Kaliyugada Kalpataru Sri Baahika Rajaru Presentation of the Golden Chariot

|| ಶ್ರೀಗುರುರಾಜೋ ವಿಜಯತೇ ||

ಮೂರನೆಯ ಉಲ್ಲಾಸ

ಶ್ರೀಬಾಹ್ಲೀಕರಾಜರರು

೭. ಕನಕರಥ ಸಮರ್ಪಣೆ !

ಧರ್ಮರಾಜನು ಇಂದ್ರಪ್ರಸ್ಥದಲ್ಲಿ ರಾಜ್ಯಭಾರ ಮಾಡುತ್ತಿರುವಾಗ ಒಂದು ದಿನ ನಾರದರು ಬಂದು 'ರಾಜಸೂಯಯಾಗ'ವನ್ನು ಮಾಡಿ ಪಾಂಡುರಾಜನಿಗೆ ಸದ್ಗತಿಯಾಗುವಂತೆ ಮಾಡಬೇಕೆಂದು ಉಪದೇಶಿಸಿದರು. ಯುಧಿಷ್ಠಿರನು ಶ್ರೀಕೃಷ್ಣನನ್ನು ಕರೆಯಿಸಿಕೊಂಡು ಅವನೊಡನೆ ವಿಚಾರ ವಿನಿಮಯ ಮಾಡಿ ಕೃಷ್ಣನ ಆಜ್ಞೆಯಂತೆ ಭೀಮಾರ್ಜುನ-ನಕುಲ-ಸಹದೇವರನ್ನು ದಿಗ್ವಿಜಯಯಾತ್ರೆಗೆ ಕಳುಹಿಸಿದನು. ಅವರು ಎಲ್ಲೆಡೆ ವಿಜಯಶೀಲರಾಗಿ, ರಾಜಾಧಿರಾಜರು ಧರ್ಮರಾಜನ ಸಾರ್ವಭೌಮತ್ವವನ್ನು ಅಂಗೀಕರಿಸುವಂತೆ ಮಾಡಿದ್ದಲ್ಲದೆ, ಅವರು ಸಂತೋಷದಿಂದ ನೀಡಿದ ಅಗಾಧ ಧನ-ಕನಕ-ನವರತ್ನಾಭರಣಾದಿ ಸಿರಿಸಂಪತ್ತುಗಳನ್ನು ತಂದು ಧರ್ಮರಾಜನಿಗೆ ಸಮರ್ಪಿಸಿದರು.

ಈ ದಿಗ್ವಿಜಯಕಾಲದಲ್ಲಿ ಭೀಮಾರ್ಜುನರು ಬಾಹೀಕದೇಶಕ್ಕೆ ಬಂದರು. ಬಾಹ್ಲೀಕರಾಜರರು ಅವರನ್ನು ಪ್ರೀತ್ಯಾದರಗಳಿಂದ ಸ್ವಾಗತಿಸಿ ಸತ್ಕರಿಸಿದರು. ಆಗ ಭೀಮಾರ್ಜುನರು ವಿನಯ-ವಿಧೇಯತೆಗಳಿಂದ “ಆರ್ಯ ! ನೀವು ನಮ್ಮ ಕುಲದ ಹಿರಿಯರು. ನಮ್ಮ ಮುತ್ತಾತಂದಿರಾದ ಶಂತನು ಚಕ್ರವರ್ತಿಗಳ ಅಗ್ರಜರು, ನಮಗೆ ನೀವು ದೊಡ್ಡ ಮುತ್ತಾತಂದಿರಾಗಬೇಕು! ಪೂಜ್ಯರಾದ ನೀವು ನಿಮ್ಮ ಮರಿಮಗನಾದ ನಮ್ಮಣ್ಣ ಧರ್ಮರಾಜನು ನೆರವೇರಿಸಲಿರುವ ರಾಜಸೂಯಯಾಗವು ನಿರ್ವಿಘ್ನವಾಗಿ, ಯಶಸ್ವಿಯಾಗಿ ನೆರವೇರುವಂತೆ ಅವನನ್ನು ಆಶೀರ್ವದಿಸಬೇಕು ಮತ್ತು ನೀವು ಬಂದು ನಿಂತು ಈ ಮಹತ್ಕಾರ್ಯವನ್ನು ಸಾಂಗಗೊಳಿಸಿಕೊಟ್ಟು ಅನುಗ್ರಹಿಸಬೇಕು” ಎಂದು ಕೋರಿದರು.

