ಕಲಿಯುಗ ಕಲ್ಪತರು ಐದನೆಯ ಉಲ್ಲಾಸ ಶ್ರೀರಾಘವೇಂದ್ರಗುರುಸಾರ್ವಭೌಮರು ೩. ವಿಜಯನಗರದ ಆಸ್ಥಾನದಲ್ಲಿ
ವಿಜಯನಗರಕ್ಕೆ ಪತ್ನಿಸಮೇತರಾಗಿ ಬಂದ ಕೃಷ್ಣಾಚಾರ್ಯರನ್ನು ಕಂಡು ವ್ಯಾಸರಾಜರಿಗೆ ಅಪಾರ ಸಂತೋಷವಾಯಿತು. ಆಚಾರರಿಂದ ಪೂರ್ವೋತ್ತರಗಳನ್ನೆಲ್ಲಾ ತಿಳಿದ ಶ್ರೀಗಳವರು ವಂಶಬಂಧುಗಳೂ, ಶ್ರೇಷ್ಠಪಂಡಿತರೂ, ಸದಾಚಾರಸಂಪನ್ನರೂ ಆದ ಆಚಾರ್ಯ ದಂಪತಿಗಳಿಗೆ ಮಠದಲ್ಲಿ ಆಶ್ರಯವಿತ್ತು ಪ್ರೀತಿ-ಗೌರವಾದರಗಳಿಂದ ಕಾಣುತ್ತಾ ಅವರನ್ನು ಮಠದ ಆಸ್ಥಾನವಿದ್ವಾಂಸರನ್ನಾಗಿಯೂ ಸಂಸ ತ ವಿಶ್ವವಿದ್ಯಾನಿಲಯದಲ್ಲಿ ನ್ಯಾಯ-ವೇದಾಂತಾದಿಶಾಸ್ತ್ರ ಮತ್ತು ಗಾಂಧರ್ವಕಲೆಗಳನ್ನು ಕಲಿಸುವ ಅಧ್ಯಾಪಕರನ್ನಾಗಿಯೂ ಮಾಡಿದರು. ಹೀಗೆ ಕೆಲವರ್ಷಗಳು ಕಳೆದವು.
ಕನ್ನಡರಮಾರಮಣನಾದ ಕೃಷ್ಣದೇವರಾಯನು ಆ ವೇಳೆಗೆ ಸಾಮ್ರಾಟನಾಗಿದ್ದನು. ಅವನು ತನ್ನ ತಂದೆ ನರಸನಾಯಕ ಮತ್ತು ಅಣ್ಣ ವೀರನರಸಿಂಹನಂತೆಯೇ ಶ್ರೀರಾಜಗುರು ವ್ಯಾಸಭಗವಾನರಲ್ಲಿ ಅಸಾಧಾರಣ ಭಕ್ತಿಗೌರವಗಳಿಂದ ನಡೆದುಕೊಂಡು ಅವರ ಮಾರ್ಗದರ್ಶನ, ಉಪದೇಶಗಳಂತೆ ವರ್ತಿಸುತ್ತಾ ಜನಪ್ರಿಯವಾದ ಚಕ್ರವರ್ತಿಯೆಂದು ಕೀರ್ತಿಗಳಿಸಿ ಬಹುವಿಧವಾಗಿ ಸಾಮ್ರಾಜ್ಯಾಭಿವೃದ್ಧಿ ಮಾಡುತ್ತಾ ವಿದ್ವಜ್ಜನಾಶ್ರಯನೆಂದು ಹೆಸರುಗಳಿಸಿದ್ದನು.
ಒಂದುದಿನ ನವರಾತ್ರಿ ಸಮಾರಂಭಕಾಲದಲ್ಲಿ ಸಾಮ್ರಾಟ್ ಕೃಷ್ಣದೇವರಾಯನು ಶ್ರೀವ್ಯಾಸತೀರ್ಥರ ದರ್ಶನಕ್ಕಾಗಿ “ಲೋಕಪಾವನ” ಮಠಕ್ಕೆ ಬಂದಾಗ ಶ್ರೀಗಳವರ ಸಮೀಪದಲ್ಲಿ ಕುಳಿತಿದ್ದ ಕೃಷ್ಣಾಚಾರ್ಯರ ಭವ್ಯಾಕೃತಿ, ತೇಜಸ್ಸುಗಳನ್ನು ಕಂಡು ಮುಗ್ಧನಾಗಿ ಶ್ರೀಪಾದಂಗಳವರಲ್ಲಿ ವಿಜ್ಞಾಪಿಸಿದನು -
ಕೃಷ್ಣ : ಗುರುದೇವ ! ಶ್ರೀಸನ್ನಿಧಿಯಲ್ಲಿ ಈ ಮಹನೀಯರನ್ನು ಹಿಂದೆ ಕಂಡ ನೆನಪಿಲ್ಲ. ಈ ತೇಜಸ್ವಿಗಳಾರು ?
