ಕಲಿಯುಗ ಕಲ್ಪತರು ಐದನೆಯ ಉಲ್ಲಾಸ ಶ್ರೀರಾಘವೇಂದ್ರಗುರುಸಾರ್ವಭೌಮರು ೧೬. ನೂತನ ಜಗದ್ಗುರುಗಳು
ಕುಂಭಕೋಣದ ವಿದ್ಯಾಮಠದಲ್ಲಂದು ಅಸಾಧ್ಯ ಸಂಭ್ರಮ, ಸಾವಿರಾರು ಧಾತ್ಮಿಕರು ನೆರೆದಿದ್ದಾರೆ. ತಂಜಾಪುರಾಧೀಶ ಚವಪ್ಪನಾಯಕನ ತಮ್ಮನೂ, ರಾಜಮನ್ನಾರಗುಡಿ ರಾಜ್ಯದ ಅಧಿಪತಿಯೂ ಆದ ಚಿನ್ನಚವಪ್ಪ ಮಿತಪರಿವಾರನಾಗಿ ಬಂದಿದ್ದಾನೆ. ಇಂದು ಶ್ರೀಸುರೇಂದ್ರತೀರ್ಥರು ಪ್ರಿಯಶಿಷ್ಯ ವಿಜಯೀಂದ್ರತೀರ್ಥರ ಉತ್ತರಾಧಿಕಾರಿಯನ್ನಾರಿಸಿ ಆಶ್ರಮಪ್ರದಾನಮಾಡಲಿರುವುದೇ ಇಷ್ಟೊಂದು ಸಂಭ್ರಮಕ್ಕೆ ಕಾರಣವಾಗಿದೆ, ಭವ್ಯವೇದಿಕೆಯ ಮೇಲೆ ಶ್ರೀಸುರೇಂದ್ರ-ವಿಜಯೀಂದ್ರಗುರುಗಳು ಭದ್ರಾಸನದಲ್ಲಿ ಮಂಡಿಸಿದ್ದಾರೆ. ಚಿನ್ನಚವ್ವಪ್ಪನಾಯಕ ಮತ್ತಿತರ ರಾಜ್ಯಪ್ರಮುಖರೂ ವಿಹಿತಾಸನಗಳಲ್ಲಿ ಕುಳಿತಿದ್ದಾರೆ.
ಆಗ ಶ್ರೀವಿಜಯೀಂದ್ರರು ತಮ್ಮ ಮಹಾಸಂಸ್ಥಾನದ ಮಹತ್ವ, ಭವ್ಯಪರಂಪರೆ ಮುಂತಾದ ವಿಚಾರಗಳನ್ನು ತಿಳಿಸಿ ಸಭೆಯನ್ನು ಕುರಿತು - 'ಧರ್ಮಾಭಿಮಾನಿಗಳೇ, ಶ್ರೀಮದಾಚಾರ ಪರಂಪರೆಯಿಂದ ಅವಿಚ್ಛಿನ್ನವಾಗಿ ಈ ಮಹಾಪೀಠದಲ್ಲಿ ನಡೆದುಬಂದಿರುವ ಆಶ್ರಮಪ್ರಧಾನ ಸಂಪ್ರಾದಾಯಕ್ಕೆ ವಿಚಿತ್ತಿಯುಂಟಾಗುವ ಭಯವಿತ್ತು. ಏಕೆಂದರೆ ಶ್ರೀಮೂಲರಾಮನ ಶ್ರೀಮದಾಚಾರ್ಯರ ಪ್ರೇರಣೆಯಂತೆ ಶ್ರೀವ್ಯಾಸರಾಜಗುರುಸಾರ್ವಭೌಮರಿಂದ ಸನ್ಯಸ್ತರಾಗಿ ಸಕಲಶಾಸ್ತ್ರಾಧ್ಯಯನಮಾಡಿದ್ದ ನಾವು ಶ್ರೀಗುರುಪಾದರಿಗೆ ಶಿಷ್ಯರಾಗಿ ಶ್ರೀವ್ಯಾಸರಾಜಗುರುಪಾದರಿಂದ ಕೊಡಲ್ಪಟ್ಟು, ದಂಡಪಲ್ಲಟ, ಮಂತ್ರಮುದ್ರಾಧಾರಣ, ಗುರೂಪದೇಶ, ಮಹಾಮಂತ್ರೋಪದೇಶ ಪಟ್ಟಾಭಿಷೇಕ ದ್ವಾರಾ ನಾವು ಈ ಮಹಾಸಂಸ್ಥಾನದ ಅಧಿಪತಿಗಳಾಗಿ ಬಂದಿದ್ದರಿಂದ ಪರಂಪರಾಪ್ರಾಪ್ತ ಆಶ್ರಮಪ್ರದಾನ ಸಂಪ್ರದಾಯಕ್ಕೆ ವಿಚ್ಚೆತ್ತಿ ಬಂದು ಆ ಅಪವಾದವು ನಮಗುಂಟಾದೀತೆಂಬ ಭಯ, ನಮ್ಮ ಪೂಜ್ಯ ಗುರುಪಾದರಿಗೆ ಉಂಟಾಗಬಾರದೆಂದು ನಾವು ಬಹುವಿಧವಾಗಿ ಗುರುವರ್ಯರನ್ನು ಇಂದು, ನಮ್ಮ ಮುಂದಿನ ಉತ್ತರಾಧಿಕಾರಿಗಳ ಘೋಷಣೆಗಳೊಡನೆ ಆಶ್ರಮಪ್ರದಾನ ಮಾಡಿ ಅವಿಚ್ಛಿನ್ನವಾಗಿ ನಡೆದುಬಂದ ಸಂಪ್ರದಾಯವನ್ನು ಪರಿಪಾಲಿಸಬೇಕೆಂದು ಪ್ರಾರ್ಥಿಸಿ ಒಪ್ಪಿಸಿದ್ದೇವೆ. ಈಗ ನಮ್ಮ ಗುರುವರ್ಯರು ನಮ್ಮ ಮುಂದಿನ ಉತ್ತರಾಧಿಕಾರಿಗಳಿಗೆ ಆಶ್ರಮಪ್ರದಾನ ಮಾಡುತ್ತಾರೆ, ಆ ಭಾಗ್ಯವಂತರಾರೆಂದು ನೀವು ಯೋಚಿಸುತ್ತಿರಬಹುದು. ಇಕೋ ನೋಡಿ, ನಮ್ಮ ಪಕ್ಕದಲ್ಲಿ ಕುಳಿತಿರುವವರೇ ಆ ಮಹನೀಯರು, ನಮ್ಮ ವಂಶದ ಮತ್ತು ಪೂರ್ವಾಶ್ರಮ ಸೋದರಸೊಸೆಯ (ಚಿನ್ನಭಂಡಾರಿ ಮನೆತನದ) ಪೌತ್ರರಿವರು. ನ್ಯಾಯ-ಸಾಹಿತ್ಯಾದಿಶಾಸ್ತ್ರಗಳಲ್ಲಿ ಪರಿಣಿತರಾದ ಈ ನಾರಾಯಣಚಾರರೇ ಈ ಮಹಾಪೀಠವನ್ನಲಂಕರಿಸಲು ಅರ್ಹರಾಗಿದ್ದಾರೆ. ಈಗ ಪೂಜ್ಯ ಗುರುವರರು ಪರಮಹಂಸಾಶ್ರಮ ಸ್ವೀಕಾರಕ್ಕೆ ಶ್ರೀನಾರಾಯಣಚಾರ್ಯರಿಗೆ ಫಲಮಂತ್ರಾಕ್ಷತಾ ಅನುಗ್ರಹಿಸುತ್ತಾರೆ” ಎಂದು ನಿರೂಪಿಸಿದರು. ಸರ್ವರೂ ಕರತಾಡನದಿಂದ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ತರುವಾಯ ಶ್ರೀಸುರೇಂದ್ರತೀರ್ಥರು ಮಂಗಳವಾದ್ಯ, ಭೇರಿ, ನಗಾರಿಗಳು ಮೊಳಗುತ್ತಿರಲು ಶ್ರೀನಾರಾಯಣಾಚಾರ್ಯರನ್ನು ಶ್ರೀವಿಜಯೀಂದ್ರತೀರ್ಥರ ಉತ್ತರಾಧಿಕಾರಿಗಳೆಂದು ಘೋಷಿಸಿ ಪರಮಹಂಸಾಶ್ರಮ ಸ್ವೀಕಾರಕ್ಕೆ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಿದರು.
