ಕಲಿಯುಗ ಕಲ್ಪತರು ಐದನೆಯ ಉಲ್ಲಾಸ ಶ್ರೀರಾಘವೇಂದ್ರಗುರುಸಾರ್ವಭೌಮರು ೯. ಜಗದ್ಗುರುಗಳ ಸಮ್ಮಿಲನ
ವಿಜಯನಗರ ಹೊರವಲಯದಲ್ಲೊಂದು ಉದ್ಯಾನವನ, ತೆಂಗು, ಮಾವು, ಹಲಸು ಮುಂತಾದ ವಿವಿಧ ಫಲಭರಿತ ವೃಕ್ಷಗಳು - ಮಲ್ಲಿಗೆ, ಜಾಜಿ, ಪಾರಿಜಾತ, ಸಂಪಿಗೆ, ಇರುವಂತಿಕೆ, ಸುಗಂಧರಾಜ, ಶ್ಯಾವಂತಿಗೆ, ಸೂರ್ಯಕಾಂತಿ ಮುಂತಾದ ಪುಷ್ಪಗಳನ್ನು ಹೊರಸೂಸುತ್ತಿರುವ ಸುಮತರುಲತೆಗಳು, ಎತ್ತನೋಡಿದರತ್ತ ಹಚ್ಚ ಹಸುರಿನಿಂದ ಸೊಂಪಾಗಿ ಬೆಳೆದು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿರುವ ತುಳಸೀ ಗಿಡಗಳು. ಇಂತು ಆ ವನವು ಶೋಭಾಯಮಾನವಾಗಿ ನೋಡುವವರ ಕಣ್ಣುಗಳಿಗೆ ಆನಂದವನ್ನೀಯುತ್ತಿದೆ. ಅದರ ಸೊಬಗನ್ನು ಪರೀಕ್ಷಿಸಿದರೆ, ಕನ್ನಡ ಸಿರಿದೇವಿಯು ತನ್ನ ಪತಿಯ ಭಕ್ತರನ್ನು ತನ್ನ ಸೆರಗಿನಲ್ಲಿ ಬಚ್ಚಿಟ್ಟುಕೊಂಡು ಲಾಲಿಸಲು ಧಾವಿಸುತ್ತಿರುವಂತೆ ಕಾಣಿಸುತ್ತಿದೆ! ಸ್ವಚ್ಛ ತಿಳಿನೀರಿನಿಂದ ನೋಡುವ ಮಾತ್ರದಿಂದಲೇ ಪ್ರೇಕ್ಷಕರ ತೃಷೆಯನ್ನು ಹಿಂಗಿಸಿ ತೃಪ್ತಿ-ಸಂತೋಷಗಳನ್ನು ನೀಡುವ ಸುಂದರ ಸರೋವರದಲ್ಲಿ ಹಂಸ-ಕಾರಂಡಪಕ್ಷಿಗಳು ಅಲ್ಲಿ ಬೆಳೆದಿರುವ ಕಮಲಪುಷ್ಪದ ಎಳೆಸುಗಳನ್ನು ಆಸ್ವಾದಿಸುತ್ತಾ ನಲಿಯುತ್ತಿವೆ. ಆ ಸರಸ್ಸಿನ ಸೋಪಾನಪಂಕ್ತಿಯ ಮೇಲೆ ಗರಿಗೆದರಿ ನವಿಲುಗಳು ನಾಟ್ಯವಾಡುತ್ತಿವೆ! ಆ ಸಾರಸದ ಬದಿಯಲ್ಲೊಂದು ವಿಶಾಲವಾದ ಶಿಲಾಮಂಟಪ, ಅದರಲ್ಲಿ ಅತ್ಯಂತ ತೇಜಸ್ವಿಗಳಾದ ಯತಿವರ್ಯರೊಬ್ಬರು ದೇವತಾರ್ಚನೆಯಲ್ಲಿ ಮಗ್ನರಾಗಿದ್ದಾರೆ. ನೋಡಿದರೆ ಸುಮಾರು ಐವತ್ತೆರಡು ವರ್ಷ ವಯಸ್ಸಿನವರಂತೆ ಕಾಣುತ್ತಾರೆ.
ಆ ಮಹನೀಯರನ್ನು ಸುತ್ತುವರೆದು ನಲವತೈವತ್ತುಜನ ಶಿಷ್ಯ-ಪರಿವಾರದವರು ಪೂಜೆಯನ್ನು ನೋಡುತ್ತಿದ್ದಾರೆ. ಆ ಮಂಟಪದ ಮುಂಭಾಗದಲ್ಲಿ ಪ್ರಣವ ಧ್ವಜವು ಹಾರಾಡುತ್ತಿದೆ. ರಜತದಂಡಧಾರಿಗಳಾದ ದ್ವಾರಪಾಲಕರು ಮಂಟಪದ ಉಭಯಪಾರ್ಶ್ವಗಳಲ್ಲಿ ನಿಂತಿದ್ದಾರೆ. ಯತಿವರ್ಯರಪೂಜೆ ಮುಂದುವರೆದು, ಅಭಿಷೇಕ ಗಂಧಾಕ್ಷತಾ ಸಮರ್ಪಣೆಯಾಯಿತು, ಶ್ರೀಯತಿವರರು ತುಳಸೀ ಪುಷ್ಪಾರ್ಚನೆಮಾಡುತ್ತಿರುವಾಗ ಒಮ್ಮೆ ಸುತ್ತಲೂ ದೃಷ್ಟಿಹರಿಸಿದರು. ಮನೋಹರವಾದ ತುಳಸೀಬನ ಅವರ ದೃಷ್ಟಿಗೆ ಗೋಚರಿಸಿತು. ಪರಮಾನಂದ ತುಂದಿಲರಾದ ಆ ಮಹನೀಯರು ಮನಸಾ ಸಮಸ್ತತುಳಸೀವನವನ್ನೇ ಶ್ರೀಹರಿಗೆ ಸಮರ್ಪಿಸಿಬಿಟ್ಟರು. ಅವರೇ ಶ್ರೀ ಮಧ್ವಾಚಾರ್ಯರ ದಿಗ್ವಿಜಯವಿದ್ಯಾಸಿಂಹಾಸನಾಧೀಶ್ವರರಾದ ನಮಗೆ ಪೂರ್ವಪರಿಚಿತರಾದ ಶ್ರೀಸುರೇಂದ್ರತೀರ್ಥ ಶ್ರೀಪಾದಂಗಳವರು!
ವಿಜಯನಗರದ 'ಲೋಕಪಾವನಮಠ'ದಲ್ಲಿ ಶ್ರೀವ್ಯಾಸರಾಜರು ದೇವತಾರ್ಚನೆಯಲ್ಲಿ ತೊಡಗಿದ್ದಾರೆ, ಇಂದು ಏಕಾದಶೀ ಪ್ರಯುಕ್ತ ಶ್ರೀಹರಿಭಕ್ತನೂ, ಶ್ರೀಯವರ ಶಿಷ್ಯನೂ ಆದ ಕೃಷ್ಣದೇವರಾಯ ದೇವರದರ್ಶನಕ್ಕಾಗಿ ಬಂದಿದ್ದಾನೆ. ಶ್ರೀವಿಷ್ಣುತೀರ್ಥ ಶ್ರೀವಾದಿರಾಜತೀರ್ಥ, ಶ್ರೀನಿವಾಸತೀರ್ಥ, ಪುರಂದರದಾಸ, ಕನಕದಾಸಾದಿ ಜ್ಞಾನಿಗಳಾದ ಶಿಷ್ಯರು ಗುರುಗಳೆಸಗುತ್ತಿರುವ ಪೂಜಾವಲೋಕನ ತತ್ಪರರಾಗಿದ್ದಾರೆ. ಅರ್ಚನೆಯ ಕಾಲ, ಶ್ರೀಗಳವರು ತುಳಸಿಯನ್ನು ಕರದಲ್ಲಿ ಹಿಡಿದರು. ಅದರತ್ತದೃಷ್ಟಿ ಹರಿಸಿ ಅಚ್ಚರಿಯಿಂದ ನಿರ್ಮಾಲ್ಯ' ಎಂದುದ್ಧರಿಸಿ ಸೇವಕನತ್ತ ನೋಡಿದರು, ಶ್ರೀಮಠಕ್ಕೆ ಹೊಸದಾಗಿ ಬಂದಿದ್ದ ಅವನಿಗೆ ಶ್ರೀಯವರಭಾವ ಅರ್ಥವಾಗಲಿಲ್ಲ. ಶ್ರೀಗಳವರು ಮತ್ತೊಮ್ಮೆ ನಿರ್ಮಾಲ್ಯ250 ಎಂದರು. ಆಗ ಆತನಿಗೆ ಶ್ರೀಯವರ ಇಂಗಿತ ತಿಳಿಯಿತು. ಕರಮುಗಿದು “ನಿರ್ಮಾಲ್ಯವಲ್ಲ ಮಹಾಸ್ವಾಮಿ, ದೊಡ್ಡವನದಿಂದ ನಾನೇ ಇದನ್ನು ಸಂಗ್ರಹಿಸಿ ತಂದಿದ್ದೇನೆ” ಎಂದ. ನಸುನಕ್ಕು ಶ್ರೀಯವರು ಬೇರೆ ತುಳಸಿ ತರಿಸಿ ಅರ್ಚನೆ ಮುಗಿಸಿ ಫಲಸಮರ್ಪಣೆ ಮಂಗಳಾರತಿಗಳನ್ನೆಸಗಿ ದೇವರನ್ನು ಭುಜಂಗಿಸಿ ಆ ತುಳಸಿ ತಂದ ಶಿಷ್ಯನನ್ನು ಕರೆದು “ಆ ವನದಲ್ಲಿ ಯಾರಾದರೂ ಇದ್ದರೇ?” ಎಂದು ಪ್ರಶ್ನಿಸಲು, ಆತ “ಅಹುದು ಬುದ್ದಿ, ಬಹುಜನ ಶಿಷ್ಯರೊಡಗೂಡಿ ಓರ್ವ ತೇಜಸ್ವಿಗಳಾದ ಸ್ವಾಮಿಗಳು ದೇವರಪೂಜೆ ಮಾಡುತ್ತಿದ್ದರು. ನಾನು ಅತ್ತ ಹೆಚ್ಚು ಗಮನವೀಯದೆ ತುಳಸಿಯನ್ನು ಸಂಗ್ರಹಿಸಿಕೊಂಡುಬಂದೆ” ಎಂದುತ್ತರಿಸಿದನು.
