ಕಲಿಯುಗ ಕಲ್ಪತರು ಐದನೆಯ ಉಲ್ಲಾಸ ಶ್ರೀರಾಘವೇಂದ್ರಗುರುಸಾರ್ವಭೌಮರು ೧೧. ವರ್ಷಗಳು ಉರುಳಿದವು
ಕ್ರಿ.ಶ. ೧೫೩೦ ರಿಂದ ೧೫೬೫ ರವರೆಗೆ ಕನ್ನಡಸಾಮ್ರಾಜ್ಯ, ಶ್ರೀಮಧ್ವಾಚಾರೈರ ಎರಡು ಮಹಾಸಂಸ್ಥಾನಗಳು, ಷಾತ್ವಿಕಮನೆತನಗಳಲ್ಲಿ ಅನೇಕ ಘಟನೆಗಳು ಜರುಗಿಹೋದವು. ಇವೆಲ್ಲವೂ ಭಾರತದ, ಕನ್ನಡನಾಡಿನ, ದೈತಸಿದ್ಧಾಂತದ, ಷಾಷ್ಟಿಕವಂಶಗಳ ಇತಿಹಾಸದ ಅಪೂರ್ವ ಘಟನೆಗಳು, ಅವುಗಳ ಅಭ್ಯುದಯ, ಅವನತಿ, ನಲಿವು-ನೋವು, ಏರು-ಪೇರುಗಳ ಮೇಲೆ ಬೆಳಕು ಚೆಲ್ಲುವ ಐತಿಹಾಸಿಕ ವಿಚಾರಗಳಾದುದರಿಂದ ಇವೆಲ್ಲದರ ಕೆಲವಂಶಗಳ ಸಿಂಹಾವಲೋಕನಮಾಡುವುದು ಅವಶ್ಯವಾಗಿದೆ. ಶ್ರೀಸುರೇಂದ್ರತೀರ್ಥರು ವಿಜಯೀಂದ್ರರೊಡನೆ ವಿಜಯನಗರದಿಂದ ಹೊರಟಮೇಲೆ ಶ್ರೀವ್ಯಾಸರಾಜರಿಗೆ ತಮ್ಮ ಪ್ರಿಯ ಶಿಷ್ಯರಾದ ವಿಜಯೀಂದ್ರರ ಅಗಲಿಕೆಯಿಂದ ದುಃಖ ಬೇಸರಗಳಿದ್ದೇ ಇತ್ತು, ಅದರಿಂದಾಗಿ ಅವರು ಬರಬರುತ್ತಾ ರಾಜಕೀಯದಿಂದ ವಿಮುಖರಾಗಹತ್ತಿದರು. ಇದೇ ಸಂದರ್ಭದಲ್ಲಿ ಕನ್ನಡಸಾಮ್ರಾಜ್ಯಕ್ಕೆ ದೊಡ್ಡ ಆಘಾತವುಂಟಾಯಿತು. ಕನ್ನಡಸಾಮ್ರಾಜ್ಯದ ಸುವರ್ಣಯುಗದ ಕಾರಣಪುರುಷನೆನಿಸಿ ಜಗದ್ವಿಖ್ಯಾತವಾದ ಸಾಮ್ರಾಟ್ ಕೃಷ್ಣದೇವರಾಯನು ಪುತ್ರನಾದ ತಿರುಮಲಮಹಾರಾಯನ ಅಕಾಲಮರಣದ ದುಃಖದಿಂದ ಹಾಸಿಗೆ ಹಿಡಿದು ದೇಹಾಲಸ್ಯದಿಂದ ಬಿಳಲಿ ಒಂದು ದಿನ ಸ್ವರ್ಗಸ್ಥನಾದನು. ಕನ್ನಡ ಸಾಮ್ರಾಜ್ಯದ ಭಾಗ್ಯರವಿ ಅಸ್ತಂಗತನಾದ. ಅಂದಿನ ಆ ರುದ್ರ-ಭೀಕರ ದೃಶ್ಯ, ಸಮಸಪ್ರಜಾನಿಕದ ಶೋಕ ವರ್ಣಿಸಲಸದಳ. ಸಾಮ್ರಾಟನ ಮರಣ ಜ್ಞಾನಿಗಳಾದ ಶ್ರೀವ್ಯಾಸರಾಜರ ಮೇಲೆಯೂ ಬಹುಪರಿಣಾಮ ಮಾಡಿತು !
