|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೭. ಶ್ರೀಸುಧೀಂದ್ರರ ಅಭ್ಯುದಯ - ದಿಗ್ವಿಜಯ

ಶ್ರೀಮಧ್ವಸಿದ್ಧಾಂತದಲ್ಲಿ ಶ್ರೀವಿಜಯೀಂದ್ರರು-ಶ್ರೀಸುಧೀಂದ್ರರ ಸ್ಥಾನಮಾನಗಳು ಅಸಾಧಾರಣವಾದುದು, ಶ್ರೀಮಧ್ವಾಚಾರ್ಯರ ತರುವಾಯ ಅಂದರೆ ಭಾಷ್ಯಕಾರರ ತರುವಾಯ ಪ್ರಥಮ ಟಿಪ್ಪಣಿಕಾರರವರೆಗೆ ಶ್ರೀಪದ್ಮನಾಭು-ನರಹರಿ- ಮಾಧವಾಭ್ಯತೀರ್ಥ-ಟೀಕಾಚಾರ್ಯರು-ಶ್ರೀರಾಜೇಂದ್ರ-ಕವೀಂದ್ರ-ವಿಭುಧೇಂದ್ರ-ಶ್ರೀಪಾದರಾಜ-ವ್ಯಾಸರಾಜರುಗಳು ಅದಾವ ಒಂದು ಮಹತ್ವಪೂರ್ಣ ಪಾತ್ರವಹಿಸಿ ದೈತಸಿದ್ಧಾಂತದ ವಿಜಯದುಂದುಭಿಯನ್ನು ಮೊಳಗಿಸಿದರೋ, ಅಂತಹುದೇ ಮಹತ್ಕಾರ್ಯವನ್ನು ನೆರವೇರಿಸಿ ದೈತವಿಜಯಪತಾಕೆಯನ್ನು ಹಾರಿಸಿದ ಮಹಾನುಭಾವರು ಶ್ರೀವಿಜಯೀಂದ್ರರು ಮತ್ತು ಶ್ರೀಸುಧೀಂದ್ರತೀರ್ಥ ಗುರುವರ್ಯರು ! 

ದೈತಸಿದ್ಧಾಂತದ ಪ್ರಥಮ ಟಿಪ್ಪಣಿಕಾರರಾದ ಶ್ರೀವ್ಯಾಸರಾಜರ ತರುವಾಯ ಟಿಪ್ಪಣಾಚಾರ್ಯ ಚಕ್ರವರ್ತಿಗಳಾದ ಶ್ರೀರಾಘವೇಂದ್ರಸ್ವಾಮಿಗಳವರೆಗೆ (೧೫೩೯ ರಿಂದ ೧೬೨೧ ರವರೆಗೆ) ೮೧ ವರ್ಷಗಳ ಕಾಲ ತಮ್ಮ ಪಾಂಡಿತ್ಯ-ಪ್ರತಿಭೆ- ಗ್ರಂಥರಚನೆ-ಪಾಠಪ್ರವಚನ-ಪರವಾದಿದಿಗ್ವಿಜಯ್-ಸಿದ್ಧಾಂತಸ್ಥಾಪನೆ-ವೈದಿಕಮತ-ಪಂಡಿತ-ಧಾರ್ಮಿಕ ರಕ್ಷಣೆ-ಪೋಷಣೆ ಪ್ರೋತ್ಸಾಹ-ಲೋಕಕಲ್ಯಾಣಾದಿಕಾರ್ಯಗಳಿಂದ ದೈತಸಿದ್ಧಾಂತದ, ಮಹಾಸಂಸ್ಥಾನದ, ಭಾರತೀಯ ಧರ್ಮ-ಸಂಸ ತಿಗಳ ವಿಜಯವೈಜಯಂತಿಯನ್ನು ಮೆರೆಸಿ ಲೋಕಮಾನ್ಯತೆಯನ್ನು ಗಳಿಸಿದ ಮಹಾಮಹಿಮರು ಈ ಗುರುಶಿಷ್ಯರು ! 

