|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೭. ಶ್ರೀಮೂಲರಾಮರ ಮಹಾಭಿಷೇಕ

ಶ್ರೀಶಾಲೀವಾಹನಶಕೆ 1435ನೇ ಶ್ರೀಮುಖನಾಮಸಂವತ್ಸರದ ಚೈತ್ರಶುಕ್ಲನವಮೀ ಮಂಗಳವಾರ ಪ್ರಾತಃಕಾಲ ಭಗರ್ವಾ ದಿನಮಣಿಯು ತನ್ನ ವಂಶದೀಪಕನಾದ ಶ್ರೀರಾಮಚಂದ್ರನಿಂದಲೂ ಪೂಜೆಗೊಂಡಿದ್ದ, ಚತುರ್ಯುಗಮೂರ್ತಿ ಶ್ರೀಮೂಲರಾಮಚಂದ್ರನ ಮಹಾಭಿಷೇಕವನ್ನು ನಿರೀಕ್ಷಿಸುವ ತವಕದಿಂದಲೋ ಎಂಬಂತೆ ತನ್ನ ತರುಣಾರುಣಕಿರಣಗಳಿಂದ ಜಗತ್ತನ್ನು ಬೆಳಗುತ್ತಾ ಸರ್ವರ ಮನಸ್ಸಿಗೂ ಆನಂದಪ್ರದನಾಗಿ ಉದಯಿಸಿ ವಿರಾಜಿಸುತ್ತಿದ್ದಾನೆ. ಶ್ರೀರಘುನಂದನತೀರ್ಥರ ಬೃಂದಾವನಸನ್ನಿಧಿಯ ಮುಂದೆ ರಾಜಪ್ರತಿನಿಧಿ ರಾಮರಾಜರು, ಸಚಿವ, ಪ್ರಮುಖ ಅಧಿಕಾರಿಗಳು, ದರ್ಬಾರಿನ ಪಂಡಿತ-ಕವಿ-ಕಲೆಗಾರ, ಧರ್ಮಾಭಿಮಾನಿ ಪೌರಜಾನಪದರೊಡನೆ ಸಕಲ ರಾಜಬಿರುದುಬಾವಲಿ ವಾದ್ಯಗಳೊಡನೆ ಶ್ರೀಸುರೇಂದ್ರತೀರ್ಥ ಶ್ರೀಪಾದಂಗಳವರನ್ನು ಅಲಂಕೃತ ಸುವರ್ಣಪಾಲಕಿಯಲ್ಲಿ ಮಂಡಿಸಿ ಅರಮನೆಯ ಬಿರುದಾವಳಿ, ಮಂಗಳವಾದ್ಯ, ವೇದಘೋಷಗಳೊಡನೆ ಮೆರವಣಿಗೆಯಿಂದ ಶ್ರೀವಿಜಯವಿಠಲದೇವರ ಗುಡಿಗೆ ಕರತಂದರು. ಪಾಲಕಿಯಿಂದಿಳಿದ ಶ್ರೀಪಾದರು ದೇವರನ್ನು ಮುಂದೆಮಾಡಿಕೊಂಡು ದೇವಾಲಯಕ್ಕೆ ದಯಮಾಡಿದರು. ಅಲ್ಲಿ ಸುಮಂಗಲೆಯರು ಮೊದಲು ದೇವರಿಗೆ ಅನಂತರ ಶ್ರೀಯವರಿಗೆ ಕದಲಾರತಿಯನ್ನೆತ್ತಿದ ಮೇಲೆ ರಾಮರಾಜರು ಹಸ್ತಲಾಘವನ್ನಿತ್ತು ಗುರುಗಳನ್ನು ದೇವಾಲಯದಲ್ಲಿ ನಿರ್ಮಿತವಾದ ವೇದಿಕೆಯಮೇಲೆ ಭದ್ರಾಸನದಲ್ಲಿ ಕುಳ್ಳಿರಿಸಿದರು. 