ಆಗ ಸಂತುಷರಾದ ಬಾಕರು ನಸುನಗುತ್ತಾ - “ದೇವ, ಭೀಮಸೇನ, ಅರ್ಜುನ! ನಿಮ್ಮ ವಿನಯ, ವಿಶ್ವಾಸ, ಪ್ರೇಮಗಳನ್ನು ಕಂಡು ನನಗೆ ಅತೀವ ಹರ್ಷವಾಗಿದೆ. ಸಾಕ್ಷಾತ್ ಜಗತ್ಪಾಣನೂ, ವಾಯುದೇವನ ಪುತ್ರನೂ ಆದ ನೀನು ಸಕಲ ದೇವತೆಗಳಿಗರಸನಾದ ಇಂದ್ರದೇವನ ಕುಮಾರನಾದ ಧನಂಜಯನೂ ಧರ್ಮಸ್ವರೂಪನೇ ಆದ ಯುಧಿಷ್ಠಿರನ ಕಾರ್ಯವನ್ನು ಜಯಪ್ರದಗೊಳಿಸಲು ಕೈಕಟ್ಟಿ ನಿಂತಿರುವಾಗ ಅದರಲ್ಲೂ ಬ್ರಹ್ಮಾಂಡನಾಯಕನೂ, ಪರಾತ್ಪರನೂ, ಸ್ವಜನ ಪಕ್ಷಪಾತಿಯೂ, ಭಕ್ತಪ್ರಿಯನೂ, ಮೋಕ್ಷಪ್ರದನೂ ಆದ ಶ್ರೀನಾರಾಯಣನ ಅವತಾರನಾದ ಶ್ರೀಕೃಷ್ಣನು 'ಮಮ ಪ್ರಾಣಾಹಿ ಪಾಂಡವಾ?' ಎಂದು ಉದ್ಯೋಷಿಸಿ ಸರ್ವದಾ ನಿಮ್ಮ ರಕ್ಷಕನಾಗಿದ್ದು ಪೊರೆಯುತ್ತಿರುವಾಗ ರಾಜಸೂಯಯಾಗವು ಯಶಸ್ವಿಯಾಗಿ ನೆರವೇರುವುದರಲ್ಲಿ ಸಂದೇಹವೇನಿದೆ? ಆದರೂ ವಂಶದ ಹಿರಿಯನೆಂದು ನನ್ನಲ್ಲಿ ಗೌರವ ತೋರಿ, ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದೀರಿ. ಧರ್ಮಾತ್ಮರಾದ ನಿಮಗಿದು ಸ್ವಾಭಾವಿಕವೂ, ಭೂಷಣಾವಹವೂ ಆಗಿದೆ. ಶ್ರೀಯೋಗೇಶ್ವರನಾದ ಶ್ರೀಕೃಷ್ಣ, ಪಾರ್ಥರೆಂದು ಖ್ಯಾತರಾದ ಗದಾಧಾರಿಯಾದ ಭೀಮಸೇನ, ಧನುರ್ಧಾರಿಯಾದ ಅರ್ಜುನನು ಇರುವಲ್ಲಿ ರಾಜ್ಯಲಕ್ಷ್ಮಿ, ಜಯಗಜಾಶ್ವಧನಧಾನ್ಯಾದಿ ಸಂಪತ್ತು ಮತ್ತು ನ್ಯಾಯವೂ ಸಹ ನಿಶ್ಚಲವಾಗಿ ಸೇರುವರೆಂಬುದನ್ನು ನಾನು ಬಲ್ಲೆ! ನಿಮ್ಮಲ್ಲಿ ಇಂತಹ ವೈಶಿಷ್ಟ್ಯವಿರುವಾಗ ನೀವು ಸದಾ ಜಯಕೀರ್ತಿಸಂಪನ್ನರಾಗಿ ರಾಜಿಸುವಿರಿ. ಇಂಥ ಒಂದು ಮಂಗಳಕರ ಸಮಾರಂಭ ಮಂಗಳಕರ ಸಮಾರಂಭದಲ್ಲಿ ಬಂದು ಭಾಗವಹಿಸುವುದು ಶ್ರೀಹರಿಸೇವೆಯೆಂದೇ ಭಾವಿಸಿದ್ದೇನೆ. ಖಂಡಿತವಾಗಿ ಬಂದು ಯಜ್ಞಸಮಾರಂಭದಲ್ಲಿ ಭಾಗವಹಿಸಿ ನನ್ನ ಯೋಗ್ಯತಾನುಸಾರವಾಗಿ ಶ್ರೀಕೃಷ್ಣಪರಮಾತ್ಮನಿಗೆ ಸೇವೆ ಸಲ್ಲಿಸುತ್ತೇನೆ! ಈ ವಿಚಾರವನ್ನು ಭಗವಂತನಲ್ಲಿಯೂ, ಯುಧಿಷ್ಠಿರನಲ್ಲಿಯೂ ವಿಜ್ಞಾಪಿಸಿರಿ” ಎಂದು ಹೇಳಿ ಭೀಮಾರ್ಜುನರಿಗೆ ಅಮೂಲ್ಯ ಉಡುಗೊರೆಗಳನ್ನಿತ್ತು. ರಾಜಸೂಯಯಾಗಕ್ಕೆ ಅಗಾಧವಾಗಿ ಧನಕನಕಾಭರಣಾದಿಗಳನ್ನೂ ನೀಡಿದರು.

