ಕಲಿಯುಗ ಕಲ್ಪತರು ಐದನೆಯ ಉಲ್ಲಾಸ ಶ್ರೀರಾಘವೇಂದ್ರಗುರುಸಾರ್ವಭೌಮರು ೮. ಕೃಷ್ಣಾಚಾರ್ಯರಿಗೆ ಪುತ್ರೋತ್ಪತ್ತಿ
ಕೃಷ್ಣಾಚಾರ್ಯರಿಗೆ ವಿವಾಹವಾಗಿ ಬಹುವರ್ಷಗಳಾಗಿದ್ದರೂ ವಂಶವನ್ನು ಬೆಳಗಿಸುವ ಸಂತಾನವಾಗಿರಲಿಲ್ಲ. ಇದರಿಂದ ಆಚಾರ್ಯ ದಂಪತಿಗಳಿಗೆ ತುಂಬಾ ದುಃಖವಾಗಿತ್ತು. ದೈವಾನುಗ್ರಹವಿಲ್ಲದೆ ಪತ್ರಸಂತಾನಭಾಗ್ಯದೊರಕದೆಂದು ತಿಳಿದಿದ್ದ ಆಚಾರ್ಯರು ವ್ಯಾಸರಾಜರಲ್ಲಿ ಮನದಳಲನ್ನು ತೋಡಿಕೊಂಡು ಅವರ ಉಪದೇಶದಂತೆ ಕುಲದೇವನೂ, ಭಕ್ತಬಂಧುವೂ ಆದ ಶ್ರೀತಿರುಪತಿ ಶ್ರೀನಿವಾಸನಿಗೆ ಪತ್ನಿಸಹಿತರಾಗಿ ಶರಣುಹೋಗಿ ತಿರುಪತಿಯಲ್ಲಿ ಪುತ್ರನಿಗಾಗಿ ಸೇವೆಮಾಡಿ ಪ್ರಾರ್ಥಿಸಿ ದೇವನ ಅನುಗ್ರಹ ಸಂಪಾದಿಸಿಕೊಂಡು ವಿಜಯನಗರಕ್ಕೆ ಬಂದರು. ಮತ್ತು ಶ್ರೀಯಂತ್ರೋದ್ಧಾರಕಪ್ರಾಣದೇವರಲ್ಲಿ ಸೇವೆಮಾಡಿ, ಹವನಹೋಮ, ವ್ರತನಿಯಮ, ಉಪವಾಸಾದಿಗಳನ್ನು ನೆರವೇರಿಸಿದರು.ನ ದೇವತೋಷಣಂ ವೃಥಾ” ಎಂಬ ಪ್ರಮಾಣದಂತೆ ಶ್ರೀಹರಿವಾಯುಗಳ ಕೃಪಾದೃಷ್ಟಿ ಆಚಾರ್ಯದಂಪತಿಗಳ ಮೇಲೆ ಬಿದ್ದಿತು. ಭಗವಂತನ ವಾಯುದೇವರ ಅನುಗ್ರಹದಿಂದ ಆಚಾರ್ಯರ ಪತ್ನಿ ಶ್ರೀಮತಿ ರುಕ್ಷ್ಮಿಣೀಬಾಯಿಯವರು ಗರ್ಭಧರಿಸಿದರು! ಇದರಿಂದ ಆಚಾರರಿಗೂ, ಬಂಧು-ಬಾಂಧವರಿಗೂ ಹರುಷವಾಯಿತು. ಬಾಂಧವರು-ಮಿತ್ರರು ಕೃಷ್ಣಾಚಾರ್ಯರನ್ನು ಅಭಿನಂದಿಸಿದರು.
ಸೌಭಾಗ್ಯವತಿ ರುಕ್ಷ್ಮಿಣೀಬಾಯಿಯವರಿಗೆ ಐದನೆಯ ತಿಂಗಳಲ್ಲಿ ಹೂಮುಡಿಸುವುದು, ಏಳನೆಯ ತಿಂಗಳಲ್ಲಿ ಸೀಮಂತ ಮುಂತಾದ ವೈದಿಕಸಂಸ್ಕಾರಗಳನ್ನು ಆಚಾರ್ಯರು ವೈಭವದಿಂದ ಜರುಗಿಸಿದರು.