ಶ್ರೀಶಾಲಿವಾಹನಶಕೆ ೧೪೯೭ ನೇ (ಕ್ರಿ.ಶ. ೧೫೭೫) ಯುವನಾಮ ಸಂವತ್ಸರದ ಚೈತ್ರ ಶುಕ್ಲ ಚತುರ್ದಶೀ ಶುಭದಿನದಂದು ಸನ್ಯಾಸಾಶ್ರಮ ಸ್ವೀಕರಿಸಿ, ಕಾಷಾಯಾಂಬರ, ದಂಡಕಮಂಡಲುಧಾರಿಗಳಾಗಿ ಬಂದು ತಮಗೂ, ವಿಜಯೀಂದ್ರರಿಗೂ ಪಾದಪೂಜೆ ಮಾಡಿ ವಿನೀತರಾಗಿ ನಿಂತಿರುವ ನೂತನ ಯತಿಗಳಿಗೆ ಶ್ರೀಸುರೇಂದ್ರತೀರ್ಥರು ಮಂತ್ರಮುದ್ರಾಧಾರಣ, ಗುರೂಪದೇಶ ಮಹಾಮಂತ್ರೋಪದೇಶ, ಚತುಃಷಷ್ಟಿಕಲೆಗಳ ಉಪದೇಶಗಳನ್ನು ಮಾಡಿ ಅವರನ್ನು ಸಿದ್ಧವಾಗಿರುವ ಭದ್ರಾಸನದಲ್ಲಿ ಮಂಡಿಸಿ, ಸಕಲಮಂಗಳವಾದ್ಯ, ಜಯಘೋಷ, ವೇದಘೋಷಗಳಾಗುತ್ತಿರಲು ಶ್ರೀಮದಾಚಾರ್ಯರ ಮಹಾಸಂಸ್ಥಾನಾಧಿಪತಿಗಳೆಂದು ಸಾಮ್ರಾಜ್ಯಪಟ್ಟಾಭಿಷೇಕ ಮಾಡಿ “ಶ್ರೀಸುಧೀಂದ್ರತೀರ್ಥರು” ಎಂಬ ಅಭಿಧಾನದಿಂದ ಅನುಗ್ರಹಿಸಿ ಅವರ ಕರವನ್ನು ವಿಜಯೀಂದ್ರರ ಕರದಲ್ಲಿಟ್ಟು ನೂತನ ಜಗದ್ಗುರುಗಳ ಸಮಸ್ತ ಭಾರವನ್ನೂ ಅವರಿಗೆ ವಹಿಸಿಕೊಟ್ಟು ಕೃತಾರ್ಥರಾದರು.
ಆಗ ವಿಜಯೀಂದ್ರರು ಸುರೇಂದ್ರರಿಗೆ ನಮಸ್ಕರಿಸಿ “ನಮ್ಮ ಪ್ರಿಯಶಿಷ್ಯರಾದ ಸುಧೀಂದ್ರತೀರ್ಥರು ಜಗದ್ವಿಖ್ಯಾತ ಪಂಡಿತರಾಗಿ, ಪರವಾದಿದಿಗ್ವಿಜಯ, ಸಿದ್ಧಾಂತಸ್ಥಾಪನೆ, ಪಾಠಪ್ರವಚನ, ಗ್ರಂಥರಚನೆ, ಶಿಷ್ಯಭಕ್ತಜನೋದ್ದಾರಾದಿಕಾರ್ಯಾಸಕ್ತರಾಗಿ ಮಹಾಸಂಸ್ಥಾನದ ಕೀರ್ತಿಪತಾಕೆಯನ್ನು ಜಗತ್ತಿನಲ್ಲೆಲ್ಲಾ ಮೆರೆಸಿ ಕೀರ್ತಿಗೊಳಿಸುವಂತೆ ನಾವು ಮಾಡುತ್ತೇವೆ” ಎಂದು ಗುರುಗಳಿಗೆ ಭರವಸೆ ನೀಡಿದರು. ಸರ್ವರೂ ಈ ಗುರು-ಶಿಷ್ಯರನ್ನು ಶ್ಲಾಘಿಸಿದರು.
ಅನಂತರ ಕನ್ನಡ ಸಾಮ್ರಾಟ್ ಶ್ರೀರಂಗರಾಜರ ಪ್ರತಿನಿಧಿ, ತಂಜಾಪುರದ ಪರವಾಗಿ ಮತ್ತು ತಮ್ಮ ಪರವಾಗಿ ಚಿನ್ನಡವಪ್ಪನಾಯಕರೇ ಮೊದಲಾದವರು ನೂತನ ಜಗದ್ಗುರುಗಳಿಗೆ ಕಾಣಿಕೆಗಳನ್ನು ಸಮರ್ಪಿಸಿದರು. ತರುವಾಯ ಕುಂಭಕೋಣದ ಲೌಕಿಕ-ವೈದಿಕ ವಿದ್ವಜ್ಜನರು. ಶಿಷ್ಯ-ಭಕ್ತರು-ಧರ್ಮಾಭಿಮಾನಿಗಳು ನೂತನ ಗುರುಗಳಿಗೆ ಕಾಣಿಕೆಗಳನ್ನು ಸಮರ್ಪಿಸಿದರು.
ವಿಜಯೀಂದ್ರರ ಆದೇಶದಂತೆ ಸುಧೀಂದ್ರತೀರ್ಥರು ಸಂಸ ತದಲ್ಲಿ ವಿದ್ದಷ್ಟೂರ್ಣ ಉಪದೇಶಭಾಷಣಮಾಡಿ ಸರ್ವರನ್ನು ಆನಂದಗೊಳಿಸಿದರು. ಮಧ್ಯಾಹ್ನ ಶ್ರೀಮೂಲರಾಮರ ಪೂಜೆಯನ್ನು ನೂತನ ಜಗದ್ಗುರುಗಳೇ ವಿಜಯೀಂದ್ರರ ಮಾರ್ಗದರ್ಶನದಲ್ಲಿ ನೆರವೇರಿಸಿ ತೀರ್ಥ-ಪ್ರಸಾದಾದಿಗಳಿಂದ ಎಲ್ಲರನ್ನೂ ಅನುಗ್ರಹಿಸಿದರು. ತರುವಾಯ ಸಹಸ್ರಾರು ಜನರ ಭೂರಿಭೋಜನವಾಗಿ ಕಾರ್ಯಕ್ರಮವು ಮುಕ್ತಾಯವಾಯಿತು.
ಅಂದು ರಾತ್ರಿ ದೀಪಾರಾಧನೆಯಾದ ಮೇಲೆ ಯತಿತ್ರಯರು ತಿಮ್ಮಣ್ಣಾಚಾರರೂ ಏಕಾಂತವಾಗಿ ಮಾತನಾಡುತ್ತಿರುವಾಗ ಶ್ರೀಸುಧೀಂದ್ರತೀರ್ಥರು ತಿಮ್ಮಣ್ಣಾಚಾರರನ್ನು ತೋರಿ ಶ್ರೀವಿಜಯೀಂದ್ರರಲ್ಲಿ ವಿಜ್ಞಾಪಿಸಿದರು. ಇವರ ಪರಿಚಯವಾಗಲಿಲ್ಲ. ಉಭಯಗುರುಗಳಿಗೆ ಬಹಳ ಪ್ರೀತ್ಯಾಸ್ಪದರಂತೆ ಕಂಡುಬರುತ್ತದೆ. ಯಾರಿವರು?” ಆಗ ವಿಜಯೀಂದ್ರರು ನಸುನಕ್ಕು ತಿಮ್ಮಣ್ಣಾಚಾರರು, ಅವರ ವಂಶ, ತಮಗೂ, ಹಿರಿಯ ಶ್ರೀಗಳವರಿಗೂ ಇರುವ ವಂಶಬಾಂಧವ್ಯ, ಅವರು ತಮ್ಮಲ್ಲಿ ವ್ಯಾಸಂಗ ಮಾಡಿದ ವಿಚಾರ. ಪಾಂಡಿತ್ಯಾದಿಗಳನ್ನು ನಿರೂಪಿಸಿ “ಇನ್ನು ಮುಂದೆ ಇವರು ನಿಮ್ಮ ವಿಶೇಷಾನುಗ್ರಹಕ್ಕೂಪಾತ್ರರಾಗಿ ಆಪ್ತರಾಗಿರಬೇಕೆಂದು ನಾವು ಆಶಿಸುತ್ತೇವೆ” ಎಂದು ಹೇಳಿದರು. ತಿಮ್ಮಣ್ಣಾಚಾರರು ಸುಧೀಂದ್ರರಿಗೆ ನಮಸ್ಕರಿಸಿದರು. ಸುಧೀಂದ್ರ ಗುರುಗಳು ಅವರ ಕರಪಿಡಿದು ಮೇಲೆಬ್ಬಿಸಿ ಪಕ್ಕದಲ್ಲಿ ಕೂಡಿಸಿಕೊಂಡು ಪ್ರೀತಿಯಿಂದ “ಉಭಯಗುರುಪಾದರ ಪ್ರೀತ್ಯಾಸ್ಪದರೂ, ಆತ್ಮೀಯರೂ ಅಭಿಮಾನಿಗಳೂ ಆದ ನೀವು ಧನ್ಯರು !ಆಚಾರ, ನಮ್ಮಲ್ಲಿಯೂ ನೀವು ಅದೇ ಅಭಿಮಾನವಿಟ್ಟು ಮಹಾಸಂಸ್ಥಾನದ ಸೇವೆ ಮಾಡಬೇಕೆಂದು ನಾವು ಆಶಿಸುತ್ತೇವೆ” ಎಂದರು. ತಿಮ್ಮಣ್ಣಾಚಾರರು “ಶ್ರೀಪಾದಂಗಳವರ ಅಪ್ಪಣೆಯನ್ನು ಶಿರಸಾಧರಿಸಿದ್ದೇನೆ” ಎಂದರು.
