ಕಲಿಯುಗ ಕಲ್ಪತರು ಐದನೆಯ ಉಲ್ಲಾಸ ಶ್ರೀರಾಘವೇಂದ್ರಗುರುಸಾರ್ವಭೌಮರು ೧೦. ವಿಷ್ಣುತೀರ್ಥರು-ವಿಜಯೀಂದ್ರರಾದರು
ವ್ಯಾಸರಾಜರು ತಮ್ಮ ಶಿಷ್ಯರಾದ ವಿಷ್ಣುತೀರ್ಥರನ್ನು ಸುರೇಂದ್ರತೀರ್ಥರಿಗೆ ಅರ್ಪಿಸುವ ವಿಚಾರ, ರಾಜಧಾನಿಯಲ್ಲಿ ಜನಜನಿತವಾಗಿ ಸಹಸ್ರಾರುಜನಧಾರ್ಮಿಕರು “ಲೋಕಪಾವನಮಠದಲ್ಲಿ ಸೇರಿದ್ದಾರೆ. ವೇದಿಕೆಯಮೇಲೆ ಉಭಯಗುರುಗಳು ಮಂಡಿಸಿದ್ದಾರೆ. ಅವರ ಒಂದು ಭಾಗದಲ್ಲಿ ಶ್ರೀವಿಷ್ಣುತೀರ್ಥರು, ಶ್ರೀನಿವಾಸತೀರ್ಥರು, ಶ್ರೀವಾದಿರಾಜರು, ಶ್ರೀಪುರಂದರ- ಕನಕದಾಸರು-ಕೃಷ್ಣಾಚಾರ್ಯ ಪ್ರಕೃತಿಗಳೂ ಮತ್ತೊಂದು ಪಾರ್ಶ್ವದಲ್ಲಿ ಸಾಮ್ರಾಟ್ ಕೃಷ್ಣದೇವರಾಯ, ಅಚ್ಯುತದೇವರಾಯ, ಅಳಿಯರಾಮರಾಜ, ತಂಜಾಪುರದ ಚವ್ವಪ್ಪನಾಯಕ, ಮಧುರೆಯ ವಿಶ್ವನಾಥನಾಯಕ ಸಚಿವ-ಸಾಮಂತಾದಿಗಳು ಮಂಡಿಸಿದ್ದಾರೆ.
ವ್ಯಾಸರಾಜರು ಸುರೇಂದ್ರರತ್ತ ತಿರುಗಿ “ನೆನ್ನೆ ನಾವು ಹೇಳಿದಂತೆ ವಿಠಲಾಚಾರನಿಗೆ ವಿಷ್ಣು ತೀರ್ಥರೆಂಬ ಹೆಸರಿನಿಂದ ಆಶ್ರಮವಿತ್ತು ಸಕಲಶಾಸ್ತ್ರಗಳನ್ನು ಪಾಠಹೇಳಿ ಮಹಾಪಂಡಿತರನ್ನಾಗಿ ಮಾಡಿ, ಈವರೆಗೆ ಪಾಲಿಸಿಕೊಂಡುಬಂದೆವು. ಶ್ರೀಮೂಲ ಗೋಪಾಲಕೃಷ್ಣನ ಪ್ರೇರಣೆಯಂತೆ ಇಂದು ಇವರನ್ನು ನಿಮಗೆ ಒಪ್ಪಿಸುತ್ತಿದ್ದೇವೆ. ಈವರೆಗೆ ನಮ್ಮ ಪುತ್ರರಂತಿದ್ದ ವಿಷ್ಣುತೀರ್ಥರು ಇಂದಿನಿಂದ ನಿಮ್ಮ ಪುತ್ರರಾಗಿದ್ದಾರೆ. ಇವರನ್ನು ನಿಮ್ಮ ಮಹಾಸಂಸ್ಥಾನದ ಸಂಪ್ರದಾಯದಂತೆ ಶಿಷ್ಯರನ್ನಾಗಿಮಾಡಿಕೊಂಡು ಶ್ರೀಮದಾಚಾರ್ಯರ ವೇದಾಂತಸಾಮ್ರಾಜ್ಯಾಧಿಪತಿಗಳನ್ನಾಗಿಮಾಡಿ ಕಾಪಾಡಿಕೊಂಡು ಬನ್ನಿರಿ” ಎಂದು ಹೇಳಿ ವಿಷ್ಣುತೀರ್ಥರ ಕರವನ್ನು ಹಿಡಿದು ಶ್ರೀಸುರೇಂದ್ರರ ಕರದಲ್ಲಿಟ್ಟು ನಸುನಗುತ್ತಾ 'ಶ್ರೀಮೂಲರಾಮನಿಗೆ ಶ್ರೀಮೂಲಭೈಷ್ಟಿ ಜಾನಿಯ ಕಾಣಿಕೆಯನ್ನು ಸ್ವೀಕರಿಸಿರಿ253 ನಮ್ಮ ಶಿಷ್ಯಮಂಡಲಿಯಲ್ಲಿ ಇಂಥ ವಿದ್ವನ್ಮಣಿಗಳು, ಗುಣವಂತರು, ಹರಿಗುರುಭಕ್ತಿಪೂರ್ಣರಾದ ಶಿಷ್ಯರು ಬೇರೋಬ್ಬರಿಲ್ಲ !254 ಜಗತ್ತಿನಲ್ಲಿ ಇವರಿಂದ ನಮ್ಮ ಉಭಯಪೀಠಗಳ ಗೌರವ ಕೀರ್ತಿಗಳು ದಿಗಂತವಿಶ್ರಾಂತವಾಗುವುದು” ಎಂದು ಹೇಳಿದರು. ಆಗ ಸಭಾಸದರು ಉಭಯಗುರುಗಳ ಜಯಕಾರ ಮಾಡಿದರು. ಸುರೇಂದ್ರತೀರ್ಥರು ವ್ಯಾಸಮುನಿಗಳಿಗೆ ತಮ್ಮ ಕೃತಜ್ಞತೆಯನ್ನರ್ಪಿಸಿ ವಿಷ್ಣುತೀರ್ಥರಿಗೆ ದಂಡ ಪಲ್ಲಟಮಾಡಿಸಿ, 25 ಮಂತ್ರಮುದ್ರಾಧಾರಣ, ಗುರೂಪದೇಶ, ಮಹಾಮಂತ್ರಗಳು ಮತ್ತು ಚತುಃಷಷ್ಟಿಕಲೆಗಳನ್ನು ಉಪದೇಶಿಸಿ, ಮಹಾಸಂಸ್ಥಾನದ ಪದ್ಧತಿಯಂತೆ ಅವರನ್ನು ಭದ್ರಾಸನದಲ್ಲಿ ಮಂಡಿಸಿ “ಶ್ರೀವಿಜಯೀಂದ್ರತೀರ್ಥರು” ಎಂಬ ಹೆಸರಿನಿಂದ ಪಟ್ಟಾಭಿಷೇಕಮಾಡಿ ಅವರನ್ನು ಶ್ರೀಮದಾಚಾರ್ಯ ಮಹಾಸಂಸ್ಥಾನ ದಕ್ಷಿಣಾದಿಪೀಠಾಧೀಶರಾದ ಶ್ರೀಕವೀಂದ್ರತೀರ್ಥರ ಮಹಾಪೀಠಾಧೀಶ್ವರರನ್ನಾಗಿಮಾಡಿ ಕೃತಕೃತ್ಯರಾದರು.
ನೂತನಜಗದ್ಗುರುಗಳ ಪಟ್ಟಾಭಿಷೇಕಸೂಚಕವಾಗಿ ಮೂವತ್ತೊಂದು ಕುಶಾಲು ತೋಪುಗಳು ಗರ್ಜಿಸಿದವು. ಶ್ರೀವ್ಯಾಸರಾಜರು ಶ್ರೀವಿಜಯೀಂದ್ರರಿಗೆ ಅನೇಕ ಅಮೂಲ್ಯ ಉಡುಗೊರೆ-ಗ್ರಂಥಸಮುದಾಯಗಳನ್ನು ಅರ್ಪಿಸಿ ಆಶೀರ್ವದಿಸಿದರು. ತರುವಾಯ ಸಾಮ್ರಾಟ್ ಕೃಷ್ಣದೇವರಾಯ, ಅಚ್ಯುತರಾಯ, ಅಳಿಯ ರಾಮರಾಜ, ಚವ್ವಪ್ಪನಾಯಕ, ವಿಶ್ವನಾಥನಾಯಕರುಗಳೂ ಅನೇಕ ವೈದಿಕಲೌಕಿಕ ವಿದ್ವಾಂಸರು- ಧರ್ಮಾಭಿಮಾನಿ ನೂತನಗುರುಗಳಿಗೆ ಕಾಣಿಕೆಗಳನ್ನು ಸಮರ್ಪಿಸಿ ನಮಸ್ಕರಿಸಿದರು.
