ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೦೦. ಶ್ರೀಗುರುರಾಜರ ದ್ವಿತೀಯ ಸಂಚಾರ
ಶ್ರೀರಾಘವೇಂದ್ರ ಗುರುಸಾರ್ವಭೌಮರು ವೇದಾಂತ ಸಾಮ್ರಾಜ್ಯಾಧೀಶರಾದ ಮೇಲೆ ಕಳೆದ ನಲವತ್ತು ವರ್ಷಗಳ ಪೀಠಾಧಿಪತ್ಯ ಕಾಲದಲ್ಲಿ ಸುಧೀಂದ್ರತೀರ್ಥರು ಅದಾವ ಮಹೋದ್ದೇಶದಿಂದ ಅವರನ್ನು ಶ್ರೀಸರ್ವಜ್ಞಸಿಂಹಾಸನದಲ್ಲಿ ಕೂಡಿಸಿ ಪಟ್ಟಾಭಿಷೇಕವನ್ನು ಮಾಡಿದ್ದರೋ, ಆ ಎಲ್ಲ ಮಹತ್ಕಾರ್ಯಗಳನ್ನೂ ಪರಮಹಂಸ ಸಾರ್ವಭೌಮರಾದ ಶ್ರೀಗುರುರಾಜರು ಅತ್ಯಂತ ಯಶಸ್ವಿಯಾಗಿ ಜಗನ್ಮಾನ್ಯವಾಗುವ ರೀತಿಯಲ್ಲಿ ಸಾರ್ವಕಾಲಿಕವಾಗಿ ಇತಿಹಾಸದ ಪುಟಪುಟಗಳಲ್ಲಿ ರತ್ನಾಕ್ಷರಗಳಿಂದ ಬರೆದಿಡುವಂತೆ ನೆರವೇರಿಸಿ ಅಪಂಡಿತ-ಪಾಮರರಿಂದಲೂ ಗೇಗೀಯಮಾನರಾದರು.
ಶ್ರೀರಾಘವೇಂದ್ರರು ದೈತಸಿದ್ಧಾಂತಕ್ಕೆ ಆಧಾರ ಸ್ತಂಭಗಳಾದ, ಭಾಷೆ, ಟೀಕಾಕಾರರ ಹೃದಯವನ್ನು ಚೆನ್ನಾಗಿ ಹೊರಸೂಸುವ, ಆಚಾರಪರಂಪರಾಗತವಾಗಿ ಅವಿಚ್ಛಿನ್ನವಾಗಿ ನಡೆದುಬಂದ ದೈತಶಾಸ್ತ್ರಪಾಠಪ್ರವಚನಸಂಪ್ರಾದಾಯವನ್ನು ಎತ್ತಿ ಹಿಡಿಯುವ, ಜಗನ್ಮಾನಗಳಾದ ಟಿಪ್ಪಣಿಗಳನ್ನು ರಚಿಸಿ “ತತ್ವವಾದ'ವು ಆಚಂದ್ರಾರ್ಕಸ್ಥಾಯಿಯಾಗಿ, ನಿಷ್ಕಂಟಕವಾಗಿ ವಿರಾಜಿಸುವಂತೆ ಮಾಡಿ, ತಮ್ಮ ಟಿಪ್ಪಣಿಗಳ ಸಹಾಯದಿಂದ ಮಧ್ವಶಾಸ್ತ್ರಪಾಠಪ್ರಚನವು ಸುಲಲಿತವಾಗಿ ವ್ಯಾಪಕರೀತಿಯಿಂದ ನೆರವೇರಲು ಮಹೋಪಕಾರ ಮಾಡಿದರು. ಪರಭಾಷ್ಯಗಳಿಂದ ಮಲಿನವಾದ ವೇದಗಳ ಹಾರ್ದವನ್ನು, ಅವುಗಳ ನೈಜಾಭಿಪ್ರಾಯವನ್ನು ಪ್ರಕಟಿಸುವ ಅತ್ಯಪೂಾರ್ವವಾದ ವೇದಭಾಷ್ಯಗಳನ್ನು ರಚನೆಮಾಡಿ ತಮ್ಮ ಅವತಾರಕಾರದ ಮುಖ್ಯೋದ್ದೇಶವನ್ನು ಸಫಲಗೊಳಿಸಿದರು. ಸಮಗ್ರ ಮಧ್ವಭಾಷ್ಯಟೀಕೆಗಳಿಗೆ ಲೋಕಮಾನ್ಯಗಳಾದ ಟಿಪ್ಪಣಿಗಳನ್ನು ಬರೆದು ಟಿಪ್ಪಣ್ಯಾಚಾರ ಚಕ್ರವರ್ತಿ'ಗಳೆಂದು ಪಂಡಿತಪ್ರಪಂಚದಲ್ಲಿ ಅನನ್ಯ ಸಾಧಾರಣವಾದ ಕೀರ್ತಿ-ಪ್ರತಿಷ್ಠೆಗಳನ್ನು ಗಳಿಸಿದರು. ಹೀಗೆ ಶ್ರೀಹಂಸನಾಮಕಪರಮಾತ್ಮನ ಜ್ಞಾನಪೀಠದ ಪ್ರಮುಖ ಕಾರವನ್ನು ಬಹು ದೀಕ್ಷೆಯಿಂದ ಯಶಸ್ಕರವಾಗಿ ಪೂರೈಸಿದ್ದರು.