ಕೃಷ್ಣದೇವರಾಯನು ತಾನಿರುವಾಗಲೇ ಅಚ್ಯುತದೇವರಾಯನನ್ನು ಕನ್ನಡನಾಡಿನ ಸಾಮ್ರಾಟನನ್ನಾಗಿ ಮಾಡಿದ್ದನು. ಅಚ್ಯುತದೇವರಾಯ ಅಣ್ಣನಂತೆ ವ್ಯಾಸರಾಜರ ಪರಮಭಕ್ತನಾಗಿ, ಅವರ ಉಪದೇಶ-ಮಾರ್ಗದರ್ಶನ ಮತ್ತು ಹಿತೈಷಿಗಳಾದ ಅಳಿಯ ರಾಮರಾಜಸೋದರರು, ಸಚಿವಮಂಡಲಿ, ತಂಜಾಪುರದ ಚವಪ್ಪನಾಯಕ, ಮಧುರೆಯ ವಿಶ್ವನಾಥನಾಯಕರುಗಳ ಸಲಹೆಯಂತೆ ರಾಜ್ಯಭಾರಮಾಡುತ್ತಾ ಅಣ್ಣನಿಗೆ ತಕ್ಕ ತಮ್ಮನಾಗಿ ಪ್ರಜಾರಂಜಕ ಚಕ್ರವರ್ತಿಯೆನಿಸಿ ಕೀರ್ತಿಗಳಿಸಿದನು.
ಕನಕಾಚಲಾಚಾರ್ಯರು ವಿಜಯನಗರದ ಸಂಸ ತವಿದ್ಯಾಪೀಠದಲ್ಲಿ, ವಿಶೇಷವಾಗಿ ಶ್ರೀವ್ಯಾಸರಾಜರು ಹಾಗೂ ತಂದೆ ಕೃಷ್ಣಾಚಾರರಲ್ಲಿ ನ್ಯಾಯ-ವೇದಾಂತ-ಸಾಹಿತ್ಯಾದಿ ಶಾಸ್ತ್ರಗಳನ್ನು ಅಧ್ಯಾಯನಮಾಡುತ್ತಾ ಅವುಗಳಲ್ಲಿ ಮತ್ತು ಮನೆಯ ವಿದ್ಯೆಯಾದ ವೀಣಾ ವಿದ್ಯೆಯಲ್ಲಿಯೂ ಪಾರಂಗತರಾಗಿ ಗುರುಗಳು, ತಂದೆ ಬಾಂಧವರು-ಮಿತ್ರರು ಪಂಡಿತಮಂಡಲಿ, ರಾಜಧಾನಿಯ ಲೌಕಿಕವೈದಿಕ, ಧಾರ್ಮಿಕಜನರ ಪ್ರೇಮಾದರಗಳಿಗೆ ಪಾತ್ರರಾಗಿ ಅಭಿವೃದ್ಧಿಸಹತ್ತಿದರು. ಇದೇ ಸಮಯದಲ್ಲಿ ವಿಧಿಯ ವಿಡಂಬನೆಯೆಂಬಂತೆ ಕೃಷ್ಣಾಚಾರ್ಯರು ತಮ್ಮ ಐವತ್ತೊಂಭತ್ತನೆಯ ವಯಸ್ಸಿನಲ್ಲಿ ದಿವಂಗತರಾದುದರಿಂದ ದುಃಖವೆಂದ- ರೇನೆಂಬುದನ್ನೇ ಕಾಣದ ಹತ್ತೊಂಬತ್ತು ವರ್ಷದ ಕನಕಾಚಲಾಚಾರರ ಮೇಲೆ ಆಕಾಶವೇ ಕಳಚಿಬಿದ್ದಂತಾಯಿತು. ಬಂಧು-ಬಾಂಧವರ ಸಹಾಯದಿಂದ ತಂದೆಯ ಅಪರಕಾರವನ್ನು ನೆರವೇರಿಸಿದ ಕನಕಾಚಲಾಚಾರರು ವ್ಯಾಸರಾಜರ ಸಹಾಯ ಅನುಗ್ರಹಗಳಿಂದ ವಿದ್ಯಾಭ್ಯಾಸದತ್ತ ಗಮನಹರಿಸಿದರು. ಮಹಾಪಂಡಿತರೆನಿಸಿದ ಆಚಾರರನ್ನು ಬಹುಪ್ರೀತಿಯಿಂದ ಕಾಣುತ್ತಿದ್ದ ವ್ಯಾಸತೀರ್ಥರು ಹಿರಿಯರ ಸ್ಥಾನದಲ್ಲಿದ್ದು ಮಾರ್ಗದರ್ಶನ ಮಾಡುತ್ತಾ ಆಚಾರರ ಅಭ್ಯುದಯಕ್ಕೆ ಕಾರಣರಾದುದಲ್ಲದೆ ಕನಕಾಚಲಾಚಾರರನ್ನು (ಕೃಷ್ಣಾಚಾರರ ಸ್ಥಾನದಲ್ಲಿ ವಿದ್ಯಾಪೀಠದ ಅಧ್ಯಾಪಕರನ್ನಾಗಿ ಮಾಡಿ ಅನುಗ್ರಹಿಸಿದರು, ದಿನಗುಳಿರಳಿದವು.
ಶ್ರೀವ್ಯಾಸರಾಜರು ನಾರಾಯಣಧ್ಯಾನರತರಾದ ಕಾಲದಲ್ಲಿ ಅಲ್ಲಿಗೆ ಬಂದಿದ್ದ ಶ್ರೀವಿಜಯೀಂದ್ರತೀರ್ಥರು ತಮ್ಮ ವಂಶಬಂಧುಗಳೂ, ಸಹಾಧ್ಯಾಯಿಗಳೂ ಆದ ಕನಕಾಚಲಾಚಾರ್ಯರನ್ನು ವಿಶೇಷವಾಗಿ ಆದರಿಸಿ ಪ್ರೇಮಮಾಡಹತ್ತಿದರು. ಅವರ ಅಭ್ಯುದಯದಲ್ಲಿ ಆಸಕ್ತಿವಹಿಸಿದರು, ವಿಜಯೀಂದ್ರರ ಈ ಅಭಿಮಾನದಿಂದ ಚೇತರಿಸಿಕೊಂಡ ಕನಕಾಚಲಾಚಾರ್ಯರು, ಅವರಲ್ಲಿ ಶ್ರೀವ್ಯಾಸರಾಜರಲ್ಲಿ ಮಾಡುತ್ತಿದ್ದಂತೆ ವಿಶೇಷಭಕ್ತಿಗೌರವಗಳನ್ನು ಮಾಡುತ್ತಾ ಅವರ ಅನುಗ್ರಹಕ್ಕೆ ಪಾತ್ರರಾದರು. ಕೆಲ ದಿನಗಳ ತರುವಾಯ ವಿಜಯೀಂದ್ರರು ಕುಂಭಕೋಣದ ಕಡೆ ಪ್ರಯಾಣಬೆಳೆಸಿದರು.
ಕ್ರಿ.ಶ. ೧೫೪೨ನೇ ವರ್ಷವು ಕನಕಾಚಲಾರ್ಯರಿಗೆ ಮಂಗಳಕರ ವರ್ಷವಾಗಿ ಪರಿಣಮಿಸಿತು. ಸಾಮ್ರಾಜ್ಯದ ಸಂಸ ವಿದ್ಯಾಪೀಠದ ಅಧ್ಯಾಪಕರಾಗಿದ್ದ ಅವರನ್ನು ಅಳಿಯರಾಮರಾಜ ಅಚ್ಯುತದೇವರಾಯನಿಗೆ ಹೇಳಿ ಸಾಮ್ರಾಜ್ಯದ ಮಹಾಪಂಡಿತರನ್ನಾಗಿಯೂ, ವೈಣಿಕ ವಿದ್ವಾಂಸರನ್ನಾಗಿಯೂ ಮಾಡಿಸಿ ಗೌರವಿಸಿದನು. ವಿದ್ಯಾವಿಶಾರದರೂ, ಸಂಗೀತ-ವೀಣಾಪಂಡಿತರೂ, ತರುಣರೂ ಆದ ಕನಕಾಚಲಾಚಾರರಿಗೆ ಅನೇಕರು ಹೆಣ್ಣುಕೊಡಲು ಮುಂದಾದರು. ಬಂಧು-ಮಿತ್ರರು ಸೇರಿ ಷಾಷಿಕಮನೆತನದ ವಿದ್ಯಾವಿನಯಸಂಪನ್ನಳಾದ ಲಕ್ಷ್ಮೀದೇವಿ ಎಂಬ ಕಥೆಯೊಡನೆ ಆಚಾರರಿಗೆ ವಿವಾಹ ಮಹೋತ್ಸವವನ್ನು ನೆರವೇರಿಸಿದರು. ಅರಮನೆ-ಗುರುಮನೆಗಳಿಂದ ಲಗ್ನಕಾಲದಲ್ಲಿ ವಿಶೇಷ ಉಡುಗೊರೆ-ಬಳವಳಿಗಳು