|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೨. ಪಂಡಿತರಿಗೆ ಆಶ್ರಮ

ಕುಂಭಕೋಣದ ವಿದ್ಯಾಮಠ'ದಲ್ಲಿ ಶಿಷ್ಯ-ಭಕ್ತ ಜನರಿಗೆ ವಿಜಯೀಂದ್ರತೀರ್ಥರು ಭಗವಂತನ ಸತ್ತತ್ವರಹಸ್ಯಗಳನ್ನೂ ಜಗತ್‌ ಸೃಷ್ಟಿಕರ್ತನಾದ ಚತುರಾನನಬ್ರಹ್ಮ ದೇವರ ಉತ್ಪತ್ತಿಗೆ ಮೂಲವಾದ ಶ್ರೀಪದ್ಮನಾಭತ್ವವನ್ನೂ ಅಂತಹ ಶ್ರೀಮನ್ನಾರಾಯಣನ ಲೀಲಾವಿಲಾಸವನ್ನು ಉಪದೇಶಿಸುತ್ತಿದ್ದರು. 

ಅದೇ ವೇಳೆಗೆ ನಾಲ್ಕಾರು ಜನ ಪಂಡಿತರೊಡನೆ ಕನಕಾಚಲಾಚಾರ್ಯರು ತಮ್ಮ ಪುತ್ರ ತಿಮ್ಮಣ್ಣನೊಡಗೂಡಿ ಬಂದು ಗುರುಗಳಿಗೆ ಸಾಷ್ಟಾಂಗವೆರಗಿದರು. ಆಚಾರ್ಯರನ್ನು ಕಂಡು ಶ್ರೀಗಳವರು ದರಹಾಸಬೀರಿ “ಪ್ರಿಯ ಕನಕಾಚಲಾಚಾರ್ಯರಿಗೆ ಸ್ವಾಗತ ಈ ಸುಂದರಬಾಲಕ ನಿಮ್ಮ ಕುಮಾರ ತಿಮ್ಮಣ್ಣನಲ್ಲವೇ ? ಆಗಲೇ ಎಷ್ಟು ಬೆಳೆದುಬಿಟ್ಟಿದ್ದಾನೆ!” ಎಂದರು. ಕನಕಾಚಲಾಚಾರ್ಯರು ಕರಜೋಡಿಸಿ “ಪೂಜ್ಯಗುರುಪಾದರು ಬಡಶಿಷ್ಯನನ್ನು ಮರೆಯದಿರುವುದು ನನ್ನ ಸೌಭಾಗ್ಯ! ಮೂರುವರ್ಷದ ಬಾಲಕನಾಗಿದ್ದಾಗ ತಿಮ್ಮಣ್ಣನನ್ನು ನೋಡಿದ್ದ ಗುರುಗಳು ಅವನ ಗುರುತು ಹಿಡಿದಿದ್ದು ಆಶ್ಚರ್ಯ!” ಎಂದು ವಿಜ್ಞಾಪಿಸಿದರು. 