ಆಗಲೇ ನವದ್ವೀಪದಿಂದ ಬಂದಿದ್ದ ಕೃಷ್ಣಶರ್ಮರೆಂಬ ಪ್ರಕಾಂಡಪಂಡಿತರು ತರ್ಕಶಾಸ್ತ್ರ ಮತ್ತು ಆನಂತರ “ತತ್ವಮಸಿ ಎಂಬ ವಿಚಾರವಾಗಿ ಶ್ರೀವಿಜಯೀಂದ್ರರೊಡನೆ ವಾದಮಾಡಬಯಸಿ ಪೂರ್ವಪಕ್ಷ ಮಾಡಿದರು. ಆಗ ವಿಜಯೀಂದ್ರರು ಉಭಯಗುರುಗಳ ಅಪ್ಪಣೆಯಂತೆ ಅವರೊಡನೆ ಮೂರುಗಂಟೆಯಕಾಲ ವಾದಮಾಡಿ ಪ್ರಕಾಂಡಪಾಂಡಿತ್ಯ ಪ್ರತಿಭೆಗಳಿಂದ ಕೃಷ್ಣಶರ್ಮರನ್ನು ನಿರುತ್ತರಗೊಳಿಸಿ ಪ್ರಚಂಡ ವಿಜಯವನ್ನು ಗಳಿಸಿದರು. ನೂತನ ಗುರುಗಳ ಪಾಂಡಿತ್ಯ ಪ್ರಭಾವದಿಂದ ಸಂತುಷ್ಟರಾದ ಸರ್ವರೂ ಕರತಾಡನ ಮಾಡುತ್ತಾ ಶ್ರೀವಿಜಯೀಂದ್ರತೀರ್ಥರಿಗೆ ಜಯವಾಗಲಿ” ಎಂದು ಜಯಘೋಷಮಾಡಿದರು. ವಿಜಯೀಂದ್ರರ ವಿಜಯದಿಂದ ವ್ಯಾಸರಾಜ-ಸುರೇಂದ್ರರಿಗಾದ ಆನಂದ ಅವರ್ಣನೀಯ! ಕೃಷ್ಣದೇವರಾಯ ನೂತನ ಗುರುಗಳ ವಿಜಯದಿಂದ ಸಂತೋಷಭರಿತನಾಗಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದನು. ಅಂದು ವಿಜಯೀಂದ್ರರು ಶ್ರೀಮೂಲರಾಮರ ಪೂಜಾರಾಧನೆಯನ್ನು ಸುರೇಂದ್ರರ ಮಾರ್ಗದರ್ಶನದಂತೆ ನೆರವೇರಿಸಿ ಸರ್ವರನ್ನೂ ಪ್ರಮೋದಗೊಳಿಸಿದರು. ಮಧ್ಯಾಹ್ನ ತೀರ್ಥ-ಪ್ರಸಾದ ಭೂರೀಭೋಜನಗಳಾದ ಮೇಲೆ ಪಟ್ಟಾಭಿಷೇಕೋತ್ಸವಾಂಗ ಕಾರ್ಯಕ್ರಮವು ಮುಕ್ತಾಯವಾಯಿತು.
ಶ್ರೀವಿಜಯೀಂದ್ರತೀರ್ಥರಿಗೆ ಮಹಾಸಂಸ್ಥಾನಾಧಿಪತ್ಯವಾಗಿ ನಾಲ್ಕಾರು ದಿನಗಳಾಗಿವೆ. ಒಂದು ದಿನ ಏಕಾಂತದಲ್ಲಿ ಉಭಯಗುರುಗಳು ಮಾತನಾಡುತ್ತಿರುವಾಗ ವ್ಯಾಸರಾಜರು ಸುರೇಂದ್ರರನ್ನು ಕುರಿತು ಇಂತೆಂದರು - “ನೋಡಿದಿರಾ? ನಮ್ಮ ವಿಜಯೀಂದ್ರರು ಮಹಾಸಂಸ್ಥಾನಾಧಿಪತಿಗಳಾದ ದಿನವೇ ಪ್ರಕಾಂಡಪಂಡಿತರಾದ ಕೃಷ್ಣಶರ್ಮರನ್ನು ವಾದದಲ್ಲಿ ಸುಲಭವಾಗಿಯೇ ಜಯಿಸಿದ ರೀತಿಯನ್ನು ! ಅವರ ವಾದ ವಿದ್ಯಾಕುಶುಲತೆಯನ್ನು ಎಷ್ಟು ಶ್ಲಾಘಿಸಿದರೂ ಸ್ವಲ್ಪವೇ ಸರಿ ! ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಇಂಥ ಮಹಾವಿದ್ವತ್ತನ್ನು ಕಂಡು ನಾವೇ ಬೆರಗಾಗಿದ್ದೇವೆ. ಈ ಪಾಂಡಿತ್ಯ ಪ್ರತಿಭೆಗಳು ಈ ಜನ್ಮದಲ್ಲಿ ಕಲಿತಿದ್ದು ಮಾತ್ರವಲ್ಲವೆನಿಸುವುದು ! ಇವರು ಹಿಂದಿನ ಜನ್ಮದಲ್ಲಿಯೇ ಸರ್ವಶಾಸ್ತ್ರ ವಿಶಾರದರಾಗಿದ್ದಿರಬೇಕು. ಇವರ ಧೀಶಕ್ತಿ, ಅಸದೃಶ ವಾದವೈಖರಿಗಳನ್ನು ಗಮನಿಸಿದರೆ ನಮ್ಮ ವಿದ್ಯಾಗುರುಗಳಾದ ಲಕ್ಷ್ಮೀನಾರಾಯಣಮುನಿಗಳು ವರ್ಣಿಸುತ್ತಿದ್ದ ನಿಮ್ಮ ಪರಮಗುರುಗಳ ಗುರುಗಳಾದ ಶ್ರೀವಿಬುಧೇಂದ್ರ ತೀರ್ಥಗುರುಪಾದರ ಭವ್ಯವ್ಯಕ್ತಿತ್ವ ನಮ್ಮ ಕಣ್ಣಿಗೆ ಕಟ್ಟಿದಂತಾಗುವುದು. ನಮ್ಮ ಗುರುಪಾದರು ಒಮ್ಮೆ “ಪ್ರಿಯ ವ್ಯಾಸತೀರ್ಥರೇ, ನಮ್ಮ ವಿದ್ಯಾ ಗುರುಗಳಾದ ಪೂಜ್ಯ ಶ್ರೀವಿಬುಧೇಂದ್ರತೀರ್ಥರಂತಹ ಸರ್ವತಂತ್ರಸ್ವತಂತ್ರರಾದ ಜಗಜೇತಾರರು ಈ ಪ್ರಪಂಚದಲ್ಲಿ ಬೇರೋಬ್ಬರಿರಲಿಲ್ಲ. ಶ್ರೀಮದಾಚಾರರ ಸಚ್ಛಾಸ್ತ್ರಪಾಠಪ್ರವಚನ ಸಂಪ್ರದಾಯವನ್ನು ಉಳಿಸಿ, ಬೆಳೆಸಿಕೊಂಡು ಬಂದ ಧೀಮಂತರೆಂದರೆ ಅವರೊಬ್ಬರೇ ! ಆ ಮಹನೀಯರು ಅಂದು