ಅದೇ ಸಮಯದಲ್ಲಿ ಸಾಮ್ರಾಟನ ಪ್ರತಿನಿಧಿಗಳೊಡನೆ ಬಂದ ಚಿನ್ನಚವಪ್ಪನಾಯಕನು ಗುರುತ್ರಯರಿಗೂ ನಮಸ್ಕರಿಸಿ “ಗುರುದೇವ, ಸಾಮ್ರಾಟ್ ಶ್ರೀರಂಗರಾಜಪ್ರಭುಗಳು ನೂತನ ಜಗದ್ಗುರುಗಳೊಡನೆ ಉಭಯಶ್ರೀಪಾದಂಗಳವರೂ ಪೆನಗೊಂಡೆಗೆ ಬಂದು ಸಾಮ್ರಾಟರ ಆತಿಥ್ಯ, ಗೌರವಗಳನ್ನೂ ಸ್ವೀಕರಿಸಿ ಅನುಗ್ರಹಿಸಬೇಕೆಂದು ಪ್ರಾರ್ಥಿಸಿ ತಮ್ಮ ಪ್ರತಿನಿಧಿಯನ್ನು ಕಳಿಸಿದ್ದಾರೆ. ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದರು. ಸುರೇಂದ್ರತೀರ್ಥರು ಸಂತುಷ್ಟರಾಗಿ “ಅವಶ್ಯ ಬಂದು ಸಾಮ್ರಾಟರ ಸೇವೆ ಸ್ವೀಕರಿಸುತ್ತೇವೆ. ಈ ವಿಚಾರವನ್ನು ಫಲಮಂತ್ರಾಕ್ಷತೆ ಅನುಗ್ರಹಿಸಿ ಕಳಿಸಿ ನಂತರ ವಿಶ್ರಾಂತಿಗೆ ತೆರಳಿದರು.
ಶ್ರೀರಂಗರಾಜರ ಪ್ರಾರ್ಥನೆಯಂತೆ ಪೆನಗೊಂಡೆಗೆ ಆಗಮಿಸಿದ ಯತಿತ್ರಯರಿಗೆ ಸಾರ್ವಭೌಮ ಭವಸ್ವಾಗತವನ್ನು ನೀಡಿ ರಾಜಭವನದಲ್ಲಿ ಬಿಡಾರಮಾಡಿಸಿದನು.
ಶಾಲಿವಾಹನಶಕೆ ೧೪೯೭ ನೇ ಯುವಸಂವತ್ಸರದ ಆಷಾಢ ಶುಕ್ಲ ೧೨ (ಪ್ರಥಮ ದ್ವಾದಶಿ) ಸೋಮವಾರ (ಮಿತಿ ೨೦-೦೬-೧೫೭೫) ಶ್ರೀಸುರೇಂದ್ರತೀರ್ಥರು ಸಾಮ್ರಾಟನ ಪ್ರಾರ್ಥನೆಯಂತೆ ಪೂಜಾರಾಧನೆ, ದ್ವಾದಶೀ ಪಾರಣೆ ಮುಗಿಸಿ, ರಾಜವೈಭವದಿಂದ ಶಿಷ್ಯ-ಪ್ರಶಿಷ್ಯರೊಡನೆ ಶ್ರೀರಾಮದೇವರ ಗುಡಿಗೆ ದಯಮಾಡಿಸಿ ಭದ್ರಾಸನದಲ್ಲಿ ಮಂಡಿಸಿದರು. ಆಗ ಶ್ರೀರಂಗರಾಜನು ಶಿಷ್ಟಸಹಿತರಾದ ಶ್ರೀಪಾದಂಗಳವರಿಗೆ ಐವತ್ತು ವೃತ್ತಿಗಳು, ಗೃಹಗಳಿಂದ ಶೋಧಿಸುವ ಅಗ್ರಹಾರ, ವಾಪೀಕೂಪತಟಾಕಾರಾಮಗಳಿಂದ ಸಂಪದ್ಭರಿತವಾದ, ತಂಜಾವೂರು ರಾಜ್ಯದಲ್ಲಿರುವ ನಾವಲೂರು” ಅಥವಾ “ರಾಮಚುದ್ರಪುರ ಎಂಬ ಮಹಾಗ್ರಾಮವನ್ನು ದಾನಮಾಡಲಿರುವುದಾಗಿಯೂ ಅದನ್ನು ಸ್ವೀಕರಿಸಿ ಕನ್ನಡಸಾಮ್ರಾಜ್ಯ ಹಾಗೂ ತನಗೆ ಮಂಗಳವಾಗುವಂತೆ ಆಶೀರ್ವದಿಸಬೇಕೆಂದು ಪ್ರಾರ್ಥಿಸಿದನು. ಸುರೇಂದ್ರರು “ಸಾಮ್ರಾಟರೇ, ನಮ್ಮ ಮಹಾಸಂಸ್ಥಾನ ಹಾಗೂ ನಿಮ್ಮ ಅರವೀಟಿ ಮನೆತನಕ್ಕೂ ಗುರು-ಶಿಷ್ಯಭಾವವು ಬಹುಕಾಲದಿಂದ ನಡೆದುಬಂದಿದೆ. ಕನ್ನಡಸಾಮ್ರಾಜ್ಯದ ಬಲಭುಜರಾಗಿದ್ದ ನಿಮ್ಮ ಮುತ್ತಾತ ಶ್ರೀರಾಮರಾಜರು ಅರವತ್ತೆರಡು ವರ್ಷಗಳ ಹಿಂದೆಯೇ 264 ವಿಜಯನಗರದಲ್ಲಿ ನಮಗೆ ಒಂಭತ್ತು ಮಹಾಗ್ರಾಮಗಳು ಹಾಗೂ ಮಠವನ್ನು ದಾನಮಾಡಿದ್ದರು. ನಿಮ್ಮ ದೊಡ್ಡಪ್ಪ ಅಳಿಯರಾಮರಾಜರಂತೂ ನಮ್ಮ ವಿಜಯೀಂದ್ರರಿಗೆ ರತ್ನಾಭಿಷೇಕ ಮಾಡಿ ಗ್ರಾಮ-ಭೂಮಿಗಳನ್ನು ನೀಡಿ ಗೌರವಿಸಿದ್ದರು. ಈ ದಾನಸೌಂಡತ್ವ ನಿಮ್ಮ ಮನೆತನದ ವೈಶಿಷ್ಟ್ಯವಾಗಿದೆ, ನೀವು ಈಗ ನಮ್ಮನ್ನು ಕರೆಸಿಕೊಂಡು ಗ್ರಾಮ ದಾನಮಾಡುತ್ತಿರುವುದು ಸಂತಸದ ವಿಚಾರವಾಗಿದೆ. ಶ್ರೀಮೂಲರಾಮಚಂದ್ರನು ನಿಮಗೆ ಸಕಲಮಂಗಳಗಳನ್ನಿತ್ತು ಬಹುಕಾಲ ಕಾಪಾಡಲಿ ಎಂದು ಪ್ರಾರ್ಥಿಸುತ್ತೇವೆ” ಹೇಳಿದರು. ಆಗ ಶ್ರೀರಂಗರಾಜನು ಭಕ್ತಿನಮಾಂಗನಾಗಿ ಶ್ರೀಪಾದಂಗಳವರಿಗೆ 'ನಾವಲೂರು ಅಥವಾ ರಾಮಚಂದ್ರಪುರ' ಎಂಬ ಮಹಾಗ್ರಾಮವನ್ನು ದಾನಮಾಡಿ265 ತಮ್ಮ ಪೂರ್ವಿಕರಿಗೆ ಸದ್ಧತಿಯಾಗು- ವಂತೆಯೂ ತನಗೆ ಶ್ರೇಯಸ್ತಾಗುವಂತೆಯೂ ಆಶೀರ್ವದಿಸಬೇಕೆಂದು ಕೋರಿ ನಮಸ್ಕರಿಸಿದನು.