ಶ್ರೀವ್ಯಾಸರಾಜರು “ನೀನೆಂಥ ಭಾಗ್ಯಹೀನ, ತಪಸ್ವಿಗಳಾದ ಪೂಜ್ಯರ ದರ್ಶನವಾದರೂ ಅವರ ಆಶೀರ್ವಾದ ಪಡೆಯದೆ ಮರಳಿದೆಯಲ್ಲ!” ಎಂದು ಮರುಗಿದರು. ಆನಂತರ ಸಾರ್ವಭೌಮನತ್ತ ತಿರುಗಿ “ರಾಜನ್, ಇಂದು ಓರ್ವ ತಪಸ್ವಿಗಳು ತಮ್ಮ ಪಾದರಜಸ್ಸಿನಿಂದ ನಿನ್ನ ರಾಜಧಾನಿಯನ್ನು ಪಾವನಗೊಳಿಸಿದ್ದಾರೆ. ಅವರನ್ನು ಸ್ವಾಗತಿಸಿ ಕರತರಲು ಸಿದ್ದನಾಗು” ಎಂದು ಹೇಳಿ ಸಕಲರಾಜಗೌರವ-ವಾದ್ಯವೈಭವದೊಡನೆ ಶ್ರೀವ್ಯಾಸಮುನಿಗಳು ಶ್ರೀಸುರೇಂದ್ರರು ಬಿಡಾರಮಾಡಿದ ಉಪವನಕ್ಕೆ ಸಾರ್ವಭೌಮ, ಪಂಡಿತಮಂಡಲಿಯೊಡನೆ ಬಂದರು. ಉಭಯಗುರುಗಳ ದೃಷ್ಟಿ ಒಂದಾಯಿತು. ಈರ್ವರೂ ರೋಮಾಂಚಿತರಾಗಿ ಪರಸ್ಪರ ಆಲಿಂಗಿಸಿದರು. ಸುಮಾರು ೮೫ ವರ್ಷ ವಯಸ್ಸಿನವರಾದ ಷಾಷ್ಟಿಕವಂಶಭೂಷಣರೂ, ಜ್ಞಾನಿನಾಯಕರೂ ತೇಜಸ್ವಿಗಳೂ ಆದ ರಾಜಗುರು ಶ್ರೀವ್ಯಾಸರಾಜರ ಸಂದರ್ಶನದಿಂದ ಪರಮಾನಂದಿತರಾದ ಸುರೇಂದ್ರರು “ಪೂಜ್ಯ ಅಣ್ಣಂದಿರ ದರ್ಶನದಿಂದ ಕೃತಾರ್ಥರಾದೆವು! ನಾವೇ ತಮ್ಮ ಸನ್ನಿಧಿಗೆ ಬರುವಷ್ಟರಲ್ಲಿ ತಮ್ಮನ ಮೇಲೆ ಪ್ರೇಮ ತೋರಲು ಸನ್ನಿಧಾನದವರೇ ಬಂದು ಸ್ವವಂಶ ಬಂಧುವಿನಲ್ಲಿ ಪ್ರೀತಿತೋರಿರುವಿರಿ, ಬಹುಶಃ ಗುರುವರರು ಧಾವಿಸಿ ಬಂದುದಕ್ಕೆ ತುಳಸಿಯು ನಿರ್ಮಾಲ್ಯವಾಗಿದ್ದುದೇ ಕಾರಣವಾಗಿರಬಹುದಲ್ಲವೇ?” ಎಂದು ನಸುನಕ್ಕರು.
ಶ್ರೀಪುರಂದರ-ಕನಕದಾಸರುಗಳು ಪರಸ್ಪರ ಮುಖ ನೋಡಿ ನಸುನಕ್ಕು “ನಮ್ಮ ಸುದೈವದಿಂದ ಇಂದು ಈರ್ವರು ಅಪರೋಕ್ಷಜ್ಞಾನಿಗಳು ಒತ್ತಟ್ಟಿಗೆ ಸೇರಿದ್ದನ್ನು ಕಾಣುವ ಪುಣ್ಯಮಾಡಿದ್ದೇವಲ್ಲವೇ” ಎಂದು ಉದ್ಧರಿಸಿದರು.
