲ್ಲಿನ ಜನರಿಗೆ ವಿದ್ಯಾದಾನ ಮಾಡಬೇಕೆಂದು ಪ್ರಾರ್ಥಿಸಿರುವ ವಿಚಾರತಿಳಿಸಿ ಆ ವಿದ್ಯಾಪೀಠನಿರ್ವಹಣೆಗೆ ಇಬ್ಬರು ತರುಣಪಂಡಿತರೊಡನೆ ತಿಮ್ಮಣ್ಣಾಚಾರ್ಯರನ್ನು ಅಧ್ಯಕ್ಷರನ್ನಾಗಿ ನಿಯಮಿಸಬೇಕೆಂಬ ತಮ್ಮ ಆಶಯವನ್ನು ಕೇಳಿ ಪತ್ರೀಸಹಿತರಾಗಿ ಆನೆಗೊಂದಿಗೆ ಹೊರಡಲು ಸಿದ್ಧರಾಗಬೇಕೆಂದು ಆಜ್ಞಾಪಿಸಿದರು. ಗುರುಗಳ ಅಪ್ಪಣೆಯಂತೆ ತಿಮ್ಮಣ್ಣಾಚಾರ್ಯರು ರಾಮಚಂದ್ರಪುರಾಗ್ರಹಾರ- ದಲ್ಲಿರುವ ತಮ್ಮ ಮನೆ-ಗದ್ದೆ ಮುಂತಾದುವುಗಳ ರಕ್ಷಣೆಭಾರವನ್ನು ತಮ್ಮ ಮಿತ್ರರಿಗೊಪ್ಪಿಸಿ ಪತ್ನಿ ಗೋಪಿಕಾಂಬಾದೇವಿಯರೊಡನೆ ಕುಂಭಕೋಣಕ್ಕೆ ಬಂದು ಶ್ರೀಯವರ ಅಪ್ಪಣೆ ಪಡೆದು ಇಬ್ಬರು ತರುಣಪಂಡಿತರೊಡನೆ ಆನೆಗೊಂದಿಗೆ ಪ್ರಯಾಣಬೆಳೆಸಿದರು.
ವಿಜಯನಗರದ ಲೌಕಿಕವೈದಿಕ-ಶ್ರೀಮಂತರು-ಧಾರ್ಮಿಕರು ತಮ್ಮ ಕೋರಿಕೆಯಂತೆ ಗುರುಗಳು ಆಚಾರ್ಯರನ್ನೂ ಪಂಡಿತರನ್ನೂ ಕಳುಹಿಸಿಕೊಟ್ಟು ಉಪಕರಿಸಿದ್ದರಿಂದ ಹರ್ಷಿತರಾಗಿ ಆಚಾರ್ಯದಂಪತಿಗಳಿಗೂ, ಪಂಡಿತರಿಗೂ ವಸತಿ ಮತ್ತು ಜೀವನಾನುಕೂಲಗಳನ್ನೇರ್ಪಡಿಸಿಕೊಟ್ಟು ಒಂದು ಶುಭದಿನ ಆಚಾರ್ಯರ ನೇತೃತ್ವದಲ್ಲಿ ವಿದ್ಯಾಪೀಠವನ್ನು ಪ್ರಾರಂಭಮಾಡಿಸಿದರು. ಬಾಲ್ಯಪಾಠಗಳಿಂದಾರಂಭಿಸಿ, ಕಾವ್ಯನಾಟಕಾಧಿಸಾಹಿತ್ಯ-ನ್ಯಾಯ-ವ್ಯಾಕರಣ-ವೇದಾಂತಶಾಸ್ತ್ರಗಳ ಪಾಠಪ್ರವಚನಕ್ಕೆ ಅನೇಕ ತರಗತಿಗಳನ್ನೇರ್ಪಡಿಸಿ ಪಾಠಪ್ರವಚನ ಪ್ರಾರಂಭಿಸಲಾಯಿತು. ಮೊದಲು ನಲವತ್ತು ಜನವಿದ್ಯಾರ್ಥಿಗಳಿಗೆ ಆಚಾರ್ಯರು ಮತ್ತು ತರುಣಪಂಡಿತರು ಪಾಠಹೇಳಲಾರಂಭಿಸಿದರು. ಆರೇಳು ತಿಂಗಳುಗಳಲ್ಲಿ ಸುಮಾರು ನೂರುಜನ ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ಸೇರಿ ವಿವಿಧಶಾಸ್ತ್ರ, ವೇದಾದಿಗಳನ್ನು ಅಧ್ಯಯನಮಾಡಲಾರಂಭಿಸಿದರು. ತಿಮ್ಮಣ್ಣಾಚಾರ್ಯರು ಸ್ವತಃ ಶ್ರದ್ಧೆಯಿಂದ ವಿದ್ಯಾರ್ಥಿಗಳಿಗೆ ಪ್ರೀತ್ಯಾದರಗಳಿಂದ ಪಾಠಹೇಳುತ್ತಿದ್ದರು. ತರುಣಪಂಡಿತರೂ ಪಾಠಪ್ರವಚನ ಅನುಭವವನ್ನುಂಟುಮಾಡಿಕೊಡುತ್ತಿದ್ದರು. ಇದರಿಂದಾಗಿ ಸ್ವಲ್ಪಕಾಲದಲ್ಲಿಯೇ ವಿದ್ಯಾಪೀಠವು ಅಭಿವೃದ್ಧಿಸುತ್ತಾ ಕೀರ್ತಿಗಳಿಸಿತು. ತಿಮ್ಮಣ್ಣಾಚಾರ್ಯರು ಶ್ರೀವಿಜಯೀಂದ್ರರು ಆಜ್ಞಾಪಿಸಿದಂತೆ ಒಂದು ವರ್ಷ ಅಲ್ಲಿದ್ದು ವಿದ್ಯಾಪೀಠವನ್ನು ಉತ್ತಮಸ್ಥಿತಿಗೆ ತಂದು ಪರಿಣತರಾದ ತರುಣಪಂಡಿತರಿಗೆ ಅದನ್ನು ಮುಂದುವರೆಸಿಕೊಂಡು ಹೋಗುವಹೊಣೆಯನ್ನೊಪ್ಪಿಸಿ ಪತ್ನಿ ಸಮೇತರಾಗಿ ಹೊರಡಲು ಸಿದ್ಧರಾದರು. ಆಚಾರ್ಯರಪಾಂಡಿತ್ಯ, ತೇಜಸ್ಸು, ಪಾಠಕ್ರಮ, ಸದಾಚಾರ-ಶೀಲಾದಿಗುಣಗಳಿಂದ ಪ್ರಭಾವಿತರಾಗಿ ಅವರಲ್ಲಿ ಅಪಾರ ಗೌರವ ಮಾಡುತ್ತಿದ್ದ ಪುರಜನರು ಆಚಾರರನ್ನು ಚೆನ್ನಾಗಿ ಸನ್ಮಾನಿಸಿ ಕಳುಹಿಸಿಕೊಟ್ಟರು.