ಭಗವದನುಗ್ರಹದಿಂದ ರುಕ್ಷ್ಮಿಣೀಬಾಯಿಯವರು ಕ್ರಿ.ಶ. ೧೫೧೯ ರಲ್ಲಿ ಒಂದು ಶುಭಮುಹೂರ್ತಯುಕ್ತವಾದ ದಿವಸ ಪುತ್ರರತ್ನವನ್ನು ಪ್ರಸವಿಸಿದರು, ಬೀಗಮುದ್ರೆ” ಮನೆತನದ ಅಭಿವೃದ್ಧಿಗೆ ಕಾರಣನಾದ ಪುತ್ರನು ಜನಿಸಿದ್ದರಿಂದ ಬಾಂಧವರು ಮಿತ್ರರು ಮುದಿಸಿದರು. ಆಚಾರ್ಯದಂಪತಿಗಳಿಗಾದ ಆನಂದ ಅವರ್ಣನೀಯ.
ಹನ್ನೊಂದನೆಯದಿನ ಮಂಗಳಸ್ನಾನವಾದಮೇಲೆ ಆಚಾರ್ಯರು ಪುತ್ರನಿಗೆ ಜಾತಕರ್ಮ-ನಾಮಕರಣ ಮಹೋತ್ಸವವನ್ನು ಏರ್ಪಡಿಸಿದರು. ಅಂದು ಪೂಜ್ಯ ಶ್ರೀವ್ಯಾಸರಾಜಗುರುಗಳನ್ನು ಪಾದಪೂಜೆಗೆ ಆಹ್ವಾನಿಸಿದರು.
ಆಚಾರರು ವ್ಯಾಸತೀರ್ಥರನ್ನು ಪುತ್ರನಿಗೆ ಏನುಹೆಸರಿಡಬೇಕೆಂದು ವಿಜ್ಞಾಪಿಸಿದಾಗ ಗುರುವರರು ಬಂಗಾರದವರ್ಣದಿಂದ ದಷ್ಟಪುಷ್ಟವಾಗಿ ಬೆಳೆದಿದ್ದ ಸುಂದರಶಿಶುವನ್ನು ನೋಡಿ ಮಂದಹಾಸಬೀರುತ್ತಾ “ಆಚಾರರೇ, ನಿಮ್ಮ ಕುಮಾರನು ಕನಕಕಾಂತಿಯಿಂದ ಶೋಭಿಸುತ್ತಿದ್ದಾನೆ! ಪರ್ವತದಂತೆ ದೃಢಕಾಯನಾಗಿದ್ದಾನೆ! ಆದ್ದರಿಂದ ಇವನಿಗೆ ಈ ಎರಡರ್ಥವೂ ಬರುವಂತೆ “ಕನಕಾಚಲ ಎಂದೇಕೆ ಹೆಸರಿಡಬಾರದು?” ಎಂದೆನಲು ಆನಂದದಿಂದ ಆಚಾರರು ಗುರುಗಳು ಸೂಚಿಸಿದಂತೆ ಪುತ್ರನಿಗೆ “ಕನಕಾಚಲಾಚಾರ” ಎಂದು ನಾಮಕರಣಮಾಡಿದರು. ನಂತರ ಆಚಾರದಂಪತಿಗಳು ಶ್ರೀಪಾದಂಗಳವರಿಗೆ ಪಾದಪೂಜೆಮಾಡಿ, ಫಲಪೂಜಾನಂತರ ಗುರುಗಳಿಗೆ ಫಲಪುಷ್ಪ ಕಾಣಿಕೆಗಳನ್ನರ್ಪಿಸಿದರು. ಶ್ರೀವ್ಯಾಸತೀರ್ಥರು ತಂದೆತಾಯಿಗಳಿಗೆ ಆಶೀರ್ವಾದಮಾಡಿ ಮಗುವಿನ ಶಿರದಮೇಲೆ ಅಮೃತಹಸ್ತವಿರಿಸಿ ಆಯುಷ್ಮಾನ್ ಭವ, ವಿದ್ಯಾವಾನ್ ಭವ, ವಂಶದೀಪಕೋ ಭವ” ಎಂದಾಶೀರ್ವದಿಸಿ ಫಲಮಂತ್ರಾಕ್ಷತೆ ನೀಡಿ ಮಠಕ್ಕೆ ತೆರಳಿದರು. ತರುವಾಯ ಆಚಾರ್ಯರು ಸಕಲರಿಗೂ ಫಲತಾಂಬೂಲವಿತ್ತು ಮಧ್ಯಾಹ್ನ ಮೃಷ್ಟಾನ್ನ ಭೋಜನಮಾಡಿಸಿ ದಕ್ಷಿಣಾಪ್ರದಾನಮಾಡಿ ಸಕಲರನ್ನೂ ಸಂತೋಷಪಡಿಸಿದರು.
