|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೪. ಕಾವೇರಿಪಟ್ಟಣದಲ್ಲಿ

ಶ್ರೀವಿಜಯೀಂದ್ರತೀರ್ಥರ ಆದೇಶದಂತೆ ಮಠದ ಅಧಿಕಾರಿಗಳೊಡನೆ ಕಾವೇರಿ ಪಟ್ಟಣಂ ಅಗ್ರಹಾರಕ್ಕೆ ಪತ್ನಿಸಮೇತರಾಗಿ ಬಂದ ಕನಕಾಚಲಾಚಾರ್ಯರು ಗುರುಗಳ ಅಪ್ಪಣೆಯಂತೆ ಅಲ್ಲಿ ವಿಜಯದಶಮೀ ದಿನದಂದು ಸಂಸ ತವಿದ್ಯಾಪೀಠವನ್ನು ಪ್ರಾರಂಭಿಸಿದರು. ಈ ಸಮಾರಂಭಕ್ಕೆ ಬಂದಿದ್ದ ಊರಿನ ಪ್ರಮುಖ ಗೃಹಸ್ಥರು. ಧರ್ಮಾಭಿಮಾನಿಗಳು-ವೈದಿಕರು-ಪಂಡಿತರು, ಇನ್ನಿತರ ಚಾತುರ್ವಣ್ಯ್ರದ ಮುಖ್ಯಸ್ಥರನ್ನು ಆಚಾರ್ಯರಿಗೆ ಪರಿಚಯ ಮಾಡಿಸಿ ಗುರುವರ್ಯರ ಅಪ್ಪಣೆಯನ್ನು ನಿವೇದಿಸಿ ಕನಕಾಚಲಾಚಾರ್ಯರಿಗೆ ವಾಸಮಾಡಲು ಸ್ವಂತಗೃಹ, ಜೀವನಕ್ಕೆ ಅನುಕೂಲವಾಗಲು ಫಲವತ್ತಾದ ಜಮೀನು ಮತ್ತು ಉದಾರ ವರ್ಷಾಶನವನ್ನು ಏರ್ಪಡಿಸಿ ಕೊಟ್ಟು ಅಧಿಕಾರಿಗಳು ಕುಂಭಕೋಣಕ್ಕೆ ಹಿಂದಿರುಗಿದರು. ಕನಕಾಚಲಾಚಾರ್ಯರಿಗೆ ಈಗ ಜೀವನಕ್ಕೆ ಎಲ್ಲ ಸೌಲಭ್ಯಗಳು ಲಭಿಸಿತ್ತು. ಅಂತೆಯೇ ಅವರು ನಿರಾಲೋಚನೆಯಿಂದ ಪತ್ನಿ ಲಕ್ಷ್ಮೀದೇವಿಯೊಡನೆ ಆನಂದದಿಂದ ಸಂಸಾರಮಾಡಹತ್ತಿದರು. 