ಶ್ರೀವಿಜಯೀಂದ್ರರ ಪಾಂಡಿತ್ಯಾತಿಶಯವನ್ನು 'ಶ್ರೀರಾಘವೇಂದ್ರವಿಜಯ'ಕಾರರು ಬಹುಹೃದಯಂಗಮವಾಗಿ ವರ್ಣಿಸಿದ್ದಾರೆ - 

ವಾಕ್ಯ ಪದೇ ಪಾದವಿಲೋಚನೋಕೌ ವ್ಯಾಸೀಯಶಾಸ್ತ್ರ ಚ ಕೃತಾನ್ನಬಂಧಾನ್ | 

ಆಸ್ತಾಂ ಬುಧಾಃ ಶೋತುಮಶೇಷಮೇಷಾಮಾಖ್ಯಾಮಾಖ್ಯಾದ್ಯದಿ ಪಂಡಿತೋSಸ್ || 

ಪೂರ್ವಮೀಮಾಂಸಾಶಾಸ್ತ್ರ, ವ್ಯಾಕರಣಶಾಸ್ತ್ರ, ಅಕ್ಷಪಾದಪ್ರಣೀತ ತರ್ಕಶಾಸ್ತ್ರಮತ್ತು ಶ್ರೀವೇದವ್ಯಾಸದೇವರ ಬ್ರಹ್ಮ ಮೀಮಾಂಸಾ ಶಾಸ್ತ್ರಗಳಲ್ಲಿ ಶ್ರೀವಿಜಯೀಂದ್ರರು ರಚಿಸಿರುವ ನೂರಾನಾಲ್ಕು ಗ್ರಂಥಗಳನ್ನು ವ್ಯಾಸಂಗ (ಶ್ರವಣ) ಮಾಡುವುದಿರಲಿ; ಅವರು ರಚಿಸಿದ ಎಲ್ಲಾ ಗ್ರಂಥಗಳ ಹೆಸರನ್ನು ಒಂದೂ ಬಿಡದೇ ಹೇಳಿದ ಪಕ್ಷದಲ್ಲಿ ಅಂಥವನನ್ನು ಮಹಾಪಂಡಿತನೆಂದು ಹೇಳಬಹುದು ! ಶ್ರೀಗಳವರು ನೂರಾರುಗ್ರಂಥಗಳನ್ನು ರಚಿಸಿರುವರು. ಮಾನವನ ವಯೋಮಿತಿ ಸ್ವಲ್ಪ, ಆ ವಯೋಮಿತಿಯಲ್ಲಿ ಎಲ್ಲ ಗ್ರಂಥಗಳನ್ನೂ ಅಧ್ಯಯನ ಮಾಡಲು ಸಾಧ್ಯವೇ ಇಲ್ಲವಾದ್ದರಿಂದ, ಅವರ ಗ್ರಂಥಗಳ ಹೆಸರುಗಳನ್ನು ಹೇಳಿದವನೇ ಪಂಡಿತನೆಂದು ಹೇಳಬಹುದು - ಎಂದು ಉದ್ಧರಿಸಿದ್ದಾರೆ ! ಶ್ರೀಸುಧೀಂದ್ರರೂ ತಮ್ಮ ಗುರುಗಳಂತೆಯೇ “ಸರ್ವತಂತ್ರಸ್ವತಂತ್ರರಾಗಿ ಅನೇಕ ಪ್ರೌಢಗ್ರಂಥಗಳನ್ನು ರಚಿಸಿ, ಎಲ್ಲಾ ಶಾಸ್ತ್ರಗಳಲ್ಲಿ ಕೃತಿ ರಚಿಸಿ ಖ್ಯಾತರಾಗಿದ್ದಾರೆ. 

