ಕಲಿಯುಗ ಕಲ್ಪತರು ಐದನೆಯ ಉಲ್ಲಾಸ ಶ್ರೀರಾಘವೇಂದ್ರಗುರುಸಾರ್ವಭೌಮರು ೫. ದಿಗ್ವಿಜಯಯಾತ್ರೆ
ಕೃಷ್ಣದೇವರಾಯರು ಕೃಷ್ಣಾಚಾರ್ಯರಲ್ಲಿ ವೀಣಾಭ್ಯಾಸಮಾಡಿ ಮುಗಿಸಿದ ಮೂರುನಾಲ್ಕು ತಿಂಗಳುಗಳಲ್ಲೇ ದಿಗ್ವಿಜಯಯಾತ್ರೆಯನ್ನು ಕೈಗೊಂಡು ಹೊರಡುವ ಪ್ರಸಂಗವು ಬಂದೊದಗಿತು.
ಈ ಪರಿಸ್ಥಿತಿಗೆ ಕಳಿಂಗದೇಶದ ಪ್ರತಾಪರುದ್ರಗಜಪತಿಗೆ ವಿಜಯನಗರ ಸಾಮ್ರಾಜ್ಯದ ಮೇಲಿದ್ದದ್ವೇಷವೇ ಕಾರಣವಾಯಿತು. ಕನ್ನಡಸಾಮ್ರಾಜ್ಯದ ಅಭ್ಯುದಯವನ್ನು ಕಂಡು ಕರುಬುತ್ತಿದ್ದ ಪ್ರತಾಪರುದ್ರಗಜಪತಿಯು ಸ್ವತಃ ಹಿಂದುವಾಗಿದ್ದರೂ, ವಿಜಯನಗರವು ಸ್ವತಃ ಹಿಂದುವಾಗಿದ್ದರೂ ವಿಜಯನಗರದಮೇಲಿದ್ದ ದ್ವೇಷ-ಅಸೂಯೆಗಳಿಂದ ಮತಾಂಧರೂ, ವಿಧರ್ಮಿಯರೂ, ಸಾಮ್ರಾಜ್ಯದ ಆಜನ್ಮ ಶತ್ರುಗಳೂ ಆಗಿದ್ದ ಬಹುಮನಿ ಸುಲ್ತಾನರೊಡನೆ ಒಪ್ಪಂದ ಮಾಡಿಕೊಂಡು ವಿಜಯನಗರಸಾಮ್ರಾಜ್ಯವನ್ನು ನಾಶಗೊಳಿಸಲು ಉದ್ಯುಕ್ತನಾಗಿ ಬಹುಮನಿಸುಲ್ತಾನರೊಡನೆ ಸೇರಿ ಸಾಮ್ರಾಜ್ಯದ ಗಡಿಪ್ರದೇಶಗಳಲ್ಲಿ ಕೊಲೆ, ಸುಲಿಗೆ, ದರೋಡೆಗಳನ್ನು ಮಾಡಿಸುತ್ತಾ, ಬಂಡಾಯವೆಬ್ಬಿಸುತ್ತಾ, ಕನ್ನಡನಾಡಿನ ಭಾಗಗಳನ್ನು ಕಬಳಿಸುತ್ತಾ ತೊಂದರೆ ಕೊಡಲಾರಂಭಿಸಿದ್ದನು. ಪರಿಸ್ಥಿತಿ ಕೈಮಿಂಚಿಹೋಗುವ ಮುಂಚೆಯೇ ಶತ್ರುವನ್ನು ನಾಶಪಡಿಸಿ, ಸಾಮ್ರಾಜ್ಯವನ್ನು ಸುಭದ್ರಗೊಳಿಸುವುದರ ಜೊತೆಗೆ ಕೈಬಿಟ್ಟುಹೋಗಿರುವ ನಾಡಿನ ಪ್ರದೇಶಗಳನ್ನು ಪುನಃ ಸಂಪಾದಿಸಬೇಕಾಗಿತ್ತು. ಅಂತೆಯೇ ಸಾಮ್ರಾಜ್ಯದ ಹಿರಿಯ ಮುತ್ಸದ್ಧಿಗಳ ಸಲಹೆಯಂತೆ ದಿಗ್ವಿಜಯಯಾತ್ರೆ ಹೊರಡಲು ನಿಶ್ಚಯಿಸಿ, ಅದಕ್ಕಾಗಿ ಸುಭದ್ರವಾದ ಅಪಾರಸೇನೆಯನ್ನು ಸಿದ್ಧಪಡಿಸಿಕೊಂಡ ಚಕ್ರವರ್ತಿಯು ಪೂಜ್ಯಗುರುಗಳಾದ ವ್ಯಾಸತೀರ್ಥರಲ್ಲಿ ಎಲ್ಲಾ ವಿಚಾರಗಳನ್ನೂ ನಿವೇದಿಸಿ ಅವರ ಸಲಹೆ ಆಶೀರ್ವಾದಗಳನ್ನು ಪಡೆದು