ಆಚಾರ್ಯರು ವಿದ್ಯಾಪೀಠದಲ್ಲಿ ವೇದ, ವೇದಾಂಗಗಳು, ಸಾಹಿತ್ಯ, ನ್ಯಾಯ-ವೇದಾಂತಾದಿಶಾಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ಪಾಠಹೇಳುತ್ತಾ ಸಕಲಜನರ ಗೌರವಾದರಗಳಿಗೆ ಪಾತ್ರರಾದರು. ಆಚಾರ್ಯರ ಪಾಂಡಿತ್ಯ, ಸದಾಚಾರ, ಶೀಲ, ಸೌಹಾದ್ರ್ರ ವಿನಯಾದಿ ಸದ್ಗುಣಗಳಿಂದ ಊರಿನಜನ ಪ್ರಭಾವಿತರಾದರು. ಇಂತಹ ಶ್ರೇಷ್ಠ ವ್ಯಕ್ತಿಯನ್ನು ತಮ್ಮೂರಿಗೆ ಕಳಿಸಿ ವಿದ್ಯಾದಾನ ಮಾಡಿಸುತ್ತಿರುವ ಕುಲಗುರುವಿಜಯೀಂದ್ರತೀರ್ಥರಿಗೆ ಜನರು ಕೃತಜ್ಞರಾದರು, ಆಚಾರ್ಯರ ವೀಣಾಪಾಂಡಿತ್ಯವನ್ನು ಕೇಳಿ ತಿಳಿದಿದ್ದ ಗ್ರಾಮದ ಸದೃಹಸ್ಥರು ಸಂಗೀತ-ವೀಣಾಪಾಠಗಳನ್ನೂ ತಮ್ಮ ಹುಡುಗರಿಗೆ ಹೇಳಿಕೊಡಬೇಕೆಂದು ಪ್ರಾರ್ಥಿಸಿದ್ದರಿಂದ ಆಚಾರ್ಯರು ಸಂಗೀತವಿಭಾಗವನ್ನೂ ವಿದ್ಯಾಪೀಠದಲ್ಲಿ ಪ್ರಾರಂಭಿಸಿದರು. ಹತ್ತಿಪ್ಪತ್ತು ಜನ ಮನೆತನಸ್ಥ ಬಾಲ-ಬಾಲಕಿಯರು ಸಂಗೀತ-ವೀಣಾವಾದನ ವಿದ್ಯೆಯನ್ನು ಆಚಾರ್ಯರಿಂದ ಕಲಿಯಹತ್ತಿದರು. ಕೆಲವೇ ತಿಂಗಳುಗಳಲ್ಲಿ ವಿದ್ಯಾಪೀಠದ, ಆಚಾರ್ಯರ ಕೀರ್ತಿ ಬೆಳಗಲಾರಂಭಿಸಿತು. 

ಒಂದು ದಿನ ಕುಂಭಕೋಣದಿಂದ ಬಂದ ಓರ್ವ ಗೃಹಸ್ಥರು ಕನಕಾಚಲಾಚಾರರ ಮನೆಗೆ ಬಂದು ತಂಜಾವೂರಿನಲ್ಲಿ ಕುಮಾರ ತಿಮ್ಮಣ್ಣನು ಶ್ರೀವಿಜಯೀಂದ್ರ ಗುರುಗಳ ಅಪ್ಪಣೆಯಂತೆ ಉತ್ತರಾದಿ ಸಂಗೀತಗಾರರು, ವೈಣಿಕಪಂಡಿತರುಗಳನ್ನು ರಾಜಾಸ್ಥಾನದಲ್ಲಿ ಜರುಗಿದ ಸ್ಪರ್ಧೆಯಲ್ಲಿ ಸೋಲಿಸಿ ವಿಜಯಗಳಿಸಿದ್ದು, ಮಹಾರಾಜರು ಅವನಿಗೆ “ಬಾಲಸರಸ್ವತಿ” ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದು ಮುಂತಾದ ವಿಚಾರಗಳನ್ನು ನಿರೂಪಿಸಿದರು. ಮಗನ ಅಭ್ಯುದಯ, ಗುರುಗಳ ಅನುಗ್ರಹಗಳನ್ನು ಕೇಳಿ ತಿಳಿದ ಆಚಾರ್ಯದಂಪತಿಗಳಿಗೆ ಪರಮಾನಂದವಾಯಿತು. 

ಇತ್ತ ಕುಂಭಕೋಣದಲ್ಲಿ ಹಿರಿಯಗುರುಗಳಾದ ಸುರೇಂದ್ರತೀರ್ಥರು ಮತ್ತು ವಿಜಯೀಂದ್ರತೀರ್ಥರ ಅಪಾರ ವಾತ್ಸಲ್ಯ, ಪ್ರೀತಿ, ಆದರಗಳನ್ನು ಪಡೆದು ಗುರುಗಳ ಸಂರಕ್ಷಣೆಯಲ್ಲಿ ತಿಮ್ಮಣ್ಣ ಅಭಿವೃದಿಸಹತ್ತಿದನು. ಶ್ರೀಗಳವರು ತಿಮ್ಮಣ್ಣನಿಗೆ ನ್ಯಾಯ-ವೇದಾಂತ-ಮೀಮಾಂಸಾದಿಶಾಸ್ತ್ರಗಳಲ್ಲಿ ಪಾಠ ಹೇಳಿ ನಾಲ್ಕಾರು ವರ್ಷಗಳಲ್ಲೇ ಮಹಾಪಂಡಿತನನ್ನಾಗಿ ಮಾಡಿದರು. 

