|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೬. ರಾಜಧಾನಿಯಲ್ಲಿ ಶ್ರೀಸುರೇಂದ್ರತೀರ್ಥರು

ಕೃಷ್ಣದೇವರಾಯರು ದಿಗ್ವಿಜಯಯಾತ್ರೆಗೆ ಹೊರಟು ಐದಾರುತಿಂಗಳುಗಳಾಗಿರಬಹುದು, ಶ್ರೀವ್ಯಾಸರಾಜರೂ ಸಾಮ್ರಾಟನ ವಿಜಯಕ್ಕಾಗಿ ತಿರುಪತಿಯಲ್ಲಿ ತಪೋನಿರತರಾಗಿದ್ದಾರೆ. ರಾಜಧಾನಿಯಲ್ಲಿ ರಾಜಪ್ರತಿನಿಧಿಗಳಾಗಿ ಸಾಮ್ರಾಜ್ಯದ ಅತ್ಯಂತ ನಿಷ್ಠರೂ, ಪರಾಕ್ರಮಿಗಳೂ, ಅನುಭವ-ವಯೋವೃದ್ದರೂ, ಕೃಷ್ಣದೇವರಾಯನ ಆಪ್ತರೂ ಆದ ಅರವಿಟಿಮನೆತನದ ರಾಮರಾಜರು (ಅಳಿಯ ರಾಮರಾಜರ ತಾತ) ಆಡಳಿತ ನಿರ್ವಹಿಸುತ್ತಾ ಜನಪ್ರಿಯರಾಗಿದ್ದರು. 

ಶ್ರೀಶಾಲಿವಾಹನಶಕೆ ೧೪೩೫ನೇ ಶ್ರೀಮುಖನಾಮಸಂವತ್ತರ ಚೈತ್ರಶುಕ್ಲ ಸಪ್ತಮೀದಿವಸ (೧೩-೪-೧೫೧೩) ಶ್ರೀಮನ್ಮಧ್ವಾಚಾರ್ಯರ ವೇದಾಂತಸಾಮ್ರಾಜ್ಯಾಧೀಶರೂ, ಶ್ರೀಕವೀಂದ್ರತೀರ್ಥರ ದಕ್ಷಿಣಾದಿಪೀಠಾಧಿಪತಿಗಳೂ ಮಹಾಮಹಿಮರೂ ಆದ ಪೂಜ್ಯ ಶ್ರೀಸುರೇಂದ್ರತೀರ್ಥ ಶ್ರೀಪಾದಂಗಳವರು ಕನ್ನಡರಾಜಧಾನಿಗೆ ಸಂಚಾರ ಕ್ರಮದಿಂದ ಚಿತ್ತೈಸಿದರು. ಮಹಾಸಂಸ್ಥಾನಾಧಿಪತಿಗಳನ್ನು ಶ್ರೀಮಠದ ಶಿಷ್ಯರು ರಾಜಧಾನಿಯ ಧಾರ್ಮಿಕಪುರಜನರು ಗೌರವದಿಂದಸ್ವಾಗತಿಸಿ ಶ್ರೀರಘುನಂದತೀರ್ಥರ ಬೃಂದಾವನಸನ್ನಿಧಿಯಲ್ಲಿ ಬಿಡಾರಮಾಡಿಸಿದರು. 