ವಿಜಯೀಂದ್ರತೀರ್ಥರು ಏಳೆಂಟು ವರ್ಷ ಸಂಚಾರ ಹೊರಡದೇ ಕುಂಭಕೋಣದಲ್ಲೇ ಶ್ರೀಸುಧೀಂದ್ರರಿಗೆ ಪಾಠಪ್ರವಚನಮಾಡಿಸುತ್ತಿದ್ದರು, ಈಗ ಪ್ರಿಯಶಿಷ್ಯರು ಮಹಾಪಂಡಿತರಾಗಿ ಖ್ಯಾತಿ ಗಳಿಸಿದ್ದರು. ಆದ್ದರಿಂದ ಅವರನ್ನು ದಿಗ್ವಿಜಯಯಾತ್ರೆಗೆ ಕಳುಹಿಸಲಾಶಿಸಿ, ಶಿಷ್ಯರಿಗೆ ಅದನ್ನು ತಿಳಿಸಿ ಮಠದ ಪ್ರಮುಖ ಪಂಡಿತಮಂಡಳಿಯೊಡನೆ ಚಿಕ್ಕ ಸಂಸ್ಥಾನವನ್ನು ದಯಪಾಲಿಸಿ ಆಶೀರ್ವದಿಸಿ ದಿಗ್ವಿಜಯಕ್ಕಾಗಿ ಕಳುಹಿಸಿಕೊಟ್ಟರು. ಶ್ರೀಸುಧೀಂದ್ರತೀರ್ಥರು ಉತ್ತರಭಾರತಸಂಚಾರ ಕೈಗೊಂಡು ಮಥುರಾ, ವೃಂದಾವನ, ಹರಿದ್ವಾರ, ಹೃಷಿಕೇಶ, ಗಯಾ, ಬದರಿ, ದೆಹಲಿ, ಕುರುಕ್ಷೇತ್ರ, ಕಾಶ್ಮೀರ, ಕಾಶಿ, ಪ್ರಯಾಗಗಳಿಗೆ ಭೇಟಿ ನೀಡಿ ಅಲ್ಲಿನ ಭಗವದರ್ಶನ ಸೇವನ ತೀರ್ಥಸ್ಥಾನಾದಿಗಳಿಂದ ಕೃತಾರ್ಥರಾಗಿ ಅಲ್ಲಲ್ಲಿನ 'ಪ್ರಖ್ಯಾತಪಂಡಿತರೊಡನೆ ವಿವಿಧಶಾಸ್ತ್ರಗಳಲ್ಲಿ ವಾದಮಾಡಿ ಜಯಗಳಿಸಿ, ಆಯಾ ದೇಶದ ರಾಜ-ಮಹಾರಾಜರಿಂದ ಸೇವಿತರಾಗಿ, ರಾಜಾಸ್ಥಾನದತ್ತ ಹೊರಟು ಬರೋಡಾ, ಜಯಪುರಗಳ ರಾಜಾಸ್ಥಾನ ಪಂಡಿತರನ್ನು ವಾಕ್ಯಾರ್ಥದಲ್ಲಿ ಸೋಲಿಸಿ ಆಯಾ ರಾಜರಿಂದ ವಿಶೇಷ ಸನ್ಮಾನಿತರಾಗಿ ದೈತಮತ ಪ್ರಚಾರ - ಲೋಕಕಲ್ಯಾಣಗಳನ್ನೆಸಗಿ ಕೀರ್ತಿಗಳಿಸಿದರು. 