ತಿಮ್ಮಣ್ಣ ಶ್ರೀಯವರ ಅಪ್ಪಣೆಯಂತೆ ಮಠದಲ್ಲಿ ಜರುಗುತ್ತಿದ್ದ ವಾಕ್ಯಾರ್ಥ, ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿ ತನ್ನ ಪಾಂಡಿತ್ಯಪ್ರತಿಭಾದಿಗಳಿಂದ ಹೆಸರು ಗಳಿಸಲಾರಂಭಿಸಿದ. ಅವನ ಮೇಲಿನ ಅಗಾಧ ಪ್ರೀತಿಯಿಂದ ಉಭಯಗುರುಗಳು ಅವನನ್ನು ವಿದ್ಯಾಪೀಠದ ಅಧ್ಯಾಪಕನನ್ನಾಗಿ ಮಾಡಿ ಗೌರವಿಸಿದರು. ತಂದೆಗೆ ತಕ್ಕ ಮಗನೆನಿಸಿ ತಿಮ್ಮಣ್ಣ ಖ್ಯಾತಿಯ ಸೋಪಾನವೇರತೊಡಗಿದನು. 

ಕನಕಾಚಲಾಚಾರರು ವಿದ್ಯಾಪೀಠ ಸ್ಥಾಪಿಸಿ ಮೂರು-ನಾಲ್ಕು ವರ್ಷಗಳಾಗಿತ್ತು. ಒಂದು ದಿನ ಕಾವೇರಿಪಟ್ಟಣದಿಂದ ಬಂದ ಶ್ರೀಮಠದ ಶಿಷ್ಯರೊಬ್ಬರು ಶ್ರೀಯವರ ದರ್ಶನ ಪಡೆದು ಕನಕಾಚಲಾಚಾರ ದಂಪತಿಗಳು ಅನಾರೋಗ್ಯದಿಂದ ನರಳುತ್ತಿರುವುದಾಗಿಯೂ, ಮಗನನ್ನು ನೋಡಲು ಆಶಿಸುತ್ತಿರುವುದಾಗಿಯೂ ತಿಳಿಸಿದರು. ಗುರುಗಳು ಕೂಡಲೇ ತಿಮ್ಮಣ್ಣನನ್ನು ಕರೆಸಿ ಅವನಿಗೆ ವಿಷಯವನ್ನು ತಿಳಿಸಿ, ಕೆಲದಿನ ಕಾವೇರೀಪಟ್ಟಣದಲ್ಲಿದ್ದು ಔಷಧೋಷಚಾರ ಮಾಡಿಸಿ ತಂದೆ-ತಾಯಿಗಳ ಸೇವೆಮಾಡಿ ಅವರ ಮನಸ್ಸಿಗೆ ಸಂತೋಷವನ್ನುಂಟುಮಾಡಿ ಬರಬೇಕೆಂದು ಆಜ್ಞಾಪಿಸಿ, ತಮ್ಮ ಪೂರ್ವಾಶ್ರಮ ಸಹೋದರ ಗುರುಪ್ರಸಾದರ ಪುತ್ರರಾದ ರಾಮಚಂದ್ರಾಚಾರರನ್ನು ಜೊತೆ ಮಾಡಿ ತಿಮ್ಮಣ್ಣನನ್ನು ಕಾವೇರಿಪಟ್ಟಣಕ್ಕೆ ಕಳಿಸಿಕೊಟ್ಟರು. ಆತುರ- ಕಾತುರಗಳಿಂದ ಕಾವೇರೀ ಪಟ್ಟಣಕ್ಕೆ ಬಂದ ತಿಮ್ಮಣ್ಣ ಮನೆಯಲ್ಲಿ ತಾಯಿಯು ಹಾಸಿಗೆ ಹಿಡಿದು ಮಲಗಿರುವುದನ್ನೂ, ತಂದೆಯೂ ಅನಾರೋಗ್ಯದಿಂದ ಬಳಲುತ್ತಿರುವುದನ್ನೂ ಕಂಡು ದುಃಖಿತನಾದನು. ಮಗ ಮನೆಗೆ ಬಂದಿದ್ದರಿಂದ ತಾಯಿ-ತಂದೆಗಳ ಮನಸ್ಸಿಗೆ ಸಮಾಧಾನವಾಯಿತು. ತಿಮ್ಮಣ್ಣ ರಾಮಚಂದ್ರಾಚಾರರ ಸಹಕಾರದಿಂದ ಹಗಲಿರುಳು ತಾಯಿ-ತಂದೆಗಳ ಸೇವೆ, ಔಷಧೋಪಚಾರಾದಿಗಳನ್ನು ಮಾಡಲಾರಂಭಿಸಿದನು. ದಿನೇ ದಿನೇ ಕ್ಷೀಣಿಸುತ್ತಾ ಬಂದ ತಾಯಿ ಲಕ್ಷ್ಮೀದೇವಿ ಒಂದು ದಿನ ಪತಿ-ಪುತ್ರರ ಮುಖವನ್ನು ಕಣ್ಣು ತುಂಬಾ ನೋಡಿ ಇಹಲೋಕದ ವ್ಯಾಪಾರ ಮುಗಿಸಿದಳು. ಪಿತಾ-ಪುತ್ರರು ದುಃಖಸಮುದ್ರದಲ್ಲಿ ಮುಳುಗಿದರು. 