ಶ್ರೀತಿಮ್ಮಣ್ಣಾಚಾರ್ಯರಿಗೆ ವಿವಾಹವಾಗಿ ಹತ್ತು ವರ್ಷಗಳಾಗಿದ್ದರೂ ಸಂತಾನವಾಗಿರಲಿಲ್ಲ. ಅದು ಆ ದಂಪತಿಗಳಿಗೆ ಚಿಂತೆಗೆ ಕಾರಣವಾಗಿತ್ತು. ಗೋಪಿಕಾಂಬಾದೇವಿಯರು ಸಂತಾನಕ್ಕಾಗಿ ಕುಲದೇವ ಶ್ರೀನಿವಾಸದೇವರಿಗೆ ಶರಣುಹೋಗಲು ನಿರ್ಧರಿಸಿ ಪತ್ನಿಗೆ ತಮ್ಮಾಶಯವನ್ನು ನಿವೇದಿಸಿದರು. ತಿಮ್ಮಣ್ಣಾಚಾರ್ಯರು ಪತ್ನಿಯ ಸಲಹೆಯಿಂದ ಆನಂದಿಸಿ, ಸಕಲ ಭಕ್ತಜನರ ಕಾಮಿತಗಳನ್ನು ಕರುಣಿಸಿರುವುದರಲ್ಲಿ ದಕ್ಷನೂ, ಶೇಷಾಚಲಭೂಷಾಮಣಿಯೂ ಆದ ಭಗವಾನ್ ಶ್ರೀನಿವಾಸನ ದರ್ಶನಾಕಾಂಕ್ಷಿಗಳಾಗಿ ಪತ್ರೀಸಹಿತರಾಗಿ ರಾಜಯೋಗ್ಯವಾದ ಆ ನಗರದಿಂದ ತಿರುಪತಿಗೆ ಪ್ರಯಾಣಬೆಳೆಸಿದರು.283 ತಿರುಪತಿಗೆ ಬಂದ ಆಚಾರ್ಯರು ಪಸಹಿತರಾಗಿ ಭಗರ್ವಾ ಶ್ರೀವೆಂಕಟೇಶ್ವರನನ್ನು ಸೇವಿಸಹತ್ತಿದರು. ಭಗವಂತನನ್ನು ಸಂತೋಷಪಡಿಸದಿದ್ದರೆ ಸಂತಾನಸುಖವು ಜನರಿಗುಂಟಾಗುವುದೆಂತು? ಅಂತೆಯೇ ತಮ್ಮ ವಂಶದ ಪೂರ್ವಜರಿಂದ ವಂದ್ಯನೂ, ಇಂದಿರಾಪತಿಯೂ, ಕುಲದೇವನೂ ಆದ ಶ್ರೀನಿವಾಸನನ್ನು ಪುತ್ರಿ ಮತ್ತು ಪುತ್ರರಿಗಾಗಿ ಸೇವಾದಿಗಳಿಂದ ಸಂತೋಷಪಡಿಸಿದರು.
ಆಚಾರ್ಯದಂಪತಿಗಳ ಸೇವೆಯಿಂದ ಪ್ರೀತನಾದ ಶ್ರೀನಿವಾಸ ಅನುಗ್ರಹವನ್ನು ಮಾಡಿದನು. ದೇವದೇವನನ್ನು ಸೇವಿಸಿ ಪ್ರಸಾದಸ್ವೀಕರಿಸಿ ತಿರುಪತಿಯಿಂದ ಹೊರಟು ಕುಂಭಕೋಣೆಗೆ ಬಂದು ಉಭಯಗುರುಗಳಲ್ಲಿ ಎಲ್ಲಾ ವಿಚಾರಗಳನ್ನು ವಿಜ್ಞಾಪಿಸಿ ಕೆಲಕಾಲ ಕಾವೇರಿಪಟ್ಟಣದಲ್ಲಿ ವಾಸಮಾಡಲು ಆಶಿಸಿ ಗುರುಗಳ ಅಪ್ಪಣೆಪಡೆದು ತುಂಡೀರ ಮಂಡಲದಲ್ಲಿರುವ ಕಾವೇರಿಪಟ್ಟಣದ ಅಗ್ರಹಾರದಲ್ಲಿ ವಾಸಿಸಲು ಯೋಗ್ಯವಾದ ತಮ್ಮ ಸ್ವಂತಗೃಹದಲ್ಲಿ ಕಮಲಾಕಾಂತನನ್ನು ಪ್ರಸನ್ನೀಕರಿಸಿಕೊಳ್ಳುತ್ತಾ ಪತ್ನಿಯೊಡನೆ ಕೆಲವರ್ಷಗಳಕಾಲ ವಾಸಮಾಡಿದರು.