ಶ್ರೀಯವರ ಜ್ಞಾನ-ಭಕ್ತಿ-ವೈರಾಗ್ಯಗಳ ಕೀರ್ತಿಯನ್ನು ಕೇಳಿದ್ದ ಗ್ವಾಲಿಯರ್ ಮಹಾರಾಜ ಸಿಂಧೆಯು ಶ್ರೀಯವರನ್ನು ತನ್ನ ರಾಜಧಾನಿಗೆ ಆಹ್ವಾನಿಸಿ ವೈಭವದಿಂದ ಸ್ವಾಗತ ನೀಡಿ ಸತ್ಕರಿಸಿದನು. ಅವನ ಆಸ್ಥಾನದ ಹತ್ತಾರುಜನ ಪಂಡಿತರು ವಿವಿಧ ಶಾಸ್ತ್ರಗಳಲ್ಲಿ ಶ್ರೀಸುಧೀಂದ್ರರೊಡನೆ ವಾದಮಾಡಲು ಬಂದರು. ಆಗ ಶ್ರೀಗುರುಗಳು ಅವರೆಲ್ಲರನ್ನೂ ಲೀಲೆಯಿಂದಲೇ ವಾಕ್ಯಾರ್ಥದಲ್ಲಿ ಸೋಲಿಸಿ ಮಹಾವಿಜಯವನ್ನು ಸಂಪಾದಿಸಿದರು. ಇದರಿಂದ ಪ್ರಭಾವಿತನಾದ ಗ್ವಾಲಿಯರ್ ದೊರೆ ಶ್ರೀಗಳವರನ್ನು “ರಾಜಗುರುಗಳನ್ನಾಗಿ ಮಾಡಿಕೊಂಡು ಗೌರವಿಸಿದ್ದಲ್ಲದೆ, ಒಂದು ಶುಭದಿನ ಗುರುಗಳನ್ನು ಅರಮನೆಗೆ ಸಕಲ ರಾಜಮರಾದ ವಾದ್ಯವೈಭವಗಳಿಂದ ಕರೆತಂದು, ಅವರಿಗಾಗಿಯೇ ತಾನು ನಿರ್ಮಾಣಮಾಡಿಸಿದ್ದ ಸುವರ್ಣ ಸಿಂಹಾಸನದಲ್ಲಿ ಮಂಡಿಸಿ, ಶ್ವೇತ ಛತ್ರ, ಆಪ್ತಾಗಿರಿ, ಚಾಮರಾದಿ ರಾಜಚಿಹ್ನೆಗಳನ್ನು ಸಮರ್ಪಿಸಿ “ದಿಗ್ವಿಜಯ ಸಿಂಹಾಸನಾಧೀಶ್ವರ” ಎಂಬ ಅಸಾಧಾರಣ ಬಿರುದು-ಬಾವಲಿಗಳನ್ನು ನೀಡಿ ಸನ್ಮಾನಿಸಿ ಕೃತಾರ್ಥನಾದನು.276 ಮತ್ತು ಶ್ರೀಗಳವರು ಮಹಾ ಸಂಸ್ಥಾನದೊಡನೆ ತನ್ನ ರಾಜ್ಯದ ಎಲ್ಲೆಗೆ ಬಂದ ಲಾಗಾಯಿತು ವಾಪಸು ದಯಮಾಡಿಸುವವರೆಗೆ ಶ್ರೀಮಠದ ಸಮಸ್ತಖರ್ಚು-ವೆಚ್ಚಗಳನ್ನು ರಾಜಭಂಡಾರದಿಂದಲೇ ನೀಡಬೇಕೆಂದು ಒಂದು ಶಾಸನವನ್ನೂ ಶ್ರೀಸುಧೀಂದ್ರರಿಗೆ ಸಮರ್ಪಿಸಿದನು.277 ಕೆಲ ತಿಂಗಳು ಅಲ್ಲಿವಾಸಮಾಡಿ ಶ್ರೀಯವರು ಮತ್ತೆ ಬರುವುದಾಗಿ ಆಶ್ವಾಸನವಿತ್ತು, ಅಲ್ಲಿಂದ ಸಂಚಾರಕ್ರಮದಿಂದ ಪುಣ್ಯಪತ್ತನ, ಭಾಗ್ಯನಗರಗಳಿಗೆ ಭೇಟಿಯಿತ್ತು ಅಲ್ಲಿಂದ ಪಂಢರಪುರ, ಕೊಲ್ಲಾಪುರಗಳಿಗೆ ಬಂದು ಅಲ್ಲಿ ಶ್ರೀಪಾಂಡುರಂಗ, ಮಹಾಲಕ್ಷ್ಮೀದೇವಿಯರ ದರ್ಶನಮಾಡಿಕೊಂಡು ಸಂಚಾರಕ್ರಮದಲ್ಲಿ ವೆಲ್ಲೂರಿಗೆ ದಯಮಾಡಿಸಿದರು. ಆ ಹೊತ್ತಿಗೆ ಶ್ರೀರಂಗರಾಜರು ಸ್ವರ್ಗಸ್ಥರಾಗಿ ಅವರ ಸಹೋದರ ವೀರವೆಂಕಟಪತಿಯು ಕನ್ನಡ ಸಾಮ್ರಾಟನಾಗಿದ್ದನು. ಕನ್ನಡಸಾಮ್ರಾಜ್ಯದೊಡನಿದ್ದ ಘನಿಷ್ಟಸಂಬಂಧ, ತನ್ನ ದೊಡ್ಡಪ್ಪ, ಅಣ್ಣಂದಿರು ಈ ಮಹಾ ಸಂಸ್ಥಾನದಲ್ಲಿಟ್ಟಿದ್ದ ಭಕ್ತಿಗೌರವಗಳನ್ನರಿತಿದ್ದ ವೆಂಕಟಪತಿಮಹಾರಾಜನು ಶ್ರೀಸುಧೀಂದ್ರತೀರ್ಥರನ್ನು ರಾಜವೈಭವದಿಂದ ಸ್ವಾಗತಿಸಿ ಸತ್ಕರಿಸಿದನು, ದರ್ಬಾರಿನ ಅನೇಕ ಪಂಡಿತರು ಗುರುಗಳೊಡನೆ ವಾದಮಾಡಿ ಪರಾಜಿತರಾದರು,278 ಇದರಿಂದ ಪ್ರಭಾವಿತನಾದ ವೆಂಕಟಪತಿರಾಜ ಸುಧೀಂದ್ರರಿಗೆ ದಿಗ್ವಿಜಯಸೂಚಕವಾಗಿ 'ವಿಜಯಶಂಖ' ಮುಂತಾದ ಗೌರವವನ್ನು ಅರ್ಪಿಸಿ ಸಂತೋಷಭರಿತನಾದ.