ಶ್ರೀವಿಜಯೀಂದ್ರರು ತಮ್ಮ ಗುರುಗಳ ಅಪ್ಪಣೆಯಂತೆ ಶ್ರೀಮಠಕ್ಕೆ ೭ ವೃತ್ತಿಗಳನ್ನು ಇಟ್ಟುಕೊಂಡು ಉಳಿದ ೪೩ ವೃತ್ತಿಗಳನ್ನೂ, ಅಗ್ರಹಾರದಲ್ಲಿರುವ ಗೃಹಗಳನ್ನೂ ೨೦ ಪಂಡಿತರಿಗೆ ಪೋಷಕ ರೂಪವಾಗಿ ದಾನಮಾಡಬಯಸಿ, ದಾನಾರ್ಹರಾದ ಇಪ್ಪತ್ತು ಜನವಿದ್ವಾಂಸರ ಪಟ್ಟಿಯನ್ನು ನೀಡಿ ಇದರಂತೆ ತಾಮ್ರಶಾಸನಮಾಡಲು ಅಪೇಕ್ಷಿಸಿದರು. ಅದರಂತೆ ಸ್ವಯಂಭುಕವಿಗಳು ದಾನಶಾಸನವನ್ನು ಸಂಸ ತಪದರೂಪವಾಗಿ ಬರೆದುಕೊಟ್ಟರು. ಆಸ್ಥಾನದ ಶಿಲ್ಪಿ ಗುರುಪಾರ್ಯರು ತಾಮ್ರಶಾಸನ ತಯಾರಿಸಿಕೊಟ್ಟರು. ಆ ತಾಮ್ರಶಾಸನವನ್ನು ರಂಗರಾಜರು ಗುರುಗಳಿಗೆ ಸಮರ್ಪಿಸಿದರು. ಶ್ರೀಗಳವರಿಂದ ದಾನಪಡೆದ ಪಂಡಿತರಲ್ಲಿ ವಿಜಯೀಂದ್ರರ ಶಿಷ್ಯರೂ ಗೌತಮಗೋತ್ರ-ಯಜುಃಶಾಖೆಯ ಕನಕಾಚಲಾಚಾರರ ಪುತ್ರರಾದ ತಿಮ್ಮಣ್ಣಾಚಾರರು266 ಮತ್ತು ಕಾಶ್ಯಪಗೋತ್ರದ ಯಜುಶ್ಯಾಖೆಯ ತಿಮ್ಮರಸರ (ತಿಮ್ಮಣ್ಣ ಪುತ್ರರಾದ ವೆಂಕಟಸುಧೀ,267 ಮುಂತಾದವರು ಪ್ರಮುಖರಾಗಿದ್ದಾರೆ.
ಶ್ರೀಯತಿತ್ರಯರನ್ನು ಬಹುವಾಗಿ ಗೌರವಿಸಿದ ಶ್ರೀರಂಗರಾಜನು ಶ್ರೀವಿಜಯೀಂದ್ರರಿಗೆ ಸುವರ್ಣಾಸನವನ್ನೂ, ಶ್ರೀಸುಧೀಂದ್ರರಿಗೆ (ನೂತನ ಗುರುಗಳು) ಜಗದ್ಗುರುತ್ವದ್ಯೋತಕವಾಗಿ ಶ್ವೇತಛತ್ರ, ಚಾಮರ, ಮುಕ್ತಾಮಾಲೆ, ಪೀತಾಂಬರಾದಿಗಳನ್ನು ಸಮರ್ಪಿಸಿ ಅನುಗೃಹೀತನಾದನು. ನಾಲ್ಕಾರುದಿನ ರಾಜಧಾನಿಯಲ್ಲಿದ್ದು ಸೇವೆ ಸ್ವೀಕರಿಸಿ ನಂತರ ಯತಿತ್ರಯರು ಪ್ರಯಾಣ ಬೆಳೆಸಿದರು.
ಪೆನಗೊಂಡೆಯಿಂದ ಹೊರಟ ಯತಿತ್ರಯರು ಶ್ರೀರಂಗಕ್ಷೇತ್ರಕ್ಕೆ ಬಂದು ದೇವರ ದರ್ಶನಮಾಡಿ ಅಲ್ಲಿಂದಹೊರಟು ರಾಮೇಶ್ವರಯಾತ್ರೆ ಮುಗಿಸಿಕೊಂಡು ಮಧುರೆಗೆ ದಯಮಾಡಿಸಿದರು. ಆಗ ಮಧುರೆಯಲ್ಲಿ ಕುಮಾರ ಕೃಷ್ಣಪ್ಪನಾಯಕನು ರಾಜನಾಗಿದ್ದನು. ಅವನು ತನ್ನ ಗುರುಗಳಾದ ಶ್ರೀಸುರೇಂದ್ರರು, ಮತ್ತು ಶಿಷ್ಯ-ಪ್ರಶಿಷ್ಯರನ್ನು ಗೌರವದಿಂದಸ್ವಾಗತಿಸಿ ಬಿಡಾರಮಾಡಿಸಿ ಭಿಕ್ಷಾದಿಗಳಿಗೆ ವ್ಯವಸ್ಥೆಮಾಡಿ ಧನ್ಯನಾದನು.
ತೊಂಬತ್ತೇಳು ವರ್ಷಗಳ ಕಾಲ ಬಿಡುವಿಲ್ಲದ ಚಟುವಟಿಕೆಗಳು, ಮೂರುಬಾರಿ ಉಪೋಷಣದಿಂದ ಭಾರತಸಂಚಾರ ಮುಂತಾದುವುಗಳಿಂದ ಕೃಶರಾಗಿದ್ದ ಶ್ರೀಸುರೇಂದ್ರತೀರ್ಥರು ಮಧುರೆಗೆ ಬಂದಮೇಲೆ ಅಸ್ವಸ್ಥರಾದರು. ವಿಜಯೀಂದ್ರ-ಸುಧೀಂದ್ರರು ಗುರುಗಳಿಗೆ ಔಷಧೋಪಚಾರ-ಸೇವಾ ಶುಶೂಷಾದಿಗಳನ್ನು ಭಕ್ತಿ-ಶ್ರದ್ಧೆಯಿಂದ ಮಾಡಹತ್ತಿದರು.
ಶಾಲಿವಾಹನಶಕೆ 1497ನೇ ಯುವಸಂವತ್ಸರದ ಪುಷ್ಯಶುಕ್ಲ ಏಕಾದಶೀ (ತಾ, 17-12-1575 ರ ಸುಮಾರು) ದಿನ ಸಂಜೆ ಶ್ರೀಮೂಲರಾಮರಪೂಜಾರಾಧನೆಯನ್ನು ಮಾಡಿ ಉತ್ಸಾಹದಿಂದ ಜಾಗರಣೆ ಸೇವೆಯನ್ನಾಚರಿಸಿದರು. ಏಕಾದಶೀ ತಿಥಿ ಮುಗಿದು ದ್ವಾದಶೀ ತಿಥಿ ಪ್ರಾರಂಭವಾಯಿತು. ಶ್ರೀಹರಿಧ್ಯಾನಮಗ್ನರಾಗಿ ಜಪಮಾಡುತ್ತಿದ್ದ ಶ್ರೀಗಳವರಮುಖದಿಂದ “ನಾರಾಯಣ, ನಾರಾಯಣ” ಎಂಬ ಶ್ರೀಹರಿನಾಮ ಸ್ಮರಣೆ ಹೊರಹೊಮ್ಮಿತು. ಕೈಲಿದ್ದ ಜಪದಸರ ಕೆಳಗೆಬಿದ್ದಿತು ! ಪಾವನಮೂರ್ತಿಗಳಾದ ಸುರೇಂದ್ರತೀರ್ಥರು ತಮ್ಮ 97ನೇ ವಯಸ್ಸಿನಲ್ಲಿ ಹರಿಪದಸೇರಿ ಅಮರರಾದರು.