ತರುವಾಯ ವೇದಘೋಷದೊಡನೆ ಸಭೆಯು ಪ್ರಾರಂಭವಾಯಿತು. ಶ್ರೀಕೃಷ್ಣಾಚಾರ್ಯರು, ರಾಜಪುರೋಹಿತರು ಶ್ರೀಯವರ ಪರಿಚಯಾತ್ಮಕ ಭಾಷಣ ಮಾಡಿದರು. ರಾಮರಾಜರು ಶ್ರೀಗುರುಗಳು ರಾಜಧಾನಿಗೆ ದಯಮಾಡಿಸಿದದಿನವೇ ಸಾಮ್ರಾಟ್ ಕೃಷ್ಣದೇವರಾಯರು ಎಲ್ಲಕಡೆ ವಿಜಯಸಂಪಾದಿಸಿದ ಶುಭಸಮಾಚಾರ ತಿಳಿದ ವಿಚಾರವನ್ನು ಹೇಳಿ ಇಂಥ ಮಹನೀಯರಿಗೆ ಸಾಮ್ರಾಜ್ಯದ ಪರವಾಗಿ ಸೇವೆಸಲ್ಲಿಸುವ ಭಾಗ್ಯ ತಮಗೆ ದೊರೆತುದು ತಮ್ಮ ಪೂರ್ವಿಕರ ಪುಣ್ಯಫಲ ಮುಂತಾಗಿ ತಮ್ಮ ಸ್ವಾಗತಭಾಷಣದಲ್ಲಿ ತಿಳಿಸಿ ಗುರುಗಳಿಗೆ ನಮಸ್ಕರಿಸಿ ಕುಳಿತರು. ಶ್ರೀಸುರೇಂದ್ರಮುನಿಗಳು ಧೀರಗಂಭೀರವಾಣಿಯಿಂದ ವಿದ್ದಷ್ಟೂರ್ಣವಾಗಿ ಉಪದೇಶಭಾಷಣಮಾಡಿ ಸರ್ವರನ್ನೂ ಆಶೀರ್ವದಿಸಿದರು. 

ಶ್ರೀಗಳವರು ಸ್ನಾನಾನೀಕ ಜಪತಪಾದನುಷ್ಠಾನಗಳನ್ನು ನೆರವೇರಿಸಿ ಮಹಾಭಿಷೇಕ ಸೇವೆಗಾಗಿ ಪೂಜಾಪೀಠಕ್ಕೆ ಬಿಜಯಂಗೈದರು. ಮಂಗಳವಾದ್ಯ-ನಗಾರಿ ವೇದಘೋಷಗಳಾಗುತ್ತಿರಲು ಸ್ವಾಮಿಗಳು ಧಾರ್ಮಿಕವೃಂದಕ್ಕೆ ಚತುರ್ಯುಗ ಮೂರ್ತಿ ಶ್ರೀಮೂಲರಾಮಚಂದ್ರದೇವರ ವಿಶ್ವರೂಪದರ್ಶನಮಾಡಿಸಿ, ದೇವರಿಗೆ ಶ್ರೀಮದಾಚಾರ್ಯಮಹಾಸಂಸ್ಥಾನಾಗತ ಪದ್ಧತಿಯಂತೆ ಅತಿವೈಭವದಿಂದ ಪಂಚಾಮೃತಾದಿ ಮಹಾಭಿಷೇಕವನ್ನು ನೆರವೇರಿಸಿದರು. ಅನಂತರ ಉದ್ದರ್ತನಾದಿಗಳು ಮುಗಿದಮೇಲೆ ಮಹಾಸಂಸ್ಥಾನಪೂಜೆಯು ಪ್ರಾರಂಭವಾಯಿತು. ಆ ಅಪೂರ್ವ ಪೂಜಾರಾಧನೆಯನ್ನು ನಿರೀಕ್ಷಿಸಿ ಸಕಲರೂ ಹರ್ಷನಿರ್ಭರರಾಗಿ ತಮ್ಮ ಜನ್ಮ ಸಾರ್ಥಕವಾಯಿತೆಂದು ಭಾವಿಸಿದರು. ರಾಮರಾಜರಂತೂ ಶ್ರೀಮೂಲರಾಮದರ್ಶನ ಅಭಿಷೇಕ ನಿರೀಕ್ಷಣಾದಿಗಳಿಂದ ಪುಳಕಿತಾಂತಃಕರಣರಾದರು. ಶ್ರೀಯವರ ತೇಜಃಪುಂಜ ವ್ಯಕ್ತಿತ್ವ, ಮುಖದಲ್ಲಿ ತಾಂಡವಿಸುವ ವರ್ಚಸ್ಸನ್ನು ಜ್ಞಾನ-ಭಕ್ತಿ-ವೈರಾಗ್ಯಾದಿಗಳನ್ನು ಕಂಡು ಆಕರ್ಷಿತರಾಗಿದ್ದ ರಾಮರಾಜರು ಶ್ರೀಗಳವರಲ್ಲಿ ಭಕ್ತಿ-ಶ್ರದ್ಧೆಗಳನ್ನು ತಾಳಿದರು. 