ಶ್ರೀವ್ಯಾಸರಾಜರು ಶ್ರೀಸುರೇಂದ್ರತೀರ್ಥರ ತೇಜಃಪುಂಜ ವ್ಯಕ್ತಿತ್ವ, ಭವ್ಯಾಕೃತಿಗಳಿಂದ ಹರ್ಷಿಸಿದ್ದರು. ಈಗವರ ವಿನಯಾದಿಗಳನ್ನು ಕಂಡು ಅವರ ಕಣ್ಣಿನಿಂದ ಆನಂದಬಾಷ್ಪ ಹರಿಯಿತು. ಹೃದಯ ತುಂಬಿ ಬಂದಿತು. ಮಂದಹಾಸ ಬೀರುತ್ತಾ “ನಾವಿಬ್ಬರೂ ಶ್ರೀಮದಾಚಾರ್ಯರ ಮಹಾಸಂಸ್ಥಾನಾಧಿಪತಿಗಳಲ್ಲವೇ ? ನಮ್ಮದು ಅಣ್ಣತಮ್ಮಂದಿರ ಪೀಠಗಳು ! ಅಣ್ಣ ಇದ್ದಲ್ಲಿ ತಮ್ಮನೂ, ತಮ್ಮನಿದ್ದಲ್ಲಿ ಅಣ್ಣನೂ ಬರಬಹುದು. ಅದು ಸಹಜವಷ್ಟೇ ? ಹತ್ತುವರ್ಷಗಳ ಕಾಲ ಉಪೋಷಣದಿಂದ ಭಾರತದ ಸಮಸ್ತ ಪುಣ್ಯಕ್ಷೇತ್ರ-ತೀರ್ಥಗಳ ಸಂಚಾರ ಕೈಗೊಂಡು ಪವಿತ್ರಾತ್ಮರಾಗಿ ಭಗವಂತನ ವಿಶೇಷಾನುಗ್ರಹದಿಂದ ಪುಟಕ್ಕಿಟ್ಟ ಚಿನ್ನದಂತೆ ಜ್ಞಾನ-ಭಕ್ತಿ-ವೈರಾಗ್ಯ-ತಪಸ್ಸುಗಳಿಂದ ರಾಜಿಸಿ ಮಾನಸಪೂಜಾಧುರಂಧರರಾಗಿರುವ ನಮ್ಮ ಪೂರ್ವಾಶ್ರಮ ದೊಡ್ಡಪ್ಪಂದಿರ ಪೌತ್ರರೇ ಆದ ತಮ್ಮನ್ನು ಕಂಡು ನಮಗೆ ಪರಮಾನಂದವಾಗಿದೆ. ಕನ್ನಡರಮಾರಮಣನು ನಿಮ್ಮನ್ನು ರಾಜಧಾನಿಗೆ ಸ್ವಾಗತಿಸಲು ಬಂದಿದ್ದಾನೆ” ಎಂದರು.
ಆಗ ಸಾಮ್ರಾಟ್ ಕೃಷ್ಣದೇವರಾಯರು ಶ್ರೀ ಸುರೇಂದ್ರರಿಗೆ ಕರಮುಗಿದು “ಮಹಾನುಭಾವರೇ, ಹದಿನೇಳು ವರ್ಷಗಳ ಹಿಂದೆ ನಾವು ದಿಗ್ವಿಜಯಯಾತ್ರೆಗೆ ಹೋದಾಗ ತಾವು ರಾಜಧಾನಿಗೆ ಬಂದು ಶ್ರೀಮೂಲರಾಮದೇವರ ಮಹಾಭಿಷೇಕವನ್ನು ನೆರವೇರಿಸಿ, ರಾಜಪ್ರತಿನಿಧಿಗಳಿಂದ ಸತ್ಕಾರಪಡೆದು ನಮ್ಮ ವಿಜಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿ ಆಶೀರ್ವದಿಸಿದ್ದಿರಿ. ತಮ್ಮ ಆಶೀರ್ವಾದ ಹಾಗೂ ಗುರುಪಾದರಾದ ಶ್ರೀವ್ಯಾಸಭಗವಾನರ ಅನುಗ್ರಹದಿಂದ ನನಗೆ ಅಖಂಡವಿಜಯ ದೊರಕಿತು. ಹಿಂದೆ ನಮ್ಮ ಪ್ರತಿನಿಧಿಗಳಿಂದ ಗೌರವಿತರಾಗಿದ್ದಿರಿ, ಇಂದು ನಾವು ಸ್ವತಃ ತಮ್ಮನ್ನು ಗೌರವಿಸಿ ಅನುಗೃಹೀತರಾಗಲು ಆಶಿಸಿದ್ದೇವೆ. ತಮ್ಮ ಪಾದರಜಸ್ಸಿನಿಂದ ರಾಜಧಾನಿಯನ್ನು ಪಾವನಗೊಳಿಸಬೇಕಾಗಿ ಕೋರುತ್ತೇವೆ” ಎಂದು ವಿಜ್ಞಾಪಿಸಿದರು. ಶ್ರೀ ಸುರೇಂದ್ರರು ಹರ್ಷದಿಂದ ರಾಜನ ಪ್ರಾರ್ಥನೆಗೆ ಓಗೊಟ್ಟರು. ತರುವಾಯ ಸಕಲ ವೈಭವದಿಂದ ಶ್ರೀಸುರೇಂದ್ರತೀರ್ಥರನ್ನು ಸ್ವಾಗತಿಸಿ ಮೆರವಣಿಗೆಯಿಂದ ರಾಜಧಾನಿಗೆ ಕರೆತಂದು, “ಲೋಕಪಾವನ” ಮಠದಲ್ಲಿ ಬಿಡಾರಮಾಡಿಸಿ ಉಭಯಗುರುಗಳ ಅಪ್ಪಣೆ ಪಡೆದು ಕೃಷ್ಣಮಹೀಪಾಲನು ಅರಮನೆಗೆ ತೆರಳಿದನು.