ಶ್ರೀವ್ಯಾಸರು : (ನಸುನಕ್ಕು) ಸಾರ್ವಭೌಮ! ಇವರು ನಮ್ಮ ಕುಲಬಂಧುಗಳು. ನಮ್ಮ ಗುರುಪಾದರಾಗಿದ್ದ ಶ್ರೀಲಕ್ಷ್ಮಿನಾರಾಯಣಮುನೀಂದ್ರರಲ್ಲಿ ಸಕಲಶಾಸ್ತ್ರಗಳನ್ನು ಅಧ್ಯಯನಮಾಡಿದ ಭಾಗ್ಯಶಾಲಿಗಳು ! ಷಾಷಿಕ ಕುಲಾವತಂಸರಾದ ಗುರುಪಾದರಿಗೂ ನಮಗೂ ಬಂಧುಗಳಾದ ಇವರು ಪ್ರಖ್ಯಾತ “ಬೀಗಮುದ್ರೆ” ಮನೆತನದವರು, ನ್ಯಾಯವೇದಾಂತಶಾಸ್ತ್ರಕೋವಿದರು. ಮೇಲಾಗಿ ಗಾಂಧರ್ವಕಲೆ, ಅದರಲ್ಲೂ ವೀಣಾವಾದನದಲ್ಲಿ ಅತ್ಯಂತ ನಿಪುಣರು. ರಾರ್ಜ, ಇವರು ನಮ್ಮ ಗುರುಪಾದರು ದೇವರಯಾತ್ರೆ ಮಾಡಿದ ಮೇಲೆ ನಮ್ಮ ಆಹ್ವಾನದಂತೆ ಇಲ್ಲಿಗೆ ಬಂದು ಕೆಲವರ್ಷಗಳಾದವು. ಇವರನ್ನು ನಮ್ಮ ಸಂಸ್ಥಾನದ ಪಂಡಿತರನ್ನಾಗಿಯೂ, ಸಂಸ ತವಿದ್ಯಾಪೀಠದ ಅಧ್ಯಾಪಕರನ್ನಾಗಿಯೂ ನೇಮಿಸಿದ್ದೇವೆ. ನಮಗೆ ಅತಿಪ್ರೀತ್ಯಾಸ್ಪದವರಿವರು. ಇವರ ವೀಣಾವಾದನ ಸೊಬಗನ್ನು ಒಮ್ಮೆ ನೀನು ಕೇಳಲೇಬೇಕು.
ಕೃಷ್ಣಾಚಾರ್ಯರ ವ್ಯಕ್ತಿತ್ತದಿಂದ ಪ್ರಭಾವಿತನಾಗಿದ್ದ ಕೃಷ್ಣದೇವರಾಯನು ಗುರುಗಳ ವಚನದಿಂದ ಆನಂದಿತನಾಗಿ “ಗುರುವರ್ಯ! ತಮ್ಮ ಆಜ್ಞೆಯನ್ನು ಶಿರಸಾ ಧರಿಸಿದ್ದೇನೆ” ಎಂದು ವಿಜ್ಞಾಪಿಸಿ, ಆಚಾರ್ಯರತ್ತ ತಿರುಗಿ “ಸ್ವಾಮಿ, ಪಂಡಿತರೇ, ತಮ್ಮ ಪರಿಚಯದಿಂದ ಸಂತೋಷವಾಯಿತು. ನಿಮ್ಮಂಥ ವಿದ್ಯಾಧರರು ನಮ್ಮ ರಾಜಧಾನಿಗೆ ಬಂದಿರುವುದು ಸಾಮ್ರಾಜ್ಯದ ಸೌಭಾಗ್ಯವೆಂದು ಭಾವಿಸುತ್ತೇನೆ” ಎಂದರು.