ಬಾಲ ಕನಕಾಚಲ ಶುಕ್ಲಪಕ್ಷದ ಚಂದ್ರನಂತೆ ಅಭಿವೃದಿಸಿ ತನ್ನ ಬಾಲಲೀಲೆಗಳಿಂದ ತಂದೆತಾಯಿ, ಬಂಧು-ಬಳಗದವರನ್ನು ಆನಂದಗೊಳಿಸುತ್ತಿದ್ದನು. ಕುಮಾರನಿಗೆ ಮೂರನೆಯ ವರ್ಷದಲ್ಲಿ ಆಚಾರರು ಚೌಲ-ಅಕ್ಷರಾಭ್ಯಾಸಗಳನ್ನು ನೆರವೇರಿಸಿದರು. ಸೂಕ್ಷ್ಮಮತಿಯೂ, ಪ್ರತಿಭಾಶಾಲಿಯೂ ಆದ ಕನಕಾಚಲನು ನಾನಾಲಿಪಿ-ಕೋಶ, ಮಂತ್ರ ಸ್ತೋತ್ರಗಳನ್ನು ಬೇಗ ಕಲಿತನು. ಎಂಟನೆಯ ವಯಸ್ಸಿನಲ್ಲಿ ಕನಕಾಚಲನಿಗೆ ಬ್ರಹ್ಮಪದೇಶ (ಉಪನಯನ)ವನ್ನು ಜರುಗಿಸಿದ ಕೃಷ್ಣಾಚಾರರು ಮಗನಿಗೆ ಗಾಯಿತ್ರಿ ಮಂತ್ರವನ್ನು ಉಪದೇಶಿಸಿದರು. ಅಂದು ಶ್ರೀವ್ಯಾಸರಾಜಗುರುಗಳಿಂದ ವಟುವಿಗೆ ಗುರೂಪದೇಶಮಾಡಿಸಿ ಅವನಿಂದ ಪಾದಪೂಜೆ ಮಾಡಿಸಿದರು. ಶ್ರೀವ್ಯಾಸರಾಜಗುರುಗಳು ಕೃಷ್ಣಾಚಾರ್ಯ ದಂಪತಿಗಳೂ, ಕನಕಾಚಲನಿಗೂ ಬೆಲೆಬಾಳುವ ಉಡುಗೊರೆಯನ್ನಿತ್ತು ಆಶೀರ್ವದಿಸಿದರು, ಸಾರ್ವಭೌಮರ ಪರವಾಗಿ ರಾಜಪ್ರತಿನಿಧಿಗಳು ಬಂದು ರಾಜ್ಯಯೋಗ್ಯ ಉಡುಗೊರೆಯನ್ನಿತ್ತು ಗೌರವಿಸಿದರು. ಅಂದು ಶ್ರೀವ್ಯಾಸಭಗವಾನರು ಆಚಾರರ ಮನೆಯಲ್ಲಿ ಶ್ರೀಮೂಲಗೋಪಾಲಕೃಷ್ಣದೇವರ ಪೂಜಾರಾಧನೆಯನ್ನು ನೆರವೇರಿಸಿ, ಸರ್ವರಿಗೂ ತೀರ್ಥ-ಪ್ರಸಾದ ಕರುಣಿಸಿ ಪಂಡಿತಮಂಡಲಿಯೊಡನೆ ಭಿಕ್ಷಾಸ್ವೀಕರಿಸಿ ಆಚಾರ್ಯದಂಪತಿಗಳನ್ನು ವಟುವನ್ನೂ ಆಶೀರ್ವದಿಸಿ ಮಠಕ್ಕೆ ದಯಮಾಡಿಸಿದರು.
ಕೃಷ್ಣಾಚಾರ್ಯರು ತಮ್ಮ ಕುಮಾರನನ್ನು ಸಂಸ ತ ವಿದ್ಯಾಪೀಠದಲ್ಲಿ ಗುರುಕುಲ ವಾಸಕ್ಕೆ ಸೇರಿಸಿ ಅವನ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನವಿತ್ತರು. ತೀಕ್ಷ್ಯಬುದ್ಧಿಯ ಕನಕಾಚಲಾಚಾರನು ಶ್ರದ್ಧೆಯಿಂದ ಅಧ್ಯಯನಮಾಡುತ್ತಾ ಸ್ವಶಾಖಾವೇದಾಧ್ಯಯನ (ಯಜುರ್ವೇದ) ಕಾವ್ಯ-ನಾಟಕ, ಅಲಂಕಾರಾದಿಸಾಹಿತ್ಯ, ನ್ಯಾಯ-ವ್ಯಾಕರಣಶಾಸ್ತ್ರಗಳಲ್ಲಿ ಪ್ರಾವೀಣ್ಯತೆಯನ್ನು ಪಡೆಯಹತ್ತಿದನು.