ಮರುದಿನ ದ್ವಾದಶಿ. ಲೋಕಪಾವನಮಠದಲ್ಲಿ ಉಭಯ ಶ್ರೀಪಾದಂಗಳವರೂ ಪೂಜಾರಾಧನೆಯಲ್ಲಿ ಮಗ್ನರಾಗಿದ್ದಾರೆ. ಶ್ರೀಸುರೇಂದ್ರರು ಶ್ರೀಮೂಲರಾಮದೇವರನ್ನು, ಶ್ರೀವ್ಯಾಸರಾಜರು-ಶಿಷ್ಯಮಂಡಲಿ ಹಾಗೂ, ಕೃಷ್ಣದೇವರಾಯನಿಗೆ ದರ್ಶನ ಮಾಡಿಸುತ್ತಿರುವಾಗ ಶ್ರೀಪುರಂದದಾಸರು ದೇವರ ಮಹಿಮಾನಿರೂಪಕವಾದ ಒಂದು ದೇವರನಾಮವನ್ನು ಆಗಲೇ ರಚಿಸಿ ಹಾಡಹತ್ತಿದರು
ರಾಗ : ಬಿಲಹರಿ ತಾಳ : ರಂಪ
ಇಂದಿನದಿನ ಸುದಿನವಾಯಿತು
ಇಂದಿರೇಶ ಮೂಲರಾಮಚಂದ್ರನ ಪದಕಮಲ ಕಂಡು
ಈತನ ಪದಕಮಲಗಳ ವಿಧಾತ ತನ್ನ ಸದನದೊಳಗೆ | ಸೀತೆಯ ಸಹಪೂಜಿಸಿ ಇಕ್ಷಾಕುನೃಪತಿಗಿತ್ತನು | ಆತನನ್ದಯನೃಪತಿಗಳು ಸುಪ್ರೀತಿಯಿಂದ ಪೂಜಿಸಿ ರಘು-
ನಾಥ ವೇದಗರ್ಭಗಿ ಮೂರ್ತಿಯ ಪದಕಮಲಕಂಡು
ಗಜಪತಿಭಂಡಾರದಲ್ಲಿ ಅಜಕರಕಮಲಾರ್ಚಿತ ಭೂ | ಮಿಜೆಸಹಿತ ರಾಮನಿರಲು ನಿಜಜ್ಞಾನದಿ ತಿಳಿದುಬೇಗ || ದ್ವಿಜರಗುರುಳೆನಿಪ ನಮ್ಮ ಸುಜನವಂದಿತ ನರಹರಿಮುನಿ । ರಜನಿಯಲ್ಲಿತಂದ ಸುಲೋಹಜಪ್ರತಿಮೆಯನ್ನು ಕಂಡು
ಅಂದವುಳ್ಳ ಮೂಲರಾಮಚಂದ್ರನ ಅತಿಭಕ್ತಿಯಿಂದ | ವೃಂದಾಕರವದ್ಯಪವನನಂದನ ಶ್ರೀಮದಾ- ||
ನಂದತೀರ್ಥರರ್ಚಿಸಿ ದಯದಿಂದ ನಿಜಾನ್ವಯದೊಳಿಟ್ಟ ಪು |
ರಂದರವಿಠಲನ ಸುರೇಂದ್ರ ಮುನಿಪ ತಂದುತೋರಲು
ಶ್ರೀಮೂಲರಾಮರ ಇತಿಹಾಸವನ್ನು ನಿರೂಪಿಸಿದ ಆ ಪದವನ್ನಾಲಿಸಿ ಸರ್ವರೂ ಆನಂದಿಸಿದರು. ಕನಕದಾಸರು ನಗುತ್ತಾ “ದಾಸರೇ, ಶ್ರೀಸುರೇಂದ್ರಗುರುಗಳು ದೇವರ ಇತಿಹಾಸವನ್ನು ಮಹಾಪ್ರಭುವಿಗೆ ತಿಳಿಸಬೇಕೆಂದಿದ್ದರು. ಅವರು ತಿಳಿಸುವ ಮೊದಲೇ ನೀವೇ ಪದದ ಮೂಲಕ ತಿಳಿಸಿಬಿಟ್ಟಿರಲ್ಲ” ಎಂದರು. ಅದನ್ನು ಕೇಳಿ ಶ್ರೀವ್ಯಾಸರಾಜರು ಶ್ರೀಸುರೇಂದ್ರರು ನಸುನಕ್ಕರು. ಅಪರೋಕ್ಷಜ್ಞಾನಿಗಳು ಸೇರಿದಾಗ ಇಂತಹ ಸ್ವಾರಸ್ಯ ಘಟನೆಗಳು ನಡೆಯುವುದು ಸ್ವಾಭಾವಿಕವಷ್ಟೆ!