ಶ್ರೀನಿವಾಸದೇವರ ಅನುಗ್ರಹದಿಂದ ಗೋಪಿಕಾಂಬಾದೇವಿಯರು ಗರ್ಭಧರಿಸಿದರು. ತಿಮ್ಮಣ್ಣಾಚಾರ್ಯರಿಗೆ ಪರಮಾನಂದವಾಯಿತು. ಭಗವತ್ನಸಾದದಿಂದ ಗೋಪಿಕಾಂಬಾದೇವಿಯರು ಗುಣವಂತಳಾದ ಮಗಳನ್ನೂ ಮರುವರ್ಷವೇ ಗುಣಸಾಗರನಾದ ಮಗನನ್ನೂ ಮುಂದೆಜನಿಸಲಿರುವ ಪುತ್ರನ ತೂಗಲಸದಳವಾದ ಪ್ರತಾಪದಂತೆಯೂ ಪಡೆದರು. ಕುಲದೇವನಾದ ರಮಾರಮಣ ವೇಂಕಟೇಶ್ವರನ ಅನುಗ್ರಹ ಶ್ರೀವಿಜಯೀಂದ್ರಗುರುಗಳ ಹಾಗೂ ಹಿರಿಯ ಆಶೀರ್ವಾದಗಳಿಂದ ಜನಿಸಿದ ಪುತ್ರಿ ಮತ್ತು ಪುತ್ರನಿಗೆ ನಾಮಕರಣ ಮಹೋತ್ಸವವನ್ನು ಜರುಗಿಸಿ ಮಗಳಿಗೆ “ವೆಂಕಟಾಂಬಾ” ಎಂದೂ, ಮಗನಿಗೆ “ಗುರುರಾಜ, ಎಂತಲೂ ಆಚಾರ್ಯರು ನಾಮಕರಣಮಾಡಿದರು. ತಿಮ್ಮಣ್ಣಾಚಾರ್ಯರು ದಿನೇ ದಿನೇ ವರ್ಧಿಸುತ್ತಿರುವ ಪುತ್ರಿಕಾ-ಪುತ್ರರು ಮತ್ತು ಅತುಲ ಸಂಪತ್ತುಗಳಿಂದ ಶೋಭಿಸಿ ಆನಂದದಿಂದ ಮೆರೆದರು.
ತಿಮ್ಮಣ್ಣಾಚಾರ್ಯರು ಮೂರನೆಯವರ್ಷದಲ್ಲಿ ಗುರುರಾಜನಿಗೆ ಚೌಲ-ಅಕ್ಷರಾಭ್ಯಾಸ ಸಮಾರಂಭವನ್ನು ನೆರವೇರಿಸಿದರು. ಪ್ರತಿಭಾಸಂಪನ್ನರೂ, ತೀಕ್ಷಮತಿಗಳೂ ಆದ ವೆಂಕಟಾಂಬಾ-ಗುರುರಾಜರಿಗೆ ನಾನಾ ಲಿಪಿ, ಕೋಶ, ಧಾತುರೂಪಾವಳಿ ಮುಂತಾದ ಬಾಲಪಾಠಗಳನ್ನು ಹೇಳಿಕೊಡಲಾರಂಭಿಸಿದರು. ಅದರಂತೆ ವೀಣಾಭ್ಯಾಸವನ್ನೂ ಮಾಡಿಸಿದರು. ಹುಡುಗರಿಬ್ಬರೂ ವಿದ್ಯೆಯಲ್ಲಿ ಪ್ರಗತಿತೋರಿಸುತ್ತಾ ತಂದೆ-ತಾಯಿಯರಿಗೆ ಆನಂದ ತಂದೀಯುತ್ತಾ ಬೆಳೆಯಹತ್ತಿದರು.