ಅವತರಿಸದಿರದಿದ್ದರೆ ಇಷ್ಟು ಹೊತ್ತಿಗೆ ನಮ್ಮ ಸಿದ್ಧಾಂತದ ಹೆಸರೇ ಉಳಿಯುತ್ತಿರಲಿಲ್ಲ ! ಅವರು ಇಂಥ ಮಹನೀಯರಾಗಿದ್ದರೂ ಅವರಿಗೆ ಒಂದು ವಿಚಾರದಲ್ಲಿ ಸಮಾಧಾನವಿರಲಿಲ್ಲ ! ಒಂದುದಿನ ಶ್ರೀವಿಬುಧೇಂದ್ರರು ಏಕಾಂತದಲ್ಲಿ ನಮಗೆ ಹೀಗೆ ಹೇಳಿದ್ದರು - “ಇಷ್ಟು ವರ್ಷಕಾಲ ನಾವು ಪರವಾದಿದಿಗ್ವಿಜಯ, ದೈತಸಿದ್ಧಾಂತಸ್ಥಾಪನೆ - ಆಚಾರಪರಂಪರಾಗತ ಪಾಠಪ್ರವಚನ ಸಂಪ್ರದಾಯಸಂರಕ್ಷಣೆಗಳಲ್ಲೇ ಮಗ್ನರಾದೆವು. ಒಂದೆರಡು ಗ್ರಂಥಗಳನ್ನೂ ರಚಿಸಿದೆವು, ಆದರೆ ಹರಿವಾಯುಗಳ ಅನುಗ್ರಹದಿಂದ ನಮಗೆ ಲಭ್ಯವಾದ ಈ ಪಾಂಡಿತ್ಯದ ಉಪಕಾರ ಮುಂದಿನ ಜನಾಂಗಕ್ಕಾಗುವಂತೆ ಮಾಡುವ ಪ್ರಮುಖಕಾರ ನಮ್ಮಿಂದಾಗಲಿಲ್ಲವೆಂಬ ಚಿಂತೆ ನಮ್ಮನ್ನು ಬಾಧಿಸುತ್ತಿದೆ. ದೈತಸಿದ್ಧಾಂತರಕ್ಷಕಗಳಾದ ಅಸದೃಶಗ್ರಂಥರಚನಾಕಾರ ಹಾಗಿಯೇ ಉಳಿದುಹೋಗಿದೆ. ಈ ಜನ್ಮದಲ್ಲಿನ್ನು ಅದು ಅಸಾಧ್ಯ. ಅದಕ್ಕಾಗಿಯೇ ನಾವು ಮತ್ತೊಮ್ಮೆ ಜನಿಸಬೇಕಾದೀತು ! ಆಗ ನಿಮ್ಮ ಶಿಷ್ಯರಲ್ಲಿಯೇ ನಾವು ವ್ಯಾಸಂಗ ಮಾಡುವಂತಾದರೆ ನಮಗೆ ಪರಮಾನಂದವಾಗುವುದು. ಈ ರಹಸ್ಯ ನಿಮ್ಮಲ್ಲೇ ಇರಲಿ” ಎಂದು ಏಕಾಂತದಲ್ಲಿ ಹೇಳಿದ್ದರು - ಎಂದು ಶ್ರೀಲಕ್ಷ್ಮೀನಾರಾಯಣಮುನಿಗಳು ನಮಗೆ ತಿಳಿಸಿ ಮುಂದುವರೆದು “ಪ್ರಿಯ ವ್ಯಾಸತೀರ್ಥರೇ, ಮುಂದೆ ನಿಮ್ಮ ಶಿಷ್ಯರಾದ ಯಾರಲ್ಲಾದರೂ ನಮ್ಮ ಗುರುಪಾದ ಶ್ರೀವಿಬುಧೇಂದ್ರತೀರ್ಥರ ಅಸದೃಶಪಾಂಡಿತ್ಯ ಪ್ರತಿಭೆ-ವಾದಚಾತುರಾದಿಗಳು ಕಂಡುಬಂದರೆ, ಅವರೇ ಮತ್ತೆ ಅವತರಿಸಿರುವ ಪೂಜ್ಯ ಶ್ರೀವಿಬುಧೇಂದ್ರತೀರ್ಥರೆಂದು ತಿಳಿಯಿರಿ ! ಅವರು ಅಸದೃಶ ಗ್ರಂಥರಚನೆ, ಪರವಾದಿ ದಿಗ್ವಿಜಯ, ದೈತಸಿದ್ಧಾಂತ ಸ್ಥಾಪನೆ, ಆಚಾರಪರಂಪರಾಗತ ಸಚ್ಛಾಸ್ತ್ರಪಾಠಪ್ರವಚನ, ಸಂಪ್ರದಾಯ ಸಂರಕ್ಷಣೆ- ಪ್ರಸರಣಾದಿಗಳಿಂದ ದೈತಸಿದ್ಧಾಂತವನ್ನು ನಿಷ್ಕಂಟಕಗೊಳಿಸಿ ಅಜರಾಮರ ಕೀರ್ತಿ ಗಳಿಸುತ್ತಾರೆ - ಎಂದು ರಹಸ್ಯವಾಗಿ ತಿಳಿಸಿದ್ದರು” ಎಂದು ಶ್ರೀವ್ಯಾಸತೀರ್ಥರು ತಿಳಿಸಿ, ಮತ್ತೆ ಮುಂದುವರೆದು “ಶ್ರೀಗಳವರೇ, ಇದುವರೆಗೂ ನಾವು ಯಾರಿಗೂ ಹೇಳದಿದ್ದ ಒಂದು ರಹಸ್ಯ ನಿಮಗೆ ತಿಳಿಸುತ್ತೇವೆ. ಕೇಳಿ, ನಮ್ಮ ವಿಜಯೀಂದ್ರರಿಗೆ ನಾವು ಪಾಠಹೇಳಿಕೊಡುತ್ತಿರುವಾಗಲೆಲ್ಲ ನಮ್ಮ ಗುರುಪಾದರ ಭವಿಷ್ಯವಾಣಿ ನೆನಪಿಗೆ ಬರುತ್ತಿತ್ತು ! ನಾವು ಎಂದೋ ತಿಳಿದುಬಿಟ್ಟೆವು ಶ್ರೀವಿಬುಧೇಂದ್ರರೇ ಶ್ರೀವಿಷ್ಣುತೀರ್ಥರಾಗಿ ಅವತರಿಸಿದ್ದಾರೆಂದು. ಇಂದು ನಾವು ಅವರನ್ನು ನಿಮಗೆ ಒಪ್ಪಿಸಿದ್ದು ಅದೇಕಾರಣದಿಂದ ! ಅವರು ಮಹಾಪೀಠಾಧೀಶರಾದ ದಿನವೇ ಅಸದೃಶರೀತಿಯಲ್ಲಿ ವಾದದಿಗ್ವಿಜಯಗಳಿಸಿದ್ದು ನಮ್ಮ ನಂಬಿಕೆಯನ್ನು ಈಗ ಸ್ಥಿರಪಡಿಸಿತು !” ಎಂದು ಆನಂದಬಾಷ್ಪ ಸುರಿಸುತ್ತಾ ತಿಳಿಸಿದರು.
ಆಗ ಸುರೇಂದ್ರತೀರ್ಥರು ನಸುನಗೆಯನ್ನು ಹೊರಸುತ್ತಾ “ನಿಜ, ಅದನ್ನು ನಾವೂ ಬಲ್ಲೆವು ! ಆದ್ದರಿಂದಲೇ ನಿಮ್ಮಿಂದ ಅವರನ್ನು ಪಡೆಯಲೆಂದೇ ನಾವಿಲ್ಲಿಗೆ ಬಂದೆವು. ನೀವು ಅವರನ್ನು ನಮಗೆ ನೀಡಿ ಮಹೋಪಕರಮಾಡಿದ್ದೀರಿ. ಇದನ್ನು ನಾವೆಂದಿಗೂ ಮರೆಯಲಾರೆವು” ಎಂದು ವ್ಯಾಸರಾಜರ ಕರಪಿಡಿದು ಗದ್ದದಕಂಠದಿಂದ ನಿವೇದಿಸಿದರು. ಆನಂತರ ಉಭಯಯತಿಗಳೂ ಬಹುಹೊತ್ತು ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದು, ಸಾಯಂದೀಪಾರಾಧನೆಗೆ ದಯಮಾಡಿಸಿದರು.