ತಾಯಿಯ ಅಂತ್ಯಕ್ರಿಯೆಯನ್ನೆಲ್ಲಾ ಮುಗಿಸಿ ನಾಲ್ಕಾರುದಿನಗಳಾಗುವಷ್ಟರಲ್ಲೇ ಪತ್ನಿಯ ವಿಯೋಗದುಃಖಪೀಡಿರಾದ ಕನಕಾಚಲಾಚಾರರೂ ಜೀವನದಲ್ಲಿ ಆಸೆ ತೊರೆದು ಹಾಸಿಗೆ ಹಿಡಿದು ಮಲಗಿದರು. ತಿಮ್ಮಣ್ಣ ಕಳವಳಕ್ಕೀಡಾದನು. ರಾಮಚಂದ್ರಾಚಾರರು ಅವನಿಗೆ ಧೈರ್ಯ ಹೇಳುತ್ತಾ, ಕಾಲಕಾಲಕ್ಕೆ ಸರಿಯಾಗಿ ಔಷಧ-ಪಥಗಳನ್ನು ಮಾಡಿಸಿದರು. ಹತ್ತಾರು ದಿನಗಳಲ್ಲಿ ಉಳಿಯುವ ಅಶೆತೊರೆದ ಆಚಾರರು ತಿಮ್ಮಣ್ಣನು ಹತ್ತಿರ ಕೂಡಿಸಿಕೊಂಡು ಕಣ್ಣೀರುಹಾಕುತ್ತಾ ತಿಮ್ಮಣ್ಣ, ನನ್ನ ಕಾಲವು ಮುಗಿಯುತ್ತಾ ಬಂದಿದೆ. ನಿನ್ನ ತಾಯಿಯ ಬಳಿಗೆ ಹೋಗಲು ಸಿದ್ದನಾಗುತ್ತಿದ್ದೇನೆ. ನನಗೆ ಅದಕ್ಕಾಗಿ ದುಃಖವಿಲ್ಲ. ಎಲ್ಲರೂ ಒಂದು ದಿನ ಮರಣಹೊಂದಲೇಬೇಕು. ಅದು ಭಗವತ್ಸಂಕಲ್ಪ ! ನನಗೆ ಒಂದೇ ಅತೃಪ್ತಿ. ನಿನಗೆ ವಿವಾಹವನ್ನು ಜರುಗಿಸಿ ನೀನು ಸುಖದಿಂದ ಸಂಸಾರಮಾಡುವುದನ್ನು ನೋಡಲಾಗಲಿಲ್ಲ - ಎಂಬುದೊಂದೇ ಚಿಂತೆ, ಶ್ರೀಶೇಚ್ಛಾ, ನನಗೆ ಇಷ್ಟೇ ಲಭ್ಯ. ಮಗು, ನಿನಗಿನ್ನು ವಿಜಯೀಂದ್ರಪೂಜ್ಯಪಾದರೇ ದಿಕ್ಕು, ನೀನು ಅವರ ಆಜ್ಞೆಯಂತೆ ವರ್ತಿಸುತ್ತಾ, ಅನುಗ್ರಹಕ್ಕೆ ಪಾತ್ರನಾಗು, ಆ ಮಹನೀಯರು ನಮ್ಮ ವಂಶದ ಹಿತೈಷಿಗಳು, ನೀನು ಅವರ ದಯೆಯಿಂದ ಬಹಳ ಕೀರ್ತಿಗಳಿಸಿ ನಮ್ಮ ವಂಶದ ಗೌರವವನ್ನು ಬೆಳಗಿಸುತ್ತೀಯೇ ಎಂಬ ನಂಬಿಕೆ ನನಗಿದೆ - ಮಗು ತಿಮ್ಮಣ್ಣ ದೀರ್ಘಾಯುಷ್ಯವಂತನಾಗಿ ಬಾಳು. ನಿನಗೆ ಮಂಗಳವಾಗಲಿ” ಎಂದು ಅತಿಕಷ್ಟದಿಂದ ಹೇಳಿ ಪ್ರಜ್ಞಾಶೂನ್ಯರಾದರು. ಹೋದ ಪ್ರಜ್ಞೆ ಮತ್ತೆ ಬರಲಿಲ್ಲ. ತಿಮ್ಮಣ್ಣನಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು. ದುಃಖಸಾಗರದಲ್ಲಿ ಮುಳುಗಿಹೋದ ತಿಮ್ಮಣ್ಣ. 