ಪೂಜಾರಾಧನೆ ಸಾಂಗವಾಯಿತು. ಉಭಯಗುರುಗಳು ಸರ್ವರಿಗೂ ತೀರ್ಥ-ಪ್ರಸಾದವನ್ನು ಕರುಣಿಸಿ ಪಂಡಿತಮಂಡಲಿ ಯೊಡನೆ ಕುಳಿತು ತತ್ವಾರ್ಥವಿಚಾರ ಮಾಡುತ್ತಾ ಭಿಕ್ಷಾಸ್ವೀಕಾರಮಾಡಿದರು. ತರುವಾಯ ಕೃಷ್ಣದೇವರಾಯರಿಗೆ ಉಭಯ ಗುರುಗಳೂ ತೀರ್ಥಪ್ರಸಾದಕರುಣಿಸಿದರು. ಅವರು ಆರೋಗಣೆಮಾಡಿ ಬಂದ ಮೇಲೆ ಶ್ರೀವ್ಯಾಸರಾಜರು ಚಕ್ರವರ್ತಿ ಮತ್ತು ಧಾರ್ಮಿಕರಿಗೆ ಉಭಯಪೀಠಗಳ ಇತಿಹಾಸ ಮೈತ್ರಿ, ತತ್ವಪ್ರಸಾರ, ಪಾಠಪ್ರವಚನ, ಸಿದ್ಧಾಂತಸ್ಥಾಪನ-ಗ್ರಂಥರಚನೆ ಮುಂತಾದ ವಿಚಾರಗಳನ್ನು ತಿಳಿಸಿದಾಗ, ಶ್ರೀಸುರೇಂದ್ರತೀರ್ಥರು ಶ್ರೀವಿಷ್ಣುತೀರ್ಥರತ್ತ ದೃಷ್ಟಿ ಹರಿಸಿ, “ಶ್ರೀಮೂಲರಾಮ ಒಂದು ವ್ಯಕ್ತಿಯನ್ನು ಅಪೇಕ್ಷಿಸಿದ್ದಾನೆ” ಎಂದರು. ಶ್ರೀ ವ್ಯಾಸರಾಜರು ನಸುನಕ್ಕು “ಮೂಲರಾಮನಿಗಾಗಿಯೇ ತಯಾರುಮಾಡಿದ್ದಾನೆ ಶ್ರೀ ಮೂಲಗೋಪಾಲಕೃಷ್ಣ ! ಖಂಡಿತ ಕೊಡುತ್ತಾನೆ' ಎಂದರು.
ಕೃಷ್ಣದೇವರಾಯನಿಗೆ ಉಭಯಗುರುಗಳ ಉದ್ಧಾರದ ಗೂಢಾಭಿಪ್ರಾಯ ತಿಳಿಯಲಿಲ್ಲ. ಅದವನಿಗೆ ವಿಚಿತ್ರವಾಗಿ ತೋರಿತು. ರಾಜನ ಮುಖಭಾವವನ್ನರಿತ ಶ್ರೀವ್ಯಾಸರಾಜರು “ರಾರ್ಜ! ನಮ್ಮ ಸುರೇಂದ್ರತೀರ್ಥರು ನಮಗೆ ಪ್ರಾಣಪದಕದಂತಿರುವ ಓರ್ವಮಹನೀಯನನ್ನು ನಮ್ಮಿಂದ ಪಡೆಯಲೆಂದೇ ಇಲ್ಲಿಗೆ ಬಂದಿದ್ದಾರೆ. ಅವರಿಗಾಗಿಯೇ ನಾವು ಆ ಮಹನೀಯನನ್ನು ಸಾಕಿ ಸಕಲಶಾಸ್ತ್ರಗಳಲ್ಲಿ ಅದ್ವೀತಿಯರನ್ನಾಗಿಮಾಡಿ ಕಾಪಾಡಿಕೊಂಡುಬಂದು ಈ ಸಮಯಕ್ಕಾಗಿಯೇ ಎದುರುನೊಡುತ್ತಿದ್ದೆವು. ನಾವು ಹೇಳಿದ ಮಹನೀಯನನ್ನು ಮೂಲರಾಮ ಆಶಿಸಿದ್ದಾನೆ” ಎಂದು ಸುರೇಂದ್ರರು ಹೇಳಿದರು. ಅದಕ್ಕಾಗಿಯೇ ನಿರೀಕ್ಷಿಸುತ್ತಿದ್ದ ನಾವು “ಮೂಲಗೋಪಾಲಕೃಷ್ಣ ಕೊಡುತ್ತಾನೆ” ಎಂದೆವು. ಈ ಮಾತಿನ ರಹಸ್ಯಕ್ಕೆ ವಿಷಯರಾದವರೇ ನಮ್ಮ ಅತ್ಯಂತ ಪ್ರೀತಿಯಶಿಷ್ಯರಾದ ಈ ವಿಷ್ಣುತೀರ್ಥರು. ಇವರನ್ನು ಸುರೇಂದ್ರತೀರ್ಥರಿಗೆ ಒಪ್ಪಿಸುವ ಕಾಲ ಸನ್ನಿಹಿತವಾಗಿದೆ. ಆ ಸಮಾರಂಭ ನಾಳೆ ಜರುಗುವುದು. ಈ ವಿಷ್ಣುತೀರ್ಥರ ಇತಿಹಾಸವೂ ಅದ್ಭುತವಾಗಿದೆ. ಅದನ್ನು ಹೇಳುತ್ತೇವೆ. ಸಾವಧಾನವಾಗಿ ಕೇಳಿರಿ” ಎಂದು ಹೇಳಿದ ವ್ಯಾಸತೀರ್ಥರು ವಿಷ್ಣುತೀರ್ಥರ ಇತಿಹಾಸವನ್ನು ಹೇಳತೊಡಗಿದರು.