ಶ್ರೀಪಾದಂಗಳವರಲ್ಲಿ ಈ ವೇಳೆಗಾಗಲೇ ಸಕಲಶಾಸ್ತ್ರಗಳನ್ನು ಮುಖ್ಯವಾಗಿ ವೇದಾಂತಶಾಸ್ತ್ರವನ್ನು ನೂರಾರು ಜನ ಪಂಡಿತ-ವಿದ್ಯಾರ್ಥಿಗಳು ಅಧ್ಯಯನಮಾಡಿ ಶ್ರೇಷ್ಠಪಂಡಿತರೆಂದು ಹೆಸರುಗಳಿಸಿ, ತಾವೂ ನೂರಾರುಜನ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನಾಸಕ್ತರಾಗಿದ್ದುದರಿಂದ ಮಹಾಸಂಸ್ಥಾನದ ಮುಖ್ಯಗುರಿಯಾದ ವೈಷ್ಣವ ಸಿದ್ಧಾಂತ ಪಾಠ-ಪ್ರವಚನಕಾರವು ಸುವ್ಯವಸ್ಥಿತ ರೀತಿಯಿಂದ ಮುಂದುವರೆಯುವಂತಾಗಿತ್ತು. ಶ್ರೀಗುರುವರರು ತಮ್ಮ ಅನುಪಮ ಚಾರಿತ್ರ್ಯ, ಸದಾಚಾರ, ಕರ್ಮಾಚರಣೆಗಳಿಂದ ಆಸ್ತಿಕ ಜನತೆಗೆ ಆದರ್ಶರಾಗಿ ಮಾರ್ಗದರ್ಶನ ಮಾಡಿದ್ದರು. ಹೀಗೆ ಒಂದು ವಿಧದಿಂದ ಮಹಾಸಂಸ್ಥಾನದ ಪ್ರಮುಖ ಕರ್ತವ್ಯಗಳನ್ನು ಶ್ರೀಗಳವರು ನೆರವೇರಿಸಿದಂತಾಗಿತ್ತು. ಇದರಿಂದ ಶ್ರೀಯವರು ಗುರುಪಾದರು ತಮ್ಮ ಮೇಲೆ ಹೊರಿಸಿದ್ದ ಹೊಣೆಯನ್ನು ನಿರ್ವಹಿಸಿದಂತಾಗಿದ್ದುದರಿಂದ ಶ್ರೀಗುರುರಾಜರಿಗೆ ಒಂದು ರೀತಿಯಲ್ಲಿ ತೃಪ್ತಿ ಸಮಾಧಾನ ಸಂತೋಷಗಳುಂಟಾಗಿದ್ದವು.