ಮೇಲಿನ ಪ್ರಕರಣವು ಜರುಗಿದ ಒಂದು ದಿನಗಳಲ್ಲಿ ಸುರೇಂದ್ರತೀರ್ಥರು ಪ್ರಿಯಶಿಷ್ಯ ವಿಜಯೀಂದ್ರತೀರ್ಥರೊಡನೆ ದಿಗ್ವಿಜಯಹೊರಡಲು ತೀರ್ಮಾನಿಸಿದರು. ಶ್ರೀವ್ಯಾಸರಾಜರು ಏಕಾಂತವಾಗಿ ವಿಜಯೀಂದ್ರರಿಗೆ ಅನೇಕ ವಿಚಾರಗಳನ್ನು ಬೋಧಿಸಿ ಆಶೀರ್ವದಿಸಿ ಶಿಷ್ಯರನ್ನು ಬೀಳ್ಕೊಡಲು ಸಿದ್ಧರಾದರು. ಸುರೇಂದ್ರರೊಡನೆ ಪ್ರಯಾಣ ಬೆಳೆಸಲು ವಿಜಯೀಂದ್ರರು ಸಿದ್ದರಾಗಿ ಹೊರಬಂದರು, ಈ ಗುರುಶಿಷ್ಯರನ್ನು ಬೀಳ್ಕೊಡಲು ಸರ್ವರೂ ಸಿದ್ಧರಾಗಿನಿಂತಿದ್ದಾರೆ. ಹತ್ತಿರದಲ್ಲಿದ್ದ ಶ್ರೀವಾದಿರಾಜತೀರ್ಥರು “ನಮ್ಮಿರ್ವರ ಮೈತ್ರಿಯನ್ನು ದೃಢಪಡಿಸಲು ಉಡುಪಿಕ್ಷೇತ್ರಕ್ಕೆ ದಯ ಮಾಡಿಸಬೇಕು” ಎಂದು ಆಶಿಸಿದರು. ವಿಜಯೀಂದ್ರರು ಮುಗುಳುನಗೆ ಬೀರಿ “ಆಗಬಹುದು” ಎಂದು ನುಡಿದು ಅವರನ್ನು ಆಲಿಂಗಿಸಿದರು.
ಆಗ ತಮ್ಮತ್ತ ಬಂದ ಕೃಷ್ಣಾಚಾರ್ಯ-ಕನಕಾಚಲಾಚಾರರನ್ನು ನೋಡಿ ವಿಜಯೀಂದ್ರರು ಮಂದಹಾಸಬೀರಿದರು. ಆ ತಂದೆಮಕ್ಕಳು ಶ್ರೀಗಳವರಿಗೆ ನಮಸ್ಕರಿಸಿ ಶಿಷ್ಯಕೋಟಿಪ್ರವಿಷ್ಟರಾದ ನಮ್ಮನ್ನು ಕ್ಷಮಿಸಿ ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದರು. ವಿಜಯೀಂದ್ರರು ಅವರ ಕರಪಿಡಿದು “ಛೇ, ಹಾಗೆ ಹೇಳಬಾರದು. ನೀವು ನನ್ನ ಸಹಾಧ್ಯಾಯಿಗಳು-ನನಗೆ ಆಪ್ತರಾದ ನೀವು ನಮ್ಮ ಉಭಯಗುರುಗಳ ಅನುಗ್ರಹಕ್ಕೂ ಪಾತ್ರರಾಗಿದ್ದೀರಿ. ಈ ಎರಡುಮಹಾಸಂಸ್ಥಾನಗಳ ಕೀರ್ತಿ ಪ್ರತಿಷ್ಠೆಗಳನ್ನು ಬೆಳಗಿಸುವ ಹೊಣೆ ನಮ್ಮಿಬ್ಬರಮೇಲೂ ಇದೆ. ಅದನ್ನು ನಾವು ಯಶಸ್ವಿಯಾಗಿ ಜರಗಿಸಲು ಪ್ರಯತ್ನಿಸೋಣ. ನಾವಿನ್ನು ಹೋಗಿಬರುತ್ತೇವೆ.” ಎಂದು ತಿಳಿಸಿ ವ್ಯಾಸರಾಜರಿಗೆ ನಮಸ್ಕರಿಸಿ “ಗುರುದೇವ, ತಮ್ಮ ದರ್ಶನ ಮತ್ತಾವಾಗ ಲಭಿಸುವುದು ?” ಎಂದು ಅವರ ಪಾದ ಹಿಡಿದು ಪ್ರಾರ್ಥಿಸಿದರು.