ಶ್ರೀವ್ಯಾಸತೀರ್ಥರು : ನಾವು ಸಂಚಾರಕ್ರಮದಲ್ಲಿ ಒಮ್ಮೆ ಬಳ್ಳಾಪುರಕ್ಕೆ ಹೋದೆವು. ಅಲ್ಲಿ ಅನೇಕ ವೇದವೇದಾಂತ ಪಾರಂಗತರಾದ ನಮ್ಮ ಷಾಷಿಕ ಮನೆತನದವರು ವಾಸಿಸುತ್ತಿದ್ದರು. ಅವರಲ್ಲಿ ಪರಮಪೂಜ್ಯ ಶ್ರೀಜಯತೀರ್ಥರ ಪೂರ್ವಾಶ್ರಮ ಅಣ್ಣಂದಿರಾದ ನರಹರಿನಾಯಕರ ಮರಿಮಕ್ಕಳಾದ ಭಾರದ್ವಾಜಗೋತ್ರದ ನರಹರಿಯಾಚಾರ್ಯರೆಂಬ ವಿದ್ವಾಂಸರು ನಮ್ಮನ್ನು ಗೌರವಾದರಗಳಿಂದ ತಮ್ಮ ಮನೆಯಲ್ಲಿ ಸತ್ಕರಿಸಿ ಭಿಕ್ಷೆಯನ್ನೇರ್ಪಡಿಸಿದ್ದರು. ಆ ದಂಪತಿಗಳು ನಮಗೆ ಪಾದಪೂಜೆಮಾಡಿ ನಮಸ್ಕರಿಸಿದಾಗ ನಾವು “ಸುಪುತ್ರಾವಾಪ್ತಿರಸ್ತು” ಎಂದಾಶೀರ್ವದಿಸಿದೆವು. ಅದನ್ನಾಲಿಸಿ ಆ ದಂಪತಿಗಳು ದುಃಖದಿಂದ ಕಣ್ಣೀರುಸುರಿಸುತ್ತಾ “ಗುರುದೇವ, ನಮಗೆ ಆ ಭಾಗ್ಯವಿಲ್ಲ, ನಮ್ಮ ಪೂಜಾರಾಧನೆ-ಸೇವೆ-ಪ್ರಾರ್ಥನೆಗಳಿಗೂ ಭಗವಂತನು ಪ್ರಸನ್ನನಾಗಿ ಸಂತಾನವನ್ನು ಕರುಣಿಸಲಿಲ್ಲ” ಎಂದು ವಿಜ್ಞಾಪಿಸಿದರು. ನಮಗೆ ಅವರಲ್ಲಿ ಮರುಕವುಂಟಾಯಿತು ನಾವು “ಆಚಾರ, ಶ್ರೀಮೂಲಗೋಪಾಲಕೃಷ್ಣನು ನಮ್ಮ ಬಾಯಿಂದ ಸುಪುತ್ರಾವಾಪ್ತಿರಸ್ತು ಎಂದು ನುಡಿಸಿದ್ದಾನೆ. ಅದನ್ನು ಸತ್ಯಮಾಡುವುದು ಅವನ ಹೊಣೆ! ನೀವು ಚಿಂತಿಸಬೇಡಿ, ನಿಮಗೆ ಒಬ್ಬನಲ್ಲಿ, ಇಬ್ಬರುಪುತ್ರರು ಜನಿಸುವರು. ನೀವು ಹಿರಿಯ ಪುತ್ರನನ್ನು ನಮಗರ್ಪಿಸಿ, ನಿಮಗೆ ಶುಭವಾಗುವುದು” ಎಂದು ಹೇಳಿ ದೇವರಲ್ಲಿ ವಿಶೇಷ ಪ್ರಾರ್ಥನೆಮಾಡಿ ಅವರನ್ನು ಆಶೀರ್ವದಿಸಿ ಫಲಮಂತ್ರಾಕ್ಷತೆ ಕರುಣಿಸಿ ಮುಂದೆಸಂಚಾರ ಹೊರಟೆವು. ಮೂರು ನಾಲ್ಕು ವರ್ಷಗಳಾದ ಮೇಲೆ ಮತ್ತೆ ನಾವು ಆ ಗ್ರಾಮಕ್ಕೆ ಹೋದಾಗ ನರಹರಿಯಾಚಾರ್ಯ ದಂಪತಿಗಳು ನಮ್ಮನ್ನು ಭಕ್ತಿಶ್ರದ್ಧೆಗಳಿಂದ ಸ್ವಾಗತಿಸಿ, ಸತ್ಕರಿಸಿ ಈರ್ವರುಸುಂದರಬಾಲಕರನ್ನು ಕರೆತಂದು ನಮಗೆ ನಮಸ್ಕಾರಮಾಡಿಸಿ “ಸ್ವಾಮಿ, ತಮ್ಮ ಆಶೀರ್ವಾದ ಫಲಿಸಿ, ಭವಿಷ್ಯ ಸತ್ಯವಾಯಿತು ! ತಮ್ಮ ಕಾರುಣ್ಯಪೀಯೂಷವರ್ಷಣ- ದಿಂದ ಒಣಗಿ ಮೋಟುಮರದಂತಾಗಿದ್ದ ನಮ್ಮ ವಂಶವೃಕ್ಷವು ಮತ್ತೆ ಚಿಗುರಿ ಫಲಭರಿತವಾಯಿತು. ಅಂದು ತಾವು ಆಶೀರ್ವದಿಸಿದ್ದಂತೆ ನಮಗೆ ಈಶ್ವರುಪುತ್ರರು ಜನಿಸಿದ್ದಾರೆ. ಹಿರಿಯನಾದ ಈತನೇ ಶ್ರೀವಿಠಲ, ಇಕೋ ಇವನು ಕಿರಿಯನಾದ ಗುರುಪ್ರಸಾದ, ಗುರುವರ್ಯ, ಅಂದು ನಿಮಗೆ ವಚನವಿತ್ತಂತೆ ಹಿರಿಯನಾದ ಶ್ರೀವಿಠಲನನ್ನು ತಮಗರ್ಪಿಸುತ್ತಿದ್ದೇವೆ. ಸ್ವೀಕರಿಸಿ ನಮ್ಮನ್ನು ಆಶೀರ್ವದಿಸಿರಿ, ವಂಶೋದ್ಧಾರಕನಾದ ಗುರುಪ್ರಸಾದನು ನಮಗಿರಲಿ” ಎಂದು ವಿಜ್ಞಾಪಿಸಿದರು. ನಾವು ಎಲ್ಲವೂ ಶ್ರೀಹರಿಚಿತ್ತವೆಂದು ನುಡಿದು ಅವರ ಸತ್ಕಾರ ಸ್ವೀಕರಿಸಿ ವಿಠಲನೊಡನೆ ರಾಜಧಾನಿಗೆ ಬಂದೆವು. ಈ ವಿಠಲನೇ ಈ ವಿಷ್ಣುತೀರ್ಥ!” ಎಂದರು. ಅದನ್ನು ಕೇಳಿ ಎಲ್ಲರೂ ವಿಸ್ಮಯಾನಂದಭರಿತರಾದರು.