ಹತ್ತಿರವಿದ್ದವರು ಹಿರಿಯ ಶ್ರೀಯವರು ಹರಿಪದ ಸೇರಿದರೆಂದರಿತು ವಿಜಯೀಂದ್ರ ಸುಧೀಂದ್ರರಲ್ಲಿಗೆ ಧಾವಿಸಿಬಂದು ವಿಜ್ಞಾಪಿಸಿದರು. ಪೂಜ್ಯರು `ದೇವರಯಾತ್ರೆ' ಮಾಡಿದವಿಚಾರವರಿತು ಉಭಯಗುರುಗಳಿಗೆ ಅಪಾರದುಃಖವಾಯಿತು. ಮಹಾಮಹಿಮರಾದ ಗುರುಪಾದರನ್ನು ಕಳೆದುಕೊಂಡಿದ್ದಕ್ಕೆ ಅವರಿಗಾದ ದುಃಖ ಅವರ್ಣನೀಯ, ಅವರ ಗುಣಗಳನ್ನು ನೆನೆದು ಕಣ್ಣೀರಿಟ್ಟರು. ಕೊನೆಗೆ ವಿಜಯೀಂದ್ರರೇ ಸಮಾಧಾನ ಮಾಡಿಕೊಂಡು ಪ್ರಿಯಶಿಷ್ಯ ಸುಧೀಂದ್ರರಿಗೆ ಸಮಾಧಾನಹೇಳಿ ಶ್ರೀಸುರೇಂದ್ರತೀರ್ಥರ ಬೃಂದಾವನ ಪ್ರತಿಷ್ಠಾಪನೆಮಾಡಿಸಿ, ಮಹಾಸಂಸ್ಥಾನ ಪೂಜೆಮುಗಿಸಿ ಶ್ರೀಗುರುಗಳ ಬೃಂದಾವನದ ಮೇಲೆ ಶ್ರೀಮೂಲರಾಮರನ್ನಿಟ್ಟು ಕನಕಾಭಿಷೇಕಮಾಡಿ, ಹಸ್ತೋದಕ ಸಮರ್ಪಿಸಿ ಮಂಗಳಾರತಿ ಬೆಳಗಿದರು. ಮತ್ತು ಭಕ್ತಿನಮಾಂಗರಾಗಿ
ಯಶಕಾರೋಪವಾಸೇನ ತ್ರಿವಾರಂ ಭೂಪ್ರದಕ್ಷಿಣಮ್ |
ತಸ್ಯೆ ನಮೋ ಯತೀಂದ್ರಾಯ ಶ್ರೀಸುರೇಂದ್ರತಪಸ್ವಿನೇ ||
ಎಂಬ ಚರಮಶ್ಲೋಕವನ್ನು ರಚಿಸಿ ಹೇಳಿ ಸುಧೀಂದ್ರರೊಡನೆ ನಮಸ್ಕರಿಸಿದರು. ಆನಂತರ ಅಲಂಕಾರಬ್ರಾಹ್ಮಣಪೂಜಾ, ಭೂರಿಭೋಜನ, ದಕ್ಷಿಣಾಪ್ರದಾನಗಳಾದವು. ಗುರುಗಳ ಮಹಾಸಮಾರಾಧನಾಂಗ ವಿದ್ವತ್ಸಭೆಯನ್ನು ಜರುಗಿಸಿ ವಿಜಯೀಂದ್ರರು ವಿದ್ವಾಂಸ-ವಿದ್ಯಾರ್ಥಿಗಳಿಗೆ ಸಂಭಾವನಾ ಪ್ರಧಾನ ಮಾಡಿದರು. ಸರ್ವರೂ ಶ್ರೀಯವರ ಗುರುಭಕ್ತಿಯನ್ನು ಕೊಂಡಾಡಿದರು.
ಕೆಲದಿನಗಳಾದ ಮೇಲೆ ಕನ್ನಡಸಾಮ್ರಾಟ್ ಶ್ರೀರಂಗರಾಜರ ಪ್ರತಿನಿಧಿಯು ಬಂದು ಹಿರಿಯ ಶ್ರೀಯವರು ದೇವರಯಾತ್ರೆ ಕೈಗೊಂಡ ವಿಚಾರತಿಳಿದ ಸಾಮ್ರಾಟರು ಬಹು ಪರಿತಪಿಸಿದರೆಂದು ಹೇಳಿ, ಪ್ರಕೃತ ಸಾಮ್ರಾಟರ ವರ್ಧಂತ್ಯುತ್ಸವಾಂಗವಾಗಿ ಹಂಪಿಯ ವಿಜಯವಿಠಲದೇವರ ಸನ್ನಿಧಿಯಲ್ಲಿ ವಿದ್ದದ್ದೋ ನೆರವೇರುವುದಾಗಿಯೂ, ಆ ವಿದ್ವತ್ಸಭೆಗೆ ಅಧ್ಯಕ್ಷರಾಗಿದ್ದು ಉಭಯ ಶ್ರೀಗಳವರು ಅನುಗ್ರಹಿಸಬೇಕೆಂದು ಶ್ರೀರಂಗರಾಜರು ಪ್ರಾರ್ಥಿಸಿರುವುದಾಗಿ ವಿಜ್ಞಾಪಿಸಿದರು. ವಿಜಯೀಂದ್ರತೀರ್ಥರು ಗುರುಗಳ ಬೃಂದಾವನದ ಕಟ್ಟಡಗಳ ನಿರ್ಮಾಣಕಾರ ಕೈಗೊಂಡಿರುವುದರಿಂದ ತಾವು ಮಧುರೆಯಲ್ಲೇ ಇರಬೇಕಾಗಿರುವುದರಿಂದ ಕಿರಿಯ ಶ್ರೀಪಾದಂಗಳವರನ್ನು ವಿದ್ವತ್ಸಭಾನಿರ್ವಹಣೆಗಾಗಿ ಕಳಿಸಿಕೊಡುವುದಾಗಿ ಹೇಳಿ ಚಿಕ್ಕಸಂಸ್ಥಾನದೊಡನೆ, ಮಠದಪಂಡಿತರು, ತಿಮ್ಮಣ್ಣಾಚಾರ್ಯರೇ ಮೊದಲಾದ ಆತ್ಮೀಯರೊಡನೆ ಶ್ರೀಸುಧೀಂದ್ರತೀರ್ಥರನ್ನು ಕಳಿಸಿಕೊಟ್ಟರು.
ಚಿಕ್ಕ ಸಂಸ್ಥಾನದೊಡನೆ ಹೊರಟ ಸುಧೀಂದ್ರರು ಹಂಪೆಗೆ ಮಾಘ ಕೃಷ್ಣ ಏಕಾದಶಿ ದಿವಸ ಆಗಮಿಸಿ ಶ್ರೀರಘುನಂದನತೀರ್ಥರ ಬೃಂದಾವನಸನ್ನಿಧಿಯಲ್ಲಿ ಬಿಡಾರಮಾಡಿ ಅಲ್ಲಿಯೇ ಏಕಾದಶೀದ್ವಾದಶೀ ಪೂಜಾರಾಧನೆಗಳನ್ನು ನೆರವೇರಿಸಿದರು. ಅದೇ ಸಮಯಕ್ಕೆ ರಾಜಪ್ರತಿನಿಧಿ-ಪಂಡಿತ-ಪೌರಜಾನಪದರೊಡನೆ ಬಂದು ಶ್ರೀಗಳವರನ್ನು ಸ್ವರ್ಣ ಪಾಲಕೀಯಲ್ಲಿ ಮಂಡಿಸಿ ಸಮಸ್ತ ರಾಜವೈಭವದಿಂದ ಶ್ರೀವಿಜಯವಿಠಲನ ಗುಡಿಗೆ ಕರೆದುಕೊಂಡು ಹೋದರು. ದ್ವಾರದಲ್ಲಿ ಶ್ರೀರಂಗರಾಜ ಗುರುಗಳನ್ನು ಸ್ವಾಗತಿಸಿ ಸಭಾಮಂಟಪಕ್ಕೆ ಕರೆತಂದು ಭದ್ರಾಸನದಲ್ಲಿ ಕೂಡಿಸಿ “ವಿದ್ವತ್ಸಭೆಯ ಅಧ್ಯಕ್ಷತೆ ವಹಿಸಿ ಸಮಾರಂಭವನ್ನು ನೆರವೇರಿಸಿಕೊಡಬೇಕು” ಎಂದು ಪ್ರಾರ್ಥಿಸಿ ನಮಸ್ಕರಿಸಿದನು.