ದೇವರಿಗೆ ನೇವೇದ್ಯ ಸಮರ್ಪಣೆ, ಮಹಾಮಂಗಳಾರತಿ ಮಂತ್ರ-ಪುಷ್ಪಾದಿಗಳಾದ ಮೇಲೆ ರಾಮರಾಜರು ತಮಗಾದ ಆನಂದಾತಿಶಯವನ್ನು ಶ್ರೀಗಳವರಲ್ಲಿ ವಿಜ್ಞಾಪಿಸಿ ತಮ್ಮ ಸೇವೆ ಹಾಗೂ ಭಕ್ತಿಯಕಾಣಿಕೆಯಾಗಿ ಶ್ರೀಮಠಕ್ಕೆ ಗ್ರಾಮದಾನ ಮಾಡಲು ದೇವರ ಪ್ರೇರಣೆಯಾಗಿರುವ ವಿಚಾರವನ್ನು ವಿಜ್ಞಾಪಿಸಿ, ತಾವು ನೀಡುವ ಗ್ರಾಮದಾನವನ್ನು ಸ್ವೀಕರಿಸಿ ಅನುಗ್ರಹಿಸಬೇಕೆಂದು ಪ್ರಾರ್ಥಿಸಿದರು. ಶ್ರೀಪಾದಂಗಳವರು ಅವರ ಭಕ್ತಿಶ್ರದ್ಧೆಗಳಿಂದ ಹರ್ಷಿತರಾಗಿ ಅವರ ಮನೀಷೆಯನ್ನು ಪೂರ್ಣಮಾಡಲು ಸಮ್ಮತಿಸಿದರು.

ಆಗ ಶ್ರೀರಾಮರಾಜರು ಸಂಕಲ್ಪ ಪೂರ್ವಕವಾಗಿ ಶ್ರೀಮಠಕ್ಕೆ ತಮ್ಮ ಪೂರ್ವಿಕರು ಹಿಂದೆ ಶ್ರೀವಿಬುಧೇಂದ್ರತೀರ್ಥರಿಗೆ ದಾನವಾಗಿಕೊಟ್ಟದ್ದು ಕಾರಣಾಂತರದಿಂದ ಶ್ರೀಮಠದ ಕೈತಪ್ಪಿಹೋಗಿದ್ದ ೧) ಆನೆಹೊಸೂರು ಎಂಬ ಶ್ರೇಷ್ಠಗ್ರಾಮವನ್ನೂ ಮಯೂರಕ್ಷೇತ್ರದಲ್ಲಿ ಒಂದು ಭವ್ಯಮಠವನ್ನೂ, ಇವುಗಳ ಜೊತೆಗೆ ಹೊಸದಾಗಿ ೨) ಲೇಪಗಿರಿ, ೩) ಶಿರುಗಾಪುರ, ೪) ಮಲ್ಲಾಪುರ, ೫) ಹೊನ್ನಮಟ್ಟಿ ಮತ್ತು ೬) ಹೆರಕಲ್ಲು ಎಂಬ ಗ್ರಾಮವನ್ನು ತಾಮ್ರಶಾಸನಸಹಿತವಾಗಿ ಸಹಿರದಕ ಧಾರಾಪುರಸ್ಸರವಾಗಿ ದಾನಮಾಡಿ ಕೃತಾರ್ಥರಾದರು.247 

ಅಷ್ಟರಿಂದಲೇ ತೃಪ್ತಿಯಾಗಲಿಲ್ಲ ರಾಮರಾಜರಿಗೆ, ಮತ್ತೊಂದು ತಾಮ್ರ ಶಾಸನದ ಮೂಲಕವಾಗಿ ೧) ತೊಳಲಿ, ೨) ಕಮ್ಮಾರಕಟ್ಟಿ, ೩) ಚಿಕ್ಕಮೊರಟೆ ಎಂಬ ಮೂರು ಸಂಪದ್ಭರಿತವಾದ ಉತ್ತಮಗ್ರಾಮಗಳನ್ನೂ, ಧನಕನಕ, ವಸ್ತ್ರಾಭರಣಗಳೊಡನೆ ದಾನಮಾಡಿ ಶ್ರೀದೇವರ ಮತ್ತು ಶ್ರೀಗಳವರ ಪೂರ್ಣಾನುಗ್ರಹಕ್ಕೆ ಪಾತ್ರರಾದರು.248 ರಾಮರಾಜರ ದೇವ-ಗುರುಭಕ್ತಿ, ಔದಾರ, ಧರ್ಮಕಾರ್ಯ ಪ್ರವೃತ್ತಿಗಳನ್ನು ಕಂಡು ಗುರುಗಳು ರಾಮರಾಜರ ದಾನಸೌಂಡತ್ವವನ್ನು ಶ್ಲಾಘಿಸಿದಾಗ ರಾಮರಾಜರು “ತಾವು ಶ್ರೀಕೃಷ್ಣದೇವರಾಯರ ಶ್ರೇಯಸ್ಸಿಗಾಗಿ ದಾನಮಾಡುತ್ತಿರುವುದಾಗಿಯೂ ಈ ಗ್ರಾಮದಾನಕ್ಕೆ ಸಾಮ್ರಾಟರ ಒಪ್ಪಿಗೆ ನಿರೂಪವು ಇಷ್ಟರಲ್ಲೇ ಬರಲಿದ್ದು ಅದನ್ನು ಸನ್ನಿಧಿಗೆ ಸಮರ್ಪಿಸುವುದಾಗಿ” ವಿಜ್ಞಾಪಿಸಿದರು. ಮುಂದುವರೆದು ಅವರು “ನಮ್ಮ ಸ್ವಾಧೀನಾನುಭವದಲ್ಲಿದ್ದ ಆರು ಗ್ರಾಮಗಳು ಮತ್ತು ಮಠವನ್ನು ಮೊದಲನೆಯ ದಾನವಾಗಿ, ನಮ್ಮ ಪೂರ್ವಜರಿಗೆ ಸದ್ಗತಿ ಮತ್ತು ಸುಕೃತಪ್ರಾಪ್ತಿಗಾಗಿ ಸಮರ್ಪಿಸಿದ್ದೇನೆ. ಗುರುವರ್ಯ ! ನಾನು ಎರಡನೆಯಬಾರಿ ನೀಡಿದ ಮೂರು ಗ್ರಾಮದಾನವು ನಮ್ಮ ಸಾಮ್ರಾಟರಿಗೆ ವಿಜಯಪ್ರಾಪ್ತಿ ಹಾಗೂ ಅವರಕಾಲದಲ್ಲಿ ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿ, ಶ್ರೇಯಸ್ಸು, ಕೀರ್ತಿಗಳಿಗಾಗಿ ಸಮರ್ಪಿಸಿದ್ದೇನೆ” ಎಂದು ವಿಜ್ಞಾಪಿಸಿದರು. ಶ್ರೀಯವರು ರಾಮರಾಜರ ಸಾಮ್ರಾಜ್ಯನಿಷ್ಠೆಯನ್ನು ಪ್ರಶಂಸಿಸಿ “ಕೃಷ್ಣದೇವರಕಾಲದಲ್ಲಿ ಕನ್ನಡಚಕ್ರಾಧಿಪತ್ಯದ ವಿಜಯ ದುಂದುಭಿಯು ಮೊಳಗಿ ಅವರ ಕೀರ್ತಿ ದಿಗಂತವಿಶ್ರಾಂತವಾಗುವುದಲ್ಲದೆ ಇತಿಹಾಸದಲ್ಲಿ ಅವರ ಶುಭನಾಮವು ವೈಶಿಷ್ಟ್ಯಪೂರ್ಣವೆನಿಸಿ ಅಜರಾಮರವಾಗುವುದು! ಅದಕ್ಕಾಗಿ ನಾವು ಶ್ರೀಮೂಲರಾಮ-ದಿಗ್ವಿಜಯರಾಮ- ಜಯರಾಮದೇವರುಗಳಲ್ಲಿ ವಿಶೇಷ ಪ್ರಾರ್ಥನೆ ಮಾಡುವೆವು” ಎಂದು ಹೇಳಿ ದೇವರಲ್ಲಿ ಪ್ರಾರ್ಥಿಸಿ ಫಲಮಂತ್ರಾಕ್ಷತೆಯನ್ನು ಕರುಣಿಸಿದರು, ಇದರಿಂದ ಸಮಸ್ತಪ್ರಜರಿಗೂ ಪರಮಾನಂದವಾಯಿತು, ಆನಂತರ ರಾಮರಾಜರು ಗುರುಗಳ ಅಪ್ಪಣೆಪಡೆದು ಅರಮನೆಗೆ ತೆರಳಿದರು. 