ಪ್ರಸನ್ನಚಿತ್ತರಾದ ಶ್ರೀಗಳವರು “ನಮ್ಮ ಉಭಯಗುರುಪಾದರ ಹಾಗೂ ನಮ್ಮ ಕುಲಬಂಧುಗಳೂ ಆತ್ಮೀಯರೂ ಆದ ನಿಮ್ಮನ್ನು ಮರೆಯುವುದೆಂತು ? ಆಚಾರ ವಿಜಯನಗರದ ಪತನವೇ ನಿಮ್ಮ ಆಗಮನಕ್ಕೆ ಕಾರಣವಿರಬಹುದಲ್ಲವೇ ?” ಎಂದು ಪ್ರಶ್ನಿಸಲು ಆಚಾರ್ಯರು "ಸ್ವಾಮಿ, ಅಳಿಯರಾಮರಾಜರು ರಕ್ಷಸತಂಗಡಿಯ ಕಾಳಗದಲ್ಲಿ ಮೃತರಾದ ಬಳಿಕ ಉನ್ಮತ್ತಯವನರ ಧಾಳಿಯನ್ನು ಎದುರಿಸಲಾಗದೆ ಕನ್ನಡಸಾಮ್ರಾಜ್ಯ ನುಚ್ಚುನೂರಾಯಿತು. ಮಹಾಸ್ವಾಮಿ, ಅದನ್ನು ನೆನೆದರೆ ಈಗಲೂ ಮೈಕಂಪಿಸುವುದು. ವಿಜಯನಗರದ ಪತನದೊಡನೆ ಪಂಡಿತರು, ಕಲೆಗಾರರು ನಿರಾಶ್ರಿತರಾದರು. ನಾನು ಮಡದಿ-ಮಕ್ಕಳೊಡನೆ, ಈ ಪಂಡಿತರ ಜೊತೆಗೆ ಹೊರಟು ಬಹುಕಷ್ಟ ನಷ್ಟಗಳಿಗೆ ಗುರಿಯಾಗಿ ದೈವಾನುಗ್ರಹದಿಂದ ಪ್ರಯಾಸದಿಂದ ತಮ್ಮ ಸನ್ನಿಧಿಗೆ ಬಂದು ಸೇರಿದ್ದೇನೆ. ಈಗ ತಾವೇ ಆಶ್ರಯ ನೀಡಬೇಕು!” ಎಂದು ವಿಜ್ಞಾಪಿಸಿದರು. 

ಆಚಾರ್ಯರ ಮಾತನ್ನಾಲಿಸಿ ಶ್ರೀಯವರಮನಸ್ಸು ಉದ್ವಿಗ್ನವಾಯಿತು. ಕಣ್ಣಿನಲ್ಲಿ ನೀರು ಮಿಡಿಯಿತು. ಕಣ್ಣೀರನ್ನು ಒರೆಸಿಕೊಂಡು ನಿಟ್ಟುಸಿರುಬಿಡುತ್ತಾ “ಆಚಾರರೇ, ಕಾಲನ ಕರಾಳಗರ್ಭದಲ್ಲಿ ಅದೆಷ್ಟೋ ಸಾಮ್ರಾಜ್ಯಗಳು ಅಡಗಿಹೋದವು. “ತೇನ ವಿನಾ ತೃಣಮಪಿ ನ ಚಲತಿ” ಅಲ್ಲವೇ? ಭಗವಚಿತ್ತಕ್ಕೆ ಉಪಾಯವಿಲ್ಲ. ನಮ್ಮ ಕನ್ನಡಸಾಮ್ರಾಜ್ಯವು ಹಿಂದಿನಂತೆ ಬಲಾಢವಾಗಿ ಆ ವೈಭವಗಳಿಂದಲ್ಲದಿದ್ದರೂ, ಮತ್ತೊಮ್ಮೆ ದಕ್ಷಿಣಭಾರತದಲ್ಲಿ ತಲೆಯೆತ್ತಿ ಮೆರೆಯುವುದೆಂಬ ನಂಬಿಕೆ ನಮಗಿದೆ! ಆಚಾರ, ನೀವು ಆಶ್ರಯ ವಿಚಾರ ಹೇಳಿದಿರಿ. ಶ್ರೀಮದಾಚಾರ್ಯರ ಮಹಾಸಂಸ್ಥಾನವಿರುವುದಾದರೂ ಏತಕ್ಕೆ? ನಿಮ್ಮಂಥ ಪಂಡಿತರಿಗಾಗಿಯೇ ಅಲ್ಲವೇ ? ಸರಿಯಾದ ವ್ಯವಸ್ಥೆ ಮಾಡುವವರೆಗೆ ಶ್ರೀಮಠದಲ್ಲೇ ಸಂತೋಷದಿಂದಿರಬಹುದು. ಶೀಘ್ರವಾಗಿ ಎಲ್ಲರ ಜೀವನಕ್ಕೂ ತಕ್ಕ ವ್ಯವಸ್ಥೆ ಮಾಡುತ್ತೇವೆ” ಎಂದರು. ಕನಕಾಚಲಾಚಾರಾದಿಗಳು ಸಂತಸದಿಂದ ಶ್ರೀಯವರ ಅಭಯವಚನದಿಂದ ಧನ್ಯರಾದೆವು. ತಮಗೆ ನಾವೆಲ್ಲರೂ ಋಣಿಗಳಾಗಿದ್ದೇವೆ” ಎಂದು ಬಿನ್ನವಿಸಿದರು. 