ಬಾಹ್ಲೀಕರಾಜರರ ಭಗವದ್ಭಕ್ತಿ, ಸ್ವಜನಪ್ರೇಮ, ಮಂಶೀಕರಲ್ಲಿನ ವಾತ್ಸಲ್ಯಾದಿಗಳನ್ನು ಕಂಡು ಪರಮಾನಂದಭರಿತರಾದ ಭೀಮಾರ್ಜುನರು ಬಾಕರ ಸದ್ಗುಣಗಳನ್ನು ಶ್ಲಾಘಿಸಿ ಅವರಿಂದ ಬೀಳ್ಕೊಂಡು ಇಂದ್ರಪ್ರಸಕ್ಕೆ ಪ್ರಯಾಣ ಬೆಳೆಸಿದರು.

ಇಂದ್ರಪ್ರಸದಲ್ಲಿ ಪರಮಸಂಭ್ರಮ, ರಾಜಸೂಯಯಾಗ ಸಮಾರಂಭವು ವೈಭವದಿಂದ ಜರುಗುತ್ತಿದೆ. ಭಾರತದ ಎಲ್ಲ ಭಾಗಗಳಿಂದಲೂ ರಾಜಧಿರಾಜರು, ಋಷಿ-ಮುನಿಗಳು, ವೇದವೇದಾಂಗವೇತ್ತರು, ಧಾರ್ಮಿಕರು ಬಂದು ಸೇರಿದ್ದಾರೆ. ದೀಕ್ಷಾ ಬದ್ಧನಾದ ಧರ್ಮರಾಜ ಸರ್ವರ ಗೌರವಾದರಗಳಿಗೆ ಪಾತ್ರನಾಗಿ ಯಾಗಕಾರ್ಯಾಸಕ್ತನಾಗಿದ್ದಾನೆ. ಶ್ರೀಕೃಷ್ಣಪರಮಾತ್ಮ, ಭೀಷ್ಮ, ದ್ರೋಣಾದಿಗಳ ಮೇಲ್ವಿಚಾರಣೆಯಲ್ಲಿಯಾಗವು ಅಭೂತಪಾರ್ವವಾಗಿ ನೆರವೇರುತ್ತಿದೆ. ಸಂಪ್ರದಾಯದಂತೆ ಯಾಗಕಾಲದಲ್ಲಿ ಭೀಷ್ಮ-ದ್ರೋಣ-ಪರಶುರಾಮ-ಬಾಕಾದಿ ಸರ್ವ ಮಹನೀಯರ ಅಭಿಪ್ರಾಯದಂತೆ ಧರ್ಮರಾಜ-ಭೀಮಾರ್ಜುನ- ನಕುಲ-ಸಹದೇವರು ಶ್ರೀಕೃಷ್ಣಪರಮಾತ್ಮನಿಗೆ ಅಗ್ರಪೂಜೆಯನ್ನು ಸಲ್ಲಿಸುತ್ತಿರುವಾಗ, ಸನಕಾದಿಗಳ ಶಾಪದಿಂದ ಜಯ-ವಿಜಯರು ಮೂರನೆಯ ಮತ್ತು ಕೊನೆಯ ಬಾರಿಯಾಗಿ ಹರಿದ್ವೇಷಿಗಳಾಗಿ ಶಿಶುಪಾಲ-ದಂತವಕ್ರರೆಂಬ ದೈತ್ಯರಾಗಿ ಜನಿಸಿದ್ದರು. ಆ ಖಳರು ತಮ್ಮ ಸ್ವಾಭಾವಿಕ ಹರಿದ್ವೇಷವನ್ನು ಪ್ರಕಟಿಸಿ ಕೃಷ್ಣನಿಗೆ ಅಗ್ರಪೂಜೆ ಮಾಡುವುದನ್ನು ವಿರೋಧಿಸಿ, ನಿಂದಿಸಿದಾಗ ಶ್ರೀಕೃಷ್ಣನು ಅವರನ್ನು ತನ್ನ ಸುದರ್ಶನಚಕ್ರದಿಂದ ಸಂಹರಿಸಿದ ಮೇಲೆ ಅಗ್ರಪೂಜೆಯು ಜರುಗಿ, ರಾಜಸೂಯಯಾಗವು ಸಾಂಗವಾಗಿ ಪೂರ್ಣವಾಯಿತು.

ರಾಜಸೂಯಯಾಗಕ್ಕೆ ಪುತ್ರ-ಪೌತ್ರರೊಡನೆ ಆಗಮಿಸಿದ್ದ ಬಾಹ್ಲೀಕರಾಜರರು ಶ್ರೀಕೃಷ್ಣಪರಮಾತ್ಮನ ದರ್ಶನದಿಂದ ಪುನೀತವಾಗಿ ಶ್ರೀಕೃಷ್ಣನನ್ನು ಬಹುವಿಧವಾಗಿ ಸೇವಿಸಿ ಅವನ ಅನುಗ್ರಹಕ್ಕೆ ಪಾತ್ರರಾದರು.

ಇದೇ ಸಮಯದಲ್ಲಿ ಬಾಹ್ಲೀಕರಾಜರರು ತಮ್ಮಲ್ಲಿ ವಿಶೇಷಾವೇಶ ಸನ್ನಿಧಾನವನ್ನಿಟ್ಟು ಅನುಗ್ರಹಿಸುತ್ತಿರುವ ಶ್ರೀಮುಖ್ಯಪ್ರಾಣದೇವರ ಅವತಾರಿಗಳಾದ ಶ್ರೀಭೀಮಸೇನದೇವರ ಅಧಿಕಾನುಗ್ರಹ ಸಂಪಾದನೆಗಾಗಿ ಭಗವಾನ್ ಶ್ರೀಕೃಷ್ಣನ ಪ್ರೇರಣೆಯಂತೆ ಅವನ ಸಮಕ್ಷ, ಸರ್ವಸಜ್ಜನರ ಎದುರಿನಲ್ಲಿ ಈ ಒಂದು ಸಂದರ್ಭಕ್ಕಾಗಿಯೇ ಮಾಡಿಸಿ ತಂದಿದ್ದ ಅತಿಮನೋಹರವಾ, ಅಮೂಲ್ಯವೂ ಆದ 'ಕನಕರಥ'ವನ್ನು ಭೀಮಸೇನದೇವರಿಂದ ಸಹಿತವಾಗಿ ಪಾಂಡವರಿಗೆ ಕಾಣಿಕೆಯಾಗಿ ಸಮರ್ಪಿಸಿ, ಕನಕದಲ್ಲಿ ಶ್ರೀಕೃಷ್ಣ, ಯುಧಿಷ್ಠಿರ, ಭೀಮಸೇನ-ದೌಪದಿಯರನ್ನು ಮಂಡಿಸಿ ವೈಭವ-ಭಕ್ತಿಪೂರ್ವಕವಾಗಿ ರಥೋತ್ಸವವನ್ನು ನೆರವೇರಿಸಿ ಶ್ರೀಹರಿವಾಯು-ಭಾರತೀದೇವಿಯರನ್ನು ಮೆರೆಸಿದರು. ಆ ಮಂಗಳಕರ ಮಹೋತ್ಸವವು ಅಪೂರ್ವವೂ ಸರ್ವಜ್ಜನಾನಂದಕಾರವಾ