ಆನಂತರ ಸಭಾ ಪ್ರಾರಂಭವಾಯಿತು. ಆಶುಕವಿತಾಸ್ಪರ್ಧೆ, ಕಾವ್ಯನಾಟಕಾಲಂಕಾರದಲ್ಲಿ, ವಿಚಾರಗೋಷ್ಠಿ, ನ್ಯಾಯವೇದಾಂತಾದಿಶಾಸ್ತ್ರಗಳಲ್ಲಿ ವಾಕ್ಯಾರ್ಥ ಮುಂತಾದ ಕಾರಕ್ರಮಗಳಾದವು. ಪ್ರತಿದಿನ ನ್ಯಾಯವೇದಾಂತಾದಿಶಾಸ್ತ್ರಗಳಲ್ಲಿ ವಾಕ್ಯಾರ್ಥಮುಂತಾದ ಕಾರಕ್ರಮಗಳಾದವು. ಪ್ರತಿದಿನ ನ್ಯಾಯವೇದಾಂತಾದಿಶಾಸ್ತ್ರಗಳಲ್ಲಿ ಪ್ರತಿವಾದಿಗಳೊಡನೆ ವಾಕ್ಯಾರ್ಥಮಾಡಿ ಜಯಗಳಿಸಿದವರಲ್ಲಿ ಶ್ರೀವಿಜಯೀಂದ್ರರ ಪೂರ್ವಾಶ್ರಮಸಹೋದರರಪುತ್ರರಾದ ರಾಮಚಂದ್ರಾಚಾರರು ಮತ್ತು ತಿಮ್ಮಣ್ಣಾಚಾರರು ಪ್ರಮುಖರೆನಿಸಿ ಸರ್ವರಪ್ರಶಂಸೆಗೆ ಪಾತ್ರರಾದರು. ಇದರಂತೆ ಅನೇಕ ಸಂಗೀತಗಾರರು, ವಾದ್ಯಗಾರರು ನರ್ತಕರು, ತಮ್ಮ ಪಾಂಡಿತ್ಯ - ಕಲಾಪ್ರೌಢಿಮೆಗಳನ್ನು ಪ್ರದರ್ಶಿಸಿದರು. ಸುಧೀಂದ್ರ ಗುರುಗಳ ಅಪ್ಪಣೆಯಂತೆ ತಿಮ್ಮಣ್ಣಾಚಾರರು ವೀಣಾವಾದನಕಛೇರಿ ಮಾಡಿ ತಮ್ಮ ಅಗಾಧಪಾಂಡಿತ್ಯ ಪ್ರದರ್ಶನದಿಂದ ಸಮಸ್ತರನ್ನೂ ಆಶ್ಚರಾನಂದತುಂದಿಲರನ್ನಾಗಿ ಮಾಡಿದರು, ಸಾಮ್ರಾಟ್ ಶ್ರೀರಂಗರಾಜ ತಿಮ್ಮಣ್ಣಾಚಾರರ ಸರ್ವಶಾಸ್ತ್ರಗಳಲ್ಲಿ ಅದ್ವಿತೀಯಪಾಂಡಿತ್ಯ - ಪ್ರತಿಭೆ - ವೀಣಾವಾದನ ಚಾತುರಗಳಿಂದ ತುಂಬಾ ಪ್ರಭಾವಿತನಾಗಿ ಅವರಲ್ಲಿ ಗೌರವಾದರವನ್ನು ತಾಳಿದನು.
ವಿದ್ವತ್ಸಭಾ ಸಮಾರೋಪಸಮಾರಂಭಕಾಲದಲ್ಲಿ ತಿಮ್ಮಣ್ಣಾಚಾರ್ಯರೊಡನೆ ವಾದಕ್ಕಿಳಿದ ಆಸ್ಥಾನಪಂಡಿತರನ್ನು ಆಚಾರ್ಯರು ಜಯಿಸಿ ಮಹಾಸಂಸ್ಥಾನದ ಗೌರವವನ್ನು ಬೆಳಗಿಸಿದರು. ಆನಂತರ ಶ್ರೀಪಾದಂಗಳವರು ಸಂಸ ತ ಮತ್ತು ಕನ್ನಡಭಾಷೆಗಳಲ್ಲಿ ವಿದ್ದತ್ತೂರ್ಣ ಆಶೀರ್ವಾದೋಪದೇಶಮಾಡಿ ಸಮಸ್ತರ ಗೌರವಕ್ಕೆ ಪಾತ್ರರಾದರು.
ಶ್ರೀರಂಗರಾಜ ಮರುದಿನ-ಶಾಲೀವಾಹನಶಕೆ ೧೪೯೭ ನೇ ಯುವಸಂವತ್ಸರದ ಮಾಘಕೃಷ್ಣತ್ರಯೋದಶೀ ಸ್ಥಿರವಾರ 268 ಶ್ರೀವಿರೂಪಾಕ್ಷಸ್ವಾಮಿಯ ಸನ್ನಿಧಿಯಲ್ಲಿ ಶಿವರಾತ್ರಿ ದಿನ ಶ್ರೀಸುಧೀಂದ್ರತೀರ್ಥರಿಗೆ ಮಹಾರಾಣಿ, ಮಂತ್ರಿ, ಸೇನಾನಿ-ರಾಜಪರಿವಾರ ಸಹಿತನಾಗಿ ಸಂಕಲ್ಪ ಪೂರ್ವಕವಾಗಿ ರಾಜಪುರೋಹಿತರು ತಾಮ್ರಶಾಸನವನ್ನು ಓದಿದ ಮೇಲೆ ೧) ಬಚ್ಚನಹಾಳು, ೨) ಖ್ಯಾಡ, ೩) ಯಡವಾಳ, ೪) ಚಂಚಲ, ೫) ಅರಳಿಹಳ್ಳಿಗಳೆಂಬ ಪಂಚಗ್ರಾಮಗಳನ್ನು ಕೃಷ್ಣಾರ್ಪಣಪೂರ್ವಕವಾಗಿ ದಾನಮಾಡಿ,269 ಧನ-ಕನಕವಸ್ತ್ರಾಭರಣಗಳನಿತ್ತು ಪ್ರಣಾಮಮಾಡಿ ಕೃತಾರ್ಥನಾದನು. ಶ್ರೀಪಾದಂಗಳವರು ಸಾಮ್ರಾಟನ ಔದಾರ್ಯ, ಆಚಾರ್ಯ ಮಹಾಸಂಸ್ಥಾನದಲ್ಲಿರುವ ಗೌರವ - ಭಕ್ತಿ ಮುಂತಾದ ಸದ್ಗುಣಗಳನ್ನು ಶ್ಲಾಘಿಸಿ ಫಲಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿ ಮಠಕ್ಕೆ ಬಿಜಯಗೈದರು.
ಅಂದು ಸಂಜೆ ಮಹಾಪ್ರಭುಗಳ ವರ್ಧಂತ್ಯಂಗವಾಗಿ ರಾಜದರ್ಬಾರ್ ನೆರವೇರಿತು. ಆಕಾಲದಲ್ಲಿ ತಿಮ್ಮಣ್ಣಾಚಾರರ ಪಾಂಡಿತ್ಯ-ತೇಜಸ್ಸು, ವೀಣಾವಾದನವೈಶಿಷ್ಟ್ಯಗಳಿಂದ ಪ್ರಭಾವಿತನಾಗಿದ್ದ ಶ್ರೀರಂಗರಾಜ ದರ್ಬಾರಿನಲ್ಲಿ ತಿಮ್ಮಣ್ಣಾಚಾರರಿಗೆ ಅಸಾಧಾರಣ ಗೌರವನೆನಿಸಿದ “ಹಗಲುದೀವಟಿಕೆ'ಯ ರಾಜಗೌರವ. ಜೋಡಿಶಾಲು ಮುಕ್ತಾಮಾಲೆ ಸುವರ್ಣಕಂಕಣಗಳನ್ನಿತ್ತು ಸನ್ಮಾನಿಸಿದನು.
ತಿಮ್ಮಣ್ಣಾಚಾರ್ಯರು ಹೀಗೆ-ಕರ್ನಾಟಕ ಸಾಮ್ರಾಜ್ಯದ ಆಸ್ಥಾನಪಂಡಿತರನ್ನು ವಾದದಲ್ಲಿ ಜಯಿಸಿ ಶ್ರೀರಂಗರಾಜನಿಂದ, ಸೂರ್ಯನ ಪ್ರಖರಕಿರಣಗಳಿಂದಲೂ ಹೋಗಲಾಡಿಸಲದಳವಾದ, ತಮಗೆ ಸಮಾನರಲ್ಲದ - ಪರವಾದಿಗಳ ವಾಕ್ಕುಗಳೆಂಬ ಕತ್ತಲೆಯ ಸಮೂಹಕ್ಕೆ ಪ್ರಬಲ-ಪ್ರತಾಪ ಕಿರಣಗಳುಳ್ಳ (ಕತ್ತಲೆಯನ್ನು ನಾಶಪಡಿಸುವ) “ಹಗಲುದೀವಟಿಕೆ' (ದಿವದೀಪ) ಎಂಬ ಮಹಾಗೌರವವನ್ನು ಪಡೆದು ಕೀರ್ತಿಗಳಿಸಿದರು.
ತಿಮ್ಮಣ್ಣಾಚಾರ್ಯರು ಈ ಹಗಲುದೀವಟಿಕೆಯನ್ನು ಪಡೆದುದನ್ನು ಶ್ರೀರಾಘವೇಂದ್ರ ವಿಜಯಕಾರರು-ಪ್ರತಿವಾದಿಗಳ ಅಪಜಯದ ಅಪಕೀರ್ತಿಯನ್ನು ಪ್ರದರ್ಶಿಸಲೆಂದೇ ಈ ಗೌರವನ್ನು ಪಡೆದರೆಂದು ವರ್ಣಿಸಿದ್ದಾರೆ.
ಕನ್ನಡ ಸಾರ್ವಭೌಮನಾದ ಶ್ರೀರಂಗರಾಜ ವಿದ್ವತ್ಸಭೆಯಲ್ಲಿ ಭಾಗವಹಿಸಿದ ಸಮಸ್ತಪಂಡಿತ-ಕವಿ-ಕಲಾವಿದರಿಗೆ ಸಭಾಧ್ಯಕ್ಷರಾದ ಶ್ರೀಸುರೇಂದ್ರತೀರ್ಥರಿಂದ ಉದಾರವಾಗಿ ಸಂಭಾವನೆಯನ್ನು ಕೊಡಿಸಿದನು.