ಅನಂತರ ವಿಜಯೀಂದ್ರರು ಆಚಾರ್ಯರನ್ನು ನೋಡಿ ನಗುತ್ತಾ “ನೀವು ಈಗ ವೀಣಾವಾದನದಲ್ಲಿ ಅಸಾಧಾರಣಪ್ರಾವೀಣ್ಯತೆ ಗಳಿಸಿರುವುದಾಗಿ ಕೇಳಿದೆವು. ಸಂತೋಷ, ಇಂದು ಅನಂತಪದ್ಮನಾಭನ ಹಬ್ಬ. ಪೂಜಾಕಾಲದಲ್ಲಿ ನಿಮ್ಮ ವೀಣಾವಾದನವಾಗಲಿ. ಕುಮಾರ ತಿಮ್ಮಣ್ಣನಿಗೂ ವೀಣೆಯ ಅಭ್ಯಾಸಮಾಡಿಸಿರುವಿರಾ?” ಎಂದು ಕೇಳಿದರು. ಆಚಾರರು ಲಜ್ಜೆಯಿಂದ ತಲೆತಗ್ಗಿಸಿ “ಸಕಲಕಲಾಪಾರಂಗತರಾದ ಮಹಾಸ್ವಾಮಿಯವರ ಮುಂದೆ ವೀಣಾವಾದನಮಾಡುವ ಯೋಗ್ಯತೆಯಿಲ್ಲ. ಆದರೂ ಅಪ್ಪಣೆಯಂತೆ ಕಲಿತವಿದ್ಯೆಯನ್ನು ಗುರುಸನ್ನಿಧಿಯಲ್ಲಿ ಪಾಠ ಒಪ್ಪಿಸುತ್ತೇನೆ. ಶ್ರೀಯವರ ಆಶೀರ್ವಾದ ಬಲದಿಂದ ತಿಮ್ಮಣ್ಣನೂ ವೀಣಾಭ್ಯಾಸಮಾಡುತ್ತಿದ್ದಾನೆ. ಅಂದು ತಾವು ಅನುಗ್ರಹ ಪೂರ್ವಕವಾಗಿ ಸ್ವಹಸ್ತದಿಂದ ಕುಮಾರನಿಗೆ ಅಕ್ಷರಾಭ್ಯಾಸಮಾಡಿಸಿದ್ದರ ಫಲವಾಗಿ ತಿಮ್ಮಣ್ಣನು ಕಾವ್ಯಾಲಂಕಾರಾದಿಸಾಹಿತ್ಯ, ವೇದ, ನ್ಯಾಯ-ವೇದಾಂತಾದಿಶಾಸ್ತ್ರಗಳನ್ನೂ ಅಧ್ಯಯನಮಾಡುತ್ತಿದ್ದಾನೆ. ಅವನಿಗೆ ಶಾಸ್ತ್ರದ ಉದ್ದಂಥಗಳ ಪಾಠಹೇಳಿ ಅಭಿವೃದ್ಧಿಗೆ ತಂದು ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದರು. ಆಗ ಶ್ರೀಯವರು ತಿಮ್ಮಣ್ಣನ ಶಿರದ ಮೇಲೆ ಕರವಿರಿಸಿ “ಕುಮಾರ ತಿಮ್ಮಣ್ಣನ ಯೋಗಕ್ಷೇಮ ನಮಗೆ ಸೇರಿದೆ. ಚಿಂತಿಸದಿರಿ. ನಾವೇ ಇವನಿಗೆ ಸಮಾಡಿಸುತ್ತೇವೆ, ಈಗ ಸಂತೋಷವಾಯಿತೆ ?” ಎಂದು ಹೇಳಿದರು. ಆಚಾರರು ಹರ್ಷಪುಲಕಿತರಾಗಿ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. ಆನಂತರ ಶ್ರೀಯವರು ಪೂಜಾರಾಧನೆಗೆ ಚಿತೈಸಿದರು. 