ತಮ್ಮ ವಂಶಬಂಧುಗಳೂ, ಕುಲಗುರುಗಳೂ ಆದ ಸುರೇಂದ್ರತೀರ್ಥರ ದರ್ಶನಕ್ಕಾಗಿ ವೀಣಾ ಕೃಷ್ಣಾಚಾರ್ಯರು,ಆಸ್ಥಾನದ ಕೆಲಮಿತ್ರರು, ವಿದ್ಯಾಪೀಠದ ಹತ್ತಾರು ಜನ ಪಂಡಿತರೊಡನೆ ಶ್ರೀಯವರ ಸನ್ನಿಧಿಗೆ ಆಗಮಿಸಿದರು. ಅವರು ಬಂದಾಗ ಶ್ರೀಗಳವರು ಹತ್ತಾರುಜನ ವಿದ್ಯಾರ್ಥಿಗಳಿಗೆ ಶ್ರೀಮನ್ಯಾಯಸುಧಾ ಪಾಠಹೇಳುತ್ತಿದ್ದರು. ಪಂಡಿತರೊಡನೆ ಬಂದು ನಮಸ್ಕರಿಸಿದ ಕೃಷ್ಣಾಚಾರ್ಯರನ್ನು ಶ್ರೀಗಳವರು ಹಸನ್ಮುಖದಿಂದ ಸ್ವಾಗತಿಸಿ ಕುಶಲಪ್ರಶ್ನೆ ಮಾಡಿದರು. 

ಶ್ರೀಸುರೇಂದ್ರರು : ಕೃಷ್ಣಾಚಾರ್ಯರೇ, ಬಹುವರ್ಷಗಳ ಮೇಲೆ ನಿಮ್ಮನ್ನು ಕಂಡು ಆನಂದವಾಯಿತು. ಎಲ್ಲವೂ ಕುಶಲವೇ?

ಕೃಷ್ಣ: ಪೂಜ್ಯಗುರುಗಳ ಅನುಗ್ರಹದಿಂದ ಕುಶಲದಿಂದಿದ್ದೇನೆ, ಗುರುಗಳ ದರ್ಶನವಾಗಿ ಬಹುವರ್ಷಗಳಾದವು. 

ಸುರೇಂದ್ರರು : ನಿಜ, ಮುಳಬಾಗಿಲಿನಲ್ಲಿ ಒಮ್ಮೆ, ಕೀರ್ತಿಶೇಷರಾದ ಪೂಜ್ಯ ಶ್ರೀಲಕ್ಷ್ಮೀನಾರಾಯಣಯೋಗೀಂದ್ರರ ಸನ್ನಿಧಿಯಲ್ಲಿ ನಮ್ಮ ಪೂರ್ವಾಶ್ರಮದಲ್ಲಿ ಭೇಟಿಯಾಗಿತ್ತು, ಅಲ್ಲವೇ ? ಅದಾದಮೇಲೆ ಈ ರೂಪದಲ್ಲಿ ಈಗಲೇ ನೋಡುತ್ತಿದ್ದೀರಿ. ನೀವೀಗ ವ್ಯಾಸರಾಜಗುಪುಂಗವರ ಮತ್ತು ಕನ್ನಡರಮಾರಮಣ ವಿಶೇಷ ಆದರಕ್ಕೆ ಪಾತ್ರರಾಗಿ ಕೀರ್ತಿಗಳಿಸಿರುವುದನ್ನು ಕೇಳಿ ನಮಗೆ ಅತೀವ ಆನಂದವಾಗಿದೆ. 

ಕೃಷ್ಣ : (ನಸುನಕ್ಕು) ಎಲ್ಲವೂ ಶ್ರೀಯವರ ಪಾದಾನುಗ್ರಹಬಲ, ಅಪ್ಪಣೆ ಕೊಡಿಸಿದಂತೆ ಅಂದು ವಂಶಬಂಧುಗಳಾಗಿ ಸೇರಿದ್ದೆವು. ಇಂದು ಗುರು-ಶಿಷ್ಯರಾಗಿ ಸೇರಿದ್ದೇವೆ ! ಗುರುಗಳು ಕೃಶರಾಗಿರುವಂತೆ ತೋರುತ್ತದೆ. 

ಸುರೇಂದ್ರರು : ಹೂಂ, ಮಹಾಸಂಸ್ಥಾನದ ಹೊಣೆಗಾರಿಕೆ ಸಾಮಾನ್ಯವೇ ? ಜೊತೆಗೆ ತೀರ್ಥಯಾತ್ರೆ, ಶಿಷೋದ್ದಾರಾರ್ಥವಾಗಿ ಸಂಚಾರ.... 