ಅಷ್ಟರಿಂದಲೇ ತೃಪ್ತನಾಗದೆ ಸಾಮ್ರಾಟ್ ವೆಂಕಟಪತಿರಾಜನು ತನ್ನ ದೊಡ್ಡಪ್ಪನಾದ ಅಳಿಯರಾಮರಾಜ ಶ್ರೀವಿಜಯೀಂದ್ರರಿಗೆ “ರತ್ನಾಭಿಷೇಕ” ಮಾಡಿ ಗೌರವಿಸಿದಂತೆ ತಾನೂ ಸುಧೀಂದ್ರರಿಗೆ ರತ್ನಾಭಿಷೇಕ” ಮಾಡಿ ಗೌರವಿಸಿ ಕೀರ್ತಿಶಾಲಿಯಾಗಬೇಕೆಂದು ಆಶಿಸಿ ರಾಜದರ್ಬಾರಿನಲ್ಲಿ ಮಂತ್ರಿ, ಸೇನಾನಿ, ಸಾಮಂತರು, ಪಂಡಿತರು, ಪೌರಜಾನಪದರ ಸಮಕ್ಷ ಸುಧೀಂದ್ರರನ್ನು ಭದ್ರಾಸನದಲ್ಲಿ ಮಂಡಿಸಿ “ರತ್ನಾಭಿಷೇಕ ಮಾಡಿ ಅನೇಕ ಬಿರುದಾವಳಿ ಧನಕನಕಾಭರಣಗಳನ್ನು ಸಮರ್ಪಿಸಿ ಶ್ರೀಗುರುಗಳ ಅನುಗ್ರಹಕ್ಕೆ ಪಾತ್ರನಾದನು.

ಅಲ್ಲಿಂದ ಹೊರಟ ಸುಧೀಂದ್ರರು ದಕ್ಷಿಣಭಾರತದಲ್ಲಿ ಮಿಂಚಿನಸಂಚಾರ ಕೈಗೊಂಡು ವಾದಿವಿಜಯ ಸಿದ್ಧಾಂತಸ್ಥಾಪನೆ, ಲೋಕಕಲ್ಯಾಣಗಳನ್ನೆಸಗುತ್ತಾ ಇಕ್ಕೇರಿಯ ವೆಂಕಟಪ್ಪನಾಯಕ, ಮೈಸೂರಿನ ನಂಜರಾಜಒಡೆಯರು, ಹದಿನಾಡ ಸೀಮೆಯ ಇಮ್ಮಡಿ ರಾಮರಾಜ, ಕಾರ್ಕಳದ ಒಂದನೇ ಭೈರವ, ಮಧುರೆಯ ರಾಜರು, ಕೊಚ್ಚಿ ಅನಂತಶಯನದ ರಾಜರು, ಚೆಂಜಿ ಕೃಷ್ಣಪ್ಪನಾಯಕ ಮುಂತಾದ ರಾಜ ಮಹಾರಾಜರುಗಳಿಂದ ಮಾನಿತರಾಗಿ ವಿಜಾಪುರಕ್ಕೆ ದಯಮಾಡಿಸಿದರು. 