ಜೈತ್ರಯಾತ್ರೆಗೆ ಸಿದ್ಧನಾದನು ವಿಜಯಯಾತ್ರೆಗೆ ಸಕಲವ್ಯವಸ್ಥೆಗಳಾದ ಮೇಲೆ ಅದರ ಅಂಗವಾಗಿ ಒಂದು ಸಮಾರಂಭವನ್ನು ಮಹಾಮಂತ್ರಿ ಅಪ್ಪಾಜಿಯವರು ಏರ್ಪಡಿಸಿದ್ದರು. ಅದಕ್ಕೆ ಶ್ರೀವ್ಯಾಸಭಗವಾನರನ್ನು ಆಹ್ವಾನಿಸಿದ್ದರು. ಸಮಾರಂಭಕಾಲದಲ್ಲಿ ಶ್ರೀವ್ಯಾಸರಾಜರು ಕನ್ನಡ ಸಾಮ್ರಾಜ್ಯದ ಮಹತ್ವವನ್ನು ಎತ್ತಿಹೇಳಿ ಸಾಮ್ರಾಜ್ಯದ ರಕ್ಷಣೆ, ಅಭ್ಯುದಯಕ್ಕಾಗಿ ಎಲ್ಲ ಕನ್ನಡವೀರರೂ ಪ್ರಾಣವನ್ನು ಒತ್ತೆಯಿಟ್ಟು ಹೋರಾಡಿ ಸಾಮ್ರಾಜ್ಯದ ಕೀರ್ತಿ ಗೌರವವನ್ನು ಕಾಪಾಡಬೇಕೆಂದು ಉಪದೇಶಿಸಿ, ವಿಜಯಶಾಲಿಯಾಗಿ ಬರುವಂತೆ ಕೃಷ್ಣದೇವರಾಯನಿಗೆ ವಿಜಯತಿಲಕವನ್ನಿಟ್ಟು ಆಶೀರ್ವದಿಸಿದರು ಮತ್ತು ಅದೇ ದಿವಸ ವ್ಯಾಸಮುನಿಗಳು ಕೃಷ್ಣದೇವರಾಯನ ವಿಜಯಕ್ಕಾಗಿ ತಿರುಪತಿ-ಮುಂತಾದ ಕಡೆ ವಿಶೇಷಪೂಜಾರಾಧನೆ- ಪ್ರಾರ್ಥನೆಗಳನ್ನು ಸ್ವತಃ ಸಲ್ಲಿಸಲು ಮಿತಪರಿವಾರದೊಡನೆ “ದಿಗ್ವಿಜಯ ಪ್ರಾರ್ಥನಾ ಕ್ಷೇತ್ರಯಾತ್ರೆ”ಯನ್ನು ಕೈಗೊಂಡು ವಿಜಯನಗರದಿಂದ ದಯಮಾಡಿಸಿದರು.
ಈ ವಿಜಯಯಾತ್ರಾ ಸಮಾರಂಭಕಾಲದಲ್ಲಿ ಕೃಷ್ಣದೇವರಾಯರು ತಮಗೆ ವೀಣಾಕಲೆಯನ್ನು ಉಪದೇಶಿಸಿ ಅಭ್ಯಾಸಮಾಡಿಸಿದ ಕೃಷ್ಣಾಚಾರ್ಯರನ್ನು ಸನ್ಮಾನಿಸಿ, ರತ್ನಪದಕ, ಮುತ್ತಿನಗೊಂಚಲುಗಳಿಂದ ಶೋಭಿಸುವ ಅಮೂಲ್ಯ ಮುಕ್ತಾಹಾರ, ರತ್ನದುಂಗುರ, ಸುವರ್ಣತೋಡೆ, ಪಟ್ಟೆಪೀತಾಂಬರ, ಶಾಲುಜೋಡಿ, ಭೂಸ್ವಾಸ್ತಿ ಸಹಿತವಾಗಿ ವೈಣಿಕಚೂಡಾಮಣಿ” ಮಹಾಪ್ರಶಸ್ತಿಯನ್ನು ಆಚಾರ್ಯರಿಗೆ 'ಗುರುದಕ್ಷಿಣಾ'ರೂಪವಾಗಿ ಸಮರ್ಪಿಸಿ ಗೌರವಿಸಿದನು.246 ಈ ಸನ್ಮಾನದಿಂದ ಸರ್ವರಿಗೂ ಪರಮಾನಂದವಾಯಿತು. ಹೀಗೆ ಕೃಷ್ಣಾಚಾರ್ಯರು. 'ಸಾಮ್ರಾಜ್ಯ ಪ್ರಶಸ್ತಿ' ಗಳಿಸಿ ಲೋಕವಿಖ್ಯಾತರಾದರು. ಕೃಷ್ಣದೇವರಾಯರು ಕ್ರಿ.ಶ. ೧೫೧೧-೧೨ರಲ್ಲಿ ವಿಜಯಯಾತ್ರೆ ಕೈಗೊಂಡು ಹೊರಟರು.