ಕೃಷ್ಣ: ಕೀರ್ತಿಶೇಷ ಶ್ರೀರಘುನಂದನತೀರ್ಥಗುರುಪಾದರು ದೇವರಯಾತ್ರೆ ಮಾಡಿದಮೇಲೆ ಶ್ರೀಸನ್ನಿಧಾನದಸವಾರಿ ಈಗಲೇ ಇಲ್ಲಿಗೆ ಚಿತ್ತೆಸದ್ದು, ಅಲ್ಲವೇ ? 

ಸುರೇಂದ್ರರು : ಅಹುದು. ಆಚಾರ್ಯ, ಗುರುಪಾದರ ಬೃಂದಾವನ ಪ್ರತಿಷ್ಠೆ ಮಾಡಿಹೋದ ಮೇಲೆ ಅನೇಕ ಬಾರಿ ಇಲ್ಲಿಗೆ ಬಂದು, ಶ್ರೀಬೃಂದಾವನಸನ್ನಿಧಿಯನ್ನು ಅನೇಕ ಕಟ್ಟಡ-ಮಂಟಪಗಳಿಂದ ಅಭಿವೃದ್ಧಿಸಿ ಹೋಗಬಯಸಿದ್ದೆವು. ಆದರೆ ತೀರ್ಥಯಾತ್ರೆಯಲ್ಲಿದ್ದುದರಿಂದ ಅವಕಾಶ ದೊರೆತಿರಲಿಲ್ಲ. ಯಾವುದಕ್ಕೂ ಕಾಲಕೂಡಿ ಬರಬೇಕಲ್ಲವೇ ? ಈಗ ಆ ಕಾರ್ಯವನ್ನು ಪೂರೈಸಿಹೋಗಬಯಸಿದ್ದೇವೆ, ಶ್ರೀವ್ಯಾಸರಾಜಗುರುವರ್ಯರ ದರ್ಶನವಾಗಿ ಬಹುವರ್ಷಗಳಾಗಿತ್ತು. ಅವರ ದರ್ಶನವಾ ಆಗುವುದೆಂದಾಶಿಸಿದ್ದೆವು. ಕನ್ನಡಸಾಮ್ರಾಟರು ವಿಜಯಯಾತ್ರೆ ಹೊರಟಿರುವುದೇನೋ ತಿಳಿದಿತ್ತು. ಶ್ರೀವ್ಯಾಸತೀರ್ಥರು ಸಾರ್ವಭೌಮರಿಗೆ ವಿಜಯಪ್ರಾಪ್ತಿಗಾಗಿ ತಿರುಪತಿಯಲ್ಲಿ ತಪೋನಿಷ್ಠರಾಗಿರುವರೆಂದು ತಿಳಿದಿದ್ದರಿಂದ ಸಧ್ಯ ಆ ಭಾಗ್ಯವಿಲ್ಲವಾಯಿತು. ಕೃಷ್ಣಾಚಾರ್ಯರೇ, ನಾವು ಶ್ರೀಮೂಲರಾಮದೇವರ ಮಹಾಭಿಷೇಕವನ್ನು ಇಲ್ಲಿ ನೆರವೇರಿಸಿ, ಶ್ರೀಬೃಂದಾವನಸನ್ನಿಧಿಯ ಕಟ್ಟಡಾಭಿವೃದ್ಧಿ ಕಾರ್ಯವನ್ನು ಮುಗಿಸಲು ಯೋಚಿಸಿದ್ದೇವೆ. ವಂಶಬಂಧುಗಳೂ, ಮುಖ್ಯಶಿಷ್ಯರೂ ಆದ ನೀವು ಸಹಾಯಕರಾಗಿ ಸೇವೆಸಲ್ಲಿಸುತ್ತೀರಿ ಎಂದು ನಂಬಿದ್ದೇವೆ. 