ವ್ಯಾಸರಾಜರ ಕಣ್ಣಿನಲ್ಲಿಯೂ ಅಶ್ರು ಮಿಡಿಯಿತು. ಕರವಸ್ತ್ರದಿಂದ ವಿಜಯೀಂದ್ರರ ಕಣ್ಣೀರೊರೆಸಿ. “ಶ್ರೀಮೂಲರಾಮ- ಗೋಪಾಲಕೃಷ್ಣರ ಅನುಗ್ರಹದಿಂದ ಆ ಯೋಗ ಬೇಗ ಲಭಿಸುವುದು. ಚಿಂತಿಸಬೇಡಿ. ಈ ಎರಡು ಮಹಾಪೀಠಗಳ ಕೀರ್ತಿ-ಪ್ರತಿಷ್ಠೆಗಳನ್ನು ಬೆಳಗಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಅದನ್ನು ಯಶಸ್ವಿಯಾಗಿ ನಿರ್ವಹಿಸಲು ಶ್ರೀಹರಿವಾಯುಗಳು ನಿಮಗೆ ಶಕ್ತಿಕೊಡಲಿ. ನಿಮ್ಮಿಂದ ದೈತಸಿದ್ಧಾಂತದ ವಿಜಯದುಂದುಭಿ ಮೊಳಗುವಂತೆ ಮಾಡಿಸಿ ಅನುಗ್ರಹಿಸಲಿ” ಎಂದು ಅಪ್ಪಣೆ ಕೊಡಿಸಿದರು. ನೆರೆದ ಜನರು ಈ ಗುರು-ಶಿಷ್ಯರ ಪ್ರೀತಿಯನ್ನು ಕಂಡು ಆನಂದಿಸಿದರು.
ಆಗ ಗುರುದ್ವಯರನ್ನು ಬೀಳ್ಕೊಡಲು ಸಾಮ್ರಾಟರ ಪರವಾಗಿ ಬಂದ ಪ್ರಮುಖರ ಗುಂಪಿನಲ್ಲಿದ್ದ ಅಳಿಯ ರಾಮರಾಜರು ಶ್ರೀವಿಜಯೀಂದ್ರರಿಗೆ ನಮಸ್ಕರಿಸಿ ಸಣ್ಣಗುರುಗಳು ಮುಂದೆ ನಾನು ನಿಮಗೆ ಮಾಡಲಿರುವ ಅಸಾಧಾರಣ ಸೇವೆ, ಗೌರವಗಳನ್ನು ಸ್ವೀಕರಿಸಲು ಮತ್ತೆ ಈ ರಾಜಧಾನಿಗೆ ದಯಮಾಡಿಸಬೇಕು. ನನ್ನ ಸೇವೆಯನ್ನು ಸ್ವೀಕರಿಸಿ ಪೊರೆಯಬೇಕು” ಎಂದು ಪ್ರಾರ್ಥಿಸಲು ವಿಜಯೀಂದ್ರರು ಮುಗುಳುನಗೆ ಬೀರಿ “ತಥಾಸ್ತು” ಎಂದು ಹರಸಿದರು. ಅನಂತರ ಸುರೇಂದ್ರತೀರ್ಥರು ವ್ಯಾಸರಾಜಗುರುವರರನ್ನು ಆಲಿಂಗಿಸಿ ಅವರ ಅಪ್ಪಣೆ ಪಡೆದು ಪ್ರಿಯಶಿಷ್ಯರಾದ ವಿಜಯೀಂದ್ರರೊಡನೆ ಪಾಲಕಿಯಲ್ಲಿ ಕುಳಿತು ಸಕಲರು ಜಯಕಾರಮಾಡುತ್ತಿರುವಾಗ ವಿಜಯನಗರದಿಂದ ದಿಗ್ವಿಜಯಮಾಡಿದರು.