ಆಗಿತ್ತು.

ಆಗ ಶ್ರೀಕೃಷ್ಣನು ನಸುನಗುತ್ತಾ “ಭೀಮಸೇನ! ನಿನ್ನ ವಂಶದ ಹಿರಿಯನೂ, ಧರ್ಮಾತ್ಮನೂ, ನನ್ನ ಪ್ರಿಯ ಭಕ್ತಾಗ್ರಣಿಯು ಆದ ಈ ಬಾಹ್ಲೀಕರಾಜರನು ಈ ಕನಕರಥವನ್ನರ್ಪಿಸಿ, ರಥೋತ್ಸವವನ್ನು ನೆರವೇರಿಸುವುದು ಭಾವೀ ಜಗತ್ಕಲ್ಯಾಣ, ನಿನ್ನ ನೇತೃತ್ವದಲ್ಲಿ ಧರ್ಮರಾಜನಿಗೆ ದೊರಕಲಿರುವ ಮಹಾವಿಜಯಪರಂಪರೆಯ ಭವಿಷ್ಯ ಸೂಚಕವೂ ಆಗಿದೆ! ಇಂದು ನನಗೆ ಬಹು ಸಂತೋಷವಾಗಿದೆ! ಇಂತು ನಿನ್ನನ್ನು ಗೌರವಿಸುವ ಈ ಬಾಹ್ಲೀಕರಾಜರನಿಗೆ ನೀನು ಏನು ವರವನ್ನು ಕೊಡುವೆ” ಎಂದು ಪ್ರಶ್ನಿಸಿದನು.