ವಿಜಯೀಂದ್ರಗುರುಗಳು ಶ್ರೀಮೂಲರಾಮನ ಪೂಜಾರಾಧನೆಯಲ್ಲಿ ಮಗ್ನರಾಗಿದ್ದಾರೆ. ಜೊತೆಗೆ ಕಲ್ಲೋಕ್ತ ಪ್ರಕಾರವಾಗಿ ಶ್ರೀಅನಂತಪದ್ಮನಾಭದೇವರ ಪೂಜೆಯನ್ನೂ ನೆರವೇರಿಸುತ್ತಿದ್ದಾರೆ. ಶ್ರೀಯವರ ಮುಂಭಾಗದಲ್ಲಿ ಕುಳಿತು ಕನಕಾಚಲಾಚಾರ್ಯ ಮತ್ತು ತಿಮ್ಮಣ್ಣರೂ ವೀಣಾವಾದನ ಮಾಡುತ್ತಿದ್ದಾರೆ. ಹಂಸಧ್ವನಿ, ಮೋಹನ, ಕಲ್ಯಾಣಿ, ಧನ್ಯಾಸಿ, ರಾಮಪ್ರಿಯ ಮುಂತಾದ ರಾಗಗಳಲ್ಲಿ ಅಪೂರ್ವಕೃತಿಗಳನ್ನು ನುಡಿಸಿ ಸರ್ವರನ್ನೂ ಆನಂದಗೊಳಿಸಿದರು. ಆ ತರುವಾಯ ಕುಮಾರ ತಿಮ್ಮಣ್ಣನೊಬ್ಬನೇ ವಿಸ್ತಾರವಾಗಿ ಭೈರವೀರಾಗವನ್ನಾಲಾಪಿಸಿ ವೀಣೆಯನ್ನು ನುಡಿಸಲಾರಂಭಿಸಿದನು. ಅದ್ಭುತ ರಾಗವಾಹಿನಿಯು ವೀಣೆಯಿಂದ ಅಲೆಅಲೆಯಾಗಿ ತೇಲಿಬರುತ್ತಿದೆ, ಆಲಾಪನೆ ಮುಗಿದು ತಾನ ಪ್ರಾರಂಭವಾಯಿತು, ಅಹಹ ! ಏನದ್ಭುತ ! ಅದೆಂತಹ ಇಂಪು ! ರಾಗಾಭಿಮಾನಿದೇವತೆಯೇ ಸಾಕಾರ ತಾಳಿ ಬಂದು ಸರ್ವರ ಮನಸ್ಸನ್ನೂ ಆಕರ್ಷಿಸುತ್ತಾ ವೀಣೆಯಿಂದ ಹೊರಹೊಮ್ಮುತ್ತಿರುವಂತೆ ಕಂಡುಬರುತ್ತಿದೆ ! ಪಲ್ಲವಿಯನ್ನು ಪ್ರಾರಂಭಿಸಿದ ತಿಮ್ಮಣ್ಣ, ಶ್ರೀಮೂಲರಾಮ-ಪದ್ಮನಾಭದೇವರನ್ನು ಪೂಜಿಸುತ್ತಿರುವ ವಿಜಯೀಂದ್ರರನ್ನೇ ಕುರಿತಾದ ಸುಂದರ ಪಲ್ಲವಿ ! ಶ್ರೀಯವರು ಅದನ್ನಾಲಿಸಿ ನಸುನಕ್ಕರು. ಕುಮಾರ ಪಲ್ಲವಿಯನ್ನು ಬಾರಿಸಹತ್ತಿದ - “ಕಮಲನಾಭ ಮೂಲರಾಮ ವಿಜಯೀಂದ್ರನುತ ವಂದಿಪೆ !” ವಿನೂತನ ಸ್ವರವಿನ್ಯಾಸ-ಗಮಕ-ಮೂರ್ಛನಗಳಿಂದ ಅದ್ಭುತವಾಗಿ ವೀಣೆ ನುಡಿಸುತ್ತಿದ್ದಾನೆ. ಆ ಸಂಗೀತಸೌರಭ ಸರ್ವರ ಮನಸ್ಸಿಗೂ ಪರಮಾನಂದವನ್ನು ತಂದೀಯುತ್ತಿದೆ. ಪಲ್ಲವಿ ಮುಗಿದು ಮಂಗಳದೊಡನೆ ತಿಮ್ಮಣ್ಣವೀಣಾವಾದನವನ್ನು ಮುಗಿಸಿದ. ಕೇವಲ ಹದಿನಾಲ್ಕು-ಹದಿನೈದು ವರ್ಷದ ಹುಡುಗ ಮಹಾಪಂಡಿತರನ್ನೂ ಮೀರಿಸುವ ಪಾಂಡಿತ್ಯ-ಪ್ರತಿಭೆಗಳನ್ನು ತೋರಿದ್ದನ್ನು ಕೇಳಿ ಸಕಲರೂ ಕರತಾಡನದಿಂದ ಅವನನ್ನು ಶ್ಲಾಘಿಸಿದರು. ಶ್ರೀಯವರು ಮಂದಹಾಸಮುಖರಂಜಿತರಾಗಿ ಶಿರಃಕಂಪನದಿಂದ ತಮ್ಮ ಆನಂದವನ್ನು ಸೂಚಿಸಿದರು. ಪೂಜಾರಾಧನೆ ಮುಗಿದಮೇಲೆ ಗುರುಗಳು ಸರ್ವರಿಗೂ ತೀರ್ಥಪ್ರಸಾದ, ಅನಂತನ ದಾರಗಳನ್ನು ಕರುಣಿಸಿದರು. ಭೋಜನಾನಂತರ ಗುರುಗಳು ತಂದೆ-ಮಕ್ಕಳನ್ನು ಕರೆಸಿಕೊಂಡರು. ತಿಮ್ಮಣ್ಣನನ್ನು ಹತ್ತಿರ ಕೂಡಿಸಿಕೊಂಡು ಬೆನ್ನು ಚಪ್ಪರಿಸಿ, “ಕುಮಾರ, ನಿನ್ನ ವೀಣಾವಾದನ ಚಾತುರ ಅಸದೃಶವಾಗಿತ್ತು. ವಿದ್ಯಾದೇವಿ ನಿನಗೊಲಿದಿದ್ದಾಳೆ. ಇಂದಿನಿಂದ ನೀನು ನಮ್ಮ ಶಿಷ್ಯ. ಶತಾಯುಷಿಯಾಗಿ ಬಾಳು ಮಗು” ಎಂದಾಶೀರ್ವದಿಸಿದರು. ಆಚಾರರಿಗೆ ಪರಮಾನಂದವಾಯಿತು.

