|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೨. ಶ್ರೀಕೃಷ್ಣಭಟ್ಟರು

ಭಾರತದಲ್ಲಿ ಹದಿನೈದು-ಹದಿನಾರನೆಯ ಶತಮಾನಗಳಲ್ಲಿ ದಕ್ಷಿಣಾಪಥ ಸಾಮ್ರಾಜ್ಯವೆಂದು ವಿಖ್ಯಾತವಾಗಿದ್ದ ವಿಜಯನಗರದ ಕನ್ನಡ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ಗೋತ್ರ-ವಂಶಗಳಲ್ಲಿ ಜನಿಸಿದ ಷಾಷಿಕ ಮನೆತನದವರು ನೆಲೆಸಿದ್ದರು. 

ಷಾತ್ವಿಕಾನ್ವಯದ ಗೌತಮಗೋತ್ರದ “ಬೀಗಮುದ್ರೆ” ಮನೆತನದವರು ಹದಿನೈದು-ಹದಿನಾರನೆಯ ಶತಮಾನದಲ್ಲಿ ಮುಳಬಾಗಿಲು, ಶಿವಮೊಗ್ಗ ಜಿಲ್ಲೆ, ಕುಂಭಕೋಣ, ಶ್ರೀರಂಗ, ಮಂತ್ರಾಲಯ, ವಿಜಯನಗರಗಳಲ್ಲಿ ವಿಶೇಷವಾಗಿ ಪ್ರಖ್ಯಾತರಾಗಿದ್ದರು. ಷಾಷಿಕ ಕುಲಾವತಂಸರಾದ ಶ್ರೀಕೃಷ್ಣಭಟ್ಟರ (ಕೃಷ್ಣಾಚಾರ್ಯರ) ತಂದೆತಾಯಿಗಳು ಮುಳುಬಾಗಿಲಿನಲ್ಲಿ ವಾಸಿಸುತ್ತಿದ್ದರು. ಅವರು ಕುಲಗುರುಗಳಾದ ಶ್ರೀವಿಬುಧೇಂದ್ರತೀರ್ಥರಲ್ಲಿ ನ್ಯಾಯವೇದಾಂತಾದಿ ಶಾಸ್ತ್ರಗಳನ್ನು ಅಧ್ಯಯನಮಾಡಿದ ಭಾಗ್ಯಶಾಲಿಗಳು. ಅಂತೆಯೇ ಸ್ವವಂಶಬಂಧುಗಳೇ ಆದ ಈ “ಬೀಗಮುದ್ರೆ” ಮನೆತನದವರಲ್ಲಿ ವಿಶೇಷ ಪ್ರೇಮಾದರಗಳನ್ನಿಟ್ಟಿದ್ದ ಶ್ರೀಲಕ್ಷ್ಮೀನಾರಾಯಣಮುನಿಗಳು (ಶ್ರೀಶ್ರೀಪಾದರಾಜರು) ತಮ್ಮ ವಿದ್ಯಾಗುರುಗಳಾದ ಶ್ರೀವಿಬುಧೇಂದ್ರತೀರ್ಥರಲ್ಲಿ ವ್ಯಾಸಂಗಮಾಡಿ ಉತ್ತಮ ಪಂಡಿತರಾಗಿದ್ದ ಕೃಷ್ಣಾಚಾರ್ಯರ ತಂದೆಗಳಾದ ಶ್ರೀವೆಂಕಟರಮಣಾಚಾರ್ಯರನ್ನು ತಮ್ಮ ವಿದ್ಯಾಪೀಠದ ಅಧ್ಯಾಪಕರನ್ನಾಗಿಯೂ, ತಮ್ಮ ಆಸ್ಥಾನ ಪಂಡಿತರನ್ನಾಗಿಯೂ ಮಾಡಿ ಅವರಲ್ಲಿ ವಿಶೇಷವಾತ್ಸಲ್ಯ-ಅನುಗ್ರಹ ಮಾಡುತ್ತಿದ್ದರು. ಮುಂದೆ ಅವರ ಮಕ್ಕಳಾದ ಶ್ರೀಕೃಷ್ಣಾಚಾರ್ಯರು ಶ್ರೀಜಿತಾಮಿತ್ರತೀರ್ಥರು ಮತ್ತು ಶ್ರೀಪಾದರಾಜತೀರ್ಥರಲ್ಲಿ ನ್ಯಾಯವೇದಾಂತಾದಿ ಶಾಸ್ತ್ರಗಳನ್ನು ಅಧ್ಯಯನಮಾಡಿ ಖ್ಯಾತರಾದುದಲ್ಲದೆ ಜೊತೆಗೆ ಗಾಂಧರ್ವಕಲೆಗಳಲ್ಲಿಯೂ ಮಹಾವಿದ್ವತ್ತನ್ನು ಗಳಿಸಿ ವೀಣಾ ಕೃಷ್ಣಾಚಾರ್ಯರೆಂದೇ ಪ್ರಖ್ಯಾತರಾದರು. 