ವಿಜಾಪುರದ ಸುಲ್ತಾನನಾಗಿದ್ದ ಎರಡನೆಯ ಇಬ್ರಾಹೀಂ ಆದಿಲ್‌ ಷಹನು ವಿದ್ಯಾಪಕ್ಷಪಾತಿಯೂ, ಸರ್ವಧರ್ಮಗಳಲ್ಲಿ ಗೌರವವನ್ನಿಟ್ಟವನೂ, ಪ್ರಜಾರಂಜಕನೂ ಆಗಿದ್ದು ಹೆಸರುಗಳಿಸಿದ್ದನು. ಶ್ರೀಸುಧೀಂದ್ರರ ಆಗಮನದಿಂದ ಹರ್ಷಿಸಿದ ಆದಿಲ್ ಷಹನು ಅವರನ್ನು ಗೌರವದಿಂದ ಸ್ವಾಗತಿಸಿ ಅವರ ಭಿಕ್ಷಾದಿಗಳ ವ್ಯವಸ್ಥೆ ಮಾಡಿ ಸತ್ಕರಿಸಿದನು. ಆಗ ಅವನ ರಾಜ್ಯದಲ್ಲಿ ಹನ್ನೆರಡುವರ್ಷ ಕ್ಷಾಮವುಂಟಾಗಿ ಪ್ರಜರು ಬಹು ಕಷ್ಟ-ನಷ್ಟಗಳಿಗೆ ಪಾತ್ರರಾಗಿದ್ದರಿಂದ ದುಃಖಿತನಾಗಿ ರಾಜಭಂಡಾರದ ದವಸಧಾನ್ಯ- ಧನಕನಕಾದಿಗಳನ್ನು ಪ್ರಜರಿಗಾಗಿ ವಿನಿಯೋಗಿಸಿದರೂ ಪ್ರಜರ ಕಷ್ಟ ಪರಿಹಾರವಾಗಲಿಲ್ಲ. ಇದರಿಂದ ನೊಂದ ಸುಲ್ತಾನರು ಶ್ರೀಸುಧೀಂದ್ರರ ಮಹಿಮೆ ಕೇಳಿದಿದ್ದರಿಂದ ಗುರುಗಳಲ್ಲಿ ತನ್ನ ಚಿಂತೆಯನ್ನು ಹೇಳಿಕೊಂಡು ಪ್ರಜರನ್ನು ಹೇಗಾದರೂ ಈ ಕ್ಷಾಮದಿಂದ ಪಾರುಮಾಡಲು ಗುರುಗಳು ಮಾರ್ಗತೋರಬೇಕೆಂದು ಪ್ರಾರ್ಥಿಸಿದನು. ಅವನ ಪ್ರಜಾಪ್ರೇಮವನ್ನು ಕಂಡು ಸಂತುಷ್ಟರಾದ ಸುಧೀಂದ್ರಗುರುಗಳು ರಾಜನಧಾನ್ಯಾಗಾರದಲ್ಲಿ ಬೀಜಾಕ್ಷರ ಬರೆದು ಸ್ವತಃ ಏಳುದಿನ ಹವನ-ಹೋಮ-ಪಾರಾಯಣ- ಪೂಜಾ ಪುರಸ್ಕಾರಗಳನ್ನು ನೆರವೇರಿಸಿ ಶ್ರೀದಿಗ್ವಿಜಯರಾಮರ ಪೂಜಾದಿಗಳನ್ನೆಸಗಿ ದೇವರನ್ನು ಪ್ರಾರ್ಥಿಸಿದರು. ಅದರಿಂದ ಧಾನ್ಯಗಳು ಅಭಿವೃದ್ಧಿಸಿದ್ದು ಮಾತ್ರವಲ್ಲದೆ, ಏಳು ದಿನ ಪರ್ಯಂತ ಅಖಂಡವೃಷ್ಟಿಯಾಗಿ ಕೆರೆ, ಭಾವಿ, ಕುಂಟೆ, ನದಿಗಳು ತುಂಬಿತುಳಕಿದವು ! ಕ್ಷಾಮ ಪರಿಹಾರವಾಯಿತು. ಇದರಿಂದ ಪರಮಾನಂದಭರಿತನಾದ ಸುಲ್ತಾನನು ಶ್ರೀಗಳವರಿಗೆ ಕೃತಜ್ಞತೆಯನ್ನು ಸಮರ್ಪಿಸಿದನು.

ಆನಂತರ ಸುಧೀಂದ್ರರನ್ನು ಅರಮನೆಗೆ ಕರೆಯಿಸಿಕೊಂಡು ಪಾದಪೂಜೆಮಾಡಿ ಕಾಣಿಕೆಗಳನ್ನು ಸಮರ್ಪಿಸಿದನು. ಅದನ್ನು ಕಂಡು ಅಸೂಯೆಗೊಂಡ ಅನೇಕ ಪಂಡಿತರು ಗುರುಗಳೊಡನೆ ವಾದಮಾಡಬಯಸಿದರು. ಸರಿ, ಹತ್ತಾರುದಿನಪರ್ಯಂತ ಅನೇಕಶಾಸ್ತಗಳಲ್ಲಿ ವಾಕ್ಯರ್ಥವಾಯಿತು. ಸಕಲಪಂಡಿತರೂ ನಿರುತ್ತರರಾಗಿ ಗುರುಗಳಿಗೆ ನಮಸ್ಕರಿಸಿ ಕ್ಷಮೆ ಕೇಳಿದರು. ಇದರಿಂದ ಸುಲ್ತಾನನಿಗೆ ಬಹಳ ಸಂತೋಷವಾಗಿ ಗುರುಗಳಲ್ಲಿ ಅಪಾರ ಭಕ್ತಿಶ್ರದ್ಧೆಗಳುಂಟಾದವು. 