ಈಗ ಶ್ರೀಗುರುರಾಜರು ತಮ್ಮ ಇತರ ಕರ್ತವ್ಯದ ಬಗೆಗೆ ಗಮನಹರಿಸಿದರು. ಜಗತ್ತಿನ ಹೃದಯದಲ್ಲಿ ಭಾರತೀಯ ಸನಾತನಧರ್ಮ, ವೇದೋಪನಿಷದಾದಿಶಾಸ್ತ್ರಗಳ ಉಪದೇಶಗಳು ಬೇರೂರುವಂತೆ ಮಾಡಿ, ಅತೀಂದ್ರಿಯ ವಸ್ತುಗಳು, ದೇವರು-ಧರ್ಮಗಳಲ್ಲಿ ನಂಬಿಕೆಯನ್ನು ಒಡಮೂಡಿಸಿ, ಜನತೆಯಲ್ಲಿ ಸದಾಚಾರ ಸದ್ದವಹಾರ, ನೀತಿ, ಸದ್ಭಾವನೆ, ಪರಸ್ಪರ ಸ್ನೇಹಸೌಹಾರ್ದಗಳನ್ನು ಪ್ರಚೋದಿಸಿ ಭಾರತೀಯ ಜನರು ನೀತಿವಂತರಾಗಿ ಧರ್ಮಜೀವಿಗಳಾಗಿ ಬಾಳುವಂತೆ ಮಾಡುವ ಮಹತ್ವಪೂರ್ಣ ಕೆಲಸವನ್ನು ಈ ಸಲದ ದಿಗ್ವಿಜಯಸಂಚಾರಕಾಲದಲ್ಲಿ ಕೈಗೊಂಡು ಸಜ್ಜನೋದ್ದಾರ, ಲೋಕಕಲ್ಯಾಣಗಳನ್ನೂ ಅಭೂತಪೂರ್ವ ಮಹಿಮಾ ಪ್ರದರ್ಶನಾದಿಗಳದ್ದಾರಾ ನೆರವೇರಿಸಿ, ಭಗವಂತನ ಅಸ್ತಿತ್ವದ ಅರಿವನ್ನೂ, ಪಾಪ-ಪುಣ್ಯಗಳ ಪ್ರಜೆಯನ್ನೂ ಮಾನವರಲ್ಲಿ ಬೆಳಗುವಂತೆ ಮಾಡುವುದು ಅವಶ್ಯವೆಂದು ಭಾವಿಸಿ ದಿಗ್ವಿಜಯಯಾತ್ರೆ ಕೈಗೊಳ್ಳಲು ಸಂಕಲ್ಪಿಸಿದರು.
ಶ್ರೀಗುರುರಾಜರು ಕುಂಭಕೋಣದ ವಿದ್ಯಾಪೀಠದ ನಿರ್ವಹಣೆಯ ಹೊಣೆಯನ್ನು ಹಿರಿಯ ಪಂಡಿತರುಗಳಾದ ರಾಮಚಂದ್ರಾಚಾರ, ಅಣ್ಣ ಗುರುರಾಜಾಚಾರರುಗಳಿಗೆ ಒಪ್ಪಿಸಿಕೊಟ್ಟು, ಉತ್ಸಾಹಶಾಲಿಗಳಾದ ನಾರಾಯಣಾಚಾರ್ಯ, ವೆಂಕಟನಾರಾಯಣಾಚಾರ, ಲಕ್ಷ್ಮೀನಾರಾಯಣಾಚಾರ, ಕೃಷ್ಣಚಾರ ಗೋವಿಂದಾಚಾರ, ಮತ್ತು ವೆಂಕಣ್ಣ, ವಾಸುದೇವ, ಮುದ್ದುವೆಂಕಟಕೃಷ್ಣ, ವಿಜಯೀಂದ್ರ, ಪುರುಷೋತ್ತಮಾಚಾರ ಪ್ರಕೃತಿಗಳು, ಇತರ ಪಂಡಿತರು, ವಿದ್ಯಾರ್ಥಿಗಳು ಹಾಗೂ ಕುಟುಂಬಸಹಿತರಾದ ಪರಿವಾರದವರು ಹೀಗೆ ನೂರಾರು ಜನರೊಡನೆ ಸಮಸ್ತ ಬಿರುದುಬಾವಲಿ, ವಾದ್ಯವೈಭವಗಳೊಡನೆ ಸಂಚಾರ ಹೊರಡಲು ಸಕಲ ವ್ಯವಸ್ಥೆಗಳನ್ನೂ ಮಾಡಲು ಅಧಿಕಾರಿಗಳಿಗೆ ಆಜ್ಞಾಪಿಸಿದರು.