ಶ್ರೀಗಳವರ ಶ್ಲಾಘನೆಯಿಂದ ನಾಚಿದ ಆಚಾರ್ಯರು ಚಕ್ರವರ್ತಿಯ ಸೌಜನ್ಯ, ವಿದ್ಯಾಪಕ್ಷಪಾತಾದಿಗಳನ್ನು ಕಂಡು ಅಚ್ಚರಿಗೊಂಡು “ಮಹಾಪ್ರಭು ! ನಮ್ಮ ಗುರುವರ್ಯರು ಪ್ರೀತ್ಯತಿಶಯದಿಂದ ನನ್ನನ್ನು ಬಹುವಾಗಿ ಹೊಗಳಿದ್ದಾರೆ. ಅದು ಅವರ ಉದಾರ ಅಂತಃಕರಣ - ಶಿಷ್ಯಪ್ರೇಮ ಹಾಗೂ ವಿದ್ಯೆ ವಿದ್ವಾಂಸರಲ್ಲಿ ಅವರಿಗಿರುವ ಅಭಿಮಾನಕ್ಕೆ ಜ್ವಲಂತ ದೃಷ್ಟಾಂತವಾಗಿದೆ. ನಾನೊಬ್ಬ ಅವರ ಅನುಗ್ರಹೋಪಜೀವಿ ಪಂಡಿತನಷ್ಟೇ” ಎಂದು ಕೃಷ್ಣದೇವರಾಯನಲ್ಲಿನಿವೇದಿಸಿದರು.
ಕೃಷ್ಣ : ಆಚಾರ್ಯರೇ, ತಮ್ಮ ಈ ವಿನಯ್-ಸೌಜನ್ಯ, ಗುರುಭಕ್ತಿಗಳನ್ನು ನೋಡಿದರೆ, ಗುರುವರ್ಯರು ನಿಮ್ಮಲ್ಲಿಂತು ಪ್ರೀತಿಮಾಡುತ್ತಿರುವುದು ಸಹಜವೆ ಆಗಿದೆ. “ಸರ್ವಸ್ತಗಂಧೇಷು ವಿಶ್ವಸತಿ” ಅಲ್ಲವೇ ? ಅದು ಸರಿ, ಗುರುಗಳು ನಿಮ್ಮ ವೀಣಾವಾದನದ ವಿಚಾರವಾಗಿ ಅಪ್ಪಣೆಕೊಡಿಸಿದ್ದನ್ನು ಕೇಳಿದಿರಷ್ಟೆ? ತಮ್ಮ ವೀಣಾವಾದನದಿಂದ ನನ್ನನ್ನು ಎಂದು ಆನಂದಪಡಿಸುವಿರಿ?
ಆಗ ಶ್ರೀವ್ಯಾಸಮುನಿಗಳು “ಕೃಷ್ಣ ! ಈಗ ಹೇಗಿದ್ದರೂ ನವರಾತ್ರಿಯ ಸಮಾರಂಭ ಜರುಗುತ್ತಿದೆ. ಮಹಾನವಮಿ ಉತ್ಸವದ ದಿನ ಇವರ ವೀಣಾವಾದನವನ್ನು ಏರ್ಪಡಿಸು. ಈ ಮಹೋತ್ಸವಕ್ಕಾಗಿ ದೇಶ-ವಿದೇಶಗಳಿಂದ ಬಂದಿರುವ ರಾಜಾಧಿರಾಜರು, ಸಾಮಂತರು, ಪಂಡಿತರು, ಸಂಗೀತಗಾರರೂ ಇವರ ವೀಣಾವಾದನವನ್ನಾಲಿಸಿ ಸಂತೋಷಪಡಲಿ” ಎಂದು ಅಪ್ಪಣೆಮಾಡಿದರು.
ಕೃಷ್ಣದೇವರಾಯ ಗುರುಗಳ ಅಪ್ಪಣೆಯಂತೆ ವ್ಯವಸ್ಥೆ ಮಾಡುವುದಾಗಿ ವಿಜ್ಞಾಪಿಸಿ, “ಮಹಾನವಮಿಯಂದು ನಿಮ್ಮ ವೀಣಾವಾದನದಿಂದ ನಮ್ಮೆಲ್ಲರನ್ನೂ ಸಂತೋಷಪಡಿಸಬೇಕು” ಎಂದು ಕೃಷ್ಣಾಚಾರ್ಯರಿಗೆ ಹೇಳಿ, ಗುರುಗಳ ಅಪ್ಪಣೆ ಪಡೆದು ಅರಮನೆಗೆ ಮರಳಿದನು.
ಮಹಾನವಮಿಯ ಉತ್ಸವಕ್ಕಾಗಿಯೇ ನಿರ್ಮಿಸಲಾದ ಕಲಾತ್ಮಕ ದರ್ಬಾರು ಮಂದಿರದ ಮುಂಭಾಗದಲ್ಲಿ ಮಾನೌಮಿ ದಿಬ್ಬ” ದ ಮೇಲೆ ಹಸಿರುವಾಣಿ ಚಪ್ಪರದಲ್ಲಿ ವಿಶಾಲವೇದಿಕೆಯ ಮೇಲೆ ಕೃಷ್ಣಾಚಾರ್ಯರ ವೀಣಾವಾದನವು ಜರಗುತ್ತಿದೆ. ಸಾಮ್ರಾಜ್ಯದ ವಿವಿಧಭಾಗಗಳಿಂದ ಕನ್ನಡಸಾಮ್ರಾಜ್ಯದ ವಿಖ್ಯಾತ ನವರಾತ್ರಿ ಮಹೋತ್ಸವಕ್ಕಾಗಿ ಸಾವಿರಾರು ಸುಪ್ರತಿಷ್ಠಿತ ರಾಜ-ಮಹಾರಾಜ-ಮಾಂಡಲೀಕ-ಸಚಿವ-ಸೇನಾನಿ, ಸರದಾರರು, ಪಂಡಿತರು, ಸಂಗೀತಗಾರರು, ನಾಟ್ಯಕೋವಿದರು, ಪೌರಜಾನಪದರು “ಮಾನೌಮಿದಿಬ್ಬ'ದ ಸುತ್ತಲೂ ನಿರ್ಮಿತವಾದ ವಿಸ್ತಾರವಾದ ಅಲಂಕೃತಚಪ್ಪರದಲ್ಲಿ ತಮ್ಮ ತಮ್ಮ ಸ್ಥಾನಮಾನಗಳಿಗೆ ಉಚಿತರೀತಿಯಲ್ಲಿ ಆಸನಾಸೀನರಾಗಿದ್ದಾರೆ. ಅವರೆದರು ಮೂರಂತಸ್ತಿನ ಅಲಂಕೃತಕಲಾಪರಿಪೂರ್ಣವಾದ ಸಭಾಭವನದ ಎರಡನೆಯ ಅಂತಸ್ತಿನಲ್ಲಿ ಸಾಮ್ರಾಜ್ಯದ ಸಮಸ್ತ ಸಚಿವ-ಸಾಮಂತ-ಮಂಡಲಾಧೀಶ-ರಾಜ-ಮಹಾರಾಜ, ಸ್ವಾಮಿನಿಷ್ಠ ಉನ್ನತಾಧಿಕಾರಿಗಳು, ವಿವಿಧ ರಾಜ್ಯಪ್ರತಿನಿಧಿಗಳು, ಆಪ್ತರು-ಮಿತ್ರರುಗಳೊಡನೆ ಸಾಮ್ರಾಟ್' ಕೃಷ್ಣದೇವರಾಯರು ರತ್ನಸಿಂಹಾಸನದಲ್ಲಿ ಕುಳಿತು ಕೃಷ್ಣಾಚಾರ್ಯರ ವೀಣಾವಾದನವನ್ನು ಆಲಿಸುತ್ತಿದ್ದಾರೆ. ಮೂರನೆಯ ಅಂತಸ್ತಿನಲ್ಲಿ ರಾಣೀವಾಸದವರು ಮಂಡಿಸಿದ್ದಾರೆ.