ಸಮಾರಂಭವು ಮುಗಿದ ಮೇಲೆ ಶ್ರೀಗಳವರು ತಮ್ಮ ಮಹಾಸಂಸ್ಥಾನದ ಪಾರ್ವಾಚಾರ್ಯರಾದ ಶ್ರೀಪದ್ಮನಾಭ-ನರಹರಿ- ಜಯತೀರ್ಥ-ಕವೀಂದ್ರ-ವಾಗೀಶತೀರ್ಥರು ಹಾಗೂ ಶ್ರೀವ್ಯಾಸರಾಜರ ಬೃಂದಾವನಗಳಿಗೆ ಹಸ್ತೋದಕವನ್ನು ಸಮರ್ಪಿಸಿ ಕುಂಭಕೋಣಕ್ಕೆ ದಯಮಾಡಿಸಿದರು.
ಶ್ರೀಸುಧೀಂದ್ರರು ಕುಂಭಕೋಣಕ್ಕೆ ಬಂದ ಸ್ವಲ್ಪದಿನಗಳಲ್ಲೇ ಮಧುರೆಯಿಂದ ವಿಜಯೀಂದ್ರರೂ ದಯಮಾಡಿಸಿದರು. ಪ್ರಿಯಶಿಷ್ಯರು ಸಾಮ್ರಾಟನಿಂದ ಗ್ರಾಮದಾನವನ್ನೂ, ವಿದ್ವನ್ಮಂಡಲಿಯಿಂದ ಗೌರವಾದರಗಳನ್ನು ಗಳಿಸಿದ್ದು, ಪ್ರಿಯತಿಮ್ಮಣ್ಣಾಚಾರರು ಸಾಮ್ರಾಟನಿಂದ ಹಗಲುದೀವಟಿಕೆ” ಗೌರವಸಂಪಾದಿಸಿದ್ದನ್ನು ಕೇಳಿ ತುಂಬಾ ಹರ್ಷಿತರಾದರು.
ತಿಮ್ಮಣ್ಣಾಚಾರ್ಯರು ಪತ್ನಿಯೊಡನೆ ಕಾವೇರಿಪಟ್ಟಣದಲ್ಲಿ ಕೆಲಕಾಲ ವಾಸಮಾಡಲು ಬಯಸಿದರು. ಶ್ರೀವಿಜಯೀಂದ್ರರು, ತಾವು ಹೊಸದಾಗಿ ದಾನಮಾಡಿದ 'ರಾಮಚಂದ್ರಪುರಾಗ್ರಹಾರ'ದಲ್ಲಿ ಕೆಲದಿನಗಳಿದ್ದು ಅನಂತರ ಕಾವೇರಿಪಟ್ಟಣಕ್ಕೆ ಹೋಗಬಹುದು ಎಂದಾಜ್ಞಾಪಿಸಿ ಆಚಾರದಂಪತಿಗಳಿಗೆ ಸಂಸ್ಕಾರಕ್ಕೆ ಬೇಕಾದ ಸಕಲ ಅನುಕೂಲಗಳನ್ನು ಮಾಡಿಕೊಟ್ಟು ಶಿಷ್ಯಸಹಿತರಾಗಿ ಆಚಾರ್ಯದಂಪತಿಗಳನ್ನು ಆಶೀರ್ವದಿಸಿ ರಾಮಚಂದ್ರಪುರಾಗ್ರಹಾರಕ್ಕೆ ಕಳುಹಿಸಿಕೊಟ್ಟರು. ಆಚಾರರು ಗೋಪಿಕಾಂಬಾ ದೇವಿಯೊಡನೆ ರಾಮಚಂದ್ರಪುರಾಗ್ರಹಾರದಲ್ಲಿ ತಮ್ಮ ಭವ್ಯಮನೆಯಲ್ಲಿ ಸತ್ಯರ್ಮಾನುಷ್ಠಾನರತರಾಗಿ, ಪಾಠಪ್ರವಚನಶೀಲರಾಗಿ ಸುಖಸಂತೋಷಗಳಿಂದ ಗೃಹಸ್ಥಧರ್ಮವನ್ನು ಪರಿಪಾಲಿಸುತ್ತಾ ಸರ್ವಜನಾದರಣೀಯರಾಗಿ ರಾಜಿಸಿದರು.
ವಿಜಯೀಂದ್ರರು ತಮ್ಮ ಗುರುಗಳಾದ ಸುರೇಂದ್ರತೀರ್ಥರಿಗಿತ್ತವಚನವನ್ನು ಪರಿಪಾಲಿಸಲು ಸಂಕಲ್ಪಿಸಿ ಪ್ರಿಯಶಿಷ್ಯರಾದ ಸುಧೀಂದ್ರತೀರ್ಥರಿಗೆ ಷಡರ್ಶನಗಳು ಮತ್ತಿತರ ಶಾಸ್ತ್ರಗಳಲ್ಲಿ ಪಾಠ ಹೇಳಲಾರಂಭಿಸಿದರು. ನ್ಯಾಯ-ಮೀಮಾಂಸಾದಿಶಾಸ್ತ್ರಗಳಲ್ಲಿ ಮೊದಲೇ ಪ್ರವೀಣರಾಗಿದ್ದ ಸುಧೀಂದ್ರರು ಆ ಶಾಸ್ತ್ರಗಳ ಉದ್ಘಂಥಗಳನ್ನೂ, ಅದೈತ ವಿಶಿಷ್ಟಾದ್ತಾದಿಶಾಸ್ತ್ರಗಳನ್ನೂ, ದೈತಸಿದ್ಧಾಂತದ ಸಮಗ್ರ ಗ್ರಂಥಗಳನ್ನೂ, ಗುರುಗಳಲ್ಲಿ ಶ್ರದ್ಧೆಯಿಂದ ವ್ಯಾಸಂಗ ಮಾಡಹತ್ತಿದರು. ಮಹಾಪ್ರತಿಭಾಶಾಲಿಗಳೂ ಮೇಧಾವಿಗಳೂ, ಏಕಸಂಧಿಗ್ರಾಹಿಗಳೂ ಆದ ಸುಧೀಂದ್ರತೀರ್ಥರು ಈ ಎಲ್ಲಾ ಶಾಸ್ತ್ರಗಳನ್ನೂ ಸುಲಭವಾಗಿ ಸ್ವಾಧೀನಪಡಿಸಿಕೊಂಡರು. ವಿಜಯೀಂದ್ರರು ಶಿಷ್ಯರಿಗೆ ಶ್ರೀವ್ಯಾಸರಾಜರು ರಚಿಸಿದ ಚಂದ್ರಿಕಾ, ನ್ಯಾಯಾಮೃತ, ತರ್ಕತಾಂಡವಗಳೆಂಬ ಮೇರುಕೃತಿಗಳನ್ನೂ ತಾವು ರಚಿಸಿದ ನೂರಾನಾಲ್ಕು ಗ್ರಂಥಗಳಲ್ಲಿ ಪ್ರಮುಖ ಗ್ರಂಥಗಳನ್ನೂ ಪಾಠಹೇಳಿ ಪ್ರಕಾಂಡಪಂಡಿತರನ್ನಾಗಿ ಮಾಡಿದರು. ಶ್ರೀವಿಜಯೀಂದ್ರತೀರ್ಥರ ಸಕಲವಿದ್ಯಾಪಾಂಡಿತ್ಯ, ವಾದವಿದ್ಯಾಚಾತುರ ಅಸದೃಶಪ್ರತಿಭೆ, ಪರವಾದಿ ದಿಗ್ವಿಜಯ ಕುಶಲತೆಗಳು ಶ್ರೀಸುಧೀಂದ್ರತೀರ್ಥರಲ್ಲಿ ಮನೆಮಾಡಿ ಅವರಿಗೆ ವಿದ್ವತ್‌ಪಂಚದಲ್ಲಿ ಅನಿತರಸಾಧಾರಣ ಮಾನ್ಯತೆಯನ್ನು ತಂದುಕೊಟ್ಟವು.