ಆದಿಲ್‌ ಷಹನು ತನ್ನಮಂತ್ರಿಯಾದ ಘನಶ್ಯಾಮರಾಯನನ್ನು ಗುರುಗಳ ಶಿಷ್ಯನಾಗುವಂತೆ ಸೂಚಿಸಿದನು. ಘನಶ್ಯಾಮರಾಯನು “ಮಳೆಬರಿಸಿದ್ದು, ಪಂಡಿತರನ್ನು ಜಯಿಸಿದ್ದು ಅಂತಹ ಮಹತ್ವದ್ದೇನಲ್ಲ ! ನಾನು ಅವರ ಶಿಷ್ಯನಾಗಬೇಕಾದರೆ ಅವರು ನಡುಹಗಲಿನಲ್ಲಿ ಒಂದು ಕ್ಷಣವಾದರೂ ಸೂರ್ಯನನ್ನು ಮರೆಮಾಡಬೇಕು. ಅಂದರೆ ನಾನು ಕುಟುಂಬಪರಿವಾರಸಹಿತನಾಗಿ ಗುರುಗಳ ಶಿಷ್ಯನಾಗುತ್ತೇನೆ” ಎಂದು ಹೇಳಿದನು. ಈ ವಿಚಾರ ಶ್ರೀಗಳವರಿಗೆ ತಿಳಿಯಿತು. ಅದೊಂದು ಸವಾಲೆನಿಸಿತು ಶ್ರೀಗಳವರಿಗೆ ಅವರು ಶ್ರೀಹರಿವಾಯುಗಳ ಅನುಗ್ರಹದಿಂದ ಘನಶ್ಯಾಮರಾಯರ ಇಚ್ಛೆಯನ್ನು ಪೂರ್ಣಮಾಡುತ್ತೇವೆ ಎಂದು ಸುಲ್ತಾನರಿಗೆ ತಿಳಿಸಿದರು. 

ಶ್ರೀಸುಧೀಂದ್ರತೀರ್ಥರು ದಿಗ್ವಿಜಯರಾಮದೇವರು ಮತ್ತು ಗರುಡವಾಹನ ಶ್ರೀಲಕ್ಷ್ಮೀನಾರಾಯಣದೇವರನ್ನು ಉಪೋಷಣದಿಂದ ಸೇವಿಸಿ ಒಂದು ರೀತಿ ತಪಸ್ಸನ್ನೆಸಗಿ ಮಂತ್ರ ಜಪಮಗ್ನರಾದರು. ಅಘಟಿತಘಟನಾಪಟುವಾದ ಶ್ರೀಹರಿ ಒಲಿದರೆ ಯಾವುದು ತಾನೇ ಅಸಾಧ್ಯ? ತನ್ನ ಪರಮ ಭಕ್ತರಾದ ಸುಧೀಂದ್ರರ ತಪಸ್ಸಿನಿಂದ ಸುಪ್ರೀತನಾದ ಶ್ರೀಹರಿಯು 'ಸತ್ಯಂ ವಿಧಾತುಂ ನಿಜನೃತ್ಯ ಭಾಷಿತಂ' ಎಂದು ಪ್ರಹ್ಲಾದರ ವಚನವನ್ನು ಸತ್ಯಮಾಡಿ ತೋರಿದಂತೆ, ಕೃಷ್ಣಾವತಾರ ಕಾಲದಲ್ಲಿ ಪ್ರಿಯ ಭಕ್ತ ಅರ್ಜುನನ ಪ್ರತಿಜ್ಞೆಯನ್ನು ಸತ್ಯಮಾಡಲು ಕ್ಷಣಕಾಲ ಸುದರ್ಶನ ಚಕ್ರದಿಂದ ಸೂರ್ಯನನ್ನು ಮರೆಮಾಡಿದ್ದಂತೆ ಸುಧೀಂದ್ರರ ವಾಕ್ಯವನ್ನು ಸತ್ಯಮಾಡಿ ತೋರಲು ನಡುಹಗಲಿನಲ್ಲಿ ಕ್ಷಣಕಾಲ ಸೂರನನ್ನು ಮರೆಮಾಡಿದನು ! ಈ ಅದ್ಭುತ ಪವಾಡವನ್ನು ಕಣ್ಣಾರೆ ಕಂಡ ಸುಲ್ತಾನ, ಮಂತ್ರಿ ಘನಶ್ಯಾಮರಾಯರು ಆಶ್ಚರಾನಂದಪೂರ್ಣರಾಗಿ ಗುರುಗಳಿಗೆ ನಮಸ್ಕರಿಸಿ ಅವರನ್ನು ಪರೀಕ್ಷಿಸಿದ್ದಕ್ಕೆ ಕ್ಷಮೆ ಬೇಡಿದರು. ಘನಶ್ಯಾಮರಾಯ ಕುಟುಂಬಪರಿವಾರಸಹಿತನಾಗಿಮಾಧ್ವದೀಕ್ಷೆ ಸ್ವೀಕರಿಸಿ, ಮಂತ್ರ ಮುದ್ರಾಧಾರಣೆ ಗುರೂಪದೇಶಗಳನ್ನು ಪಡೆದು ಶ್ರೀಮಠದ ಶಿಷ್ಯನಾದ ಮತ್ತು ತನ್ನ ಸ್ವಂತವಾಗಿದ್ದ “ಆನೆಹೊಸೂರು” ಎಂಬ ಗ್ರಾಮವನ್ನು ಗುರುಗಳಿಗೆ ದಾನಮಾಡಿ ಕೃತಾರ್ಥನಾದ.