ಕೃಷ್ಣ : ಶ್ರೀಮಠದಸೇವೆಗೆ ಸೇವಕನು ಸದಾಸಿದ್ದ. ಹಿರಿಯರಾದ ಶ್ರೀಪಾದಂಗಳವರ ಸೇವೆ ನನಗೆ ದೊರಕುವುದು ಒಂದು ಭಾಗ್ಯ. 

ಹೀಗೆ ವಿಜ್ಞಾಪಿಸಿ ಕೃಷ್ಣಾಚಾರ್ಯರು ತಮ್ಮ ಜತೆಗೆ ಬಂದಿದ್ದ ಪಂಡಿತರನ್ನು ಗುರುಗಳಿಗೆ ಪರಿಚಯಮಾಡಿಸಿದರು. ಶ್ರೀಗಳವರು ಸಕಲರ ಕುಶಲಪ್ರಶ್ನೆ ಮಾಡಿ “ದೇವರದರ್ಶನ ತೀರ್ಥಪ್ರಸಾದ ಸ್ವೀಕರಿಸಿ ಹೋಗಬೇಕು” ಎಂದು ಆಜ್ಞಾಪಿಸಿದರು. 

ಅಂದು ಮಧ್ಯಾಹ್ನ ದೇವರಪೂಜೆ, ತೀರ್ಥಪ್ರಸಾದ, ಭೋಜನಾದಿಗಳಾದ ಮೇಲೆ ಶ್ರೀಯವರು ಕೃಷ್ಣಾಚಾರ್ಯರನ್ನು ಕರೆದು ವಿಚಾರವಿನಿಮಯಮಾಡಿ ಅವರ ಸಲಹೆಯಂತೆ ಶ್ರೀಪಾದಂಗಳವರು ರಾಜಪ್ರತಿನಿಧಿಗಳಾದ ರಾಮರಾಜರು, ಇತರ ಸಚಿವರು, ಪ್ರಮುಖ ರಾಜಕಾರಣಿಗಳು, ಶ್ರೀವ್ಯಾಸರಾಜಮಠದ ಪ್ರತಿನಿಧಿಗಳು ಪಂಡಿತರು. ವೈದಿಕಲೌಕಿಕರುಗಳಿಗೆ ಶ್ರೀಮೂಲರಾಮದೇವರ ಮಹಾಭಿಷೇಕದ ಶ್ರೀಮುಖಗಳನ್ನು ಬರೆಯಿಸಿ ಶ್ರೀಮಠದ ಅಧಿಕಾರಿಗಳು, ಧರ್ಮಾಧಿಕಾರಿಗಳನ್ನು ಜತೆಮಾಡಿ ಅವರೆಲ್ಲರಿಗೆ ತಲುಪಿಸಲು ಫಲಮಂತ್ರಾಕ್ಷತೆಯೊಡನೆ ಕಳುಹಿಸಿಕೊಟ್ಟರು. 

ಕೃಷ್ಣಾಚಾರ್ಯರು ಶ್ರೀಮುಖ ತೆಗೆದುಕೊಂಡು ಮಠದ ಅಧಿಕಾರಿಗಳೊಡನೆ ರಾಜಪ್ರತಿನಿಧಿ ಶ್ರೀರಾಮರಾಜರ ಭೇಟಿಗೆ ಹೋಗಿ ತಾವು ಬಂದಿರುವ ವಿಚಾರವನ್ನು ಅರಮನೆಯ ಅಧಿಕಾರಿಗಳ ದ್ವಾರಾ ಹೇಳಿಕಳಿಸಿದರು. ರಾಮರಾಜರು, ಕೃಷ್ಣಾಚಾರ್ಯರು ಮತ್ತು ಮಠದವರನ್ನು ಗೌರವದಿಂದ ಕರೆಸಿಕೊಂಡು ಆಸನವನ್ನಿತ್ತು ಕುಶಲಪ್ರಶ್ನೆ ಮಾಡಿದಮೇಲೆ ಮಠದ ಧರ್ಮಾಧಿಕಾರಿಗಳು ರಾಮರಾಜರಿಗೆ ಶ್ರೀಗಳವರು ಕಳಿಸಿದ ಶ್ರೀಮುಖ ಫಲದಿಂದ ಮಂತ್ರಾಕ್ಷತೆಗಳನ್ನು ವೇದಘೋಷಪೂರ್ವಕ ಸಮರ್ಪಿಸಿದರು. 