ಕೃಷ್ಣಾಚಾರ್ಯರು ಅಮೋಘವಾಗಿ ವೀಣೆ ನುಡಿಸುತ್ತಿದ್ದಾರೆ. ಅನೇಕ ಜನಕ ರಾಗಗಳಲ್ಲಿ ಪಾಂಡಿತ್ಯಪೂರ್ಣ ಗಮಕ, ಸ್ವರವಿನ್ಯಾಸಗಳೊಡನೆ ಅಶ್ರುತಪೂರ್ವತಾನ ಮೂರ್ಛನಸ್ವರಗಳೊಡನೆ ರಾಗವಾಹನಿಯ ಮಂಜುಳನಾದಲಹರಿಯು ವೀಣೆಯಿಂದ ಹೊರಹೊಮ್ಮಿ ಸಭಾಂಗಣವನ್ನೆಲ್ಲಾ ವ್ಯಾಪಿಸಿ, ಶೋತೃಗಳ ಹೃದಯದಲ್ಲಿ ಸಂತಸದ ಬುಗ್ಗೆಗಳನ್ನೇಳಿಸುತ್ತಾರೋಮಾಂಚನ ಗೊಳಿಸುತ್ತಿದೆ. ಒಂದೊಂದು ರಾಗಗಳನ್ನೂ ವೈವಿಧ್ಯಪೂರ್ಣವಾಗಿ ವೀಣೆಯಲ್ಲಿ ನುಡಿಸುತ್ತಿದ್ದಾರೆ - ಕೃಷ್ಣಾಚಾರ್ಯರು! ಅವರ ಅಸಾಧಾರಣ ಪ್ರತಿಭೆ, ರಾಗನಿರೂಪಣಾ ಕೌಶಲ, ಮಿಂಚಿನಂತೆ ವೀಣೆಯಮೇಲಾಡುತ್ತಿರುವ ಕರಾಂಗುಲಿಗಳ ಚಮತ್ಕಾರಗಳಿಂದ ಪ್ರತಿಯೊಬ್ಬರೂ ಮಂತ್ರಮುಗ್ಧಸರ್ಪದಂತೆ ಬಾಹ್ಯಪ್ರಪಂಚವನ್ನೇ ಮರೆತು ಕುಳಿತಿದ್ದಾರೆ! ಆಚಾರ್ಯರ ಪಾಂಡಿತ್ಯದ ಮುಂದೆ ಪಕ್ಕವಾದ್ಯಗಾರರು ತಡವರಿಸುತ್ತಿದ್ದಾರೆ. ಅದ್ಭುತವೀಣಾವಾದನವನ್ನು ಕೇಳಿ ಸಕಲರೂ ಹರ್ಷನಿರ್ಭರರಾಗಿ ಶಿರಃಕಂಪನಮಾಡುತ್ತಾ “ಭಲೆ, ಭಲೆ, ಅದ್ಭುತ, ಅಸಾಧಾರಣ” ಮುಂತಾಗಿ ಉದ್ಧರಿಸುತ್ತಾ ಕರತಾಡನಗಳಿಂದ ಆಚಾರ್ಯರ ಮಹಾವಿದ್ವತ್ತನ್ನು ಕೊಂಡಾಡುತ್ತಿದ್ದಾರೆ. ಕೃಷ್ಣನರಪತಿಗಾದ ಆನಂದ, ತೃಪ್ತಿಗಳಂತೂ ಅವರ್ಣನೀಯ! ಸುವಾರು ಮೂರುಗಂಟೆಗಳ ಕಾಲ ಏಕಪ್ರಕಾರವಾಗಿ ಸರ್ವರ ಮನವನ್ನೂ ಸೆರೆಹಿಡಿದು ಪರವಶಗೊಳಿಸಿದ ಆಚಾರ್ಯರ ವೀಣಾಕಛೇರಿಯು ಮಂಗಳದೊಡನೆ ಮುಕ್ತಾಯವಾಯಿತು. ಸಭಿಕರು ಪ್ರಚಂಡಕರತಾಡನ-ಹರ್ಷಧ್ವನಿಗೈದರು.