ಬಂದವು. ಕನಕಾಚಲಾಚಾರ್ಯರು ಗೃಹಸ್ಥಾಶ್ರಮಿಗಳಾಗಿ ಪತ್ನಿಯೊಡನೆ ಸುಮಧುರ ದಾಂಪತ್ಯಜೀವನ ನಡೆಸುತ್ತಾ ಆನಂದಪರವಶರಾದರು. ಕನಕಾಚಲಾಚಾರ್ಯ ದಂಪತಿಗಳಿಗೆ ಭಗವದನುಗ್ರಹದಿಂದ ಸತ್ಪುತ್ರನೊಬ್ಬನು ಜನಿಸಿದನು. ವಂಶದೀಪಕನಾದ ಆ ಪುತ್ರನಿಗೆ ಆಚಾರ್ಯರು ತಿಮ್ಮಣ್ಣನೆಂದು ನಾಮಕರಣಮಾಡಿದರು. ತಿಮ್ಮಣ್ಣ ದಿನೇದಿನೇ ಅಭಿವೃದ್ಧಿಸಿ ತನ್ನ ಬಾಲಲೀಲೆಗಳಿಂದ ತಂದೆತಾಯಿ-ಬಾಂಧವರನ್ನು ಸಂತೋಷಪಡಿಸಹತ್ತಿದನು.
ಕ್ರಿ.ಶ. ೧೫೫೦ನೇ ವರ್ಷ ಭಾರತದ ವಿದ್ವತ್ಪಪಂಚದ ಶುಭೋದಯದವರ್ಷವಾಗಿ ಪರಿಣಮಿಸಿತು. ಶ್ರೀಸುರೇಂದ್ರತೀರ್ಥರ ಹಾಗೂ ಶ್ರೀವ್ಯಾಸರಾಜರ ಪ್ರೀತಿಯ ಶಿಷ್ಯರಾದ ವಿಜಯೀಂದ್ರತೀರ್ಥರು ಭಾರತಾದ್ಯಂತಸಂಚರಿಸಿ ಪರಿವಾದಿನಿಗ್ರಹಪೂರ್ವಕವಾಗಿ ದೈತಸಿದ್ಧಾಂತಪ್ರತಿಷ್ಠಾಪನೆಮಾಡುತ್ತಾ, ಚತುಃಷಷ್ಟಿಕಲೆಗಳಲ್ಲಿ ನೂರಾರು ಜನ ಕಲೆಗಾರರನ್ನು ಪರಾಜಯಗೊಳಿಸಿ, ರಾಜ-ಮಹಾರಾಜರಿಂದ ಮಾನಿತರಾಗಿ ಮಹಾಸಂಸ್ಥಾನದ ಸುವರ್ಣಯುಗವನ್ನು ನಿರ್ಮಿಸಿ ಜಗನ್ಮಾನ್ಯರಾದರು. ಅವರು ಕ್ರಿ.ಶ. ೧೫೩೦ ರಿಂದ ಸುಮಾರು ಇಪ್ಪತ್ತು ವರ್ಷಕಾಲದಲ್ಲಿ ವಿಜಯ ಪರಂಪರೆಯನ್ನೇ ಸಾಧಿಸಿ, ದೈತತವಿಜಯದುಂದುಭಿಯನ್ನು ಮೊಳಗಿಸಿದರು. ಮಧುರೈ, ತಂಜಾಪುರ ರಾಜರಾದ ವಿಶ್ವನಾಥನಾಯಕ, ಚವ್ವಪ್ಪನಾಯಕರುಗಳು ವಿಜಯೀಂದ್ರರ ಅವಿಚ್ಛಿನ್ನ ಶಿಷ್ಯರಾಗಿ ಅವರ ಉಪದೇಶ-ಮಾರ್ಗದರ್ಶನಗಳಂತೆ ರಾಜ್ಯವಾಳಿ ಆದರ್ಶರಾಜರೆಂದು ಖ್ಯಾತರಾದರು.