ಶ್ರೀಗುರುಸಾರ್ವಭೌಮರು ಶಾಲಿವಾಹನ ಶಕೆ ೧೫೮೨ನೇ ಶುಭಕೃತು ಸಂವತ್ಸರದ ಕಾರ್ತಿಕ ಶುಕ್ಲ ತ್ರಯೋದಶಿಯಂದು (ಕ್ರಿ.ಶ.1660) ಶುಭಮುಹೂರ್ತದಲ್ಲಿ ಕುಂಭಕೋಣದಿಂದ ಲೋಕಕಲ್ಯಾಣ ದಿಗ್ವಿಜಯ ಯಾತ್ರೆಯನ್ನು ಕೈಗೊಂಡು ಹೊರಟರು. ಸಂಚಾರಕ್ರಮದಲ್ಲಿ ಗ್ರಾಮಗ್ರಾಮ ಪಟ್ಟಣಗಳಿಗೆ ಭೇಟಿನೀಡಿ ಅಲ್ಲಲ್ಲಿನ ಜನತೆಯ, ಶಿಷ್ಯ, ಭಕ್ತಮಂಡಲಿಯ ಸೇವೆಯನ್ನು ಸ್ವೀಕರಿಸುತ್ತಾ ಸರ್ವಜನರ ಸಾಮಾಜಿಕ-ಧಾರ್ಮಿಕ-ಆಧ್ಯಾತ್ಮಿಕ ಪ್ರಗತಿಸಾಧಿಸಿ ಕಲ್ಯಾಣವೆಸಗುತ್ತಾ, ದೀನ-ದಲಿತ ಜನರ ಉದ್ಧಾರಮಾಡುತ್ತಾ, ಅನೇಕ ರೋಗಾದ್ರುಪದ್ರವಗಳಿಂದ ಪೀಡಿತರಾದವರನ್ನು ತಮ್ಮ ತಪಶಕ್ತಿ ಅನುಗ್ರಹಗಳ ದ್ವಾರಾ ನಿರೋಗಿಗಳನ್ನಾಗಿಸುತ್ತಾ, ಜನತೆಯ ಇಷ್ಟಾರ್ಥಗಳನ್ನು ಕೃಪಾದೃಷ್ಟಿ ವೀಕ್ಷಣಮಾತ್ರದಿಂದ ಪಾರೈಸುತ್ತಾ ಫಾಲ್ಗುಣ ಶುಕ್ಲದಶಮಿಯ ಹಾಗೆ ವಿಜಯನಗರಕ್ಕೆ (ಆನೆಗೊಂದಿ) ದಯಮಾಡಿಸಿದರು. ಅಲ್ಲಿನ ಲೌಕಿಕ ವೈದಿಕಧಾರ್ಮಿಕ ಜನರು ಶ್ರೀಯವರನ್ನು ಭಕ್ತಿಶ್ರದ್ಧೆಗಳಿಂದ ಸ್ವಾಗತಿಸಿದರು.
ಶ್ರೀಗಳವರು ಫಾಲ್ಗುಣಕೃಷ್ಣ ಪಾಡ್ಯದಿಂದ ಪಂಚಮೀಯವರೆಗೆ ಶ್ರೀಸುಧೀಂದ್ರತೀರ್ಥರ ಮಹಾಸಮಾರಾಧನೆಗಳನ್ನೂ, ಶ್ರೀವಾದಿರಾಜಗುರುಗಳು ಹಾಗೂ ಶ್ರೀಚಂದ್ರಿಕಾರಾಯರುಗಳ ಆರಾಧನೆಗಳನ್ನೂ, ಅದೇಕಾಲದಲ್ಲಿ ವಿದ್ವತ್ತಭೆಯನ್ನೂ ನೆರವೇರಿಸಲು ಪಾಡ್ಯದ ದಿನ ಪ್ರಾತಃಕಾಲ ನವಬೃಂದಾವನಗಡ್ಡೆಗೆ ದಯಮಾಡಿಸಿ, ಮಹಾಸಂಸ್ಥಾನದ ಆದಿಗುರುಗಳಾದ ಶ್ರೀಪದ್ಮನಾಭತೀರ್ಥ-ಶ್ರೀಜಯತೀರ್ಥ-ಶ್ರೀಕವೀಂದ್ರ-ವಾಗೀಶತೀರ್ಥರು ಮತ್ತು ಶ್ರೀವ್ಯಾಸರಾಜರು-ಶ್ರೀಸುಧೀಂದ್ರಗುರುಗಳ ಬೃಂದಾವನ ದರ್ಶನಮಾಡಿ ಹರ್ಷಭರಿತರಾದರು. ಶ್ರೀಯವರ ನೇತೃತ್ವದಲ್ಲಿ ಸಕಲವೃಂದಾವನಗಳಿಗೆ ಪಂಚಾಮೃತಾಭಿಷೇಕ, ಶ್ರೀಮೂಲರಾಮರ ಪೂಜಾರಾಧನೆ, ಅಲಂಕಾರಬ್ರಾಹ್ಮಣರ ಪೂಜಾ, ಭೋಜನ, ತೀರ್ಥಪ್ರಸಾದ, ಸಂತರ್ಪಣೆಗಳು ವೈಭವದಿಂದ ನೆರವೇರಿದವು. ಶ್ರೀಯವರು ತಾವು ರಚಿಸಿದ ವೇದಭಾಷ್ಯಾದಿ ಸಮಸ್ತಗ್ರಂಥಗಳನ್ನೂ ಶ್ರೀಪದ್ಮನಾಭಾದಿ-ಸುಧೀಂದ್ರಪರ್ಯಂತ ಗುರುಗಳ ಸನ್ನಿಧಿಗಳಲ್ಲಿ ಸಮರ್ಪಣೆಮಾಡಿ ಸಾಷ್ಟಾಂಗವೆರಗಿದರು.
ಶ್ರೀಯವರು ಶ್ರೀಸರ್ವಜ್ಞರ ಸಾಕ್ಷಾತ್ ಶಿಷ್ಯರಾದ ಶ್ರೀನರಹರಿತೀರ್ಥರ 435 ಸನ್ನಿಧಿಗೆ ದಯಮಾಡಿಸಿ, ಶ್ರೀಮದಾಚಾರರ, ಅಣತಿಯಂತೆ ಶ್ರೀಮೂಲರಾಮಚಂದ್ರದೇವರನ್ನು ಗಜಪತಿಭಂಡಾರದಿಂದ ತಂದು ಆಚಾರರಿಗೆ ಒಪ್ಪಿಸಿದ ಶ್ರೀನರಹರಿತೀರ್ಥರ ಬೃಂದಾವನದಮೇಲೆ ಶ್ರೀಮೂಲರಾಮ-ದಿಗ್ವಿಜಯರಾಮ-ಜಯರಾಮದೇವರನ್ನು ಮಂಡಿಸಿ ಕನಕಾಭಿಷೇಕಮಾಡಿ, ಹಸ್ತೋದಕ ಸಮರ್ಪಿಸಿ, ಫಲಮಂತ್ರಾಕ್ಷತಾ ಸ್ವೀಕರಿಸಿ ಕೃತಾರ್ಥರಾದರು. ಫಾಲ್ಗುಣ ಕೃಷ್ಣ ಸಪ್ತಮಿಯಂದು ಶ್ರೀಯವರು ಶ್ರೀರಘುನಂದನ- ತೀರ್ಥಗುರುಗಳ ಬೃಂದಾವನ ಸನ್ನಿಧಿಯಲ್ಲಿ ಮಹಾಸಂಸ್ಥಾನಪೂಜೆಯನ್ನು ನೆರವೇರಿಸಿ ಶ್ರೀರಘುನಂದನರಿಗೆ ಹಸ್ತೋದಕವನ್ನು ಸಮರ್ಪಿಸಿ ಗುರುಗಳ ಬೃಂದಾವನದ ಮೇಲೆ ಶ್ರೀಮೂಲರಾಮದೇವರನ್ನಿಟ್ಟು ಕನಕಾಭಿಷೇಕಮಾಡಿ ಮಂಗಳಾರತಿಮಾಡಿದರು.
ಶ್ರೀಮದಾಚಾರರ ಮಹಾಸಂಸ್ಥಾನದ ಭವ್ಯ ಇತಿಹಾಸದಲ್ಲಿ ಶ್ರೀನರಹರಿತೀರ್ಥ ಶ್ರೀಪಾದರು ಹಾಗೂ ಶ್ರೀರಘುನಂದನ ಗುರುಪುಂಗವರು ಮಹತ್ವಪಾರ್ಣವಿಶಿಷ್ಟ ಸ್ಥಾನಗಳಿಸಿದ ಮಹನೀಯರೆಂದು ಜ್ಞಾನಿಗಳು ಅವರನ್ನು ಸ್ತುತಿಸುವರು. ಶ್ರೀನರಹರಿತೀರ್ಥರು ಚತುರ್ಯುಗ ಮೂರ್ತಿಯಾದ, ಶ್ರೀಬ್ರಹ್ಮ ಕರಾರ್ಚಿತನಾದ ಶ್ರೀಮೂಲರಾಮನನ್ನು ಶ್ರೀಮದಾಚಾರರಿಗೆ ಗಜಪತಿಭಂಡಾರದಿಂದ ತಂದೊಪ್ಪಿಸಿ ಆ ದೇವನು ಸರ್ವಜ್ಞರ ಮಹಾಸಂಸ್ಥಾನದ ಆರಾಧ್ಯಮೂರ್ತಿಯಾಗಿ ಮೆರೆಯುವಂತೆಮಾಡಿ, ಶ್ರೀಪದ್ಮನಾಭತೀರ್ಥರ ತರುವಾಯ ತಾವೂ ಬಹುಕಾಲ ಪೂಜಿಸಿದ ಭಾಗ್ಯಶಾಲಿಗಳು, ಶ್ರೀಸರ್ವಜ್ಞರ ವೇದಾಂತಸಾಮ್ರಾಜ್ಯಾಧೀಶ್ವರರಾದ ಶ್ರೀರಘುನಂದನ ತೀರ್ಥರಿಗೆ ಶ್ರೀಮೂಲರಾಮಚಂದ್ರನೊಲಿದು ಅವರಲ್ಲಿ ಅನಿತರಸಾಧಾರಣವಾಗಿ ಪರಮಾನುಗ್ರಹಮಾಡಿ ಮಹಾಸಂಸ್ಥಾನದಲ್ಲಿ ಇಂದಿಗೂ ಪರಂಪರೆಯಿಂದ ಪೂಜೆಗೊಳ್ಳುತ್ತಿದ್ದಾನೆ! ಇಂತು ಮಹಿಮಾಪೂರ್ಣ ಸಂತಸಾರ್ವಭೌಮರಾದ ಈ ಉಭಯ ಯತಿವರ್ಯರುಗಳ ಬೃಂದಾವನಗಳ ಮೇಲೆ ಶ್ರೀಮೂಲರಾಮನನ್ನು ಮಂಡಿಸಿ ಶ್ರೀಗುರುರಾಜರು ಕನಕಾಭಿಷೇಕಮಾಡಿದು ಅರ್ಥಪೂರ್ಣವಾಗಿದೆ.
ಈ ಸಂದರ್ಭದಲ್ಲಿ ಶ್ರೀಮದಾಚಾರರ ಮಹಾಸಂಸ್ಥಾನದಲ್ಲಿ ಶ್ರೀರಾಘವೇಂದ್ರಗುರುಸಾರ್ವಭೌಮರಿಂದ ಪ್ರತಿನಿತ್ಯ ಪೂಜೆಗೊಳ್ಳುತ್ತಿದ್ದ ಶ್ರೀಮೂಲರಾಮನ ಭವ್ಯ ಇತಿಹಾಸವನ್ನು ಇಲ್ಲಿ ನಿರೂಪಿಸುವುದು ಅತ್ಯವಶ್ಯವಾಗಿದೆ. ಶ್ರೀ ಪ್ರಹ್ಲಾದ-ಬಾಹ್ಲಿಕ ವ್ಯಾಸರಾಜಾವತಾರಿಗಳಾದ ಶ್ರೀಗುರುರಾಜರು ಈ ಚತುರ್ಯುಗಮೂರ್ತಿ ಶ್ರೀಮೂಲರಾಮನ ಪೂಜೆಗಾಗಿಯೇ ಅವತರಿಸಿದಮೇಲೆ ಅಂಥ ಮಹಾಮಹಿಮನಾದ ಮೂಲರಾಮನ ಇತಿಹಾಸವನ್ನು ಅರಿಯುವುದು ಅತಿಯುಕ್ತವಾಗಿದೆ.