ಅಂದು ಸಂಜೆ ವಿಜಯೀಂದ್ರರು ಆಚಾರರ ಜತೆಗೆ ಬಂದಿದ್ದ ಪಂಡಿತರುಗಳಿಗೆ ವಿದ್ಯಾಪೀಠದಲ್ಲಿ ಸೂಕ್ತ ಹುದ್ದೆಗಳನ್ನೂ, ವಸತಿ ಸೌಕರ್ಯಗಳನ್ನೂ ಕಲ್ಪಿಸಿಕೊಟ್ಟು ಅವರು ನಿರಾಲೋಚನೆಯಿಂದ ಜೀವನ ಸಾಗಿಸುವಂತೆ ಮಾಡಿದರು. ಪಂಡಿತರು ಹರ್ಷಭರಿತರಾಗಿ ಗುರುಗಳಿಗೆ ಕೃತಜ್ಞತೆಯನ್ನು ಸಮರ್ಪಿಸಿ ನಮಸ್ಕರಿಸಿದರು. ಅನಂತರ ಕನಕಾಚಲಾಚಾರ್ಯರನ್ನು ಕರೆದು “ಆಚಾರ, ತುಂಡೀರದೇಶದ ಕಾವೇರಿಪಟ್ಟಣದಲ್ಲಿ ಅಲ್ಲಿನ ಶಿಷ್ಯ-ಭಕ್ತರ ಪ್ರಾರ್ಥನೆಯಂತೆ ಒಂದು ಸಂಸ ತವಿದ್ಯಾಪೀಠವನ್ನು ಸ್ಥಾಪಿಸಲಿದ್ದೇವೆ. ಅಲ್ಲಿನ ಜನರಿಗೆ ಬಾಲ್ಯಪಾಠದಿಂದಾರಂಭಿಸಿ ಶಾಸ್ತ್ರಪಾಠಗಳವರೆಗೆ ಅಧ್ಯಯನ ಮಾಡಿಸಬೇಕಾಗಿದೆ. ಅದಕ್ಕೆ ನೀವೇ ಸರಿಯಾದ ವ್ಯಕ್ತಿ ಎಂದು ನಾವು ಭಾವಿಸಿದ್ದೇವೆ. ವಿದ್ಯಾಪೀಠ ನಿರ್ವಹಣೆಗೆ ಅವಶ್ಯ ಏರ್ಪಾಟುಗಳನ್ನು ನಮ್ಮ ಅಧಿಕಾರಿಗಳು ಮತ್ತು ಗ್ರಾಮಸ್ಥರು ಮಾಡಿಕೊಡುತ್ತಾರೆ. ನೀವು ಪತ್ನಿಸಮೇತರಾಗಿ ಅಲ್ಲಿದ್ದು ಜ್ಞಾನಕಾರ್ಯಾಸಕ್ತರಾಗಿರಬೇಕು. ತಿಮ್ಮಣ್ಣನು ನಮ್ಮ ಸನ್ನಿಧಿಯಲ್ಲಿಯೇ ಇರಲಿ. ಅವನಿಗೆ ಶಾಸ್ತ್ರಾಧ್ಯಯನಮಾಡಿಸಿ ಅಭಿವೃದ್ಧಿಗೆ ತರುವ ಜವಾಬ್ದಾರಿ ನಾವು ಹೊರುತ್ತೇವೆ. ಅಶ್ವಿನ ಶುಕ್ಲ ವಿಜಯದಶಮೀ ಶ್ರೀಮದಾಚಾರ್ಯರ ಜಯಂತೀ, ಆ ಶುಭದಿನವೇ ವಿದ್ಯಾಪೀಠವನ್ನು ಪ್ರಾರಂಭಿಸಿ ಪಾಠಪ್ರವಚನಾಸಕ್ತರಾಗಿರಿ” ಎಂದು ಅಪ್ಪಣೆ ಕೊಡಿಸಿದರು, ನಾಲ್ಕಾರು ದಿನಗಳಲ್ಲಿ ಮಠದ ಅಧಿಕಾರಿಗಳೊಡನೆ ಆಚಾರ್ಯದಂಪತಿಗಳಿಗೆ ಫಲಮಂತ್ರಾಕ್ಷತೆ, ವಿಶೇಷ ದ್ರವ್ಯಾದಿಗಳನ್ನು ನೀಡಿ ಆಶೀರ್ವದಿಸಿ ಕಾವೇರಿಪಟ್ಟಣಕ್ಕೆ ಕಳುಹಿಸಿಕೊಟ್ಟರು. 