ವಿಜಯೀಂದ್ರರು ಕುಂಭಕೋಣದಲ್ಲಿ ವಿದ್ಯೆ, ಮಂತ್ರಶಕ್ತಿಗಳಬಲದಿಂದ ವೇದ ಮಠದ ಅನುಯಾಯಿಗಳಾದ ಪಂಡಿತರನ್ನು ಜಯಿಸಿ ಪ್ರಬಲರಾಗಿದ್ದ ಶ್ರೀಲಿಂಗರಾಜೇಂದ್ರರೆಂಬ ಶೈವಸನ್ಯಾಸಿಗಳೊಡನೆ ಹನ್ನೊಂದುದಿನ ವಾದಮಾಡಿ ಶೈವಸನ್ಯಾಸಿಗಳನ್ನು ಜಯಿಸಿ ಅವರ ಗದ್ದುಗೆ, ಬಸವನಗಂಟೆ, ಶೈವಮಠಗಳನ್ನೂ ಕುಂಭಕೋಣದ ಸರ್ವದೇವಾಲಯಾಧಿಪತ್ಯವನ್ನೂ ವಿಜಯಸೂಚಕವಾಗಿ ಪಡೆದರು!
ಕನ್ನಡಚಕ್ರವರ್ತಿಯಾದ ಅಚ್ಯುತರಾಜನ ನಾದಿನಿಯಾದ ಮೂರ್ತಾಂಬಾದೇವಿಯ ಪತಿಯಾದ ಚವ್ವಪ್ಪನಾಯಕನಿಗೆ ಸಾಮ್ರಾಟನು ತಂಜಾಪುರದೇಶವನ್ನು ಬಳವಳಿಯಾಗಿತ್ತು, ಅಲ್ಲಿನ ರಾಜನನ್ನಾಗಿ ಮಾಡಿ ಗೌರವಿಸಿದ್ದನು. ಚವ್ವಪ್ಪನಾಯಕನು ಶ್ರೀವ್ಯಾಸರಾಜ ಸುರೇಂದ್ರ-ವಿಜಯೀಂದ್ರರಲ್ಲಿ ಅಪಾರಭಕ್ತಿಯಿಂದ ವರ್ತಿಸುತ್ತಿದ್ದನು.
೧೫೫೦ ರಲ್ಲಿ ಶ್ರೀವಿಜಯೀಂದ್ರರು, ಕುಂಭಕೋಣದಲ್ಲಿ ಶ್ರೀವ್ಯಾಸರಾಜರು ಆದೇಶವಿತ್ತಿದ್ದಂತೆ ಒಂದು ಸಂಸ ವಿದ್ಯಾಪೀಠವನ್ನು ಸ್ಥಾಪಿಸಿ, ಶ್ರೀಸುರೇಂದ್ರರನ್ನು ಕುಲಪತಿಗಳಾಗಿ ಮಾಡಿ, ತಾವು ಉಪಕುಲಪತಿಗಳಾಗಿಯೂ ಇದ್ದು ಸಾವಿರಾರು ಜನ ವಿದ್ಯಾರ್ಥಿಗಳಿಗೆ ವಿವಿಧಶಾಸ್ತ್ರಗಳಲ್ಲಿ ಪಾಠಪ್ರವಚನ ಜರುಗುವಂತೆ ಮಾಡಿ ಜ್ಞಾನದಾನ ಮಾಡಲಾರಂಭಿಸಿದರು. ಈ ವಿದ್ಯಾಪೀಠಕ್ಕೆ ಕನ್ನಡಸಾಮ್ರಾಟರು ಮಧುರೆ-ತಂಜಾಪುರದರಾಜರೂ ವಿಶೇಷ ಬೆಂಬಲವಿತ್ತು ಸಕಲ ಸೌಕರ್ಯವಿತ್ತು ಜ್ಞಾನಪ್ರಸಾರಕಾರ್ಯಕ್ಕೆ ಪ್ರೋತ್ಸಾಹವಿತ್ತರು.