ಸುಲ್ತಾನ್ ಇಬ್ರಾಹಿಂ ಆದಿಲ್‌ ಷಹನು ಶ್ರೀಗಳವರಿಗೆ ಅವರು ತನ್ನ ರಾಜ್ಯಕ್ಕೆ ತನಗೆ ಮಾಡಿದ ಉಪಕಾರ, ಅನುಗ್ರಹಗಳಿಗೆ ಕೃತಜ್ಞತೆಯರೂಪವಾಗಿ ಶ್ರೀಸುಧೀಂದ್ರತೀರ್ಥರಿಗೆ ಹಸಿರುಛತ್ರಿ-ಚಾಮರಾದಿಗಳೊಡನೆ ಜಗದ್ಗುರು” ಎಂಬ ಪ್ರಶಸ್ತಿ ಒಂಟೆಯ ಮೇಲೆ ನಿಷಾನಿ, ಹೌದಾ, ಮುಂತಾದ ಬಿರುದುಗಳನ್ನೂ, ಗ್ರಾಮಭೂಮಿ, ರತ್ನಾಭರಣಗಳನ್ನೂ ಸಮರ್ಪಿಸಿ ಗುರುಗಳ ಪೂರ್ಣಾನುಗ್ರಹಕ್ಕೆ ಪಾತ್ರನಾದನು282, ಸುಧೀಂದ್ರರು ವಿಜಾಪುರದಿಂದ ಹೊರಟು ಭಾರತಾದ್ಯಂತ ದಿಗ್ವಿಜಯಮಾಡಿ ರಾಜಾಧಿರಾಜರಿಂದ ಮಾನ್ಯರಾಗಿ ಬಿರುದುಬಾವಲಿ, ಪ್ರಶಸ್ತಿ, ಗ್ರಾಮಭೂಮಿಗಳನ್ನು ಸಂಪಾದಿಸಿ, ದೈತವಿಜಯದುಂದುಭಿಯನ್ನು ಎಲ್ಲೆಡೆ ಮೊಳಗಿಸಿ ಮಹಿಮಾ ಪ್ರದರ್ಶನಾದಿಗಳಿಂದ ಜಗನ್ಮಾನ್ಯರಾಗಿ ಬಂದುದನ್ನರಿತು ಪ್ರಿಯಶಿಷ್ಯರನ್ನು ಪ್ರೀತಿಯಿಂದ ಸ್ವಾಗತಿಸಿ ಭರದಿಂದಾಲಿಂಗಿಸಿ ವಿಜಯೀಂದ್ರತೀರ್ಥರು ಆನಂದತುಂದಿಲರಾದರು.