ಶ್ರೀವ್ಯಾಸರಾಜರು ಮುಂದುವರೆದು "ಭಗವಂತನ ಪ್ರೇರಣೆಯಂತೆ ನಾವು ವಿಠಲನನ್ನು ಪ್ರೀತಿಯಿಂದ ಸಾಕಿ-ಸಲುಹಿ ಬಾಲಪಾಠಗಳನ್ನು ಹೇಳಿಕೊಟ್ಟು ಉಪನಯನ ಮಾಡಿಸಿ, ವಿಠಲನಿಗೆ ಯತ್ನಾಶ್ರಮವಿತ್ತು 'ಶ್ರೀವಿಷ್ಣುತೀರ್ಥ' ಎಂದು ನಾಮಕರಣ ಮಾಡಿದೆವು, ಮತ್ತು ನಾವೇ ವಿಷ್ಣುತೀರ್ಥನಿಗೆ ಸಕಲಶಾಸ್ತ್ರಗಳನ್ನೂ ಪಾಠಹೇಳಿ ಅಸಾಧಾರಣ ಪಂಡಿತನನ್ನಾಗಿ ಮಾಡಿದೆವು. ಈ ಬಾಲಸನ್ಯಾಸಿಯು ಶ್ರೀಮದಾಚಾರರ ಮತ್ತೊಂದು ಮಹಾಸಂಸ್ಥಾನಕ್ಕೆ ಸುರೇಂದ್ರರ ಉತ್ತರಾಧಿಕಾರಿಯಾಗುವುದು ಶ್ರೀಹರಿಸಂಕಲ್ಪ, ನಾಳೆ ವಿಷ್ಣು ತೀರ್ಥನನ್ನು ಶ್ರೀಸುರೇಂದ್ರರಿಗೆ ಒಪ್ಪಿಸಿಕೊಡುತ್ತೇವೆ. ರಾರ್ಜ, ಧರ್ಮಾಭಿಮಾನಿಗಳೇ, ನೀವು ಆ ಉತ್ಸವದಲ್ಲಿ ಭಾಗಿಗಳಾಗಿ ಕೃತಾರ್ಥರಾಗಬೇಕು” ಎಂದು ಆನಂದಸಿಕ್ತನಯನರಾಗಿ ನಿರೂಪಿಸಿದರು. ಸುರೇಂದ್ರರು ಹಾಗೂ ವಿಷ್ಣು ತೀರ್ಥರ ಕಣ್ಣುಗಳಲ್ಲಿಯೂ ಆನಂದಬಾಷ್ಪಹರಿಯಿತು. ಸುರೇಂದ್ರರು ದಿಗ್ಗನೆ ಮೇಲೆದ್ದು ಶ್ರೀವ್ಯಾಸರಾಜರನ್ನು ಭರದಿಂದಾಲಿಂಗಿಸಿ ನಿಮ್ಮ ಈ ಔದಾರ್ಯ, ಭ್ರಾತೃಪ್ರೇಮ, ಶ್ರೀಮದಾಚಾರ್ಯರ ಮಹಾಸಂಸ್ಥಾನದ ಭವಿಷ್ಯಗಳಲ್ಲಿ ನಿಮಗಿರುವ ಆಸಕ್ತಿಗಳನ್ನು ಕಂಡು ವಿಸ್ಮಿತರಾಗಿದ್ದೇವೆ. ನಿಮಗೆ ನಾವು ಚಿರಋಣಿಗಳಾಗಿದ್ದೇವೆ. ಇಂದು ನಮ್ಮ ಜೀವಿತದ ಮುಖ್ಯೋದ್ದೇಶ ಸಫಲವಾಯಿತು” ಎಂದುಸುರಿದರು. ಕೃಷ್ಣದೇವರಾಯ-ಸಭಿಕರು ಗುರುದ್ವಯರ ಪ್ರೇಮ-ಸೌಹಾರ್ದಗಳನ್ನು ಕಂಡು ಅಚ್ಚರಿಗೊಂಡರು.