ಕ್ರಿ.ಶ ೧೫೫೫ ರಲ್ಲಿ ವಿಜಯೀಂದ್ರರಕೀರ್ತಿ ಎಲ್ಲೆಡೆ ಖ್ಯಾತವಾಯಿತು. ಇದೇ ಸಮಯದಲ್ಲಿಯೇ ಶ್ರೀಸುರೇಂದ್ರತೀರ್ಥರು ಮೂರನೆಯಬಾರಿ ಉಪವಾಸದಿಂದ ಅಖಿಲಭಾರತ ತೀರ್ಥಕ್ಷೇತ್ರಯಾತ್ರೆಯನ್ನು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಅಚ್ಯುತದೇವರಾಯನು ಸ್ವರ್ಗಸ್ಥನಾದ ಮೇಲೆ ಸದಾಶಿವರಾಯನನ್ನು ಚಕ್ರೇಶನನ್ನಾಗಿ ಮಾಡಿ, ಸಾಮ್ರಾಜ್ಯದ ಕ್ಷಮಾಪತಿಯಾಗಿ ಅಳಿಯರಾಮರಾಜನು ಕನ್ನಡಸಾಮ್ರಾಜ್ಯದ ಸರ್ವಾಧಿಪತ್ಯವನ್ನು ವಹಿಸಿಕೊಂಡು ರಾಜ್ಯಪರಿಪಾಲನೆ ಮಾಡುತ್ತಿದ್ದನು. ರಾಮರಾಜನು ವಿಜಯೀಂದ್ರರ ಪರಮಭಕ್ತನಾಗಿದ್ದನು, ಅವನು ತನ್ನ ಮಾವ ಕೃಷ್ಣದೇವರಾಯನು ವ್ಯಾಸರಾಜರಿಗೆ 'ರತ್ನಾಭಿಷೇಕ' ಮಾಡಿ ಅಸಾಧಾರಣರೀತಿಯಿಂದ ಗೌರವಿಸಿದಂತೆ ತಾನೂ ವಿಜಯೀಂದ್ರರನ್ನು ಸನ್ಮಾನಿಸಲಾಶಿಸಿ, ಶ್ರೀವಿಜಯೀಂದ್ರತೀರ್ಥರನ್ನು ವಿಜಯನಗರಕ್ಕೆ ಕರೆಯಿಸಿಕೊಂಡು ಅಭುತಪೂರ್ವವೈಭವದಿಂದ ಅವರನ್ನು ಆನೆಯ ಮೇಲೆ ಅಂಬಾರಿಯಲ್ಲಿ ಮೆರೆಸಿ, ಕರ್ನಾಟಕರತ್ನಸಿಂಹಾಸನದಲ್ಲಿ ವಿಜಯೀಂದ್ರರನ್ನು ಮಂಡಿಸಿ ರಾಭಿಷೇಕಮಾಡಿ,259 ಧನಕನಕ, ಸ್ವರ್ಣಸಿಂಹಾಸನ, ಗ್ರಾಮಭೂಮಿ, ಅಗ್ರಹಾರಗಳನ್ನು ಕಾಣಿಕೆಯಾಗಿ ಸಮರ್ಪಿಸಿದನು. ಇದರಿಂದ ವಿಜಯೀಂದ್ರರ ಕೀರ್ತಿ ದಿಗಂತವಿಶ್ರಾಂತವಾಯಿತು.