ರಾಮಚಂದ್ರಾಚಾರರು ಬಹುವಿಧವಾಗಿ ತಿಮ್ಮಣ್ಣನನ್ನು ಸಾಂತ್ವನಗೊಳಿಸಿ ಪಿತೃವಿನ ಅಪರಕರ್ಮಗಳನ್ನು ಊರಿನ ಪ್ರಮುಖ ಜನರ ಸಹಾಯ-ಸಹಕಾರಗಳಿಂದ ಮಾಡಿಸಿದರು. ಊರಿನ ಪ್ರತಿಯೊಬ್ಬರೂ ತಿಮ್ಮಣ್ಣಾಚಾರರಿಗೆ ಸಮಾಧಾನ ಹೇಳಿ ಸಾಂತ್ವನಗೊಳಿಸಿದರು. ಕೆಲದಿನಗಳಾದ ಮೇಲೆ ರಾಮಚಂದ್ರಾಚಾರರೊಡನೆ ಕುಂಭಕೋಣಕ್ಕೆ ಬಂದು ಸೇರಿದರು. 

ವಿಜಯೀಂದ್ರಗುರುಗಳು ಜರುಗಿದ ಅನಾಹುತವನ್ನು ಕೇಳಿ ಮರುಗಿದರು, ಓರ್ವ ಅಸಾಧಾರಣ ಪಂಡಿತ, ಗೆಳೆಯನನ್ನು ಕಳೆದುಕೊಂಡೆನೆಂದವರು ತುಂಬಾ ವಿಷಾದಿಸಿದರು, ಶ್ರೀಸುರೇಂದ್ರ-ವಿಜಯೀಂದ್ರಗುರುಗಳು ತಿಮ್ಮಣ್ಣಾಚಾರ್ಯನಿಗೆ ಬಹುಬಗೆಯಾಗಿ ಸಮಾಧಾನ ಹೇಳಿ, ಪ್ರೀತ್ಯಾದರದಿಂದ ಅವನಿಗೆ ಸ್ವಲ್ಪವೂ ಚಿಂತೆಯುಂಟಾಗದಂತೆ ಮಾಡಲು ಸದಾ ತಮ್ಮ ಜತೆಗೇ ಇಟ್ಟುಕೊಂಡು ಕಾಪಾಡಹತ್ತಿದರು. ತಿಂಗಳುಗಳು ಉರಳಿದವು, ಕ್ರಮೇಣ ದುಃಖವು ಕಡಿಮೆಯಾಗಹತ್ತಿತು. ತಿಮ್ಮಣ್ಣಾಚಾರ ಮೊದಲಿನಂತೆ ಚಟುವಟಿಕೆಯಿಂದ ವಿದ್ಯಾಪೀಠದಲ್ಲಿ ಅಧ್ಯಾಪಕನಾಗಿ, ಗುರುಸೇವೆ ಮಾಡುತ್ತಾ ಕಾಲಕಳೆದರು.