ಶ್ರೀರಾಮರಾಜರು ಅದನ್ನು ಭಕ್ತಿಯಿಂದ ಸ್ವೀಕರಿಸಿದರು. ಅದೇ ಸಮಯಕ್ಕೆ ಸಾಮ್ರಾಜ್ಯದ ಮುಖ್ಯಾಧಿಕಾರಿಯೊಬ್ಬನು ಓರ್ವದೂತನೊಡನೆ ಬಂದು ರಾಮರಾಜರಿಗೆ ಸಾಮ್ರಾಟರ ಕಡೆಯಿಂದ ಬಂದಿದ್ದ ಪತ್ರವನ್ನು ಓದಿದರು. ಅವರ ಮುಖ ಪ್ರಫುಲ್ಲವಾಯಿತು. ಆನಂದಪರವಶರಾದ ಅವರು ಕೃಷ್ಣಾಚಾರ್ಯರನ್ನು ನೋಡಿ “ಪಂಡಿತರೆ, ಇದೆಂತಹ ಯೋಗ! ಪೂಜ್ಯ ಶ್ರೀಪಾದಂಗಳವರು ರಾಜಧಾನಿಗೆ ಬಂದು ಶ್ರೀಮೂಲರಾಮದೇವರ ಮಹಾಭಿಷೇಕನೆರವೇರಿಸುವ ಶ್ರೀಮುಖ-ಆಶೀರ್ವಾದ ಫಲ ಮಂತ್ರಾಕ್ಷತೆ ಕಳುಹಿಸಿದ ಕಾಲದಲ್ಲಿಯೇ ದಿಗ್ವಿಜಯಯಾತ್ರೆಗೆ ದಯಮಾಡಿಸಿದ ಮಹಾ ಪ್ರಭುಗಳು ಹೋದಲ್ಲೆಲ್ಲಾ ಶತ್ರುಗಳನ್ನು ನಿಗ್ರಹಿಸಿ ವಿಜಯಪರಂಪರೆಯನ್ನು ಸಾಧಿಸುತ್ತಿರುವ ಶುಭವಾರ್ತೆಯು ಬಂದಿರುವುದು ಅತ್ಯಾಶ್ಚರ್ಯಕರ. ಈಗ ಒಂದೆರಡು ತಿಂಗಳಿಂದ ಪ್ರಭುಗಳವಿಜಯಯಾತ್ರೆಯ ವಿಚಾರತಿಳಿಯದೆ ನಾವು ಬಹುಯೋಚಿಸುತ್ತಿದ್ದೆವು. ಶ್ರೀಯವರ ಶ್ರೀಮುಖ ಆಶೀರ್ವಾದ ಮಂತ್ರಾಕ್ಷತೆ ದೊರೆತಕಾಲದಲ್ಲಿಯೇ 'ದಿಗ್ವಿಜಯ' ಸೂಚಕ ಶುಭಸಮಾಚಾರ ಬಂದಿರುವುದು ನಿಜವಾಗಿ ಸಾಮ್ರಾಜ್ಯದ ಶುಭೋದಯವೆಂದೇ ನಾವು ಭಾವಿಸುತ್ತೇವೆ” ಎಂದು ಉದ್ದರಿಸಿದರು. 