ರತ್ನಾಭಿಷೇಕ ಸಂದರ್ಭದಲ್ಲಿಯೇ ಕನಕಾಚಲಾಚಾರರು ತಮ್ಮ ಪುತ್ರ ತಿಮ್ಮಣ್ಣನ ಚೌಲ-ಅಕ್ಷರಾಭ್ಯಾಸ ಮಹೋತ್ಸವವನ್ನು ವಿಜಯೀಂದ್ರರ ಸಾನಿಧ್ಯದಲ್ಲಿ ನೆರವೇರಿಸಿದರು. ವಿಜಯೀಂದ್ರರು ಸಹಾಧ್ಯಾಯಿಗಳಾದ ಕನಕಾಚಲಾಚಾರರ ಪುತ್ರ ತಿಮ್ಮಣ್ಣನಿಗೆ “ಓಂ ನಮೋ ನಾರಾಯಣಾಯ” ಎಂಬ ಮಂತ್ರವನ್ನು ಬರೆದು ತಿದ್ದಿಸಿ ಅಕ್ಷರಾಭ್ಯಾಸ ಮಾಡಿಸಿ ಅನುಗ್ರಹಿಸಿದರು. ಮತ್ತು ಸುಂದರನೂ, ತೀಕ್ಷ್ಮಮತಿಯೂ ಆದ ತಿಮ್ಮಣ್ಣನಲ್ಲಿ ವಿಶೇಷ ವಾತ್ಸಲ್ಯ ತೋರಿ ಅವನಿಗೆ ಅನೇಕ ಮಂತ್ರ-ಸ್ತೋತ್ರಗಳನ್ನು ಹೇಳಿಕೊಟ್ಟು ಅನುಗ್ರಹಿಸಿದರು. ಇದಾದ ಮೇಲೆ ವಿಜಯೀಂದ್ರರು ರಾಮರಾಜನಿಂದ ಬೀಳ್ಕೊಂಡು ಕುಂಭಕೋಣಕ್ಕೆ ಪ್ರಯಾಣ ಬೆಳೆಸಿದರು.
ಬಾಲಕ ತಿಮ್ಮಣ್ಣನು ವಿಜಯೀಂದ್ರರ ಆಶೀರ್ವಾದಬಲದಿಂದ ಬಾಲ್ಯಪಾಠಗಳನ್ನು ಕಲಿತು, ಕಾವ್ಯಾಭ್ಯಾಸತತ್ಪರನಾಗಿ, ತ, ಕನ್ನಡಭಾಷೆಗಳಲ್ಲಿ ಪ್ರಾವೀಣ್ಯ ಪಡೆಯಹತ್ತಿದನು. ಇದರಂತೆ ಸಂಗೀತ-ವೀಣಾವಾದನಕಲೆಗಳನ್ನು ತಂದೆ ಕನಕಾಚಲಾಚಾರ್ಯರಿಂದ ಕರಗತ ಮಾಡಿಕೊಂಡು ತಂದೆಯೇ ಅಚ್ಚರಿಗೊಳ್ಳುವ ಮಟ್ಟಿಗೆ ಆ ಕಲೆಯಲ್ಲಿ ಪಾರಂಗತನಾಗಹತ್ತಿದನು. ಕ್ರಿ.ಶ. ೧೫೬೦ ರ ಸುಮಾರಿಗೆ ಕನಕಾಚಲಾಚಾರರು ತಿಮ್ಮಣ್ಣನಿಗೆ ಉಪನಯನಮಹೋತ್ಸವವನ್ನು ಜರುಗಿಸಿ, ಅವನನ್ನು ವೇದಾಧ್ಯಯನಾಧಿಕಾರಿಯನ್ನಾಗಿ ಮಾಡಿದರು. ಕುಮಾರ ತಿಮ್ಮಣ್ಣನು ಸ್ವಶಾಖಾವೇದಾಧ್ಯಾಯನಾದಿಗಳಿಂದ ಅಸಾಧಾರಣ ಪ್ರತಿಭಾವಂತನಾದ ವಿದ್ಯಾರ್ಥಿಯೆಂದು ಸಕಲರ ಪ್ರೀತಿ-ವಿಶ್ವಾಸಗಳಿಗೆ ಪಾತ್ರನಾಗಿ ಅಭಿವೃದ್ಧಿಸಹತ್ತಿದನು.