ಕೃಷ್ಣಾಚಾರ್ಯರು ದೋಷರಹಿತವೂ, ಪ್ರಸಿದ್ಧವೂ ಆದ ಬ್ರಾಹ್ಮಣರಿಗೆ ಯೋಗ್ಯವಾದ ನಾನಾವಿಧವಾದ ವಿದ್ಯೆಗಳನ್ನು ಗಳಿಸಿರುವುದಲ್ಲದೆ ತಮ್ಮ ಮನೆತನಕ್ಕೆ ಮುಖ್ಯವಾದ ಗಾಂಧರ್ವವಿದ್ಯಾಧರತ್ವವನ್ನು ಸಾರ್ಥಕಗೊಳಿಸಲು ವೈಣಿಕವಿದ್ಯಾ ಪಾರಂಗತರಾದರು.25 ಕೃಷ್ಣಾಚಾರ್ಯರು ನ್ಯಾಯ-ವೇದಾಂತ-ಸಾಹಿತ್ಯಾದಿ ಶಾಸ್ತ್ರಗಳಲ್ಲಿ ಅಸಾಧಾರಣ ಪ್ರತಿಭಾಶಾಲಿಗಳಾಗಿದ್ದಂತೆ ವೇದವಿದ್ಯಾಪಾರೀಣರೂ ಆಗಿ ಸರ್ವರ ಮನ್ನಣೆಗೆ ಪಾತ್ರರಾಗಿದ್ದರು. ಗಾಂಧರ್ವಕಲೆಯಲ್ಲಿ ಅವರ ಜ್ಞಾನವು ಅಪಾರ. ಅವರ ವೀಣಾವಾದನ ಚಾತುರ್ಯಕ್ಕೆ ಮಾರುಹೋಗದವರೇ ಇರಲಿಲ್ಲ! ಇಂತು ವಿದ್ಯಾ, ವಿನಯ, ಸೌಂದರ್ಯಾದಿ ಗುಣಪೂರ್ಣರಾಗಿದ್ದ ಕೃಷ್ಣಾಚಾರರಿಗೆ, ಸದ್ಗುಣ ಮಂಡಿತಳೂ, ಸಂಗೀತಸಾಹಿತ್ಯರಸಿಕಳೂ, ನಿರುಪಮ ಸುಂದರಿಯೂ ತಮ್ಮ ಪೂರ್ವಾಶ್ರಮಮಶೀಕಳೂ ಆದ ರುಕ್ಕಿಣಿ ಎಂಬ ಕನೈಯನ್ನು ಕೊಡಿಸಿ, ಶ್ರೀಪಾದರಾಜರು ವಿವಾಹಮಾಡಿಸಿದರು. 

ಸಂತೋಷದಿಂದ ಸುಮಧುರ ಸಂಸಾರವನ್ನು ಸಾಗಿಸಿದ ಈ ದಂಪತಿಗಳು ಶ್ರೀವ್ಯಾಸರಾಜ ಗುರುಸಾರ್ವಭೌಮರು ವಿಜಯನಗರದಲ್ಲಿ ರಾಜಗುರುಗಳಾಗಿದ್ದುದರಿಂದ ಅಲ್ಲಿನೆಲೆಸಲು ಆಶಿಸಿದರು. ಮೊದಲಿನಿಂದಲೂ ಕೃಷ್ಣಾಚಾರ್ಯರ ವಿದ್ಯಾದಿ ಸದ್ಗುಣಗಳನ್ನು ಗುರುಗಳಿಂದ ಕೇಳಿ ತಿಳಿದಿದ್ದು ಆನಂತರ ಸ್ವತಃ ಕಂಡು ಆನಂದಿಸಿದ್ದ ಶ್ರೀ ವ್ಯಾಸರಾಜರು ವಿಜಯನಗರಕ್ಕೆ ಬಂದು ನೆಲೆಸುವಂತೆ ಪ್ರೀತಿಯಿಂದ ಅನೇಕಬಾರಿ ಆಹ್ವಾನಿಸುತ್ತಿದ್ದುದೂ ಅದಕ್ಕೆ ಕಾರಣವಾಗಿತ್ತು. 

ಆದರೆ ಪರಮಪೂಜ್ಯ ಶ್ರೀ ಪಾದರಾಜಗುರುವರರನ್ನು ಅಗಲಿ ವಿಜಯನಗರಕ್ಕೆ ಹೋಗಲು ಸಾಧ್ಯವಾಗದೆ ಗುರುಗಳಾದ ಶ್ರೀಪಾದರಾಜರ ದರ್ಶನಾಲಾಪ ಅನುಗ್ರಹಗಳಿಂದ ಪುಳಕಿತಗಾತ್ರರಾಗಿ ಕೃಷ್ಣಾಚಾರ್ಯರು ಬಹುಕಾಲ ಮುಳುಬಾಗಿಲಿನಲ್ಲಿಯೇ ವಾಸಮಾಡಿದರು. ಮುಂದೆ ಶ್ರೀಪಾದರಾಜರು ತಮ್ಮ ಅವತಾರ ಕಾರ್ಯವನ್ನು ಮುಗಿಸಿ ನಾರಾಯಣಧ್ಯಾನಪರರಾದ ಮೇಲೆ ಕೃಷ್ಣಾಚಾರ್ಯರು ಪತ್ನಿ ಸಮೇತರಾಗಿ ವಿಜಯನಗರಕ್ಕೆ ತೆರಳಿ ಅಲ್ಲಿ ಶ್ರೀವ್ಯಾಸರಾಜಗುರುಗಳ ಆಶ್ರಯದಲ್ಲಿ ಅವರ ಅನುಗ್ರಹ ಪಾತ್ರರಾಗಿ ಕಾಲಕಳೆಯಹತ್ತಿದರು.