ಕೃಷ್ಣಾಚಾರ್ಯರು ಪರಮಾನಂದಭರಿತರಾಗಿ “ಸ್ವಾಮಿ, ಶ್ರೀಚತುರ್ಯುಗ ಮೂರ್ತಿ ಶ್ರೀಮೂಲರಾಮನ ಮಹಾಭಿಷೇಕ ರಾಜಧಾನಿಯಲ್ಲಿ ನೆರವೇರುವುದು ತಪಸ್ವಿಗಳೂ ಮಹಾನುಭಾವರೂ ಆದ ಸುರೇಂದ್ರತೀರ್ಥರು ಇಲ್ಲಿಗೆ ದಯಮಾಡಿಸಿರುವುದೂ ತಾವು ಹೇಳಿದಂತೆ ನಮ್ಮ ಸಾಮ್ರಾಟರಿಗೆ, ಕನ್ನಡನಾಡಿಗೆ ಅತ್ಯಂತ ಶ್ರೇಯಸ್ಕರ ಮಾತ್ರವಲ್ಲ, ಮಹಾಪ್ರಭುಗಳಿಗೆ ಸರ್ವದಾ ಶ್ರೀರಾಮದೇವರಂತೆ ದಿಗ್ವಿಜಯವು ದೊರಕುವುದೆಂಬುದಕ್ಕೆ, ಶುಭವಾರ್ತೆ ಬಂದಿರುವುದು ನಿಜವಾಗಿ ಮಂಗಳಾಭ್ಯುದಯ ಸೂಚಕವಾಗಿದೆ. ಮಹಾನಂದವಾಯಿತು” ಎಂದು ವಿಜ್ಞಾಪಿಸಿದರು. 

ರಾಮರಾಜರು ಆನಂದದಿಂದ ಆಚಾರ್ಯರೇ, ಪೂಜ್ಯ ಶ್ರೀಸುರೇಂದ್ರತೀರ್ಥರು ಶ್ರೀಮನ್ಮಧ್ವಾಚಾರ್ಯರ ಯಾವ ಶುಭಪರಂಪರೆಗೆ ಸೇರಿದವರು ? ಶ್ರೀಮಧ್ವಾಚಾರ್ಯರ ಎರಡುಮಹಾಸಂಸ್ಥಾನಗಳಲ್ಲಿ ಶ್ರೀರಾಜೇಂದ್ರತೀರ್ಥರ ಪರಂಪರೆ, ಶ್ರೀ ಕವೀಂದ್ರತೀರ್ಥರ ಪರಂಪರೆ, ಮತ್ತು ಶ್ರೀಪದ್ಮನಾಭತೀರ್ಥರ ಸಂಸ್ಥಾನಗಳಲ್ಲಿ ನಮ್ಮ ರಾಜಗುರು ಶ್ರೀವ್ಯಾಸತೀರ್ಥರು ಶ್ರೀರಾಜೇಂದ್ರಪರಂಪರೆಯವರೆಂದು ಅರಿತಿದ್ದೇನೆ. ಇವರು ಯಾವ ಪರಂಪರೆಗೆ ಸೇರಿದವರು ?” ಎಂದು ಪ್ರಶ್ನಿಸಲು ಕೃಷ್ಣಾಚಾರ್ಯರು “ಶ್ರೀಮದಾಚಾರ್ಯರ ಎರಡುಮಹಾಸಂಸ್ಥಾನಗಳ ವಿಚಾರವನ್ನು ವಿವರಿಸಿ ಶ್ರೀಸುರೇಂದ್ರತೀರ್ಥರು, ಶ್ರೀಕವೀಂದ್ರತೀರ್ಥರು ಅಲಂಕರಿಸಿದ ಶ್ರೀಮದಾಚಾರ್ಯರ ಮಹಾಸಂಸ್ಥಾನಾಧಿಪತಿಗಳು” ಎಂದು ನಿವೇದಿಸಿದರು. 