ಕ್ರಿ.ಶ. ೧೫೬೫ ನೇ ವರ್ಷ ಕರ್ನಾಟಕಸಾಮ್ರಾಜ್ಯದ ಅವನತಿಗೆ ಕಾರಣವಾದ ಕೆಟ್ಟವರ್ಷವಾಗಿ ಇತಿಹಾಸದಲ್ಲಿ ಖ್ಯಾತವಾಯಿತು. ರಕ್ಕಸತಂಗಡಿಯ ಮಹಾಸಂಗ್ರಾಮದಲ್ಲಿ ಸಾಮ್ರಾಜ್ಯಧುರಂಧರನಾದ ಅಳಿಯ ರಾಮರಾಜನು ಕನ್ನಡಿಗರ ದುರ್ದೈವದಿಂದ ನಿಧನಹೊಂದಿ ವಿಜಯನಗರಸಾಮ್ರಾಜ್ಯದ ಪತನವಾಯಿತು. ಕನ್ನಡರಾಜ್ಯಲಕ್ಷ್ಮಿ ಅನಾಥಳಾದಳು. ವಿದ್ಯಾರಣ್ಯರಿಂದ ಸ್ಥಾಪಿತವಾಗಿ, ವ್ಯಾಸರಾಜರಿಂದ ಅತ್ಯುನ್ನತಿಯ ಶಿಖರಕ್ಕೇರಿ ಭಾರತದ ಏಕೈಕ 'ಧರ್ಮಸಾಮ್ರಾಜ್ಯ' ಎಂದು ದೇಶವಿದೇಶಗಳಲ್ಲಿಯೂ ವಿಖ್ಯಾತವಾಗಿ, ಸುಮಾರು ಮೂರು ನೂರು ವರ್ಷಗಳ ಕಾಲ ವೈಭವದಿಂದ ಮೆರೆದ ಮಹಾಸಾಮ್ರಾಜ್ಯವು ನಾಮಾವಶೇಷವಾಯಿತು. ಇದು ಕನ್ನಡಿಗರ ಕರ್ಮ ಕಥೆಯನ್ನದೇ ವಿಧಿಯಿಲ್ಲ. ರಾಮರಾಜರು ಮೃತರಾದವಿಚಾರ ತಿಳಿದೊಡನೆ ಅವರ ಸೋದರರಾದ ತಿರುಮಲ, ವೆಂಕಟಾದ್ರಿಗಳು, ವಿಶ್ವನಾಥನಾಯಕ, ಚವ್ವಪ್ಪನಾಯಕರು ಹಾಗೂ ಸ್ವಾಮಿನಿಷ್ಠ ಸೇವಕರುಗಳ ಸಹಾಯದಿಂದ ಸದಾಶಿವರಾಯನೊಡನೆ ಸಾಧ್ಯವಿದ್ದಷ್ಟು ಸಿರಿಸಂಪತ್ತು-ಸಿಂಹಾಸನಗಳೊಡನೆ ವಿಜಯನಗರದಿಂದ ಪಾರಾಗಿ ಚಂದ್ರಗಿರಿಯನ್ನು ಸೇರಿದರು.
ರಾಜಧಾನಿ ಅನಾಥವಾಯಿತು. ಪ್ರಜರು ಹಾಹಾಕಾರಮಾಡಿದರು. ಭಯಗ್ರಸ್ಥರಾದ ಅನೇಕ ಪಂಡಿತರು, ಕವಿಗಳು, ಸಾಹಿತಿಗಳು, ಸಂಗೀತಗಾರರು, ಕಲೆಗಾರರು ಪ್ರಾಣಭಯದಿಂದ ರಾಜಧಾನಿಯನ್ನು ತ್ಯಜಿಸಿಹೋದರು. ಅನೇಕ ಪಂಡಿತರು, ಮಡದಿ, ಮಕ್ಕಳೊಡನೆ ಕನಕಾಚಲಾಚಾರರು ಎಲ್ಲ ಬಾಂಧವರೊಡನೆ ಉಟ್ಟಬಟ್ಟೆಯ ಮೇಲೆ ಮಕ್ಕಳೊಡನೆ ಕನಕಾಚಲಾಚಾರರು ಎಲ್ಲ ಬಾಂಧವರೊಡನೆ ಉಟ್ಟಬಟ್ಟೆ ಮೇಲೆ ವಿಜಯನಗರವನ್ನು ತ್ಯಜಿಸಿ ಆಶ್ರಯವನ್ನು ಅರಸುತ್ತ ಕುಂಭಕೋಣಕ್ಕೆ ಪ್ರಯಾಣ ಬೆಳೆಸಿದರು. ಹೀಗೆ ೧೫೩೦ ರಿಂದ ೧೫೬೫ ರವರೆಗೆ ಅನೇಕ ಘಟನೆಗಳು ಜರುಗಿಹೋದವು.