ತಿಮ್ಮಣ್ಣಕುಮಾರನು ಮೊದಲು ಹತ್ತಾರುದಿನ ತಂದೆತಾಯಿಗಳನ್ನು ಬಿಟ್ಟಿದ್ದುದರಿಂದ ಮನಸ್ಸಿನಲ್ಲಿ ಚಿಂತೆಗೀಡಾಗಿ ಮರುಗುತ್ತಿದ್ದರೂ ಕ್ರಮೇಣ ವಿಜಯೀಂದ್ರ ಗುರುಗಳ ಪ್ರೀತಿ-ವಾತ್ಸಲ್ಯ-ಅಭಿಮಾನಗಳಿಂದ ಪ್ರಭಾವಿತನಾಗಿ ಶ್ರೀಯವರನ್ನು ಎಡಬಿಡದೆ ಸೇವಿಸುತ್ತಾ ನ್ಯಾಯ-ವೇದಾಂತಾದಿಶಾಸ್ತ್ರಗಳ ಉದ್ದಂಥಗಳನ್ನು ಅಧ್ಯಯನಮಾಡುತ್ತಾ, ಶ್ರೀಯವರ ಪರಮಾನುಗ್ರಹಕ್ಕೆ ಪಾತ್ರನಾದನು. 

ಕುಂಭಕೋಣಕ್ಕೆ ಒಂದಲ್ಲ ಒಂದು ಶಾಸ್ತ್ರ, ಕಲೆಗಳಲ್ಲಿ ಶ್ರೀಯವರೊಡನೆ ವಾದ ಮಾಡಲು ನೂರಾರು ಜನರು ಬರುತ್ತಲೇ ಇದ್ದರು. ಮತ್ತು ವಾದಮಾಡಿ ಗುರುಗಳಿಂದ ಪರಾಜಿತರಾಗುತ್ತಲೇ ಇದ್ದರು. ಇಂಥವರಲ್ಲಿ ಅದೈತ ವಿದ್ಯಾಚಾರರಾದ ಶ್ರೀಅಪ್ಪಯ್ಯದೀಕ್ಷಿತರು, ಶ್ರೀಭಟ್ಟೋಜಿದೀಕ್ಷಿತರು ಮೊದಲಾದವರು ಪ್ರಮುಖರು, ಶ್ರೀಯವರು ಪರಾಜಿತರಾದ ವಿದ್ವಾಂಸರನ್ನು ಗೌರವದಿಂದ ಸನ್ಮಾನಿಸಿ ವಿಶೇಷಸಂಭಾವನಾದಿಗಳಿಂದ ಸಂತೋಷಪಡಿಸಿ ಕಳಿಸುತ್ತಿದ್ದರು. ನೂರಾರುಜನ ಕಲೆಗಾರರು ಅರವತ್ನಾಲ್ಕು ಕಲೆಗಳಲ್ಲಿ ಸ್ಪರ್ಧಿಸಿ ಶ್ರೀಯವರಿಂದ ಪರಾಜಿತರಾಗುತ್ತಿದ್ದರು ಇದೆಲ್ಲವನ್ನೂ ಹತ್ತಿರದಲ್ಲೇ ಇದ್ದು ಗಮನಿಸುತ್ತಿದ್ದ ತಿಮ್ಮಣ್ಣನಿಗೆ ವಿಜಯೀಂದ್ರ ಗುರುಗಳಲ್ಲಿ ಅಪಾರಭಕ್ತಿ ಶ್ರದ್ಧೆಗಳುಂಟಾದವು. ಇಂಥ ಮಹನೀಯರ ಪ್ರೀತಿಗೆ ಪಾತ್ರನಾಗಿ ತಾನು ಧನ್ಯನೆಂದವನು ಹಿಗ್ಗುತ್ತಿದ್ದನು.