ರಾಮರಾಜರು “ಬಹಳ ಸಂತೋಷ. ಶ್ರೀಮದಾಚಾರರ ಆರಾಧ್ಯಮೂರ್ತಿ ಶ್ರೀಮೂಲರಾಮದೇವರ ಮಹಾಭಿಷೇಕವು ಸಾಮ್ರಾಜ್ಯದಪರವಾಗಿ ಅದ್ದೂರಿಯಿಂದ ಜರುಗಲಿ ! ಅದರಿಂದ ಸಾಮ್ರಾಜ್ಯವು ನಿಷ್ಕಂಟವಾಗಿ ರಾಮರಾಜ್ಯವಾಗಲಿ” ಎಂದು ನಾವು ಹಾರೈಸುತ್ತೇವೆ. ನಾಡಿದ್ದು ಮಹಾಭಿಷೇಕವಿರುವುದರಿಂದ ಗುರುಗಳನ್ನು ಗೌರವದಿಂದ ಸ್ವಾಗತಿಸಿ ಶ್ರೀವಿಜಯವಿಠಲದೇವರ ಗುಡಿಯಲ್ಲಿ ಬಿಡಾರಮಾಡಿಸಿ ಅಲ್ಲೇ ಮಹಾಭಿಷೇಕ ನೆರವೇರಲು ಸಕಲವ್ಯವಸ್ಥೆಯನ್ನು ಮಾಡುತ್ತೇವೆ. ಶ್ರೀಯವರು ಅನುಗ್ರಹಿಸಬೇಕೆಂದು ನಮ್ಮ ನಮಸ್ಕಾರಗಳೊಡನೆ ಗುರುಗಳಲ್ಲಿ ವಿಜ್ಞಾಪಿಸಬೇಕು” ಎಂದು ಬಿನ್ನವಿಸಿದರು. 

ಕೃಷ್ಣಾಚಾರ್ಯರು ಸಂತೋಷಗೊಂಡು ಈ ವಿಚಾರವನ್ನು ಶ್ರೀಯವರಲ್ಲಿ ನಿವೇದಿಸಲು ಮಠದ ಅಧಿಕಾರಿಗಳಿಗೆ ಹೇಳಿದರು. ರಾಮರಾಜರ ಇಂಗಿತವರಿತು ದರ್ಬಾರಿನ ಅಧಿಕಾರಿಗಳೊಬ್ಬರು ಶ್ರೀಮಠದ ಅಧಿಕಾರಿಗಳಿಗೆ ಸುತ್ತುವೀಳ್ಯ-ಫಲಪುಷ್ಪಗಳನ್ನು ಅರ್ಪಿಸಿದರು, ಮಠದವರು ಆನಂದದಿಂದ ರಾಜಪ್ರತಿನಿಧಿಗಳ ಅಪ್ಪಣೆಪಡೆದು ತೆರಳಿದರು. ಆನಂತರ ರಾಮರಾಜರು ಮಹಾಭಿಷೇಕೋತ್ಸವಕ್ಕಾಗಿ ಏನೇನು ವ್ಯವಸ್ಥೆಯಾಗಬೇಕೆಂದು ಕೃಷ್ಣಾಚಾರರೊಡನೆ ವಿಚಾರವಿನಿಮಯಮಾಡಿ, ಅರಮನೆಯ ಅಧಿಕಾರಿಗಳನ್ನು ಕರೆಸಿಕೊಂಡು ಅದರಂತೆ ಏರ್ಪಾಟುಮಾಡಿ ಆಚಾರ್ಯರಿಗೆ ಸುತ್ತುವೀಳ್ಯ ಫಲಪುಷ್ಪಗಳನ್ನು ಕೊಡಿಸಿ ಕಳಿಸಿಕೊಟ್ಟರು.