ಆಗ ಮುಗುಳುನಗೆಯನ್ನು ಹೊರಸೂಸುತ್ತಾ, ಭೀಮಸೇನದೇವರು - “ಕೃಷ್ಣ! ಸಕಲ ಚರಾಚರ ಪ್ರಪಂಚದ ಸೃಷ್ಟಿ-ಸಿತಿ- ಲಯಾದಿ ಕಾರಣನೂ, ಸರ್ವತ್ರವ್ಯಾಪ್ತನೂ, ಸರ್ವೋತ್ತಮನೂ, ಸರ್ವಜೀವನಿಯಾಮಕನೂ ಆಗಿದ್ದು, ನಿನ್ನ ಸಂಕಲ್ಪದಂತೆಯೇ ಲೀಲಾವಿನೋದಗೈಯುತ್ತಿರುವ ನಿನ್ನ ಇಚ್ಛೆಗೆ ವಿರೋಧವಾಗಿ ವರ್ತಿಸಲು ಅದಾರು ತಾನೇ ಸಮರ್ಥರಾದಾರು? ಕಪಟನಾಟಕಸೂತ್ರಧಾರಿಯಾದ ನೀನು ಬಾಹೀಕರಾಜರಲ್ಲಿ ಅಂತರ್ಗತನಾಗಿದ್ದು, ಪ್ರೇರಣೆ ಮಾಡಿ ಕನಕರಥವನ್ನು ನಮಗೆ ಕಾಣಿಕೆಯಾಗಿ ಕೊಡಿಸಿ, ಈಗ ನಿನ್ನ ಸಂಕಲ್ಪ - ಇಚ್ಛೆಗಳನ್ನು ನನ್ನ ಮೂಲಕವಾಗಿ ಪೂರ್ಣಗೊಳಿಸಲಾಶಿಸಿರುವುದನ್ನು ನಾನು ಬಲ್ಲೆ! ಪರಮಾತ್ಮಾ, ನಿನ್ನ ಇಚ್ಛೆಯಂತೆಯೇ ಆಗಲಿ” ಎಂದು ವಿಜ್ಞಾಪಿಸಿ, ಬಾರೀಕರತ್ತ ತಿರುಗಿ “ಕುರುವಂಶದ ಹಿರಿಯರಾದ ಪೂಜ್ಯ ಬಾಹ್ಲೀಕರಾಜರರೇ! ನಿಮ್ಮ ಈ ಉತ್ತಮ ಸೇವೆಯಿಂದ ಶ್ರೀಹರಿಯು ಸಂತುಷ್ಟನಾಗಿರುವನು. ನಾನೂ ಭಾರತಿಯೂ ನನ್ನ ಸಹೋದರರೂ ಸುಪ್ರಸನ್ನರಾಗಿದ್ದೇವೆ. ಶ್ರೀಕೃಷ್ಣನೊಡನೆ ನಮ್ಮನ್ನು ಕನಕರಥದಲ್ಲಿ ಮೆರೆಸಿರುವ ನೀವು ಮುಂದೆ ಚಕ್ರವರ್ತಿಗಳಂತೆ, ಯತಿರೂಪದ ಚಕ್ರವರ್ತಿಗಳಾಗಿ ಭಕ್ತರು ಅರ್ಪಿಸುವ ರಥದಲ್ಲಿ ಮೆರೆಯುವಂತೆ ಶ್ರೀಕೃಷ್ಣನ ಪ್ರೇರಣೆಯಂತೆ ವರವನ್ನು ಅನುಗ್ರಹಿಸುತ್ತಿದ್ದೇನೆ. ನಿಮ್ಮ ಮುಂದಿನ ಅವತಾರಗಳಲ್ಲಿ ಅಂಬಾರಿ, ಪಾಲಕಿ, ರಜತ-ಕನಕರಥಗಳಲ್ಲಿ ಮೆರೆದು ಲೋಕಕಲ್ಯಾಣ ಮಾಡಿ ಶ್ರೀಹರಿಯ ವಿಶೇಷಾನುಗ್ರಹಕ್ಕೆ ಪಾತ್ರರಾಗಿ ಕೀರ್ತಿ ಗಳಿಸಿರಿ” ಎಂದು ಸುಪ್ರೀತರಾಗಿ ನುಡಿದರು.

ಸರ್ವರಿಗೂ ಪರಮಾನಂದವಾಯಿತು.

ಶ್ರೀಹರಿ-ವಾಯುಗಳು ತಮ್ಮಲ್ಲಿ ಮಾಡಿದ ಈ ವಿಶೇಷಾನುಗ್ರಹವನ್ನು ಕಂಡು ಹರ್ಷನಿರ್ಭರರಾಗಿ, ಆನಂದಬಾಷ ಸುರಿಸುತ್ತಾ ಗದ್ಗದ ಕಂಠದಿಂದ ಬಾಹ್ಲೀಕರಾಜರರು “ಅನುಗೃಹೀತೋರಿ” ಎಂದು ವಿಜ್ಞಾಪಿಸಿದರು.

ಮುಂದೆ ಕೆಲವು ದಿನಗಳು ಇಂದ್ರಪ್ರಸ್ಥದಲ್ಲಿದ್ದು ಶ್ರೀಕೃಷ್ಣನ ಸೇವೆ ಮಾಡಿ ಬಾಹ್ಲೀಕರಾಜರರು ಪುತ್ರ-ಪೌತ್ರಾದಿ- ಗಳಿಂದೊಡಗೂಡಿ ತಮ್ಮ ದೇಶಕ್ಕೆ ಪ್ರಯಾಣ ಬೆಳೆಸಿದರು.