ಕೃಷ್ಣಾಚಾರ್ಯರ ಪ್ರಾರ್ಥನೆಯಂತೆ ಶ್ರೀವ್ಯಾಸರಾಜರು ಕನಕಾಚಲಾಚಾರ್ಯನಿಗೆ ತಮ್ಮ ಪೀತ್ಯಾಸ್ಪದ ಶಿಷ್ಯರಾದ ಶ್ರೀವಿಷ್ಣುತೀರ್ಥರ ಜೊತೆಗೆ ವೇದಾಂತಶಾಸ್ತ್ರ ಪ್ರವಚನ ಮಾಡಿಸಲಾರಂಭಿಸಿದರು, ಕನಕಾಚಲನು ಪ್ರಜ್ಞಾ ಪ್ರತಿಭಾವಿಲಾಸಗಳಿಂದ ನ್ಯಾಯ-ವೇದಾಂತಾದಿಶಾಸ್ತ್ರಗಳಲ್ಲಿ ವಯಸ್ಸಿಗೆ ಮೀರಿದ ಪ್ರಭಾವವನ್ನು ತೋರುತ್ತಾ ಪ್ರಾವಿಣ್ಯವನ್ನು ಪಡೆದನು. ಅವನ ಧೀಶಕ್ತಿ, ಶ್ರದ್ಧೆಗಳನ್ನು ಗಮನಿಸಿ ಗುರುಗಳು ಅಮಂದಾನಂದತುಂದಿಲರಾದರು.
ಕೃಷ್ಣಾಚಾರ್ಯರು ಮಗನಿಗೆ ಕುಲಪರಂಪರಾಗತ ವಿದ್ಯೆಯಾದ ಸಂಗೀತವೀಣಾವಾದನಕಲೆಗಳನ್ನೂ ಕಲಿಸಿದರು. ಪೂಜ್ಯ ವ್ಯಾಸರಾಜಗುರುಗಳ ಸೂಚನೆಯಂತೆ ಕೃಷ್ಣಾಚಾರ್ಯರು 'ಲೋಕಪಾವನಮಠ'ದಲ್ಲಿ ಪ್ರತ್ಯೇಕವಾಗಿ ಶ್ರೀವಿಷ್ಣುತೀರ್ಥರು ಮತ್ತು ಕನಕಾಚಲಚಾರರಿಗೆ ಸಂಗೀತ, ವೀಣೆಗಳ ಅಭ್ಯಾಸಮಾಡಿಸಲಾರಂಭಿಸಿದರು. ಚತುರಮತಿಗಳೂ ಅನಿತರಪ್ರತಿಭಾಶಾಲಿಗಳೂ, ಏಕಸಂಧಿಗ್ರಾಹಿಗಳೂ ಆದ ಶ್ರೀವಿಷ್ಣುತೀರ್ಥರು ಕನಕಾಚಲಾಚಾರನೊಡನೆ ಗಾಂಧರ್ವಕಲೆ-ವೀಣಾವಾದನಗಳಲ್ಲಿ ಮಹಾ ಪಾಂಡಿತ್ಯವನ್ನು ಗಳಿಸಿದರು. ಶ್ರೀವಿಷ್ಣುತೀರ್ಥರ ಈ ಮಹೋನ್ನತಿ, ಪಾಂಡಿತ್ಯಾತಿಶಯಗಳನ್ನು ಕಂಡು ಶ್ರೀವ್ಯಾಸರಾಜರೇ ಬೆರಗಾಗುತ್ತಿದ್ದರೆಂದ ಮೇಲೆ ಉಳಿದವರ ವಿಚಾರ ಹೇಳುವುದೇನಿದೆ? ಕನಕಾಚಲಾಚಾರ್ಯನೂ ನ್ಯಾಯ-ವೇದಾಂತ ವ್ಯಾಕರಣ-ಸಾಹಿತ್ಯ-ಸಂಗೀತ-ವೀಣಾವಾದನ ಕಲೆಗಳಲ್ಲಿ ತಂದೆಗೆ ಕೀರ್ತಿತರುವ ಪುತ್ರನೆನಿಸಿ, ಸರ್ವಜನರ ಪ್ರೀತ್ಯಾದರ ಗೌರವಗಳಿಗೆ ಪಾತ್ರನಾಗಿ ವಿದ್ವತ್ನಪಂಚದಲ್ಲಿ ಪ್ರಖ್ಯಾತಿಗಳಿಸಿದರು. ಹೀಗೆ ಬಹುಕಾಲ ಗತಿಸಿತು.