ಆನಂತರ ಸುರೇಂದ್ರತೀರ್ಥರು ದೇವರನ್ನು ಭುಜಂಗಿಸಿ, ಗಂಟಾನಿನಾದದೊಡನೆ ಪೂಜೆಯನ್ನು ಮುಗಿಸಿ ವಿಜಯವಿಠಲನ ಸನ್ನಿಧಿಗೆ ಬಂದು ದೇವರಿಗೆ ಮಹಾಮಂಗಳಾರತಿಮಾಡಿ, ಸ್ತುತಿಸಿ ನಮಸ್ಕಾರಮಾಡಿ ಎದ್ದು ನಿಂತರು. ಆಗೊಂದು ವಿಚಿತ್ರ ಘಟನೆ ಜರುಗಿತು! ಶ್ರೀವಿಜಯವಿಠಲ ಪ್ರಸನ್ನವದನನಾಗಿ ಶ್ರೀಗಳವರಿಗೆ ದೃಗ್ಗೋಚರನಾದ. ಗುರುಗಳು ಇದೇನೆಂದು ಆನಂದಪುಳಕಿತಗಾತ್ರರಾಗಿ ಆ ಪರಮ ಮಂಗಳಮೂರ್ತಿಯನ್ನು ನೋಡುತ್ತಿರುವಂತೆಯೇ ಮನಮೋಹನಾಕಾರನಾದ ಆ ಸ್ವಾಮಿ ವಿಚಿತ್ರಕಾಂತಿಯಿಂದ ಕಂಗೊಳಿಸುತ್ತಾ ಗರ್ಭಾಲಯದಿಂದ ಶ್ರೀಯವರು ಪ್ರಾಜೆಮಾಡುತ್ತಿದ್ದೆಡೆಗೆ ಬಂದು ಅಲ್ಲಿ ಶ್ರೀಮದಾಚಾರ್ಯರ ಕಾಲದಿಂದಲೂ ಸಂಸ್ಥಾನದಲ್ಲಿ ವರ್ಷಕೊಮ್ಮೆ ಪೂಜೆಗೊಳ್ಳುತ್ತಿದ್ದ ಅನೇಕ ಪ್ರತಿಮೆಗಳನ್ನಿಟ್ಟಿದ್ದ ಬೆಳ್ಳಿಪೀಠದ ಹತ್ತಿರನಿಂತು ಶ್ರೀಯವರನ್ನು ಮಂದಹಾಸವದನಾರವಿಂದನಾಗಿ ನೋಡಿ ಅಭಯ ಪ್ರಧಾನಮಾಡಿ ಆ ಪ್ರತಿಮೆಗಳ ಮಧ್ಯದಲ್ಲಿ ವಿರಾಜಿಸುತ್ತಿದ್ದಶ್ರೀವಿಠಲಮೂರ್ತಿ- ಯಲ್ಲಿ ಅದೃಶ್ಯನಾದನು! ಹರ್ಷಾತಿರೇಕದಿಂದ ಗುರುಗಳ ಕಣ್ಣಿನಿಂದ ಆನಂದಬಾಷ್ಪ ಹರಿಯಿತು. ಶ್ರೀವಿಜಯವಿಠಲ ಮಠದ ಪ್ರಾಚೀನ ವಿಠಲನಲ್ಲಿ ಅಂತರ್ಗತನಾಗಿ ಅದೃಶ್ಯನಾಗಿ ತಾನು ಆ ಪ್ರತಿಮೆಯಲ್ಲಿ ಸದಾಸನ್ನಿಹಿತನಾಗಿದ್ದು ನಮ್ಮಿಂದ ಸೇವೆ ಸ್ವೀಕರಿಸುವೆನೆಂದು ಈ ಪವಾಡ ತೋರಿ ಸೂಚಿಸಿ ಅನುಗ್ರಹಿಸಿದ್ದಾನೆ - ಎಂದು ಭಾವಿಸಿದರು. ಆ ವಿಠಲನಿಗೆ ವಿಜಯವಿಠಲನೆಂದೇ ನಾಮಕರಣಮಾಡಿ ತಾವು ಪ್ರತಿದಿನ ಪೂಜಿಸುವುದಾಗಿ ಮನದಲ್ಲೇ ಶ್ರೀಹರಿಯಲ್ಲಿ ವಿಜ್ಞಾಪಿಸಿದರು.