|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೫. ತಿಮ್ಮಣ್ಣಾಚಾರ್ಯರ ವಿವಾಹ

ವಿಜಯೀಂದ್ರತೀರ್ಥರು ತಿಮ್ಮಣ್ಣಾಚಾರ್ಯರು ವಿವಾಹಯೋಗ್ಯವಯಸ್ಕರಾಗಿರುವುದರಿಂದ ಅವರಿಗೆ ಆದಷ್ಟು ಬೇಗ ಮದುವೆಮಾಡಿಸಿ ಅವರ ಜೀವನವು ಸುಗಮವಾಗುವಂತೆ ಮಾಡುವುದು ತಮ್ಮ ಕರ್ತವ್ಯವೆಂದು ಭಾವಿಸಿದರು. ಅದೇ ವೇಳೆಗೆ ತಮ್ಮ ಪೂರ್ವಾಶ್ರಮ ಷಾಷಿಕವಂಶೀಕರೂ, ಭಾರದ್ವಾಜಗೋತ್ರೋತ್ಪನ್ನ ಬಂಧುಗಳೂ ಆದ ಆನಂದತೀರ್ಥಾಚಾರರ ಜೇಷ್ಠಪುತ್ರಿ ಸೌಭಾಗ್ಯವತಿ ಗೋಪಿಕಾಂಬಾದೇವಿಯು ವಿವಾಹವಯಸ್ಕಳಾಗಿರುವುದನ್ನು ಅರಿತು ಅವಳೇ ತಿಮ್ಮಣ್ಣಾಚಾರ್ಯರಿಗೆ ಯೋಗ್ಯವಧುವೆಂದು ತೀರ್ಮಾನಿಸಿದರು. ಸೌ|| ಗೋಪಿಕಾಂಬಾದೇವಿಯು ಸರ್ವಲಕ್ಷಣಸಂಪನ್ನಳೂ, ಅತ್ಯಂತ ರೂಪಸಿಯೂ, ಸುಶೀಲಳೂ, ಕಾವ್ಯ-ನಾಟಕಾದಿ ಸಾಹಿತ್ಯ-ಸಂಗೀತಕಲಾರಸಿಕಳೂ, ಆಗಿದ್ದಳು. ವಿಜಯೀಂದ್ರರು ಗುರುಗಳಾದ ಸುರೇಂದ್ರತೀರ್ಥರಲ್ಲಿ ವಿಚಾರವನ್ನು ಪ್ರಸ್ತಾಪಿಸಿದರು. ಗುರುಗಳು ಸಂತೋಷದಿಂದ ಆದಷ್ಟು ಬೇಗ ವಿವಾಹವನ್ನು ನೆರವೇರಿಸಬೇಕೆಂದು ಆಜ್ಞಾಪಿಸಿದರು. 

ವಿಜಯೀಂದ್ರರು ಆನಂದತೀರ್ಥಾಚಾರರನ್ನು ಕರೆಯಿಸಿಕೊಂಡು ಅವರಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಗುರುಗಳ ವಿಶೇಷ ಪ್ರೀತಿಪಾತ್ರರೂ, ಶ್ರೇಷ್ಠ ಪಂಡಿತರೂ, ಸದ್ದಂಶದೀಪಕರೂ ಆದ ತಿಮ್ಮಣ್ಣಾಚಾರರು ತಮ್ಮ ಅಳಿಯನಾಗುವುದು ಸೌಭಾಗ್ಯವೆಂದು ಭಾವಿಸಿ ಆನಂದದಿಂದ ತಮ್ಮ ಸಮ್ಮತಿಯನ್ನು ತಿಳಿದರು. ಉಭಯಗುರುಗಳೂ ತಿಮ್ಮಣ್ಣಾಚಾರರನ್ನು ಕರೆದು ಹತ್ತಿರ ಕೂಡಿಸಿಕೊಂಡು ಪ್ರೀತಿಯಿಂದ ತಾವು ನಿಶ್ಚಯಿಸಿದ ವಿವಾಹ ವಿಚಾರವನ್ನು ತಿಳಿಸಿದರು. ಗುರುವಿಧೇಯಚರಿತರಾದ ತಿಮ್ಮಣ್ಣಾಚಾರರು “ಗುರುಗಳ ಚಿತ್ತ” ಎಂದಷ್ಟೇ ನಿವೇದಿಸಿ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಕ್ರಿ.ಶ. ೧೫೭೪ ರಲ್ಲಿ ತಿಮ್ಮಣ್ಣಾಚಾರರ ವಿವಾಹ ಮಹೋತ್ಸವವು ಗೋಪಿಕಾಂಬಾದೇವಿಯೊಡನೆ ಬಹಳ ವಿಜೃಂಭಣೆಯಿಂದ ನೆರವೇರಿತು.

ಗೋಪಿಕಾಂಬಾದೇವಿಯು ಪತಿಗೆ ಅನುರೂಪಳಾದ ಪತ್ನಿಯಾಗಿದ್ದಳು. ಗುರುಹಿರಿಯಲ್ಲಿ ಗೌರವ ಉಳ್ಳವಳಾಗಿಯೂ, ಸಚೀಲಗುಣಾಲಂಕೃತಳಾಗಿ, ಪತಿಯಮನವರಿತು, ಅವರಿಗೆ ಹಿತ-ಸಂತೋಷವಾಗುವ ರೀತಿಯಲ್ಲಿ ವರ್ತಿಸುತ್ತಾ ಪತಿಯ ಅತ್ಯಂತ ಪ್ರೀತಿ ಪಾತ್ರಳಾದಳು. ಅವಳು ವೇದಗಳಿಗೆ ತದನುಸಾರಿಯಾದ ಸ್ಮೃತಿಯಂತೆಯೂ, ಸೂರನಿಗೆ ಪದ್ಮನಿಯಂತೆಯೂ, ವಸಿಷ್ಠರಿಗೆ ಅರುಂಧತಿಯಂತೆಯೂ, ಚಂದ್ರನಿಗೆ ಕುಮುದ್ವತಿಯಂತೆಯೂ, ಪತಿಗೆ ಪ್ರೀತಿಪಾತ್ರಳಾಗಿ, ಪತಿಯನ್ನು ಎಡಬಿಡದೆ ಪ್ರೇಮಾಸ್ಪದ ಪತ್ನಿಯಾಗಿ ಗೋಪಿಕಾಂಬಾದೇವಿಯು ಕಂಗೊಳಿಸಿದಳು.261

ತಿಮ್ಮಣ್ಣಾಚಾರರು ತಮ್ಮ ಜೀವನಸಂಗಾತಿಯಾದ ಗೋಪಿಕಾಂಬಾದೇವಿಯ ಸದ್ಗುಣಗಳು, ಸೇವೆ, ಪ್ರೇಮಾದಿಗಳಿಂದ ಹಿಗ್ಗುತ್ತಾ ಅವಳೊಡನೆ ಸಂತೋಷದಿಂದ ಗಾರ್ಹಸ್ವಧರ್ಮವನ್ನು ಪಾಲಿಸಹತ್ತಿದ್ದರು.