ಮಹಾಪ್ರಭುಗಳ ಅಪ್ಪಣೆಯಂತೆ ಮಹಾಮಂತ್ರಿ ಅಪ್ಪಾಜಿ(ತಿಮ್ಮರಸು)ಯವರು ರಾಜಯೋಗ್ಯ ಖಿಲ್ಲತ್ತು, ಶಾಲುಜೋಡಿ ಸಂಭಾವನೆಗಳನ್ನು ಕೃಷ್ಣಾಚಾರ್ಯರಿಗೆ ನೀಡಿ ರಾಜಗುರು ಶ್ರೀವ್ಯಾಸತೀರ್ಥರ ಶಿಷ್ಯರೂ, ವಿದ್ಯಾವಿಶಾರದರೂ, ವೀಣಾವಾದನ ಕುಶಲರೂ ಆದ ಶ್ರೀ ವೀಣಾ ಕೃಷ್ಣಾಚಾರ್ಯರು ನಮ್ಮ ಕನ್ನಡನಾಡಿಗೆ ಭೂಷಣರಾಗಿದ್ದಾರೆ. ಇವರ ಅಸಾಧಾರಣ ವೀಣಾವಾದನ ಪಾಂಡಿತ್ಯ-ಪ್ರತಿಭೆಗಳಿಂದ ಸಂತುಷ್ಟರಾಗಿರುವ ಸಾಮ್ರಾಟ್ ಶ್ರೀಕೃಷ್ಣದೇವರಾಯ ಪ್ರಭುಗಳು ಮಹಾಪಂಡಿತರಾದ ಶ್ರೀಕೃಷ್ಣಾಚಾರ್ಯರಿಗೆ ರಾಜದರ್ಬಾರಿನ ಮಹಾವಿದ್ವತ್ಪದವಿಯನ್ನೂ, ಆಸ್ಥಾನ ಪ್ರಧಾನಸಂಗೀತ ವಿದ್ವಾಂಸರ ಸ್ಥಾನವನ್ನೂ ನೀಡಿ ಗೌರವಿಸುತ್ತಿದ್ದಾರೆಂದು ಈ ಮಹಾಸಭೆಯಲ್ಲಿ ಘೋಷಿಸಲು ಹರ್ಷಿಸುತ್ತೇನೆ. ಶ್ರೀಕೃಷ್ಣಾಚಾರ್ಯರು ಈ ಎರಡು ಮಹಾವಿದ್ವತ್ಪದವಿಗಳನ್ನು ಸ್ವೀಕರಿಸಿ ಕರ್ನಾಟಕಸಾಮ್ರಾಜ್ಯದ ಆಸ್ಥಾನವನ್ನು ಭೂಷಿಸಬೇಕು ಎಂದು ಮಹಾಪ್ರಭುಗಳು ಅಪೇಕ್ಷಿಸುತ್ತಾರೆ” ಎಂದು ಹೇಳಿ, ಪ್ರಚಂಡ ಕರತಾಡನ-ಹರ್ಷನಿನಾದಗಳಾಗುತ್ತಿರಲು ಸಾಮ್ರಾಜ್ಯಾಸ್ಥಾನದ ಉಡುಗೆ-ತೊಡುಗೆಗಳೊಡನೆ ಮಹಾವಿದ್ದನ್ನೇಮಕದ ಸಾಮ್ರಾಟರ ನಿರೂಪವನ್ನೂ ಕೃಷ್ಣಾಚಾರ್ಯರಿಗೆ ನೀಡಿ, ಫಲಪುಷ್ಪಹಾರಾದಿಗಳನ್ನಿತ್ತು ಗೌರವಿಸಿದರು.
ಮಹಾಪ್ರಭುಗಳ ಔದಾರ್ಯ, ವಿದ್ವಜ್ಜನಪಕ್ಷಪಾತ, ತಮ್ಮಲ್ಲಿ ತೋರಿದೆ ಆದರಾಭಿಮಾನಗಳಿಂದ ಆನಂದನಿರ್ಭರರಾದ ಕೃಷ್ಣಾಚಾರ್ಯರು ಸೂಕ್ತರೀತಿಯಲ್ಲಿ ಸಾಮ್ರಾಟರಿಗೂ ಮಹಾಮಾತ್ರರಿಗೂ, ಕನ್ನಡಜನತೆಗೂ ಕೃತಜ್ಞತೆಯನ್ನು ಸಲ್ಲಿಸಿದರು. ಅನಂತರ ದರ್ಬಾರು ಜರುಗಿ, ವಿವಿಧ ಕಲಾಪ್ರದರ್ಶನಗಳೊಡನೆ ಸಭೆಯು ಮುಕ್ತಾಯವಾಯಿತು.
ಮರುದಿನ ವಿಜಯದಶಮೀ ಪ್ರಯುಕ್ತ ಶಮೀಪೂಜಾದಿ ವಿವಿಧ ಕಾರ್ಯಕ್ರಮಗಳಾಗಿ, ದಿಗ್ವಿಜಯಯಾತ್ರಾಸೂಚಕವಾದ ವೈಭವಪೂರ್ಣ 'ಜಂಬುಸವಾರಿ ಮೆರವಣಿಗೆಯೊಡನೆ ನವರಾತ್ರಿ ಮಹೋತ್ಸವ ಸಮಾರಂಭವು ಮುಕ್ತಾಯವಾಯಿತು.