ತಂಜಾಪುರದ ಮಹಾರಾಜ ಚವ್ವಪ್ಪನಾಯಕನು ಅವನಪುತ್ರ ರಘುನಾಥನಾಯಕರೊಡನೆ ಕುಂಭಕೋಣಕ್ಕೆ ಬಂದು ವಿಜಯೀಂದ್ರರ ದರ್ಶನಮಾಡಿ “ಹಿಂದೆ ಅಚ್ಚುತಪ್ಪನಾಯಕನಿಂದ ತಮಗೆ “ಅರವಿಲಿಮಂಗಲಂ ಅಥವಾ ಅಚ್ಯುತಪ್ಪ ಸಮುದ್ರಂ" ಎಂಬ ಮಹಾಗ್ರಾಮವನ್ನು ದಾನಮಾಡಿಸಿದ್ದೆ. ಅಂದು ನೀವು ಆಶೀರ್ವದಿಸಿದಂತೆ ನನಗೆ ಈ ರಘುನಾಥನು ಪೌತ್ರನಾಗಿ ಜನಿಸಿದನು. ಈಗ ಈ ಪೌತ್ರನ ಅಭ್ಯುದಯಕ್ಕಾಗಿ ಶ್ರೀಪಾದಂಗಳವರಿಗೆ ೧) ಕೊಟ್ಟೂರು, ೨) ಗುಳ್ಳೂರು, ೩) ಪಲ್ಲ ೪) ರಘುವಕಟ್ಟೆ ಎಂಬ ನಾಲ್ಕುಗ್ರಾಮಗಳನ್ನೂ ದಾನಮಾಡುತ್ತಿದ್ದೇನೆ. ಸ್ವೀಕರಿಸಿ ಅನುಗ್ರಹಿಸಬೇಕೆಂದು” ಪ್ರಾರ್ಥಿಸಿ ಗ್ರಾಮದಾನಮಾಡಿ ಕೃತಾರ್ಥನಾದನು.
ವಿಜಯೀಂದ್ರರು ಮಹಾರಾಜನಿತ್ತ ನಾಲ್ಕು ಗ್ರಾಮಗಳಲ್ಲಿ ಕೊಟ್ಟೂರು” ಎಂಬ ಗ್ರಾಮವನ್ನು ವೃತ್ತಿಗಳನ್ನಾಗಿ ಮಾಡಿ ಅನೇಕ ಶ್ರೇಷ್ಠಪಂಡಿತರುಗಳಿಗೆ ದಾನಮಾಡಿದರು. ಆನಂತರ ಶ್ರೀಗಳವರು ಚವಪ್ಪನಾಯಕರನ್ನು ಕಂಡು ನಸುನಕ್ಕು “ಮಹಾರಾಜಾ, ನಮ್ಮ ಸಂಸ್ಥಾನಕ್ಕೆ ಅಸಾಧಾರಣರೀತಿಯಿಂದ ಸೇವೆ ಮಾಡುತ್ತಿದ್ದೀಯೆ, ವಿದ್ಯಾಮಠದ ಪೋಷಕನಾದ ನಿನ್ನಲ್ಲಿ ನಾವು ವಿಶೇಷಾನುಗ್ರಹ ಮಾಡಿ ನಿಮ್ಮ ಮನೆತನದವರಲ್ಲಿ ಒಬ್ಬನನ್ನು ಶ್ರೇಷ್ಠ ಪಂಡಿತನನ್ನಾಗಿ ಮಾಡಲು ಆಶಿಸಿದ್ದೇವೆ. ನಿಮ್ಮ ಪೌತ್ರನಾದ ಈ ಕುಮಾರ ರಘುನಾಥನೇ ಅದಕ್ಕೆ ಅಧಿಕಾರಿಯಾಗಿದ್ದಾನೆ. ಇವನು ನಮ್ಮ ಸುಧೀಂದ್ರರ ಶಿಷ್ಯನಾಗಿ ಅವರಲ್ಲಿ ನ್ಯಾಯ-ಸಾಹಿತ್ಯಶಾಸ್ತ್ರಗಳನ್ನು ಓದಿ ಮಹಾಪಂಡಿತನೂ ಕವಿಯೂ ಆಗಿ ಕೀರ್ತಿಶಾಲಿಯಾಗಬೇಕೆಂದು ನಾವು ಆಶಿಸುತ್ತೇವೆ. ಇದು ನಿನಗೆ ಸಮ್ಮತವೇ ?”ಎಂದು ಕೇಳಿದರು. ಚನ್ನಪ್ಪನಾಯಕನಿಗೆ ಪರಮಾನಂದವಾಯಿತು. ಅವನು ಕರಜೋಡಿಸಿ “ಗುರುದೇವ ! ನಮ್ಮ ರಘುನಾಥನಿಗೆ ಆ ಭಾಗ್ಯವಿದೆಯೆ?” ಎನಲು ವಿಜಯೀಂದ್ರರು “ನಿಜ, ಅವನು ಮಹಾಪಂಡಿತನಾಗುವನು” ಎಂದರು. ಚನ್ನಪ್ಪನಾಯಕ ರೋಮಾಂಚಿತನಾಗಿ ಕುಮಾರ ರಘುನಾಥನಿಂದ ಸುಧೀಂದ್ರರಿಗೆ ನಮಸ್ಕಾರ ಮಾಡಿಸಿ “ಗುರುವರ್ಯ - ಇವನು ನಿಮ್ಮ ಶಿಷ್ಯ, ಇವನಿಗೆ ಜ್ಞಾನದಾನಮಾಡಿ ಅನುಗ್ರಹಿಸಿರಿ” ಎಂದು ಪ್ರಾರ್ಥಿಸಿದ. ಸುಧೀಂದ್ರರು ಮಂದಹಾಸಬೀರಿ “ಶ್ರೀಮೂಲರಾಮ ನಿಮ್ಮ ಅಭೀಷ್ಟವನ್ನು ಪೂರ್ಣಮಾಡುತ್ತಾನೆ” ಎಂದು ಹೇಳಿ ರಘುನಾಥನ ಶಿರದ ಮೇಲೆ ಅಮೃತಹಸ್ತವಿಟ್ಟು ತಾವು ಹೊಂದಿದ್ದ ಶಾಲನ್ನೇ ಅವನಿಗೆ ಹೊದಿಸಿ ಆಶೀರ್ವದಿಸಿದರು. ಇದರಿಂದ ಸರ್ವರೂ ಪರಮಾನಂದಭರಿತರಾದರು.
ತರುವಾಯ ಚವ್ವಪ್ಪನಾಯಕನು “ಗುರುದೇವ, ಹಿಂದೆ ಅಚ್ಯುತಪ್ಪ ತಮಗೆ ದಾನಮಾಡಿದ “ಅರವಿಲಿಮಂಗಲಂ ಅಥವಾ ಅಚ್ಯುತಪ್ಪ ಸಮುದ್ರಂ” ಗ್ರಾಮವನ್ನು ತಮ್ಮ ಅಪ್ಪಣೆಯಂತೆ ೬೦ ವೃತ್ತಿಗಳುಳ್ಳ ಅಗ್ರಹಾರವನ್ನು ೨೩ ಭಾಗವಾಗಿ ವಿಂಗಡಿಸಿ ಗೃಹಗಳನ್ನು ಕಟ್ಟಿಸಿ ಸಿದ್ಧಪಡಿಸಿದ್ದೇವೆ. ಇದಕ್ಕೆ ಕನ್ನಡಸಾಮ್ರಾಟರಾದ ಶ್ರೀರಂಗರಾಜರೂ ಒಪ್ಪಿ, ತಮ್ಮ ಸುಮ್ಮತಿರೂಪವಾಗಿ ಅವರೂ ತಮಗೆ ದಾನಪತ್ರ (ತಾಮ್ರ ಶಾಸನವನ್ನು 274 ಅರ್ಪಿಸಲು ನನ್ನೆಡೆಗೆ ಕಳಿಸಿದ್ದಾರೆ. ಅದನ್ನು ತಾವು ದಾನಮಾಡಿದ ಅಪ್ಪಲಭಟ್ಟರ ಮಕ್ಕಳು ಸೋಮಭಟ್ಟರಿಂದಾರಂಭಿಸಿ ತ್ಯಾಗಸಮುದ್ರಂ ವೆಂಕಟಾದ್ರಿವರೆಗೆ ೨೩ ಜನ ಪಂಡಿತರಿಗೆ ಯಾವಾಗ ಬೇಕಾದರೂ ಒಪ್ಪಿಸಿಕೊಡಬಹುದು” ಎಂದು ವಿಜ್ಞಾಪಿಸಿದ, ಶ್ರೀಗಳವರು ಹತ್ತಾರು ದಿನಗಳಲ್ಲಿ ತಾವೇ ಸ್ವತಃ ಬಂದು ಆ ಕಾರ್ಯ ಮಾಡುವುದಾಗಿ ಹೇಳಿ ರಾಜನನ್ನು ಆಶೀರ್ವದಿಸಿ ಕಳಿಸಿದರು.
ಶ್ರೀವಿಜಯೀಂದ್ರರು ಸಂತೋಷದಿಂದ ಹತ್ತಾರು ದಿನಗಳಲ್ಲಿ ಅಚ್ಯುತಪ್ಪ ಸಮುದ್ರಕ್ಕೆ ದಯಮಾಡಿಸಿ ೨೩ ಜನ ಪಂಡಿತರಿಗೆ ವೃತ್ತಿಗೃಹಗಳ ದಾನ ಮಾಡಿ ಒಪ್ಪಿಸಿ ಕೊಟ್ಟು ಆಶೀರ್ವದಿಸಿ ಬಂದರು.